ಮೈಸೂರಿನ ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ೧೮ ಮಂದಿ ಸದಸ್ಯರು ತಾರೀಕು ೧೪-೩.೨೦೨೧ರಂದು ಮಿನಿ ಬಸ್ಸಿನಲ್ಲಿ ಕೊರಟಗೆರೆ ಚನ್ನರಾಯನದುರ್ಗಕ್ಕೆ ಬೆಳಗ್ಗೆ ೫.೪೫ಕ್ಕೆ ಹೊರಟೆವು. ಬಸ್ ಹತ್ತಿ ಕುಳಿತ ಬಳಿಕ ಹೆಚ್ಚಿನ ಮಂದಿಯೂ ನಿದ್ರಾದೇವಿಗೆ ಶರಣಾದರು.
ಚನ್ನಮಲ್ಲನಾಯಕ ನವತರುಣ. ಈಗಾಗಲೇ ಕೆಲವಾರು ಸ್ಠಳಗಳಿಗೆ ಚಾರಣದ ನೇತೃತ್ವ ವಹಿಸಿ ಯಶಸ್ವಿಯಾಗಿದ್ದ. ತಿಂಡಿಗೆ ೮.೩೦ಗೆ ನಿಲ್ಲಿಸುವುದೆಂದು ಹೇಳಿದ್ದ ನಾಯಕ, ಒಳ್ಳೆ ಸ್ಥಳ ಸಿಗಲು ಕಾಯುತ್ತಿದ್ದ. ಆ ಒಳ್ಳೆಯ
ಸ್ಥಳ ೯ ದಾಟಿದರೂ ಅವನಿಗೆ ಸಿಗಲೇ ಇಲ್ಲ! ಆಗ ಒಂದಿಬ್ಬರು ಎದ್ದು ಒಂದೆಡೆ ಬಸ್ ನಿಲ್ಲಿಸುವಲ್ಲಿ ಸಫಲರಾದರು.
ಒಂದು ಹುಣಸೆ ಮರದಡಿಯಲ್ಲಿ ಉಪ್ಪಿಟ್ಟು, ಕೇಸರಿಬಾತ್ ತಿಂದಾಗ ಬುಸುಗುಡುತ್ತಿದ್ದ ಹೊಟ್ಟೆರಾಯ ತೃಪ್ತಿಗೊಂಡ. ಬರುವಾಗಲೇ ಡಬ್ಬದಲ್ಲಿ ತಿಂಡಿ ಊಟ ತಯಾರಿಸಿ
ತಂದಿದ್ದರು. ಬುತ್ತಿ ಡಬ್ಬಕ್ಕೆ ಮೊಸರನ್ನ, ಬಿಸಿಬೇಳೆಭಾತ್ ಹಾಕಿಕೊಂಡರು. ನಾನು
ಉಪ್ಪಿಟ್ಟು ಪ್ರಿಯಳಾದ್ದರಿಂದ ಉಪ್ಪಿಟ್ಟೇ ತುಂಬಿಸಿಕೊಂಡೆ. ಸೌತೆಕಾಯಿ ಕೊಟ್ಟರು.
ತುಮಕೂರು ದಾಟಿ ನಾವು ತುಂಬಾಡಿ ಬಸ್ ನಿಲ್ದಾಣದ ಬಳಿ ಸಿದ್ದರಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ (ದೊಡ್ಡ ಕಮಾನು ಇದೆ) ಎಡಕ್ಕೆ ತಿರುಗಿ ಕೆಲವಾರು ಕಿಮೀ ಸಾಗಿದಾಗ ಕೊರಟಗೆರೆಯ ಚನ್ನರಾಯನದುರ್ಗ ತಲಪಿದೆವು. ಅಲ್ಲಿ ಬಸ್ಸಿಳಿದು, ಊರೊಳಗಿನ ದಾರಿಯಲ್ಲಿ ಸಾಗಿದಾಗ ಹೆಂಗಸರು ಮನೆ ಮುಂದೆ ಹುಣಸೆಹಣ್ಣು, ಹೊಂಗೆ ಬೀಜ ಕುಟ್ಟುತ್ತಿದ್ದುದು ಕಂಡೆವು. ಅವರನ್ನು ಮಾತಾಡಿಸುತ್ತ ಮುಂದೆ ಹೋಗಿ ದೊಡ್ದದಾದ ಬಂಡೆ ಬುಡಕ್ಕೆ ಹೋದೆವು. ಇಲ್ಲಿಂದಲೇ ದುರ್ಗಕ್ಕೆ ಹೋಗಲು ದಾರಿ ಸುರುವಾಗುತ್ತದೆ. ಆ ಬಂಡೆಯನ್ನು ಹತ್ತಲು ತೊಡಗಿದೆವು. ಹತ್ತಲು ಭಯಪಡುವವರ ಕೈ ಹಿಡಿದು ಮುನ್ನಡೆಸಿದೆವು. ಬಂಡೆ ಏರಲು ಅಭ್ಯಾಸ ಇರುವವರಿಗೆ ಕಷ್ಟವೇನಿಲ್ಲ.
ಎರಡು ಬೃಹತ್ ಬಂಡೆಯನೇರಿ ಮೇಲೆ ಹೋದಾಗ
ಕೋಟೆಯ ಮೊದಲ ದ್ವಾರ ಎದುರಾಯಿತು. ಒಟ್ಟು ಮೂರು
ಹಂತದಲ್ಲಿ ಈ ಕೋಟೆ ಇವೆ. ಮೊದಲ ಹಂತದಲ್ಲಿ ಕೆರೆ ಹಾಗೂ ದೇವಾಲಯ ಇದೆ. ವಿಶಾಲ ಸ್ಥಳದಲ್ಲಿ ಒಂದು ಕೆರೆ ಕಾಣುತ್ತದೆ. ಅದರಲ್ಲಿ
ಈಗಲೂ ನೀರಿದೆ. ಮಳೆ ನೀರು ಸಂಗ್ರಹವದು. ಕೆರೆ ಏರಿಯ ಬಂಡೆಮೇಲೆ ಒಂದು ಸುಂದರ ಕೆತ್ತನೆಯ
ದೇವಾಲಯವಿದೆ. ಈಗ ಪಾಳುಬಿದ್ದಿದೆ. ನಿಧಿ ಶೋಧಕ್ಕೆಂದು ಶಿವಲಿಂಗ, ಗಣಪತಿ ಮೂರ್ತಿಯನ್ನು ಕಿತ್ತು ಹಾಕಿ ಗುಂಡಿ ತೋಡಿದ್ಡಾರೆ. ಎಂಥ ನೀಚರು ಅವರು.
ಎರಡನೆ ಹಂತದಲ್ಲಿ ಕೋಟೆ ಗೋಡೆ
ಶಿಥಿಲಗೊಂಡಿವೆ. ಹಾಗೂ ನಿಧಿ ಹುಡುಕಾಟಕ್ಕೆಂದು ಗೋಡೆಯನ್ನೇ ಕೆಡವಿ ಅಗೆದು ಹಾಕಿದ್ದಾರೆ. ಈ
ಕೋಟೆಯ ವಿಶೇಷತೆಯೆಂದರೆ ಒಂದು ಹಂತ ಹತ್ತಿದಾಗ ಇದೇ ಕೋಟೆಯ ಕೊನೆಯೇನೋ ಎಂಬಂತೆ ಭಾಸವಾಗುತ್ತದೆ.
ಅಷ್ಟು ಚೆನ್ನಾಗಿ ಯೋಜನೆ ಮಾಡಿ ಕಟ್ಟಿದ್ದಾರೆ. ಹತ್ತುತ್ತ ಹೋದಂತೆ ಅಯ್ಯೊ ಇನ್ನೂ ಹತ್ತಬೇಕಲ್ಲಪ್ಪ
ಎಂದು ಕೆಲವರು ಉದ್ಗಾರ ತೆಗೆದರು. ಇನ್ನು ಮೇಲೆ ಹತ್ತಲಾರೆ, ಎಂದವರಿಗೆ ಇಷ್ಟು ಹತ್ತಿದ್ದೀರಲ್ಲ,
ಇನ್ನು ಒಂದು ಹಂತ ದಾಟಿದರೆ ಗುರಿ ತಲಪುತ್ತೀರಿ ಎಂದು ಹುರಿದುಂಬಿಸುತ್ತ, ಸಾಗಿದೆವು. ಐದನೇ ದ್ವಾರ
ದಾಟಿ ಮುಂದೆ ಹೋದಾಗ ಅಲ್ಲಿ ದರ್ಬಾರ್ ಹಾಲ್, ಅರಮನೆ ಇದ್ದ ಕುರುಹನ್ನು ನಾಯಕ ತೋರಿಸಿದ. ದರ್ಬಾರ್
ಹಾಲಿಗೆ ಹೋಗಿ, ‘ಯಾರಲ್ಲಿ, ನರ್ತಕಿಯರನ್ನು ಬರಮಾಡಿ. ಎಂಬ ಕೂಗು ಹಾಕಿದ! ನಾವು ಮುಂದೆ
ಹೋಗುತ್ತೇವೆ. ನೀನು ನರ್ತಕಿಯರು ಬಂದು ಅವರ ನರ್ತನ ನೋಡಿ ಬರುವಿಯಂತೆ ಎಂದು ಹೇಳಿದೆವು. ಧವಸ
ದಾಸ್ತಾನು ಮಾಡುತ್ತಿದ್ದ ಸ್ಥಳ, ಖಜಾನೆಯನ್ನು ನೋಡಿದೆವು. ಎಷ್ಟೆಲ್ಲ ವೈಭವದಿಂದ ಇದ್ದಿರಬಹುದು
ಎಂದು ಕಲ್ಪನೆ ಮಾಡಿಕೊಂಡೆವು.
ಮೂರನೆ ಹಂತದಲ್ಲಿ ಸಿಗುವುದೇ ಕೋಟೆಯ ತುದಿ. ಎಲ್ಲರೂ ಕೋಟೆ ಮೇಲೆ ತಲಪಿಬಿಟ್ಟೆವು. ಆಹಾ ಏನು ಸೊಗಸಾಗಿದೆ ಆ ಸ್ಥಳ. ಆಗ ಗಂಟೆ ೧ ಆಗಿತ್ತು. ಇಲ್ಲಿ ಕೋಟೆಯ ಕಾವಲಿಗಾಗಿ ಮೂರು ಕಿಂಡಿಗಳಿವೆ. ಕಾವಲು ಕಿಂಡಿಗಳಲ್ಲಿ ಇಣುಕಿದೆವು. ಅಬ್ಬ, ಈ ಕೋಟೆ ಕಟ್ಟಿದವರ ಜಾಣ್ಮೆ ಮೆಚ್ಚಬೇಕು. ಯಾವುದೇ ಕಡೆಯಿಂದ ಯಾರೇ ನುಸುಳಿ ಬಂದರೂ ಕಾಣುವಂಥ ವ್ಯವಸ್ಥೆ. ಚರಿತ್ರೆಗೆ ಸಾಕ್ಷಿಯಾಗಿ ಈ ಕೋಟೆ ಇದೆ. ಕೋಟೆ ಕಟ್ಟಿದವರ ಪರಿಣತಿಗೆ ಸಲಾಂ ಸಲ್ಲಲೇಬೇಕು.
ಕೋಟೆಯ ಬಗ್ಗೆ ಕಿರು ಮಾಹಿತಿ
ಅಲ್ಲಿ ಆದಿನ ರಾತ್ರೆ ಕುರುಕ್ಷೇತ್ರ
ನಾಟಕ ಇತ್ತು. ಅದಕ್ಕಾಗಿ ರಸ್ತೆಯಲ್ಲಿ ರಂಗಸ್ಥಳ ಕಟ್ಟುತ್ತಿದ್ದರು. ಇಲ್ಲೆ ಇದ್ದು, ನಾಟಕ ನೋಡಿ ಹೋಗಿ ಎಂದು ನಮಗೂ ಆಮಂತ್ರಣ
ಕೊಟ್ಟರು. ಊರವರ ಜೊತೆ ಮಾತಾಡುತ್ತ ನಡೆದೆವು. ಎಲ್ಲಿಂದ ಬಂದಿರಿ? ಬೆಟ್ಟ ಹತ್ತಿದ್ರ? ನಮ್ಮವರ ಬಿಳಿತಲೆ ನೋಡಿ ಅಜ್ಜಿಯರೂ ಹತ್ತಿದ್ರ? ಎಂದು ಆಶ್ಚರ್ಯದಿಂದ ಕೇಳಿದರು. ಅಲ್ಲಿ ರಾಗಿ ಕಣಜ ಎಲ್ಲ
ನೋಡಿದ್ರ? ಈ ಕೋಟೆಯಲ್ಲಿ ಭಾರತಿಯವರು ಅಭಿನಯಿಸಿದ ಬಂಗಾರದ ಜಿಂಕೆ ಸಿನೆಮಾ ಶೂಟಿಂಗ್ ಆಗಿದೆ. ಅಲ್ಲಿಂದ
ಮತ್ತೆ ಬೆಟ್ಟಕ್ಕೆ ವಸಿ ಜನ ಬರಲು ಸುರುಮಾಡಿದರು. ಮತ್ತೂ ಒಂದೆರಡು ಸಿನೆಮಾ ಶೂಟಿಂಗ್ ಆಗಿತ್ತು. ಎಂದರು.
ರಾಗಿ ಕಣಜ ಯಾವುದು ಎಂದು ಗೊತ್ತಿಲ್ಲ. ಆದರೆ ಎಲ್ಲವನ್ನೂ ನೋಡಿದೆವು ಎಂದೆವು.
ನಮ್ಮ ಹುಡುಗರನ್ನು ಕರೆದುಕೊಂಡು ಹೋಗಬೇಕಿತ್ತು. ಎಲ್ಲ ಚೆನ್ನಾಗಿ ವಿವರಿಸಿ
ತೋರಿಸುತ್ತಿದ್ದರು ಎಂದರು.
ಅಲ್ಲೆ ಹುಡುಗರು ಗೋಲಿಯಾಡುತ್ತಿದ್ದರು.
ಅದನ್ನು ತುಸುಹೊತ್ತು ನೋಡಿ ಬಸ್ಸಿಗೆ ಹತ್ತಿದೆವು. ೪.೩೦ಗೆ ಅಲ್ಲಿಂದ ಹೊರಟೆವು. ಎಲ್ಲರಿಗೂ
ದ್ರಾಕ್ಷೆ ಹಂಚಿದರು. ಆ ಹೊತ್ತಲ್ಲಿ ದ್ರಾಕ್ಷೆ ಬಹಳ ರುಚಿಯಾಗಿ ಹೊಟ್ಟೆ ಸೇರಿತ್ತು.
ಮದ್ದೂರು ತಲಪಿದಾಗ ೭.೧೦. ಶಿವದಾಸ್ ಖಾನಾವಳಿಯಲ್ಲಿ
ಸೆಟ್ ದೋಸೆ ಕಾಫಿ ಕುಡಿದು ಹೊರಟು ಮೈಸೂರು ಮನೆ ತಲಪಿದಾಗ ಗಂಟೆ ೯.೩೦ ಆಗಿತ್ತು.
ಸೋಮಶೇಖರ್ ಹಾಗೂ ಚನ್ನಮಲ್ಲನಾಯಕರ ನೇತೃತ್ವದಲ್ಲಿ
ಚನ್ನರಾಯನದುರ್ಗಕ್ಕೆ ಚಾರಣವನ್ನು ಯಶಸ್ವಿಯಾಗಿ ಮಾಡಿದ್ದೆವು. ಅವರಿಗೆ ನಮ್ಮ
ಸಹಚಾರಣಿಗರೆಲ್ಲರ ಪರವಾಗಿ ಧನ್ಯವಾದ. ಚಾರಣ
ಶುಲ್ಕ ರೂ.೯೫೦
ದಾರಿ: ಮೈಸೂರು-ಮಂಡ್ಯ-ಮದ್ದೂರು-ಕುಣಿಗಲ್-ತುಮಕೂರು-ತುಂಬಾಡಿ-ಕೊರಟಗೆರೆ-ಚನ್ನರಾಯನದುರ್ಗ.
ಸುಮಾರು ೨೧೦ಕಿಮೀ. ಬೆಂಗಳೂರಿನಿಂದ ೧೦೦ಕಿಮೀ.
ಇಲ್ಲಿ ಕೆಲವು ಪಟಗಳು ಸಹಚಾರಣಿಗರು ಕ್ಲಿಕ್ಕಿಸಿದ್ದನ್ನು ಬಳಸಿಕೊಂಡಿರುವೆ. ಅವರಿಗೆ ಧನ್ಯವಾದ.
ದಾರಿ: ಮೈಸೂರು-ಮಂಡ್ಯ-ಮದ್ದೂರು-ಕುಣಿಗಲ್-ತುಮಕೂರು-ತುಂಬಾಡಿ-ಕೊರಟಗೆರೆ-ಚನ್ನರಾಯನದುರ್ಗ.
ಸುಮಾರು ೨೧೦ಕಿಮೀ. ಬೆಂಗಳೂರಿನಿಂದ ೧೦೦ಕಿಮೀ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ