ಮಂಗಳವಾರ, ಅಕ್ಟೋಬರ್ 12, 2021

ಕಾಡುಮಾವು ಸಾರು

ಅಳಿಯ ಮಹೇಶ ಊರಿಂದ ಬರುವಾಗ ಕಾಡುಮಾವಿನಹಣ್ಣು ತಂದಿದ್ದ. ಅದರ ಸಾರು ಮಾಡುವ ಎಂದು ಹೊರಟೆ. ಆಗ ಮನಸ್ಸು ಬಾಲ್ಯ ಕಾಲಕ್ಕೆ ಜಿಗಿಯಿತು. ನಮ್ಮ ಶಾಲಾ ರಜಾ ಸಮಯದಲ್ಲೇ ಕಾಡುಮಾವು ಉದುರುವ ಕಾಲ. ನಮಗೂ ಮಾಡಲು ಕೆಲಸವಿಲ್ಲ. ಹಾಗೆ ಬೆಳಗ್ಗೆ, ಸಂಜೆ ಒಂದು ಪಡಿಗೆ (ಅಡಿಕೆ ಹಾಳೆಯಿಂದ ಮಾಡುವ ಕುಕ್ಕೆ) ತೆಗೆದುಕೊಂಡು ಕಾಡುಮಾವಿನ ಮರದ ಬಳಿಗೆ ಹೋಗಿ ಬಿದ್ದ ಮಾವನ್ನು ಹೆಕ್ಕಿ ಪಡಿಗೆಗೆ ತುಂಬಿ, ಒಂದೆರಡು ತಿಂದು ಗೊರಟು ಚೀಪಿದ ಬಳಿಕ, ಗೊರಟು ದೂರ ಬಿಸುಟು, ತಂಗಿಯೊ ತಮ್ಮನೊ ಯಾರನ್ನಾದರೂ ಕರೆದಾಗ, ಅವರು ಓ ಎಂದಾಗ, ಗೊರಟಿನ ಹಿಂದೆ ಓಡು ಎಂದು ನಗುವುದು. ಅವರು ಗೊರಟು ಚೀಪಿದ ಬಳಿಕ ಅದೇ ಸೇಡನ್ನು ನಮಗೆ ತೀರಿಸುವುದು ನಡೆಯುತ್ತಲಿತ್ತು! ಮಾವು ರಾಜಾ ಮಾವುರಾಜಾ ನನಗೊಂದು ಹಣ್ಣು ಕೊಡು ನಿನಗೊಂದು ಗೊರಟು ಕೊಡುವೆ ಎಂದು ರಾಗವಾಗಿ ಆಲಾಪಿಸುತ್ತ, ಮಾವು ಹೆಕ್ಕುವುದು ನಮಗೆ ಇಷ್ಟದ ಕೆಲಸ. ಆಗ ಹಣ್ಣು ಉದುರಿದ್ದು ಕಂಡರೆ ನಮಗೆ ಬಲು ಆನಂದ.

ಹೀಗೆ ಹೆಕ್ಕಿ ತಂದ ಹಣ್ಣನ್ನು ತೊಳೆದು ತೊಟ್ಟನ್ನು ತೆಗೆದು ಒಂದೊಂದೆ ಸುಲಿದು, ಸುಲಿಯುವಾಗ, ಹುಳ ಇದೆಯೋ ಎಂದು ದೊಡ್ಡ ಕಣ್ಣು ಮಾಡಿ ನೋಡಬೇಕು. ಸುಲಿದು ಸಿಪ್ಪೆಯನ್ನು ಒಂದು ಪಾತ್ರೆಗೆ, ಗೊರಟುಗಳನ್ನು ಇನ್ನೊಂದು ಪಾತ್ರೆಗೆ ಹಾಕಬೇಕು. ನಾವು ಅಕ್ಕ ತಂಗಿಯರು ಸುತ್ತ ಕುಳಿತು ಸುಮಾರು ೫೦ ಹಣ್ಣುಗಳನ್ನು ಸುಲಿಯುತ್ತಿದ್ದೆವು. (ಅವುಗಳಲ್ಲಿ ಸುಮಾರು ಹುಳದಿಂದ ಬೀಸಾಕುವುದೇ ಆಗುತ್ತಿತ್ತು) ಸುಮಾರು ೨೫ ಹಣ್ಣುಗಳು ಸಿಪ್ಪೆಗೆ ಒಂದಷ್ಟು ನೀರು ಹಾಕಿ ಅದನ್ನು ಗಿವುಚಬೇಕು. ಗಿವುಚಿ ತೆಗೆದ ನೀರನ್ನು ಗೊರಟಿನ ಪಾತ್ರೆಗೆ ಸುರಿಯಬೇಕು. ಹೀಗೆ ಮೂರುಸಲ ಗಿವುಚಬೇಕು. ನಮ್ಮ ಅಕ್ಕ ಗಿವುಚಿದ್ದರಲ್ಲಿ ಬಹಳ ಕುಶಲೆ. ಸಿಪ್ಪೆಯಲ್ಲಿ ಏನೂ ಉಳಿಯಲಿಕ್ಕಿಲ್ಲ. ಅಷ್ಟು ಗಿವುಚುವುದು. (ಅದೇ ನಾನು ಗಿವುಚಲು ಕೂತರೆ ಒಂದೆರಡು ಸಲ ಗಿವುಚಿ ಆಯಿತು ಎನ್ನುತ್ತಿದ್ದೆ. ಗುಳ ಹಾಗೆಯೇ ಇದೆ ಎಂದು ಅಕ್ಕ ನನ್ನನ್ನು ಅಟ್ಟಿ, ಅವಳು ಕೂರುತ್ತಿದ್ದಳು. ನಾನೂ ಇದೇ ಅವಕಾಶಕ್ಕಾಗಿ ಕಾಯುತ್ತಿದ್ದುದು!) ಇಂಥ ಕೆಲಸದಲ್ಲಿ ನಯ ನಾಜೂಕು ನನಗೆ ಸಿದ್ದಿಸಿರಲಿಲ್ಲ. ಗೊರಟು ಸಿಪ್ಪೆಬಿಡಿಸುವ ಕಾಯಕದಲ್ಲಿದ್ದಾಗ ಅಮ್ಮನೊ ದೊಡ್ಡಮ್ಮನೊ ನನಗೆ ಬೇರೆ ಕೆಲಸ ಹೇಳಿದರೆ, ಕೂಡಲೇ ನಾನು ಅಲ್ಲಿಂದ ಪರಾರಿ. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತೆ ನನಗೆ ಖುಷಿ.
ಅಷ್ಟು ಹಣ್ಣು ಏಕೆ ಎಂದು ನೀವು ಯೋಚಿಸಿದಿರ? ನಮ್ಮದು ಒಟ್ಟು ಕುಟುಂಬ. ೧೨+೧= ೧೩ ಮಂದಿ (ಹಟ್ಟಿ ಕೆಲಸಕ್ಕೆಂದು ಒಬ್ಬ ಕೆಲಸದಾಳು ಮನೆಯಲ್ಲೇ ಇದ್ದ) ಇದ್ದೆವು. ಎರಡು ಹೊತ್ತಿಗೆ ಬೇಕಲ್ಲ. ರಾತ್ರಿಗೆ ಒಂದೆರಡು ಗೊರಟು ಉಳಿದು ಬರೀ ನೀರಷ್ಟೆ ಇರುತ್ತಿತ್ತು! ಈ ಸಾರು ಮಾಡಿದ ದಿನ ನಮ್ಮಕ್ಕ, ತಂಗಿಗೆ ಊಟ ಮುಗಿಸಲು ಅರ್ಧ ಗಂಟೆ ಜಾಸ್ತಿ ಬೇಕಾಗುತ್ತಿತ್ತು. ಕಾಲುಗಂಟೆ ಗೊರಟನ್ನು ಚೀಪಿ ಚೀಪಿ ಅದರಲ್ಲಿ ಏನೂ ಉಳಿದಿರುವುದಿಲ್ಲ. ಮತ್ತೆ ಕೊನೆಗೇ ಮೊಸರು ಹಾಕಿಗೊಂಡು ಅದೇ ಗೊರಟನ್ನು ಅದಕ್ಕೆ ಹೊರಳಿಸಿ ಮತ್ತೆ ಕಾಲು ಗಂಟೆ ಚೀಪುವುದು. ಅವರನ್ನು ನೋಡಿ ನನಗೆ ಅಸಹನೆ. ಎಷ್ಟು ಚೀಪುತ್ತೀರಪ್ಪ, ಏನೂ ಉಳಿದಿಲ್ಲ. ಗೊರಟೇ ಒಡೆಯಬಹುದಿನ್ನು ಎನ್ನುತ್ತಿದ್ದೆ. ನನಗಾದರೋ ಈ ಸಾರು ಅಷ್ಟು ಇಷ್ಟವಿಲ್ಲ. ಬೆಲ್ಲ ಹಾಕಿ ಮಾಡುವ ಸಾರು ಬಹಳ ಸಿಹಿ ಇರುತ್ತಿತ್ತು. ಒಂದು ಗೊರಟು ಹಾಕಿಗೊಂಡು ಒಮ್ಮೆ ಬಾಯೊಯೊಳಗೆ ಹಾಕಿ ಚೀಪಿದಾಗೆ ಮಾಡಿ ಬದಿಗಿಡುತ್ತಿದ್ದೆ
ತಂಗಿಗೆ ನನ್ನ ತಟ್ಟೆಯಲ್ಲಿರುವ ಗೊರಟಿನಮೇಲೆಯೇ ದೃಷ್ಟಿ. ನೋಡು ಗುಳ ಎಷ್ಟು ಇದೆ. ಹಾಳುಮಾಡಬೇಡ. ಇನ್ನೂ ಚೀಪು ಎಂದು ನನಗೆ ಹೇಳುತ್ತಿದ್ದಳು. ಹಾಕಿಗೊಂಡು ದಂಡ ಮಾಡಿದಳಿವಳು ಎಂದು ಅವಳಿಗೆ ಸಂಕಟ. ಮಾವು ಕೆಲಸ ಮುಗಿಯುವಲ್ಲಿವರೆಗೆ ಇಷ್ಟೆಲ್ಲ ನೆನಪಿನ ಮಾಲೆ ಒಂದರ ಹಿಂದೆ ಒಂದರಂತೆ ಮನದೆದುರು ಸಾಗಿತು. ಇಲ್ಲಿಗೆ ಸಾರು ಪುರಾಣದೊಳಗಿನ ನೆನಪಿನಮಾಲೆಗೆ ಮುಕ್ತಾಯ ಹಾಡುವೆ. ಸಾರು ಹೇಗೆ ಮಾಡುವುದೆಂಬ ಮುಖ್ಯ ವಿಷಯದತ್ತ ಗಮನ ಹರಿಸೋಣ.
೧) ಕಾಡು ಮಾವಿನಹಣ್ಣನ್ನು ತೊಳೆದು, ತೊಟ್ಟಿನ ಬುಡ ಕೆತ್ತಿ ತೆಗೆಯಬೇಕು.
೨) ತೊಟ್ಟು ಕೆತ್ತಿಟ್ಟ ಹಣ್ಣನ್ನು ಕೈಯಲ್ಲೇ ಸಿಪ್ಪೆ ಬಿಡಿಸಿ ಗೊರಟನ್ನು ಸಾರು ಮಾಡುವ ಪಾತ್ರೆಗೆ ಹಾಕಬೇಕು. ಸಿಪ್ಪೆಇನ್ನೊಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆನೀರು ಸೇರಿಸಿ ಗಿವುಚಿದ ರಸವನ್ನು ಗೊರಟಿನ ಪಾತ್ರೆಗೆ ಹಾಕಬೇಕು. ಹೀಗೆ ಒಂದೆರಡು ಸಲ ಗಿವುಚಬೇಕು.
೩)ಒಲೆಯಮೇಲೆ ಸಾರಿನ ಪಾತ್ರೆಯನ್ನು ಇಟ್ಟು, ಅದಕ್ಕೆ ಉಪ್ಪು, ಹಸಿಮೆಣಸು, ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು. ಅರ್ಧಗಂಟೆ ಕುದಿಯಬೇಕು. ಆಗ ಗೊರಟು ಬೆಂದು ರಸ ಬಿಡುತ್ತದೆ.(ಬೇಕಾದರೆ ಸಾರಿನಪುಡಿ ಹಾಕಬಹುದು)ಕರಿಬೇವು ಹಾಕಿ,ತುಪ್ಪದಲ್ಲಿ ಸಾಸುವೆ ಇಂಗಿನ ಒಗ್ಗರಣೆ ಹಾಕಬೇಕು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ