ಬುಧವಾರ, ನವೆಂಬರ್ 3, 2021

ಸಿದ್ದಾಪುರ ತಾಣದಲ್ಲೆರಡು ದಿನ ಯಾನ

  ಭಾನ್ಕುಳಿ ಮಠ (ಗೋಸ್ವರ್ಗ),ಭುವನೇಶ್ವರಿ ದೇಗುಲ, ಗೋಲ ಬಾವಿ, ರತ್ನತ್ರಯ ಬಸದಿ,ಆಂಜನೇಯ ಮಂದಿರ,ಬುರುಡೆ ಜಲಪಾತ,ಭೀಮ ಗುಡ್ಡ,ಚಂದ್ರಗುತ್ತಿ- ರೇಣುಕಾಂಬ ದೇಗುಲ

ಉತ್ತರಕನ್ನದ ಜಿಲ್ಲೆಯ ಸಿದ್ಧಾಪುರ ತಾಲೂಕಿನಲ್ಲೆರಡು ದಿನದ ಚಾರಣಕ್ಕಾಗಿ ನಾವು ೨೨ ಮಂದಿ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರು ವತಿಯಿಂದ ಹೊರಟೆವು. ತಾರೀಕು ೨೨-೧೦-೨೦೨೧ರಂದು ರಾತ್ರೆ ೯ ಗಂಟೆಗೆ ಸ್ವರಾಜ್ ಮಜ್ಡ ವ್ಯಾನಿನಲ್ಲಿ ಹೊರಟು (ಮೈಸೂರು- ಪಾಂಡವಪುರ-ಚನ್ನರಾಯಪಟ್ಟಣ-ಅರಸೀಕೆರೆ-ಶಿವಮೊಗ್ಗ-ಇಟಗಿ-ಭಾನ್ಕುಳಿಮಠ) ೨೩ನೇ ತಾರೀಕಿನಂದು ಬೆಳಗ್ಗೆ ೫.೩೦ಗೆ ಭಾನ್ಕುಳಿ ಮಠ ತಲಪಿದೆವು.

  ಭಾನ್ಕುಳಿ ಮಠ (ಗೋಸ್ವರ್ಗ)

ಸಿದ್ದಾಪುರದಿಂದ ಆರೂವರೆ ಕಿಮೀ ದೂರದಲ್ಲಿರುವ ಈ ಮಠದಲ್ಲಿ ನಮ್ಮ ವಾಸ್ತವ್ಯ. ಗೋಸ್ವರ್ಗದ ಹಿಂಭಾಗದಲ್ಲಿ ಸಾಲಾಗಿ ಆರು ಕೊಠಡಿಗಳಿವೆ. ಆ ಕೊಠಡಿಗೆ ತೆರಳಲು ಅಡಿಕೆ ತೋಟದ ಮಧ್ಯೆ ರಸ್ತೆ, ಅಲ್ಲಿಂದ ಗೋಸ್ವರ್ಗದ ಹೆಬ್ಬಾಗಿಲು ದಾಟಿ ಮುಂದಕ್ಕೆ ಹೋದರೆ ಮಧ್ಯ ಸರೋವರ, ಸುತ್ತಲೂ ಗೋವುಗಳು. ಸ್ವಚ್ಛ ಪರಿಸರದಲ್ಲಿ ಗೋವುಗಳನ್ನು ನೋಡುವುದೇ ಆನಂದ.  ಕೊಳಲಿನ ಧ್ವನಿ ಮಂದವಾಗಿ ಕೇಳುತ್ತಲಿತ್ತು. ಕೆಲಸಗಾರರು ಕೊಟ್ಟಿಗೆ ತೊಳೆಯುವ ಕೆಲಸದಲ್ಲಿ ನಿರತರಾಗಿದ್ದರು. ಪುಟ್ಟ ಕರುಗಳು ಅತ್ತಂದಿತ್ತ ಓಡುತ್ತಿದ್ದುವು. ನಂದಿಗಳು ಬೈಹುಲ್ಲು ತಿನ್ನುವ ತವಕದಲ್ಲಿದ್ದುವು. ವಿಶಾಲವಾದ ಹಟ್ಟಿಯನ್ನು ಬಲು ಸುಂದರ ವಿನ್ಯಾಸದಲ್ಲಿ ಕಟ್ಟಿದ್ದಾರೆ.  ಗೋವುಗಳು ಇಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ.


 




 ಈ ಗೋಸ್ವರ್ಗ ನಿರ್ಮಾಣಕಾರ್ಯಕ್ಕೆ ೩ ಮಾರ್ಚ್ ೨೦೧೮ರಂದು ಶಂಕುಸ್ಥಾಪನೆಯಾಗಿ ೨೭ಮೇ ೨೦೧೮ರಂದು ಲೋಕಾರ್ಪಣೆ ಗೊಂಡಿತು. ಇದರ ನಿರ್ಮಾಣದಲ್ಲಿ ಸಾವಿರಾರು ಕಾರ್ಯಕರ್ತರು ಕೈಜೋಡಿಸಿದ್ದಾರೆ. ಈಗ ಇಲ್ಲಿ ಸುಮಾರು ೭೦೦ಕ್ಕೂ ಮಿಕ್ಕು ಗೋವುಗಳು ಆಶ್ರಯ ಪಡೆದಿವೆ.  ಗೋಸಾಕಣೆ ಸುಲಭದ ಕೆಲಸವಲ್ಲ. ಇಲ್ಲಿ ೪೦ ಮಂದಿ ಕೆಲಸಗಾರರು ಗೋವುಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. ದಿನವೊಂದಕ್ಕೆ ದಪ್ಪಗಾತ್ರದ ೬೨ ಬೈಹುಲ್ಲು ಕಟ್ಟು (ಎರಡೂ ಹೊತ್ತಿಗೆ ಸೇರಿ) ಬೇಕಾಗುತ್ತದಂತೆ. ಬೃಹತ್ ಗಾತ್ರದ ನಂದಿಗಳು ಇಲ್ಲಿ ಇವೆ. ಇಲ್ಲಿರುವ ಗೋವುಗಳಲ್ಲಿ ಹೋರಿಗಳ ಸಂಖ್ಯೆಯೇ ಅತಿ ಹೆಚ್ಚು.  

  ನಾವು ಕೋಣೆಯಲ್ಲಿ ವಿಶ್ರಾಂತಿ ಪಡೆದೆವು. ವಿಶಾಲವಾದ ಕೋಣೆಯೊಳಗೆ ಮಂಚ, ಹಾಸಿಗೆ, ಬಚ್ಚಲು, ಪಾಯಿಖಾನೆ, ಸ್ನಾನಕ್ಕೆ ಬಿಸಿನೀರು ವ್ಯವಸ್ಥೆ ಇದೆ. ಒಂದು ಕೋಣೆಯಲ್ಲಿ ನಾಲ್ಕು ಮಂದಿ ಇರಬಹುದು. (ದಿನವೊಂದರ ಬಾಡಿಗೆ ರೂ. ೧೦೦೦. ನಾಲ್ಕು ಮಂದಿಯಾದರೂ ಅಷ್ಟೆ, ಒಬ್ಬ ಇಬ್ಬರಾದರೂ ಅಷ್ಟೆ. ನಾಲ್ಕರಿಂದ ಹೆಚ್ಚು ಮಂದಿ ಇರುವುದಾದರೆ ತಲಾ ರೂ ೨೫೦ ಕೊಡಬೇಕು.) ಈ ಎಲ್ಲಾ ಸೇವಾಶುಲ್ಕಗಳೂ ಗೋವುಗಳ ನಿರ್ವಹಣೆಗೆ ವೆಚ್ಚ ಮಾಡುತ್ತಾರಂತೆ. (ಗೋಸ್ವರ್ಗ, ವಸತಿ ಕೋಣೆಗಳ ಮಾಹಿತಿ ಕಾದಿರಿಸಲು ಇವರನ್ನು ಸಂಪರ್ಕಿಸಿ: ಕಮಲಾಕರ ಭಟ್ ೭೬೧೯೫೮೦೧೬೩, ಮಂಜುನಾಥ ೯೫೩೮೦೩೪೦೬೭)

ಬೆಳಗ್ಗೆ ೮.೩೦ಗೆ ಮಠದಲ್ಲಿ ವಿಶಾಲವಾದ ಊಟದ ಕೋಣೆಯಲ್ಲಿ ಇಡ್ಲಿ ಚಟ್ನಿ, ಸಾಂಬಾರು ಸೇವಿಸಿದೆವು. ಅಡುಗೆ ಕೋಣೆಯಲ್ಲಿ ಬಾಣಸಿಗರಾದ ಶೃಂಗೇರಿ ಗೋಪಾಲಕೃಷ್ಣ ಅವರು ಇಡ್ಲಿ ತಯಾರಿಯಲ್ಲಿ ನಿರತರಾಗಿರುವುದು ಕಂಡು ಬಂತು. ಅವರನ್ನು ಮಾತಾಡಿಸಿ, ಇಡ್ಲಿ ಬಹಳ ಚೆನ್ನಾಗಿತ್ತು ಎಂದೆವು.


    ಭಾನ್ಕುಳಿ ಮಠದಲ್ಲಿ ರಾಮ ದೇಗುಲವಿದೆ. ಈ ಭಾನ್ಕುಳಿ ಮಠದ ಆಸ್ತಿ ಸುಮಾರು ೧೦೦ ಎಕರೆ. ಇದು ಬಿಳಗಿ ಅರಸರಿಗೆ ಸೇರಿದ ಸ್ಥಳ. ಕ್ರಮೇಣ, ಅರಸರಿಂದ ಒಬ್ಬರು ಸ್ವಾಮಿಗಳಿಗೆ ಹಸ್ತಾಂತರವಾಗಿ, ತದನಂತರ ಅವರು ರಾಮಚಂದ್ರಾಪುರ ಮಠಕ್ಕೆ ವಹಿಸಿ ಹಿಮಾಲಯಕ್ಕೆ ತೆರಳಿದರಂತೆ.

    ಭುವನೇಶ್ವರಿ ದೇಗುಲ

ಗೋಸ್ವರ್ಗದಿಂದ ಸುಮಾರು ೩ಕಿಮೀ ದೂರದಲ್ಲಿರುವ ಸಿದ್ಧಾಪುರ ತಾಲೂಕಿನ ಬಿಳಗಿಯ ಭುವನಗಿರಿಯಲ್ಲಿರುವ ಭುವನೇಶ್ವರಿ ದೇಗುಲಕ್ಕೆ ಹೋದೆವು. ೧೬೯೨ರಲ್ಲೇ ಬಸವೇಂದ್ರ ಎಂಬ ರಾಜ ಕಟ್ಟಿದ ಈ ದೇವಾಲಯ ಬಲು ಪ್ರಾಚೀನವಾದುದು. ದೇಗುಲದ ದ್ವಾರದಲ್ಲಿ ಭುವನೇಶ್ವರಿಯ ವಾಹನ ೨ ಸಿಂಹಗಳ ಮೂರ್ತಿ ಇದೆ. ಎದುರು ಧ್ವಜಸ್ತಂಭವಿದೆ. ಅದರಲ್ಲಿ ಕೆತ್ತನೆಗಳಿವೆ.  ದೇವಾಲಯ ಮಾತ್ರ ಬಣ್ಣ ಮಾಸಿ ಆಕರ್ಷಿಸುವಲ್ಲಿ ಸೋತಿದೆ. ವಿಶಾಲವಾದ ಪ್ರಾಂಗಣವಿದೆ. ಅಲ್ಲಿಯ ಅರ್ಚಕರ ಅನುಮತಿ ಮೇರೆಗೆ ದೇವಿ ಮೂರ್ತಿಯ ಪಟ ಕ್ಲಿಕ್ಕಿಸಿದೆವು. ಕರ್ನಾಟಕದಲ್ಲಿರುವ ಏಕೈಕ ಭುವನೇಶ್ವರಿ ದೇಗುಲವಿದು, ಇಲ್ಲಿಂದಲೇ ನವೆಂಬರ ಒಂದರಂದು ಜ್ಯೋತಿ ತೆಗೆದುಕೊಂಡು ಬೆಂಗಳೂರಿಗೆ ಹೋಗುತ್ತಿದ್ದರು  ಎಂಬ ಮಾಹಿತಿಯನ್ನು ಅಲ್ಲಿದ್ದವರೊಬ್ಬರು ಹೇಳಿದರು.



   ಅಲ್ಲಿಂದ ಸುಮಾರು ೫೦ ಮೆಟ್ಟಲು ಇಳಿದಾಗ ವಿಶಾಲವಾದ ಕೆರೆ ಕಂಡಿತು. ಸುತ್ತಲಿನ ಮರಗಳ ಪ್ರತಿಫಲನ ಕೆರೆಯಲ್ಲಿಕಾಣುತ್ತಲಿತ್ತು.


   ಗೋಲ ಬಾವಿ

 ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿರುವ ಗೋಲ ಬಾವಿ ನೋಡಲು ಹೋದೆವು. ಎದುರು ಎರಡು ಕಲ್ಲಿನ ತೊಟ್ಟಿಗಳಿವೆ. ಕುದುರೆಗೆ ನೀರು ಕುಡಿಸಲು ಉಪಯೋಗಿಸುತ್ತಿದ್ದಿರಬಹುದು.  ಗೋಲಬಾವಿಯ ಮೆಲ್ಭಾಗದಲ್ಲಿ ತಡೆ ಕಂಬಿ ನಿರ್ಮಿಸಲಾಗಿದೆ. ಅಲ್ಲಿಮ್ದ ಬಾವಿಯನ್ನು ನೋದಬಹುದು. ಬಾವಿಯ ಒಳಭಾಗದಲ್ಲೂ ಸುತ್ತಲೂ ತಡೆಕಂಬಿ ಹಾಕಿದ್ದಾರೆ. ಬಾವಿಯ ಸುತ್ತಲಿನ ಕೆತ್ತನೆ ಸೌಂದರ್ಯ ಪಾಚಿಹುಲ್ಲು ಬಂದು ಮರೆಯಾಗಿದೆ. ಗೋಲಬಾವಿ ಪ್ರಾಚೀನತೆಯ ಅದ್ಭುತ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿ ನಿಂತಿದೆ.


ಕ್ರಿ.ಶ. ೧೫೭೦ರ ಆಸುಪಾಸಿನಲ್ಲಿ ಬಿಳಗಿಯನ್ನು ಆಳಿದ ೩ನೇ ನರಸಿಂಹ ಅಥವಾ ರಂಗರಾಜನ ಕಾಲಾವಧಿಯಲ್ಲಿ ಗೋಲಬಾವಿ ನಿರ್ಮಾಣವಾಯಿತೆಂದು ಹೇಳಲಾಗುತ್ತದೆ. ಕ್ರಿಶ.೧೭೩೦ರಲ್ಲಿ ಬಿಳಗಿ ರಾಜ ಸೋಮಶೇಖರ ಅರಮನೆಯ ಭಾಗವಾಗಿ ಈ ಗೋಲಬಾವಿಯನ್ನು ನಿರ್ಮಿಸಿದ ಎಂದೂ ಹೇಳಲಾಗುತ್ತದೆ.  ಸುರಂಗದೊಳಗೆ ಕೆಲವು ಮೆಟ್ಟಲು ಇಳಿದರೆ ಒಳಗೆ ಗೋಲಬಾವಿ ಕಾಣುತ್ತೇವೆ. ಸಾಕಷ್ಟು ಮಳೆ ಬಿದ್ದು, ದಾರಿ ಜಾರುವಂತಿದೆ. ಬಾವಿ ಸುತ್ತ ಮಣ್ಣು ಕಿರಿಂಚಿ ಇದೆ. ಬಾವಿಯ ಸುತ್ತ ನಾಲ್ಕೂ ಸುತ್ತೂ ಮೆಲ್ಚಾವಣಿಯಲ್ಲಿ ಕಮಾನಿನ ಆಕಾರದಲ್ಲಿ ಸುಂದರ ಕೆತ್ತನೆಗಳಿವೆ. ಅಲ್ಲಿ ಬಾವಲಿ ವಾಸವಾಗಿವೆ. ಚೌಕಾಕಾರದ ಬಾವಿ ನೋಡಲು ಬಲು ಸುಂದರವಾಗಿದೆ. ಆದರೆ ನಿರ್ವಹಣೆಯಲ್ಲಿ ಸೋತಿದೆ ಎಂದೇ ಹೇಳಬಹುದು. ಇಂಥ ಪ್ರಾಚೀನ ಬಾವಿ ಇರುವ ಬಗ್ಗೆ ಗಮನ ಸೆಳೆಯಲು ಗೋಲಬಾವಿ ಎಂದು ಒಂದು ಫಲಕ ಕೂಡ ಅಲ್ಲಿ ಇಲ್ಲ.


   ರತ್ನತ್ರಯ ಬಸದಿ

   ಅಲ್ಲಿಂದ ತುಸು ದೂರದಲ್ಲಿರುವ ರತ್ನತ್ರಯ ಬಸದಿ ನೋಡಲು ಹೋದೆವು. ಈ ಬಸದಿಯನ್ನು ಬಿಳಗಿ ವಂಶದ ೧೦ನೇ ರಾಜನಾಗಿದ್ದ ಇಮ್ಮಡಿ ಘಂಟೇಂದ್ರ ಕ್ರಿ.ಶ. ೧೫೮೮ರಲ್ಲಿ ನಿರ್ಮಿಸಿದ. ಇಲ್ಲಿಯ ಶಿಲಾಕೆತ್ತನೆಗಳು ಕುಸುರಿಕಲೆಯಿಂದ ಕೂಡಿವೆ. ಬಿಳಗಿಯ ಇಂಥ ಐತಿಹಾಸಿಕ ಕುರುಹುಗಳು ಗತಕಾಲದ ವೈಭವಕ್ಕೆ ಸಾಕ್ಷಿಯಾಗಿದೆ. ಇಂದಿನ ಬಿಳಗಿ ವಿಜಯನಗರ ಅರಸರ ಕಾಲದಲ್ಲಿ ಶ್ವೇತಪುರ ಎಂಬ ಹೆಸರನ್ನು ಹೊತ್ತಿತ್ತು. 

   ಈ ಬಸದಿಯಲ್ಲಿ ಪಾರ್ಶ್ವನಾಥ, ನೇಮಿನಾಥ ಮತ್ತು ಮಾಹಾವೀರ ವಿಗ್ರಹಗಳಿವೆ. ೨ ಶಿಲಾ ಶಾಸನಗಳೂ ಇವೆ. ಬಸದಿಯು ನಿರ್ವಹಣೆ ಇಲ್ಲದೆ ಸೊರಗಿದೆ.


   ಆಂಜನೇಯ ಮಂದಿರ

ಬಸದಿಗೆ ಹೋಗುವ ದಾರಿಯಲ್ಲೇ ಆಂಜನೇಯ ದೇಗುಲವಿದೆ. ಇದು ಕೂಡ ಬಿಳಗಿ ಅರಸರ ಕಾಲದಲ್ಲೆ ನಿರ್ಮಾಣಗೊಂಡಿರುವುದೆಂದು ಅಲ್ಲಿಯ ಅರ್ಚಕರು ತಿಳಿಸಿದರು.

ಬುರುಡೆ ಜಲಪಾತ

ಸಿದ್ದಾಪುರ- ಕುಮಟಾ ರಸ್ತೆಯಲ್ಲಿ ಕ್ಯಾದಗಿ ಎಂಬ ಹಳ್ಳಿಗೆ ಬುರುಡೆ ಜಲಪಾತ ನೋಡಲು ಹೋದೆವು. ಮಣ್ಣಿನ ರಸ್ತೆಯಲ್ಲಿ ಸಾಗಿ  ಸುಮಾರು ೫-೬ಕಿಮೀ ಸಾಗಿ ನಮ್ಮ ವಾಹನ ಅಲ್ಲೇ ನಿಲ್ಲಿಸಿದರು. ಮುಂದೆ ೨ಕಿಮೀ ನಡೆದು ಸಾಗಿದೆವು. ಅಲ್ಲಿ ಅರಣ್ಯ ಇಲಾಖೆಯ ಒಂದು ಮಂಟಪ ಇದೆ. ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಯೋರ್ವರು ಇದ್ದರು. ನಮ್ಮ ಹೆಸರು ಒಂದು ಪುಸ್ತಕದಲ್ಲಿ ದಾಖಲಿಸಿ ಜಲಪಾತ ನೋಡಲು ಹೋಗಬೇಕು.

 ಜಲಪಾತ ನೋಡಲು ಸುಮಾರು ೫೦ ಮೆಟ್ಟಲು ಇಳಿಯಬೇಕು. ಅಲ್ಲಿಂದಲೇ ಜಲಪಾತದ ಸೌಂದರ್ಯ ಸವಿಯಬೆಕು. ಕೆಳಗೆ ನೀರಿಗೆ ಇಳಿಯದಂತೆ ಮುಳ್ಳುಬೇಲಿ ಹಾಕಿದ್ದಾರೆ. ಸುಮಾರು ಮಂದಿ ನೀರಿಗೆ ಇಳಿದು ಸತ್ತ ಉದಾಹರಣೆ ಇದೆಯಂತೆ. ಆದಕ್ಕಾಗಿ ಮಳೆಗಾಲದಲ್ಲಿ ನೀರಿಗಿಳಿಯಲು ಬಿಡುವುದಿಲ್ಲ. ನೀರಿನ ರಭಸ ಜೋರಾಗಿತ್ತು. ಉಂಬುಳದ ಕಾಟವೂ ಇತ್ತು. ಹತ್ತು ನಿಮಿಷ ಜಲಪಾತದ ಸೌಂದರ್ಯ ನೋಡಿ ತಣಿದು ಮೇಲೆ ಹತ್ತಿದೆವು.

  ಬುರುಡೆ ಜಲಪಾತ ಎಂದು ಹೆಸರು ಬಂದದ್ದು ಹೇಗೆ ಎಂದು ಅಲ್ಲಿಯ ಸಿಬ್ಬಂದಿಯವರನ್ನು ಕೇಳಿದೆ. ಅರಸರ ಕಾಲದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಎಂದರೆ ಅವರ ತಲೆ ಕಡಿದು ಈ ಜಲಪಾತಕ್ಕೆ ಎಸೆಯುತ್ತಿದ್ದರಂತೆ. ಅದಕ್ಕೆ ಬುರುಡೆ ಜಲಪಾತ ಎಂದು ಹೆಸರು ಬಂತೆಂದು ನಮ್ಮ ತಾತ ಹೇಳುತ್ತಿದ್ದರು ಎಂದರವರು. ಜೋಗದಿಂದ ಹರಿದು ಬರುವ ನೀರು ಇಲ್ಲಿ ಧುಮುಕುವುದು ಎಂದು ಸ್ಥಳೀಯರು ಹೇಳಿದರು.  ಬೈಕ್ ಸವಾರರು ಶನಿವಾರ ಭಾನುವಾರಗಳಂದು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರಂತೆ. ನೀವು ಜನವರಿಯಲ್ಲಿ ಬನ್ನಿ. ಆಗ ನೀರಿಗೆ ಇಳಿಯಬಹುದು ಎಂದರು.

   ಉಂಬುಳು ಸಾಕಷ್ಟು ಇದ್ದದ್ದರಿಂದ ತಮ್ಮ ಮೈಗೆ ಚಪ್ಪಲಿಗೆ ಹತ್ತಿದಾ ಎಂದು ಎಲ್ಲರೂ ಪರೀಕ್ಷಿಸಿಕೊಂಡೆವು. ನನ್ನ ಚಪ್ಪಲಿಗೆ ಪ್ಯಾಂಟಿಗೆ ಎರಡು ಹತ್ತಿತ್ತು. ರಕ್ತದಾನ ಮಾಡುವ ಅವಕಾಶ ಈ ಸಲ ಒದಗಿರಲಿಲ್ಲ! ರಶೀದ್ ಅತಿ ಹೆಚ್ಚು ರಕ್ತದಾನ ಮಾಡಿದ ಪುಣ್ಯ ಗಳಿಸಿಕೊಂಡರು. ಉಂಬುಳು ಹತ್ತಿದ ಸ್ಠಳಕ್ಕೆ ಉಪ್ಪು ಹಾಕಿದಾಗ ಅದು ಜಾರಿ ಬೀಳುತ್ತಿತ್ತು. ಮುಂಜಾಗರೂಕತೆಯಿಂದ ನಾವು ಉಪ್ಪು ಕೊಂಡೊಯ್ದಿದ್ದೆವು.

   ಇಲಿಮರಿ ಹೊಳೆ

 ಭಾನ್ಕುಳಿ ಮಠಕ್ಕೆ ಹೋಗುವ ದಾರಿಯಲ್ಲಿ ಇಲಿಮರಿ ಹೊಳೆ ಕಂಡು  ಜಲಪಾತದಲ್ಲಿ ನೀರಿಗಿಳಿಯಲು ಆಗದ ಬೇಸರವನ್ನು ಅಲ್ಲಿ ಹೊಳೆಗೆ ಇಳಿದು ನೀರಾಟ ಆಡಿ ನೀಗಿಸಿಕೊಂಡರು. ಈ ಹೊಳೆಗೆ ಹೆಸರೇನು ಎಂದು ಸ್ಥಳೀಯರನ್ನು ಕೇಳಿದಾಗ ಇಲಿಮರಿ ಎಂದರು! ಅಲ್ಲಿಂದ ೧.೩೦ಗೆ ಹೊರಟು ಭಾನ್ಕುಳಿ ಮಠಕ್ಕೆ ಹಿಂತಿರುಗಿದೆವು. ಅಲ್ಲಿ ಪೊಗದಸ್ತಾಗಿ ಊಟ (ಬೀಟ್ರೂಟ್ ಸಾಂಬಾರು, ತಂಬುಳಿ, ಮಜ್ಜಿಗೆ)ಮಾಡಿ ವಸತಿ ಕೋಣೆಯಲ್ಲಿ ವಿಶ್ರಾಂತಿಗೈದೆವು.

  ಭೀಮ ಗುಡ್ಡ

 ಭೀಮನೇರಿ ಗುಡ್ಡ, ಭೀಮ ಏರಿ ಗುಡ್ಡ ಎಂದೂ ಕರೆಯಲ್ಪಡುವ ಗುಡ್ಡಕ್ಕೆ ಹೋಗಿ ಸೂರ್ಯಾಸ್ತ ನೋಡಬೇಕು ಎಂದು ಭಾವಿಸಿದ್ದೆವು. ಆದರೆ ಹೊರಡುವಾಗ ೫ ಗಂಟೆ ದಾಟಿತ್ತು. ಭಾನ್ಕುಳಿ ಮಠದಿಂದ ಸುಮಾರು ೪೦ಕಿಮೀ ಹೋಗಬೇಕಿತ್ತು. ಕುಮಟಾ ರಸ್ತೆಯಲ್ಲಿ ಸಾಗಿ ಭೀಮ ಗುಡ್ಡ ತಲಪಿದಾಗ ಅದಾಗಲೇ ಸೂರ್ಯ ತನ್ನ ಕಾಯಕ ಮುಗಿಸಿ ತೆರಳಿ, ಕಾವಳದ ಕಾರ್ಯಕ್ಕೆ ಅನುಮತಿ ಕೊಟ್ಟಾಗಿತ್ತು. ಕತ್ತಲಲ್ಲೇ ನಾವು ವ್ಯೂ ಪಾಯಿಂಟ್ ತಲಪಿದಾಗ, ಛೆ! ನಾವು ತಪ್ಪು ಮಾಡಿದೆವು. ಅರ್ಧ ಗಂಟೆ ಮೊದಲೇ ಇಲ್ಲಿರಬೇಕಿತ್ತು ಎಂದು ಪಶ್ಚಾತ್ತಾಪ ಪಟ್ಟೆವು. ಆದರೂ ಆ ಕತ್ತಲಲ್ಲಿ ಕಂಡ ಎದುರಿನ ಬೆಟ್ಟಗಳು ನಯನ ಮನೋಹರವಾಗಿ ನೀಲವರ್ಣದಲ್ಲಿ ಕಂಗೊಳಿಸಿರುವುದನ್ನು ನೋಡಿ ತೃಪ್ತಿಪಟ್ಟೆವು. ಇಲ್ಲಿಂದ ಎದುರು ೩೬೦ ಡಿಗ್ರಿ ಕೋನದಲ್ಲಿ ನಾವು ಬೆಟ್ಟಗಳನ್ನು ನೋಡಬಹುದು. ಮುಂದೆಂದಾದರೂ ಖಂಡಿತಾ ಹಗಲು ಭೇಟಿ ಕೊಡಲೇಬೇಕಾದ ಸ್ಥಳವದು ಎಂದೂ ಮನವರಿಕೆಯಾಯಿತು. ಬೇಗ ಹಿಂದಿರುಗಿ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ನಮ್ಮನ್ನು ಅಲ್ಲಿಂದ ತೆರಳಲು ಸೂಚನೆ ಕೊಟ್ಟರು. ಕತ್ತಲೆಯಲ್ಲೂ ಪ್ರಕೃತಿ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುತ್ತ, ಮನಸ್ಸಿಲ್ಲದಿದ್ದರೂ  ಅಲ್ಲಿಂದ ನಿರ್ಗಮಿಸಿದೆವು.



  ಮಠಕ್ಕೆ ಬಂದು ಚೆನ್ನಾಗಿ ಊಟ (ಕಡ್ಲೆಕಾಯಿ ಬೀಜದ ಚಟ್ನಿ, ಸಾರು, ಮಜ್ಜಿಗೆ) ಮಾಡಿ ನಮ್ಮ ವಸತಿನಿಲಯಕ್ಕೆ ಹೋಗಿ ನಿದ್ರಿಸಿದೆವು.

     ಚಂದ್ರಗುತ್ತಿ- ರೇಣುಕಾಂಬ ದೇಗುಲ

ತಾರೀಕು ೨೪-೧೦-೨೦೨೧ರಂದು ಬೆಳಗ್ಗೆ ೪.೩೦ಗೆ ಎದ್ದು ನಾವು ತಯಾರಾಗಿ ೫.೧೫ಕ್ಕೆ ಹೊರಟು ಸೊರಬ –ಸಿದ್ದಾಪುರ ದಾರಿ ಮಧ್ಯೆ ಸಿಗುವ ಚಂದ್ರಗುತ್ತಿ ರೇಣುಕಾಂಬ ದೇಗುಲಕ್ಕೆ ಹೊರಟೆವು. ಸೊರಬದಿಂದ ೧೭ಕಿಮೀ, ಸಿದ್ದಾಪುರದಿಂದ ೧೬ಕಿಮೀ. ದೂರದಲ್ಲಿದೆ. ಮಠದಿಂದ ಸುಮಾರು ೨೦ಕಿಮೀ ಕ್ರಮಿಸಿ, ಸುಮಾರು ಮೂವತ್ತು ಮೆಟ್ಟಲು ಏರಿ ದೇಗುಲ ತಲಪಿದೆವು.  ಬೃಹತ್ ಬಂಡೆ ಒಳಗೆ ರೇಣುಕಾಂಬೆಯ ದೇಗುಲವಿದೆ. ರೇಣುಕೆಯನ್ನು ಗುತ್ತಿಯಮ್ಮ ಎಂದೂ ಕರೆಯುತ್ತಾರೆ. ಪರಶುರಾಮನ ತಾಯಿ ರೇಣುಕಾಂಬೆ ದೇವಾಲಯದ ಎದುರು ಪರಶುರಾಮ ಮತ್ತು ಏಳು ಹೆಡೆ ನಾಗ ದೇವಾಲಯವೂ ಇದೆ. ಈ ಬಂಡೆಯು ೮೪೮ ಮೀಟರ್ ಎತ್ತರವಿದೆ. ಇಲ್ಲಿ ಪ್ರತೀ ವರ್ಷ ಮಾರ್ಚ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿ ಬೆತ್ತಲೆ ಸೇವೆ ನಡೆಯುತ್ತಿದ್ದುದನ್ನು ೧೯೮೪ರಲ್ಲಿ ನಿಷೇಧಿಸಲಗಿದೆ. ದೇವಾಲಯದ ಪೂಜಾ ವಿವರ: ಬೆಳಗ್ಗೆ ೯ರಿಂದ ೨ ಗಂಟೆ, ಸಂಜೆ ೪.೩೦ರಿಂದ ೬.೩೦ ತನಕ.

 ಜಮದಗ್ನಿಯು ಪತ್ನಿ ರೇಣುಕಾಳ ಮೇಲೆ ಸಂಶಯಗೊಂಡು ಕೋಪೋದ್ರಿಕ್ತನಾಗಿ, ತಾಯಿಯ ತಲೆ ಕಡಿಯಲು ಮಗ ಪರಶುರಾಮನಿಗೆ ಹೇಳಿದಾಗ, ಮಗ ಅಪ್ಪನ ಮಾತು ಮೀರದೆ ತಾಯಿಯ ತಲೆ ಕಡಿದ. ಜಮದಗ್ನಿ ಹರುಷದಿಂದ ಮಗನಿಗೆ ವರ ಕೊಟ್ಟಾಗ, ಮಗ ತಾಯಿಯನ್ನು ಮರಳಿ ಬದುಕಿಸಲು ಕೇಳಿಕೊಂಡು, ರೇಣುಕಾ ಬದುಕಿ ಬಂದ ಸ್ಥಳವೇ ಈ ಚಂದ್ರಗುತ್ತಿ ಎಂಬುದು ಐತಿಹ್ಯ.

    ಚಂದ್ರಗುತ್ತಿಯನ್ನು ಬನವಾಸಿಯ ಕದಂಬರು, ವಿಜಯನಗರದ ದೊರೆ ಹರಿಹರನ ಆಳ್ವಿಕೆಯಲ್ಲಿ ಬಚಣ್ಣ ಎಂಬ ಮುಖ್ಯಸ್ಥ, ತದನಂತರ ಕೆಳದಿ ನಾಯಕರು  ಆಳಿದ್ದರೆಂಬ ಉಲ್ಲೇಖವಿದೆ.  

ಚಂದ್ರಗುತ್ತಿ ಕೋಟೆ

ಸ್ಥಳಿಯರಿಂದ ತಿಳಿದ ಮಾಹಿತಿಯಂತೆ ಅಲ್ಲಿಂದ ಸುಮಾರು ಮೂರು ಕಿಮೀ ಸಾಗಿದರೆ ಕೋಟೆ ನೋಡಬಹುದು ಎಂಬುದು ತಿಳಿಯಿತು. ಅದನ್ನು ಏರುವ ಉತ್ಸಾಹ ಎಲ್ಲರಲ್ಲೂ ಬಂತು. ಹಾಗೆ ನಾವು ಕೋಟೆ ಏರಲು ಮುನ್ನಡೆದೆವು. (ಕದಂಬರ ಕಾಲದಲ್ಲಿ ಕೋಟೆ ನಿರ್ಮಾಣ ಮಾಡಿ ಯುದ್ಧಕಾಲದಲ್ಲಿ ಬಳಸುತ್ತಿದ್ದರು. ಇಲ್ಲಿಂದ ಬನವಾಸಿಗೆ ಸುರಂಗ ಮಾರ್ಗವಿತ್ತೆಂಬ ಪ್ರತೀತಿ ಇದೆ. ಮಾಹಿತಿ: ವಿಕಿಪೀಡಿಯ)

 ದೇವಾಲಯದ ಹಿಂಭಾಗದಿಂದ ಕಾಡು ದಾರಿಯಲ್ಲಿ ಕುರುಚಲು ಹುಲ್ಲುಗಳ ಮಧ್ಯೆ ಸವೆದ ದಾರಿಯ ಜಾಡು ಹಿಡಿದು ನಡೆದೆವು. ಸ್ವಲ್ಪ ದೂರ ಹೋದಾಗ, ಕೋಟೆಯ ಹೆಬ್ಬಾಗಿಲು ಎದುರಾಯಿತು. ಸರಿಯಾದ ದಾರಿಯಲ್ಲಿದ್ದೇವೆ ಎಂದು ಮನದಟ್ಟಾಯಿತು. ಹಾಗೆಯೇ ಮುಂದುವರೆದು, ಸಣ್ಣ ಬಂಡೆ ಏರಿ ಸಾಗಿದಾಗ ಕೋಟೆಯ ಮಧ್ಯಭಾಗ ತಲಪಿದೆವು. ಕೋಟೆಯ ಕಲ್ಲುಗಳು ಸದೃಢವಾಗಿವೆ. ಕೋಟೆ ಅಲ್ಲಲ್ಲಿ ಪಾಳು ಬಿದ್ದಿದೆ. ಯುದ್ಢ ಕಾಲದ ಕುರುಹಾಗಿ ಸಾಕ್ಷಿಗೆ ಫಿರಂಗಿಗಳು ಅಲ್ಲಿ ಬಿದ್ದುದು ಕಂಡಿತು.  ಮೋಡ ಮುಸುಕಿದ್ದರಿಂದ ಸೂರ್ಯೋದಯ ನೋಡಲಾಗಲಿಲ್ಲ. ಆಗಲೇ ೬.೩೦ ಗಂಟೆ ದಾಟಿತ್ತು. ಕೋಟೆಯ ಸುತ್ತ ಬೆಟ್ಟದಮೇಲೆ ಮೋಡ ಮುಸುಕಿದ ವಾತಾವರಣ. ಮೇಘಗಳ ಅಲೆಯ ನೋಟ ಬಲು ಚಂದ. ಪ್ರಕೃತಿಯ ರಮಣೀಯ ನೋಟ ನೋಡುತ್ತ, ಹರಟುತ್ತ ಅಲ್ಲಿ ಸ್ವಲ್ಪ ಕಾಲ ವಿರಮಿಸಿದೆವು. ಹಸಿದ ಹೊಟ್ಟೆಗೆ ಬಿಸ್ಕತ್ತು, ಗೋಡಂಬಿ ಹಂಚಿದರು. ಇದರಿಂದ ಚೈತನ್ಯ ತುಂಬಿತ್ತು.  ಕೋಟೆ ತುದಿ ಹತ್ತಬಹುದು ಎಂಬ ಭರವಸೆ ಬಂದಿತ್ತು.

  ಕೋಟೆಯ ತುದಿಗೇರುವ ಆಸೆ ಇದ್ದರೂ, ಸಮಯ ಮೀರಿದ್ದರಿಂದ, ತಿಂಡಿ ತಿನ್ನದೆ ಬಂದದ್ದರಿಂದ, ಮಳೆ ಬರುವ ಸೂಚನೆ ಕಂಡದ್ದರಿಂದ, ಮುಂದಕ್ಕೆ ನಮಗೆ ಬೇರೆ ಕಡೆ ಪ್ರಯಾಣ ಇದ್ದದ್ದರಿಂದ ಆ ಆಸೆಯನ್ನು ಅಲ್ಲೇ ಅದುಮಿ ಅಲ್ಲಿಂದ ಕೆಳಗೆ ಇಳಿಯಲು ತೊಡಗಿದೆವು.



    ನಾವು ಆರೇಳು ಮಂದಿ ೮ ಗಂಟೆಗೆ ದೇಗುಲ ಬಳಿ ತಲಪುವುದಕ್ಕೂ ಮಳೆ ಸುರಿಯುವುದಕ್ಕೂ ಸರಿಹೋಯಿತು. ಬಾಕಿದ್ದವರೆಲ್ಲ ಮಳೆಯಲ್ಲಿ ನೆನೆದರು. ಮಳೆಅಂಗಿ, ಕೊಡೆ ಎಲ್ಲ ಮಠದ ಕೋಣೆಯಲ್ಲಿ ಬೆಚ್ಚಗೆ ಚೀಲದೊಳಗೆ ಇತ್ತು! ಕೆಲವರು ಮಾತ್ರ ಅಲ್ಲಿಗೆ ತಂದಿದ್ದರು.

ಅವರೆಲ್ಲ ಕೆಳಗೆ ಬರಲು ಒಂದು ಘಂಟೆ ಹಿಡಿಯಿತು. ಐದಾರು ಮಂದಿಗೆ ದಾರಿ ತಪ್ಪಿ, ಅವರಿಗೆ ಸಂಚಾರಿ ಕರೆ ಮಾಡಲು ಸಾಧ್ಯವಾಗಿ, ಸರಿ ದಾರಿಗೆ ಮರಳಿ ಕೆಳಗೆ ಬರುವಲ್ಲಿ ಸಫಲರಾದದ್ದು ಸಮಾಧಾನ ತಂದಿತು.



  ರೇಣುಕಾಂಬ ದೇಗುಲದ ಬಾಗಿಲು ತೆರೆದಿರಲಿಲ್ಲ. ಪೂಜಾ ಸಮಯಕ್ಕೆ ಮತ್ತೂ ಸಮಯವಿತ್ತು. ೯ ಗಂಟೆಗೆ ಕಾವಲುಗಾರನೊಬ್ಬ ಅರೆ ಬಾಗಿಲು ತೆರೆದು ಗುಡಿಸುವ ಕಾಯಕ ಮಾಡುತ್ತಲಿದ್ದ. ಅವನು ಮೆಟ್ಟಲ ಮೆಲಿಂದಲೇ ದೇವರನ್ನು ನೋಡುವ ಅವಕಾಶ ಕಲ್ಪಿಸಿದ. ನಾವು ರೇಣುಕಾಂಬೆಯನ್ನು ದೂರದಿಂದ ನೋಡಿ ತೃಪ್ತಿಪಟ್ಟು, ಹೊರಟು ಭಾನ್ಕುಳಿ ಮಠಕ್ಕೆ ಹಿಂದಿರುಗಿದೆವು. ತುಸು ದೂರವಾದರೂ ಚಾರಣ ಮಾಡಿದ ತೃಪ್ತಿ ಎಲ್ಲರಿಗೂ ಲಭಿಸಿತ್ತು.

   ಭಾನ್ಕುಳಿಮಠಕ್ಕೆ ವಿದಾಯ

   ಮಠದಲ್ಲಿ ಪೊಂಗಲ್, ಹುಳಿಗೊಜ್ಜು, ಚಿತ್ರಾನ್ನ ತಿಂದು, ಅಲ್ಲಿಯ ಲೆಕ್ಕ ಚುಕ್ತಾ ಮಾಡಿ ೧೧ ಗಂಟೆಗೆ ಮಠದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿ   ಅಲ್ಲಿಂದ ಹೊರಟೆವು.

   ನಮ್ಮ ಮುಂದಿನ ಗುರಿ ಇದ್ದುದು ಭೀಮೇಶ್ವರ ದೇಗುಲಕ್ಕೆ. ಆದರೆ ಆ ಗುರಿ ಈಡೇರಲಿಲ್ಲ. ಭೀಮೇಶ್ವರ ನಮ್ಮನ್ನು ಕರೆಸಿಕೊಳ್ಳಲಿಲ್ಲ.  

 ಮಠದಿಂದ ಹೊರಟು ಸಿದ್ದಾಪುರ ದಾರಿಗೆ ತಲಪುವುದಕ್ಕೂ ಮೊದಲೆ ಇದ್ದಕ್ಕಿದ್ದಂತೆ ನಮ್ಮ ಗಾಡಿ ಸ್ತಬ್ಧವಾಗಿ ನಿಂತುಬಿಟ್ಟಿತು. ಚಾಲಕ ನಾಗೇಶ ಪರಿಕ್ಷಿಸಿದಾಗ, ಕ್ಲಚ್ ಕಿಟ್ ನಲ್ಲಿ ಏನೋ ತೊಂದರೆ ಎಂಬುದು ತಿಳಿಯಿತು. ಆಗ ಸ್ಥಳೀಯರು ಬಂದು ವಿಚಾರಿಸಿ, ಗಾಡಿ  ರಿಪೇರಿ ತಜ್ಞರಿಗೆ ಕರೆ ಮಾಡಿ ಅವರ ದೂರವಾಣಿ ಸಂಖ್ಯೆ ಕೊಟ್ಟು ಉಪಕರಿಸಿದರು. ಹೇಗೋ ಮಾಡಿ ಗಾಡಿ ಚಾಲೂ ಮಾಡುವಲ್ಲಿ ಸಫಲನಾಗಿ ಸಾಗರ ತಲಪಿಸಿದ. ಅಲ್ಲಿಗೆ ಗಾಡಿಯ ವೈದ್ಯರು ಬಂದು ನೋಡಿ ತಾತ್ಕಾಲಿಕ ಉಪಶಮನ ಚಿಕಿತ್ಸೆ, ಶುಶ್ರೂಷೆ ಮಾಡಿದರು.

  ನಮ್ಮ ಜೊತೆ ಬಂದಿದ್ದ ಅಭಿಲಾಷನ ಮನೆ  ಸಾಗರದ ಸಮೀಪ ಇತ್ತು. ಅಲ್ಲಿಗೆ ನಮ್ಮನ್ನೆಲ್ಲ ಬಿಟ್ಟು ನಾಗೇಶ ಗಾಡಿ ರಿಪೇರಿಗೆ ಕೊಂಡೋಗುವುದೆಂದು ಮಾತಾಯಿತು. ಹಾಗೆ ನಾವು ಸಾಗರದಿಂದ ೮ಕಿಮೀ ದೂರವಿರುವ ಶಿರವಂತೆಯ ಸುಂಕದೇವರಕೊಪ್ಪದಲ್ಲಿರುವ ಅಭಿಲಾಷ್ ಮನೆ ತಲಪಿದೆವು. ಅವರ ಮನೆಯ ಬ್ಯಾಣದಲ್ಲಿ ಕೂತು ಬುತ್ತಿಕಟ್ಟಿ ತಂದಿದ್ದ ಬಿಸಿ(ತಣ್ಣಗೆ)ಬೇಳೆ ಭಾತ್ ತಿಂದೆವು. ಮತ್ತೆ ಅಭಿಲಾಷ್ ಮನೆ ಸೇರಿದೆವು. ಅಲ್ಲಿ ಅಭಿಲಾಷ್ ತಂದೆ ರಾಜೀವ, ತಾಯಿ ಸುಧಾ, ತಮ್ಮ ಅವಿನಾಶ್ ಇದ್ದರು. ಪಟ್ಟಾಂಗ ಹೊಡೆಯುತ್ತ ಕೂತೆವು. ಹೊರಗೆ ಪಿಪಿರಿ ಮಳೆ, ಮನೆ ಒಳಗೆ ಬಿಸಿಬಿಸಿ ಕಡ್ಲೆಕಾಯಿಬೀಜ ಸುಲಿಯುತ್ತ, ಕೈಬಾಯಿಗೆ ಕೆಲಸ ಕೊಡುತ್ತ, ಸಾಮಾಜಿಕ, ರಾಜಕೀಯ ವಿಷಯ ಚರ್ಚಿಸುತ್ತ ಸಮಯ ಕಳೆದೆವು.  ಮಳೆ ನಿಂತ ಬಳಿಕ ರಾಜೀವ ಅವರ ತೋಟ ನೋಡಲು ಹೋದೆವು. ಭತ್ತದ ಗದ್ದೆ, ಕಬ್ಬು, ಅಡಿಕೆ ತೋಟ ನೋಡಿ ಬಂದೆವು. ರಾಜೀವರು ಕತ್ತಿ ಸೊಂಟಕ್ಕೆ ಸಿಕ್ಕಿಸುತ್ತ ನಮ್ಮೊಡನೆ ಬಂದು, ಹುಲ್ಲು ಹೆರೆಯಲು ಕೂತರು. ತೋಟ, ಗದ್ದೆ ಕೆಲಸ ಎಲ್ಲವನ್ನೂ ಅವರೇ ಸ್ವತಃ ಮಾಡುವುದಂತೆ. ಅವರ ಶ್ರಮದಾಯಕ ಜೀವನಗಾಥೆ ಕೇಳಿ ಖುಷಿ ಪಟ್ಟೆವು. ಅವರೂ ಬಹಳ ಅತ್ಮೀಯತೆಯಿಂದ ಎಲೆ ಅಡಿಕೆ ಹಾಕಿಕೊಳ್ಳುತ್ತ, ವಿನೋದವಾಗಿ ಮಾತಾಡುತ್ತ, (ನೋಡಿ ನನಗೆ ಇರುವುದೊಂದೇ ದುರಭ್ಯಾಸ, ಎಲೆ ಅಡಿಕೆ ಹಾಕಿಕೊಳ್ಳುವುದು, ಈ ದುರಭ್ಯಾಸವನ್ನು ಪ್ರಧಾನಿ ಮುಂದೆಯೂ ಹಾಕಿಕೊಳ್ಳಬಹುದು. ಅದೇ ಧೂಮಪಾನವಾದರೆ ಸಾಧ್ಯವಿಲ್ಲ ನೋಡಿ) ನಮ್ಮ ಸಂಕೋಚವನ್ನು ನಿವಾರಿಸಿದರು. ನಾವು ಅಲ್ಲಿ ನಮ್ಮದೇ ಮನೆಯೇನೋ ಎಂಬಂತೆ ೩ ಗಂಟೆಗಳ ಕಾಲ ಕಳೆದೆವು. ಚಹಾ ತಯಾರಾದಾಗ ಸರಿಯಾಗಿ ನಾಗೇಶ ಗಾಡಿ ರಿಪೇರಿ ಮಾಡಿಸಿಕೊಂಡು ಬಂದರು. ಕ್ಲಚ್ ಕಿಟ್ ಹೊಸದಾಗಿ ಹಾಕಿಸಿದರಂತೆ. ಸದ್ಯ, ಭಾನುವಾರವಾದರೂ ಅಂಗಡಿ ಬಾಗಿಲು ತೆರೆದು ಕ್ಲಚ್ ಕಿಟ್ (ಯಾರ ಗಾಡಿಗೋ ತಂದು ಇಟ್ಟದ್ದು ಇತ್ತಂತೆ. ಸಾವಿರ ರೂಪಾಯಿ ಜಾಸ್ತಿ ಪಡೆದರೂ) ಕೊಟ್ಟು ಉಪಕರಿಸಿದರು.

    

ಮನೆಯವರ ಜೊತೆ ಪಟ ತೆಗೆಸಿಕೊಂಡು ಅಲ್ಲಿಂದ ೫.೩೦ ಗಂಟೆಗೆ ಹೊರಟೆವು.  ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾತಿದೆ. ಹಾಗೆಯೇ ತಿಳಿದುಕೊಂಡು ಸಮಾಧಾನ ಪಟ್ಟುಕೊಳ್ಳಬೇಕು. ವ್ಯಾನ್ ಬೆಳಗ್ಗೆಯೇ ಹಾಳಾದದ್ದು ಒಳ್ಳೆಯದಾಯಿತು. ರಾತ್ರಿ ವೇಳೆ ಪ್ರಯಾಣದಲ್ಲಿ ನಡು ನಿರ್ಜನ ರಸ್ತೆಯಲ್ಲಿ ಹಾಳಾಗಿದ್ದರೆ ಪಡಿಪಾಟಲು ಪಡಬೇಕಾಗಿತ್ತು. ಹಾಗಾಗಲಿಲ್ಲ ಎಂದು ತೃಪ್ತಿಪಟ್ಟುಕೊಳ್ಳಬೇಕು.

   ನನ್ನ ಪೂಜೆ ನೋಡಿ ಹೋಗಲು ನಿಮಗೆ ಸಮಯವಿಲ್ಲ ಅಲ್ಲವೆ? ಮಾಡುತ್ತೇನೆ ನಿಮಗೆ ಸಮಯ ಎಂದು ರೇಣುಕಾಂಬೆ ಮಾಡಿದ್ದಿರಬಹುದೆ ಎಂಬ ಸಂಶಯ ಕೆಲವರಿಗೆ ಬಂತು! ಹೌದೌದು ಎಂದು ಕೆಲವರು ಅಂದರು. ಪೂಜೆ ನೋಡಲಾಗದಿದ್ದರೂ ರೇಣುಕಾಂಬೆಯಯ ದರ್ಶನ ಮಾಡಿದ್ದೇವಲ್ಲ, ಅದಕ್ಕೆ ಗಾಡಿ ಕೆಟ್ಟರೂ ಭಾನುವಾರವಾದರೂ ಗಾಡಿ ರಿಪೇರಿ ಆಯಿತು, ನಮಗೆ ಕಾಲ ಕಳೆಯಲು ಸಹೃದಯರ ಮನೆ ಸಿಕ್ಕಿತು ಎಂದು ಭಾವಿಸಿದೆವು.  

ಶಿವಮೊಗ್ಗದಲ್ಲಿ ಮಸಾಲೆ ದೋಸೆ ಕಾಫಿ ಕುಡಿದು, ಶಿವಮೊಗ್ಗ ಬೀದಿಯನ್ನು ಅರ್ಧ ಗಂಟೆ ಅಳೆದೆವು! ಬೇಗ ಹೋದರೆ ಮೈಸೂರು ಒಂದು ಗಂಟೆಯ ರಾತ್ರಿಯಲ್ಲಿ ತಲಪಬಹುದು, ಮನೆಗೆ ತೆರಳುವುದು ಕಷ್ಟ ಎಂದು ಸಮಯ ನೂಕಿದೆವು.

    ಈ ಪ್ರವಾಸದ ಅನಿಸಿಕೆ ಬಗ್ಗೆ ಕೆಲವರು ತಮ್ಮ ಅನಿಸಿಕೆಯನ್ನು ವ್ಯಾನಿನಲ್ಲಿ ವ್ಯಕ್ತಪಡಿಸಿದರು. ಈ ಪಯಣ ಚೆನ್ನಾಗಿ ಆಯಿತು. ತುಂಬ ಖುಷಿಪಟ್ಟೆವು ಎಂದು ಅಭಿಪ್ರಾಯ ಮಂಡಿಸಿದರು. ೨೫ರಂದು ಬೆಳಗ್ಗೆ ೪.೩೦ ಗಂಟೆಗೆ ಮೈಸೂರು ಮನೆ ಸೇರಿದೆವು. ನಮ್ಮ ಚಾಲಕ, ಕನಕ ಟ್ರಾವೆಲ್ಸ್ ಗಾಡಿಯ ನಾಗೇಶ ೩೩ರ ಉತ್ಸಾಹಿ ಯುವಕ.  ತನ್ನ ೧೩ನೇ ವಯಸ್ಸಿನಲ್ಲಿ ಅಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿ, ಮುಂದೆ ವಾಹನ ಚಾಲನೆ ಕಲಿತು ಈಗ ದೊಡ್ಡ ಗಾಡಿಯನ್ನೆ ಚಾಲನೆ ಮಾಡಿಕೊಂಡು ದೂರದ (ಮುಂಬೈ) ಊರುಗಳಿಗೂ ಲೀಲಾಜಾಲವಾಗಿ ಹೋಗಿ ಬರುವಷ್ಟಾಗಿದ್ದಾರಂತೆ.

  ಈ ಪಯಣದ ಯೋಜನೆಯನ್ನು (ತಲಾ ರೂ. ೨೫೦೦) ಅಚ್ಚುಕಟ್ಟಾಗಿ ನಿರ್ವಹಿಸಿದ ಗೆಳತಿ ಸರೋಜಾ ಶೇಖರ್, ಹಾಗೂ ಅವರಿಗೆ ಸಾಥ್ ನೀಡಿದ ಅರ್ಜುನ್, ಅಭಿಲಾಷ್ ಎಂಬ ಉತ್ಸಾಹಿ ತರುಣರಿಗೆ ನಮ್ಮ ಸಹಪಯಣಿಗರೆಲ್ಲರ ಪರವಾಗಿ ಧನ್ಯವಾದ.   

 

 

 

 

6 ಕಾಮೆಂಟ್‌ಗಳು:

  1. ಚಾರಣದ ಸಮಗ್ರ ಮಾಹಿತಿ ಚೆನ್ನಾಗೀ ಮೂಡಿ ಬಂದಿದೆ. ನಾನೂ ಈ ಚಾರಣದಲ್ಲಿ ಭಾಗವಹಿಸಿದ್ದರೂ, 'ಬುರುಡೆ ಫಾಲ್ಸ್' ನ ಹೆಸರಿನ ಹಿನ್ನೆಲೆ ಈ ಬರಹ ಓದಿದ ಮೇಲೆ ಗೊತ್ತಾಯಿತು!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದ. ಬುರುಡೆ ಎಂಬ ಹೆಸರು ಬರಲು ಕಾರಣವೇನು ಎಂಬ ಕುತೂಹಲ ಇತ್ತು. ಅದನ್ನು ಪರಿಹರಿಸಿದರು!

      ಅಳಿಸಿ