ಬುಧವಾರ, ಸೆಪ್ಟೆಂಬರ್ 22, 2021

ಶಿವಮೊಗ್ಗಜಿಲ್ಲೆಯಲ್ಲೆರಡು ದಿನ ಚಾರಣ

 ಶಿವಮೊಗ್ಗ ಜಿಲ್ಲೆಯಲ್ಲಿರುವ ಕೆಲವು ಪ್ರವಾಸೀತಾಣಗಳಿಗೆ ಹೋಗುವ ಕಾರ್ಯಕ್ರಮದ ವಿವರ ತಿಳಿದಾಗ, ಅದರಲ್ಲಿ ಕುಪ್ಪಳ್ಳಿ ಸೇರಿರುವುದು ಕಂಡಾಗ, ಮನ ಅರಳಿತು. ಅಲ್ಲಿಗೆ ಹೋಗಬೇಕು ಎಂದು ಎಷ್ಟೋ ಸಮಯದಿಂದ ಮನದಲ್ಲೇ ಬಯಸುತ್ತಿದ್ದೆ. ಅದೀಗ ನೆರವೇರಿತು. 

   ತಾರೀಕು ೧೭-೯-೨೦೨೧ರಂದು ರಾತ್ರೆ ೧೦.೨೦ಕ್ಕೆ ನಾವು ೫೨ ಮಂದಿ ಕ.ರಾ.ರ. ಸಾ.ನಿ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಹೊರಟೆವು. ಯಾರ್ಯಾರು ತಿಂಡಿ ತಂದಿದ್ದೀರೋ ಹೊರ ತೆಗೆಯಿರಿ ಎಂಬ ಸೂಚನೆ ಬಂತು. ಮೊದಲಿಗೆ ರವಿ ಬಾಹುಸಾರ್, ತುಪ್ಪದಲ್ಲಿ ಮಾಡಿದ ಕಜ್ಜಾಯ ಎಂದು ಹಂಚಿದರು. ಕಜ್ಜಾಯ ನನಗಿಷ್ಟವೇ. ಆದರೆ ರಾತ್ರಿ ಅವೇಳೆಯಲ್ಲಿ ತಿನ್ನುವ ಮನಸ್ಸಾಗಲಿಲ್ಲ. ಜಿಹ್ವಾಚಪಲವನ್ನು ಆ ಸಮಯದಲ್ಲಿ ನಿಗ್ರಹಿಸಲು ಸಾಧ್ಯವಾಯಿತಲ್ಲ ಎಂದು ನನ್ನ ಬೆನ್ನನ್ನು ತಟ್ಟಿಕೊಂಡೆ! ಕೋಡುಬಳೆ, ಚಕ್ಕುಲಿ ಒಂದರನಂತರ ಒಂದು ಸರಬರಾಜು ಆಗುತ್ತಲೇ ಇತ್ತು. ನಮ್ಮ ಬಸ್ಸಿನ ಸಾರಥಿ ಶ್ರೀನಿವಾಸ್. ಬಹಳ ಚೆನ್ನಾಗಿ ಬಸ್ ಚಾಲನೆ (ತಿಂದ ಕಜ್ಜಾಯ ಅಲುಗಾಡದಂತೆ) ಮಾಡಿದ್ದರು. ಹಿಂದಿನ ಆಸನಗಳಲ್ಲಿ ಕೂತ ನಮಗೆ (ಬಸ್ ರಸ್ತೆ ಡುಬ್ಬ ದಾಟುವಾಗಲೂ) ಯಾವ ಕಷ್ಟವೂ ಆಗಲಿಲ್ಲ. ಅರಸೀಕೆರೆಯಲ್ಲಿ ೧.೧೫ ಗಂಟೆಗೆ ಚಹಾ ಸೇವನೆಗೆ ಕಾಲು ಗಂಟೆ ನಿಲುಗಡೆ. ಹೆಚ್ಚಿನ ಮಂದಿಯೂ ಆ ರಾತ್ರೆ ಚಹಾ ಸೇವನೆ ಮಾಡಿದರು. ಅವರ ಅಂಥ ಸಾಮರ್ಥ್ಯಕ್ಕೆ ಒಂದು ಸಲಾಮು!


   ಸಂಸ್ಕೃತ ಭವನ

 ತಾರೀಕು ೧೮-೯-೨೧ರಂದು  ಬೆಳಗಿನ ಝಾವ ೪.೧೫ ಗಂಟೆಗೆ ನಾವು ಶಿವಮೊಗ್ಗದ ಸಂಸ್ಕೃತ ಭವನ ತಲಪಿದೆವು. ಅಲ್ಲಿ ಶಿವಮೊಗ್ಗ ತರುಣೋದಯ ಯೂಥ್ ಹಾಸ್ಟೆಲ್ ಘಟಕದ ವಿಜಯೇಂದ್ರ ನಮ್ಮನ್ನು ಸ್ವಾಗತಿಸಿ, ನಮಗೆ ವಿಶ್ರಾಂತಿಗೆ ಎರಡು ಕೊಠಡಿಯ ವ್ಯವಸ್ಥೆ ಮಾಡಿದ್ದರು. ಅಲ್ಲಿ ನಾವು ಕಾಲು ಚಾಚಿ ಒಂದೆರಡು ಗಂಟೆ ಕಳೆದೆವು. ಅಲ್ಲಿಯ್ ಮಹಡಿಯಿಂದ ವಿಸ್ತಾರವಾದ ತುಂಗಾ ನದಿಯನ್ನು ನೋಡಿದೆವು. 

 
ಬೆಳಗ್ಗೆ ೭ ಗಂಟೆಗೆ ಶಿವಮೊಗ್ಗದ ಯೂಥ್ ಹಾಸ್ಟೆಲ್ ವತಿಯಿಂದ ನಮಗೆ ಸ್ವಾಗತ ಕಾರ್ಯಕ್ರಮ. ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ. ಪುರುಷೋತ್ತಮ ಮುಖ್ಯ ಅತಿಥಿಗಳಾಗಿ ಚಾರಣದ ಮಹತ್ತನ್ನು ವಿವರಿಸಿದರು. ಅರ್ಧ ಗಂಟೆಯಲ್ಲಿ ಚಿಕ್ಕ ಚೊಕ್ಕ ಕಾರ್ಯಕ್ರಮ ಮುಗಿಸಿ, ಅಲ್ಲೇ ನಮಗೆ ತಿಂಡಿ ವ್ಯವಸ್ಥೆ ಇತ್ತು. ಉಪ್ಪಿಟ್ಟು, ಕೇಸರಿಭಾತ್, ಪೊಂಗಲ್ ಚಹಾ ಸೇವನೆಯಾಗಿ ನಾವು ಹೊರಟೆವು. ನಮ್ಮ ಜೊತೆ ತರುಣೋದಯ ಘಟಕದ ಗೌರೀಶರು ನಮಗೆ ದಾರಿತೋರಲು ಬಸ್ಸೇರಿದರು.

   ಜೇನುಕಲ್ಲಮ್ಮ ದೇವಾಲಯ

ಬೆಳಗ್ಗೆ ೮.೩೦ ಗಂಟೆಗೆ ನಾವು ಹೊರಟು ಹೊಸನಗರ ಕೋಡೂರು ದಾರಿಯಲ್ಲಿ ೫೫ ಕಿಮೀ ಸಾಗಿದೆವು. ಕೊಡೂರಿನಲ್ಲಿ ಬಸ್ಸಿಳಿದು ರಸ್ತೆ ದಾರಿಯಲ್ಲಿ ಮೂರು ಕಿಮೀ ಸಾಗಿ ಜೇನುಕಲ್ಲಮ್ಮ ದೇಗುಲದ ಬುಡ ತಲಪಿದೆವು. ಜೇನುಕಲ್ಲಮ್ಮ (ರೇಣುಕಾಂಬೆ) ದೇವಾಲಯ, ಅಮ್ಮನಘಟ್ಟ, ಕೋಡೂರು, ಹೊಸನಗರ. ಅಲ್ಲಿವರೆಗೂ ಬಸ್ ಬರುತ್ತದೆ. ನಾವು ಚಾರಣಕ್ಕೆ ಬಂದವರು, ಬಸ್ಸಿನಲ್ಲಿ ಬಂದರೆ ಶೋಭೆಯಲ್ಲ! ಎಂದು ನಡೆದೇ ಹೋದೆವು. ಬಸ್ ಚಾಲಕ ನಮ್ಮನ್ನಿಳಿಸಿ ಮುಂದೆ ಸಾಗಿ, ನಾವು ಅಲ್ಲಿ ತಲಪಿದಾಗ, ಬಸ್ ದೇವಾಲಯದ ಮೆಟ್ಟಲಿನ ಬುಡದಲ್ಲಿ ನಿಂತಿತ್ತು!    

     ಸುಮಾರು ೭೫ ಮೆಟ್ಟಲು ಹತ್ತಿ ದೇವಾಲಯಕ್ಕೆ ಹೋದೆವು. ದೊಡ್ಡದಾದ ಬಂಡೆಗಲ್ಲಿನ ಅಡಿಯಲ್ಲಿ ಉದ್ಭವವಾದ ಈ ಜೇನುಕಲ್ಲಮ್ಮ ದೇಗುಲ ಬಲು ಪ್ರಾಚೀನವಾದುದು. ಈ ದೇಗುಲಕ್ಕೆ ಯಾವುದೇ ಆಸ್ತಿ ಇಲ್ಲ. ಭಕ್ತಾದಿಗಳ ಸೇವೆಯಿಂದಲೇ ನಡೆದುಕೊಂಡು ಬರುತ್ತಿದೆ ಎಂದು ಅಲ್ಲಿಯ ಅರ್ಚಕರಾದ ಭಾಸ್ಕರ ಜೋಯಿಸ್   (೯೪೮೨೯೯೫೭೫೪) ಹೇಳಿದರು.  ಪೂಜಾಸಮಯ: ಬೆಳಗ್ಗೆ ೧೦ರಿಂದ  ಮಧ್ಯಾಹ್ನ ೧೨ ಗಂಟೆವರೆಗೆ. ಸೆಪ್ಟೆಂಬರ ತಿಂಗಳಿನಲ್ಲಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದಂತೆ. ನವರಾತ್ರಿಯಲ್ಲಿ ಎರಡೂ ಹೊತ್ತು ವಿಶೇಷ ಪೂಜೆ ನಡೆಯುತ್ತದಂತೆ.


   
    ದೇವಾಲಯದ ಮೇಲ್ಭಾಗದಲ್ಲಿ ಅರ್ಧಕಿಮೀ ಸಾಗಿ ಅಲ್ಲಿಯ ಪ್ರಕೃತಿಯ ರಮಣೀಯತೆಯನ್ನು ಕಣ್ಣು ತುಂಬಿಸಿಕೊಂಡೆವು.

   ಹೊಂಬುಜ ಮಠ

ಕೋಡೂರಿನಿಂದ ನಾವು ಸುಮಾರು ೧೫ಕಿಮೀ ಸಾಗಿ ಹುಂಚದಲ್ಲಿರುವ ಹೊಂಬುಜ ಮಠಕ್ಕೆ ಹೋದೆವು. ಜೈನರ ತೀರ್ಥಕ್ಷೇತ್ರ. ಅಲ್ಲಿ ಪದ್ಮಾವತಿ ದೇಗುಲದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಲಿತ್ತು. ಪಕ್ಕದಲ್ಲೇ ಪಾರ್ಶ್ವನಾಥ ತೀರ್ಥಂಕರ ಬಸದಿ ಇದೆ. ೨೩ನೆಯ ತೀರ್ಥಂಕರನಾದ ಪಾರ್ಶ್ವನಾಥನ ಬಸದಿಯಿದು. ಕಲ್ಲಿನಿಂದ ಕಟ್ಟಿರುವ ಈ ಮಂದಿರದಲ್ಲಿ ನವರಂಗ, ಸುಕನಾಸಿ ಮತ್ತು ಗರ್ಭಗೃಹವಿದೆ. ನವರಂಗದಲ್ಲಿ ಅಂಬಿಕಾದೇವಿಯ ವಿಗ್ರಹ ಇದೆ. ಬಲಭಾಗದಲ್ಲಿ ಕಪ್ಪುಶಿಲೆಯಿಂದ ನಿರ್ಮಿಸಿಸಿದ ಪಾರ್ಶ್ವನಾಥನ ಎರಡು ಮೂರ್ತಿಗಳಿವೆ.

 ಸ್ಥಳ ಪುರಾಣ: ಸಾಮಂತ ಅರಸರು ನೀಡಬೇಕಾದ ಕಪ್ಪವನ್ನು ನೀಡದೇ ಇದ್ದುದರಿಂದ ಸಾಕಾರರಾಯ ಕಪ್ಪ ವಸೂಲಿಗಾಗಿ ಹೊರಡುತ್ತಾನೆ. ಹಿಂತಿರುಗಿ ಬರುವಾಗ ಬೇಡರಜಾತಿಯ ಹೆಣ್ಣಿನ ಆಕರ್ಷಣೆಗೆ ಒಳಗಾಗುತ್ತಾನೆ. ಅವಳಿಗೆ ಹುಟ್ಟುವ ಮಗನಿಗೆ ಪಟ್ಟಕಟ್ಟುವ ವಾಗ್ದಾನವನ್ನು ಅವಳಪ್ಪನಿಗೆ ಕೊಟ್ಟು ಅವಳನ್ನು ಮದುವೆ ಆಗುತ್ತಾನೆ. ಇತ್ತ ಮಡದಿ ಶ್ರೀಯಲಾದೇವಿ ಹಾಗೂ ಮಗ ಜಿನದತ್ತರಾಯನಿಗೆ ಬೇರೆ ಅರಮನೆ ಕಟ್ಟಿಸಿಕೊಡುತ್ತಾನೆ. ತಾನು ಬೇಡಜಾತಿಯ ಹೆಣ್ಣಿನೊಂದಿಗೆ ಅರಮನೆಯಲ್ಲಿರುತ್ತಾನೆ. ತಂದೆಯ ಈ ವರ್ತನೆಯಿಂದ ಬೇಸರಗೊಂಡ ಜಿನದತ್ತ, ರಾಜಗುರು ಶ್ರೀ ಸಿದ್ಧಾಂತ ಕೀರ್ತಿಯವರ ಆದೇಶಾನುಸಾರ ಕುಲದೇವತೆ ಪದ್ಮಾವತಿಯ ಚಿನ್ನದ ಬಿಂಬವನ್ನು ಹಿಡಿದು, ಪಟ್ಟದ ಕುದುರೆಯೇರಿ ತಾಯಿ ಶ್ರೀಯಲಾದೇವಿಯೊಂದಿಗೆ ಸಾಗಿ ಕಾಡುಪ್ರದೇಶಕ್ಕೆ ಬರುತ್ತಾನೆ. ಅಲ್ಲಿ ಒಂದು ಲಕ್ಕಿಗಿಡದ ಮೇಲೆ ಬಿಂಬವನ್ನು ಇಟ್ಟು ವಿಶ್ರಾಂತಿ ಪಡೆಯುತ್ತಾರೆ. ಮಲಗಿದ ಜಿನದತ್ತನಿಗೆ ಕನಸಿನಲ್ಲಿ ದೇವಿ ಬಂದು, ನಾನಿಲ್ಲಿಂದ ಬರಲಾರೆ. ಇಲ್ಲೇ ನೆಲೆಸುವೆ. ಮುಂದೆ ಈ ಕಾಡೇ ಸುಂದರ ನಾಡಾಗುತ್ತದೆ. ಪುಣ್ಯಕ್ಷೇತ್ರವಾಗಿ ಹೆಸರು ಗಳಿಸುತ್ತದೆ, ನಿನ್ನ ಕೀರ್ತಿ ದಶದಿಕ್ಕುಗಳಿಗೆ ಪಸರಿಸುತ್ತದೆ ಎನ್ನುತ್ತಾಳೆ. ಅಲ್ಲಿ ವಾಸಿಸುತ್ತಿದ್ದ ಕಾಡು ಜನರೂ ಜಿನದತ್ತನೊಂದಿಗೆ ಕೈಜೋಡಿಸಿ, ದೇವಿಗೆ ಅಲ್ಲಿಯೇ ಮಂದಿರ ನಿರ್ಮಿಸುತ್ತಾರೆ. ಕಾಡು ನಾಡಾಗುತ್ತದೆ. ಕಾಲಕ್ರಮೆಣ ದೇವಿಯ ಮಂದಿರ ಪ್ರಸಿದ್ಧ ಕ್ಷೇತ್ರವಾಗುತ್ತದೆ.

   ಪಂಚಕೂಟ ಬಸದಿ

   ಪಲ್ಲವರಾಜನ ಪತ್ನಿ ಚಟ್ಟಲಾದೇವಿಯು ೧೦೭೭ರಲ್ಲಿ ಈ ದೊಡ್ಡದಾದ ಬಸದಿಯನ್ನು ಕಟ್ಟಿಸಿದಳು ಎಂಬ ಉಲ್ಲೇಖವಿದೆ. ಇಲ್ಲಿ ೫ ಗರ್ಭಗೃಹಗಳಿವೆ. ವೃಷಭನಾಥ, ಅಜಿತನಾಥ, ಶಾಂತಿನಾಥ, ಪಾರ್ಶ್ವನಾಥ ಮತ್ತು ಮಹಾವೀರ ತೀರ್ಥಂಕರರ ವಿಗ್ರಹಗಳಿವೆ. ಮುಖಮಂಟಪದಲ್ಲಿ ಸುಂದರವಾದ ಕುಸುರಿ ಕೆತ್ತನೆಗಳನ್ನು ನೋಡಬಹುದು. ನವರಂಗವು ಮೂರು ದ್ವಾರಗಳನ್ನು ಹೊಂದಿದೆ. ದ್ವಾರದ ಎದುರು ಯಕ್ಷ-ಯಕ್ಷಿಣಿ, ಜ್ವಾಲಾಮಾಲಿನಿಯರ ಭವ್ಯವಾದ ಮೂರ್ತಿಗಳಿವೆ.  ಬಸದಿಯ ಮುಂಭಾಗ ಏಕಶಿಲೆಯ ಮಾನಸ್ತಂಭವಿದೆ. ಅಲ್ಲೂ ಸಿಂಹ ಆನೆ ಇತ್ಯಾದಿ ಕೆತ್ತನೆಗಳಿವೆ. ಈ ಬಸದಿ ಪ್ರಾಚ್ಯ ಇಲಾಖೆಯ ಸುಪರ್ದಿಯಲ್ಲಿದೆ.



 ಹೊಂಬುಜ ಮಠದಲ್ಲಿಯೇ ಊಟ ಮಾಡಿ ಅಲ್ಲಿಂದ ಹೊರಟೆವು. 

  ಕುಮುದ್ವತಿ ಉಗಮಸ್ಥಾನ

 ಹೊಂಬುಜ ಮಠದಿಂದ ಅನತಿ ದೂರದಲ್ಲೇ ಭಿಲ್ಲೇಶ್ವರ ದೇಗುಲದ ಬಳಿ ಕುಮುದ್ವತಿ ನದಿಯ ಉಗಮಸ್ಥಾನವನ್ನು ನೋಡಲು ಹೋದೆವು. ಅಲ್ಲಿ ಕೊಳದ ಬಳಿ ಸ್ವಚ್ಛ ಜಲ ಧಾರೆಯಂತೆ ಹರಿಯುತ್ತಲಿತ್ತು. ಎಲ್ಲರೂ ಮನದಣಿಯೆ ನೀರು ಕುಡಿದೆವು.  

  ಅಚ್ಚಕನ್ಯೆ ಜಲಪಾತ

ಹುಂಚದಿಂದ ಸುಮಾರು ೮-೯ ಕಿಮೀ ದೂರದಲ್ಲಿರುವ ತೀರ್ಥಹಳ್ಳಿ ತಾಲೂಕಿನ ಅರಳಸುರುಳಿಯಲ್ಲಿರುವ ಅಚ್ಚಕನ್ಯೆ ಜಲಪಾತಕ್ಕೆ ಹೋದೆವು. ಇದನ್ನು ಅಕ್ಕತಂಗಿಯರ ಗುಂಡಿ ಎಂದೂ ಕರೆಯುತ್ತಾರೆ. ಇಲ್ಲಿ ಜಲಧಾರೆ ಧುಮ್ಮುಕ್ಕಿ ಹರಿಯುತ್ತಲಿತ್ತು. ನೀರು ಕಂಡದ್ದೇ ಹೆಚ್ಚಿನವರೂ ಹರ್ಷದಿಂದ ನೀರಿಗೆ ಇಳಿದು ಮನಸೋಇಚ್ಛೆ ನೀರಲ್ಲಿ ಆಡಿದರು. ನೀರಲ್ಲಿ ಜಳಕವಾಡುತ್ತಿರುವವರನ್ನು ನೋಡುತ್ತ, ಕಾಲು ನೀರಿಗೆ ಇಳಿಬಿಟ್ಟು ಕುಳಿತೆ. ಶರಾವತಿ ನದಿನೀರು ಹರಿದು ಬರುವ ಈ ಜಲಪಾತ ಸುಮಾರು ೧೫ ಅಡಿ ಎತ್ತರದಿಂದ ನೀರು ಧುಮುಕುತ್ತದೆ. ನೋಡಲು, ಆಡಲು ಸುರಕ್ಷಿತ ತಾಣ. ಆಗಸ್ಟ್ ತಿಂಗಳಿನಿಂದ  ಜನವರಿ ವರೆಗೆ ಇಲ್ಲಿಗೆ ಭೇಟಿಕೊಡಲು ಪ್ರಶಸ್ತ ಸಮಯ. ನೀರಿಗಿಳಿದವರು ಮನಸ್ಸಿಲ್ಲದ ಮನದಿಂದ ಅಂತೂ ನೀರಿನಿಂದ ಮೇಲೆದ್ದರು. ಸಂಜೆ ೩.೩೦ರಿಂದ ೫ರವರೆಗೆ ಒಂದೂವರೆ ಗಂಟೆ ಕಾಲ ಅಲ್ಲಿದ್ದೆವು. ಈ ಮಧ್ಯೆ ನಡೆಯುವಾಗ ಎಡವಿ ಬಿದ್ದು ಶೈಲಾ ಗಡ್ಡಕ್ಕೆ ಏಟು ಮಾಡಿಕೊಂಡರು.  ಹೆಚ್ಚೇನೂ ಪೆಟ್ಟಾಗಲಿಲ್ಲ. ದೊಪ್ಪನೆ ಬಿದ್ದ ಸದ್ದಿಗೆ ರವಿಯವರು ಮುಂದೆ ಹೋಗುತ್ತಿದ್ದವರು ತಿರುಗಿ ನೋಡಿದಾಗ ಬಿದ್ದದ್ದು ತಮ್ಮ ಪತ್ನಿಯೇ ಎಂದರಿವಾಯಿತಂತೆ!  ನಾನು ಅರಿವಿಲ್ಲದೆಯೇ ಒಂದು ಉಂಬುಳುವಿಗೆ ರಕ್ತದಾನ ಮಾಡಿ ಪುಣ್ಯ ಕಟ್ಟಿಕೊಂಡೆ!


    
ಅಂಬುತೀರ್ಥ-ಶರಾವತಿ ಉಗಮಸ್ಥಾನ

  ಶರಾವತಿ ನದಿಯ ಉಗಮಸ್ಥಾನ. ಇಲ್ಲಿ ರಾಮೇಶ್ವರ ದೇವಾಲಯವಿದೆ. ಹಳೆ ದೇವಾಲಯವನ್ನು ಪೂರ್ತಿ ನೆಲಸಮ ಮಾಡಿದ್ದಾರೆ. ಮುಂದೆ ಹೊಸದಾಗಿ ನಿರ್ಮಾಣವಾಗುತ್ತದಂತೆ.

ಸ್ಠಳ ಐತಿಹ್ಯ: ಶ್ರೀರಾಮನ ಶರದಿಂದ ಹುಟ್ಟಿದ ನದಿ ಶರಾವತಿ. ಶ್ರೀರಾಮ ವನವಾಸದಲ್ಲಿದ್ದಾಗ, ಸೀತೆಗೆ ಬಾಯಾರಿಕೆಯಾದಾಗ ಶ್ರೀರಾಮ ಅಂಬನ್ನು ನೆಲಕ್ಕೆ ಬಿಟ್ಟಾಗ ತೀರ್ಥೋದ್ಭವವಾಯಿತು. ಅದೇ ಮುಂದೆ ಅಂಬುತೀರ್ಥವೆಂದು ಪ್ರಸಿದ್ಧಿಗೆ ಬಂತು. ಅಂಬುತೀರ್ಥ ಬೇಸಗೆಯಲ್ಲೂ ಬತ್ತುವುದಿಲ್ಲ. ಅಷ್ಟೇ ಪ್ರಮಾಣದಲ್ಲಿ ನೀರು ಒಸರುತ್ತಿರುತ್ತದಂತೆ.


   ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ, ಜೋಗಕ್ಕೆ ಹೋಗುವ ಮಧ್ಯದಲ್ಲಿ ಸಣ್ಣ ಸಣ್ಣ ಉಪನದಿಗಳು ಸೇರಿ ದೊಡ್ಡ ನದಿಯಾಗಿ ರೂಪುಗೊಂಡಿದೆ. ಅಂಬುತೀರ್ಥದಲ್ಲಿ ಸಣ್ಣಗೆ ಒಸರುವ ಝರಿ ಸಮೀಪದ ಕಲ್ಯಾಣಿಗೆ ಸೇರಿ, ಅಲ್ಲಿಂದ ಮುಂದೆ ಹೊಸನಗರದ ಮೂಲಕ ಹರಿದು ಜೋಗ ತಲಪುತ್ತದೆ. ಅಂಬು ತೀರ್ಥ ನೋಡಿ ಅಲ್ಲಿಂದ ನಿರ್ಗಮಿಸಿದೆವು.

   ಚಹಾ ಕಾಫಿ ವಿರಾಮ

 ನಮ್ಮ ಮುಂದಿನ ಗುರಿ ಹೊಸನಗರದ ರಾಮಚಂದ್ರಾಪುರ ಮಠ. ದಾರಿಯಲ್ಲಿ ಚಹಾ ಸೇವನೆ ಆಗಲೇಬೇಕೆನಿಸಿತು. ಹಾಗೆ ಒಂದು ಬೇಕರಿಯಲ್ಲಿ ನಿಲ್ಲಿಸಿ ಚಹಾ ಕಾಫಿ ಸೇವನೆಯಾಯಿತು. ಆಗ ಯಾರಿಗೋ ಬಜ್ಜಿ ತಿನ್ನಲೇಬೇಕೆನಿಸಿತು. ಸನಿಹದಲ್ಲೇ ಇದ್ದ ಕರಾವಳಿ ಹೊಟೇಲಿಗೆ ನಾಲ್ಕು ಮಂದಿ ಹೋಗಿ ಮೆಣಸಿನ ಬಜ್ಜಿ ತಯಾರಿಸಲು ಹೇಳಿದರು. ಅದಕ್ಕಾಗಿ ಅರ್ಧ ಗಂಟೆ ಕಾಯಬೇಕಾಯಿತು. ಬಿಸಿಬಿಸಿ ಬಜ್ಜಿ ಬಸ್ಸಿನಲ್ಲಿ ಎಲ್ಲರಿಗೂ ಸರಬರಾಜು ಮಾಡಿದರು.  ಅರ್ಧ ಗಂಟೆ ಕಾದ ಬೇಸರ ಬಜ್ಜಿ ತಿಂದಾಗುವಾಗ ಬಜ್ಜಿಯೊಂದಿಗೆ ಮಾಯವಾಗಿ ಹೊಟ್ಟೆ ಸೇರಿತು! 

   ಶ್ರೀರಾಮಚಂದ್ರಾಪುರ ಮಠ

 ಸಂಜೆ ಏಳು ಗಂಟೆಗೆ ಹೊರಟು ಸುಮಾರು ೨೪ಕಿಮೀ ಸಾಗಿ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಎಂಟು ಗಂಟೆಗೆ ತಲಪಿದೆವು. ಊಟ ಸಿದ್ಧವಾಗಿತ್ತು. ಊಟ ಮಾಡಿ ವಸತಿ ಸಮುಚ್ಛಯದ  ಕೊಟಡಿಯಲ್ಲಿ (ಒಂದು ಕೊಟಡಿಯಲ್ಲಿ ೫ ಮಂದಿಯಂತೆ) ವಿಶ್ರಾಂತಿ ಪಡೆದೆವು.  ವಾಸಕ್ಕೆ ಕೋಣೆ ಅನುಕೂಲಕರವಾಗಿತ್ತು. (ವಸತಿಗೆ ಸಂಪರ್ಕಸಂಖ್ಯೆ ೯೪೪೯೫೯೫೨೩೩, ೯೪೪೯೫೯೫೨೨೬೪, ೦೮೧೮೫೨೫೬೦೫೦) ಇಲ್ಲಿ ಉಳಿದು ಸುತ್ತಮುತ್ತಲಿನ ಪ್ರವಾಸೀತಾಣಗಳಿಗೆ ಭೇಟಿಕೊಡಬಹುದು.


             ಚಂದ್ರಮೌಳೇಶ್ವರ ದೇವಾಲಯ

ತಾರೀಕು ೧೯-೯-೨೧ರಂದು ಬೆಳಗ್ಗೆ ೬.೩೦ ಗಂಟೆಗೆ ತಯಾರಾಗಿ ನಾವು ಮಠದ ಸುತ್ತಮುತ್ತ ಸುತ್ತಿದೆವು. ಮೊದಲಿಗೆ ಚಂದ್ರಮೌಳೇಶ್ವರ ದೇವಾಲಯಕ್ಕೆ ಹೋದೆವು. ಶರಾವತಿ ನದಿಯ ದಡದ ಬಳಿ ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ದೇವಾಲಯ. ಸುತ್ತಲೂ ನೀರು, ನೀರ ಮಧ್ಯೆ ದೇವಾಲಯ ಗಜಪುಷ್ಟಾಕೃತಿಯಲ್ಲಿದ್ದು,ಆಕರ್ಷಕವಾಗಿದೆ. ದೇವಾಲಯದ ಸುತ್ತ ಕೆಲಸ ಇನ್ನೂ ಪ್ರಗತಿಯ ಹಂತದಲ್ಲಿದೆ.

    ಗೋಶಾಲೆ- ಗೋವರ್ಧನಗಿರಿ ದೇಗುಲ

ಬಹಳ ದೊಡ್ಡ ಮಟ್ಟದಲ್ಲಿ ಇಲ್ಲಿ ಗೋವುಗಳನ್ನು ಸಾಕುತ್ತಿದ್ದಾರೆ. ನೂರಾರು ಗೋವುಗಳು ಪುಷ್ಟಿಯಿಂದ ಇದ್ದದ್ದು ನೋಡಿ ಸಂತೋಷಪಟ್ಟೆವು. ಅಲ್ಲಿ ಗೋವರ್ಧನಗಿರಿ ದೇವಾಲಯವೂ ಇದೆ. ಅದರ ಸುತ್ತ ಗೋಶಾಲೆ. ೧೦೮ ಮೆಟ್ಟಲು ಹತ್ತಿ ದೇವಾಲಯ ತಲಪಬಹುದು. ಈ ಮೆಟ್ಟಲು ಕಟ್ಟಿದ ಉದ್ದೇಶ ವಿಷ್ಣುಸಹಸ್ರನಾಮ ಹೇಳುತ್ತ ಹತ್ತಬೇಕು ಎಂಬುದಾಗಿದೆಯಂತೆ.



    ಕವಲೇದುರ್ಗ

 ೮.೩೦ಗೆ ಮಠದಲ್ಲಿ ಚಿತ್ರಾನ್ನ, ಅವಲಕ್ಕಿ, ಕಷಾಯ ಸೇವನೆಯಾಗಿ ೯.೧೫ಕ್ಕೆ ಅಲ್ಲಿಂದ ಹೊರಟೆವು. ಹೊಸನಗರ- ನಗರ- ಕವಲೆದುರ್ಗ ಸುಮಾರು ೪೧ಕಿಮೀ.   ೧೦.೩೦ಗೆ ನಾವು ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ತಲಪಿದೆವು. ಅಲ್ಲಿ ವಾಹನ ಶುಲ್ಕ ಪಾವತಿಸಿ, ನಮ್ಮ ಚೀಲ ತಪಾಸಣೆ ಮಾಡಿದರು. ಮುಂದೆ ದುರ್ಗದೆಡೆಗೆ ನಡೆದು ಹೊರಟೆವು.

   ಅಲ್ಲಿಂದ ಸುಮಾರು ೨ಕಿಮೀ ಕ್ರಮಿಸುವಾಗ, ದಾರಿ ಮಧ್ಯೆ ಸಿಗುವ ಭತ್ತದ ಗದ್ದೆಯ ಮಧ್ಯೆ ನಡೆಯುವ ನೋಟವೇ ಬಲು ಚಂದ. ಅದರ ಚೆಲುವಿಗೆ ಮನಸೋತು ಅಲ್ಲೆ ಕೂತುಬಿಡುವ ಮನಸ್ಸಾಯಿತು. ಹಸುರಾಗಿ ಇರುವ ಭತ್ತದ ಸಸಿ ನೋಡುತ್ತ ನಡೆಯುವ ಖುಷಿ ಅನುಭವಿಸಿದೆವು.




 ಮುಂದೆ ಸಾಗಿದಾಗ ಕವಲೇದುರ್ಗದ ದಿಡ್ಡಿ ಬಾಗಿಲು ಎದುರಾಯಿತು. ಇದು ಮೂರು ಸುತ್ತಿನ ಕೋಟೆ. ಮುಂದೆ ನಡೆದಾಗ ಒಂದು ಬದಿಯ ಗೋಡೆ ಕುಸಿದು ಬಿದ್ದುದನ್ನು ನೋಡಿದೆವು. ಗೋಡೆಮೇಲೆಲ್ಲ ಗಿಡಗಳು ಬೆಳೆಯುವುದನ್ನು ನೋಡಿದಾಗ ಈ ಕೋಟೆಯ ಅವನತಿಗೆ ಇನ್ನು ಹೆಚ್ಚುಸಮಯವಿಲ್ಲ ಎನಿಸಿತು. ಪ್ರಾಚ್ಯ ಇಲಾಖೆಯ ಸುಪರ್ದಿಯಲ್ಲಿರುವ ಈ ಕೋಟೆಯ ಸಂರಕ್ಷಣೆ ಯಾವಾಗ ಆದೀತೋ? ಎಂದು ಮಾತಾಡಿಕೊಂಡೆವು.  ಕೋಟೆಯ ಎರಡು ಸುತ್ತು ದಾಟಿ ಬಂದಾಗ ಅಲ್ಲಿ ಶಿಖರೇಶ್ವರ ದೇವಾಲಯ ಕಂಡಿತು. ಕಲ್ಲಿನ ನೀರಿನ ತೊಟ್ಟಿ, ಕೆರೆಗಳು ನೋಡಿದೆವು. ಬಲಭಾಗದಲ್ಲಿ ಬಂಡೆಹತ್ತಿದಾಗ ಅಲ್ಲಿ ಲಕ್ಷ್ಮೀನಾರಾಯಣ ದೇಗುಲ ಇದೆ. ಅದಂತೂ ಪಾಳುಬಿದ್ದಿದೆ. ಅಲ್ಲಿ ತುಸುಹೊತ್ತು ವಿಶ್ರಮಿಸಿದೆವು. ಯುವ ಬ್ರಿಗೇಡಿನ ಯುವಕರು ಅಲ್ಲಿದ್ದರು. ಸೋಮಶೇಖರ ಅವರಿಂದ ಮಂಕುತಿಮ್ಮನ ಕಗ್ಗ ಹೇಳಿಸಿ, ಅದನ್ನು ದಾಖಲುಮಾಡಿಕೊಂಡರು. ೭೮ ವರ್ಷದ ತಾತನನ್ನು ಕಂಡು ಆ ಯುವಕರಿಗೆ ಬಲು ಖುಷಿ. ಆ ಮೊಮ್ಮಕ್ಕಳನ್ನುನೋಡಿ ತಾತನಿಗೂ ಹುರುಪು ಬಂದು ೨೮ವಯಸ್ಸಿನವರಂತೆ ಸಂಭ್ರಮಿಸಿದರು. ತಾತನ ಕೈಹಿಡಿದು ಬೆಟ್ಟ ಇಳಿಸಿದರವರು.



  ಬೆಟ್ಟದ ಮೆಲಿಂದ ಸುತ್ತಲಿನ ಅರಣ್ಯವನ್ನು ನೋಡುವುದೇ ಆನಂದದಾಯಕ. ಹಸುರಾಗಿರುವ ಮರಗಳು, ಒಂದೆಡೆ  ಮಾತ್ರ ಹಸುರಿನ ಬಣ್ಣದಲ್ಲಿ ಬದಲಾವಣೆ ಅದು ಅಕೇಶಿಯಾ ಮರ. ಹೊಸನಗರ-ನಗರ-ತೀರ್ಥಹಳ್ಳಿ ಮಾರ್ಗದಲ್ಲಿ ಸಂಚರಿದಾಗ ಅಕೇಶಿಯಾ ಮರಗಳ ಅರಣ್ಯ ಸಾಲು ಕಂಡಿತು. ಅಕೇಶಿಯಾ ಮರಗಳು ಪರಿಸರಕ್ಕೆ ಹಾಳು ಎಂದು ಹೇಳುತ್ತಾರೆ. ಅವನ್ನೆಲ್ಲ ಕಡಿದು ತೆಗೆದು ಬೇರೆ ಮರ ನೆಟ್ಟರೆ ಒಳ್ಳೆಯದೇನೊ.




ಮುಂದೆ ಕೋಟೆಯ ಮೂರನೇ ಸುತ್ತಿಗೆ ನಡೆದೆವು. ಅಲ್ಲಿ ಅರಮನೆ ಇದ್ದ ಸ್ಥಳದಲ್ಲಿ ಕುರುಹಾಗಿ ಕಲ್ಲುಕಂಬಗಳೆಲ್ಲ ಧರಾಶಾಹಿಯಾಗಿದ್ದುವು. ನೀರಿನ ಕೊಳ ಚೆನ್ನಾಗಿತ್ತು.  ಮುಂದಕ್ಕೆ ಕೋಟೆಯ ಕೊನೆಯ ಹಂತಕ್ಕೆ  ಪ್ರವೇಶವಿಲ್ಲ. ಅಲ್ಲಿ ಗೋಡೆ ಕುಸಿದಿದೆಯಂತೆ. ಹಾಗಾಗಿ ಯಾರನ್ನೂ ಬಿಡುವುದಿಲ್ಲವಂತೆ. ಸ್ವಲ್ಪ ನಿರಾಸೆಯಾಯಿತು. ನಮಗೆ ಇಷ್ಟಾದರೂ ಕೋಟೆ ನೋಡಲು ಸಿಕ್ಕಿತಲ್ಲ ಎಂದು ತೃಪ್ತಿಪಟ್ಟೆವು. ಇನ್ನು ಮುಂದೆ ಬಹುಶಃ ಈ ಕೋಟೆ ನಶಿಸಿ ಹೋಗಿ ಚರಿತ್ರೆಯಲ್ಲಷ್ಟೇ ದಾಖಲಿರಬಹುದು್ ಎನಿಸಿತು  





       ಕೋಟೆಯ ಐತಿಹ್ಯ: ಕವಲೇದುರ್ಗ ಕಾವಲುದುರ್ಗ ಎಂಬುದರ ಅಪಭ್ರಂಶ. ಕವಲೇದುರ್ಗ ೯ನೇ ಶತಮಾನದಲ್ಲಿ (ಕ್ರಿಶ ೧೫೮೨-೧೬೨೯) ವೆಂಕಟಪ್ಪನಾಯಕರ ಕಾಲದಲ್ಲಿ ನಿರ್ಮಾಣಗೊಂಡಿತು. ಇಲ್ಲಿ ಒಂದು ಅರಮನೆ ಕಟ್ಟಿ ಅದನ್ನು ಅಗ್ರಹಾರವಾಗಿಸಿದ. ಮತ್ತಿನಮಠ ಎಂಬ ಶೃಂಗೇರಿಮಠದ ಉಪಮಠ, ಖಜಾನೆ, ಕಣಜ, ಗಜಶಾಲೆ, ಅಶ್ವಶಾಲೆ, ಏಳು ಕೆರೆಗಳನ್ನು ನಿರ್ಮಿಸಿದ.   ಇದು ಕೆಳದಿ ಸಂಸ್ಥಾನದ ನಾಲ್ಕನೆಯ ಹಾಗೂ ಕೊನೆಯ ರಾಜಧಾನಿಯಾಗಿತ್ತು.

    ಮಲ್ಲವರು ಮೊದಲು ಸಾಗರದ ಸಮಿಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ, ಇಕ್ಕೇರಿ, ಬಿದನೂರಿನಲ್ಲಿ(ನಗರ) ಕೊಟೆ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು. ಆಗ ಕವಲೇದುರ್ಗ, ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೇಗಾರರ ಸ್ವಾಧೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೆದುರ್ಗವನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂಬ ಹೆಸರಿಟ್ಟು ಆಳ್ವಿಕೆ ಮಾಡಿದರು. ಮಲ್ಲವ ವಂಶದಲ್ಲಿ ಪ್ರಖ್ಯಾತರಾದವರು, ಶಿವಪ್ಪನಾಯಕ, ರಾಣಿ ಚೆನ್ನಮ್ಮಾಜಿ ಮತ್ತು ರಾಣಿ ವೀರಮ್ಮಾಜಿ. ಮೊಘಲ್ ದೊರೆ ಔರಂಗಜೇಬನೊಂದಿಗೆ ಯುದ್ಧದಲ್ಲಿ ಗೆದ್ದ ಕೀರ್ತಿ ರಾಣಿ ಚೆನ್ನಮ್ಮಾಜಿಯವರದು. ೧೮ನೇ ಶತಮಾನದಲ್ಲಿ ಮೈಸೂರು ರಾಜ ಹೈದರಾಲಿ ಹಾಗೂ ಟಿಪ್ಪುಸುಲ್ತಾನರ ದಾಳಿಗೆ ಕವಲೇದುರ್ಗ ಸಾಕಷ್ಟು ವಿನಾಶಗೊಂಡಿತು.

ಪ್ರವೇಶ ಸಮಯ: ವಾರದ ಏಳೂ ದಿನ ಬೆಳಗ್ಗೆ ೭ರಿಂದ ಸಂಜೆ ೪ರ ವರೆಗೆ

     ಕುಪ್ಪಳ್ಳಿ- ಕವಿಮನೆ

  ಕೋಟೆಯನ್ನು ನೋಡಿ ಬೆರಗುಪಡುತ್ತ, ಈಗಿನ ಸ್ಥಿತಿ ನೋಡಿ ಸಂಕಟಪಡುತ್ತಲೇ ಅಲ್ಲಿಂದ ನಿರ್ಗಮಿಸಿ ಕುಪ್ಪಳ್ಳಿಯೆಡೆಗೆ ಹೊರಟೆವು. ಸುಮಾರು ೩೬ಕಿಮೀ ಕ್ರಮಿಸಿ ಕುಪ್ಪಳ್ಳಿ ತಲಪಿದೆವು. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಜನಿಸಿ ಬೆಳೆದ ಮನೆಯನ್ನು ಈಗ ಸ್ಮಾರಕ ಮಾಡಿದ್ಡಾರೆ.  ಪ್ರವೇಶದರ: ರೂ. ೧೦.ಒಳಗೆ ಪಟ ತೆಗೆಯುವಂತಿಲ್ಲ. ೧೫೦ ವರ್ಷಗಳಷ್ಟು ಹಳೆಯದಾದ ಮನೆಯನ್ನು ೨೦೦೧ರಲ್ಲಿ ಪುನರ್ನಿಮಿಸಲಾಯಿತು. ಅಷ್ಟು ಹಳೆಯ ಮನೆಯಾದರೂ ಹೊಸಮನೆಯೇನೋ ಎಂಬಂತೆ ಫಳಫಳ ಹೊಳೆಯುತ್ತದೆ. ಬಹಳ ಚೆನ್ನಾಗಿ ಮನೆ ನಿರ್ವಹಣೆ ಮಾಡುತ್ತಿದ್ದಾರೆ. ಸುಂದರವಾದ ತೊಟ್ಟಿಮನೆ. ನೆಲಕ್ಕೆ ಕೆಂಪುಬಣ್ಣದ ಗಾರೆ ಇರುವ ಮೂರಂತಸ್ತಿನ ಮನೆ. ಮನೆಯೊಳಗೆ ಒಪ್ಪವಾಗಿ ಹಳೆಪಾತ್ರೆ, ಪತ್ತಾಯಗಳು, ಕುವೆಂಪು ಬಳಸುತ್ತಿದ್ದ ವಸ್ತುಗಳು, ಅವರಿಗೆ ಸಿಕ್ಕಿದ ಪಾರಿತೋಷಿಕ, ಕುಟುಂಬದ ಭಾವಚಿತ್ರಗಳು, ವಂಶವೃಕ್ಷ, ಪುಸ್ತಕಗಳು ಇತ್ಯಾದಿ ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದಾರೆ. ಎಲ್ಲವನ್ನೂ ನೋಡಿ ಸಂತೋಷಿಸುತ್ತ ಹೊರಬಂದೆವು. ಕೃಷಿ ಸಲಕರಣೆಗಳಿರುವ ಸಂಗ್ರಹಾಲಯ ನೋಡಿದೆವು.



  ಮನೆ ಎದುರು ಗುಂಪಿನ ಭಾವಚಿತ್ರ ತೆಗೆಸಿಕೊಂಡೆವು. 

  ಅನುತ್ತರ ಉಪಾಹಾರ ಮಂದಿರ

  ಅಲ್ಲಿ ಇರುವ ಏಕೈಕ ಹೊಟೇಲಿನಲ್ಲಿ ಅಕ್ಕಿ ರೊಟ್ಟಿ, ಕೆಸವಿನ ಚಟ್ನಿ, ಅನ್ನ ಸಾರು, ಪಾಯಸ, ಮೆಣಸಿನ ಬಜ್ಜಿ ಊಟ ಮಾಡಿದೆವು. ಗುಂಪಿನೊಂದಿಗೆ ಹೋಗುವುದಾದರೆ ಊಟಕ್ಕೆ ಮೊದಲೇ ಸಂಪರ್ಕಿಸಿ ತಿಳಿಸಿ: ಅವರ ಚರವಾಣಿ ಸಂಖ್ಯೆ: ಸುಧಾಕರ, ೯೪೪೯೬೯೮೮೦೯   

 ಕವಿಶೈಲ

 ಕವಿಶೈಲ ಕುವೆಂಪು ಅವರ ಸಮಾಧಿ ಇರುವ ಸ್ಥಳ. ಅಲ್ಲಿಗೆ ಹೋಗಲು ಕವಿಮನೆಯ ಮಗ್ಗುಲಲ್ಲೇ ಮೆಟ್ಟಲು ಹತ್ತಿ ಹೋಗಬಹುದು.  ರಸ್ತೆ ಮೂಲಕವೂ ತೆರಳಬಹುದು. ನಾವು ನಾಲ್ಕು ಮಂದಿ ಮೆಟ್ಟಲು ಹತ್ತಿ ಹೋದೆವು. ದಾರಿಯಲ್ಲಿ ಅಲ್ಲಲ್ಲಿ ಬೃಹತ್ ಕಲ್ಲುಕಂಬಗಳನ್ನು ಹಾಕಿದ್ದಾರೆ. ಅದರ ವಿನ್ಯಾಸ ಕೆ.ಟಿ. ಶಿವಪ್ರಸಾದರದು ಬಂಡೆಗಲ್ಲು ಕೊಡುಗೆ: ಕಾಫಿಡೇ ಮಾಲೀಕ ಸಿದ್ದಾರ್ಥ. ಬಸ್ ಮೇಲೆ ತಲಪುವ ಮೊದಲೇ ನಾವು ಅಲ್ಲಿ ತಲಪಿದ್ದೆವು!



   ಕುವೆಂಪು ಅವರ ಸಮಾಧಿ, ಕುವೆಂಪು ಕೂತು ಧ್ಯಾನ ಮಾಡುತ್ತಿದ್ದ, ಕಾದಂಬರಿ ಕವಿತೆ ಬರೆಯುತ್ತಿದ್ದ  ಬಂಡೆಗಲ್ಲು ನೋಡಿದೆವು. ಆ ಕಲ್ಲಿನಮೇಲೆ ಬಿ.ಎಂ.ಶ್ರೀ, ಟಿ.ಎಸ್. ವೆಂ, ಕುವೆಂಪು, ಪೂ.ಚಂ.ತೇ ಹೆಸರು ಇದೆ. ಕುವೆಂಪು ಗುರುಗಳಾದ ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ ಅವರು ಅಲ್ಲಿಗೆ ೧೬.೫.೩೬ ರಲ್ಲಿ ಭೇಟಿ ನೀಡಿದ್ದರಂತೆ. ಆಗ ಕುವೆಂಪು ಅವರೇ ಹೆಸರನ್ನು ಕೆತ್ತಿದ್ದರಂತೆ. ಕೆಳಗಿನ ಬಂಡೆಮೇಲೆ ಅಖಿಲಾ, ಮಂಗಳ ಎಂದು ತಾವು ಬಂಡೆಕೆತ್ತುವುದರಲ್ಲಿ ಕಡಿಮೆ ಇಲ್ಲ ಎಂದೇನೋ ತಮ್ಮ ಹೆಸರನ್ನು ಬಹಳ ಚೆನ್ನಾಗಿ ಕೆತ್ತಿರುವುದು ಕಂಡಿತು!

     ಕವಿಶೈಲದ ಸ್ಥಳಕ್ಕೆ ಹೊಂದಿಕೊಂಡಂತೆ ೩೨೦೦ ಎಕರೆ ಅರಣ್ಯವನ್ನು ಕುವೆಂಪು ಸ್ಮಾರಕ ಅರಣ್ಯವೆಂದು ಸರ್ಕಾರ ಘೋಷಿಸಿದೆ. ಅರಣ್ಯ ಇಲಾಖೆ ಈ ಅರಣ್ಯವನ್ನು ಸಂರಕ್ಷಿಸುತ್ತಿದೆ.

   ಸುತ್ತಲೂ ಹಸಿರು ವನರಾಶಿಗಳು, ನಿಶ್ಶಬ್ಧದ ವಾತಾವರಣದ ಈ ಸ್ಥಳ ಬಹಳ ಚೆನ್ನಾಗಿದೆ. ಏನಾದರೂ ಕವನ ಬರೆಯಲು ಸ್ಫೂರ್ತಿ ಸಿಕ್ಕಿತೇನೋ ಎಂಬ  ಆಕಾಂಕ್ಷೆಯಿಂದ ಕುವೆಂಪು ಕೂತ ಬಂಡೆಮೇಲೆ ನಾನೂ ಕುಳಿತೆ!

    ಸಾಮೂಹಿಕವಾಗಿ ಅಲ್ಲಿ ನಾಡಗೀತೆ ವಾಚನ ಮಾಡಿದೆವು. ಒಂದಿಬ್ಬರು ಕುವೆಂಪು ಸಾಹಿತ್ಯದ ಬಗ್ಗೆ ಅನಿಸಿಕೆ ಹಂಚಿಕೊಂಡರು.  


  ಪೂರ್ಣಚಂದ್ರ ತೇಜಸ್ವೀ ಸ್ಮಾರಕ

    ರಸ್ತೆಯ ಬದಿಯಲ್ಲೆ ಇರುವ ಪೂರ್ಣಚಂದ್ರ ತೇಜಸ್ವೀ ಅವರ ಸ್ಮಾರಕ ನೋಡಿದೆವು. ಅಲ್ಲಿ ಅವರ ಅಂತ್ಯಸಂಸ್ಕಾರ ಮಾಡಿರುವುದಂತೆ. ಅಲ್ಲಿ ಆರು ಬೃಹತ್ ಬಂಡೆಗಲ್ಲುಗಳನ್ನು ನಿಲ್ಲಿಸಿದ್ದಾರೆ. ತೇಜಸ್ವೀಯವರ ಪುಸ್ತಕಗಳಲ್ಲಿ ಬರುವ ಕೆಲವು ಸಾಲುಗಳನ್ನು ಸುತ್ತ ಗ್ರಾನೈಟ್ ಶಿಲೆಯಲ್ಲಿ ಹಾಕಿದ್ದಾರೆ.

   ಶತಮಾನೋತ್ಸವ ಭವನ ಹಾಗೂ ಕಲಾನಿಕೇತನ ನೋಡಲು ಸಾಧ್ಯವಾಗಲಿಲ್ಲ. ಅವು ಅಲ್ಲಿ ಇರುವ ಮಾಹಿತಿಯೂ ಯಾರಿಗೂ ತಿಳಿದಿರಲಿಲ್ಲ. ಅಂತರ್ಜಾಲದಲ್ಲಿ ನೋಡಿದಾಗ ತಿಳಿದುಬಂದ ವಿಷಯವಿದು. 

   ಅನುತ್ತರದಲ್ಲಿ ಗೋಳಿಬಜೆ, ಕಾಫಿ ಚಹಾ ಸೇವಿಸಿ ಅಲ್ಲಿಂದ ನಿರ್ಗಮಿಸಿದೆವು.

   ಮರಳಿ  ಶಿವಮೊಗ್ಗ

  ಕುಪ್ಪಳ್ಳಿಯಿಂದ ಶಿವಮೊಗ್ಗಕ್ಕೆ ೭೦ಕಿಮೀ. ಆರು ಗಂಟೆಗೆ ಬಸ್ ಹತ್ತಿ ಕೂತದ್ದೇ ಅಂತ್ಯಾಕ್ಷರೀ ನಡೆಯಿತು. ಎರಡು ತಂಡದವರೂ ಉತ್ಸಾಹಭರಿತರಾಗಿ ಪುಂಖಾನುಪುಂಖವಾಗಿ ಕನ್ನಡ ಚಿತ್ರಗೀತೆಗಳನ್ನು ಹಾಡಿದ್ದೂ ಹಾಡಿದ್ದೇ. ಅವರ ಹಾಡನ್ನು ಕೇಳುತ್ತ, ಹಾಡುವವರ ಹುರುಪನ್ನು ನೋಡುವುದೇ ಮಹದಾನಂದ. ೮ ಗಂಟೆಗೆ ಶಿವಮೊಗ್ಗ ತಲಪಿದಾಗಲೇ ಅನಿವಾರ್ಯವಾಗಿ ಅಂತ್ಯಾಕ್ಷರೀ ಮುಗಿಸಬೆಕಾಯಿತು! ಮಧ್ಯೆ ಮಧ್ಯೆ ರವಿ ಬಾಹುಸಾರ ಅವರ ಹಾಸ್ಯ ರಸಾಯನವೂ ಇತ್ತು. ಅವರಿದ್ದಲ್ಲಿ ನಗು ಕೂಡ ಸಾಂಕ್ರಾಮಿಕ. ನಾನು ಏನಿದ್ದರೂ ನಗು ಮಾಡುವುದಿಲ್ಲ ಎಂದು ಹಠದಿಂದ ಕೂರಲು ಯಾರಿಗೂ ಸಾಧ್ಯವಾಗಲಿಕ್ಕಿಲ್ಲ! ಕಲ್ಲನ್ನೂ ನಗಿಸಬಲ್ಲವರು ಎನ್ನಬಹುದು.  ವಿಪರ್ಯಾಸವೆಂದರೆ ಒಮ್ಮೊಮ್ಮೆ ಹಾಸ್ಯ ಮಾಡುವ ಸನ್ನಿವೇಷ ಇರದ ಸಂದರ್ಭದಲ್ಲೂ ಅವರ ಎಂದಿನ ಹಾಸ್ಯ ಮನೋಭಾವ ಆಭಾಸ ತರುವುದಿದೆ. ಅಂಥ ಸಂದರ್ಭದಲ್ಲಿ ಅವರ ಪತ್ನಿ ಅವರಿಗೆ ಕಡಿವಾಣ ಹಾಕಬೇಕಾಗುತ್ತದೆ!  

   ಸಂಸ್ಕೃತ ಭವನ- ಬೀಳ್ಕೊಡುಗೆ

    ನಾವು ಸಂಸ್ಕೃತ ಭವನಕ್ಕೆ ತಲಪಿದಾಗ, ಚಿನಕುರುಳಿ ಎಂಬ ಪದಕ್ಕೆ ಅನ್ವರ್ಥನಾಮವಾಗಿರುವ ವಿಜಯೇಂದ್ರ ಅಲ್ಲಿ ಭರ್ಜರಿ ಏರ್ಪಾಡು ಮಾಡಿದ್ದರು. ಶಿವಮೊಗ್ಗದ ತರುಣೋದಯ ಘಟಕದ ವತಿಯಿಂದ ನಮಗೆ ಬೀಳ್ಕೊಡುಗೆ ಸಮಾರಂಭ. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್. ದತ್ತಾತ್ರಿ, ತರುಣೋದಯ ಘಟಕದ ಅಧ್ಯಕ್ಷ ವಾಗೀಶ್ ಹೆಗಡೆ, ಗಂಗೋತ್ರಿ ಘಟಕದ ಕಾರ್ಯದರ್ಶಿ ಪರಶಿವಮೂರ್ತಿ ಉಪಸ್ಥಿತರಿದ್ದರು. ಒಂದು ಗಂಟೆ ನಡೆದ ಸಮಾರಂಭದಲ್ಲಿ ಯೂಥ್ ಹಾಸ್ಟೆಲ್ ಏರ್ಪಡಿಸಿದ್ದ ರಾಷ್ಟ್ರಮಟ್ಟದ ನೃತ್ಯ ಸ್ಫರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಪಡೆದ ತರುಣೋದಯ ಘಟಕದ ಸದಸ್ಯರಿಗೆ ನೆನಪಿನ ಕಾಣಿಕೆ ಕೊಟ್ಟು ಅಭಿನಂದಿಸಿದರು. ಎರಡು ದಿನದ ನಮ್ಮ ಪ್ರವಾಸದ ಅನುಭವವನ್ನು ಗೋಪಮ್ಮ ಹಂಚಿಕೊಂಡರು. ಮಕ್ಕಳಿಗೆ ೧೮ ವರ್ಷ ತುಂಬುತ್ತಲೇ ರೂ. ೨೫೦೦ ಕೊಟ್ಟು  ಅವರನ್ನು ಯೂಥ್ ಹಾಸ್ಟೆಲ್ ಆಜೀವ ಸದಸ್ಯರನ್ನಾಗಿ ಮಾಡಿ, ಅವರು ಚಾರಣ ಸವಿ ಅನುಭವಿಸಿ ಜ್ಞಾನ ಸಂಪಾದಿಸಲಿ ಎಂದು ಹೇಳಿದರು. ಶಿವಮೊಗ್ಗದ ತರುಣೋದಯ ಘಟಕದ ಸದಸ್ಯರು ಎರಡೂ ದಿನವೂ ನಮಗೆ ತೋರಿದ ಈ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.  ಸ್ವಾಗತ-ಬೀಳ್ಕೊಡುಗೆ ಎರಡೂ ಕಾರ್ಯಕ್ರಮಗಳ ವಿವರ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿತ್ತು.

   ಭರ್ಜರಿ ಭೋಜನ ಮುಗಿಸಿ (ವಾಂಗೀಭಾತ್, ಗಸಗಸೆ ಪಾಯಸ, ಪಲ್ಯ, ಅನ್ನ ಸಾರು, ಮೆಣಸಿನ ಬಜ್ಜಿ, ಮಜ್ಜಿಗೆ) ನಾವು ತರುಣೋದಯ ಘಟಕದವರಿಗೆ ಧನ್ಯವಾದವನ್ನರ್ಪಿಸಿ ಬಸ್ಸೇರಿದೆವು.

  ಬಂದ ದಾರಿಗೆ ಸುಂಕವಿಲ್ಲ – ಮರಳಿ ಮೈಸೂರು   

   ರಾತ್ರಿ ೧೦.೩೦ ಗಂಟೆಗೆ ಶಿವಮೊಗ್ಗದಿಂದ ಹೊರಟು, ಅರಸೀಕೆರೆಯಲ್ಲಿ ಚಹಾ ವಿರಾಮವಾಗಿ, ಮೈಸೂರು ತಲಪಿದೆವು. ಅವರವರ  ಮನೆ  ಸಮೀಪದಲ್ಲೆ ನಮ್ಮನ್ನು ಇಳಿಸಿದ್ದರು. ಮನೆ ತಲಪಿದಾಗ ೨೦-೯-೨೧ರಂದು ಬೆಳಗ್ಗೆ ಆರು ಗಂಟೆಯಾಗಿತ್ತು. ಎರಡು ದಿನದ ಈ ಚಾರಣ ಕಾರ್ಯಕ್ರಮದಲ್ಲಿ ಅಂದುಕೊಂಡಂತೆ ಎಲ್ಲಾ ಸ್ಥಳಗಳನ್ನೂ (ಶಿವಪ್ಪನಾಯಕನ ಕೋಟೆ ಬಿಟ್ಟು) ನೋಡಲು ಸಾಧ್ಯವಾಯಿತು. ಶಿವಮೊಗ್ಗ ತರುಣೋದಯ ಘಟಕದ ನೆರವಿನಿಂದ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾದ ವ್ಯವಸ್ಥೆಗಳೊಂದಿಗೆ ಕೇವಲ ರೂ. ೧೭೦೦ರಲ್ಲಿ ಆಯೋಜಿಸಿದ ಗಂಗೋತ್ರಿ ಘಟಕ ಮೈಸೂರು ಇದರ ಸದಸ್ಯರಾದ ಪರಶಿವಮೂರ್ತಿ ಹಾಗೂ ಆಶೀಶ್ ಕುಮಾರ್ ಇವರಿಬ್ಬರಿಗೂ ನಮ್ಮ ಸಹಚಾರಣಿಗರೆಲ್ಲರ ಪರವಾಗಿ ಅನಂತಾನಂತ ಧನ್ಯವಾದ.


ಇಲ್ಲಿ ಹಾಕಿದ ಕೆಲವು ಚಿತ್ರ ನಮ್ಮ ಸಹಚಾರಣಿಗರದು. ಅವರಿಗೆ ಧನ್ಯವಾದ. 

11 ಕಾಮೆಂಟ್‌ಗಳು:

  1. ಸವಿಸ್ತಾರವಾದ ವಿವರಣೆ.
    ಒಳ್ಳೆಯ ಪ್ರವಾಸ ಸಾಹಿತ್ಯದ ಸಕಲ ಗುಣಗಳೂ ಇರುವ ಉತ್ತಮ ಬರೆಹ. ಅಭಿನಂದನೆಗಳು ಮೇಡಂ.

    ಪ್ರತ್ಯುತ್ತರಅಳಿಸಿ
  2. ಸುಂದರ ಸುಮಧುರ ಮನೋಙ್ನ ನಿರೂಪಣೆ.ಮತ್ತೊಮ್ಮೆ ಚಾರಣ ಮಾಡಿದಂತ ಸಂತಸಕರ ಅನುಭವ. ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಚೆಂದದ ಚಾರಣ , ಪ್ರವಾಸ ಹಾಗೂ ಮಾಹಿತಿಪೂರ್ಣ ಬರಹ. ಊಟದ ವಿವರಣೆ ಬಾಯಲ್ಲಿ ನೀರು ತರಿಸಿತು.

    ಪ್ರತ್ಯುತ್ತರಅಳಿಸಿ
  4. ಉತ್ತಮ ಬರಹ.15 ವರ್ಷ ಹಿಂದೆ ನಾವು ಕವಲೇದುರ್ಗಕ್ಕೆ ಹೋದಾಗಿನ ಸವಿನೆನಪು ಬಂತು.ಕೋಟೆ ಸುಸ್ಥಿತಿ ಯಲ್ಲಿತ್ತು,ತುತ್ತತುದಿಗೂ ಹೋಗಿದ್ದೆವು.ಕವಿಶೈಲಕ್ಕೂಆಗ,ಮತ್ತೊಮ್ಮೆಇತ್ತೀಚೆಗೂ ಹೋಗಿಬಂದ ನೆನಪು ಮರುಕಳಿಸಿತು.

    ಪ್ರತ್ಯುತ್ತರಅಳಿಸಿ
  5. ಸುತ್ತಲೂ ಹಸಿರು ವನರಾಶಿಗಳು, ನಿಶ್ಶಬ್ಧದ ವಾತಾವರಣದ ಈ ಸ್ಥಳ ಬಹಳ ಚೆನ್ನಾಗಿದೆ. ಏನಾದರೂ ಕವನ ಬರೆಯಲು ಸ್ಫೂರ್ತಿ ಸಿಕ್ಕಿತೇನೋ ಎಂಬ ಆಕಾಂಕ್ಷೆಯಿಂದ ಕುವೆಂಪು ಕೂತ ಬಂಡೆಮೇಲೆ ನಾನೂ ಕುಳಿತೆ!

    .. .. ಆದರೆ ಅವಕಾಶ ಅಥವಾ ಸಂದರ್ಭ ಅದಾಗಿರಲಿಲ್ಲ..

    ಸ್ಫೂರ್ತಿಯಂತೂ ಸಿಕ್ಕಿತು ಎಂದುಕೊಳ್ಳುತ್ತೇನೆ.

    ವಾಹನವೇರದೆ ಕವಿಶೈಲಕ್ಕೆ ಮೆಟ್ಟಿಲನ್ನು ಹತ್ತಿಯೇ ಸಾಗಿದ್ದೆ
    ಮನದಣಿಯದೆ, ಕವಿಶೈಲದ ಬನಸಿರಿಯ ಕಂಡು ಹಿಗ್ಗಿದ್ದೆ
    ನಮ್ಮ ವಾಹನ ಬರುವುದಕ್ಕೂ ಮುನ್ನವೇ ಕವಿಶೈಲ ತಲುಪಿದ್ದೆ
    ಸ್ವಚ್ಛಂದ ಅಡ್ಡಾಡಿ ಕವಿಶೈಲವ ಬಣ್ಣಿಸಲಾಗದೆ ಮೂಕವಿಸ್ಮಿತಳಾಗಿದ್ದೆ
    ಸಾಮೂಹಿಕ ನಾಡಗೀತೆಗೆ ನಾನೂ ಧ್ವನಿಗೂಡಿಸಿದ್ದೆ
    ಕುವೆಂಪುರವರ ಆ ನಾಡಗೀತೆಯ ರಚನೆಗೆ ಮನಸೋತಿದ್ದೆ
    ಈಗ ನೋಡಿ ನನ್ನ ಆ ಅನುಭವಗಳನ್ನು ಮುಂದಿಟ್ಟು ನಿಮ್ಮ ಮನ ಗೆದ್ದಿದ್ದೆ.. .

    ನಮಸ್ಕಾರ.. .

    ಕವನ ಬರೆಯುವ ಆಸೆ ಈಡೇರಿದಂತಾಯಿತಲ್ಲವೇ..

    ಪ್ರತ್ಯುತ್ತರಅಳಿಸಿ