೧) ನಾಚಿಕೆಮುಳ್ಳು ಎಲೆಯ ತಂಬುಳಿ
ನಾಚಿಕೆಮುಳ್ಳು (ಮುಟ್ಟಿದರೆ ಮುನಿ) ಒಂದು ಔಷಧೀಯ ಸಸ್ಯ ಎಂದು ಗೊತ್ತಿತ್ತು. ನಮ್ಮ ಬಾಲ್ಯದಲ್ಲಿ ಈ ಸಸ್ಯದ ಜೊತೆ ನಮಗೆ ಅವಿನಾಭಾವ ಸಂಬಂಧವಿತ್ತು. ಅದನ್ನು ಮುಟ್ಟಿದಾಗ ಎಲೆ ಮುದುಡುವುದು ನಮಗೆ ಸೋಜಿಗದ ವಿಷಯವಾಗಿತ್ತು. ಎಲೆಯನ್ನು ಆಗಾಗ ಮುಟ್ಟುವುದು, ಅದು ಮುದುಡುವುದು, ತುಸು ಹೊತ್ತು ಬಿಟ್ಟು ಅದು ಮತ್ತೆ ಅರಳಿದಾಗ ಮತ್ತೊಮ್ಮೆ ಮುಟ್ಟುವುದು. ಇದೇ ನಮಗೆ ಪ್ರಿಯವಾದ ಆಟ. ಇಂತಿಪ್ಪ ಎಲೆಯಿಂದ ತಂಬುಳಿ ಮಾಡಿ ನೋಡಬೇಕೆಂದು ವರ್ಷದ ಹಿಂದೆಯೇ ಮಂಥನ ನಡೆಸಿದ್ದೆ! ಅದು ಇವತ್ತು ಈಡೇರಿತು.
ಲಿಂಗಾಂಬುಧಿ ಉದ್ಯಾನವನಕ್ಕೆ ವಾಯುವಿಹಾರ ಹೋಗಿದ್ದಾಗ, ಅಲ್ಲಿ ಯತೇಚ್ಛ ನಾಚಿಕೆಮುಳ್ಳು ಗಿಡ ಕಂಡಾಗ, ತಂಬುಳಿ ಮಾಡಬೇಕೆಂದಿರುವೆಯಲ್ಲ, ಕೊಯಿದುಕೋ ಎಂದು ಅದೇ ಜ್ಞಾಪಿಸಿತು! ಮುನಿಸು ತರವೆ ನಿನಗೆ ನಾನು ಕೊಯಿದರೆ ಎಂದು ಹೇಳಿಕೊಳುತ್ತ, ಒಂದಷ್ಟು ಎಲೆ ಕೊಯಿದುಕೊಂಡೆ. ಅದು ನಾಚಿಕೆಯಿಂದ ಮುದುಡಿಯೇ ನಮ್ಮ ಮನೆಗೆ ಬಂತು!
೧) ನಾಚಿಕೆಮುಳ್ಳು ಚಿಗುರು ಎಲೆ ಸ್ವಲ್ಪ ಕೊಯಿದು ತೊಳೆಯಿರಿ.
೨) ಬಾಣಲೆಗೆ ಒಂದು ಚಮಚ ತುಪ್ಪ, ಒಂದುಚಮಚ ಜೀರಿಗೆ, ಆರೇಳು ಕಾಳುಮೆಣಸು ಹಾಕಿ ಹುರಿದು, ಅದಕ್ಕೆ ಎಲೆ ಹಾಕಿ ಬಾಡಿಸಿ.
೩) ಒಂದು ಕಪ್ ಕಾಯಿತುರಿಗೆ ಹುರಿದ ಸಾಮಾಗ್ರಿ ಹಾಕಿ ರುಬ್ಬಿ ಬೇಕಷ್ಟು ನೀರು,ಉಪ್ಪು ಸೇರಿಸಿ, ಒಂದು ಲೋಟ ಮಜ್ಜಿಗೆ ಬೆರೆಸಿ ಒಗ್ಗರಣೆ ಕೊಡಬೇಕು.
ಸಸ್ಯ ಪರಿಚಯ: ಆಡುಭಾಷೆಯಲ್ಲಿ ನಾಚಿಗೆ ಮುಳ್ಳು,ಮುಟ್ಟಿದರೆ ಮುಚಕ,ಮುಚ್ಗನ್ ಮುಳ್ಳು,ಪತಿವ್ರತೆ,ಮುಟ್ಟಿದರೆ ಮುನಿ,ಲಜ್ಜಾವತಿ,ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ" ಆಂಗ್ಲದಲ್ಲಿ ಟಚ್ ಮಿ ನಾಟ್, ಹಿಂದಿಯಲ್ಲಿ ಚುಯ್ ಮುಯ್, ಸಸ್ಯಶಾಸ್ತ್ರೀಯ ಹೆಸರು ‘ಮಿಮೊಸ ಪುಡಿಕಾ’ (Mimosa Pudica) ಏಂದೆಲ್ಲಾ ಕರೆಸಿಕೊಂಡು (Touch me not) ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ.ಇದರ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ. ಮೈತುಂಬ ಮುಳ್ಳು, ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುತ್ತದೆ ಸ್ಪರ್ಶ ತಾಕಿದೊಡನೆ ನಾಚಿ ಕೆಂಪಾಗಿ, ಮುಸುಕೊದ್ದು ಕುಳಿತಂತೆ ಭಾಸವಾಗುತ್ತದೆ.ಇದೊಂದು ಪ್ರಕೃತಿಯ ರಹಸ್ಯವಾಗಿದ್ದು ಸಸ್ಯವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ತಂತ್ರವಿದು. ಈ ಸಸ್ಯವು ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದ್ದು, ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಕ್ಷಣ ಮೇಯಲು ಧಾವಿಸುತ್ತವೆ. ಆಗ ತನ್ನನ್ನು ರಕ್ಷಿಸಿಕೊಳ್ಳಲು ಮುದುರಲು ಆರಂಭಿಸಿದ ತಕ್ಷಣ ಒಂದಕ್ಕೊಂದು ತಗುಲುತ್ತಾ ಹೋಗಿ ಕ್ಷಣ ಮಾತ್ರದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿದ ಈ ಸಸ್ಯ ಮುದುಡಿಕೊಳ್ಳುತ್ತದೆ. ಇದರಿಂದ ಮೇಯುವ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳಂತೆ ಕಂಡುಬರುತ್ತದೆ. ಇದರಿಂದ ಪ್ರಾಣಿಗಳು ಬೇರೆಡೆಗೆ ಹೋಗುತ್ತವೆ. ದೀರ್ಘಾವಧಿ ಕಳೆ ಗಿಡವಾಗಿರುವ ಇದು ಬೇರುಗಳಿಂದ ಅಭಿವೃದ್ದಿ ಹೊಂದುವುದರಿಂದ ಕಳೆನಾಶಕಗಳನ್ನು ಸಿಂಡಿಸಿದರೂ ಮೇಲಿನ ಭಾಗ ಒಣಗಿದಂತಾಗಿ ಮತ್ತೆ ಹದ ಸಿಕ್ಕಿದ ಕೂಡಲೇ ಬೆಳೆಯುತ್ತವೆ. ಒಂದು ಗಿಡದಿಂದ ಒಂದು ವರ್ಷಕ್ಕೆ ಸುಮಾರು ಒಂದು ಲಕ್ಷ ಬೀಜ ಉತ್ಪತ್ತಿಯಾಗುತ್ತವೆ. ಬೀಜವೇ ಇಲ್ಲದೆ ಭೂಮಿಯೊಳಗೆ ಬೇರುಗಳು ಹಬ್ಬಿ ಬೆಳೆಯುತ್ತವೆ,ಗಿಡವು ತಿಳಿ ನೇರಳೆ ಬಣ್ಣದ ಆಕರ್ಷಕ ಹೂವು ಬಿಡುತ್ತದೆ,ಹೂವು ಗಿಡದ ತುದಿಯಲ್ಲಿರುತ್ತದೆ, ಸಾಮಾನ್ಯವಾಗಿ ಈ ಹೂವಿನ ವ್ಯಾಸ ೧-೨ ಸೆಂಟಿಮೀಟರ್ ಗಳಷ್ಟೆ.
ಔಷಧೀಯ ಉಪಯೋಗಗಳು: ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ (Piles) ಗುಣಮುಖವಾಗುತ್ತದೆ.ಮೂತ್ರ ಕೋಶದ ಕಲ್ಲು ನಿವಾರಣೆಯಲ್ಲಿ, ಮಹಿಳೆಯರ ಋತುಚಕ್ರ ಸರಾಗವಾಗಿ ಆಗುವಲ್ಲಿ, ಮೂಲವ್ಯಾಧಿ ಹಾಗೂ ಹಲ್ಲು ನೋವಿನ ನಿವಾರಣೆಯಲ್ಲಿ ಈ ಸಸ್ಯದ ಪಾತ್ರ ದೊಡ್ಡದು.ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಸಸ್ಯದ ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನುಹೊಂದಿದೆ.
೨)ಶುಂಠಿ ಎಲೆ ತಂಬುಳಿ
ನಮ್ಮ ಅಕ್ಕನ ಮಗಳು ಸಿಂಧೂ ಶುಂಠಿ ಎಲೆಯಿಂದ ತಂಬುಳಿ ಮಾಡಿದ್ದಳು. ಓ ಶುಂಠಿ ಎಲೆಯಿಂದ ತಂಬುಳಿ ಮಾಡಬಹುದು ಎಂದು ಇದುವರೆಗೆ ನನ್ನ ಗಮನಕ್ಕೇ ಬಂದಿರಲಿಲ್ಲ. ಗೊತ್ತಾದಮೇಲೆ ಮಾಡಿ ನೋಡದೆ ಇರಲು ಸಾಧ್ಯವಿಲ್ಲ! ಹಾಗಾಗಿ ಅದರ ತಯಾರಿ ನಡೆಸಿದೆ.
೧) ಶುಂಠಿಯ ಚಿಗುರು ಎಲೆ ಕೊಯಿದು ತೊಳೆಯಿರಿ. ೭ ಎಲೆ ಬಳಸಿದ್ದೆ.
೨) ಬಾಣಲೆಗೆ ಒಂದು ಚಮಚ ತುಪ್ಪ, ಒಂದುಚಮಚ ಜೀರಿಗೆ, ನಾಲ್ಕು ಕಾಳುಮೆಣಸು ಹಾಕಿ ಹುರಿದು, ಅದಕ್ಕೆ ಎಲೆ ಹಾಕಿ ಬಾಡಿಸಿ.
೩) ಒಂದು ಕಪ್ ಕಾಯಿತುರಿಗೆ ಹುರಿದ ಸಾಮಾಗ್ರಿ ಹಾಕಿ ರುಬ್ಬಿ ಬೇಕಷ್ಟು ನೀರು,ಉಪ್ಪು ಸೇರಿಸಿ, ಒಂದು ಲೋಟ ಮಜ್ಜಿಗೆ ಬೆರೆಸಿ ಒಗ್ಗರಣೆ ಕೊಡಬೇಕು.
ಈ ತಂಬುಳಿಯೂ ಬಹಳ ರುಚಿಯಾಗುತ್ತದೆ. ಉಣ್ಣುವಾಗ ಎಲೆಯ ಘಮ ಬರುತ್ತದೆ. ಎಲೆ ಖಾರ ಇದ್ದರೆ ಎಂದು ತುಂಬ ಹಾಕಿಲ್ಲ. ಖಾರವೇನೂ ಇರಲಿಲ್ಲ. ಇನ್ನೂ ಕೆಲವು ಎಲೆ ಹಾಕಬಹುದಿತ್ತು ಎನಿಸಿತು. ಮಾಡಿ ನೋಡಿ.
ಹಾಗಲದ ಒಂದೆರಡು ಬಳ್ಳಿ ತಾನಾಗೆ ಹುಟ್ಟಿ ಹಬ್ಬಿತ್ತು. ಅದೇಕೊ ಕಾಯಿ ಬಿಡುವುದಿಲ್ಲ. ಎಲೆಯನ್ನಾದರೂ ಸದುಪಯೋಗ ಮಾಡೋಣವೆನಿಸಿತು. ಹಾಗಲ ನಾಲಗೆಗೂ ಉದರಕ್ಕೂ ನನಗೆ ಇಷ್ಟವಾದ ತರಕಾರಿ.
೨) ಬಾಣಲೆಗೆ ಒಂದು ಚಮಚ ತುಪ್ಪ, ಒಂದುಚಮಚ ಜೀರಿಗೆ ಹಾಕಿ ಹುರಿದು, ಅದಕ್ಕೆ ಎಲೆ ಹಾಕಿ ಬಾಡಿಸಿ, ೩ ಗಾಂಧಾರಿ (ಸೂಜಿ)ಮೆಣಸು ಹಾಕಿ .
೩) ಒಂದು ಕಪ್ ಕಾಯಿತುರಿಗೆ ಹುರಿದ ಸಾಮಾಗ್ರಿ ಹಾಕಿ ರುಬ್ಬಿ ಬೇಕಷ್ಟು ನೀರು ,ಉಪ್ಪು ಸೇರಿಸಿ, ಒಂದು ಲೋಟ ಮಜ್ಜಿಗೆ ಬೆರೆಸಿ ಒಗ್ಗರಣೆ ಕೊಡಬೇಕು.
ಬಹಳ ರುಚಿಯಾಗುತ್ತದೆ ತಂಬುಳಿ. ಕಹಿ ಅನಿಸುವುದಿಲ್ಲ. ನಸು ಕಹಿ ಸ್ವಾದ ಹಿತವೆನಿಸುವವರು ಮಾಡಿನೋಡಿ.
೪) ನುಗ್ಗೆಸೊಪ್ಪು ತಂಬುಳಿ
ವಿವಿಧ ಎಲೆಗಳಿಂದ ತಂಬುಳಿ ಪ್ರಯೋಗ ಮಾಡಿದ್ದನ್ನು ನೋಡಿದ ನಮ್ಮ ಮನೆ ಹಿಂದಿನ ಮನೆಯಲ್ಲಿರುವ ಜಯಶ್ರೀ, ಒಂದಿನ ನನ್ನನ್ನೇ ತಂಬುಳಿ ಮಾಡಿಯಾರು ಎಂದಿದ್ದರು. ನಿಮ್ಮನ್ನು ಮಾಡಲ್ಲ, ನಿಮ್ಮಂಗಳದ ನುಗ್ಗೆಸೊಪ್ಪಿಂದ ಮಾಡುವೆ ಎಂದಿದ್ದೆ!
ಅದರಂತೆ ಅವರ ಅಂಗಳದ ನುಗ್ಗೆಸೊಪ್ಪು ಕದ್ದು ತಂದು ಇವತ್ತು ತಂಬುಳಿ ಮಾಡಿದೆ. ಶ್ರೀ ಕೃಷ್ಣ ಕಥಾನಕದಲ್ಲಿ, ಸತ್ಯಭಾಮೆ, ರುಕ್ಮಿಣಿಯರಿಗೆ ಪಾರಿಜಾತ ಹೂವಿನ ಬಗ್ಗೆ ಕಲಹ ಏರ್ಪಟ್ಟ ಕಥೆ ಗೊತ್ತಲ್ಲ.ಅವರಿಬ್ಬರನ್ನು ಕೃಷ್ಣ ಸಂಧಾನಗೊಳಿಸಿ ಕಲಹ ಸುಖಾಂತ್ಯಮಾಡಿದ. ಆ ಕಥೆಯ ನೀತಿಯಂತೆ, ಮರ ಜಯಶ್ರೀ ಅವರದ್ದಾದರೂ, ಟೊಂಗೆ ನಮ್ಮ ಮನೆ ಕಡೆ ಚಾಚಿದ್ದರಿಂದ ಅದರ ಸೊಪ್ಪು ಉಪಯೋಗಿಸಲು ನಮಗೂ ಹಕ್ಕಿದೆ ಎಂದು ತಿಳಿದು ರಾಜಾರೋಷವಾಗಿ ಸೊಪ್ಪು ಕೊಯಿದೆ!
೧) ಒಂದು ಮುಷ್ಟಿಯಷ್ಟು ನುಗ್ಗೆಸೊಪ್ಪು ತೊಳೆದಿಡಿ.
೨) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಅದಕ್ಕೆ ಒಂದು ಚಮಚ ಜೀರಿಗೆ, ಆರೇಳು ಕಾಳುಮೆಣಸು ಹಾಕಿ ಹುರಿದು, ಅದಕ್ಕೆ ನುಗ್ಗೆಸೊಪ್ಪು ಹಾಕಿ ಬಾಡಿಸಿ.
೩) ಒಂದು ಕಪ್ ಕಾಯಿತುರಿಗೆ ಹುರಿದ ಮಿಶ್ರಣವನ್ನು ಹಾಕಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ ಮೊಸರು ಸೇರಿಸಿ ಒಗ್ಗರಣೆ ಕೊಡಬೇಕು.
ನುಗ್ಗೆಸೊಪ್ಪಿನಿಂದ ಎಷ್ಟೆಲ್ಲ ಪ್ರಯೋಜನವಿದೆ ಎಂದು ತಿಳಿಯಲು ಅಂತರ್ಜಾಲ ಜಾಲಾಡಿದಾಗ ಕಂಡ ಸುದ್ದಿ ಓದಿದರೆ ಮೂಕವಿಸ್ಮಿತರಾಗುತ್ತೇವೆ. ಅದರಂತೆ ದಿನಾ ನುಗ್ಗೆಸೊಪ್ಪು ನಾನು ಮಾಡಿದೆಯೆಂದಾದರೆ, ಜಯಶ್ರೀ ಅವರು ಬೆಳಗಾಗೆದ್ದು ನುಗ್ಗೆಮರ ನೋಡಿದರೆ ಮರ ಬೋಳಾಗಿರುವುದು ಕಂಡರೂ ಆಶ್ಚರ್ಯವಿಲ್ಲ!
ವಿವರಕೃಪೆ:ಅಂತರ್ಜಾಲ
ನುಗ್ಗೆ ಸೊಪ್ಪಿನ ಔಷಧಿ ಗುಣಗಳು : ಇದರ ವೈಜ್ಞಾನಿಕ ಹೆಸರು ಮೋರಿಂಗ್ ಒಲಿಫೆರ್. ಸಾಮಾನ್ಯವಗಿ ನುಗ್ಗೆ ಕಾಯಿಯ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ನುಗ್ಗೆ ಕಾಯಿಯನ್ನು ಹೆಚ್ಚಾಗಿ ನಾವು ಅಡುಗೆಯಲ್ಲಿ ಬಳಸುತ್ತೇವೆ. ಆದರೆ ನುಗ್ಗೆ ಸೊಪ್ಪನ್ನು ನಾವು ಬಳಸುವುದು ಕಡಿಮೆ. ಕೆಲವರಂತೂ ನುಗ್ಗೆ ಮರವನ್ನೇ ನೋಡಿರುವುದಿಲ್ಲ. ಆದ್ದರಿಂದ ಅದರ ಸೊಪ್ಪಿನ ಬಳಕೆಯನ್ನೂ ಮಾಡಿರುವುದಿಲ್ಲ. ನಿಮಗೆ ನುಗ್ಗೆ ಸೊಪ್ಪಿನ ಔಷಧೀಯ ಗುಣಗಳು ತಿಳಿದರೆ, ಇದರಿಂದ ಇಷ್ಟೆಲ್ಲಾ ಲಾಭವಿದೆಯೇ ಎಂದು ಆಶ್ಚರ್ಯವಾಗುತ್ತದೆ. ನುಗ್ಗೆ ಮರವು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲಿಯೂ ಕಾಣಬಹುದು. ಆದರೆ ಈಗಿನ ದಿನಗಳಲ್ಲಿ ಜವಾರಿ ನುಗ್ಗೆಯ ಮರ ಬೆಳೆಸುವಿಕೆ ಕಡಿಮೆಯಾಗುತ್ತಿದೆ. ಎಲ್ಲಿ ನೋಡಿದರು ಹೈಬ್ರಿಡ್ ತಳಿಯ ಮರಗಳದ್ದೇ ಕಾರುಬಾರು. ಆದರೆ ಜವಾರಿ ನುಗ್ಗೆಯಲ್ಲಿರುವಷ್ಟು ಔಷಧಿ ಗುಣಗಳು, ಹೈಬ್ರಿಡ್ ತಳಿಯಲ್ಲಿ ಇರುವುದಿಲ್ಲ.
ನುಗ್ಗೆ ಮರವು ವಿಟಮಿನ್ ಮಾತ್ರೆಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ನುಗ್ಗೆ ಸೊಪ್ಪಿನಲ್ಲಿ ಅಧಿಕವಾಗಿ ಸಿ ಜೀವಸತ್ವವಿರುತ್ತದೆ. ಉದಾಹರಣೆಗೆ ನಾವು ವಿಟಮಿನ್ "C" ಯ ಸಲುವಾಗಿ ಬಳಸುವ ನಿಂಬೆ, ಕಿತ್ತಳೆ ಹಣ್ಣುಗಳಿಗಿಂತಲೂ ೭ ರಷ್ಟು ಅಧಿಕವಾದ ವಿಟಮಿನ್ ಇದರಲ್ಲಿ ದೊರಕುತ್ತದೆ. ಎ ಜೀವಸತ್ವ ಹೊಂದಿರುವ ಕ್ಯಾರೆಟಿಗಿಂತಲೂ ೪ ರಷ್ಟು ಜೀವಸತ್ವ ಈ ನುಗ್ಗೆ ಸೊಪ್ಪಿನಲ್ಲಿರುತ್ತದೆ. ಪ್ರತಿ ದಿನ ಕುಡಿಯುವ ಹಾಲಿನಲ್ಲಿ ಇರುವ ಕ್ಯಾಲ್ಸಿಯಂಗಿಂತ ೪ ರಷ್ಟು ಹೆಚ್ಚು ಕ್ಯಾಲ್ಸಿಯಂ ನುಗ್ಗೆ ಸೊಪ್ಪಿನಲ್ಲಿರುತ್ತದೆ. ಹಾಗು ಪಾಲಕ್ ಸೊಪ್ಪಿಗಿಂತ 6 ರಷ್ಟು ಕಬ್ಬಿಣದ ಅಂಶ, ಮೊಟ್ಟೆಯ ಬಿಳಿ ಭಾಗಕ್ಕಿಂತ ೨ ರಷ್ಟು ಹೆಚ್ಚು ಪ್ರೊಟೀನ್, ಬಾಳೆ ಹಣ್ಣಿಗಿಂತ 3 ರಷ್ಟು ಪೊಟ್ಯಾಷಿಯಂ ಹೀಗೆ ಎಲ್ಲ ತರಹದ ಜೀವಸತ್ವಗಳೂ ಈ ನುಗ್ಗೆ ಸೊಪ್ಪಿನಲ್ಲಿ ದೊರೆಯುತ್ತದೆ. ಆದ್ದರಿಂದ ಇದರ ಸೇವನೆ ತುಂಬಾ ಮುಖ್ಯವಾಗಿದೆ. ಇದು ಅಧಿಕ ಪೋಷಕಾಂಶಗಳ ದೊಡ್ಡ ಆಗರವಾಗಿದೆ. ನುಗ್ಗೆ ಮರದ ಸೊಪ್ಪು, ಹೂವು, ಕಾಯಿ ಹೀಗೆ ಪ್ರತಿಯೊಂದು ಭಾಗವೂ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಪ್ರಯೋಜನಕಾರಿಯಾಗಿದೆ. ಇದನ್ನು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ದೇಹವು ಆರೋಗ್ಯದಿಂದಿರುತ್ತದೆ. ನುಗ್ಗೆ ಸೊಪ್ಪು ಅನೇಕ ರೋಗಗಳ ನಿವಾರಕವಾಗಿದೆ.
ನುಗ್ಗೆ ಸೊಪ್ಪಿನ ಔಷಧೀಯ ಉಪಯೋಗಗಳು: ನುಗ್ಗೆ ಸೊಪ್ಪು ಮಧುಮೇಹ ನಿಯಂತ್ರಕವಾಗಿದೆ. ಈಗಿನ ದಿನಗಳಲ್ಲಿ ಮಧುಮೇಹ ಖಾಯಿಲೆಯುನ್ನು ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಕಾರಣ ಅಧಿಕ ಸಕ್ಕರೆ ಅಂಶಗಳನ್ನು ಹೊಂದಿರುವ ಪದಾರ್ಥಗಳ ಸೇವನೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯ ಪ್ರಮಾಣ ಕಡಿಮೆಯಾಗುತ್ತಿದೆ. ನೊಗ್ಗೆಸೂಪ್ಪು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಾವು ನುಗ್ಗೆಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ನುಗ್ಗೆ ಸೊಪ್ಪು ಸಕ್ಕರೆ ಅಂಶವನ್ನು ಹೊಂದಿರದೆ ಇರುವುದು ತುಂಬಾ ಉಪಯುಕ್ತವಾಗಿದೆ. ಅಧಿಕ ರಕ್ತದೊತ್ತಡದ ನಿವಾರಣೆಗೆ ನುಗ್ಗೆಸೊಪ್ಪು: ಅಧಿಕ ರಕ್ತದೊತ್ತಡವೆಂದರೆ ಹೈ ಬಿಪಿ. ಇದು ಹೃದಯಾಘಾತಕ್ಕೆ ಮೂಲ ಕಾರಣವಾಗಿದೆ. ನುಗ್ಗೆ ಸೊಪ್ಪು ರಕ್ತನಾಳಗಳ ಹಿಗ್ಗುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಆದ್ದರಿಂದ ನಾವು ನುಗ್ಗೆ ಸೊಪ್ಪನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಲ್ಲಿಡುವುದು ಉತ್ತಮ.
ದೇಹದ ತೂಕ ಇಳಿಸಲು ನುಗ್ಗೆಸೊಪ್ಪು ಸಹಾಯಕವಾಗಿದೆ. ಈಗೀನ ಕಾಲದಲ್ಲಿ ಸ್ಥೂಲ ಕಾಯ ಹೊಂದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಜಂಕ್ ಫುಡ್ ಗಳ ಬಳಕೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ ಅಂಶ ಹೆಚ್ಚಾಗಿ, ಇದು ಅನೇಕ ರೋಗಗಳಿಗೆ ಅಹ್ವಾನ ನೀಡುತ್ತದೆ. ಆದ್ದರಿಂದ ನುಗ್ಗೆ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿದಲ್ಲಿ ನಾವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನುಗ್ಗೆ ಸೊಪ್ಪನ್ನು ನಾವು ಸಾಂಬಾರ್, ಸೂಪ್, ಪಲ್ಯ ಅಥವಾ ಜ್ಯೂಸು ಮಾಡಿಕೊಂಡು ಸೇವಿಸಬಹುದು.
ಮೂತ್ರದಲ್ಲಿನ ಕಲ್ಲು ನಿವಾರಣೆಗೆ ನುಗ್ಗೆ ಸೊಪ್ಪು ಸಹಕಾರಿಯಾಗಿದೆ.
ನುಗ್ಗೆ ಸೊಪ್ಪನ್ನು(ಬೇಕಾದಲ್ಲಿ ಸ್ವಲ್ಪ ಕ್ಯಾರೆಟ್ ಸೇರಿಸಿ) ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ ಇದು ಮೂತ್ರದಲ್ಲಿನ ಕಲ್ಲು ನಿವಾರಣೆಗೆ ಸಹಾಯಕವಾಗುತ್ತದೆ.
ನುಗ್ಗೆಸೊಪ್ಪು ರಕ್ತಹೀನತೆಯನ್ನು ನಿವಾರಿಸುತ್ತದೆ. ನುಗ್ಗೆ ಸೊಪ್ಪು ಪಾಲಕ್ ಸೊಪ್ಪಿಗಿಂತಲೂ 6 ರಷ್ಟು ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಇದು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ. ಎರಡು ಚಮಚ ನುಗ್ಗೆ ಸೊಪ್ಪಿನ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ, ರಾತ್ರೆ ಮಲಗುವ ಮೊದಲು ಕುಡಿಯುವುದರಿಂದ ರಕ್ತ ಕೂಡ ಶುದ್ಧಿಯಾಗುತ್ತದೆ.
ಕೂದಲಿನ ಆರೋಗ್ಯಕ್ಕೂ ನುಗ್ಗೆಸೊಪ್ಪು ಉಪಯುಕ್ತ. ನುಗ್ಗೆ ಸೊಪ್ಪಿನ ಎಲೆಗಳನ್ನ ನೀರಿನಲ್ಲಿ ಹಾಕಿ ಕಿವುಚಿ, ಆ ನೀರನ್ನು ತಲೆಗೆ ಹಾಕಿಕೊಂಡು 30 ನಿಮಿಷಗಳ ಬಳಿಕ ತಲೆ ಸ್ನಾನ ಮಾಡುವುದರಿಂದ, ಕೂದಲಿನ ಸಮಸ್ಯೆ ದೂರವಾಗಿ ಆರೋಗ್ಯಕರ ಕೊಡಲು ನಮ್ಮದಾಗುತ್ತದೆ.
ಹೃದಯ ಸಮಸ್ಯೆಗೆ ನುಗ್ಗೆಸೊಪ್ಪಿನಿಂದ ಪರಿಹಾರ. ನುಗ್ಗೆ ಸೊಪ್ಪು ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದ್ದು, ರಕ್ತ ನಾಳವು ಬ್ಲಾಕ್ ಆಗುವುದನ್ನು ಇದು ತಡೆಯುತ್ತದೆ. ಆದ್ದರಿಂದ ನಾವು ನುಗ್ಗೆ ಗಿಡದ ಹೂವನ್ನು ಅಥವಾ ಎಲೆಯನ್ನು ವಾರಕ್ಕೊಮ್ಮೆಯಾದರೂ ಪಲ್ಯ, ಸಾಂಬಾರ್ ಅಥವಾ ಇನ್ನಿತರ ಯಾವುದೇ ಖಾದ್ಯಗಳನ್ನು ತಯಾರಿಸಿಕೊಂಡು ಸೇವಿಸುವುದರಿಂದ ಹೃದಯ ರೋಗದ ಸಮಸ್ಯೆಯಿಂದ ದೂರವಿರಬಹುದು.
ಮೂಳೆಗಳ ಆರೋಗ್ಯಕ್ಕೆ ನುಗ್ಗೆಸೊಪ್ಪು ಸಹಕಾರಿಯಾಗಿದೆ. ನುಗ್ಗೆ ಸೊಪ್ಪು ಹಾಲಿಗಿಂತ 4 ರಷ್ಟು ಅಧಿಕ ಕ್ಯಾಲ್ಸಿಯಂ ನ್ನು ಹೊಂದಿದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ನುಗ್ಗೆ ಸೊಪ್ಪಿನ ರಸ ತೆಗೆದು, ಅದಕ್ಕೆ ಹಾಲು ಸೇರಿಸಿ ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. (ಒಂದು ಲೋಟ ಹಾಲಿಗೆ ೧ ರಿಂದ ೨ ಚಮಚ ರಸ ಸಾಕಾಗುತ್ತದೆ).
ಭೇದಿ ಕಡಿಮೆ ಮಾಡಲು ನುಗ್ಗೆ ಸೊಪ್ಪು ಉಪಯುಕ್ತ. ನುಗ್ಗೆ ಸೊಪ್ಪನ್ನು ನುಣುಪಾಗಿ ಅರೆದು, ಅದಕ್ಕೆ ಜೇನುತುಪ್ಪ ಮತ್ತು ಕಾಯಿ ಹಾಲು ಸೇರಿಸಿ ದಿನಕ್ಕೆ 3 ಹೊತ್ತು ನಿಯಮಿತವಾಗಿ ಕುಡಿಯುವುದರಿಂದ ಭೇದಿ ಹತೋಟಿಗೆ ಬರುತ್ತದೆ. (ಇದರ ಅತಿಯಾದ ಸೇವನೆಯಿಂದ ಭೇದಿ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ)
ನುಗ್ಗೆ ಸೊಪ್ಪು ಊತ ನಿವಾರಣೆಗೆ ಸಹಕಾರಿಯಾಗಿದೆ. ಊತ ನಿವಾರಣೆಗೆ ನುಗ್ಗೆ ಸೊಪ್ಪಿನ ಎಣ್ಣೆಯನ್ನು ತಯಾರಿಸಿಕೊಂಡು, ಊತದ ಭಾಗಕ್ಕೆ ಇಳಿಮುಖವಾಗಿ ಹಚ್ಚಿ ಮಸಾಜ್ ಮಾಡುವುದರಿಂದ ಊತ ಇಳಿಯುತ್ತದೆ. ಹಾಗು ಒಂದು ಬಟ್ಟೆಯಲ್ಲಿ ನುಗ್ಗೆ ಸೊಪ್ಪನ್ನು ಹಾಕಿ ಗಂಟು ಕಟ್ಟಿಕೊಂಡು ಊತವಿರುವ ಜಾಗಕ್ಕೆ ಇದರಿಂದ ಬಿಸಿ ಶಾಖ ಕೊಡುವುದರಿಂದಲೂ ಕೂಡ ಊತ ಕಡಿಮೆಯಾಗುತ್ತದೆ. ನುಗ್ಗೆ ಸೊಪ್ಪಿನಿಂದ ತಲೆ ನೋವಿಗೆ ಪರಿಹಾರ
ನುಗ್ಗೆ ಸೊಪ್ಪು ಮತ್ತು ಅದರ ಹೂವುಗಳನ್ನು ಸೇರಿಸಿ ತಲೆಗೆ ಹಾಕಿ ಉಜ್ಜುವುದರಿಂದ ಮತ್ತು, ನುಗ್ಗೆ ಸೊಪ್ಪಿನ ರಸದಲ್ಲಿ ಕಾಳು ಮೆಣಸನ್ನು ಅರೆದು, ತಲೆಗೆ ತೆಳ್ಳಗೆ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ನುಗ್ಗೆಸೊಪ್ಪು ಸಹಕಾರಿ
ಮನುಷ್ಯನಲ್ಲಿ ಮುಖ್ಯವಾದ ಅಂಗಗಳಲ್ಲಿ ಕಣ್ಣೂ ಒಂದು ಭಾಗ. ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಹಿಂದಿನ ಕಾಲದಲ್ಲಿ ವಯಸ್ಸಾದವರು ಮಾತ್ರ ದ್ರಷ್ಟಿ ದೋಷದಿಂದ ಬಳಲುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ದ್ರಷ್ಟಿದೋಷ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಅನೇಕ ಪೋಷಕಾಂಶಗಳ ಕೊರತೆ ಅಥವಾ ಇನ್ನಿತರ ಕಾರಣಗಳಿರಬಹುದು. ಕಣ್ಣಿನ ಆರೋಗ್ಯಕ್ಕೆ ಎ ಜೀವಸತ್ವ ಮುಖ್ಯವಾಗಿದೆ. ನುಗ್ಗೆಸೊಪ್ಪು ಕ್ಯಾರೆಟಿಗಿಂತಲೂ ೪ ರಷ್ಟು ಅಧಿಕ ಎ ಜೀವಸತ್ವವನ್ನು ಹೊಂದಿದೆ. ಆದ್ದರಿಂದ ಮನೆಯಲ್ಲಿ ನುಗ್ಗೆಸೊಪ್ಪಿನ ಬಳಕೆಯನ್ನು ಹೆಚ್ಚಿಸಿದ್ದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನುಗ್ಗೆ ಸೊಪ್ಪಿನಿಂದ ಜಂತು ಹುಳುಗಳ ನಿವಾರಣೆ: ಜಂತು ಹುಳುಗಳ ನಿವಾರಣೆಗೆ ನಾವು ಆರು ತಿಂಗಳಿಗೊಮ್ಮೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಅದರ ಬದಲು ನುಗ್ಗೆ ಕಾಯಿಯನ್ನು ನಿಯಮಿತವಾಗಿ ಊಟದಲ್ಲಿ ಬಳಸುವುದರಿಂದ ಹೊಟ್ಟೆಯಲ್ಲಿನ ಜಂತು ಹುಳುಗಳನ್ನು ನಿಯಂತ್ರಿಸಬಹುದು.
ಮೊಡವೆಗಳ ನಿವಾರಣೆಗೆ ನುಗ್ಗೆಸೊಪ್ಪು. ನುಗ್ಗೆ ಸೊಪ್ಪಿಗೆ ಸ್ವಲ್ಪ ನಿಂಬೆ ರಸ ಸೇರಿಸಿ, ನುಣುಪಾಗಿ ಅರೆದು, ಮೊಡವೆಗಳಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆಗಳ ನಿವಾರಣೆಯಾಗುತ್ತದೆ.
ನುಗ್ಗೆ ಸೊಪ್ಪನ್ನು ಬಳಸುವುದರಿಂದ ತುಂಬಾ ಪ್ರಯೋಜನವಿದೆ. ಅದರಲ್ಲಿನ ಅಧಿಕ ಪೋಷಕಾಂಶವು ಬಾಣಂತಿಯರಲ್ಲಿ ಎದೆ ಹಾಲನ್ನು ಹೆಚ್ಚಿಸಲು ನುಗ್ಗೆ ಸೊಪ್ಪು ಸಹಾಯಕವಾಗಿದೆ. ಹಾಗೂ ಗರ್ಭಿಣಿಯರ ಆರೋಗ್ಯಕ್ಕೂ ಸಹಕಾರಿಯಾಗಿರುವುದರ ಜೊತೆಗೆ ಹುಟ್ಟುವ ಮಗುವಿನ ಅರೋಗ್ಯ ಕೂಡ ಚೆನ್ನಾಗಿರುತ್ತದೆ.
ನುಗ್ಗೆ ಸೊಪ್ಪು ತಲೆ ಸುತ್ತುವಿಕೆಯನ್ನು ನಿವಾರಿಸುತ್ತದೆ. ನುಗ್ಗೆ ಸೊಪ್ಪನ್ನು ಬೇಯಿಸಿ, ಅದನ್ನು ಸೋಸಿಕೊಂಡು, ಆ ನೀರಿಗೆ ನಿಂಬೆ ರಸ ಸೇರಿಸಿ, ಪ್ರತಿ ದಿನ ಒಂದು ಲೋಟದಂತೆ ಒಂದು ವಾರ ಸೇವಿಸುವುದರಿಂದ ತಲೆ ಸುತ್ತುವಿಕೆ ಕಡಿಮೆಯಾಗುತ್ತದೆ.
ಕ್ಯಾನ್ಸರ್ ನ್ನು ಹತೋಟಿಯಲ್ಲಿಡಲು ನುಗ್ಗೆಸೊಪ್ಪು ಸಹಕಾರಿಯಾಗಿದೆ: ಕ್ಯಾನ್ಸರ್ ಒಂದು ಗುಣಪಡಿಸಲಾಗ ಒಂದು ಕೆಟ್ಟ ಖಾಯಿಲೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಒಬ್ಬರಿಗೆ ಒಮ್ಮೆ ಕ್ಯಾನ್ಸರ್ ಬಂದರೆ, ಎಷ್ಟೋ ಬಾರಿ ಕ್ಯಾನ್ಸರ್ ಕಣಗಳನ್ನ ವೈದ್ಯರಿಂದ ಶಾಶ್ವತವಾಗಿ ತೆಗೆಸಲು ಸಾಧ್ಯವಾಗುವುದಿಲ್ಲ. ನುಗ್ಗೆಸೊಪ್ಪಿನಲ್ಲಿ ಆಯಂಟಿ ಓಕ್ಸಿಡೆಂಟ್ ಗಳು ಮತ್ತು ಅಧಿಕ ಪೋಷಕಾಂಶಗಳಿರುತ್ತವೆ. ಇವುಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾದ ಪ್ರೀ ರಾಡಿಕಲ್ಸ್ ವಿರುದ್ಧ ಹೋರಾಡಿ, ಕ್ಯಾನ್ಸರ್ ಕೋಶಗಳನ್ನು ಕಡಿಮೆ ಮಾಡುತ್ತವೆ.
ನಮ್ಮಲ್ಲಿ ನಾಲ್ಕೈದು ಕಾಮಕಸ್ತೂರಿ ಗಿಡಗಳಿವೆ. ಇದರಿಂದ ಮೊಸರುಗೊಜ್ಜು, ಪಲಾವ್ ಎಲ್ಲ ಒಮ್ಮೆ ಮಗಳು ಮಾಡಿದ್ದಳು. ನಳನಳಿಸಿ ಬೆಳೆದ ಎಲೆ ಕಂಡಾಗ ಇದರಿಂದ ತಂಬುಳಿ ಮಾಡಿ ನೋಡುವ ಎಂದು ತಯಾರಿಗೆ ಇಳಿದೆ. ಸೊಪ್ಪು ಕೊಯ್ಯುವಾಗ, ಮನ ಈ ಸೊಪ್ಪುಗಳ ಸುತ್ತವೇ ಗಿರಕಿ ಹೊಡೆಯುತ್ತಿತ್ತು. ಅಬ್ಬ ಮಾನವರು, ಎಷ್ಟು ಬಗೆಯ ಸೊಪ್ಪುಗಳನ್ನು ತಿನ್ನಲು ಬಳಸಿಕೊಳ್ಳುತ್ತಾರೆ ಎಂಬುದರ ಪಟ್ಟಿ ತಯಾರಿಗೆ ಇಳಿದೆ. ಓಹ್ ಲೆಕ್ಕದ ಪಟ್ಟಿ ಬಹಳ ಉದ್ದವಿದೆ ಅನಿಸಿತು.
೧) ಕಾಮಕಸ್ತೂರಿ ಎಲೆ ನಾಲ್ಕೈದು ಕುಡಿ ಕೊಯಿದು ತಂದೆ
೨) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಅದಕ್ಕೆ ಒಂದು ಚಮಚ ಜೀರಿಗೆ, ಆರೇಳು ಕಾಳುನೆಣಸು ಹಾಕಿ ಹುರಿದು, ಅದಕ್ಕೆ ಸೊಪ್ಪು ಹಾಕಿ ಬಾಡಿಸಿ.
೩) ಒಂದು ಕಪ್ ಕಾಯಿತುರಿಗೆ ಹುರಿದ ಮಿಶ್ರಣವನ್ನು ಹಾಕಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ ಮೊಸರು ಸೇರಿಸಿ ಒಗ್ಗರಣೆ ಕೊಡಬೇಕು. ತಂಬುಳಿ ರುಚಿಯಾಗುತ್ತದೆ. ಮದ್ದಿನ ಹಾಗಾದರೆ ಎಂದು ನಾನು ಹೆಚ್ಚು ಸೊಪ್ಪು ಹಾಕಿರಲಿಲ್ಲ. ಹಸಿಯಾಗಿದ್ದಾಗ ತೀಕ್ಷ್ಣ ಸುವಾಸನೆ ಇರುವ ಎಲೆ ಹುರಿದಮೇಲೆ ಅಷ್ಟೇನು ಪರಿಮಳ ಬೀರುವುದಿಲ್ಲ. ಧೈರ್ಯವಾಗಿ ಮಾಡಬಹುದು.
೬)ಹೀರೆಕಾಯಿಸಿಪ್ಪೆಯತಂಬುಳಿ
ಹೀರೆಕಾಯಿಸಿಪ್ಪೆಯಿಂದ ಹೆಚ್ಚಾಗಿ ಚಟ್ನಿಯನ್ನೇ ಮಾಡುವುದು. ಆದರೆ ಈ ಸಲ ಚಟ್ನಿಯ ಬದಲು ತಂಬುಳಿ ಮಾಡಿದೆ. ತಂಬುಳಿ ಬಲು ರುಚಿಯಾಗುತ್ತದೆ.
೧) ಒಂದು ಪಾತ್ರೆಯಲ್ಲಿ ಹೀರೆಸಿಪ್ಪೆಯನ್ನು ಹಾಕಿ, ನೀರು ಹಾಕಿ ಒಂದು ಚಮಚ ಜೀರಿಗೆ, ಒಂದು ಗಾಂಧಾರಿ (ಸೂಜಿ)ಮೆಣಸು ಹಾಕಿ ಕುದಿಸಿ.
೨) ಒಂದು ಕಪ್ ತೆಂಗಿನತುರಿಗೆ ಅವನ್ನು ಹಾಕಿ ನೀರು ಸೇರಿಸಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ. ಒಂದು ಲೋಟ ಮಜ್ಜಿಗೆ ಅಥವಾ ಮೊಸರು ಹಾಕಿ ಒಗ್ಗರಣೆ ಕೊಡಿ.
೭) ಗಾಂಧಾರಿ ಮೆಣಸಿನ ಎಲೆ ತಂಬುಳಿ
ಗಾಂಧಾರಿ ಮೆಣಸಿನೆಲೆಯ ತಂಬುಳಿ ಮಾಡಿದೆ. ಎಂದು ನಮ್ಮ ಸೋದರ ಮಾವನ ಮಗಳು ದೇವಿ ನಮ್ಮ ವಾಟ್ಸಪ್ ಗುಂಪಿನಲ್ಲಿ ಹಾಕಿದ್ದಳು. ನಮ್ಮಲ್ಲೂ ಒಂದು ಗಿಡವಿದೆ. ಅದರಲ್ಲಿ ಎಲೆಗಳು ಜಾಸ್ತಿ ಇಲ್ಲದಿದ್ದರೂ, ಪ್ರಯೋಗಿಸಲೇಬೇಕು ಎಂಬ ಆತುರದಿಂದ ಇರುವ ಎಲೆಗಳನ್ನು ಹತ್ತಾರು ಕೊಯಿದು ಪ್ರಯೋಗಕ್ಕಿಳಿದೇ ಬಿಟ್ಟೆ. ತಂಬುಳಿ ರುಚಿಯಾಗುತ್ತದೆ.
೧) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದು ಚಮಚ ಜೀರಿಗೆ,ಗಾಂಧಾರಿ ಮೆಣಸಿನ ಎಲೆ ಸ್ವಲ್ಪ, ಒಂದು ಗಾಂಧಾರಿಮೆಣಸು ಹಾಕಿ ಹುರಿಯಿರಿ.
೨) ಒಂದು ಕಪ್ ತೆಂಗಿನತುರಿಗೆ ಅವನ್ನು ಹಾಕಿ ನೀರು ಸೇರಿಸಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ. ಒಂದು ಲೋಟ ಮಜ್ಜಿಗೆ ಅಥವಾ ಮೊಸರು ಹಾಕಿ ಒಗ್ಗರಣೆ ಕೊಡಿ.
ಊಟ ಮಾಡುತ್ತಿರುವಾಗ ಅಜ್ಜ, ಮೊಮ್ಮಗನಿಗೆ ಸಾಂಬಾರು ತೋರಿಸಿ, ಇದು ತಂಬುಳಿ ಎಂದರು. ಅಲ್ಲಜ್ಜ, ತಂಬುಳಿ ಹಸುರು ಇರ್ತು ಎಂದು ಪುಟ್ಟ ಮೊಮ್ಮಗ ಅಜ್ಜನಿಗೆ ಪಾಠ ಮಾಡಿದ!
೮) ಅಮೃತ ಬಳ್ಳಿಎಲೆ ತಂಬುಳಿ
ಅಮೃತಬಳ್ಳಿಯ ಚಿಗುರಿನಿಂದ ತಂಬುಳಿ ಆಗಾಗ ಮಾಡುತ್ತಿರುತ್ತೇನೆ. ಅಂಗಳದಲ್ಲಿ ಹಬ್ಬಿದ ಎಳೆ ಎಲೆಯನ್ನು ಕೊಯಿದೆ.
೧) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದು ಚಮಚ ಜೀರಿಗೆ, ೮-೧೦ ಒಳ್ಳೆಮೆಣಸು ಹಾಕಿ ಹುರಿಯಿರಿ. ಅದಕ್ಕೆ ಹತ್ತು ಅಮೃತಬಳ್ಳಿ ಚಿಗುರೆಲೆ ಕೊಯಿದು ತೊಳೆದು ಹಾಕಿ
೨) ಒಂದು ಕಪ್ ತೆಂಗಿನತುರಿಗೆ ಅವನ್ನು ಹಾಕಿ ನೀರು ಸೇರಿಸಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ. ಒಂದು ಲೋಟ ಮಜ್ಜಿಗೆ ಅಥವಾ ಮೊಸರು ಹಾಕಿ ಒಗ್ಗರಣೆ ಕೊಡಿ. ನಾಲಗೆಗೆ ನಸುಕಹಿಯ ಈ ತಂಬುಳಿ ಉದರಕ್ಕೆ ಬಲು ಸಿಹಿ.
(ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ; ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ’ಅ- ಮೃತ’ ಎಂಬ ಹೆಸರು. ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು. ಇದರ ಪತ್ರೆ ಹಸಿರು ಮತ್ತು ಹೃದಯದಾಕಾರದಲ್ಲಿದೆ. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿ ಅಮೃತ ಸಮಾನವಾದುದು. ಇದು ತ್ರಿದೋಷಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ. ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವನೆಗೆ ಮುಂಚೆ) ಸೇವಿಸಬೇಕು. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗ ತುಳಸಿ, ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ). ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ)
ಮಾಹಿತಿಕೃಪೆ:ವಿಕಿಪೀಡಿಯ
೯) ನೆರುಗಳ ಸೊಪ್ಪಿನ ತಂಬುಳಿ
ನೆರುಗಳ ಸೊಪ್ಪು ದ.ಕ.ಜಿಲ್ಲೆಯವಳಾದ ನನಗೆ ಇದು ಹೊಸದು. ಇದು ಕೇರಳದಲ್ಲಿ ಹೆಚ್ಚು ಬಳಕೆಯಲ್ಲಿದೆಯೆಂದು ನನ್ನ ಅನಿಸಿಕೆ. ಮಗಳು ಒಮ್ಮೆ ದೂರವಾಣಿಯಲ್ಲಿ ಈ ಸೊಪ್ಪಿನ ಬಗ್ಗೆ ಹೇಳಿದ್ದಳು. ಅಳಿಯ ಒಮ್ಮೆ(ಕೇರಳದ ಕುಂಬಳೆ ಬಳಿ ಮನೆ) ಈ ಸೊಪ್ಪು ತಂದು ಕೊಟ್ಟಿದ್ದ. ಅದರ ಗೆಲ್ಲನ್ನು ಇಲ್ಲಿ ನೆಟ್ಟಿದ್ದೆ. ಈಗ ಚಿಗುರೊಡೆದಿದೆ.
೧) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದು ಚಮಚ ಜೀರಿಗೆ, ೮-೧೦ ಒಳ್ಳೆಮೆಣಸು ಹಾಕಿ ಹುರಿಯಿರಿ. ಅದಕ್ಕೆ ಒಂದು ಮುಷ್ಟಿಯಷ್ಟು ನೆರುಗಳ ಸೊಪ್ಪನ್ನು ಕೊಯಿದು ತೊಳೆದು ಹಾಕಿಬಾಡಿಸಿ.
೨) ಒಂದು ಕಪ್ ತೆಂಗಿನತುರಿಗೆ ಅವನ್ನು ಹಾಕಿ ನೀರು ಸೇರಿಸಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ. ಒಂದು ಲೋಟ ಮಜ್ಜಿಗೆ ಅಥವಾ ಮೊಸರು ಹಾಕಿ ಒಗ್ಗರಣೆ ಕೊಡಿ.
ಇದರ ತವರು ಭಾರತ, ಆಯುರ್ವೇದ ಔಷಧಿ ಸಸ್ಯವಾದ ಇದು ಅಗ್ನಿಮಂಥ ಎಂಬ ಹೆಸರನ್ನು ಹೊಂದಿದೆ. ಬಾಟನಿ ತಜ್ಞರು ಪ್ರಮ್ನಾ ಇಂಟಗ್ರಿಫೋಲಿಯಾ –
premnaintegrifolia ಎಂದಿದ್ದಾರೆ.ಈ ನೆರುಗಳ ಸಸ್ಯದ ಬೇರಿನಿಂದ ಹಿಡಿದು ಕುಡಿ ಎಲೆಗಳೂ ಆಯುರ್ವೇದೀಯ ಪದ್ಧತಿಯಲ್ಲಿ ಚಿಕಿತ್ಸಕ ಗುಣವುಳ್ಳದ್ದಾಗಿದೆ,
Verbenaceae ಕುಟುಂಬಕ್ಕೆ ಸೇರಿದೆ, Premna integrifolia ಎಂಬ ಹೆಸರನ್ನು ಸಸ್ಯಶಾಸ್ತ್ರಜ್ಞರು ನೀಡಿದ್ದಾರೆ.
ಇದರ ವೈದ್ಯಕೀಯ ಗುಣವಿಶೇಷಗಳನ್ನು ತಿಳಿದಂತಹ ಪಂಡಿತೋತ್ತಮರಿಂದ ಅರಿತುಕೊಳ್ಳುವುದೇ ಉತ್ತಮ.
೧೦) ಗೆಣಸಿನ ಎಲೆ ತಂಬುಳಿ
. ಗೆಣಸಿನ ಎಲೆಯಿಂದ ತಂಬುಳಿ ಮಾಡಬೇಕೆಂದು ತುಂಬ ಸಮಯದಿಂದ ಯೋಚನೆ ಇತ್ತು. ಪ್ರಯೋಗ ಮಾಡಲು ಆಗಿರಲಿಲ್ಲ. ಇವತ್ತು ಹಿತ್ತಲಲ್ಲಿ ಅಡ್ಡಾಡುವಾಗ ಬಹುದಿನಗಳ ಆಸೆಯನ್ನು ಗೆಣಸಿನ ಎಲೆ ನೆನಪಿಸಿತು. ಎಲೆ ಕೊಯಿದು ತಂದು ಪ್ರಯೋಗಕ್ಕೆ ಇಳಿದೆ.
೧) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದು ಚಮಚ ಜೀರಿಗೆ, ೮-೧೦ ಒಳ್ಳೆಮೆಣಸು ಹಾಕಿ ಹುರಿಯಿರಿ. ಅದಕ್ಕೆ ಒಂದು ಮುಷ್ಟಿಯಷ್ಟು ಗೆಣಸಿನ ಎಳೆ ಎಲೆಗಳನ್ನು ಕೊಯಿದು ತೊಳೆದು ಹಾಕಿ ಬಾಡಿಸಿ.
೨) ಒಂದು ಕಪ್ ತೆಂಗಿನತುರಿಗೆ ಅವನ್ನು ಹಾಕಿ ನೀರು ಸೇರಿಸಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ. ಒಂದು ಲೋಟ ಮಜ್ಜಿಗೆ ಅಥವಾ ಮೊಸರು ಹಾಕಿ ಒಗ್ಗರಣೆ ಕೊಡಿ.
ತಂಬುಳಿ ರುಚಿಯಾಗಿಯೇ ಇತ್ತು. ತಮ್ಮ ಊಟಕ್ಕೆ ಕುಳಿತಿದ್ದಾಗ, ಇದು ಯಾವುದರ ತಂಬುಳಿ ಗೊತ್ತಾಗುತ್ತದ? ಕೇಳಿದೆ. ಇಲ್ಲ ಎಂದ.
ಅನಂತ ತಂಬುಳಿ ಅನ್ನಕ್ಕೆ ಹಾಕಿಕೊಳ್ಳುತ್ತ, ಕೇಳಿ ತಿಳಿದುಕೊ. ಮತ್ತೆ ಊರಿಗೆ ಹೋಗಿ ಹೊಟ್ಟೆ ಗುಡು ಗುಡು ಆಗಿ ಪಂಡಿತರ ಹತ್ತಿರ ಹೋದಾಗ, ಅವರು ಎಂತ ಊಟ ಮಾಡಿದೆ ಎಂದರೆ ಹೇಳಲು ಗೊತ್ತಿರಬೇಕಲ್ಲ ಎಂದ!
೧೧) ಹೊನಗೊನೆಸೊಪ್ಪಿನ ತಂಬುಳಿ
೧) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದು ಚಮಚ ಜೀರಿಗೆ, ೮-೧೦ ಒಳ್ಳೆಮೆಣಸು ಹಾಕಿ ಹುರಿಯಿರಿ. ಅದಕ್ಕೆ ಒಂದು ಮುಷ್ಟಿಯಷ್ಟು ಹೊನಗೊನೆ ಸೊಪ್ಪನ್ನು ಕೊಯಿದು ತೊಳೆದು ಹಾಕಿ ಬಾಡಿಸಿ.
೨) ಒಂದು ಕಪ್ ತೆಂಗಿನತುರಿಗೆ ಅವನ್ನು ಹಾಕಿ ನೀರು ಸೇರಿಸಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ. ಒಂದು ಲೋಟ ಮಜ್ಜಿಗೆ ಅಥವಾ ಮೊಸರು ಹಾಕಿ ಒಗ್ಗರಣೆ ಕೊಡಿ.
ಇದರ ವೈಜ್ಞಾನಿಕ ಹೆಸರು ಆಲ್ಟರ್ ನ್ಯಾಂಥೀರ ಸೆಸ್ಸಿಲಿಸ್. ಇದು ಅಮರಾಂಥೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಇತರ ಭಾಷೆಯಲ್ಲಿನ ಹೆಸರುಗಳು: ಕನ್ನಡ-ಹೊನಗೊನ್ನೆ, ಹೊನಗೊನೆ, ಸಂಸ್ಕೃತ-ಮತ್ಸ್ಯಾಕ್ಷಿ. ಹಿಂದಿ-ಮಕ್ಸೀ, ಮಛೇಛೀ; ತೆಲುಗು-ಪೂನ್ನಗಂಟಾಕು, ಪೂನ್ನಗಂಟಕುರ
೧೨) ಮಜ್ಜಿಗೆ ಹುಲ್ಲು ತಂಬುಳಿ
ಅದರ ಪಾಕೇತನ ಹೀಗಿದೆ
೧) ಏಳೆಂಟು ಹುಲ್ಲನ್ನು ಕೊಯಿದು ತೊಳೆದು ಹೆಚ್ಚಿ
೨) ಬಾಣಲೆಗೆ ತುಪ್ಪ ಹಾಕಿ, ಜೀರಿಗೆ, ಕಾಳುಮೆಣಸು ಕತ್ತರಿಸಿದ ಹುಲ್ಲು ಹಾಕಿ ಬಾಡಿಸಿ
೩) ಒಂದು ಕಪ್ ಕಾಯಿತುರಿಗೆ ಅವೆಲ್ಲವನ್ನೂ ಸೇರಿಸಿ ರುಬ್ಬಿ ತೆಗೆದು ಉಪ್ಪು, ಮಜ್ಜಿಗೆ ಹಾಕಿ ಒಗ್ಗರಣೆ ಕೊಡಿ.
೧೩) ವೀಳ್ಯದೆಲೆ ತಂಬುಳಿ
ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಮಾತ್ರೆಗೆ ಮೊರೆ ಹೋಗದೆ ದಿನಾ ವೀಳ್ಯದೆಲೆ ಜೊತೆಯಲ್ಲಿ ಬೆಲ್ಲ ತಿನ್ನಿ. ಎಂದು ಒಂದು ವೀಡಿಯೋದಲ್ಲಿ (ಫೇಸ್ಬುಕ್) ನೋಡಿದೆ. ನಮ್ಮ ಹಿತ್ತಲಲ್ಲಿ ದಾರಾಳವಾಗಿ ವೀಳ್ಯದೆಲೆ ಇದೆ. ಕ್ಯಾಲ್ಸಿಯಂ ಸೇವಿಸಿದ ಹಾಗೂ ಆಯಿತು, ಊಟಕ್ಕೆ ಒಂದು ವ್ಯಂಜನವೂ ಆಯಿತೆಂದು ವೀಳ್ಯದೆಲೆ ತಂಬುಳಿ ಮಾಡಿದೆ.
ಅದರ ಪಾಕೇತನ ಹೀಗಿದೆ
೧) ಏಳೆಂಟು ಚಿಗುರು ವೀಳ್ಯದೆಲೆ ಕೊಯಿದು ತೊಳೆದು ಹೆಚ್ಚಿ
೨) ಬಾಣಲೆಗೆ ತುಪ್ಪ ಹಾಕಿ, ಜೀರಿಗೆ, ಕಾಳುಮೆಣಸು ಕತ್ತರಿಸಿದ ವೀಳ್ಯದೆಲೆ ಹಾಕಿ ಬಾಡಿಸಿ
೩) ಒಂದು ಕಪ್ ಕಾಯಿತುರಿಗೆ ಅವೆಲ್ಲವನ್ನೂ ಸೇರಿಸಿ ರುಬ್ಬಿ ತೆಗೆದು ಉಪ್ಪು, ಮಜ್ಜಿಗೆ ಹಾಕಿ ಒಗ್ಗರಣೆ ಕೊಡಿ.
೧೪)ಕರಿಮೆಣಸಿನ ಎಲೆ ತಂಬುಳಿ
ಹಿಂದಿನ ಮನೆಯ ಜಯಶ್ರೀಯವರ ಹಿತ್ತಲಲ್ಲಿ ಇರುವ ಕರಿಮೆಣಸಿನ ಬಳ್ಳಿ ಹಬ್ಬುತ್ತ ನಮ್ಮ ಕಾರು ಶೆಡ್ ಗೋಡೆಗೇರಿ ಮೇಲೆ ತಾರಸಿಗೆ ಬಂದಿದೆ. ಜೊತೆಗೆ ನಮ್ಮಲ್ಲಿಯ ವೀಳ್ಯದೆಲೆ ಬಳ್ಳಿಯೂ ತಾನೇನು ಕಡಿಮೆ ಎಂಬಂತೆ ಜೊತೆಯಲ್ಲೇ ಹಬ್ಬಿದೆ. ಹಿಂದಿನ ಮನೆಯ ಮಹಡಿಯಲ್ಲಿರುವ ಸ್ನೇಹಿತೆ ಮಂಜುಳಾ ಮಾತಾಡುತ್ತ, ನಾಲ್ಕು ವೀಳ್ಯದೆಲೆ ಕೊಡಿ ಎಂದರು. ವೀಳ್ಯದೆಲೆ ಕೊಡುತ್ತ, ಕರಿಮೆಣಸಿನ ಬಳ್ಳಿ ಬಗ್ಗೆ ಮಾತು ಬಂತು. ಅದರ ಎಲೆಯಿಂದ ಏನೂ ಮಾಡುವುದಿಲ್ಲವೆ? ಎಂದು ಕೇಳಿದರು. ಆಗ ಎಲೆಯಿಂದ ತಂಬುಳಿ ಮಾಡಿ ನೋಡಿದರೆ ಹೇಗೆ ಎಂದು ಜಗ್ಗನೆ ಹೊಳೆಯಿತು.
ಕರಿಮೆಣಸಿನ ಐದಾರು ಎಳೆ ಎಲೆಯನ್ನು ಕೊಯಿದೆ. (ಬಳ್ಳಿ ಜಯಶ್ರೀ ಅವರದಾದರೂ ನಮ್ಮಲ್ಲಿಗೆ ಹಬ್ಬಿದ್ದರಿಂದ (ಶ್ರೀಕೃಷ್ಣಪಾರಿಜಾತದ ನಿಯಮದಂತೆ) ಅದರಲ್ಲಿ ನಮಗೂ ಪಾಲಿದೆ ಎಂದು ಅವರನ್ನು ಕೇಳದೆಯೇ ಎಲೆ ಕೊಯಿದೆ. ಹಾಗೆ ತಂಬುಳಿ ಮಾಡಿದೆ.
ಅದರ ಪಾಕೇತನ ಹೀಗಿದೆ
೧) ಏಳೆಂಟು ಚಿಗುರು ಕರಿಮೆಣಸಿನ ಎಲೆ ಕೊಯಿದು ತೊಳೆದು ಹೆಚ್ಚಿ
೨) ಬಾಣಲೆಗೆ ತುಪ್ಪ ಹಾಕಿ, ಜೀರಿಗೆ, ಕತ್ತರಿಸಿದ ಎಲೆ ಹಾಕಿ ಬಾಡಿಸಿ
೩) ಒಂದು ಕಪ್ ಕಾಯಿತುರಿಗೆ ಅವೆಲ್ಲವನ್ನೂ ಸೇರಿಸಿ ರುಬ್ಬಿ ತೆಗೆದು ಉಪ್ಪು, ಮಜ್ಜಿಗೆ ಹಾಕಿ ಒಗ್ಗರಣೆ ಕೊಡಿ.
ಕರಿಮೆಣಸಿನ ಎಲೆಯಲ್ಲೂ ಘಮ ಇದ್ದು ತಂಬುಳಿ ಬಹಳ ರುಚಿಯಾಗುತ್ತದೆ.
೧೪) ಕೊತ್ತಂಬರಿಸೊಪ್ಪಿನತಂಬುಳಿ
ನಮಗೆ ನಿತ್ಯ ಹಾಲು ಹಾಕುವ ಮಹದೇವ ಅವರು ಎರಡು ದಿನ (ಬಹಳ ಅಪರೂಪಕ್ಕೆ) ರಜ ಹಾಕಿದ್ದಾರೆ. ಹಾಗೆ ಬೆಳಗ್ಗೆ ಹಾಲು ತರುವ ಕೆಲಸ ಅನಂತನದು. ಹಾಲಿನ ಜೊತೆ, ಎರಡು ಕಟ್ಟು ಪುದೀನ, ೩ ಕಟ್ಟು ಕೊತ್ತಂಬರಿ ಸೊಪ್ಪು ತಂದು ಇಟ್ಟಿದ್ದ. ಹಾಲಿನ ಅಂಗಡಿಯವನು ಸೊಪ್ಪು ಕೊಳ್ಳಿ, ಚೆನ್ನಾಗಿದೆ ಎಂದನಂತೆ. ಹಾಗಾಗಿ ಕೊಂಡುಕೊಂಡನಂತೆ! ಅಲ್ಲಿ ಮತ್ತೂ ಎರಡು ಬಗೆಯ ಸೊಪ್ಪು ಇತ್ತು ತರಲಿಲ್ಲ ಎಂದ! ಮಸ್ತಾಗಿ ಸೊಪ್ಪು ಇದೆಯೆಂದು ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡಿದೆ.
೧) ಕೊತ್ತಂಬರಿಸೊಪ್ಪು ತೊಳೆದು ಬೇರು, ಕಸ ಬೇರ್ಪಡಿಸಬೇಕು.
೨) ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದು ಚಮಚ ಜೀರಿಗೆ ಹಾಕಿ ಬಿಸಿ ಆದಮೇಲೆ ಅದಕ್ಕೆ ತೊಳೆದಿಟ್ಟ ಸೊಪ್ಪನ್ನು ಹಾಕಿ ಬಾಡಿಸಿ. ಒಂದು ಗಾಂಧಾರಿಮೆಣಸು (ಸೂಜಿಮೆಣಸು)ಹಾಕಿ
೩) ಒಂದು ಕಪ್ ಕಾಯಿತುರಿಗೆ ಹುರಿದು,ಬಾಡಿಸಿದ ಸಾಮಾಗ್ರಿಗಳನ್ನು ಹಾಕಿ ರುಬ್ಬಿ. ಬೇಕಷ್ಟು ನೀರು, ಉಪ್ಪು ಸೇರಿಸಿ, ಮಜ್ಜಿಗೆ ಅಥವಾ ಮೊಸರು ಹಾಕಿ ಕದಡಿ ಒಗ್ಗರಣೆ ಹಾಕಿದರಾಯಿತು. ಘಮಘಮ ತಂಬುಳಿ ಸವಿಯಬಹುದು.
೧೫)ಗಣಿಕೆಸೊಪ್ಪಿನತಂಬುಳಿ
ಗಣಿಕೆ ಸೊಪ್ಪು ಉದರಕ್ಕೆ ಬಹಳ ಹಿತ. ಅದರ ತಂಬುಳಿ ಮಾಡಿದೆ.
೧) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದು ಚಮಚ ಜೀರಿಗೆ, ೮-೧೦ ಒಳ್ಳೆಮೆಣಸು ಹಾಕಿ ಹುರಿಯಿರಿ. ಅದಕ್ಕೆ ಗಣಿಕೆ ಸೊಪ್ಪು ಕೊಯಿದು ತೊಳೆದು ಹಾಕಿ
೨) ಒಂದು ಕಪ್ ತೆಂಗಿನತುರಿಗೆ ಅವನ್ನು ಹಾಕಿ ನೀರು ಸೇರಿಸಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ. ಒಂದು ಲೋಟ ಮಜ್ಜಿಗೆ ಅಥವಾ ಮೊಸರು ಹಾಕಿ ಒಗ್ಗರಣೆ ಕೊಡಿ.
೧೬) ಗಣಿಕೆಕಾಯಿತಂಬುಳಿ
ಗಣಿಕೆಸೊಪ್ಪು ಹೆಸರೇ ಸೂಚಿಸುವಂತೆ ಆರೋಗ್ಯದ ಗಣಿ. ಗೌತಮ ಅವರಲ್ಲಿಂದ ಗಣಿಕೆ ಸೊಪ್ಪು ಕೊಟ್ಟಿದ್ದರು. ಸೊಪ್ಪಿನ ಪಲ್ಯ ಮಾಡಿದೆ. ಅದರಲ್ಲಿ ಕಾಯಿಗಳೂ ಇತ್ತು. ಅವನ್ನೆಲ್ಲ ಬಿಡಿಸಿಟ್ಟು ತಂಬುಳಿ ಮಾಡಿದೆ. ನಮ್ಮ ಮೊಮ್ಮಗನಿಗೆ ತಂಬುಳಿ ಬಹಳ ಇಷ್ಟ. ಒಣಕೆಮ್ಮಿಗೆ ಗಣಿಕೆಸೊಪ್ಪು ರಾಮಬಾಣ.
೧)ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಒಂದು ಚಮಚ ಜೀರಿಗೆ, ನಾಲ್ಕೈದು ಕಾಳುಮೆಣಸು ಹಾಕಿ ಹುರಿದು, ಅದಕ್ಕೆ ಗಣಿಕೆಕಾಯಿ ಸೇರಿಸಿ ಬಾಡಿಸಿ.
೨) ಒಂದು ಕಪ್ ಕಾಯಿತುರಿಗೆ ಹುರಿದ ಸಾಮಾಗ್ರಿಗಳನ್ನು ಹಾಕಿ ರುಬ್ಬಿ. ಬೇಕಷ್ಟು ನೀರು ಸೇರಿಸಿ., ಎರಡು ಸೌಟು ಮೊಸರು ಅಥವಾ ಮಜ್ಜಿಗೆ ಬೆರೆಸಿ.
೩) ಒಗ್ಗರಣೆ ಕೊಡಿ.
೧೭)ನೆಲನೆಲ್ಲಿತಂಬುಳಿ
ಕೊರೊನಾನಂತರ ನೆಲನೆಲ್ಲಿ ಬಹಳ ಪ್ರಸಿದ್ಧಿಗೆ ಬಂದಿದೆ. ಗಿಡ ಸಣ್ಣದಾದರೂ ಔಷಧೀಯ ಗುಣ ಬ್ರಹ್ಮಾಂಡ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಮ್ಮಲ್ಲಿ ಸುಮಾರು ಗಿಡ ತಾನಾಗಿಯೇ ಹುಟ್ಟಿಕೊಂಡಿದೆ. ಇವತ್ತಿನ ತಂಬುಳಿ ಇದರಿಂದಲೇ ತಯಾರಿಸಿದೆ.
೧) ನೆಲನೆಲ್ಲಿ ಕೊಯಿದು ತೊಳೆದಿಡಬೇಕು. ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದೊಂದು ಚಮಚ ಜೀರಿಗೆ, ಕರಿಮೆಣಸು ಹಾಕಿ ಹುರಿದುಕೊಂಡು, ಅದಕ್ಕೆ ತೊಳೆದಿಟ್ಟ ನೆಲನೆಲ್ಲಿ ಹಾಕಿ ಬಾಡಿಸಿಕೊಳ್ಳಬೇಕು.
೨) ಒಂದು ಕಪ್ ಕಾಯಿತುರಿಗೆ ಹುರಿದಿಟ್ಟದ್ದನ್ನೆಲ್ಲ ಹಾಕಿ ರುಬ್ಬಬೇಕು. ಬೇಕಷ್ಟು ನೀರು, ಉಪ್ಪು ಸೇರಿಸಿ, ಮಜ್ಜಿಗೆ ಬೆರೆಸಿ, ಒಗ್ಗರಣೆ ಕೊಡಬೇಕು.
ನೆಲನೆಲ್ಲಿ ಬಗ್ಗೆ ಕಿರುಮಾಹಿತಿ. ಕೃಪೆ: ವಿಕಿಪೀಡಿಯ: ನೆಲನೆಲ್ಲಿಯು ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದೆ.
ಔಷಧೀಯ ಗುಣಗಳು: ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ಸಿದ್ಧ ವೈದ್ಯ ಪದ್ಧತಿಯಲ್ಲಿ ನೆಲನೆಲ್ಲಿಯನ್ನು ದಶಕಗಳ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತದೆ. ಯುನಾನಿ ವೈದ್ಯಪದ್ಧತಿಯಲ್ಲಿ ಗಾಯ, ಕಜ್ಜಿ ಮತ್ತು ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಬಳಸಲಾಗುತ್ತದೆ.
ಭೇದಿಯಾಗುತ್ತಿದ್ದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೊಂದು ಬಾರಿ ಕುಡಿಯಬೇಕು ಇಲ್ಲವೇ ಹಾಗೆಯೇ ತಿನ್ನಬಹುದು.
ಗಾಯಗಳಾಗಿದ್ದಲ್ಲಿ ಈ ಗಿಡವನ್ನು ಬೇರು ಸಹಿತ ಜಜ್ಜಿ ಲೇಪಿಸಬೇಕು.
ಚರ್ಮರೋಗಗಳಲ್ಲಿ ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಲೇಪಿಸುವುದರಿಂದ ನವೆ ಕಡಿಮೆಯಾಗುತ್ತದೆ. ನೆಲನೆಲ್ಲಿಯು ಕುಷ್ಠ, ಆಸ್ತಮಾ, ಬಿಕ್ಕಳಿಕೆ ನಿವಾರಣೆಯಲ್ಲಿಯೂ ಉಪಯುಕ್ತ ಔಷಧಿಯಾಗಿದೆ. ಹೊಟ್ಟೆನೋವು: ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದಲ್ಲಿ ನೆಲನೆಲ್ಲಿ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ತುಪ್ಪದಲ್ಲಿ ಹುರಿದ ಇಂಗಿನ ಪುಡಿಯನ್ನು ಒಂದು ಚಿಟಿಕೆ ಬೆರೆಸಿ ಕುಡಿಯಬೇಕು. ಅತಿರಕ್ತಸ್ರಾವ: ಮಾಸಿಕಸ್ರಾವದ ಸಮಯದಲ್ಲಿ ಅತಿರಕ್ತಸ್ರಾವವಾಗುತ್ತಿದ್ದಲ್ಲಿ ನೆಲನೆಲ್ಲಿಯ ಚಟ್ನಿಯನ್ನು ಆಹಾರದಲ್ಲಿ ಸೇವಿಸುವುದಲ್ಲದೇ ನೆಲನೆಲ್ಲಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು. ರೋಗನಿರೋಧಕ ಶಕ್ತಿ: ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕಾಲರ, ಚಿಕುನ್ಗುನ್ಯಾ, ಡೆಂಗೆ ಮುಂತಾದ ಕಾಯಿಲೆಗಳು ಹರಡಿದ್ದ ಸಮಯದಲ್ಲಿ ಆರೋಗ್ಯವಂತರು ನೆಲನೆಲ್ಲಿಯ ಕಷಾಯ ಇಲ್ಲವೇ ರಸ ಕುಡಿಯುವುದರಿಂದ ಕಾಯಿಲೆ ಬಾರದಂತೆ ತಡೆಯಬಹುದು.
೧೮)ದೊಡ್ಡಪತ್ರೆತಂಬುಳಿ
ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ನಮಗೆ ಅನ್ವಯಿಸುವುದಿಲ್ಲ. ನಾವು ಹಿತ್ತಲ ಗಿಡದ ಮದ್ದನ್ನು ಉಪಯೋಗಿಸುತ್ತಲೇ ಇರುತ್ತೇವೆ! ನಮ್ಮ ಹಿತ್ತಲಲ್ಲೇ ಧಾರಾಳವಾಗಿ ದೊಡ್ಡಪತ್ರೆ ಇದೆ. ಅದರ ಸುವಾಸನೆ ಯೌವನದಲ್ಲಿ ಅಷ್ಟಾಗಿ ಹಿಡಿಸಿರಲಿಲ್ಲ. ಈಗ ನನ್ನ ಮನ ಹಾಗೂ ಬಾಯಿರುಚಿ (ಮೂಗು)ಮಾಗಿದೆ! ದೊಡ್ಡಪತ್ರೆ ತಂಬುಳಿ ಮಾಡಲು ಒಂದು ಮುಷ್ಟಿಯಷ್ಟು ಸೊಪ್ಪು ಕೊಯಿದು ತೊಳೆಯಬೇಕು.
೧) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಒಂದು ಚಮಚ ಜೀರಿಗೆ, ೮-೧೦ ಒಳ್ಳೆಮೆಣಸು ಹಾಕಿ ಹುರಿಯಿರಿ. ಅದಕ್ಕೆ ಒಂದು ಮುಷ್ಟಿಯಷ್ಟು ದೊಡ್ಡಪತ್ರೆ ಎಲೆಗಳನ್ನು ತೊಳೆದು ಹಾಕಿ ಬಾಡಿಸಿ.
೨) ಒಂದು ಕಪ್ ತೆಂಗಿನತುರಿಗೆ ಅವನ್ನು ಹಾಕಿ ನೀರು ಸೇರಿಸಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ. ಒಂದು ಲೋಟ ಮಜ್ಜಿಗೆ ಅಥವಾ ಮೊಸರು ಹಾಕಿ ಒಗ್ಗರಣೆ ಕೊಡಿ.
೧೯) ಗಂಧದಸೊಪ್ಪಿನ ತಂಬುಳಿ
ತಾರಸಿಮೇಲೆ ಹತ್ತಿದಾಗ, ಗಂಧದ ಚಿಗುರೆಲೆ ಸಮೃದ್ಧವಾಗಿರುವುದು ಕಂಡಿತು. ಒಂದು ಮುಷ್ಟಿಯಷ್ಟು ಎಲೆ ಕೊಯಿದೆ. ತಂಬುಳಿ ಮಾಡ್ಲಾ ಎಂದು ಪುಟ್ಟ ಮೊಮ್ಮಗ ಕೇಳಿದ. ಹೌದು. ತಂಬುಳಿ ಮಾಡುವ ಎಂದೆ. ಕಾರ ಮಾಡೆಡ ಎಂದು ಹೇಳಿದ!
೧) ಗಂಧದ ಸೊಪ್ಪನ್ನು ತೊಳೆದಿಡಿ
೨) ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಜೀರಿಗೆ ಒಂದು ಚಮಚ, ನಾಲ್ಕು ಕಾಳು ಮೆಣಸು, ಒಂದು ಗಾಂಧಾರಿ ಮೆಣಸು ಹಾಕಿ ಹುರಿಯಿರಿ, ಅದಕ್ಕೆ ಗಂಧದ ಸೊಪ್ಪು ಹಾಕಿ ಬಾಡಿಸಿ.
೩) ಒಂದು ಕಪ್ ಕಾಯಿತುರಿಗೆ ಹುರಿದ ಸಾಮಾಗ್ರಿ ಹಾಕಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು, ಮಜ್ಜಿಗೆ ಅಥವಾ ಮೊಸರು ಹಾಕಿ. ಒಗ್ಗರಣೆ ಹಾಕಿದರೆ ಮುಗಿಯಿತು. ಹಸುರಾದ ತಂಬುಳಿ ಅನ್ನದ ಜೊತೆ ಹಾಕಿ ಕಲಸಿ ಊಟ ಮಾಡಬಹುದು.
೨೦)ಸಿಹಿಗುಂಬಳಬೀಜ ತಿರುಳು ತಂಬುಳಿ
ಸಿಹಿಗುಂಬಳದ ತಿರುಳು ಬೀಜಗಳನ್ನು ನಾನು ಎಸೆಯುವುದಿಲ್ಲ. ಅದರಿಂದ ಚಟ್ನಿ ಮಾಡುತ್ತಿದ್ದೆ. ನಾವು ಬಾಲ್ಯದಲ್ಲಿ ಬೀಜವನ್ನು ಹುರಿದು ತಿನ್ನುತ್ತಿದ್ದದ್ದು ನೆನಪಿಗೆ ಬಂತು. ಕುಂಬಳ ಬೀಜ ಮೂಳೆ ಬೆಳವಣಿಗೆಗೆ ಬಹಳ ಒಳ್ಳೆಯದು. ಮಕ್ಕಳಿಗೆ ಅವಶ್ಯ ಕೊಡಬೇಕು ಎಂದು ಸುವರ್ಣ ಟಿವಿಯ ಬೊಂಬಾಟ್ ಭೋಜನದಲ್ಲಿ ಡಾ. ಗೌರಿ ಸುಬ್ರಹ್ಮಣ್ಯ ಅವರು ಹೇಳಿದ್ದಾರೆ. ಅಂಥ ಪೌಷ್ಟಿಕಾಂಶ ವನ್ನು ಬೀಸಾಕುವುದುಂಟೆ ಎಂದು ಇವತ್ತು ತಂಬುಳಿ ಪ್ರಯೋಗ ಮಾಡಿದೆ.
೧) ಬೀಜ ತಿರುಳನ್ನು ಪಾತ್ರೆಗೆ ಹಾಕಿ ನೀರು ಹಾಕಿ ಕುದಿಸಿ
೨) ಬಾಣಲೆಗೆ ತುಪ್ಪ ಹಾಕಿ, ಜೀರಿಗೆ, ಒಳ್ಳೆಮೆಣಸು ಹಾಕಿ ಹುರಿಯಿರಿ.
೩) ಮಿಕ್ಸಿಗೆ ಸ್ವಲ್ಪ ಕಾಯಿತುರಿ, ಹುರಿದದ್ದನ್ನು ಹಾಕಿ, ತಿರುಳು ಬೀಜವನ್ನು ಹಾಕಿ ರುಬ್ಬಿ ತೆಗೆದು ಬೇಕಷ್ಟು ನೀರು, ಮಜ್ಜಿಗೆ ಬೆರೆಸಿ, ಉಪ್ಪು ಹಾಕಿ ಒಗ್ಗರಣೆ ಹಾಕಬೇಕು. ಪೌಷ್ಟಿಕಾಂಶ ಬೆರೆತ ತಂಬುಳಿ ಅನ್ನದೊಂದಿಗೆ ಕಲಸಿ ಹೊಟ್ಟೆ ಸೇರಲಿ.
ಅರಿಸಿನ: ಮುಖ್ಯವಾದ ಸಾಂಬಾರ ಬೆಳೆಗಳಲ್ಲೊಂದು. ಜಿಂಜಿಎರೇಶೀ ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ. ಕರ್ಕ್ಯೂಮ ಲಾಂಗ ಇದರ ವೈಜ್ಞಾನಿಕ ಹೆಸರು. ಟರ್ಮೆರಿಕ್ ಇಂಗ್ಲಿಷ್ ಹೆಸರು. ಶುಂಠಿ ಬೆಳೆಯಂತೆಯೇ ಈ ಬೆಳೆಗೆ ಮತ್ತು ಭೂಮಿಯಲ್ಲಿ ಯಾವಾಗಲೂ ತೇವಾಂಶವಿರಬೇಕು.
ಇದರಲ್ಲಿ ಆಂಟಿ - ಆಕ್ಸಿಡೆಂಟ್, ಆಂಟಿ - ಬ್ಯಾಕ್ಟೀರಿಯಲ್, ಆಂಟಿ - ಫಂಗಲ್, ಆಂಟಿ - ವೈರಲ್, ಆಂಟಿ - ಕಾರ್ಸಿನೋಜೆನಿಕ್ ಮತ್ತು ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಹೊಂದಿವೆ. ಇನ್ನು ಖನಿಜಾಂಶಗಳ ವಿಷಯದಲ್ಲೂ ಅಷ್ಟೇ. ಹರಿಶಿಣ ರಾಜಿಯಾಗುವ ಮಾತೇ ಇಲ್ಲ. ಏಕೆಂದರೆ ಇದರಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಖನಿಜಾಂಶಗಳಾದ ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್, ಮೆಗ್ನೀಷಿಯಂ, ಜಿಂಕ್ ಮತ್ತು ಡಯೆಟರಿ ಫೈಬರ್ ಅಥವಾ ನಾರಿನ ಅಂಶ ಹೆಚ್ಚಾಗಿ ಸೇರಿಕೊಂಡಿದೆ. ವಿಟಮಿನ್ ಗಳಾದ ವಿಟಮಿನ್ ' ಸಿ ', ವಿಟಮಿನ್ ' ಇ ', ಮತ್ತು ವಿಟಮಿನ್ ' ಕೆ ' ಅಂಶಗಳು ಅರಿಶಿನದಲ್ಲಿ ಯಥೇಚ್ಛವಾಗಿವೆ. (ಮಾಹಿತಿ: ಅಂತರ್ಜಾಲ)
೧) ಒಂದು ಚಮಚ ತುಪ್ಪ ಬಾಣಲೆಗೆ ಹಾಕಿ, ಅದಕ್ಕೆ ಒಂದು ಚಮಚ ಜೀರಿಗೆ, ಆರೇಳು ಕರಿಮೆಣಸು ಸೇರಿಸಿ ಹುರಿಯಬೇಕು. ಅದಕ್ಕೆ ಅರಸಿನ ತುಂಡು ಮಾಡಿ ಬಾಡಿಸಿ.
೨) ಒಂದು ಕಪ್ ಕಾಯಿತುರಿಗೆ ಹುರಿದ ಸಾಮಾಗ್ರಿ ಸೇರಿಸಿ ನೀರು ಹಾಕಿ ರುಬ್ಬಿ.
೩) ರುಬ್ಬಿದ ಮಿಶ್ರಣಕ್ಕೆ ಬೇಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಜ್ಜಿಗೆ ಅಥವಾ ಮೊಸರು ಸೇರಿಸಿ. ಒಗ್ಗರಣೆ ಕೊಡಿ
೨೨)ಹೆರಳೆಕಾಯಿ ತಂಬುಳಿ
ನಮ್ಮಲ್ಲಿ ಹೆರಳೆಕಾಯಿ ಯಾನೆ ಕಂಚುಹುಳಿ ಗಿಡವಿದೆ. ಕಂಚುಳಿಯನ್ನು ಹೆಚ್ಚಿ ಉಪ್ಪು ಹಾಕಿ ಬಿಸಿಲಿನಲ್ಲಿ ನಾಲ್ಕೈದು ದಿನ ಇಟ್ಟು ಒಣಗಿಸಿ ಇಟ್ಟುಕೊಂಡು ಬೇಕಾದಾಗ ಅದರಿಂದ ತಂಬುಳಿ ತಯಾರಿಸುತ್ತೇವೆ.
ಇವತ್ತು ಅದರಿಂದ ತಂಬುಳಿ ತಯಾರಾಗಿದೆ.
೧) ಒಣ ಕಂಚುಳಿ ನಾಲ್ಕೈದು ತುಂಡನ್ನು ಒಂದು ಪಾತ್ರೆಗೆ ಹಾಕಿ ನೀರು ಹಾಕಿ, ಅದಕ್ಕೆ ಒಂದು ಚಮಚ ಜೀರಿಗೆ, ಕರಿಮೆಣಸು ಹಾಕಿ ಕುದಿಸಬೇಕು
೨) ಒಂದು ಕಪ್ ತೆಂಗಿನತುರಿಗೆ ಕುದಿಸಿಟ್ಟ ಕಂಚುಳಿಯನ್ನು ಹಾಕಿ ರುಬ್ಬಬೇಕು. ಬೇಕಷ್ಟು ನೀರು, ಉಪ್ಪು ಸೇರಿಸಿ, ಮಜ್ಜಿಗೆ ಬೆರೆಸಿ ಒಗ್ಗರಣೆ ಹಾಕಬೇಕು.
ಹೆರಳೆಕಾಯಿಯಲ್ಲಿ ಹೇರಳ ಪೌಷ್ಟಿಕಾಂಶ ವಿದೆ ಎಂದು ಅಂತರಜಾಲದಲ್ಲಿ ಜಾಲಾಡಿ ಮಾಹಿತಿ ಸಂಗ್ರಹಿಸಿದೆ.
ಸಿಟ್ರಸ್ ಜಾತಿಯ ರುಟಾಶಿಯಾ ಕುಟುಂಬವರ್ಗಕ್ಕೆ ಸೇರಿರುವ ಇದನ್ನು ಇಂಗ್ಲೀಷನಲ್ಲಿ ಸಿಟ್ರಿನ್ ಎಂದೂ ,ಹಿಂದಿಯಲ್ಲಿ ಬಡಾನಿಂಬು ಎಂದೂ ಕರೆಯುತ್ತಾರೆ .
ಈ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು: ಅಮೇರಿಕಾ ವಿಶ್ಲೇಷಣೆ ಪ್ರಕಾರ ಮತ್ತು ಪರ್ಡ್ಯೂ ತೋಟಗಾರಿಕೆ ಲೇಖನದ ಪ್ರಕಾರ ಹೇಳುವುದಾದರೆ ಈ ಹಣ್ಣಿನಲ್ಲಿ ಇರುವ ಪೌಷ್ಟಿಕಾಂಶಗಳು :೦.೦೪ಗ್ರಾಂ ಫ್ಯಾಟ್, .. .೦೮೧ಗ್ರಾಂಪ್ರೋಟೀನ್,೧.೧ಗ್ರಾಂ ಫೈಬರ್, ೩೬.೫ಮಿಲಿ ಗ್ರಾಂ ಕ್ಯಾಲ್ಸಿಯಂ, ೧೬ನಮಿಲಿ ಗ್ರಾಂ ಪಾಸ್ಪರಸ್ , .೫೫ಮಿಲಿ ಗ್ರಾಂ ಐರನ್ ,.೦೦೦೯ಮಿಲಿಗ್ರಾಮಂ ಕೆರೋಟಿನ್ ,.೦೫೨ಮಿಲಿ ಗ್ರಾಂ ಥಿಯಾಮೈನ್ / ಬಿ 1,.೦೨೯ಮಿಲಿ ಗ್ರಾಂ ಲಿಂಕಿಂಗ್,.೧೨೫ಮಿಲಿ ಗ್ರಾಂ ನಿಯಾಸಿನ್, ೩೬೮ ಮಿಲಿ ಗ್ರಾಂ ಆಸ್ಕೋರ್ಬಿಕ್ ಅಸಿಡ್.ವಿಟಮಿನ್ ಸಿ ಹೊಂದಿದೆ. ಅಲೋಪತಿ ಮಾತ್ರೆ ನುಂಗಿ ನಾಲಿಗೆ ರುಚಿಯನ್ನು ಗ್ರಹಿಸದಾದರೆ ಇದನ್ನು ನಾಲಿಗೆಯಲ್ಲಿ ನೆಕ್ಕುವುದರಿಂದ ಗುಣಪಡಿಸಬಹುದಾಗಿದೆ. ಅಜೀರ್ಣ ಸಮಸ್ಯೆಗೆ ಇದು ಒಂದು ರೀತಿಯ ಪರಿಹಾರ. ಆಹಾರದ ಬಳಕೆಯಲ್ಲಿ ಇವುಗಳನ್ನು ಪ್ರಮುಖವಾಗಿ ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ರಸವನ್ನು ಚಿತ್ರಾನ್ನ , ರಸಂ, ಸಾರು, ಗೊಜ್ಜು, ಚಟ್ನಿ, ಜ್ಯೂಸ್ ,ಪಾನಕ ತಯಾರಿಕೆಯಲ್ಲಿ ಬಳಸುತ್ತಾರೆ. . ಇದು ಹೊಟ್ಟೆ, ಜೀರ್ಣಾಂಗ ವ್ಯವಸ್ಥೆ, ಗಂಟಲು ಮತ್ತು ಹೃದಯದ , ಕಫ ಮತ್ತು ವಾತ ರೋಗ ಚಿಕಿತ್ಸೆಗೆ ಸಹಾಯಕಾರಿ.
೨೩) ಪುನರ್ಪುಳಿ ಸಿಪ್ಪೆ ತಂಬುಳಿ
ಪುನರ್ಪುಳಿ ಸಿಪ್ಪೆಯಲ್ಲಿ ಔಷಧೀಯ ಗುಣವಿದೆ. ಅದು ಪಿತ್ತ ಶಮನಕ್ಕೆ ರಾಮಬಾಣ ಎಂದು ಪ್ರಸಿದ್ಧಿ ಪಡೆದಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿ ಹೇರಳವಾಗಿ ವಿಟಮಿನ್ ಬಿ, ಖನಿಜಗಳಿವೆ ಎನ್ನುತ್ತಾರೆ.ಪುನರ್ಪುಳಿ ರಸವು ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ ಹಾಗಾಗಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆಯಂತೆ. ಪುನರ್ಪುಳಿ ಗಾರ್ಸಿನಿಯಾ ಇಂಡಿಕಾ , ಮ್ಯಾಂಗೋಸ್ಟೀನ್(ಕ್ಲುಸಿಯೇಸಿ) ಕುಟುಂಬ ಸಸ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಕೋಕಮ್ ಎಂದು ಕರೆಯಲಾಗುತ್ತದೆ.
ನಮ್ಮ ಬಾಲ್ಯದಲ್ಲಿ ನಮಗೆ ಪಿತ್ತ ಏರಲು ಸಾಧ್ಯವೇ ಇಲ್ಲದಂತೆ ಅಥವಾ ಏರಿದ ಪಿತ್ತ ಇಳಿದು ಹೋಗುವಂತೆ ಪುನರ್ಪುಳಿಯ ಬೀಜಗಳನ್ನು ಗುಳಸಹಿತ ಧಾರಾಳವಾಗಿ ಸ್ವಾಹಾ ಮಾಡುತ್ತಲಿದ್ದೆವು! ಷರಬತ್ತು ಹೀರುತ್ತಲಿದ್ದೆವು. ಈಗ ಪಿತ್ತ ಇದೆಯೋ ಇಲ್ಲವೋ ಗೊತ್ತಿಲ್ಲ, ಹಾಗೇನಾದರೂ ಇದ್ದರೆ ಇಳಿಯಲಿ. ಮತ್ತು ಇದು ಬೊಜ್ಜನ್ನೂ ಕರಗಿಸುತ್ತದಂತೆ. ಇರುವ ಬೊಜ್ಜು ಅಷ್ಟು ಸುಲಭವಾಗಿ ಕರಗಿದರೆ ದೇಹ ಹಗುರ ತಾನೆ ಎಂದು ಭಾವಿಸಿ ಸಿಪ್ಪೆಯಿಂದ ತಂಬುಳಿ ಮಾಡಿದೆ!
ಅದರ ಪಾಕೇತನ ಹೀಗಿದೆ
೧) ಮೂರು ಪುನರ್ಪುಳಿ ಸಿಪ್ಪೆಗೆ ಸ್ವಲ್ಪ ನೀರು ಹಾಕಿ ಕುದಿಸಿ.
೨) ಬಾಣಲೆಗೆ ತುಪ್ಪ ಹಾಕಿ, ಜೀರಿಗೆ, ಕಾಳುಮೆಣಸು ಹಾಕಿ ಹುರಿಯಿರಿ.
೩) ಒಂದು ಕಪ್ ಕಾಯಿತುರಿಗೆ ಅವೆಲ್ಲವನ್ನೂ ಸೇರಿಸಿ, ಕುದಿಸಿಟ್ಟಸಿಪ್ಪೆಯನ್ನೂ ಹಾಕಿ ರುಬ್ಬಿ ತೆಗೆದು ಉಪ್ಪು, ಮಜ್ಜಿಗೆ ಹಾಕಿ ಒಗ್ಗರಣೆ ಕೊಡಿ.
೨೪) ಶಂಖಪುಷ್ಪ ತಂಬುಳಿ
ನಮ್ಮಲ್ಲಿ ನೀಲಿ ಬಣ್ಣದ ಶಂಖಪುಷ್ಪ ಯತೇಚ್ಛವಾಗಿ ಬಿಡುತ್ತಿದೆ.. ಅದರಿಂದ ತಂಬುಳಿ ತಯಾರಿಸಿದೆ.
೧) ೧೦ ಶಂಖಪುಷ್ಪ ಕೊಯಿದು ತೊಟ್ಟು ತೆಗೆದುತೊಳೆದಿಡಿ.
೨) ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಅದಕ್ಕೆ ಒಂದು ಚಮಚ ಜೀರಿಗೆ, ಆರೇಳು ಕಾಳುಮೆಣಸು ಹಾಕಿ ಹುರಿಯಿರಿ. ಅದಕ್ಕೆ ಹೂ ಹಾಕಿ ಬಾಡಿಸಿ
೩) ಒಂದು ಕಪ್ ಕಾಯಿತುರಿಗೆ ಗುರಿದ ಸಾಮಾಗ್ರಿಗಳನ್ನು ಹಾಕಿ ರುಬ್ಬಿ ತೆಗೆದು ಬೇಕಷ್ಟು ನೀರು, ಉಪ್ಪು ಹಾಕಿ, ಮಜ್ಜಿಗೆ ಬೆರೆಸಿ ಒಗ್ಗರಣೆ ಕೊಡಿ. ಶಂಖಪುಷ್ಪಕ್ಕೆ ಹೇಳುವಂಥ ರುಚಿ ಇಲ್ಲ. ಆದರೆ ದೇಹಕ್ಕೆ ತಂಪು.
ಇದರ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದಾಗ ಬರಪೂರ ಮಾಹಿತಿ
ಸಿಕ್ಕಿತು. Clitoria Ternatea, Asian
Pigeonwings, Butterfly Pea, ಅಪರಾಜಿತ ,ಗಿರಿ ಕರ್ಣಿಕೆ, ಹೀಗೇ ಹಲವಾರು ಹೆಸರುಗಳಿಂದ ಕರೆಸಕೊಳ್ಳುವ ಈ ಗಿಡ ನೋಡಲು ಸುಂದರ ಅಷ್ಟೇ ಅಲ್ಲ, ಆರೋಗ್ಯವರ್ಧಕವೂ ಹೌದು. ಬಳ್ಳಿಯಲ್ಲಿ ಬೆಳೆಯುವ ಈ ಪುಷ್ಪ ಪೂಜೆಗೂ ಶ್ರೇಷ್ಠ!
ಬಿಳಿ,ಕೆಂಪು,ಕಡು ನೀಲಿ, ನಸು ನೀಲಿ,ತಿಳಿ ನೇರಳೆ ಮುಂತಾದ ಬಣ್ಣಗಳಲ್ಲಿ ಕಾಣಸಿಗುವ ಶಂಖಪುಷ್ಪದಲ್ಲಿ ಏಕ ಮತ್ತು ದ್ವಿತೀಯ ಎಂಬ ಎರಡು ತಳಿಗಳಿವೆ.ಏಕ ತಳಿಯ ಹೂವಿನಲ್ಲಿ ದೊಡ್ಡದಾದ ಒಂದು ಎಸಳಿದ್ದು,ಗಮನಿಸಿ ನೋಡಿದಾಗ ಬುಡದಲ್ಲಿ ಪುಟ್ಟದಾದ ಎರಡು ಎಸಳುಗಳು ಕಾಣಬಹುದು. ದ್ವಿತೀಯ ತಳಿಯಲ್ಲಿ ಒಂದಕ್ಕೊಂದು ಸುರುಳಿ ಸುತ್ತಿ ಕೊಂಡಿರುವ ಐದು ಎಸಳುಗಳಿವೆ. ಇದರ ಎಸಳುಗಳು ಮೃದು, ಹತ್ತಿರವಿರುವ ಗಿಡಗಳಿಗೆ ಹಬ್ಬುವ ಈ ಬಳ್ಳಿಯು ಹೂಗಳಿಂದ ತುಂಬಿದಾಗ ಮೋಹಕವಾಗಿ ಕಾಣುತ್ತದೆ. ಈ ಸಸ್ಯದಲ್ಲಿ ನಾಲ್ಕೈದು ಬೀಜಗಳಿರುವ ಕೋಡುಗಳು ಬೆಳೆಯುತ್ತವೆ. ಬೀಜ ಬಿದ್ದಲ್ಲಿ ತನ್ನಷ್ಟಕ್ಕೆ ಗಿಡವಾಗುತ್ತದೆ. ಪ್ರತ್ಯೇಕ ಆರೈಕೆ ಬೇಕಾಗಿಲ್ಲ. ನೀರುಣಿಸಿದರೆ ಸಾಕು. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣ ಶಂಖಪುಷ್ಪ ಎಂಬ ಹೆಸರು ಬಂದಿದೆ. ಪರಿಮಳದ ಸೋಕಿಲ್ಲದ ಈ ಹೂವು ದೇವರ ಪೂಜೆಗೆ ವಿನಹ ಹೆಣ್ಣಿನ ಮುಡಿಗೇರುವುದಿಲ್ಲ. ಬಿಳಿವರ್ಣದ ಹೂ ಬಿಡುವ ಶಂಖಪುಷ್ಪ ವೈದ್ಯ ದೃಷ್ಟಿಯಿಂದ ಹೆಚ್ಚು ಪ್ರಭಾವಶಾಲಿಯೆಂದು ಹೇಳಲಾಗಿದೆ.
ಅರೆತಲೆನೋವು ನಿವಾರಿಸಲು ಶಂಖಪುಷ್ಪದ ಬೇರನ್ನು ತೇದು ಅಂಜನದ ಹಾಗೆ ಕಣ್ಣಿಗೆ ಸವರಬೇಕು.
ಎಲೆಗಳ ರಸವನ್ನು ಬಿಸಿ ಮಾಡಿ ಲೇಪಿಸಿದರೆ ಬಾವು ನೋವು ಗುಣವಾಗುತ್ತದೆ.
ಬೇರಿನ ರಸವನ್ನು ಹಾಲಿನಲ್ಲಿ ಬೆರೆಸಿ ಶ್ವಾಸನಾಳಗಳ ಬಾಧೆ ನಿವಾರಣೆಗೆ ಬಳಸುವುದುಂಟು.
ಮುಖದಲ್ಲಿ ಬಿಳಿಕಲೆಗಳಿದ್ದರೆ ಬೇರನ್ನು ಕ್ಷಾರ ಮಾಡಿ ಎಳ್ಳಣ್ಣೆಯಲ್ಲಿ ಕಲಸಿ ಲೇಪಿಸಬಹುದು.
ಬೇರಿನ ತೊಗಟೆಯಿಂದ ತಯಾರಿಸಿದ ಚೂರ್ಣವನ್ನು ಜೀರಿಗೆ ಕಷಾಯದಲ್ಲಿ ಕದಡಿ ಜೇನುತುಪ್ಪ ಬೆರೆಸಿ ಸೇವಿಸಿದರೆ ದೇಹಬಾಧೆ ಗುಣವಾಗುತ್ತದೆ. ಬೀಜವನ್ನು ಹುರಿದು ಹುಡಿ ಮಾಡಿ ಬೆಂಕಿ ಗುಳ್ಳೆಗಳ ನೋವು ಶಮನದ ಔಷಧಕ್ಕೆ ಬಳಸುತ್ತಾರೆ. ಹೊಟ್ಟೆ ಸೆಳೆತ, ಪಚನದ ತೊಂದರೆ, ಮೂತ್ರಪಿಂಡ, ಅನ್ನನಾಳ, ಪಿತ್ತಜನಕಾಂಗ, ಪಿತ್ತಕೋಶಗಳ ಕಾಯಿಲೆ ಹಾಗೂ ಹೊಟ್ಟೆ ಉಬ್ಬರದ ತೊಂದರೆಗಳನ್ನು ಶಂಖಪುಷ್ಪದ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ. ಆಹಾರಕ್ಕೆ ನೈಸರ್ಗಿಕವಾಗಿ ಬಣ್ಣ ಬರಲು ಈ ಹೂವನ್ನು ಬಳಸುತ್ತಾರೆ.ತಲೆಗೆ ಹಚ್ಚುವ ತೈಲ ತಯಾರಿಕೆಯಲ್ಲಿಯೂ ನೀಲಿ ಶಂಖಪುಷ್ಪ ಹೂ ಮತ್ತು ಅದರ ಬೇರನ್ನು ಭೃಂಗರಾಜ ಸೊಪ್ಪಿನೊಂದಿಗೆ ಬಳಸುತ್ತಾರೆ.
ಇದರಿಂದ ಕೂದಲು ಕಪ್ಪಾಗಿ ಬೆಳೆಯುತ್ತದೆ.ಬೀಜವನ್ನು ಪುಡಿಮಾಡಿ ಸೇವಿಸಿದರೆ ಮಲಭೇದಿಯು ನಿಲ್ಲುತ್ತದೆ. ಗಿಡದ ಬೇರನ್ನು ಅರೆದು ಚೇಳು ಕುಟುಕಿದ ಜಾಗದ ಮೇಲೆ ಲೇಪಿಸಿದರೆ ಉರಿ ಮತ್ತು ಊತಕಡಿಮೆಯಾಗುತ್ತದೆ.
ಹೂವಿನ ರಸವನ್ನು ಚೆನ್ನಾಗಿ ಶೋಧಿಸಿ ದಿನಕ್ಕೆರಡು ಬಾರಿಒಂದೆರಡು ತೊಟ್ಟುಗಳನ್ನು ಕಣ್ಣಿಗೆ ಬಿಡುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ.ಈ ಸಸ್ಯದ ಬೇರು ಮೂತ್ರ ಶೋಧನೆ ಮಾಡುವುದರಲ್ಲಿ ಸಹಕಾರಿಯಾಗಿದೆ.ಸಾರಸ್ವತಾರಿಷ್ಟ ತಯಾರಿಸಲು ಇದರ ಬೇರನ್ನು ಬಳಸುತ್ತಾರೆ.-
ಉಪಯುಕ್ತ
ಪ್ರತ್ಯುತ್ತರಅಳಿಸಿ