ಪಟ್ಟೆ ತಲೆ ಬಾತು, ಪರ್ವತಹಕ್ಕಿ, ಬಾರ್ ಹೆಡೆಡ್ ಗೀಸ್ ಇತ್ಯಾದಿ ನಾಮಾಂಕಿತ ಬಾತುಗಳು
ಪ್ರತೀವರ್ಷ ದೂರದ ಹಿಮಾಲಯ ಹಾದು ಮಂಗೋಲಿಯಾದಿಂದ ನಂಜನಗೂಡು ತಾಲೂಕಿನಲ್ಲಿರುವ
ಹದಿನಾರು ಕೆರೆಗೆ ವಲಸೆ ಬರುತ್ತವೆ. ಅವನ್ನು ನೋಡುವ ಸಲುವಾಗಿ ನಾವು ಸುಮಾರು ೬೦ ಮಂದಿ
ಹತ್ತನ್ನೆರಡು ಕಾರುಗಳಲ್ಲಿ ೩೦.೧.೨೦೨೨ರಂದು ಬೆಳಗ್ಗೆ ೭ ಗಂಟೆಗೆ ಮೈಸೂರಿನಿಂದ ಹೊರಟೆವು.
ಮೈಸೂರು- ಆಯರಹಳ್ಳಿ ದಾಟಿ ೨ ಕಿಮೀ ಹೋದಾಗ, ಹುಳಿಮಾವು ಗುಡ್ಡ ಸಿಗುತ್ತದೆ. ಕೊರೊನಾ
ಕಾರಣದಿಂದ ಗುಡ್ಡ ಹತ್ತದೆ ಕೆಲವು ತಿಂಗಳು ಕಳೆದಿತ್ತು. ಹಾಗಾಗಿ ಸಣ್ಣದಾದ ಗುಡ್ಡ ಎದುರೇ ಇರುವಾಗ
ಹತ್ತದೇ ಇರಲು ಸಾಧ್ಯವೇ?.ಹುರುಪಿನಿಂದ ಹತ್ತಿದೆವು. ಕಷ್ಟವಾದ ದಾರಿಯಲ್ಲ. ಆದರೂ ಸವಾಲು ಇತ್ತು.
ಗುಡ್ಡದ ತುದಿಯಲ್ಲಿ ಬಂಡೆಗಲ್ಲುಗಳಿವೆ. ಅವನ್ನು ಕೆಲವರು ಏರಿನಿಂತರು. ಅಲ್ಲಿ ಕೆಲಕಾಲ ವಿಶ್ರಮಿಸಿ
ಕೆಳಗೆ ಇಳಿದೆವು.
ಉಪ್ಪಿಟ್ಟು, ಕೇಸರಿಭಾತ್ ಸೇವನೆಯಾಯಿತು.
, ಇಮ್ಮಾವು ಕೈಗಾರಿಕಾ ಪ್ರದೇಶದ ಬಳಿ ಇರುವ ಬಿಳಿಕೆರೆ ಶ್ರೀ ಮಹದೇಶ್ವರ ದೇವಾಲಯಕ್ಕೆ ಹೋದೆವು. ವಿಶಾಲವಾದ ಸ್ಥಳದಲ್ಲಿರುವ ಈ ದೇವಾಲಯ ಹಳೆಯದೇ. ಅದರ ಗೋಪುರ ಮತ್ತು ಸುತ್ತು ಪೌಳಿ ಮಾತ್ರ ಇತ್ತೀಚೆಗೆ ನಿರ್ಮಾಣವಾಗಿರುವುದು. ಒಂದು ಬದಿಯಲ್ಲಿ ಕೊಳವೂ ಇದೆ. ದೇವಾಲಯ ನೋಡಿ ನಾವು ಹದಿನಾರು ಗ್ರಾಮಕ್ಕೆ ಹೋದೆವು. ಅಲ್ಲಿ ಕಾಫಿ, ಚಹಾ ಸೇವನೆಯಾಯಿತು.
ಹದಿನಾರು ಕೆರೆಯ ಒಂದು ಭಾಗದಲ್ಲಿ ಹಚ್ಚ ಹಸಿರಿನ ಚೊಕ್ಕ ಉದ್ಯಾನ ಇದೆ.
ಅಲ್ಲಿಂದ ನಾವು ಪರ್ವತ ಹಕ್ಕಿಗಳನ್ನು ಹಾಗು ಇತರೆ ಹಕ್ಕಿಗಳನ್ನು ನೋಡಿದೆವು. ಆ ಕೆರೆಯಲ್ಲಿ
ವಿವಿಧ ಜಾತಿಯ ಪಕ್ಷಿಗಳೂ ಇದ್ದುವು.
ಈ ಪರ್ವತ ಹಕ್ಕಿ ಸಮುದ್ರಮಟ್ಟದಿಂದ ೨೯ ಸಾವಿರ ಅಡಿ ಎತ್ತರದಲ್ಲಿ ಹಾರಬಲ್ಲ ಸಾಮರ್ಥ್ಯ ಹೊಂದಿವೆ.
ಮಂಗೋಲಿಯಾದಿಂದ ಸುಮಾರು ೪೫೦೦ ಕಿಮೀ ದೂರ ಹಾರಿ ಮೈಸೂರು ಜಿಲ್ಲೆಗೆ ಬರುತ್ತವೆ.
ಪ್ರತೀವರ್ಷ ಚಳಿಗಾಲದಲ್ಲಿ ಸಹಸ್ರಾರು ಹಕ್ಕಿಗಳು ಇಲ್ಲಿ ಬಂದು ವಾಪಾಸು ತೆರಳುತ್ತವೆ.
ಮೊಟ್ಟೆ ಇಟ್ಟು ಮರಿ ಮಾಡುವ ಯಾವ ಗೋಜಿಗೂ ಹೋಗುವುದಿಲ್ಲ. ಅಲ್ಲಿಯ ಸ್ಥಳೀಯ
ಯುವಕರು ಹದಿನಾರು ನೇಚರ್ ಫೌಂಡೇಷನ್ ಸ್ಥಾಪಿಸಿ, ಹದಿನಾರು ಕೆರೆಗೆ ಬರುವ ಹಕ್ಕಿಗಳ ಗಣತಿ
ಮಾಡುತ್ತಿರುತ್ತಾರೆ. ಈ ವರ್ಷ ಪರ್ವತಹಕ್ಕಿಯ ಚಿತ್ರವಿರುವ ಕ್ಯಾಲೆಂಡರ್ ಹೊರ ತಂದಿರುವರು.
ಅದನ್ನು ಅಲ್ಲಿ ನಮ್ಮ ಸಮ್ಮುಖದಲ್ಲಿ ಅನಾವರಣಗೊಳಿಸಿದರು.
ಈ ಕೆರೆಯ ನೀರು ಕಲುಷಿತಗೊಂಡಿದೆಯೇ? ಎಂಬ ಪ್ರಶ್ನೆ ಕೇಳಿದೆ. ಇಲ್ಲ, ಒಂದು ಜಾತಿಯ ಹಕ್ಕಿಗಳು
(ಅವರು ಹೆಸರು ಹೇಳಿದ್ದರು, ನಾನು ಮರೆತೆ) ಈ ಕೆರೆಗೆ ವಲಸೆ ಬರುತ್ತವೆ. ಆ ಹಕ್ಕಿ ಕಲುಷಿತ ನೀರಿನಲ್ಲಿ ವಾಸಿಸುವುದಿಲ್ಲ ಹಾಗಾಗಿ ನೀರು ಶುದ್ಧವಾಗಿಯೇ ಇದೆ ಎಂದರು. ಒಂದು ಭಾಗದಲ್ಲಿ ಕೆರೆ ಏರಿ ಇದೆ. ಅಲ್ಲಿ ಹೋಗಿ ನಾವು ಪರ್ವತಹಕ್ಕಿ ನೀರಿನಲ್ಲಿ
ಸಾಲಾಗಿ ಬರುವ ದೃಶ್ಯ ವೈಭವ ನೋಡಿದೆವು..
ದೂರದರ್ಶಕದ ಸಹಾಯದಿಂದ ಈ ಪರ್ವತಹಕ್ಕಿಯ ಸೌಂದರ್ಯವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಯಿತು.
ಅಲ್ಲಿ ನಾವು ತಂಡದ ಪಟ ತೆಗೆಸಿಕೊಂಡು ಮೈಸೂರಾಭಿಮುಖರಾದೆವು.
ಮಧ್ಯಾಹ್ನ ೨ ಗಂಟೆಗೆ ಮನೆ ತಲಪಿದೆವು. ಅರ್ಧ ದಿನದ ಈ ಕಾರ್ಯಕ್ರಮ ಗೋಪಕ್ಕ ಹಾಗೂ ಪರಶಿವಮೂರ್ತಿ ಅವರ ನೇತೃತ್ವದಲ್ಲಿ ಮೈಸೂರು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ ಯಶಸ್ವಿಯಾಗಿ ನೆರವೇರಿತು. ಅವರಿಗೆ ನಮ್ಮ ತಂಡದ ಎಲ್ಲರ ಪರವಾಗಿ ಧನ್ಯವಾದ. ಸುಕನ್ಯಾ ರವಿಶಂಕರ್ ಕಾರಿನಲ್ಲಿ ನಾನು ಹೋಗಿ ಬಂದೆ. ನನ್ನನ್ನು ಹತ್ತಿಸಿಕೊಂಡ ಅವರಿಗೂ ಧನ್ಯವಾದ.
ಇಲ್ಲಿ ಬಳಸಿದ ಕೆಲವು ಪಟಗಳು ಸಹಚಾರಣಿಗರದು. ಅವರಿಗೂ ಧನ್ಯವಾದ.
ReplyForward |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ