ಬುಧವಾರ, ಫೆಬ್ರವರಿ 23, 2022

ನಿಜಗಲ್ಲು ದುರ್ಗ, ಮಂದರಗಿರಿ ಜೈನಕ್ಷೇತ್ರ

 ತುಮಕೂರು ಜಿಲ್ಲೆಯಲ್ಲಿರುವ ನಿಜಗಲ್ಲು ದುರ್ಗ ಮತ್ತು ಮಂದರಗಿರಿ ಜೈನಕ್ಷೇತ್ರ ನೋಡುವ ಸಲುವಾಗಿ ನಾವು ೨೧ ಮಂದಿ ಮೈಸೂರಿನಿಂದ ಕನಕ ಟ್ರಾವೆಲ್ಸ್ ನ ಮಿನಿ ಬಸ್ಸಿನಲ್ಲಿ ತಾರೀಕು ೧೩-೨-೨೦೨೨ರಂದು ಬೆಳಗ್ಗೆ ೫.೩೦ಗೆ ಹೊರಟೆವು. ಮದ್ದೂರಿನ ಶಿವದಾಸ್ ಖಾನಾವಳಿಯಲ್ಲಿ ತಿಂಡಿ (ಇಡ್ಲಿ ವಡೆ, ನವಣೆ ಬಿಸಿಬೇಳೆಭಾತ್) ಕಾಫಿ, ಚಹಾ ಸೇವಿಸಿ ಮುಂದುವರಿದೆವು.

  ಸುಮಾರು ಹತ್ತು ಗಂಟೆಗೆ ನಾವು ನಿಜಗಲ್ಲು ದುರ್ಗದ ಬುಡ ತಲಪಿದೆವು. ಅಲ್ಲಿ ಬಂಡೆಗಲ್ಲುಗಳಿರುವ ಕುರುಚಲು ಪೊದೆಗಳಿರುವ ವಿಶಾಲವಾದ ಸ್ಥಳದಲ್ಲಿ ಅದಾಗಲೇ ಹಿಂದೂ ಮುಸಲ್ಮಾನ ಎಂಬ ಬೇಧವಿಲ್ಲದೆ ಸಾಕಷ್ಟು ಮಂದಿ ಭಕ್ತಾದಿಗಳು ಅಡುಗೆ ಸಾಮಾನು ವಾಹನಗಳಿಂದ ಇಳಿಸಿಕೊಳ್ಳುವುದರಲ್ಲಿ ನಿರತರಾಗಿದ್ದುದು ಕಂಡು ಬಂತು. ಕುರಿ ಕೋಳಿಗಳೂ ಇದ್ದುವು. ತಿಳಿದು ಬಂದ ಮಾಹಿತಿ ಪ್ರಕಾರ, ನಿಜಗಲ್ಲು ದುರ್ಗದಲ್ಲಿ ಮಲ್ಲಿಕಾರ್ಜುನ ದೇಗುಲ ಹಾಗೂ ೨ ದರ್ಗಾ ಇದೆ. ಭಕ್ತಾದಿಗಳು ವರ್ಷಕ್ಕೊಮ್ಮೆ ಅಲ್ಲಿ ಬಂದು ದೇವರಿಗೆ ಎಡೆಕೊಟ್ಟು, ದುರ್ಗದ ಪಾದದಲ್ಲಿ ಅಡುಗೆ ಮಾಡಿ ಭೋಜನ ಮಾಡುತ್ತಾರಂತೆ.

   ನಾವು ದುರ್ಗ ಹತ್ತಲು ೧೦.೧೫ಕ್ಕೆ ಅಣಿಯಾದೆವು. ದ್ವಾರದಲ್ಲೇ ಬಿಪಿನ್ ರಾವತ್ ಅವರ ಬೃಹತ್ ಭಾವಚಿತ್ರ ಎದುರಾಯಿತು. ಹೆಲಿಕಾಫ್ಟರ್ ಪತನದಲ್ಲಿ ಅವರು ಅಸುನೀಗಿರುವ ವಿಷಯ ಮುನ್ನೆಲೆಗೆ ಬಂದು ಹೃದಯ ಭಾರವಾಯಿತು. ಈ ಕ್ಷೇತ್ರದಲ್ಲಿ ಸೈನಿಕರಿಗೆ ತರಬೇತಿ ಕೊಡುತ್ತಿದ್ದರಂತೆ. ಹಾಗಾಗಿ ರಾವತ್ ಅವರ ಗೌರವಾರ್ಥವಾಗಿ ಭಾವಚಿತ್ರ ಹಾಕಿರಬಹುದು. 

   ಅರಣ್ಯ ಇಲಾಖೆಯವರು ಅಲ್ಲಿ ಮಾಹಿತಿ ಫಲಕದಲ್ಲಿ ದುರ್ಗದ ಇತಿಹಾಸ ವಿವರವಾಗಿ ದಾಖಲಿಸಿರುವುದು ಉಪಯುಕ್ತವಾಗಿದೆ. ನಿಜಗಲ್ಲು ದುರ್ಗ ದೊಡ್ಡದಾದ ಬಂಡೆ ಮೇಲಿದೆ. ಹತ್ತಲು ಈಗ ಬಂಡೆಯನ್ನೇ ಕೊರೆದು ಮೆಟ್ಟಲು ಮಾಡಿದ್ದಾರೆ. ಅದು ಇತ್ತೀಚೆಗಿನ ಬೆಳವಣಿಗೆಯಾಗಿರಬೇಕು. ಸಾಕ್ಷಿಗೆ ಕೆತ್ತಿದ ಬಂಡೆಯ ಅವಶೇಷಗಳೂ ಅಲ್ಲೇ ಇದ್ದುವು. ಬೆಟ್ಟದ ಉದ್ದಕ್ಕೂ ಕೆಂಪು ಗ್ರನೈಟ್ ಕಲ್ಲುಗಳು ಕಂಡವು. ಇನ್ನೂ ಬಂಡೆಗಳು ಖಾಲಿಯಾಗದೆ ಉಳಿದಿರುವುದು ನಮ್ಮ ಪುಣ್ಯ ಎನ್ನಬಹುದು! ನಾವು ನಿಧಾನವೇ ಪ್ರಧಾನ ಎಂಬಂತೆ ಬೆಟ್ಟ ಹತ್ತಿದೆವು.


   ದುರ್ಗದ ಮಧ್ಯಭಾಗಕ್ಕೆ ತೆರಳುವಲ್ಲಿ ಒಂದು ದ್ವಾರ. ಅಲ್ಲಿ ಮುಖಮಂಟಪವಿದೆ. ಕೋಟೆ ಅಲ್ಲಲ್ಲಿ ಪಾಳುಬಿದ್ದಿವೆ. ದುರ್ಗದ ಮಧ್ಯಭಾಗದಲ್ಲಿ ಗಣಪತಿಯ ದೇಗುಲ ಹಾಗೂ ಪಾಳುಬಿದ್ದ ಲಕ್ಷ್ಮೀನರಸಿಂಹ ದೇವಾಲಯ (ಲಕ್ಷ್ಮೀನರಸಿಂಹ ಮೂರ್ತಿ ಬಹಳ ಚೆನ್ನಾಗಿದೆ) ಇದೆ. ಅದನ್ನು ನೋಡಿದಾಗ ಇಷ್ಟು ಭವ್ಯವಾದ ದೇಗುಲವನ್ನು ಉಳಿಸಿಕೊಳ್ಳುವ ಮನೋಭಾವ ನಮ್ಮವರಿಗಿಲ್ಲವಲ್ಲ ಎಂದು ವ್ಯಥೆಯಾಯಿತು.  ಸೈಯದ್ ಬಾದ್ ಷಾ  ದರ್ಗಾ ಇದೆ. ದರ್ಗಾ ಎದುರು ನೀರು ತುಂಬಿರುವ ಕೊಳವಿದೆ.



  ಮುಂದುವರಿದಂತೆ, ಎಲ್ಲಿ ನೋಡಿದರೂ ಬೃಹತ್ ಬಂಡೆಗಲ್ಲುಗಳು ನಮ್ಮನ್ನು ಸ್ವಾಗತಿಸುತ್ತವೆ. ಬೆಟ್ಟ ಹತ್ತಲು ಮೆಟ್ಟಲು ಬಳಿ ಅಲ್ಲಲ್ಲಿ ಕೈತಾಂಗುಗಳೂ ಇವೆ.  ೧೧.೩೦ಗೆ ನಾವು ಬೆಟ್ಟದ ತುದಿ ತಲಪಿದೆವು. ಅಲ್ಲಿ ಬೃಹತ್ ಗಾತ್ರದ ಬಂಡೆಗಲ್ಲುಗಳು, ಅದರಡಿಯಲ್ಲಿ ಮಲ್ಲಿಕಾರ್ಜುನ ದೇಗುಲವೂ, ದರ್ಗಾವೂ ಇದೆ. ಬಂಡೆಯಡಿಯ ಗವಿಯಲ್ಲಿ ದೇಗುಲದ ಬಳಿ ಅದಾಗಲೇ ಸಾಕಷ್ಟು ಭಕ್ತರು ಪೂಜೆ, ಎಡೆ ಇಡುವ ಕಾರ್ಯದಲ್ಲಿ ನಿರತರಾಗಿದ್ದರು. ಅವರೆಡೆಯಲ್ಲಿ ನುಸುಳಿ ಅರೆಬರೆ ದೇಗುಲ ನೋಡಲು ಸಾಧ್ಯವಾಯಿತಷ್ಟೇ. ಅಲ್ಲೇ ಹಿಂಭಾಗದಲ್ಲಿದ್ದ ಷಾ ಕರೀಂ ದರ್ಗಾ ನೋಡಿದೆವು. ಅಲ್ಲು ಕೂಡ ಹಿಂದೂ ಮುಸ್ಲಿಂ ಭಕ್ತಾದಿಗಳು ಒಳಗೆ ನೆರೆದಿದ್ದರು. ಕಷ್ಟ ಕಾರ್ಪಣ್ಯ ನಿವೇದಿಸಿಕೊಂಡು ಪ್ರವಾದಿಗಳಿಂದ ತಾಯತ ಕಟ್ಟಿಸಿಕೊಳ್ಳುತ್ತಿದ್ದರು. ‘ನೋಡಿ ಇವನಿಗೆ ಕಳೆದಸಲ ತಾಯತ ಕಟ್ಟಿಸಿದ್ದು, ಅದನ್ನು ಒಂದು ದಿನವೂ ಉಳಿಸಿಕೊಳಲಿಲ್ಲ, ಬೀಳಿಸಿಕೊಂಡಿದ್ದಾನೆ, ನೆಟ್ಟಗೆ ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ, ಎಂದು ಒಬ್ಬಾಕೆ ಪ್ರವಾದಿಗಳ ಬಳಿ ಗೋಳು ಹೇಳಿಕೊಳ್ಳುತ್ತ ತಾಯತ ಪುನಃ ಅವನಿಗೆ ಕಟ್ಟಿಸಲು ಕರೆದುಕೊಂಡು ಬಂದಿದ್ದಳು! ಹಿಂದೂ ಮುಸಲ್ಮಾನರ ಈ ಭಾವೈಕ್ಯತೆ ನೋಡಿ ಸಂತಸಪಟ್ಟೆವು. ‘ಮನುಷ್ಯರೆಲ್ಲರೂ ಒಳ್ಳೆಯವರೇ. ಆದರೆ ಈ ರಾಜಕೀಯ ಅವರನ್ನು ತಪ್ಪು ದಾರಿಗೆ ಎಳೆದು ಹಾಳು ಮಾಡುತ್ತದೆ’ ಎಂದು ಮುಸಲ್ಮಾನ ಭಕ್ತರೊಬ್ಬರು ನುಡಿದರು. ಸತ್ತಾಗ ಎಲ್ಲರಿಗೂ ಬೇಕಾಗುವುದು ಮೂರಡಿ, ಆರಡಿ ಅಷ್ಟೇ ಸ್ಥಳ ಎಂದು ಪ್ರವಾದಿಯವರೂ ದನಿಗೂಡಿಸಿದರು. ಅಲ್ಲಿ ಒಬ್ಬ ತಮಟೆ ಬಾರಿಸುತ್ತಿದ್ದ.  ಸೋಮಶೇಖರ್ ತಮಟೆ ಬಾರಿಸಿ ಸಂತಸಪಟ್ಟರು.



  

 

ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ಒಂದು ಗಂಟೆಗೆ ಕೆಳಗೆ ಇಳಿದು ಬಂದೆವು. ಅಲ್ಲಿ ಕೋಳಿ ಬಿಸಿನೀರಲ್ಲಿ ಮುಳುಗೇಳುತ್ತಿದ್ದುದನ್ನು ಕಂಡೆವು. ಪ್ಲಾಸ್ಟಿಕ್, ಉಂಡು ಹಾಕಿದ ಕಾಗದೆಲೆಗಳು, ಕೋಳಿಪುಕ್ಕ ಚೆಲ್ಲಾಡಿದ್ದನ್ನು ನೋಡಿದಾಗ, ಈ ಜನುಮದಲ್ಲಿ ಮನುಜರು ಬದಲಾಗುವುದಿಲ್ಲ, ಸ್ವಚ್ಚತೆಯ ಅರಿವು ಬರುವುದೇ ಇಲ್ಲವೇನೋ ಎಂಬ ಹತಾಶೆಯ ಭಾವ ಮೂಡಿತು. ಮುನ್ನೂರು ಮಂದಿ ಸ್ವಯಮ್ ಸೇವಕರ ತಂಡ ಕಳೆದ ವಾರವಷ್ಟೇ ಬೆಟ್ಟದ ಆ ಪರಿಸರವನ್ನು ಚೊಕ್ಕಗೊಳಿಸಿದ್ದರಂತೆ. ಒಂದು ವಾರದಲ್ಲೇ ಪುನಃ ಲಾಟುಗಟ್ಟಲೆ ಕಸ ಉತ್ಪತ್ತಿಯಾಗಿದೆ.

ನಾವು ಅಲ್ಲಿ ತಂಡದ ಪಟ ತೆಗೆಸಿಕೊಂಡು ಹೊರಟೆವು.

   ಅಲ್ಲಿಯ ಫಲಕದಲ್ಲಿದ್ದ ನಿಜಗಲ್ಲುಬೆಟ್ಟದ ಇತಿಹಾಸ ಮಾಹಿತಿ: ನಿಜಗಲ್ಲು ಶ್ರೀ ಸಿದ್ದರಬೆಟ್ಟ (ನಿಜಗಲ್ಲು ದುರ್ಗ) ಬೆಟ್ಟದ ಕ್ಷೇತ್ರವು ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರವಾಗಿದ್ದು, ಇದನ್ನು ರತ್ನಪುರಿ ಪಟ್ಟಣ, ಶೂರರಗಿರಿ, ಉದ್ದಂಡಯ್ಯನ ಬೆಟ್ಟ ಎಂದೂ ಕರೆಯುತ್ತಾರೆ. ಇದರ ಬಗ್ಗೆ ಕ್ರಿ.ಶ. ೧೨೮೮ ಹೊಯ್ಸಳರ ಕಾಲದ ಶಾಸನದಲ್ಲಿ ಉಲ್ಲೇಖವಿದೆ. ಇದರಲ್ಲಿ “ನಿಜಗಲೀಪುರ” ಎಂದು ಹೆಸರಿಸಲಾಗಿದೆ. ನಿಜ+ಕಲಿ=ನಿಜಗಲಿ. ಶೂರರ ನಾಡಗಿದ್ದರಿಂದ ಶೂರರಗಿರಿ, ಸುತ್ತಲೂ ಬೆಟ್ಟಗಳಿಂದಾವೃತವಾಗಿರುವುದರೀಂದ ನಿಜ+ಕಲ್ಲು= ನಿಜಗಲ್ಲು ಎಂಬುದಾಗಿ ಹೆಸರು ಪಡೆದುಕೊಂಡಿದೆ.

  ಹಿಂದೆ ಈ ದುರ್ಗದಲ್ಲಿದ್ದ ಸಿದ್ದರು ಒಂದು ಬಗೆಯ ರಸದಿಂದ ಕೀಳು ಲೋಹಗಳನ್ನುಬಂಗಾರವಾಗಿ ಪರಿವರ್ತಿಸುತ್ತಿದ್ದುದರಿಂದ ಈ ಬೆಟ್ಟಕ್ಕೆ ‘ರಸ ಸಿದ್ದರ ಬೆಟ್ಟ’ ಎಂದೂ ಹೆಸರಿದೆ.

   ಹೀಗೆ ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ಈ ನಿಜಗಲ್ಲಿನ ದುರ್ಗದ ಮೇಲೆ ಅಕ್ಕತಂಗಿಯರ ದೊಣೆ, ಕಂಚಿನದೊಣೆ, ಸಿದ್ದರ ದೊಣೆ, ಆನೆದೊಣೆ, ಮುಂತಾದ ವರ್ಷವಿಡೀ ನೀರಿರುವ ದೊಣೆಗಳಿವೆ. ಅಲ್ಲಿಯೇ ರಸಸಿದ್ದರ ದೇವಾಲಯ, ಸೈಯದ್ ಬಾದ್ ಷಾ ಮತ್ತು ಷಾ ಕರೀಂ ಅವರ ದರ್ಗಾಗಳಿದ್ದು, ಹಿಂದೂ ಮುಸಲ್ಮಾನರ ಭಾವೈಕ್ಯತೆಯ ನೆಲೆಬಿಡಾಗಿ ರೂಪುಗೊಂಡಿದೆ.

 ನಿಜಗಲ್ಲು ಬೆಟ್ಟವು ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ, ಮತ್ತು ಸೈನಿಕ ತರಬೇತಿ ನೆಲೆಯಾಗಿದ್ದು, ಶಾಸನಗಳ ಉಲ್ಲೇಖದಂತೆ ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು, ಚಿತ್ರದುರ್ಗದ ಪಾಳೆಯಗಾರ ಅರಸರ ಆಳ್ವಿಕೆಗೆ ಒಳಪಟ್ಟಿರುತ್ತದೆ. ಕ್ರಿ.ಶ. ೧೭೭೦ರ ಸುಮಾರಿನಲ್ಲಿ ಮೈಸೂರು ಮತ್ತು ಮರಾಠರ ಯುದ್ಧದಲ್ಲಿ ನಿಜಗಲ್ಲು ಬೆಟ್ಟವು ಮರಾಠರ ವಶವಾಗುತ್ತದೆ.

 ಮೈಸೂರಿನ ಚಿಕ್ಕರಾಜ ಒಡೆಯರ್ ಸೇವಕ ಬಿಳುಗಿಲೆ ದಾಸರಾಜಯ್ಯ ನಿಜಗಲ್ಲಿನ ರಕ್ಷಣೆಗಾಗಿ ಕ್ರಿ.ಶ. ೧೬೯೮ರಲ್ಲಿ ಅಭೇದ್ಯವಾದ ಕಲ್ಲಿನ ಕೋಟೆ ಕಟ್ಟಿಸಲು ಪ್ರಾರಂಭಿಸಿ, ಸುಮಾರು ೭ ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿಈ ನಿಜಗಲ್ಲು ಕೋಟೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ. ಹಾಗೆಂದು ಶಾಸನದಲ್ಲಿ ಉಲ್ಲೇಖವಿದೆ.

  ಶಾಸನಗಳ ಪ್ರಕಾರ, ಬಹುಧಾನ್ಯ ಪ್ರಮಾಧಿ ವಿಕ್ರಮ ಈ ಮೂರು ಸಂವತ್ಸರಗಳಲ್ಲಿ ಕೋಟೆಯ ಪೂರ್ವ ಮತ್ತು ದಕ್ಷಿಣ ದ್ವಾರದ ಬಳಿ ಗಣಪತಿ ದೇವಾಲಯ ನಿರ್ಮಾಣವಾಗಿದೆ. ಬೆಟ್ಟದ ಮಧ್ಯಭಾಗದಲ್ಲಿ ದಕ್ಷಿಣ   ದ್ವಾರದ ಕಡೆಗೆ ವಿನಾಯಕ ದೇವಾಲಯ, ಉತ್ತರದ ಕಡೆಗೆ ಮೈಸೂರು ಚಿಕ್ಕದೇವರಾಜ ಒಡೆಯರ್ ಕಾಲದ ಬೃಹತ್ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ಕಾಣಬಹುದಾಗಿದೆ. ಸುಮಾರು ೧೭-೧೮ನೇ ಶತಮಾನದಲ್ಲಿ ವೈಷ್ಣವ ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಯಿತೆಂದು ಶಾಸನಗಳು ತಿಳಿಸುತ್ತವೆ.

  ನಿಜಗಲ್ಲು ಕೋಟೆಯ ಪೂರ್ವಭಾಗದಲ್ಲಿ ಒಂದು ನೈಸರ್ಗಿಕ ಗುಹಾಂತರ ದೇವಾಲಯವಿದ್ದು, ಇದು ಶ್ರೀ ಮಲ್ಲಿಕಾರ್ಜುನ ದೇವಾಲಯವಾಗಿರುತ್ತದೆ. ಇದರ ಗರ್ಭಗುಡಿಯಲ್ಲಿ ಬಾಣಲಿಂಗವಿದ್ದು, ೧೦ನೇ ಶತಮಾನಕ್ಕಿಂತಲೂ ಹಿಂದೆ ಇದು ಪ್ರಸಿದ್ಧ ಬಿಲ್ವಿದ್ಯೆ ತರಬೇತಿ ಕೇಂದ್ರವಾಗಿರುವ ಬಗ್ಗೆ ಉಲ್ಲೇಖವಿದೆ. ಈ ಗುಹಾಂತರ ದೇವಾಲಯವು ಪ್ರಸಿದ್ಧ ಶ್ರೀ ಸಿದ್ಧಗಂಗ ಕ್ಷೇತ್ರದ ಶ್ರೀ ಉದ್ದಾನ ಶಿವಯೋಗಿಗಳ ತಪೋಭೂಮಿಯಾಗಿದ್ದು, ಅವರು ಇಲ್ಲಿಯೇ ಸಿದ್ಧಿ ಪಡೆದ ಬಗ್ಗೆ ಐತಿಹ್ಯವಿದೆ.

  ಪೂರ್ವದ ಗುಹೆಯಲ್ಲಿ ಮಲ್ಲಿಕಾರ್ಜುನ ದೇವಾಲಯ ಪ್ರದೇಶದಲ್ಲಿ ಬಂಡೆಯ ಮೇಲೆ ವೀರಭದ್ರ, ಮತ್ತು ಕನ್ಯೆ ಗಾಯತ್ರಿ, ಕಾಲಭೈರವ, ಸುಬ್ರಹ್ಮಣ್ಯ ದೇವರ ಉಬ್ಬು ಶಿಲ್ಪಗಳಿವೆ.

 ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ಆಂಜನೇಯನ ಉಬ್ಬುಶಿಲ್ಪಗಳಿದ್ದು, ಪೂರ್ವದ ಕೋಟೆಯ ದ್ವಾರದಲ್ಲಿ ಗೋಡೆಗಳ ಮೇಲೆ ಗರುಡ, ಆಂಜನೇಯನ ಶಿಲ್ಪಗಳಿದ್ದು, ದ್ವಾರದ ಒಳಗಿನ ಬಂಡೆಯ ಮೇಲೆ ಎಡಭಾಗದಲ್ಲಿ ಆಂಜನೇಯನ ದೊಡ್ಡದಾದ ಉಬ್ಬುಶಿಲ್ಪವಿದ್ದು, ಕೋಟೆಯ ರಕ್ಷಣಾ ಪ್ರತೀಕವಾಗಿದೆ.

  ಈ ನಿಜಗಲ್ಲು ಬೆಟ್ಟದ ದೈವತ್ವದ ಸಂಪರ್ಕ ಜಾಲ ಮೇಲುಕೋಟೆ, ಸಾವನದುರ್ಗ, ದೇವರಾಯನದುರ್ಗ, ಆಂಧ್ರಪ್ರದೇಶದ ಪೆನಗೊಂಡ ಕದ್ರಿ ನರಸಿಂಹ, ಅಹೋಬಲದ ನರಸಿಂಹ ಎಂಬುದಾಗಿದೆ.

 ಬೆಟ್ಟದ ತುದಿಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ಸನ್ನಿಧಿ ಇರುತ್ತದೆ. ಇದು ಒಂದು ಐತಿಹಾಸಿಕ ತಪೋಭೂಮಿಯಾಗಿದ್ದು, ಸಿದ್ದರ ಮಾರ್ಗದರ್ಶನದಂತೆ ನಾಡಿನ ಭಕ್ತರು ತಮ್ಮ ಜೀವನದ ಕಷ್ಟ ಕಾರ್ಪಣ್ಯಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರು ಎಂದು ಪ್ರತೀತಿ ಇದೆ. ಹಾಗೆಯೇ ಇಲ್ಲಿಂದ ಬೆಟ್ಟದ ಮೇಲೆ ರಾಜರ ಕಾಲದ ಕುದುರೆ ಲಾಯ, ಗರಡಿ ಮನೆ, ಕಾವಲು ಗೋಪುರ, ರಾಣಿಯ ಅರಮನೆ, ನೀರಿನ ಕೊಳ ಇದ್ದು ಇದೊಂದು ಅದ್ಭುತವಾದ ಐತಿಹಾಸಿಕ ಧಾರ್ಮಿಕ ಕೆಂದ್ರವಾಗಿರುತ್ತದೆ.

ಮಂದರಗಿರಿ ಜೈನಕ್ಷೇತ್ರ

ನಿಜಗಲ್ಲಿನಿಂದ ಹತ್ತುಕಿಮೀ ದೂರದಲ್ಲಿರುವ ಪಂಡಿತರಹಳ್ಳಿ ಗ್ರಾಮದಲ್ಲಿರುವ (ತುಮಕೂರಿನ ಕ್ಯಾತ್ಸಂದ್ರದಿಂದ ೩ಕಿಮೀ ದೂರ)  ಮಂದರಗಿರಿಗೆ ಹೋದೆವು.

  ಅಲ್ಲಿ ಅನತಿ ದೂರದಲ್ಲೆ ಇರುವ ೯೧೮ ಅಡಿ ಎತ್ತರದ ಏಕಶಿಲಾ ಬಸದಿ ಬೆಟ್ಟ (ಬಸ್ತಿ ಬೆಟ್ಟ) ಏರಿದೆವು. ಸುಮಾರು ೪೫೦ ಮೆಟ್ಟಲುಗಳಿವೆ. ಕೈತಾಂಗು ಹಾಕಿರುವುದರಿಂದ ಯಾರು ಬೇಕಾದರೂ ಹತ್ತಬಹುದು.  ಮೆಟ್ಟಿಲೂಗಳೂ ಕಡಿದಾಗಿಲ್ಲ.



   ಅದಾಗಲೇ ಸೂರ್ಯ ನಡುನೆತ್ತಿಗೆ ಬಂದು, ನಮ್ಮತ್ತ ಉರಿ ಕಾರುತ್ತಿದ್ದ. ಆಗ ೧.೩೦ ದಾಟಿತ್ತು. ನಮ್ಮ ತಂಡದಲ್ಲಿದ್ದ ೬೫ ಮೀರಿದ ನವಯುವಕ ಯುವತಿಯರು ಆ ಬಿರುಬಿಸಿಲನ್ನು ಲೆಕ್ಕಿಸದೆ ಉತ್ಸಾಹದಿಂದಲೇ ಮೆಟ್ಟಲು ಹತ್ತಿದರು!

  ಬೆಟ್ಟದ ಮೇಲೆ ಬಸದಿಗಳಿವೆ. ಇತ್ತೀಚೆಗೆ ಸುಮಾರು ೧೫ ಲಕ್ಷ ವೆಚ್ಚದಲ್ಲಿ ಬಸದಿ ಜೀರ್ಣೋದ್ಧಾರವಾಗಿದೆ. ಈಗಲೂ ಕೆಲಸ ನಡೆಯುತ್ತಲಿದೆ. ಬಸದಿಯ ಪಾರ್ಶ್ವದಲ್ಲಿ ಸುಮಾರು ಮೂರೂವರೆ ಕೋಟಿ ವೆಚ್ಚದಲ್ಲಿ ಬೃಹತ್ ಕಲ್ಪವೃಕ್ಷ (ಹಿತ್ತಾಳೆಯದು) ದ ಕಾಮಗಾರಿ ನಡೆಯುತ್ತಲಿದೆ. ವೃಕ್ಷದ ಮೇಲೆ ಧ್ವಜ, ಧ್ವಜದ ಕೆಳಗೆ ಮರ, ಮರದ ಕೆಳಗೆ ತಾವರೆಯ ಮೇಲೆ ನಾಲ್ಕು ಮೂರ್ತಿಗಳು, ಸಿಂಹದ ಶಿಲ್ಪ ಎಲ್ಲ ನಿರ್ಮಾಣವಾಗಲಿದೆಯಂತೆ. ಆಗ ಬನ್ನಿ. ನೋಡಿದರೇ ಅದರ ಚಿತ್ರಣ ತಿಳಿಯುವುದು. ಎಂದು ಅಲ್ಲಿದ್ದವರೊಬ್ಬರು ನುಡಿದರು. ಬೆಟ್ಟದ ಮೇಲಿನ ಆ ಕೆಲಸ ಖುಷಿ ಕೊಡಲಿಲ್ಲ. 




ಜೈನ ಬಸದಿಗಳ ಈ ಸಂಕಿರ್ಣವು ೧೨ ಮತ್ತು ೧೪ನೆ ಶತಮಾನದಲ್ಲಿ ನಿರ್ಮಾಣವಾಗಿರುವುದಂತೆ. ಇಲ್ಲಿ ಶ್ರೀ ಚಂದ್ರನಾಥ, ಶ್ರೀ ಪಾರ್ಶ್ವನಾಥ, ಶ್ರೀ ಸುಪಾರ್ಶ್ವನಾಥ ಅವರ ಮೂರ್ತಿಗಳಿವೆ. ಬಸದಿಯ ಪಕ್ಕದಲ್ಲಿ, ಎರಡು ಸಾವಿರ ವರ್ಷಗಳ ಹಿಂದೆ ಮುನಿಗಳು ತಪಸ್ಸು ಮಾಡಿದ ಸ್ಥಳದಲ್ಲಿ ಪಾದದ ಗುರುತು ಇದೆ.  ಎದುರು ಭಾಗದಲ್ಲಿ ಕೆಳಗೆ ಬಂಡೆಗಳ ಸುತ್ತ ಮೈದಾಳ ಸರೋವರವಿದೆ. ಸಮಯದ ಅಭಾವದಿಂದ ನಾವು ಅಲ್ಲಿಗೆ ಹೋಗಲಿಲ್ಲ.  ಇದೊಂದು ಪ್ರಶಾಂತ ತಾಣ. ಒಂದು ದಿನ ಇಲ್ಲಿ ಓಡಾಡಿ ಖುಷಿಯಿಂದ ಕಾಲ ಸದ್ವಿನಿಯೋಗ ಮಾಡಬಹುದು. ಬೆಟ್ಟಕ್ಕೆ ತೆರಳಲು ರಸ್ತೆಯೂ ಇದೆ. ಅಲ್ಲಿ ರಿಕ್ಷಾವಾಲಗಳು ಪ್ರವಾಸಿಗರನ್ನು ಕರೆದೊಯ್ಯಲು ಸದಾ ಸಿದ್ಧರಾಗಿ ನಿಂತಿರುತ್ತಾರೆ.

   ಬೆಟ್ಟದಿಂದ ಕೆಳಗೆ ಇಳಿದು ಒಂದು ಲೋಟ (ರೂ. ೨೦) ಕಬ್ಬಿನ ಹಾಲು ಕುಡಿದಾಗುವಾಗ ನವ ಚೈತನ್ಯ ಬಂದಿತು.

   ದಿಗಂಬರ ಚಂದ್ರನಾಥ ತೀರ್ಥಂಕರ

  ಪಂಡಿತರಹಳ್ಳಿಯಲ್ಲಿರುವ ಬಸದಿ ಬೆಟ್ಟದ ಬಳಿ ಇರುವ ಚಂದ್ರನಾಥ ತೀರ್ಥಂಕರರ ದಿಗಂಬರ ಪ್ರತಿಮೆ ಗಮನ ಸೆಳೆಯುತ್ತದೆ. ಇದು ೧೧ ವರ್ಷದ ಹಿಂದೆ ೨೦೧೧ರಲ್ಲಿ ಧರ್ಮಸ್ಥಳ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆಗೊಂಡಿತು. ದಿಗಂಬರ ಮೂರ್ತಿ ನೋಡಿದಾಗ ಬಾಹುಬಲಿಯದು ಮಾತ್ರ ಎಂದು ನಮ್ಮ ಭಾವನೆ. ಆದರೆ ಇಲ್ಲಿ ಇದು ಬಾಹುಬಲಿ ಮೂರ್ತಿ ಅಲ್ಲ. ಚಂದ್ರನಾಥರದ್ದೆಂದು ತಿಳಿಯಿತು.

  ಪಿಂಚಾಕೃತಿಯ ಧ್ಯಾನ ಮಂದಿರ

 ಪಿಂಚ ಎಂದರೆ ಜೈನಮುನಿಗಳ ಕೈಯಲ್ಲಿರುವ ನವಿಲುಗರಿಗಳ ಗುಚ್ಛ. ಅದರ ಆಕಾರದಲ್ಲಿ ಧ್ಯಾನ ಮಂದಿರವನ್ನು ಕಟ್ಟಿದ್ದಾರೆ. ಇದರ ವಾಸ್ತುಶಿಲ್ಪ ಕುತೂಹಲಕಾರಿಯಾಗಿದೆ. ಪಿಂಚಿ ಆಕಾರದ ಈ ಕಟ್ಟಡ ೮೧ ಅಡಿ ಎತ್ತರವಿದೆ.  ಇದು ಕೂಡ ೨೦೧೧ರಲ್ಲಿ ಉದ್ಘಾಟನೆಗೊಂಡಿತು. ಇಲ್ಲಿ ಬಿಳಿಯ ಶಿಲೆಯಲ್ಲಿ ದಿಗಂಬರ ಜೈನ ಶ್ರೀ ಶಾಂತಿಸಾಗರ (೧೮೫೫-೧೯೫೫) ಮಹಾರಾಜ್ ಅವರ ಶ್ವೇತ ಪ್ರತಿಮೆ ಸ್ಥಾಪಿಸಿದ್ದಾರೆ. ಸುತ್ತ ಗೋಡೆಯಲ್ಲಿ ಜೈನ ಮುನಿಗಳ ಜೀವನ ಶೈಲಿಯ ಚಿತ್ರಗಳು ಗಮನ ಸೆಳೆಯುತ್ತವೆ.  ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆವು.


  ಬಿಸಿಲಕಾವಿನಿಂದ ಧ್ಯಾನಮಂದಿರದ ಹೊರಭಾಗದಲ್ಲಿ ಹಾಕಿದ ಟೈಲ್ಸ್ ಕಾದು ಅದರಮೇಲೆ ನಡೆದಾಗ ಕಾಲು ತಕಧಿಮಿ ಹಾಕುತ್ತಿತ್ತು!  ಅಂತದ್ದರಲ್ಲೂ ಅಲ್ಲಿ ಪಟ ತೆಗೆಸಿಕೊಳ್ಳಲು ಹಿಂಜರಿಯಲಿಲ್ಲ!

   ಸಿದ್ದಗಂಗೆ ಮಠ

ನಾವು ೩.೩೦ಕ್ಕೆ ಮಂದರಗಿರಿಯಿಂದ ಹೊರಟು ಸಿದ್ದಗಂಗೆ ಮಠಕ್ಕೆ ಹೋದೆವು. ಅಲ್ಲಿ ದಾಸೋಹ ಭವನದಲ್ಲಿ ಊಟ (ಅನ್ನ, ಹೆಸರುಕಾಳು ಗಸಿ, ಸಾಂಬಾರು, ಮಜ್ಜಿಗೆ) ಮಾಡಿದೆವು. ಕೈ, ತಟ್ಟೆ ತೊಳೆಯುವ ಸ್ಥಳದಲ್ಲಿ ಒಂದು ಡಬರಿಯಲ್ಲಿ (ಹಸಿದವರು?) ಅನ್ನಸಾಂಬಾರು ತುಂಬಿ (ಇಪ್ಪತ್ತು ಮಂದಿ ಊಟ ಮಾಡುವಷ್ಟು) ನೆಲದಲ್ಲೂ ಹರಡಿತ್ತು. ಅನ್ನದ ಮಹತ್ತ್ವ ಗೊತ್ತಿದ್ದರೆ ಯಾರೂ ಹೀಗೆ ವ್ಯರ್ಥ ಮಾಡಲಿಕ್ಕಿಲ್ಲವೇನೋ? ಎನಿಸಿತು.  ಮಧ್ಯಾಹ್ನದಿಂದ ಇಳಿಹೊತ್ತಿನ ತನಕವೂ ದಾಸೋಹ ನಡೆಯುತ್ತಿರುತ್ತದಂತೆ.

  ದಾಸೋಹಭವನ ಪ್ರವೇಶಿಸುತ್ತಿದ್ದಂತೆ, ನಾಲ್ಕಾರು ಬೃಹತ್ ಕೊಳದಪಲೆಗಳು ಕಂಡುವು. ಅವುಗಳಲ್ಲಿ ಭಕ್ತರು ದಾನ ನೀಡಿದ ಭತ್ತ, ಅಕ್ಕಿ, ಕಾಳುಗಳು ಇದ್ದುವು. ಒಳಗೆ ನೆಲದಲ್ಲಿ ತರಕಾರಿಗಳು ಹರಗಿರುವುದು ಕಂಡಿತು. ಅಲ್ಲಿದ್ದ ಕಾಣಿಕೆಡಬ್ಬಕ್ಕೆ ನಮ್ಮ ಯತಾನುಶಕ್ತಿ ಕಾಣಿಕೆ ಸಲ್ಲಿಸಿ ಅಲ್ಲಿಂದ ನಿರ್ಗಮಿಸಿದೆವು.

   ದಾಸೋಹ ಭವನೆದುರು ಚಪ್ಪಲಿ ಇಡಲು ವ್ಯವಸ್ಥೆ ಇದೆ. ಒಂದು ಜೊತೆ ಚಪ್ಪಲಿಗೆ ಶುಲ್ಕ ರೂ. ೨ ಎಂಬ ಫಲಕ ಇದೆ. (ಅವರು ರೂ.೩ ಪಡೆಯುತ್ತಾರೆ) ರೂ. ೩ ಕೊಡಲಾಗದಿರುವವರು (ಅಷ್ಟು ದಾರಿದ್ರ್ಯವೋ (ಬೆಲೆಬಾಳುವ ಶೂ ಚಪ್ಪಲಿ ನೋಡಿದರೆ ದಾರಿದ್ರ್ಯ ಅಲ್ಲ ದರಿದ್ರ ಬುದ್ಧಿ ಎಂದೇ ಹೇಳಬಹುದು) ಅಲ್ಲ ಉಡಾಫೆಯೋ) ಚಪ್ಪಲಿಯನ್ನು ಎಲ್ಲೆಂದರಲ್ಲಿ ಬಿಟ್ಟು ಊಟಕ್ಕೆ ತೆರಳುತ್ತಾರೆ. ಇಡುವುದನ್ನಾದರೂ ಸಾಲಾಗಿ ಅಚ್ಚುಕಟ್ಟಾಗಿ ಇಡಬಾರದೇ? ಪಾದರಕ್ಷೆಗಳನ್ನು ಇಲ್ಲಿ ಬಿಡಬಾರದು ಎಂಬ ಫಲಕದೆದುರೇ ಶೂ ಚಪ್ಪಲಿಗಳ ತೋರಣ!

   ಸಿದ್ದಗಂಗೆ ಮಠದ ಬಳಿ ರಸ್ತೆ ಬದಿಯಲ್ಲಿ ಶುಕ ಶಕುನ ಹೇಳುವವನೊಬ್ಬ, ಅವನ ಸುತ್ತ ನಾಲ್ಕಾರು ಮಂದಿ ಕುಳಿತ್ತು ಶಕುನ ಕೇಳುತ್ತಿರುವುದು ಗಮನ ಸೆಳೆಯಿತು. 

   ಕೆಲವರೆಲ್ಲ ಅಲ್ಲಿ ಗದ್ದಿಗೆ, ದೇವಾಲಯಕ್ಕೆ ಹೋಗಿ ಬಂದರು. ಸಂಜೆ ೫ ಗಂಟೆಗೆ ಅಲ್ಲಿಂದ ಹೊರಟು ನೆಲಮಂಗಲ ಬೆಳ್ಳೂರು ಕ್ರಾಸ್ ರಸ್ತೆಯಲ್ಲಿ ಚಹಾ, ಕಾಫಿ ಸೇವನೆ. ಬಾಸ್ಕರ ತನ್ನ ಪಾಳಿ ಕೈದುಗೊಳಿಸುವ ಸಮಯದಲ್ಲಿ ಮನಮೋಹಕವಾಗಿ ಕಂಗೊಳಿಸುತ್ತಿದ್ದ. 


 ಚಾರಣ ಕಾರ್ಯಕ್ರಮದ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು ಬಸ್ಸಿನಲ್ಲಿ ಕೆಲವರು ಹೇಳಿದರು. ಪ್ರಥಮ ಬಾರಿ ಚಾರಣ ಬಂದವರು ಕೆಲವರು ಅವರ ಅನುಭವ ಹೇಳಿಕೊಂಡು ಖುಷಿಪಟ್ಟರು. ೨೧ ಮಂದಿಯ ನಮ್ಮ ತಂಡದಲ್ಲಿ ೧೧ ವರ್ಷದಿಂದ ಹಿಡಿದು, ೮೦ ವರ್ಷದ ವಯಸ್ಸಿನವರು ಭಾಗಿಯಾಗಿದ್ದು, ಮೂರು ಮಂದಿ ಮಾತ್ರ ಗಂಡಸರಿದ್ದದ್ದು. ಆ ಬಗ್ಗೆ ಪ್ರಭಾಕರರಿಗೆ ಇರಿಸು ಮುನಿಸು! ಹೆಣ್ಣುಮಕ್ಕಳೇ ಸ್ಟ್ರಾಂಗು ಗುರು ಎಂದು ಹಾಡಿದರೆಲ್ಲರೂ! ೧೧ ವರ್ಷದ ಮೈತ್ರೇಯಿ ಬಹಳ ಹುರುಪಿನಿಂದ ಭಾಗಿಯಾಗಿದ್ದಳು.

ಮುಂದೆ ಎಲ್ಲೂ ನಿಲ್ಲದೆ ಮೈಸೂರು ತಲಪಿದಾಗ ರಾತ್ರೆ ೯.೧೫. ಮೈಸೂರು ಯೂಥ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ, ಚನ್ನಮಲ್ಲನಾಯಕ ಹಾಗೂ ಸರೋಜಾ ಈ ಚಾರಣ ಕಾರ್ಯಕ್ರಮವನ್ನು (ತಲಾ ಒಬ್ಬರಿಗೆ ರೂ.೯೦೦) ಯಶಸ್ವಿಯಾಗಿ ಮುನ್ನಡೆಸಿದ್ದರು. ಅವರಿಬ್ಬರಿಗೆ ನಮ್ಮ ಸಹಚಾರಣಿಗರೆಲ್ಲರ ಪರವಾಗಿ ಧನ್ಯವಾದ. 

 ನಿಜಗಲ್ಲು ದುರ್ಗಕ್ಕೆ ದಾರಿ:  ಮೈಸೂರು-ಮದ್ದೂರು-ಕುಣಿಗಲ್- ನಾಗಮಂಗಲ ರಸ್ತೆ- ದಾಬಸ್ ಪೇಟೆ (ಎನ್ ಎಚ್ ೨೦೭) ದಾಬಸ್ ಪೇಟೆಯಿಂದ ಬಲಕ್ಕೆ ಸಿದ್ದರಬೆಟ್ಟ ರಸ್ತೆ. ಮೈಸೂರಿನಿಂದ ಸುಮಾರು ೧೮೦ಕಿಮೀ. ಬೆಂಗಳೂರಿನಿಂದ ೬೫ಕಿಮೀ.

ಮಂದರಗಿರಿ ದಾರಿ: ದಾಬಸ್ ಪೇಟೆಯಿಂದ ೧೩ಕಿಮೀ. ಬಲಭಾಗಕ್ಕೆ ಜೈನಕಾಶಿ.

ಇಲ್ಲಿ ಬಳಸಿದ ಕೆಲವು ಪಟಗಳು ಸಹಚಾರಣಿಗರದು. ಅವರಿಗೆ ಧನ್ಯವಾದ. 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ