ಹೇಮಗಿರಿಯ ಮಲ್ಲೇಶ್ವರ ಬೆಟ್ಟ-ಹುಲಿಯೂರುದುರ್ಗದ ಕುಂಬಿಬೆಟ್ಟ
ಬಿಸಿಲಿಗೆ ಚಾರಣ ಹೋಗುವುದು ಕಷ್ಟ
ಎಂದು ಒಮ್ಮೆ ಮನಸು ಪಿಸುನುಡಿಯುತ್ತದೆ. ಇಂಥ ಜಾಗಕ್ಕೆ ಚಾರಣವಿದೆ ಎಂಬ ಸಂದೇಶ ಕಂಡಾಗ, ಅದೇ ಮನಸು
ಮನೆಯಲ್ಲಿರಬೇಡ, ಹೊರಡು ಬೆಟ್ಟ ಇರುವುದೇ ಹತ್ತಲು ಎಂದು ಹುರಿದುಂಬಿಸುತ್ತದೆ! ಆಗ ಮನಸಿನ ಮಾತನ್ನು
ಕೇಳುವುದೇ ಜೈ ಎಂದು ಬಿಸಿಲಾದರೇನು? ಚಳಿಯಾದರೇನು? ಎಂದು ಹೊರಡುವುದೇ ಸೈ!
ತಾರೀಕು ೨೭.೨.೨೨ರಂದು ನಾವು ಬೆಳಗ್ಗೆ ೬ ಗಂಟೆಗೆ ಮೈಸೂರಿನಿಂದ
೨೨ ಮಂದಿ ಕಲ್ಪವೃಕ್ಷ ಟ್ರಾವೆಲ್ಸ್ ನವರ ಸಣ್ಣ ಬಸ್ಸಿನಲ್ಲಿ ಹುಲಿಯೂರು ದುರ್ಗಕ್ಕೆ ಹೊರಟೆವು.
ಮೈಸೂರು-ಮಂಡ್ಯ-ಮದ್ದೂರು-ಕುಣಿಗಲ್
ರಸ್ತೆ-ಹುಲಿಯೂರುದುರ್ಗ. ಮೈಸೂರಿನಿಂದ ಸುಮಾರು ೯೨ ಕಿಮೀ.
ರಾಮನಗರದಿಂದ ೩೦ಕಿಮೀ,
ಕುಣಿಗಲ್ ನಿಂದ ೨೨ ಕಿಮೀ, ಹುಲಿಯೂರು ದುರ್ಗದಿಂದ ೨ಕಿಮೀ.
ಮಲ್ಲೇಶ್ವರ ಬೆಟ್ಟ |
ದಾರಿ ಮಧ್ಯೆ ದುಂಡನಹಳ್ಳಿ ಕೆರೆ ಪಾರ್ಕಿನಲ್ಲಿ ನಾವು ತಿಂಡಿ
(ಹೆಸರುಬೇಳೆಯನ್ನ, ಕೇಸರಿಬಾತ್) ತಿಂದೆವು. ಬುತ್ತಿ ತುಂಬಿಸಿಕೊಂಡು (ಬಿಸಿಬೇಳೆಭಾತ್, ಮೊಸರನ್ನ,
ಸೌತೆಕಾಯಿ, ಬಾಳೆಹಣ್ಣು) ಹೊರಟು ೯ ಗಂಟೆಗೆ ಹುಲಿಯೂರು ದುರ್ಗಕ್ಕೆ ತಲಪಿದೆವು. ಅಲ್ಲಿ ತಂಡದ ಸ್ವಪರಿಚಯವಾಗಿ
ಹೇಮಗಿರಿಯ ಮಲ್ಲೇಶ್ವರಬೆಟ್ಟ ಹತ್ತಲು ಅಣಿಯಾದೆವು. ಬಂಡೆಯಲ್ಲೇ ಮೆಟ್ಟಲು ಕೊರೆದಿದ್ದಾರೆ. ಹಾಗಾಗಿ
ಹತ್ತಲು ಸುಲಭ. ಮೆಟ್ಟಲ ದಾರಿ ಬಿಟ್ಟು ಬಂಡೆಮೇಲೆಯೇ ನಡೆದೆ. ದೊಡ್ಡದಾದ ಕಡಿದಾದ ಬೆಟ್ಟವೇನಲ್ಲ, ಹತ್ತುವುದು
ಬಲು ಸುಲಭ. (ಸಮುದ್ರಮಟ್ಟದಿಂದ ೩೮೦೦ ಅಡಿ ಮೇಲಿದೆ ಎಂದು ಅಂತರ್ಜಾಲದಲ್ಲಿ ಮಾಹಿತಿ ಇತ್ತು) ಸುತ್ತಲೂ
ಬಂಡೆಗಳಿಂದಾವೃತವಾಗಿದೆ. ಬಂಡೆಗಳಿಗೆ ಸಸ್ಯಶ್ಯಾಮಲೆ ಹಬ್ಬುವುದು ಬೇಡವಾಗಿದೆಯೋ ಎಂಬಂತೆ ಅಲ್ಲಿ ಸಸ್ಯಗಳು
ಇರಲಿಲ್ಲ. ಬಟಾಬಯಲು. ಅರ್ಧ ಏರಿದಂತೆ ಅಲ್ಲಿ ಪಾಳುಬಿದ್ದ
ಮುಖಮಂಟಪ ಎದುರಾಯಿತು. ಅಲ್ಲಿ ತುಸು ವಿರಮಿಸಿ ಹೊರಟೆವು. ಮುಂದೆ ಒಂದು ದೊಣೆ ಎದುರಾಯಿತು. ಸಾಕಷ್ಟು
ನೀರೂ ಇತ್ತು.
(ಬೆಂಗಳೂರಿನ
ಸುತ್ತಮುತ್ತ ಕೆಂಪೇಗೌಡರು ೯ ದುರ್ಗ ಕಟ್ಟಿಸಿದ್ದರಂತೆ. ಆ ನವದುರ್ಗಗಳು, ೧) ನಂದಿ ದುರ್ಗ (೪೮೫೧
ಅಡಿ) ೨) ಮಾಕಳಿದುರ್ಗ (೩೬೬೪ ಅಡಿ) ೩)ಚನ್ನರಾಯನ ದುರ್ಗ ( ೩೯೪೦ ಅಡಿ) ೪) ದೇವರಾಯನ ದುರ್ಗ ( ೩೭೪೩
ಅಡೀ) ೫)ಭೈರವದುರ್ಗ (೨೩೦೦ ಅಡಿ) ೬) ಹುಲಿಯೂರು ದುರ್ಗ(೨೭೭೨ ಅಡಿ) ೭) ಸಾವನದುರ್ಗ(೧೨೨೬ ಅಡಿ) ೮)ಕಬ್ಬಾಲದುರ್ಗ(೩೬೦೦
ಅಡಿ) ೯) ಹುತ್ರಿ ದುರ್ಗ( ೨೭೦೦ ಅಡಿ) (ಇವುಗಳಲ್ಲಿ ೬ ದುರ್ಗಗಳನ್ನು ಏರುವ ಭಾಗ್ಯ ನನಗೆ ಲಭಿಸಿದೆ.)
೧೦ ಗಂಟೆಗೆ ನಾವು ಬೆಟ್ಟದ ತುದಿ ತಲಪಿದೆವು. ಪವನಕುಮಾರನ
ಕೃಪೆ ಧಾರಾಳವಾಗಿ ಇದ್ದುದರಿಂದ ಸೂರ್ಯಕುಮಾರನ ತಾಪ ನಮಗೆ ಅಷ್ಟು ಬಾಧಿಸಲಿಲ್ಲ.
ಬೆಟ್ಟದ ಮೇಲೆ ಶ್ರೀ ಮಲ್ಲೇಶ್ವರ ಸ್ವಾಮಿ ದೇಗುಲವಿದೆ.
ದೇಗುಲದೆದುರು ಕೊಳವೂ ಇದೆ. (ನೀರಿರಲಿಲ್ಲ.) ಅಲ್ಲಲ್ಲಿ
ಕೆಲವು ಸಸ್ಯಗಳು ಇವೆ. ಅಲ್ಲಿದ್ದ ಕಾಡು ಸಸ್ಯವೊಂದರಲ್ಲಿ ಅರಳಿದ ಅರಸಿನ ಹೂ ಮನಕ್ಕೆ ಮುದ ನೀಡಿತು.
ಬೆಟ್ಟದಮೇಲಿಂದ ಕುಂಬಿಬೆಟ್ಟ, ಹುಲಿಯೂರು ದುರ್ಗದ
ನೋಟ ನೋಡುವುದೇ ಚಂದ. ಪ್ರಕೃತಿಯ ಮಡಿಲಲ್ಲಿ ಕೂತು
ತಂಪಾಗಿ ಒಂದು ಗಂಟೆ ಹರಟುತ್ತ ಕಾಲ ಕಳೆದೆವು. ಸೋಮಶೇಖರ್ ಕೆಲವು ಮ್ಯಾಜಿಕ್ ಕಲೆಯನ್ನು ಪ್ರದರ್ಶಿಸಿದರು.
ತಂಡದ ಪಟ ತೆಗೆಸಿಕೊಂಡು ನಾವು ೧೧ ಗಂಟೆಗೆ ಅವರೋಹಣಮುಖರಾದೆವು. ೧೧.೩೦ಗೆ ಕೆಳಗೆ ಸಮುದಾಯದ ಭವನದ ಬಳಿ ತಲಪಿದೆವು. ಅಲ್ಲಿದ್ದ ೬-೭ ಅಡಿ ಎತ್ತರದ ಹುತ್ತ ಗಮನ ಸೆಳೆಯಿತು. ಬೆಟ್ಟ ಸುಮಾರುಕಡೆ ಕರಗಿದೆ. ಯಾರೋ ಕಲ್ಲು ಕೆತ್ತಿರಬೇಕು.
೨ಕಿಮೀ ದೂರದಲ್ಲಿದ್ದ ಕುಂಬಿಬೆಟ್ಟದೆಡೆಗೆ ಹೊರಟೆವು. ಸುಮಾರು
೪೦ ಮೆಟ್ಟಲು ಏರಿದಾಗ ಕುಂಬಿ ಗಣಪತಿ ದೇವಾಲಯ ಎದುರಾಗುತ್ತದೆ. ಅಲ್ಲಿ ಗಣಪನಿಗೆ ವಂದಿಸಿ ನಾವು ಬೆಟ್ಟ
ಏರಲು ತಯಾರಾದೆವು. ೬-೭ ಮಂದಿ ಮುಂದೆ ಹತ್ತುವ ಧೈರ್ಯ ಮಾಡದೆ ಅಲ್ಲೇ ಕುಳಿತರು.
ಬೆಟ್ಟ ಹತ್ತಲು ಸರಿಯಾದ ದಾರಿ ಇಲ್ಲ. ಲಂಬಾಕೃತಿಯ ಸಣ್ಣ
ಬಂಡೆಗಲ್ಲು ಹತ್ತಿ ನಡೆದಾಗ ಮುಂದೆ ಕಣ್ಣೆದುರು ಕಡಿದಾದ ಸ್ಥಳದಲ್ಲಿ (ಸರಿಯಾಗಿ ನಾಲ್ಕೈದು ಮಂದಿ ನಿಲ್ಲಲೂ
ಸ್ಥಳವಿಲ್ಲ.) ದೊಡ್ಡದಾದ ಪಾದೆಕಲ್ಲು ಎದುರಾಯಿತು. ಇದನ್ನು ಏರಬೇಕು ಎಂಬುದೇ ಖುಷಿ, ಆತಂಕ ಏಕಕಾಲದಲ್ಲಿ
ಉಂಟಾಯಿತು. ನಾಲ್ಕೈದು ಮಕ್ಕಳು ಬಂಡೆ ಇಳಿಯುತ್ತಲಿದ್ದವರು, ನಮ್ಮನ್ನು ನೋಡಿ, ನೋಡ್ರೋ, ಅಜ್ಜಿ,
ಆಂಟಿಯಂದಿರು ಈ ಬಂಡೆ ಹತ್ತಲು ಬರುತ್ತಿದ್ದಾರೆ ಎಂದು
ಉದ್ಗಾರವೆತ್ತಿದವರು ಬಾಯಿ ಮುಚ್ಚಲೇ ಮರೆತರು! ನೀವೆಲ್ಲ ಬಂಡೆ ಹತ್ತುವಿರ? ಕಷ್ಟ ಇದೆ. ಆಗಲ್ಲ
ಎಂದನೊಬ್ಬ. ಈ ಬಂಡೆ ಏರಿದಮೇಲೆ ಎನೂ ಕಷ್ಟವಿಲ್ಲ, ಹತ್ತುತ್ತ ಹತ್ತುತ್ತ ಸುಲಭವಿದೆ ಎಂದ ಇನ್ನೊಬ್ಬ.
ಇದೇನು ಮಹಾ! ಇದಕ್ಕಿಂತ ದೊಡ್ಡ ಬಂಡೆ ಏರಿದವರೇ ಎಲ್ಲರೂ ಎಂದೆ.
ಈ ಪಾದೆಯನ್ನು ಏರಿದ ಬಳಿಕ ಬೆಟ್ಟದ ತುದಿ ತಲಪಲು ಏನೂ ಕಷ್ಟವಿಲ್ಲ.
ಬೆಟ್ಟದ ಸುತ್ತ ಕೋಟೆಯಿದೆ. ತುದಿಯಲ್ಲಿ ಇಟ್ಟಿಗೆಯಿಂದ ನಿರ್ಮಿಸಿದ ಕೋಟೆಯಿದೆ. ಅದು ಇನ್ನೂ ಗಟ್ಟಿಯಾಗಿರುವುದು
ಸೋಜಿಗವೇ ಸರಿ. ಸರಿಯಾದ ದಾರಿ ಇಲ್ಲದ ಇಲ್ಲಿಗೆ ಈ ಇಟ್ಟಿಗೆ ತಂದು ಕೋಟೆ ನಿರ್ಮಿಸಿದ್ದಾರಲ್ಲ ಎಂಥ
ಕುಶಲ ಶೌರ್ಯವಿದು. ಎಂದು ಆಶ್ಚರ್ಯವಾಯಿತು. (ಈ ಸುದ್ದಿಯನ್ನು ನಮ್ಮ ಸಿದ್ದಮ್ಮಳಿಗೆ ಹೇಳಿದಾಗ, ಆಗಿನ
ಕಾಲದಲ್ಲಿ ಚೋಳರಿದ್ದವರು ಬಲಶಾಲಿಗಳು, ಅವರು ನಡೆಯುತ್ತಿರಲಿಲ್ಲವಂತೆ, ಹಾರಿಕೊಂಡೇ ಹೋಗುತ್ತಿದ್ದರಂತೆ
ಎಂಬ ಕಥೆ ಹೇಳಿದಳು!) ಮುಳಿಹುಲ್ಲು ಬಿಟ್ಟರೆ ಅಲ್ಲಿ ಯಾವ ಸಸ್ಯವೂ ಇಲ್ಲ. ಸುರ್ಯಕುಮಾರ ಕೆಂಗಣ್ಣು
ಬೀರುತ್ತಿದ್ದ. ಅಂಥ ಸನ್ನಿವೇಶದಲ್ಲಿ ಗಿಡಮರಗಳ ಅವಶ್ಯ
ಎಷ್ಟಿದೆ ಎಂಬ ಅರಿವು ನಮಗಾಗುವುದು. ಕೋಟೆಯ ಮೇಲೆ ನಿಂತು ನೋಡಿದಾಗ ಒಂದು ಪಾರ್ಶ್ವದಲ್ಲಿ ಮಲ್ಲೇಶ್ವರ
ಬೆಟ್ಟದ ಸೊಬಗು ಕಾಣುತ್ತದೆ.
ಬೆಟ್ಟದಮೇಲೆ ಭುವನೇಶ್ವರಿ ಧ್ವಜ ಹಾರುತ್ತಲಿತ್ತು. ಅಲ್ಲಿ
ಕೋಟೆಯ ಸುತ್ತ ನಡೆದು, ಪಾಳುಬಿದ್ದ ಕಟ್ಟಡದ ಅವಶೇಷ ನೋಡಿದೆವು. ಕೋಟೆ ಗೋಡೆಯ ನೆರಳಿನಲ್ಲಿ ಕೂತು ಬುತ್ತಿ
ತೆರೆದು ೨ ಗಂಟೆಗೆ ಊಟ ಮಾಡಿದೆವು. ಒಂದು ಗಂಟೆ ಅಲ್ಲಿ
ಕೂತಿದ್ದು ೩ ಗಂಟೆಗೆ ಇಳಿಮುಖರಾದೆವು.
ಬಂಡೆ ಹತ್ತುವುದೇನೋ ಸಲೀಸಾಗಿ ಹತ್ತಿದೆವು. ಇನ್ನು ಸಾಬೀತಿನಲ್ಲಿ
ಇಳಿಯಬೇಕಲ್ಲ ಎಂಬ ಚಿಂತೆ ಕೆಲವರಿಗೆ ಕಾಡಿತು. ದೊಡ್ಡ ಬಂಡೆಯ ಬಳಿ ಇನ್ನೊಂದು ದಾರಿಯಿತ್ತು. ಅಲ್ಲಿ
ಒಂದು ಗಿಡಕ್ಕೆ ಪೈಪ್ ಕಟ್ಟಿದ್ದರು. ಆ ಪೈಪ್ ಹಿಡಿದು ಸರ್ಕಸ್ ಮಾಡುತ್ತ ಅಂತೂ ಕೆಳಗೆ ಇಳಿಯುವಲ್ಲಿ
ಜಯಶೀಲರಾದೆವು. ಯಾರಿಗೂ ಒಂದು ತರಚು ಗಾಯವಾಗದೆಯೇ
ನಾವು ಸುಕ್ಷೇಮವಾಗಿ ಹಿಂದೆ ಬಂದದ್ದು ಖುಷಿಯ ವಿಷಯ. ಗಣಪನಿಗೆ ವಂದಿಸಿ ಕೆಳಗೆ ಬಂದೆವು.
ಗೌಡಗೆರೆ, ಮಳೂರು ಹೋಬಳಿ, ಚನ್ನಪಟ್ಟಣ ತಾಲ್ಲೂಕಿನಲ್ಲಿರುವ
ಚಾಮುಂಡೇಶ್ವರೀ ಪುಣ್ಯಕ್ಷೇತ್ರಕ್ಕೆ ನಾವು ಭೇಟಿಕೊಟ್ಟೆವು. ತೆಂಗಿನ ತೋಪಿನ ಮಧ್ಯೆ ವಿಶಾಲವಾದ ಸ್ಥಳದಲ್ಲಿರುವ
ಈ ದೇವಾಲಯದಲ್ಲಿ ಚಾಮುಂಡೇಶ್ವರಿಯ ದಿವ್ಯ ಮೂರ್ತಿ ಪೂಜಿಸಲ್ಪಡುತ್ತದೆ. ದೇವಾಲಯದ ಹೊರ ಆವರಣದಲ್ಲಿ
೧೮ ಭುಜಗಳಿರುವ ಸೌಮ್ಯ ರೂಪದ ಚಾಮುಂಡೇಶ್ವರಿಯ ಪಂಚಲೋಹದ ವಿಗ್ರಹ ೬೦ ಅಡಿ ಎತ್ತರದಲ್ಲಿದೆ. ಈ ವಿಗ್ರಹ
ಸ್ಥಾಪನೆಯಾಗಿ ೬ ತಿಂಗಳಾಯಿತಷ್ಟೆ. ಇನ್ನೂ ಸಿಂಹವಿಗ್ರಹ ಕೆತ್ತನೆ ಬಾಕಿ ಇದೆಯಂತೆ. ಅದಕ್ಕಾಗಿ ದಾನಿಗಳು
ನೀಡಿದ ಪಂಚಲೋಹದ ಪಾತ್ರೆಪಗಡಗಳು ದಂಡಿಯಾಗಿ ಬಂದು ಬಿದ್ದಿವೆ. ಅಲ್ಲಿ ನಿತ್ಯ ದಾಸೋಹವೂ ಇದೆ.
ಪವಾಡ ಶ್ರೀ ಬಸವಪ್ಪ
ಈ ದೇವಾಲಯದ ಪಕ್ಕದಲ್ಲಿ ಶ್ರೀ ಬಸವಪ್ಪನಿದ್ದಾನೆ. ಅವನ ಕೊಂಬಿಗೆ
ನೋಟಿನ ಮಾಲೆ ಸಿಕ್ಕಿಸಿರುವುದನ್ನು ನೋಡಿ ಕುತೂಹಲದಿಂದ ಅಲ್ಲಿದ್ದವರನ್ನು ಪ್ರಶ್ನಿಸಿದೆ. ಭಕ್ತರು
ಕೊಟ್ಟ ಕಾಣಿಕೆಯನ್ನು ಹೀಗೆ ಮಾಲೆ ಮಾಡಿ ಹಾಕುವುದಂತೆ. ಅದನ್ನು ತೆಗೆಯಲು ಬಸವಪ್ಪ ಅಪ್ಪಣೆ ಕೊಡುತ್ತಾನಂತೆ.
ಆಗ ಮಾತ್ರ ತೆಗೆಯುವುದಂತೆ. ಈ ಬಸವಪ್ಪನಿಗೆ ವಯಸ್ಸಾಗಿದೆಯಂತೆ, ಹಾಗಾಗಿ ಹೆಚ್ಚು ಮಲಗಿಯೇ ಇರುವುದಂತೆ.
ಪವಾಡ ಬಸವಪ್ಪನಿಗೆ ನಮನ ಸಲ್ಲಿಸಿ ನಾವು ಅಲ್ಲಿಂದ ನಿರ್ಗಮಿಸಿದೆವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ