ಭಾರತ ದರ್ಶನ ವಿಶೇಷ ಪ್ರವಾಸೀ ರೈಲು ದೇಶದ ಎಲ್ಲ ಪ್ರಮುಖ ಪ್ರವಾಸೀ ಸ್ಥಳಗಳನ್ನು ಕೈಗೆಟಕುವ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ವ್ಯವಸ್ಠೆ ಮಾಡಿರುವುದಾಗಿದೆ. ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೊರೇಷನ್ ಲಿಮಿಟೆಡ್ (IRCTC) ರೈಲ್ವೇ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ಒಂದು ಉದ್ಯಮವಾಗಿದೆ.
ಈ ಬಾರಿ ಕರ್ನಾಟಕದ ಪ್ರವಾಸಿಗರಿಗಾಗಿ ‘ಪುಣ್ಯತೀರ್ಥ ಕಾಶಿಧಾಮ ಮತ್ತು ಅಯೋಧ್ಯಾ ಶ್ರೀ
ರಾಮಜನ್ಮಭುಮಿ ಯಾತ್ರಾ’ ಎಂಬ ೧೦ ರಾತ್ರಿ, ೧೧ ಹಗಲುಗಳ ಒಂದು ವಿಶೇಶ ರೈಲು ಪ್ರವಾಸವನ್ನು
ಆಯೋಜಿಸಿತ್ತು. ಈ ವಿಶೇಶ ಪ್ರವಾಸೀ ರೈಲು ದಿನಾಂಕ ೨೬-೩-೨೦೨೨ರಂದು ಬೆಂಗಳೂರು ವೈಟ್ಫೀಲ್ಡ್
ರೈಲ್ವೇ ನಿಲ್ದಾಣದಿಂದ ಹೊರಟಿತು.
ಈ ಪ್ರವಾಸೀ ಯೋಜನೆಯ ವಿಷಯ ನಮ್ಮ ಸ್ನೇಹಿತರಿಂದ ತಿಳಿದು ನಾವೂ ಹೋಗಬಹುದು ಎಂದು ಯೋಜನೆ
ಹಾಕಿದೆವು. ರೈಲು ಪಯಣ ಆಯಾಸವಾಗಲಾರದು. ಅಕ್ಕತಂಗಿಯರು ಒಡಗೂಡಿ ಒಟ್ಟಿಗೆ ಹೋಗುವುದು ಮಜಾ
ಇರುತ್ತದೆ ಎಂದು ತೀರ್ಮಾನಿಸಿದೆವು. ನಾವು ೬
ಮಂದಿಗೆ (ಮಂಗಲಗೌರಿ-ಬಾಲಸುಬ್ರಹ್ಮಣ್ಯ, ರುಕ್ಮಿಣಿಮಾಲಾ-ಅನಂತವರ್ಧನ, ಸವಿತಾ, ಲಕ್ಷ್ಮೀ) ಟಿಕೆಟ್
ಕಾದಿರಿಸಿದೆವು. ತಲಾ ಒಬ್ಬರಿಗೆ ರೂ. ೧೦೫೦೦. ಸವಿತಳ ಮಗ ಶರತ್ ಅಂತರ್ಜಾಲದಲ್ಲೇ ಟಿಕೆಟ್ ಕಾದಿರಿಸಿ ಸಹಕರಿಸಿದ.
ಬೆಂಗಳೂರಿಗೆ ಪಯಣ
ಯಲಹಂಕ ರೈಲು ನಿಲ್ದಾಣದಿಂದ ರೈಲು ಹೊರಡುವುದೆಂದು ಇದ್ದದ್ದು ಕೊನೆಯ ಹಂತದಲ್ಲಿ
ವೈಟ್ಫೀಲ್ಡ್ ನಿಲ್ದಾಣದಿಂದ ಹೊರಡುವುದೆಂಬ ವಿಷಯ ತಿಳಿದು, ಕಾರಿನಲ್ಲಿ ಹೊರಡುವ ನಿರ್ಧಾರವನ್ನು
ಬಿಟ್ಟು, ನಾವು ೫ ಮಂದಿ ೨೬.೩.೨೦೨೨ರಂದು ಮೈಸೂರಿನಿಂದ ಬೆಳಗ್ಗೆ ೫ ಗಂಟೆಯ ಚೆನ್ನೈ ಎಕ್ಸ್ಪ್ರೆಸ್
ರೈಲಿನಲ್ಲಿ ಹೊರಟು ಬೆಂಗಳೂರಿನ ವೈಟ್ ಫೀಲ್ಡ್ ನಿಲ್ದಾಣದಲ್ಲಿ ೯.೧೫ಕ್ಕೆ ಇಳಿದೆವು. ಅಲ್ಲಿ ಕೇವಲ ೫ ನಿಮಿಷ ಮಾತ್ರ ಗಾಡಿ ನಿಲುಗಡೆ. ತುಂಬ ಮಂದಿ
ಇಳಿಯುವವರಿದ್ದರು. ನೂಕು ನುಗ್ಗಲು, ಲಗೇಜು ಇಳಿಸುವುದು ಇತ್ಯಾದಿ ಗೊಂದಲದಲ್ಲಿ ಹೇಗೋ ಇಳಿದೆವು.
ಆಗ ಒಂದು ಬ್ಯಾಗ್ ರೈಲಲ್ಲೇ ಬಾಕಿ ಎಂಬ ಗೊಮ್ದಲವಾಗಿ, ನಾನು ಕೂಡಲೇ ರೈಲು ಹತ್ತಿದೆ. ಇನ್ನೇನು
ಇಳಿಯಬೇಕು ಎನ್ನುವಷ್ಟರಲ್ಲಿ ರೈಲು ಹೊರಟೇಬಿಟ್ಟಿತು!
ಬರ್ಖತ್ ಎಂಬ
ಆಪತ್ಭಾಂಧವ
ಮುಂದಿನ ರೈಲು ಎಷ್ಟು ಗಂಟೆಗಿದೆ ಎಂದು
ರೈಲ್ವೇ ನಿಲ್ದಾಣದಲ್ಲಿ ವಿಚಾರಿಸಿದಾಗ, ೧೦.೪೫ಕ್ಕೆ ಇರುವುದು, ೧೧ ಗಂಟೆಗೆ ವೈಟ್ ಫೀಲ್ಡ್
ತಲಪುವುದು ಎಂದು ತಿಳಿಯಿತು. ನಾವು ಹೋಗಬೇಕಾದ ವಿಶೇಷ ರೈಲು ೧೧ ಗಂಟೆಗೆ ಹೊರಡುವುದರಿಂದ, ಅಲ್ಲಿ
ಎಲ್ಲರೂ ಗಾಬರಿಯಾದಾರೆಂದು ತಿಳಿದು, ಯಾವುದಾದರೂ ಗಾಡಿಯಲ್ಲಿ ಹೋಗುವುದೆಂದು ತೀರ್ಮಾನಿಸಿ, ಹೊರಗೆ
ಬಂದು ರಿಕ್ಷಾದವನನ್ನು ವಿಚಾರಿಸಿದೆ. ನಾನೇ ನಿಮ್ಮನ್ನು ೧೦.೪೫ಕ್ಕೆ ವೈಟ್ ಫೀಲ್ಡ್ ನಿಲ್ದಾಣಕ್ಕೆ
ತಲಪಿಸುವೆ ಎಂಬ ಭರವಸೆ ಕೊಟ್ಟ. ಸರಿ ಎಂದು ಹತ್ತಿ ಕೂತೆ. ರಿಕ್ಷಾ ಚಾಲಕನ ಹೆಸರು ಬರ್ಖತ್.
(ಹೆಸರು ಸರಿ ಅರ್ಥವಾಗಲು ಎರಡೆರಡು ಸಲ ಕೇಳಿ ತಿಳಿಯಬೇಕಾಯಿತು) ಅವನೊಂದಿಗೆ ಅವನ ಸಂಸಾರದ ಕಷ್ಟ
ಸುಖ, ರಾಜಕೀಯ, ಸಾಮಾಜಿಕ ವಿಷಯ ಮಾತಾಡುತ್ತ ಸಾಗಿ, ಸರಿಯಾಗಿ ೧೦.೪೫ಕ್ಕೆ ವೈಟ್ ಫೀಲ್ಡ್
ನಿಲ್ದಾಣದೆದುರು ನಿಲ್ಲಿಸಿದ. ಅವನಿಗೆ ಧನ್ಯವಾದವನ್ನರ್ಪಿಸಿ, ನನ್ನ ಬಳಗವನ್ನು ಸೇರಿಕೊಂಡೆ. ಬರ್ಕತ್ ಗೆ ಹಳೆಬಾಕಿ ನೀನು ತೀರಿಸುವುದು ಇದ್ದಿರಬೇಕು. ಅವನ ಋಣ ಬಾಕಿ ಇದ್ದಿರಬೇಕು. ಹಾಗಾಗಿ ನೀನು ರೈಲೇರಬೇಕಾಯಿತು.
ಈಗ ಋಣ ಮುಕ್ತಾಯವಾಗಿದ್ದಿರಬೇಕು ಎಂದು ಅಕ್ಕ ನಗುತ್ತ ನುಡಿದಳು.
ಕಾಯುವಿಕೆಗಿಂತ ಅನ್ಯ ಪಥವಿಲ್ಲ
ರೈಲು ನಿಲ್ದಾಣದಲ್ಲಿ ಸುಮಾರು ಮಂದಿ
ಸೇರಿದ್ದೆವು. ೧೧ ಗಂಟೆ ಕಳೆದರೂ ರೈಲಿನ ಸುಳಿವಿಲ್ಲ. ಕೂರಲೂ ಸ್ಥಳವಿಲ್ಲ. ಎಲ್ಲಿ ಜಾಗವಿದೆಯೋ
ಅಲ್ಲೇ ಕೂತು ನಿಂತು ಜನ ಬಸವಳಿದರು. ಹೊಟ್ಟೆ ತಾಳ ಹಾಕುತ್ತಲಿತ್ತು. ನಾವು ೬.೩೦ಗೇ ತಿಂಡಿ ತಿಂದು
ಮುಗಿಸಿದ್ದೆವು. ಬಿಸ್ಕೆಟ್ ತಿಂದು ಸ್ವಲ್ಪ ಉಪಶಮನಗೊಂಡಿತು. ಅಂತೂ ೨ ಗಂಟೆ ದಾಟಿದಾಗ ರೈಲು
ಬಂದಿತು. ಹತ್ತಿ ಕೂತೆವು. ನಮ್ಮ ಬೋಗಿ ಎಸ್. ೩
ನಮ್ಮ
ಬೋಗಿಯಲ್ಲಿ ನಮ್ಮದೇ ವಿಭಾಗದಲ್ಲಿ ಮಂಗಳೂರಿನ ದಾಮೋದರ ಕಿಣಿ ಹಾಗೂ ಸುಮನ ದಂಪತಿಗಳ ಪರಿಚಯವಾಯಿತು.
೨.೩೦ಗೆ ಸರಿಯಾಗಿ ಊಟ ಕೊಟ್ಟರು. ನಾವಿದ್ದ ಜಾಗಕ್ಕೇ ಬಂದು ಊಟ (ಅನ್ನ, ಪಲ್ಯ, ಸಾರು, ಸಾಂಬಾರು, ಹಪ್ಪಳ,
ಮಜ್ಜಿಗೆ, ಉಪ್ಪಿನಕಾಯಿ) ಬಡಿಸಿದರು. ಊಟವಾಗಿ ಹರಟುತ್ತ ಕೂತೆವು.
ಕೂತು ಕೂತು ಸಾಕಾಗಿ ರೈಲೊಳಗೆ ಒಂದು ಬೋಗಿಯಿಂದ
ಇನ್ನೊಂದು ಬೋಗಿಯೆಡೆಗೆ ಸಾಗಿದೆವು. ಒಂದು ಬೋಗಿ ಇಡೀ ಅಡುಗೆಮನೆಯಾಗಿ ಪರಿವರ್ತನೆಯಾಗಿದ್ದದ್ದು
ಕಂಡಿತು. ವಿಸ್ಮಯದಿಂದ ಅಲ್ಲಿದ್ದವರೊಡನೆ ಮಾತಾಡಿದಾಗ, ಈ ವಿಶೇಷ ರೈಲಿನಲ್ಲಿ ಒಟ್ಟು ೧೨
ಬೋಗಿಗಳಲ್ಲಿ ೮೦೦ ಮಂದಿ ಯಾತ್ರಿಕರು, ೧೧೫ ಮಂದಿ ಸಿಬ್ಬಂದಿ ವರ್ಗ (ಅಡುಗೆಯವರು, ಬಡಿಸುವವರು,
ಕಾವಲುಗಾರರು, ಇತ್ಯಾದಿ). ಇರುವುದು ತಿಳಿಯಿತು. ಒಂದು ಬೋಗಿಯಲ್ಲಿ ಅಡುಗೆ ಏರ್ಪಾಡು. ಆ ಬಿಸಿಗೆ,
ಓಲಾಡುವ ರೈಲಲ್ಲಿ ಅಲ್ಲಿ ೯೧೫ ಮಂದಿಗೆ ಅಡುಗೆ ತಯಾರಿ ಮಾಡುವ ಅವರ ಕಾರ್ಯವನ್ನು ನೋಡಿ ಮೆಚ್ಚಿ ತಲೆದೂಗಿದೆವು.
ಸಂಜೆ ೪ಕ್ಕೆ ಕಾಫಿ, ಆಲೂ ಭುಜಿಯ, ರಾತ್ರೆ ೭.೪೫ಕ್ಕೆ ಊಟ (ಬಿರಿಯಾನಿ, ಬದನೆ ಕೂರ್ಮ,
ಮೊಸರನ್ನ, ಉಪ್ಪಿನಕಾಯಿ) ಬಡಿಸಿದರು. ಹೊಟ್ಟೆ ಬಿರಿಯ ಬಡಿಸುತ್ತಾರೆ. (ನಾವು ತಟ್ಟೆ, ಲೋಟ
ತೆಗೆದುಕೊಂಡು ಹೋಗಿದ್ದೆವು). ಹೊಟ್ಟೆ ಭರ್ತಿಯಾದಮೇಲೆ ನಮಗಿನ್ನೇನು ಕೆಲಸ? ೯ ಗಂಟೆಗೇ
ಮಲಗಿದೆವು.
ರೈಲಲ್ಲೇ ಕಾಲಕ್ಷೇಪ
ತಾರೀಕು ೨೭-೩-೨೨ರಂದು ಬೆಳಗ್ಗೆ ಎದ್ದು
ನಿತ್ಯಾದಿಕರ್ಮ ಮುಗಿಸಿ ಕೂತಾಗ, ೬.೩೦ಕ್ಕೆ ಸರಿಯಾಗಿ ಕಾಫಿ,ಚಹಾ ಬಂತು. ೭.೩೦ಕ್ಕೆ ತಿಂಡಿ
(ಕೇಸರಿಭಾತ್, ವಡೆ, ಪೊಂಗಲ್, ದಾಲ್, ಚಟ್ನಿ) ತಿಂದೆವು. ಬಿಸಿಬಿಸಿ ಗಾಳಿ. ಸೆಖೆಯ ವಾತಾವರಣ. ರೈಲು
ಚಲಿಸುತ್ತಲೇ ಇತ್ತು. ಕಿಟಕಿಯಿಂದ ಹೊರಗೆ ನೊಡುತ್ತ ಕೂತರೆ ಹೊತ್ತು ಸರಿಯುವುದೇ ಗೊತ್ತಾಗುವುದಿಲ್ಲ. ಮಧ್ಯಾಹ್ನದ ಊಟ ಬಂತೇ ಬಂತು. (ಅನ್ನ, ಅವಿಲ್, ಸಾಂಬಾರು, ಹಪ್ಪಳ, ಮಜ್ಜಿಗೆ,
ಉಪ್ಪಿನಕಾಯಿ). ಊಟವಾಗಿ ಕಣ್ಣು ತೂಗಿದವರು ಮಲಗಿ ನಿದ್ರಿಸಿದರು. ಪುಸ್ತಕ ಓದುತ್ತ ಕೂತಾಗ, ಕಣ್ಣು
ಬಾಡುವ ಸಮಯಕ್ಕೆ ಸರಿಯಾಗಿ ಕಾಫಿ, ಆಲೂಭುಜಿಯ ಬಂದಾಗ, ಕೈ ಬಾಯಿಗೆ ಕೆಲಸ ಕೊಟ್ಟೆವು.
ರೈಲು ಮುಂದೆ ಮುಂದೆ ಸಾಗಿದಂತೇ ಭತ್ತದ ಗದ್ದೆಗಳು ಹಿಂದೆ ಸರಿದುವು. ರಾತ್ರಿ ೭.೩೦ಗೇ ಊಟ (ಚಪಾತಿ, ಗಸಿ, ಮೊಸರನ್ನ) ಬಡಿಸಿದರು. ಬೇಕಾದಷ್ಟೂ ಚಪಾತಿ ಬಡಿಸಿದ್ದು ಕಂಡು, ಅಬ್ಬ ೯೧೫ ಮಂದಿಗೆ ಸಾವಿರಗಟ್ಟಲೆ ಚಪಾತಿ ಲಟ್ಟಿಸುವ ಅವರ ಈ ಮಹಾಕಾರ್ಯಕ್ಕೆ ಮೆಚ್ಚುಗೆ ಸೂಸಿ, ಚಪಾತಿ ಸವಿದೆವು.
ಅಂತೂ ಇಂತೂ ಪುರಿ ಬಂತು
ರಾತ್ರಿ ೮.೧೫ಕ್ಕೆ ಪುರಿ ನಿಲ್ದಾಣದಲ್ಲಿ
ರೈಲಿಳಿದು ಬಸ್ ಹತ್ತಿ ಜಾರ್ಖಂಡ್ ಅತಿಥಿ ಭವನಕ್ಕೆ ತಲಪುವಾಗ ೧೦ ಗಂಟೆ ದಾಟಿತ್ತು. ಒಂದೊಂದು
ಬೋಗಿಯ ಮಂದಿಗೂ ಬಸ್ ನಂ ಹಾಕಿ, ಅಷ್ಟೂ ಬಸ್ ವ್ಯವಸ್ಥೆ ಮಾಡಿದ್ದರು. ಬಾಯಿ ಜೋರಿದ್ದವರು ಬೇಗ ಬೇಗ ಕೋಣೆ ಹಿಡಿದರು. (ದ.ಕ.ಜಿಲ್ಲೆಯವರು
ಸೌಮ್ಯ, ಮಿತಭಾಷಿಗರು, ಮುನ್ನುಗ್ಗುವ ಛಾತಿ ಇಲ್ಲದವರು, ಸಹಿಷ್ಣುಗಳು!) ಒಂದೊಂದು ಕೋಣೆಯಲ್ಲಿ ೬-೮
ಮಂದಿ ಹೀಗೆ ಹಂಚಿದ್ದರು. ಪಾಯಿಖಾನೆ, ಬಚ್ಚಲುಮನೆ ಸಾರ್ವಜನಿಕವಾಗಿ ಇರುವ ವ್ಯವಸ್ಥೆ. ನಾವು ಆ
ಹೊಂದಾಣಿಕೆಗೆ ಮನ ಮಾಡದೆ, ಅಲ್ಲಿಯೇ ಒಂದು (ಬಚ್ಚಲು ಪಾಯಿಖಾನೆ ಒಳಗೇ ಇರುವಂಥ) ದೊಡ್ಡ ಕೋಣೆ
ಬಾಡಿಗೆಗೆ (ರೂ. ೧೩೦೦) ಪಡೆದೆವು. (ಅಂಥ ವ್ಯವಸ್ಥೆ ನಾವು ಮಾಡಿಕೊಳ್ಳಲು ಅನುಮತಿ ಇತ್ತು.) ತಣ್ಣೀರಲ್ಲಿ ಸ್ನಾನ ಮುಗಿಸಿ ಮಲಗುವಾಗ ೧೧.೩೦ ದಾಟಿತ್ತು.
ಪುರಿ ಜಗನ್ನಾಥ ದೇಗುಲ
ತಾರೀಕು ೨೮.೩.೨೦೨೨ರಂದು ಬೆಳಗ್ಗೆ ೫
ಗಂಟೆಗೆದ್ದು ನಿತ್ಯವಿಧಿ ಮುಗಿಸಿ ೬.೩೦ಗೆ ಹೊರಟು ಕಾಲ್ನಡಿಗೆಯಲ್ಲೇ ಜಗನ್ನಾಥನ ದರ್ಶನಕ್ಕೆ
ಹೋದೆವು. ಸರತಿ ಸಾಲಿನಲ್ಲಿ ನಿಂತು ಮುನ್ನಡೆದೆವು. ಇನ್ನೇನು ದೇವರ ದರ್ಶನವಾಗಬೇಕು ಅನ್ನುವಾಗ
ಬಾಗಿಲು ಮುಚ್ಚಿದರು. ನೈವೇದ್ಯದ ಸಲುವಾಗಿ ಬಾಗಿಲು ಹಾಕಿದ್ದಂತೆ. ಮತ್ತೆ ೧ ಗಂಟೆ ಕಳೆದೇ ಬಾಗಿಲು
ತೆರೆಯುವುದೆಂದು ತಿಳಿದಾಗ ಹೊರಬಂದೆವು. ದೇವಾಲಯದಿಂದ ನಾವು ಬೆಳಗ್ಗೆ ವಾಪಾಸಾಗಿ ಅತಿಥಿ ಗೃಹಕ್ಕೆ ಬಂದು ತಿಂಡಿ( ಪೂರಿ, ಚನ್ನಾ, ಶ್ಯಾವಿಗೆ
ಕೆಸರಿಭಾತ್) ತಿಂದೆವು.
ಮಧ್ಯಾಹ್ನ ೧೨.೩೦ಗೆ ಪುನಃ ದೇಗುಲದ ಬಳಿ ಬಂದಾಗ,
ಶಿವಶಂಕರ ಎಂಬವರು, ತಲಾ ರೂ. ೧೦೦ ಕೊಡಿ, ಸೀದಾ ದೇವರ ಸನ್ನಿಧಿಗೆ ಕರೆದೊಯ್ಯುವೆ ಎಂದಾಗ,
ಇಲ್ಲೀವರೆಗೆ ಬಂದು ಜಗನ್ನಾಥನನ್ನು ನೋಡದೆ ಹೋಗುವುದುಂಟೇ? ಎಂದು ಬೇರೆ ವಿಧಿ ಇಲ್ಲದೆ ನಾವು ಅವರ
ಹಿಂದೆ ನಡೆದೆವು. ನೂಕುನುಗ್ಗಲಿನಲ್ಲಿ ಅಂತೂ ಜಗನ್ನಾಥನ ಎದುರು ನಿಂತೆವು.
ದೇವಾಲಯದ ನಿರ್ಮಾಣದ ಇತಿಹಾಸ: ಕ್ರಿ.ಶ.
೧೨ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಿದವನು ಗಂಗಾ ರಾಜವಂಶದ ರಾಜ ಅನಂತವರ್ಮನ್ ಚೋಡಗಂಗ.
ದೇವಾಲಯದ ಬಗ್ಗೆ ಒಂದು ದಂತಕಥೆ: ಪುರಿ ಸಮುದ್ರತೀರದಲ್ಲಿ
ಒಂದು ಮರದ ತುಂಡು ಪ್ರಕಾಶಮಾನವಾಗಿ ತೇಲುತ್ತಲಿತ್ತು. ಅದನ್ನು ಕಂಡ ನಾರದರು ರಾಜನಿಗೆ ತಿಳಿಸಿ,
ಅದರಿಂದ ಮೂರು ವಿಗ್ರಹ ತಯಾರಿಸಿ ದೇವಾಲಯದ ಮಂಟಪದಲ್ಲಿ ಇಡುವಂತೆ ಹೇಳಿದನು. ವಿಗ್ರಹಗಳನ್ನು
ನಿರ್ಮಿಸಲು, ಭವ್ಯವಾದ ದೇವಾಲಯ ಕಟ್ಟಲು ದೇವತೆಗಳ ವಾಸ್ತುಶಿಲ್ಪಿ ವಿಶ್ವಕರ್ಮನನ್ನು
ಇಂದ್ರದ್ಯುಮ್ನ ಕರೆಸಿದನು. ವಿಷ್ಣುವು ಸ್ವತಃ ಬಡಗಿಯ ವೇಷದಲ್ಲಿ ಬಂದು ವಿಗ್ರಹಗಳನ್ನು ತಯಾರಿಸಲು
ಮುಂದಾದನು. ಮೂರ್ತಿಗಳನ್ನು ಕೆತ್ತುವ ಕೆಲಸ ಮುಗಿಯುವವರೆಗೂ ಯಾರೂ ಒಳಗೆ ಬರಬಾರದು, ಬಂದು
ಕೆಲಸಕ್ಕೆ ಭಂಗ ತರಬಾರದು ಎಂಬ ಷರತ್ತು ವಿಧಿಸಿದನು.
ಎರಡು ವಾರಗಳ ತರುವಾಯ, ದೇವಾಲಯದಿಂದ ಯಾವುದೇ ಶಬ್ದ ಕೇಳಿಬರುತ್ತಿಲ್ಲ, ಬಡಗಿ
ಸತ್ತಿರಬಹುದೇ ಎಂದು ರಾಣಿ ತುಂಬ ಆತಂಕಗೊಂಡಳು. ಬಾಗಿಲು ತೆರೆದು ನೋಡುವಂತೆ ರಾಜನಿಗೆ ಹೇಳಿದಳು. ಬಾಗಿಲು ತೆರೆದು ನೋಡಲಾಯಿತು. ಮಾತಿಗೆ ತಪ್ಪಿ
ಬಾಗಿಲು ತೆರೆದ ಕಾರಣ, ಮೂರ್ತಿ ಕೆತ್ತುವ ಕೆಲಸವನ್ನು ಅಪೂರ್ಣವಾಗಿಸಿ ವಿಷ್ಣುದೇವ ತೆರಳಿದ.
ಪೂರ್ಣ ಕೆತ್ತನೆ ಆಗದ ವಿಗ್ರಹಗಳಲ್ಲಿ ಹಸ್ತಗಳೇ ಇರಲಿಲ್ಲ. ಅಪೂರ್ಣ ಮೂರ್ತಿಗಳನ್ನೇ
ಸ್ಥಾಪಿಸುವಂತೆ ಅಶರೀರವಾಣಿ ಮೊಳಗಿತು. ಇಲ್ಲಿ ಕೃಷ್ಣ, ಬಲರಾಮ, ಸುಭದ್ರೆ ವಿಗ್ರಹಗಳಿವೆ.
ಪುರಿಯ ಜಗನ್ನಾಥ ದೇವಾಲಯಕ್ಕೆ ಹದಿನೆಂಟು ಸಲ ದುಷ್ಟರಿಂದ ಆಕ್ರಮಣವಾಗಿದೆಯಂತೆ.
ದೇವಾಲಯಕ್ಕೆ ಹೋಗಲು ಹೊರಗಿನಿಂದ ಸರತಿ ಸಾಲಿದ್ದರೂ, ದೇವಾಲಯದ ಒಳ ಆವರಣಕ್ಕೆ
ಪ್ರವೇಶಿಸುವಾಗ ನೂಕುನುಗ್ಗಲು ಆಗುತ್ತದೆ. ಆ ಅವ್ಯವಸ್ಥೆಯನ್ನು ಅವಶ್ಯ ಸರಿಪಡಿಸಬೇಕು.
ಒಂದು ಆಟೋದಲ್ಲಿ(ಅಲ್ಲಿರುವುದೆಲ್ಲ ದೊಡ್ದದಾದ ಆಟೋಗಳು)
ನಾವು ಆರು ಮಂದಿ ಮೊದಲಿಗೆ ಬಂಗಂ ಸಾಗರಕ್ಕೆ ಹೋದೆವು. ಸಾಗರದ ಕಿನಾರೆಯಲ್ಲಿ ನಿಂತು ನೀರ ಹರಿವಿನ
ದೃಶ್ಯ ನೋಡುವುದರಲ್ಲಿ ಮಗ್ನರಾಗಿ ನಿಂತಿದ್ದೆವು. ಸಾಗರಕ್ಕೆ ಇಳಿಯುವುದಿಲ್ಲವೆಂದು ನಾವು
ಅಂದುಕೊಂಡಿದ್ದರೆ, ದೊಡ್ಡ ತೆರೆಯೊಂದು ನಮ್ಮನ್ನು ಒದ್ದೆಮಾಡಿ ಹಿಂದೆ ಸರಿಯಿತು! ಕೇವಲ ಹತ್ತು
ನಿಮಿಷ ಸಾಗರದ ವೈಭವವನ್ನು ನೋಡಿ ಪಟ ತೆಗೆದು ಅಲಿಂದ ಹೊರಟೆವು.
ಪುರಿಯಲ್ಲಿರುವ ಗೌರಿ ಬಿಹಾರ್ ಆಶ್ರಮ ಗುಪ್ತ
ಬೃಂದಾವನವೆಂದೇ ಹೆಸರುವಾಸಿಯಾಗಿದೆ. ಶ್ರೀ ಚೈತನ್ಯ ಮಹಾಪ್ರಭುಗಳ ಸ್ಮರಣಾರ್ಥ ಈ ಆಶ್ರಮ
ಸ್ಥಾಪಿಸಿದ್ದಾರೆ. ವಿಸ್ತಾರವಾದ ಈ ಉದ್ಯಾವನದಲ್ಲಿ ಶ್ರಿಕೃಷ್ಣ, ವಿಷ್ಣು, ಹನುಮ, ಶ್ರೀರಾಮ
ಪ್ರತಿಮೆಗಳು ಗಮನ ಸೆಳೆಯುತ್ತವೆ. ರಾಮಾಯಣದ ವಿವಿಧ ಭಾಗಗಳ ಕಥೆಗಳನ್ನು ಪ್ರತಿಮೆಯ ರೂಪದಲ್ಲಿ
ಇಲ್ಲಿ ಅನಾವರಣಗೊಳಿಸಿದ್ದಾರೆ.
ಪ್ರವೇಶ ಸಮಯ: ಬೆಳಗ್ಗೆ ೯ರಿಂದ ಸಂಜೆ
೬ರವರೆಗೆ. ಪ್ರವೆಶ ದರ: ರೂ. ೧೦
ಓಂಕಾರೇಶ್ವರ ದೇಗುಲ (ಶಂಕರಪುರ, ಪುರಿ, ಒರಿಸ್ಸ)
ಶಂಕರಪುರದಲ್ಲಿರುವ ಓಂಕಾರೇಶ್ವರ ದೇಗುಲ
ಆವರಣಕ್ಕೆ ಪ್ರವೇಶಿಸುವಾಗ ದೇವಾಲಯದೆದುರು ದೊಡ್ಡದಾದ ನಂದಿ, ಶಿವನ ವಿಗ್ರಹ ಎದುರಾಗುತ್ತದೆ.
ವಿಶಾಲವಾದ ದೇಗುಲದೊಳಗೆ, ಶಿವ, ಹನುಮನ ಶಿಲ್ಪಗಳಿವೆ.
ಕುಂತಿ
ಜನ್ಮಸ್ಠಳ
ಕುಂತಿ ಜನ್ಮಸ್ಥಳಕ್ಕೆ ಕರೆದೊಯ್ಯುವೆ ಎಂದು
ರಿಕ್ಷಾ ಚಾಲಕ ಹೇಳಿದಾಗ, ನಾವೂ ಕುತೂಹಲಿಗಳಾಗಿ ಒಪ್ಪಿದೆವು. ಅಲ್ಲಿ ಬೃಹತ್ ಕೆರೆ, ಕೆರೆ ಮಧ್ಯೆ
ದೇಗುಲ. ದೇವಸ್ಥಾನ ಬಾಗಿಲು ಹಾಕಿತ್ತು. ಕುಂತಿ ಓಡಾಡಿದ ನೆಲದಲ್ಲಿ ನಾವೂ ಸ್ವಲ್ಪ ಹೊತ್ತು
ಕಳೆದೆವು ಎಂಬ ಖುಷಿ ಹೊತ್ತು ಅಲ್ಲಿಂದ ನಿರ್ಗಮಿಸಿದೆವು.
ಜಾರ್ಖಂಡ್ ಅತಿಥಿ ಗೃಹಕ್ಕೆ ಬಂದಾಗ ಗಂಟೆ ೨
ದಾಟಿತ್ತು. ಹೊಟ್ಟೆ ಹಸಿದಿತ್ತು. ಹಸನ್ಮುಖಿ ಸಿಂಗಾರಾಮ್ ತಂಡದವರು ಊಟ (ಅನ್ನ ಸಾರು, ಸಾಂಬಾರ್,
ಹಪ್ಪಳ, ಮಜ್ಜಿಗೆ, ಉಪ್ಪಿನಕಾಯಿ) ಬಡಿಸಿದರು.
ಕೊನಾರ್ಕ್ ಸೂರ್ಯ ದೇಗುಲ
ಊಟವಾಗಿ ರಿಕ್ಷದಲ್ಲಿ ಬಸ್ ಇರುವ ಸ್ಥಳಕ್ಕೆ
ಹೋಗಿ ಬಸ್ ಹತ್ತಿದೆವು. ಪುರಿಯಿಂದ ಕೊನಾರ್ಕ್ ಗೆ ಸುಮಾರು ೩೦ಕಿಮೀ. ಸಂಜೆ ೩.೩೦ಕ್ಕೆ ನಾವು
ಕೊನಾರ್ಕ್ ತಲಪಿದೆವು.
ಭವ್ಯವಾದ ಸೂರ್ಯ ದೇಗುಲ ನೋಡಿ ಖುಷಿಯಾದರೂ, ೧೫-೧೭ನೇ
ಶತಮಾನದಲ್ಲಿ ಮುಸ್ಲಿಂ ದಾಳಿಕೋರರು ದೇಗುಲಕ್ಕೆ ಹಾನಿಮಾಡಿದ್ದನ್ನು ನೋಡಿ ಖೇದವೂ ಆಯಿತು.
ದೇವಾಲಯದೊಳಗೆ ಪ್ರವೇಶವಿಲ್ಲ. ಒಳಗೆ ಅಲ್ಲಿ ಒಂದು ಭಾಗ ಕುಸಿದಿದೆಯಂತೆ.
ಗುಡಿಯ ಹೊರಗಿನ ಶಿಲ್ಪ ಕಲಾಕೃತಿಗಳು, ರಥಚಕ್ರಗಳ ಸೌಂದರ್ಯವನ್ನು ಜೀವನದಲ್ಲಿ ಒಂದು
ಬಾರಿಯಾದರೂ ನೋಡಿಯೇ ಅನುಭವಿಸಬೇಕು. ೩.೩೦ರಿಂದ
ಸಂಜೆ ೫ರವರೆಗೂ ಅಲ್ಲಿ ಓಡಾಡಿ ದೇಗುಲದ ಸೊಬಗನ್ನು ಕಣ್ಣು, ಮನದಲ್ಲಿ, ಕ್ಯಾಮರಾದಲ್ಲಿ
ತುಂಬಿಕೊಳ್ಳುತ್ತ, ಶಿಲ್ಪಿಗಳ ಕಲಾಚಾತುರ್ಯವನ್ನು ಮೆಚ್ಚಿಕೊಳ್ಳುತ್ತ ಅಲ್ಲಿಂದ ನಿರ್ಗಮಿಸಿದೆವು.
ಚಂದ್ರಭಾಗ ಎಂಬಲ್ಲಿರುವ ಚಂದ್ರಭಾಗ ಸಮುದ್ರದ
ದಡದಿಂದ ಸೂರ್ಯಾಸ್ತ ವೀಕ್ಷಣೆ ಮಾಡುವುದೆಂಬ ಯೋಜನೆ ಇತ್ತು. ಆದರೆ ನಾವು ಅಲ್ಲಿ ತಲಪಿದಾಗಲೇ
ಸೂರ್ಯ ತನ್ನ ಎಂದಿನ ಪಾಳಿ ಮುಗಿಸಿ ನಿರ್ಗಮಿಸಿಯಾಗಿತ್ತು. ಚಂದ್ರಭಾಗ ಕಡಲು ಅತ್ಯಂತ ಸ್ವಚ್ಛ ನೀಲ
ಸಮುದ್ರ ಎಂದು ಹೆಸರು ಪಡೆದಿದೆ. ಇಲ್ಲಿ ಪ್ರತೀ ವರ್ಷ ದಶಂಬರ ೧ ರಿಂದ ೫ ರವರೆಗೆ ಮರಳು ಕಲಾ
ಉತ್ಸವ ನಡೆಯುತ್ತದೆ. ದೇಶ ವಿಶೇಶದ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ನಾವು ಅಲ್ಲಿ ಮರಳಿನಲ್ಲಿ ಓಡಾಡಿ, ದೂರದಿಂದಲೇ ಸಮುದ್ರ ನೋಡಿ ಬಸ್ಸೇರಿದೆವು.
ಮರಳಿ ರೈಲು ನಿಲ್ದಾಣ- ಮಾಲತಿ ಪಾಟ್ಪುರ
ನಾವು ಪುರಿಯಲ್ಲಿರುವ ಮಾಲತಿ ಪಾಟ್ಪುರ ರೈಲು
ನಿಲ್ದಾಣ ತಲಪಿದಾಗ ರಾತ್ರಿ ೭.೩೦ ದಾಟಿತ್ತು. ರೈಲು ಇನ್ನೂ ಬಂದಿರಲಿಲ್ಲ. ೯ ಗಂಟೆಗೆ ಬರಲಿದೆ
ಎಂಬ ಮಾಹಿತಿ ಸಿಕ್ಕಿತು. ಅಲ್ಲಿ ಎಲ್ಲೆಂದರಲ್ಲಿ ಕೂತು, ಕೆಲವರು ನಿದ್ದೆ ಮಾಡಿ ಕಾಲ ನೂಕಿದೆವು.
೧೦ ಗಂಟೆಯಾದರೂ ರೈಲು ಬರುವ ಸೂಚನೆ ಇಲ್ಲ. ಹಸಿವು, ನಿದ್ರೆ, ಸೊಳ್ಳೆಕಾಟ ಇತ್ಯಾದಿ ತಾಪತ್ರಯ
ಒಟ್ಟಿಗೇ ಮೇಳೈಸಿ ಕೆಲವರ ತಾಳ್ಮೆಯ ಕಟ್ಟೆ ಒಡೆಯುವ ಹಂತಕ್ಕೆ ಬಂತು. ಒಬ್ಬರಂತೂ ಬಲು ಜೋರಾಗಿ
ಕೂಗಾಡುತ್ತಿದ್ದರು. ಅಲ್ಲಿಯ ರೈಲ್ವೇ ಮಾಸ್ತರರನ್ನು ಭೇಟಿಯಾಗಿ ಕನ್ನಡದಲ್ಲೇ ಚೆನ್ನಾಗಿ ಬೈದರು!
ಅವರಿಗೆ ಒಡಿಶಾ ಭಾಷೆ ಬಿಟ್ಟು ಬೇರೆ ಭಾಷೆ ಬರದು! ಹಾಗಾಗಿ ಒಡಿಶಾ ಬಾಷೆಯಲ್ಲೇ ಏನೋ ಹೇಳಿದರು!
ಇವರು ಹೇಳಿದ್ದು ಅವರಿಗೆ ತಿಳಿಯದು, ಅವರು ಹೇಳಿದ್ದು ಇವರಿಗೆ ತಿಳಿಯದು. ಇಬ್ಬರ ಜುಗಲ್ಬಂದಿ
ಚೆನ್ನಾಗಿತ್ತು! ಹೀಗೆಯೇ ಒಬ್ಬೊಬ್ಬರ
ತಾಳ್ಮೆಯ ಪರೀಕ್ಷೆ ನಡೆಯುತ್ತಿರಲು, ಕುತ್ತಿಗೆ ಊಊಊಊಊಊಊದ್ದ ಮಾಡಿ ರೈಲು ಬಂತಾ ಎಂದು ನೋಡುತ್ತಿರಲು
೧೧ಗಂಟೆಗೆ ರೈಲು ಬಂದೇ ಬಂತು. ೧೧.೧೫ಕ್ಕೆ ಊಟ( ದೋಸೆ, ಚಟ್ನಿ, ಅನ್ನ ಸಾಂಬಾರು, ಸಾರು) ಬಂದಾಗ
ಎಲ್ಲರೂ ಸಂತೃಪ್ತಗೊಂಡರು! ಎಲ್ಲರ ಕೋಪದ ಬಿಸಿ ತಣ್ಣಗಾಯಿತು.
ಕೊಲ್ಕತ್ತದೆಡೆಗೆ ಗಮನ
ತಾರೀಕು ೨೯.೩.೨೦೨೨ರಂದು ಬೆಳಗ್ಗೆ ೬.೩೦ಗೆ ಕಾಫಿ ಚಹಾ ಬಂದಾಗಲೇ ಎಚ್ಚರ. ಮುಖಮಾರ್ಜನ ಮುಗಿಸಿ ಕೂತಾಗ ತಿಂಡಿ (ಅವಲಕ್ಕಿ, ಇಡ್ಲಿ ಸಾಂಬಾರು, ಚಟ್ನಿ, ಶ್ಯಾವಿಗೆ ಕೇಸರಿಭಾತ್)ಬಂತು. ಹೊತ್ತು ಏರುತ್ತಿದ್ದಂತೆ ಸೆಖೆಯ ಕಾವೂ ಏರುತ್ತಲಿತ್ತು. ನಮ್ಮ ವಿಭಾಗದಲ್ಲಿದ್ದ ಒಂದು ಪಂಖ ಬಿಸಿಲ ಧಗೆ ಸುರುವಾಗುತ್ತಿದ್ದಂತೆ ತನ್ನ ಕೆಲಸ ನಿಲ್ಲಿಸಿಬಿಡುತ್ತಲಿತ್ತು!
ಹೊರಗೆ ಭತ್ತದ ಗದ್ದೆಯ ದೃಶ್ಯ ಮೈಲುಗಟ್ಟಲೇ ನೋಡಿ ಮೈ ಮರೆತೆವು. ಎಂಥ ಸುಂದರ ದೃಶ್ಯವದು. ಹಸಿರು ಹೊದ್ದ ಭೂಮಿ ತಾಯಿಯನ್ನು ನೋಡುವ ಕಣ್ಣುಗಳೇ ಧನ್ಯ. ರೈಲು ಪಯಣವೇ ಚೇತೋಹಾರಿ, ಅದರಲ್ಲೂ ಇಂಥ ದೃಶ್ಯಗಳು ಕಂಡಾಗ ಇನ್ನಷ್ಟು ಹುರುಪು. ಹೊರಗೆ ನೋಡುತ್ತ ಕೂತಂತೆಯೇ ಹೊತ್ತು ಸರಿಯಿತು.
ಹೊತ್ತು ಹೋಗದೆ ಇದ್ದಾಗ, ತಂದ ತಿಂಡಿಗಳು ಚೀಲದಿಂದ
ಹೊರಗೆ ಬಂದಾಗ ಬಾಯಿಗೆ ಕೆಲಸ ದೊರೆತದ್ದು ತೃಪ್ತಿ ನೀಡಿತು! ೧೨.೩೦ಗೆ ಊಟ (ಸಾಂಬಾರನ್ನ, ಮೊಸರನ್ನ) ಮಾಡಿ ಕೂತೆವು.
ಕೊಲ್ಕತ್ತ
ಮಧ್ಯಾಹ್ನ ೨.೧೫ಕ್ಕೆ ಕೊಲ್ಕತ್ತ ರೈಲು ನಿಲ್ದಾಣದಲ್ಲಿ ಇಳಿದೆವು. ಪುರಿಯಿಂದ ಕೊಲ್ಕತ್ತ
ಸುಮಾರು ೫೦೦ಕಿಮೀ. ರೈಲಲ್ಲಿ ಹತ್ತೂವರೆ ಗಂಟೆ ಪಯಣ. (ನಮಗೆ ಹೆಚ್ಚು ಸಮಯ ಹಿಡಿದಿತ್ತು, ನಮ್ಮ
ವಿಶೇಷ ರೈಲಿಗೆ ಸಿಗ್ನಲ್ ಸಿಕ್ಕಿ ಮುಂದುವರಿಯಲು ಎಲ್ಲಾಕಡೆಯೂ
ಹೆಚ್ಚುವರಿ ಸಮಯ ಬೇಕಾಗುತ್ತಲಿತ್ತು.)
ನಮ್ಮ ದೊಡ್ಡ ಬ್ಯಾಗ್ ರೈಲಲ್ಲೇ
ಇಡುತ್ತಲಿದ್ದೆವು. ಅದರಿಂದ ಒಂದು ದಿನದ ಮಟ್ಟಿಗೆ ಬೇಕಾಗುವ ಅವಶ್ಯ ವಸ್ತುಗಳನ್ನು ಮಾತ್ರ ಸಣ್ಣ
ಚೀಲಕ್ಕೆ ಹಾಕಿ ಒಯ್ಯುತ್ತಿದ್ದೆವು.
ರೈಲು ನಿಲ್ದಾಣದ ಹೊರಗೆ ನಮಗಾಗಿ ಸಾಲಾಗಿ ಬಸ್ಸುಗಳು ನಿಂತಿದ್ದುವು. ಬಸ್ ಹತ್ತಿ
ಹೊರಟೆವು.
ವಿಕ್ಟೋರಿಯಾ ಸ್ಮಾರಕ
ನಾವು ಸಂಜೆ ೩.೩೦ಗೆ ಜವಾಹರಲಾಲ್ ನೆಹರು
ರಸ್ತೆಯಲ್ಲಿರುವ ವಿಕ್ಟೋರಿಯಾ ಸ್ಮಾರಕಕ್ಕೆ ಹೋದೆವು. ಅಮೃತ ಶಿಲೆಯಲ್ಲಿ ಕಟ್ಟಿರುವ ಈ ಬೃಹತ್
ಕಟ್ಟಡವನ್ನು ವಿಕ್ಟೋರಿಯಾ ರಾಣಿಯ(೧೮೧೯-೧೯೦೧) ನೆನಪಿಗಾಗಿ ೧೯೦೬-೧೯೨೧ರ ನಡುವೆ ನಿರ್ಮಿಸಲಾಯಿತು.
ವಿಕ್ಟೋರಿಯಾ ಸ್ಮಾರಕದ ಕೇಂದ್ರ ಗುಮ್ಮಟದ ಮೇಲೆ ೧೬ ಅಡಿಯ ವಿಕ್ಟರಿ ದೇವತೆಯ ಚಿತ್ರವಿದೆ. ಸುಮಾರು
೫೭ ಎಕರೆ ಪ್ರದೇಶದಲ್ಲಿ ಸುಂದರ ಉದ್ಯಾನವನವೂ ಇದೆ.
ಒಂದೂವರೆ ಗಂಟೆ ಅಲ್ಲಿ ಸುತ್ತಿ ಸುಳಿದುನೋಡಿ
ಹೊರಗೆ ಬಂದೆವು. ಉದ್ಯಾನವನ ಹಾಗೂ ಸ್ಮಾರಕ ಕಟ್ಟಡ ಪೂರ್ತಿ ನೋಡಲು ಇಡೀ ದಿನ ಬೇಕು.
ಬಸ್ ಕಾಯುವ ಸಮಯದಲ್ಲಿ ಸಮಯ ವ್ಯರ್ಥ ಮಾಡದೆ ನಾವು ಪಾಪ್ಡಿ ಚಾಟ್ ಸವಿದೆವು!
ರಾತ್ರಿ ೭.೧೫ಕ್ಕೆ ನಮ್ಮನ್ನು ಪುಟ್ಬಾಲ್
ಸ್ಟೇಡಿಯಮ್ ತಲಪಿಸಿದರು. ಅಲ್ಲಿ ಯೂಥ್ ಹಾಸ್ಟೆಲ್ ಕಟ್ಟಡದಲ್ಲಿ ನಮಗೆ ವಾಸ್ತವ್ಯ. ಒಂದು
ಕೋಣೆಯಲ್ಲಿ ೧೦-೧೨ ಮಂದಿ. ಹೊರಗೆ ಸಾರ್ವಜನಿಕ ಬಚ್ಚಲು, ಪಾಯಿಖಾನೆ. ಈ ವ್ಯವಸ್ಥೆಯಲ್ಲಿ ಇರಲು
ನಮಗೆ ಸಾಧ್ಯವಾಗಲಿಕ್ಕಿಲ್ಲ ಎಂದು ನಾವು ಯೂಥ್ ಹಾಸ್ಟೆಲ್ ಅನೆಕ್ಸ್ ರೆಕ್ಕೆಯಲ್ಲಿ ಪ್ರತ್ಯೇಕ
ಕೊಟಡಿ ಕಾದಿರಿಸಿದೆವು. ದಿನಬಾಡಿಗೆ ರೂ. ೨೩೦೦. ಯೂಥ್ ಹಾಸ್ಟೆಲ್ ಸದಸ್ಯರಾದವರಿಗೆ ವಿನಾಯಿತಿ ಏನೂ ಇರಲಿಲ್ಲ. ಕೊಟಡಿ ಸುಸಜ್ಜಿತವಾಗಿ ವಾತಾನುಕೂಲಿಯಾಗಿತ್ತು. ನೆಮ್ಮದಿಯಿಂದ ನಿದ್ದೆ ಮಾಡಲು
ಎಲ್ಲ ಅನುಕೂಲವಿತ್ತು! ೮ ಗಂಟೆಗೆ ಊಟ(ಅನ್ನ, ಸಾರು, ಉಪ್ಪಿಟ್ಟು, ಮಿಶ್ರ ತರಕಾರಿ ಗಸಿ, ಹಪ್ಪಳ)
ಊಟ ಮಾಡಿ ತಂಪಾಗಿ ನಿದ್ರಿಸಿದೆವು.
ಅಗಾಧ ಸ್ಟೇಡಿಯಂ
ತಾರೀಕು ೩೦-೩-೨೨ರಂದು ನಾವು ಬೆಳಗ್ಗೆ
ಎದ್ದು, ತಣ್ಣೀರಿನಲ್ಲಿ ಸ್ನಾನ ಮಾಡಿ(ಆಧುನಿಕ ವಿನ್ಯಾಸವಿದ್ದ ಕೋಣೆಯಾದರೂ ಬಿಸಿನೀರಿನ ವ್ಯವಸ್ಥೆ
ಇರದೆ ಇದ್ದದ್ದು ದೊಡ್ಡ ಕೊರತೆಯೆನಿಸಿತು) ನಾವು ಕೋಣೆ ಕಾಲಿ ಮಾಡಿ ಹೊರಬಂದೆವು. ಸ್ಟೇಡಿಯಮ್
ಸುತ್ತ ಹೊರಗಿನಿಂದ ನೋಡಿ ಖುಷಿಪಟ್ಟೆವು. ಕೊಲ್ಕತ್ತದ ಸಾಲ್ಟ್ ಲೇಕ್ ಸಿಟಿಯಲ್ಲಿರುವ ವಿವೇಕಾನಂದ
ಯುವ ಭಾರತಿ ಕ್ರಿರಂಗನ್ ಸ್ಟೇಡಿಯಮ್ ಭಾರತದ ಅತಿ ದೊಡ್ಡ ಕ್ರೀಡಾಂಗಣವಾಗಿದೆ. ಈ ಕ್ರೀಡಾಂಗಣ
೭೬.೪೦ ಎಕರೆ ವಿಸ್ತೀರ್ಣ ಹೊಂದಿದೆ. ಜನವರಿ ೧೯೮೪ರಲ್ಲಿ ಜವಾಹರಲಾಲ್ ನೆಹರು ಅಂತರಾಷ್ಟ್ರೀಯ
ಗೋಲ್ಡ್ ಕಪ್ ಸಾಕರ್ ಪಂದ್ಯಾವಳಿಯೊಂದಿಗೆ ಶ್ರೀ ಜ್ಯೋತಿ ಬಸು ಅವರು ಉದ್ಘಾಟಿಸಿದರು. ಇದು
೧,೨೦೦೦೦ ಆಸನ ಸಾಮರ್ಥ್ಯವನ್ನು ಹೊಂದಿದೆ. ಸ್ಟೇಡಿಯಂ ಒಳಗೆ ೯೮೮ ಸಾಮರ್ಥ್ಯದ ರಾಜ್ಯ ಯುವ ವಸತಿ
ನಿಲಯವಿದೆ. ಇದು ಏಷ್ಯಾದ ಅತಿ ದೊಡ್ಡ ಯೂಥ್ ಹಾಸ್ಟೆಲ್ ಗಳಲ್ಲಿ ಒಂದಾಗಿದೆ.
೭.೩೦ಗೆ ತಿಂಡಿ (ರಾಗಿ ಶ್ಯಾವಿಗೆ,
ಚಟ್ನಿಪುಡಿ, ಸಕ್ಕರೆ, ಇಡ್ಲಿ ಸಾಂಬಾರ್, ಕೇಸರಿಭಾತ್) ತಿಂದೆವು. ರೈಲಿನಿಂದ ಪಾತ್ರೆ ಪಗಡಿ ಸಾಗಿಸಿ
ತಂದು ಅಡಿಗೆಯವರು ಊಟ ತಿಂಡಿ ಏರ್ಪಡಿಸಿದ್ದರು.)
ತಿಂದವರು ಉರ್ಚಲೇ ಬೇಕು!
ತಿಂಡಿ ತಿಂದು ಕೈ ತೊಳೆಯುವ ಸಲುವಾಗಿ ಯೂಥ್ ಹಾಸ್ಟೆಲಿನ ಸಾರ್ವಜನಿಕ ಪಾಯಿಖಾನೆ, ಬಚ್ಚಲೊಳಗೆ ಹೋದರೆ ಅಲ್ಲಿಯ
ದೃಶ್ಯ ನೋಡಿ, ಅಬ್ಬ ಮಾನವ ಇಷ್ಟು ಹೇಸಿಗೆ ಪ್ರಾಣಿಯೇ? ಎಂದು ದಿಗಿಲು ಬೀಳುವಂತಾಯ್ತು. ಬರೀ
ಮೂತ್ರ ಮಾಡುವ ಸ್ಥಳದಲ್ಲೆಲ್ಲ ಮಲ ವಿಸರ್ಜನೆ ಮಾಡಿದ್ದರು. ಬಹುಶಃ ಹೋಗಲು ಸ್ಥಳ ಸಿಕ್ಕದೆ
ತಡೆದುಕೊಳ್ಳಲಾಗದೆ ಎಲ್ಲೆಂದರಲ್ಲಿ ಮಾಡಿದ್ದಾಗಿರಬಹುದು. ಈ ಕೃತ್ಯ ಕಂಡು ಮೂಗು ಮುಚ್ಚುವ ತಲೆ
ತಗ್ಗಿಸುವ ಸ್ಠಿತಿ. ಚೊಕ್ಕಗೊಳಿಸಲು ಬಂದ ಹೆಂಗಸು ಕೈ ತೋರಿಸಿ ತಲೆಚಚ್ಚಿಕೊಂಡಳು. ತಿಂದವನು
ಉರ್ಚಲೇಬೇಕು ಎಂಬುದು ಹೊಸಗಾದೆ!
ಬೇಲೂರು ಮಠ
ಕೊಲ್ಕತ್ತದ ಬೇಲೂರು ಎಂಬಲ್ಲಿ ರಾಮಕೃಷ್ಣ ಆಶ್ರಮದವರ ಬೇಲೂರು ಮಠವಿದೆ. ಅಲ್ಲಿಗೆ
ನಮ್ಮನ್ನು ಬಸ್ಸಲ್ಲಿ ಕರೆದುಕೊಂಡು ಹೋದರು. (ಕಲ್ಕತ್ತ ನಗರದ ಪ್ರೇಕ್ಷಣೀಯ ಸ್ಥಳಗಳನ್ನು (ಬೇಲೂರು
ಮಠ, ಕಾಳಿ ದೇಗುಲ, ವಿಜ್ಞಾನ ಮ್ಯೂಸಿಯಂ) ತೋರಿಸಲು ಐಆರ್ ಸಿಟಿಸಿಯವರೇ ಬಸ್ ವ್ಯವಸ್ಥೆ ಮಾಡಿದ್ದರು.
ಅಷ್ಟು ಸಮಯದಲ್ಲಿ ಇನ್ನಷ್ಟು ಸ್ಥಳಗಳನ್ನು ನೋಡಬಹುದು ಎಂದು ನಾವು ೮ ಮಂದಿ ಬಸ್ ಬಿಟ್ಟು ಬೇಲೂರುಮಠದ
ಬಳಿಯಿಂದ ಒಂದು ಕಾರು ಬಾಡಿಗೆಗೆ ಹಿಡಿದೆವು.)
ಹೂಗ್ಲಿ ನದಿಯ ಪಶ್ಚಿಮ ದಂಡೆಯಲ್ಲಿರುವ ಬೇಲೂರು
ಮಠ, ರಾಮಕೃಷ್ಣ ಮಠ ಮತ್ತು ಮಿಷನ್ ನ ಪ್ರಧಾನ ಕಚೇರಿಯಾಗಿದೆ. ೪೦ ಎಕರೆ ವಿಸ್ತೀರ್ಣದಲ್ಲಿರುವ ಈ
ಮಠದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ, ಮಾತೆ ಶ್ರೀ ಶಾರದಾದೇವಿ, ಶ್ರೀ ಸ್ವಾಮಿ ವಿವೇಕಾನಂದರ
ದೇವಾಲಯವಿದೆ. ಹಿಂದೂ. ಇಸ್ಲಾಂ, ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮಗಳನ್ನು ಬೆಸೆಯುವ ವಾಸ್ತು
ಶಿಲ್ಪ ಹೊಂದಿರುವ ಈ ಕಟ್ಟಡ ೧೯೩೮ರಲ್ಲಿ ಲೋಕಾರ್ಪಣೆಗೊಂಡಿತು.
ಮ್ಯೂಸಿಯಂ
ಇಲ್ಲಿ ರಾಮಕೃಷ್ಣ, ಶಾರದಾದೇವಿ, ಸ್ವಾಮಿ
ವಿವೇಕಾನಂದ ಮತ್ತು ಇತರ ಶಿಷ್ಯರು ಉಪಯೋಗಿಸಿದ ವಸ್ತುಗಳು, ಚಿತ್ರಗಳು ಇತ್ಯಾದಿ ಸಂಗ್ರಹಗಳಿವೆ.
ದಕ್ಷಿಣೇಶ್ವರ ಕಾಳಿ
ದೇಗುಲ
ಹೂಗ್ಲಿ ನದಿಯ ಪೂರ್ವ ದಡದಲ್ಲಿರುವ
ಕಾಳಿದೇಗುಲದಲ್ಲಿ ಪರಾಶಕ್ತಿ ಕಾಳಿಮಾತೆ ವಿರಾಜಮಾನಳಾಗಿದ್ದಾಳೆ. ಈ ದೇವಾಲಯವನ್ನು ೧೮೫೫ರಲ್ಲಿ
ರಾಣಿ ರಾಶ್ನೋವಿ ನಿರ್ಮಾಣ ಮಾಡಿದರು. ಇಲ್ಲಿ
ಶಿವ, ರಾಧಾಕೃಷ್ಣ, ಕಾಳಿಮಾತೆಯ ದೇಗುಲಗಳಿವೆ.
ಕೊಲ್ಕತ್ತ ಎಂದಾಕ್ಷಣ ಮೊದಲು ನೆನಪಿಗೆ
ಬರುವುದೇ ಹೌರಾ ಸೇತುವೆ. ಅದನ್ನು ನೋಡದೆ ಕೊಲ್ಕತ್ತದಿಂದ ನಿರ್ಗಮಿಸುವುದುಂಟೆ? ಹೌರಾ
ಸೇತುವೆಯಲ್ಲಿ ಕಾರಿನಲ್ಲಿ ಒಂದು ಸವಾರಿ ನಡೆಸಿ ಕಾರೊಳಗಿನಿಂದಲೇ ಸೇತುವೆ ನೋಡಿದೆವು.
ಪಶ್ಚಿಮ ಬಂಗಾಳದ ಹೂಗ್ಲಿ ನದಿಯ ಮೇಲೆ
೧೯೪೩ರಲ್ಲಿ ಕಟ್ಟಿರುವ ಕ್ಯಾಂಟಿಲಿವರ್ (ತೂಗು) ಸೇತುವೆಯಾಗಿದೆ. ನಟ್ ಬೋಲ್ಟ್ ಉಪಯೋಗಿಸದೆ ಕಟ್ಟಲಾದ
ಈ ಸೇತುವೆ ೭೦೫ಮೀಟರ್ ಉದ್ದ, ೭೧ ಅಡಿ ಅಗಲ, ಎರಡೂ ಬದಿ ೧೫ ಅಡಿಯ ಕಾಲುದಾರಿಗಳು, ೮೨ಮೀಟರ್ ಎತ್ತರ
ವಿದೆ. ಇದನ್ನು ನಿರ್ಮಿಸಿದಾಗ ೩ನೇ ಉದ್ದದ
ಕ್ಯಾಂಟಿಲಿವರ್ ಸೇತುವೆಯಾಗಿತ್ತು. ಈಗ ಇದು ವಿಶ್ವದ ಅತಿ ಉದ್ದದ ಆರನೇ ಸೇತುವೆಯೆಂದು ಹೆಸರು
ಪಡೆದಿದೆ, ೨೧೫೦ ಅಡಿ ಉದ್ದದ ಈ ಸೇತುವೆ ನಿರ್ಮಿಸಲು ಟಾಟಾ ಸ್ಟೀಲ್ ಕಂಪನಿಯಿಂದ ೨೬೫೦೦ ಟನ್
ಉಕ್ಕನ್ನು ಬಳಸಲಾಗಿತ್ತು. ೧೯೬೫ರಲ್ಲಿ ಕವಿ ರವೀಂದ್ರನಾಥ ಟಾಗೋರ್ ಅವರ ಗೌರವಾರ್ಥ ಹೌರಾ
ಸೇತುವೆಗೆ ರವೀಂದ್ರ ಸೇತು ಎಂದು ಮರುನಾಮಕರಣ ಮಾಡಲಾಯಿತು. ಆದರೆ ಇಂದಿಗೂ ಇದು ಹೌರಾಸೇತುವೆ ಎಂದೇ
ಹೆಸರುವಾಸಿಯಾಗಿದೆ.
ಕಾಳಿದೇಗುಲಕ್ಕೆ ಹೋದಾಗ ಬಾಗಿಲು
ಹಾಕಿತ್ತೆಂದು ಹತ್ತಿರದಲ್ಲೇ ಇದ್ದ ಬಿರ್ಲಾ ಮಂದಿರಕ್ಕೆ ಹೋದೆವು. ಅದೂ ಬಾಗಿಲು ಹಾಕಿತ್ತು.
ಭವ್ಯವಾದ ಮಂದಿರವನ್ನು ಹೊರಗಿನಿಂದಲೆ ನೋಡಿದೆವು.
ಕಾಳಿ ಘಾಟ್ ಮಾತಾ ದೇವಾಲಯ ( Abhoy
Sarkar lane, 29, Dr. Rajendra Rd, jadubabur bazar bhowanipore Kolkata WB,
70020)
ಸಂಜೆ ೪.೩೦ ಗಂಟೆಗೆ ಕಾಳಿಘಾಟ್ ದೇಗುಲಕ್ಕೆ ಹೋದೆವು.
ದೇವಾಲಯದೊಳಗೆ ಹೋಗಲು ಸರತಿ ಸಾಲಿನಲ್ಲಿ ನಿಂತೆವು. ಒಂದೆರಡು ಮಂದಿ ನಮ್ಮ ಬಳಿ ಬಂದು ರೂ.
೧೦೦-೨೦೦ ಕೊಡಿ, ಸೀದಾ ಒಳಗೆ ಕರೆದೊಯ್ಯುತ್ತೇವೆ ಎಂದು ಹೇಳಿದರು. ನಾವು ಅವರ ಮಾತಿಗೆ ಮರುಳಾಗದೆ
ಸರತಿ ಸಾಲಿನಲ್ಲೆ ಮುಂದುವರಿದೆವು. ಎಷ್ಟೋ ಮಂದಿ ದುಡ್ಡು ಕೊಟ್ಟು ಒಳನಡೆದರು. ಹಾಗಾಗಿ ನಮ್ಮ
ಸಾಲು ಒಳ ಹೋಗಲು ನಿಧಾನಗತಿಯಲ್ಲೇ ಸಾಗಬೇಕಾಯಿತು. ದುಡ್ಡು ಕೊಟ್ಟು ಒಳಹೋಗುವವರಿಗೆ, ‘ದುಡ್ಡು ಕೊಡಬೇಡಿ
ಸಾಲಿನಲ್ಲಿ ಬನ್ನಿ’ ಎಂದು ಹೇಳುವುದೇ ನಮ್ಮ ಭಾವನಿಗೆ ಕೆಲಸವಾಯಿತು! ಅದರಿಂದ ಪ್ರಯೋಜನ ಮಾತ್ರ
ಆಗಲಿಲ್ಲ. ಅಂತೂ ನಾವು ದೇವಾಲಯದ ಒಳ ತಳ್ಳಲ್ಪಟ್ಟು ಕಾಳಿಮಾತೆಯ ಎದುರು ನಿಂತೆವು. ಅಲ್ಲಿ ಕಾಳಿಯನ್ನು
ನೋಡಲು ಬಿಡದೆ ಹೊರತಳ್ಳಲು ನೋಡಿದರು. ನಮ್ಮ ಅತ್ತಿಗೆ
ಲಕ್ಷ್ಮೀ, ‘ಅಷ್ಟು ದೂರದಿಂದ ಕಾಳಿಯನ್ನು ನೋಡಲು ಬಂದಿದ್ದೇವೆ. ನೋಡಲು ಬಿಡಿ ಎಂದು ಅಚ್ಚ
ಕನ್ನಡದಲ್ಲೇ ಹೇಳಿ ಅರ್ಚಕರ ಕೈ ತಳ್ಳಿ ಅಲ್ಲೇ ನಿಂತು ಕಾಳಿ ಮಾತೆಯನ್ನು ತೃಪ್ತಿಯಿಂದ ನೋಡಿ
ಸಂತೃಪ್ತರಾಗಿಯೇ ಹೊರಬಂದರು.
ಕಾಳಿಘಾಟ್ ದೇಗುಲದ ವಾತಾವರಣ ನಮಗೆ
ಹಿಡಿಸಲಿಲ್ಲ. ಅಲ್ಲಿ ದುಡ್ಡೇ ದೊಡ್ಡಪ್ಪ. ೧೮೦೯ರಲ್ಲಿ ನಿರ್ಮಾಣವಾದ ಹಳೆಯ ದೇಗುಲ. ಭಾರತದ ೫೧
ಶಕ್ತಿ ಪೀಠಗಳಲ್ಲಿ ಈ ದೇಗುಲವೂ ಸೇರಿದೆ. ಶಿವನ ರುದ್ರ ತಾಂಡವದ ಸಂದರ್ಭದಲ್ಲಿ ಸತಿಯ ದೇಹದ ವಿವಿಧ
ಭಾಗಗಳು ಬಿದ್ದಿವೆ ಎಂಬ ಪ್ರತೀತಿಯಂತೆ. ಇಲ್ಲಿ ಅವಳ ಬಲಪಾದದ ಬೆರಳು ಬಿದ್ದ ಸ್ಥಳವಿದು ಎಂಬುದು
ನಂಬಿಕೆ.
ಪ್ರವೇಶ ಸಮಯ: ಬೆಳಗ್ಗೆ ೫.೩೦ರಿಂದ ೧೧, ಸಂಜೆ
೪.೩೦ರಿಂದ ರಾತ್ರೆ ೯ ಗಂಟೆವರೆಗೆ.
ಕಾಳಿ ಮಂದಿರ ನೋಡಿ ನಾವು ಬಾಡಿಗೆ ಕಾರನ್ನು
ಬಿಟ್ಟು ಅಲ್ಲಿಗೆ ಬಂದಿದ್ದ ನಮ್ಮ ಬಸ್ಸನ್ನೇರಿದೆವು. ೬.೩೦ಗೆ ನಮ್ಮ ಬಸ್ ಅಲ್ಲಿಂದ ಹೊರಟಿತು.
ಮಾರುಕಟ್ಟೆ ಲೂಟಿ
ಕೊಲ್ಕತ್ತದಲ್ಲಿ ಶಾಪಿಂಗ್ ಮಾಡದಿದ್ದರೆ ಕೊಲ್ಕತ್ತದವರು ಉದ್ದಾರವಾಗುವುದು ಹೇಗೆ? ೨
ಗಂಟೆ ಹೊತ್ತು ಮಾರುಕಟ್ಟೆ ಲೂಟಿ ಹೊಡೆಯಿರಿ ಎಂದು ನಮ್ಮನ್ನು ಮಾರುಕಟ್ಟೆ ಬಳಿ ಬಿಟ್ಟರು!
ನಮಗ್ಯಾರಿಗೂ ವಸ್ತು ಖರೀದಿಯಲ್ಲಿ ಹೆಚ್ಚು ಆಸಕ್ತಿ ಇಲ್ಲದೆ ಇದ್ದರೂ, ಒಂದೆರಡು ಅಂಗಡಿ ಸುತ್ತಿ ಕೆಲವು
ಸೀರೆ ವ್ಯಾಪಾರ ಮಾಡಿದೆವು! ಅರ್ಧ ಗಂಟೆ ಸುತ್ತಾಡಿ ಬಸ್ ಬಳಿ ಬಂದು ಅಲ್ಲಿ ಕಾಲ ಹರಣ ಮಾಡಿದೆವು.
ಕೊಲ್ಕಾತ್ತಾಗೆ ವಿದಾಯ
ಮಾರುಕಟ್ಟೆಗೆ ಹೋದ ಕುರುಹೆಂಬಂತೆ ಎಲ್ಲರ
ಕೈಯಲ್ಲೂ ಸಾಮಾನು ಕಂಡುಬಂತು. ೯.೧೫ಕ್ಕೆ ನಾವು ರೈಲು ನಿಲ್ದಾಣಕ್ಕೆ ಹೋದೆವು. ಅಲ್ಲಿ ನಮ್ಮ ರೈಲು
ನಿಂತಿರುವುದು ಕಂಡು ಬಲು ಸಮಾಧಾನವಾಯಿತು. ರೈಲು ಹತ್ತಿ ಕೂತ ಕೂಡಲೇ ಊಟವೂ (ಚಪಾತಿ, ಹೆಸರುಕಾಳು
ಗಸಿ, ಅನ್ನ, ಸಾರು) ಬಂತು. ರೈಲು ಗಯಾದೆಡೆಗೆ ಸಾಗುತ್ತಿದ್ದಂತೆಯೇ ನಾವು ನಿದ್ದೆಗೆ ಜಾರಿದೆವು.
ಗಯಾ (ಬಿಹಾರ)
ಕೊಲ್ಕತ್ತದಿಂದ ಗಯಾಕ್ಕೆ ಸುಮಾರು ೪೮೫ಕಿಮೀ. ಸುಮಾರು ೭.೩೦ ಗಂಟೆ ಪಯಣ. ಇರುವುದು. ಆದರೆ ನಮಗೆ ಮಾತ್ರ ಹೆಚ್ಚು ಸಮಯ ತೆಗೆದುಕೊಂಡಿತು. ನಾವು ೩೧.೩.೨೦೨೨ರಂದು ಗಯಾ ತಲಪುವಾಗ ಗಂಟೆ ಮದ್ಯಾಹ್ನ ೧೨.೫೦. ಗಯಾಗೆ ಹೋಗುವ ದಾರಿಯಲ್ಲಿ ಗೋಧಿ ಗದ್ದೆಗಳ ದೃಶ್ಯ ಚೇತೋಹಾರಿಯಾಗಿತ್ತು.
ರೈಲಿಳಿದು ರಿಕ್ಷದಲ್ಲಿ ಅತಿಥಿ ಭವನ ತಲಪಿ ಅಲ್ಲಿ ಪಾಯಸದೂಟ ಮಾಡಿದೆವು. ಅಲ್ಲಿ ನಮಗೆ ಸ್ನಾನಕ್ಕೆ ವ್ಯವಸ್ಥೆ ಇತ್ತು. ತಣ್ಣೀರು ಸ್ನಾನ., ಬಚ್ಚಲಿಗೆ ಕೆಲವಕ್ಕೆ ಚಿಲಕ ಇರಲಿಲ್ಲ ಇನ್ನು ಕೆಲವಕ್ಕೆ ಬಾಗಿಲೇ ಇರಲಿಲ್ಲ,! ಅಂತೂ ಸ್ನಾನ ಮುಗಿಸಿ ಅಲ್ಲಿಂದ ಹೊರಟೆವು. ಅತಿಥಿ ಭವನ ತಲಪಿಸುವವರೆಗೆ ರೈಲ್ವೇಯವರ ಜವಾಬ್ದಾರಿ. ಅನಂತರ ಗಯಾ ಸುತ್ತಾಟ ನಮ್ಮದೇ ಖರ್ಚಿನಲ್ಲಿ.ವಿಷ್ಣುಪಾದ ದೇಗುಲ
(Reshmi roadchand chaura, Gaya, bihar, 823001)
ನಾವು ಒಂದು ರಿಕ್ಷಾ ಬಾಡಿಗೆಗೆ ಹಿಡಿದು
ವಿಷ್ಣುಪಾದ ದೇಗುಲಕ್ಕೆ ಹೋದೆವು. ಫಲ್ಗು ನದಿಯ ದಡದಲ್ಲಿರುವ ವಿಷ್ಣುಪಾದ ದೇಗುಲ ಶ್ರಾದ್ಧ ವಿಧಿ
ವಿಧಾನಗಳಿಗೆ ಕೆಂದ್ರಬಿಂದುವಾಗಿದೆ.
ದೇವಾಲಯ ಯಾವಾಗ ರಚನೆಯಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಈಗ ನಾವು ನೋಡುವ ದೇಗುಲವನ್ನು
ಇಂದೋರಿನ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರು ೧೭೮೭ರಲ್ಲಿ ಫಲ್ಗು ನದಿಯ ದಡದಲ್ಲಿ
ಪುನರ್ನಿರ್ಮಿಸಿದರು. ೪೦ ಸೆಂಟಿಮೀಟರ್ ಉದ್ದದ ಹೆಜ್ಜೆಗುರುತುಳ್ಳ ವಿಷ್ಣುಪಾದವೇ ಈ ದೇವಾಲಯದ
ಕೇಂದ್ರಬಿಂದು.
ಬೋಧ ಗಯಾ
ಗೌತಮಬುದ್ಧನಿಗೆ ಜ್ಞಾನೋದಯವಾದ ಸ್ಥಳವೇ ಬೋಧಗಯಾ. ಅಲ್ಲಿರುವ ಬೋಧೀವೃಕ್ಷವನ್ನೂ ನೋಡಿದೆವು. ಅಲ್ಲಿ
ಬುದ್ಧನ ದೊಡ್ದದಾದ ಪ್ರತಿಮೆ ಗಮನ ಸೆಳೆಯುತ್ತದೆ. ೧೯೮೯ರಲ್ಲಿ ೮೦ ಅಡಿ ಎತ್ತರದ ಈ ಪ್ರತಿಮೆಯನ್ನು
ಅನಾವರಣಗೊಳಿಸಲಾಯಿತು. ಈ ಸ್ಥಳದಲ್ಲಿ ಮೊದಲ ದೇವಾಲಯವನ್ನು ರಾಜ ಅಶೋಕ ನಿರ್ಮಿಸಿದನು ಎಂಬ
ಉಲ್ಲೇಖವಿದೆ. ಬುದ್ಧನಿಗೆ ಜ್ಞಾನೋದಯವಾದ ದಿನವನ್ನು ಬುದ್ಧಪೂರ್ಣಿಮಾ ಎಂದು ಕರೆಯಲಾಯಿತು. ಮಹಾಬೋಧಿ ದೇಗುಲ ಭವ್ಯವಾಗಿದೆ.
ಜಗನ್ನಾಥ ಮಂದಿರ
ಬೋಧಗಯಾದ ಆವರಣದಲ್ಲೇ ಜಗನ್ನಾಥ ಮಂದಿರವಿದೆ. ಪುರಿಯ
ನೂಕುನುಗ್ಗಲಿನಲ್ಲಿ ಜಗನ್ನಾಥ ಮಂದಿರ ನೋಡಿದ ತೃಪ್ತಿ ಸಿಗದೆ ಇದ್ದರೂ ಇಲ್ಲಿ ಆರಾಮವಾಗಿ
ಮಂದಿರವನ್ನು ನೋಡಿ ಖುಷಿಪಟ್ಟೆವು. ಶ್ರೀಕೃಷ್ಣ, ಬಲರಾಮ, ಸುಭದ್ರಾ ದೇವಿಯ ವಿಗ್ರಹಗಳಿವೆ.
ಗಯಾದಿಂದ ನಿರ್ಗಮನ
ಗಯಾ ಸುತ್ತಾಟ ಮುಗಿಸಿ ನಾವು ೭ ಗಂಟೆಗೆ ರೈಲು
ನಿಲ್ದಾಣ ತಲಪಿದೆವು. ರೈಲು ಅದಾಗಲೇ ಅಲ್ಲಿ ನಿಂತಿತ್ತು. ರೈಲು ಹತ್ತಿ ಕೂತ ಸ್ವಲ್ಪ ಸಮಯದಲ್ಲೇ
ಊಟ (ಉಪ್ಪಿಟ್ಟು, ಅನ್ನ, ಮಜ್ಜಿಗೆ) ಸರಬರಾಜಾಯಿತು. ನಮ್ಮ ನಿತ್ಯದ ಕಾಯಕ, ಮರುದಿನಕ್ಕೆ ಬೇಕಾಗುವ
ಬಟ್ಟೆ ಬ್ಯಾಗಿಗೆ ತುಂಬಿಸಿ ಮಲಗಿದೆವು.
ಸಶೇಷ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ