ಬೆಬ್ರದಿಂದ ದೋಡಿತಾಲ್ ಕಡೆಗೆ ಪಯಣ
ತಾರೀಕು ೧೩-೫-೨೨ರಂದು ಬೆಳಗ್ಗೆ
೫.೩೦ಗೆ ಎದ್ದೆವು. ಚಹಾ ಕುಡಿಯುವವರು ಅದಾಗಲೇ ಚಹಾ ಹೀರುತ್ತಲಿದ್ದರು. (ನನಗೆ ಚಹಾ ಕುಡಿಯುವ ಅಭ್ಯಾಸ
ಇಲ್ಲ. ಹೀಗೆ ಚಾರಣ ಹೋಗುವಾಗ ಚಹಾ ಅಭ್ಯಾಸ ಒಳ್ಳೆಯದು ಎಂದು ನನಗೆ ಸಲಹೆ ಕೊಟ್ಟಿದ್ದರು. ಆದರೆ ಅದೇಕೋ
ಚಹಾ ಕುಡಿಯಬೇಕು ಎಂಬ ಹಪಾಹಪಿ ಬರುವುದೇ ಇಲ್ಲ. ಚಹಾ ರುಚಿ ಹೇಗಿದೆ ಎಂದೇ ಗೊತ್ತಿಲ್ಲ. ಕಾಫಿಯಾದರೂ
ಅಷ್ಟೇ. ಕುಡಿಯಲೇಬೇಕೆಂಬ ನಿಯಮವಿಲ್ಲ. ಕಾಫಿ ಸಿಕ್ಕರೆ ದಿನಕ್ಕೆ ಎರಡು ಸಲ ಕುಡಿಯಲು ಅಡ್ಡಿ ಇಲ್ಲ!)
೬.೩೦ಗೆ ತಿಂಡಿ ಚನ್ನಾ, ಬತೂರ. ಆ ಚಳಿಯಲ್ಲಿ ಬಿಸಿ ಬಿಸಿ ಪೂರಿ ಹಿತವಾಗಿತ್ತು. ಬಹಳ ರುಚಿಕರವಾಗಿತ್ತು.
ಬುತ್ತಿಗೆ ಚಪಾತಿ, ಕಡಲೆಕಾಳು
ಉಸ್ಲಿ ತುಂಬಿಸಿಕೊಂಡೆವು. ಉಸ್ಲಿಯಲ್ಲಿ ಎಣ್ಣೆ ಹಿತಮಿತವಾಗಿತ್ತು.
೭.೩೦ಗೆ ನಮ್ಮ ತಂಡದ ಪಟ ತೆಗೆಸಿಕೊಂಡೆವು. ಇಲ್ಲಿಂದ ನಮ್ಮ
ಬೆನ್ನಚೀಲದ ಹೊರೆಯಿಂದ ಮುಕ್ತರಾಗಿ ನಡೆದೆವು. ನಮ್ಮ ಚಿಲಗಳನ್ನು ಹೇಸರಗತ್ತೆಯ ಮೂಲಕ ದೋಡಿತಾಲ್ ತಲಪಲು
ವ್ಯವಸ್ಥೆ (ಬೇಕಾದವರಿಗೆ) ಮಾಡಿದ್ದರು. ದೊಡಿತಾಲ್ ತಲಪಿ, ಅಲ್ಲಿಂದ ವಾಪಾಸು ಅಗೋಡಕ್ಕೆ ತರಲು ರೂ.
೫೦೦ ತೆಗೆದುಕೊಂಡಿದ್ದರು. ಅದು ತುಂಬ ಅನುಕೂಲವಾಗಿತ್ತು. ಸಣ್ಣ ಚೀಲದಲ್ಲಿ ನೀರು, ಬುತ್ತಿ, ಮಳೆಅಂಗಿ ಮಾತ್ರ ತುಂಬಿಕೊಂಡಿದ್ದೆವು.
ದೋಡಿತಾಲ್ ಚಾರಣ ಗರ್ವಾಲ್ ಹಿಮಾಲಯ ಪ್ರದೇಶದಲ್ಲಿ ಕೈಗೊಳ್ಳುವ
ಹಿತಕರವಾದ ಚಾರಣವಾಗಿದೆ. ದಟ್ಟಕಾಡು, ಪರ್ವತಶ್ರೇಣಿಗಳು, ಹಸಿರು ಹೊದ್ದ ಭೂಮಿತಾಯಿ, ಆಳವಾದ ಕಣಿವೆಗಳು,
ಹರಿಯುವ ತೊರೆಗಳು, ಇವನ್ನೆಲ್ಲ ನೋಡುತ್ತ ನಿಧಾನವಾಗಿ ಸಾಗುವುದು ಚೇತೋಹಾರಿ ಅನುಭವ. ದೇವದಾರು, ಬಾಂಜ್,
ಬುರಾನ್, ರೋಡೋಡೆಂಡ್ರಾನ್ ಮರಗಳಿರುವ ದಟ್ಟ ಅರಣ್ಯ. ಬಿಸಿಲು ಬೀಳದೆ ನಡೆಯಲು ಹಿತವಾಗಿತ್ತು. ಒಬ್ಬರು
ಚಲಿಸುವಂಥ ದಾರಿ ಮಾತ್ರ, ಕೆಳಗೆ ಪ್ರಪಾತ ಕಣಿವೆ. ಹೇಸರಗತ್ತೆ ಮೂಲಕ ಸಾಮಾನು ಸಾಗಿಸುವ ಮಂದಿ, ಬೆನ್ನಹೊರೆಯಲ್ಲಿ
ಕಟ್ಟಿಗೆ ಹೊತ್ತು ನಡೆಯುವ ಹೆಂಗಸರು, ದನ ಎಮ್ಮೆ ಮೇಯಿಸುವ ಮಕ್ಕಳು, ಡೇರೆ ಹಾಕಿ ಅಲೆಮಾರಿ ಜೀವನ ನಡೆಸುವ
ಮಂದಿ ಹೀಗೆ ಮನುಷ್ಯರ ವಾಸಸ್ಥಾನ ದಾರಿಯಲ್ಲಿ ಸಿಗುತ್ತಲಿತ್ತು.
ಕಾಡು ಹೂವುಗಳ ವೈವಿಧ್ಯತೆ ನೋಡುವುದೇ ಚಂದ. ಕಾಡು ಸ್ಟ್ರಾಬೆರಿ ಹಣ್ಣುಗಳು ಇದ್ದುವು. ಅದರ ರುಚಿ ನೋಡಿದೆವು. ಅಲ್ಲಲ್ಲಿ ವಿಶ್ರಮಿಸುತ್ತ, ಪ್ರಕೃತಿಯ ಚೆಲುವನ್ನು ಕಣ್ಣುಗಳಲ್ಲಿ ಮನದಲ್ಲಿ ತುಂಬಿಕೊಂಡೆವು.
ಮಾಂಝಿ
ಏರುಗತಿಯಲ್ಲಿ ಸಾಗಿ ಸಾಗಿ ಮಾಂಝಿ ಎಂಬ ಊರು ತಲಪಿದೆವು.
ಅಲ್ಲಿ ಕುರಿಗಾಹಿಗಳ ಗುಡಿಸಲುಗಳಿವೆ. ದನ ಎಮ್ಮೆ ಮೇಯಿಸುತ್ತ ಮಕ್ಕಳ ಸಾಲು ಕಂಡಿತು. ಅಲ್ಲಿ ನಾವು
೨ ಗಂಟೆಗೆ ಊಟ ಮಾಡಿದೆವು. ಅಗೋಡಾದಿಂದ ಮಾಂಝಿ ತಲಪಬೆಕಾದರೆ ಕಾಲ್ನಡಿಗೆಯೇ ಗತಿ. ರಸ್ತೆ ಇಲ್ಲ. ಡಾಕ್ಟರರಿಗೆ ಸ್ವಲ್ಪ
ಸುಸ್ತಾಗಿತ್ತು. ಈ ಚಾರಣಕ್ಕೆ ಬನ್ನಿ ಎಂದು ಒತ್ತಾಯಿಸಿ ಕರೆದು, ತ್ರಾಸು ಕೊಟ್ಟೆವೇನೋ ಎಂದು ಅನಿಸಿ
ಅವರನ್ನು ಕೇಳಿದೆ. ಖುಷಿಯಿಂದಲೆ ಬರುತ್ತಿರುವೆ, ಸ್ವಲ್ಪ ಬೆನ್ನು ನೋವಿನಿಂದಾಗಿ ನಡೆಯಲು ತುಸು ಕಷ್ಟವಾಗುತ್ತಿದೆ
ಅಷ್ಟೇ. ಎಂದಾಗ ನಿರಾಳವಾಯಿತು. ಅಂಜಲಿ, ಸಂದೀಪ್, ರಾಮ್, ಡಾಕ್ಟರ್, ನಾನೂ, ಸಾಜನ್ ಒಟ್ಟಿಗೇ ಹೆಜ್ಜೆ
ಹಾಕುತ್ತ ಸಾಗುತ್ತಿದ್ದೆವು. ವಿಶ್ರಾಂತಿಗೆಂದು ಕೂತ ಸಮಯದಲ್ಲಿ, ಡಾಕ್ಟರ್ ಅವರು ಸುಸ್ತಾಗಿದ್ದರೂ
ಹುರುಪಿನಿಂದ ಕನ್ನಡ. ಹಿಂದಿ ಚಲನಚಿತ್ರ ಗೀತೆ ಹಾಡುತ್ತಿದ್ದರು. ನಾವು ಕೇಳುತ್ತ ತಲೆದೂಗುತ್ತಿದ್ದೆವು.
ಸಾಜನ್ ಮಾತುಕತೆ ಇಲ್ಲದೆ ನಮ್ಮ ಹಿಂದೆಯೇ ಬರುತ್ತಲಿದ್ದ.
ಏನಾದರೂ ಕೇಳಿದರೆ ಮಾತ್ರ ಮಾತು. ಬೋರ್ ಆಯಿತ ಎಂದು ಕೇಳಿದರೆ ನಗುತ್ತ, ಇಲ್ಲ ಎನ್ನುತ್ತಿದ್ದ.
ಹೀಗೆಯೇ ಮುಂದೆ ಸಾಗಿದಾಗ, ಬಾಂಜ್ ಎಂಬ ಮರಕ್ಕೆ ಬಟ್ಟೆ, ನಾಣ್ಯ ಎಲ್ಲ ಹಾಕಿದ್ದು ಕಂಡಿತು. ಆ ಮರ ಬಿಜಾರ್ ಎಂಬ ದೇವರ ಮರವಂತೆ. ಮರವನ್ನು ಪೂಜಿಸುವರಂತೆ. ಮಾಂಝಿಯಿಂದ ದೋಡಿತಾಲ್ ಗೆ ೬ಕಿಮೀ. ನಡೆದಷ್ಟೂ ಮುಗಿಯದ ಹಾದಿಯೇನೋ ಎಂದೆನಿಸುತ್ತಿತ್ತು. ಆಗಾಗ ಇನ್ನು ಎಷ್ಟು ದೂರ ಎಂದು ಸಾಜನ್ ಬಳಿ ಕೇಳಿದರೆ, ಅವನಿಂದ ಇನ್ನು ಸ್ವಲ್ಪ ದೂರವಷ್ಟೇ, ಇನ್ನೇನು ಬಂತು, ಎಂಬ ಮಾತೇ ಬರುತ್ತಿರಲಿಲ್ಲ!ಕಿ.ಮೀಗಟ್ಟಲೆ ಇದೆ ಎನ್ನುತ್ತಿದ್ದ!
ಮುಂದೆ ಸಾಗಿದಂತೆ, ಕಾಲಭೈರವೇಶ್ವರ ಗುಡಿ ಎದುರಾಯಿತು. ಅಲ್ಲಿದ್ದ ಎಲೆಯನ್ನು ಹಾಕಿ ಡಾಕ್ಟರ್ ನಮಿಸಿದರು. ಅಲ್ಲಿ ಸ್ವಲ್ಪ ಹೊತ್ತು ಕೂತು ಮುಂದುವರಿದೆವು. ಅಂತೂ ಸಂಜೆ ೫.೩೦ಗೆ ದೋಡಿತಾಲ್ ತಲಪಿ ಹರ್ಷಪಟ್ಟೆವು. ದೋಡಿತಾಲ್ ಸರೋವರ
೧.೫ ಕಿಮೀ ಸುತ್ತಳತೆಯ ಸುಂದರ ಸರೋವರ ದೊಡಿತಾಲ್. ನೈಸರ್ಗಿಕ
ಬುಗ್ಗೆಗಳಿಂದ ಮತ್ತು ಅಸ್ಸಿ ಗಂಗಾ ನದಿಯ ಮೂಲದಿಂದ ಹರಿದು ಬರುವ ನೀರಿನಿಂದ ಈ ಸರೋವರ ನಿರ್ಮಾಣವಾಗಿದೆ.
ದೋಡಿತಾಲ್ ಉತ್ತರಾಖಂಡದ ಎತ್ತರದ ಸರೋವರ ಎಂದು ಹೆಸರುಪಡೆದಿದೆ. ಸುತ್ತು ಪರ್ವತಗಳು, ದಟ್ಟ ಮರಗಳಿಂದಾವೃತವಾಗಿದೆ.
ಸಂಜೆಯಲಿ ಸರೋವರ ನೋಡುತ್ತ ಕೂತರೆ ಹೊತ್ತು ಸರಿಯುವುದೇ ತಿಳಿಯದು.
ಅನ್ನಪೂರ್ಣಾ ಗಣೇಶ ದೇಗುಲ
ಸರೋವರದ ಒಂದು ಪಕ್ಕದಲ್ಲಿ ಅನ್ನಪೂರ್ಣ, ಗಣೇಶನ ದೇಗುಲವಿದೆ.
ಇದು ಗಣೇಶ ಜನುಮ ತಾಳಿದ ಸ್ಥಳವಂತೆ. ಅಲ್ಲಿಯ ಪಂಡಿತರು
ಆ ಸಂಜೆಯ ಆರತಿಯನ್ನು ಡಾಕ್ಟರ್ ಹಾಗೂ ಕೃಷ್ಣ ಹೆಬ್ಬಾರರಿಂದ ಮಾಡಿಸಿದರು. ಪಂಡಿತರು ಆರು ತಿಂಗಳು ಅಲ್ಲಿ
ವಾಸ, ಇನ್ನಾರು ತಿಂಗಳು ಚಳಿಗಾಲದಲ್ಲಿ ದೇವರ ಸಮೇತ ಉತ್ತರಕಾಶಿಗೆ ತೆರಳುತ್ತಾರಂತೆ. ಅವರ ಮನೆಯವರೆಲ್ಲ
ಉತ್ತರಕಾಶಿಯಲ್ಲೇ ಇದ್ದಾರೆ. ಸ್ವತ: ನಳಪಾಕ ಮಾಡಿಕೊಂಡು ದೇವರಪೂಜೆಯ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಬಹಳ ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯ ಮಾಡುತ್ತಾರೆ. ಉಳಿದ ಸಮಯದಲ್ಲಿ ದೇವಾಲಯದೆದುರು ರಾಮಾಯಣ
ಪಾರಾಯಣ ಮಾಡುತ್ತ ಕೂತಿರುತ್ತಾರೆ. ಭಕ್ತಾದಿಗಳು ಕೊಟ್ಟ ದಕ್ಷಿಣೆಯೇ ಅವರ ಆದಾಯ ಮೂಲ. ಸರ್ಕಾರದಿಂದ
ಭತ್ಯೆ, ಸಂಬಳ ಏನೂ ಇಲ್ಲವಂತೆ. ದೇವಾಲಯಕ್ಕೆ ಸೋಲಾರ್ ದೀಪದ ವ್ಯವಸ್ಥೆ ಸರಕಾರ ಮಾಡಿದೆಯಂತೆ. ದೇವಾಲಯದಲ್ಲಿ
ಸದಾ ನಂದಾದೀಪ ಬೆಳಗುತ್ತಿರುತ್ತದೆ.
ಅಲ್ಲಿ ೧೦-೧೫ ಡೇರೆ ಹಾಕಿದ್ದರು. ಒಂದು ಡೇರೆಯಲ್ಲಿ ಇಬ್ಬರು
ತಂಗಲು ಹೇಳಿದ್ದರು. ನಾವು ಜಾಸ್ತಿ ಜನರಿಲ್ಲವಾದ ಕಾರಣ ಇಬ್ಬರೇ. ಇಲ್ಲಾಂದರೆ ಮೂರು ಜನ ಹಾಕುತ್ತಾರೆ.
ನಾನೂ ಸವಿತಳೂ ಒಂದು ಟೆಂಟಲ್ಲಿ ಮಲಗಿದೆವು. ನೆಲಕ್ಕೆ ಹಾಸಲು ಯೋಗ ಮ್ಯಾಟ್, ಮಲಗುಚೀಲದ ವ್ಯವಸ್ಥೆ
ಇತ್ತು. ನಿದ್ದೆ ಬರದೆ ಸುಮಾರು ಹೊತ್ತು ಒದ್ದಾಟ ನಡೆಸಿದೆವು.
ದರ್ವಾಪಾಸ್
ನಾವು ೯ ಮಂದಿ ಹಾಗೂ ಇಬ್ಬರು ಮಾರ್ಗದರ್ಶಿಗಳು ೭.೧೦ಕ್ಕೆ
ದರ್ವಾ ಪಾಸ್ ಕಡೆಗೆ ಹೊರಟೆವು. ದರ್ವಾಪಾಸ್ ಸಮುದ್ರತಳದಿಂದ ೪೧೫೦ ಮೀಟರ್ ಎತ್ತರದಲ್ಲಿದೆ. ಹೋಗುವ
ದಾರಿ ಕೂಡ ಸುಲಭವಾಗಿಲ್ಲ. ನಡೆಯಲಾದವರು ಮಾತ್ರ ಹೋಗಿ ಎಂದು ಮೊದಲೇ ಹೇಳಿದ್ದರು. ಅಸ್ಸಿ ನದಿ ಬುಡದಿಂದ
ಮೇಲೆ ಏರುತ್ತ ಸಾಗಬೇಕು. ಕಲ್ಲುಗಳಿರುವ ಹಾದಿ. ಕ್ರಮಿಸಬೇಕಾಗಿರುವುದು ಕೇವಲ ೫ ಕಿ.ಮೀ! ಆದರೆ ಆ ದಾರಿ
ನಮ್ಮಿಂದ ಏದುಸಿರು ದಬ್ಬುತ್ತಲಿತ್ತು! ಸುಮಾರು ೧.೩೦ ಕಿ.ಮೀ ಹೆಚ್ಚು ಕಷ್ಟಪಡದೆ ಸಾಗಿದೆವು. ಮುಂದೆ
ಹೋಗುತ್ತ ಗಿಡಮರಗಳು ಇಲ್ಲ, ಬಿಸಿಲು ಏರಿತು, ಹಾಕಿಕೊಂಡಿದ್ದ ಸ್ವೆಟರ್ ಟೊಪ್ಪಿ ಎಲ್ಲ ಬಿಚ್ಚಬೇಕಾಯಿತು.
ರಾತ್ರಿ
ನಿದ್ದೆ ಸರಿಯಾಗಿ ಆಗದ ಕಾರಣ ನಿದ್ದೆ ಮಾಡೋಣವೆಂದು ಹೊರಟರೆ ಟೆಂಟ್ ಒಳಗೆ ಬಿಸಿಲ ಕಾವು ಜೋರಾಗಿತ್ತು. ೧.೩೦ಗೆ ಅವಲಕ್ಕಿ ತಿಂದು ಮಲಗಿ ಕಾಲ ಕಳೆದೆವು.
ದರ್ವಾಪಾಸ್ ತುದಿ ತಲಪಿ ಅಲ್ಲಿಂದ ಹಿಂದುರುಗಿ ೩ ಗಂಟೆಗೆ
ಬಂದು ತಲಪಿದರು. ಮೇಲೆ ಸ್ವಲ್ಪ ಹಿಮ ಕಾಣಲು ಸಿಕ್ಕಿತಂತೆ. ಒಂದು ಪುಟ್ಟ ಸರೋವರ ಇದೆಯಂತೆ. ಜಾಗ ಚೆನ್ನಾಗಿದೆ.
ಆದರೆ ಹತ್ತುವುದು ಕಷ್ಟವಾಯಿತು ಎಂದರು.
ಅಲ್ಲಿ ಅರಣ್ಯ ಇಲಾಖೆಯ ಒಂದು ಕಟ್ಟಡವೂ ಇದೆ. ಇಲ್ಲಿ ಚಾರಣ
ಕೈಗೊಳ್ಳಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ.
ನಮಗೆ ಮಲಗಲು ಡೇರೆಯಲ್ಲಿ ವ್ಯವಸ್ಥೆ. ೪ ಸರಿಯಾದ ಪಾಯಿಖಾನೆ
ಇತ್ತು. ನದಿಯಿಂದ ನೀರು ತಂದು ಹೋಗಬೇಕಿತ್ತು. ಒಳ್ಳೆಯ ವ್ಯವಸ್ಥೆಯನ್ನೇ ಮಾಡಿದ್ದರು. ಒಂದು ಟೆಂಟಿನಲ್ಲಿ
ಅಡುಗೆ ಕಾರ್ಯಾಗಾರ.
ಸಂಜೆ ಆಲೂ ಬೋಂಡ, ಚಹಾ, ಟೊಮೆಟೊ ಸೂಪ್ ಸೇವನೆಯಾಯಿತು. ಅಷ್ಟರಲ್ಲಿ
೮ನೇ ತಂಡದವರು ೨೫ ಮಂದಿ ಬಂದು ಸೇರಿದರು. ಟೆಂಟೆಲ್ಲ ಭರ್ತಿಯಾಯಿತು.
ರಾತ್ರಿ ೭.೧೫ಕ್ಕೆ ಊಟ (ಚಪಾತಿ, ಸೋರೆಕಾಯಿ ಪಲ್ಯ, ಅನ್ನ,
ಸಾರು, ಹಪ್ಪಳ, ಗುಲಾಬ್ ಜಾಮೂನ್)ಮಾಡಿದೆವು.
ಶಿಬಿರಾಗ್ನಿ ಸುತ್ತ
ರಾತ್ರಿ ೮ ಗಂಟೆಗೆ ಶಿಬಿರಾಗ್ನಿ ಉರಿಸಲು ಕಷ್ಟಪಟ್ಟರು. ಪ್ಲಾಸ್ಟಿಕ್
ಗೋಣಿಚೀಲ ಹಾಕಿದಮೇಲೆ ಅಗ್ನಿ ದಗದಗ ಉರಿಯಿತು. ಅದರ ಸುತ್ತ ಚಳಿ ಕಾಯಿಸುತ್ತ ನಿಂತೆವು. ಮೂರು ನಾಲ್ಕು
ಮಂದಿ ಚಲನಚಿತ್ರಗೀತೆ ಹಾಡಿದರು. ೯ ಗಂಟೆವರೆಗೆ ಅಲ್ಲಿದ್ದು ನಾವು ಡೇರೆಯೊಳಗೆ ಸೇರಿಕೊಂಡೆವು.
ತಾರೀಕು ೧೫-೫-೨೨ರಂದು ಬೆಳಗ್ಗೆ ೫ ಗಂಟೆಗೆದ್ದು ಸರೋವರದ
ಸುತ್ತ ಅಡ್ಡಾಡಿ, ದೇಗುಲಕ್ಕೆ ಭೇಟಿಕೊಟ್ಟು, ಪಕ್ಕದಲ್ಲೆ ಇರುವ ಗಣಪತಿ, ಶಿವಗುಡಿಯನ್ನೂ ನೋಡಿ ಪಂಡಿತರಿಗೆ
ದಕ್ಷಿಣೆ ಸಲ್ಲಿಸಿ ವಿದಾಯ ಹೇಳಿದೆವು.
ತಿಂಡಿ
(ಉಪ್ಪಿಟ್ಟು, ಆಲೂಭುಜಿಯ, ಪಾಯಸ) ತಿಂದು, ಬುತ್ತಿಗೆ ಪಲಾವ್ ಹಾಕಿಕೊಂಡು ೭.೪೫ಕ್ಕೆ ಹೊರಟು ತಯಾರಾದೆವು.
ಅಲ್ಲಿ ತಂಡದ ಪಟ ತೆಗೆಸಿಕೊಂಡು, ಶ್ರವನ್ ಸಾವಂತನಿಗೆ ವಿದಾಯ ಹೇಳಿ, ನಮ್ಮ ಖುಷಿಯ ಭಕ್ಷೀಸು ಕೊಟ್ಟು
(ಅವನು ತೆಗೆದುಕೊಳ್ಳಲು ಒಪ್ಪಲೇ ಇಲ್ಲ, ಆದರೂ ನಾವು ಪ್ರೀತಿಯಿಂದ ಕೊಡುವುದು ಎಂದು ಹೇಳಿದಾಗ ತೆಗೆದುಕೊಂಡ)
ಹೊರಟೆವು.
(ಶ್ರವನ್
ಸಾವಂತ್ ಆ ಎರಡುದಿನ ಅಲ್ಲಿಯ ಕ್ಯಾಂಪ್ ಲೀಡರ್) ಹಾಗಾಗಿ ನಮ್ಮೊಂದಿಗೆ ಸೌರಭ್, ಸಾಜನ್ ಜೊತೆಗೂಡಿದರು.
ದೋಡಿತಾಲ್- ಅಗೋಡಾ
ಆ ದಿನ ದೋಡಿತಾಲಿನಿಂದ ೧೬ಕಿಮೀ ಸಾಗಿ ನಾವು ಅಗೋಡಾ ತಲಪಬೇಕಿತ್ತು.
ಹೆಚ್ಚಿನ ದಾರಿ ಕೂಡ ಇಳಿಜಾರು, ಸಮತಲವಿದ್ದುದರಿಂದ ಹೆಚ್ಚು ಕಷ್ಟವಾಗಲಿಲ್ಲ. ಪ್ರಕೃತಿಯ ಅಗಾಧತೆಯನ್ನು
ನೋಡುತ್ತ ದಾರಿ ಸವೆಸಿದೆವು. ಹೆಬ್ಬಾರರು, ಡಾಕ್ಟರ್, ನಾನು, ಹಿಂದೆ ಸಾಜನ್ ಸಾಗಿದೆವು.
ದಾರಿ ಮಧ್ಯೆ ಕಚೋರು ಎಂಬಲ್ಲಿ ಒಂದು ಗುಡಿಸಲು ಹೊಟೇಲ್
ಇದೆ. ಅಲ್ಲಿ ಸ್ವಲ್ಪ ಹೊತ್ತು ಕೂತು ಚಹಾ ಕುಡಿಯುವವರು ಕುಡಿದು ಮುಂದೆ ಸಾಗಿದೆವು. ಸ್ವಲ್ಪ ಮುಂದೆ
ಹೋದಂತೆ ಅಲೆಮಾರಿ ಜನಾಂಗದವರು ಹಾಕಿದ ಡೇರೆ ಸಿಕ್ಕಿತು. ಅಲ್ಲಿ ಒಂದು ಹೆಂಗಸು ಕಾದು ಕುಳಿತಿದ್ದಳು-
ಡಾಕ್ಟರ್ ಬಳಿ ಮಾತ್ರೆ ತೆಗೆದುಕೊಳ್ಳಲು. ಎರಡು ದಿನದ ಹಿಂದೆ ಅಲ್ಲಿ ನಾವು ಹಾದು ಹೋಗಿದ್ದಾಗ ಡಾಕ್ಟರ್
ಬಳಿ ಜ್ವರದ ಮಾತ್ರೆ ಕೇಳಿದ್ದಳಂತೆ. ಅದು ಬ್ಯಾಗಲ್ಲಿ ಹೋಗಿದೆ, ವಾಪಾಸು ಬರುವಾಗ ಕೊಡುವೆ ಎಂದಿದ್ದರಂತೆ.
ಡಾಕ್ಟರ್ ತಮ್ಮ ಜೇಬಿನಲ್ಲಿ ಇಟ್ಟಿದ್ದ ಮಾತ್ರೆಯನ್ನು ಅವಳಿಗೆ ಕೊಟ್ಟು ಕೃತಾರ್ಥರಾದರು! ಚಹಾ ಕುಡಿಯಿರಿ
ಎಂದು ಉಪಚಾರ ಮಾಡಿದಳವಳು!
ಮಾಂಝಿಯಲ್ಲಿ ಮಕ್ಕಳ ಗುಂಪು ಸಿಕ್ಕಿ, ಚಾಕಲೆಟ್ ಕೇಳಿದರು. ಜೇಬಲ್ಲಿದ್ದ ಕೆಲವೇ ಕೆಲವು ಚಾಕಲೇಟ್ ಕೊಟ್ಟು, ಮತ್ತೆ ಇದ್ದ ದ್ರಾಕ್ಷೆಯನ್ನೆಲ್ಲ ಅವರ ಬೊಗಸೆಗೆ ಸುರಿದೆ. ಅವರಿಗಾದ ಸಂತೋಷ ಇಲ್ಲಿ ವರ್ಣಿಸಲು ಅಸಾಧ್ಯ. ಮುಖದಲ್ಲಿ ಅಬ್ಬ, ಅದೆಷ್ಟು ಸಂತಸದ ಚೆಲುವು.
ಬೆಬ್ರ ತಲಪಲು ಇನ್ನು ಎಷ್ಟು ದೂರ ಎಂದು ಆಗಾಗ ಸಾಜನ್
ತಲೆ ತಿಂದೆವು! ಆದರೆ ಅವನು ದೂರ ಹೇಳುವಾಗ ಯಾವಾಗಲೂ ಉದಾರಿಯಾಗಲೇ ಇಲ್ಲ! ಡಾಕ್ಟರ್ ನಡೆಯುವುದು ನಿಧಾನಿಸಿದಾಗಲೆಲ್ಲ,
ಇನ್ನು ಬಹಳ ದೂರ ಇಲ್ಲ ಎಂದು ನಾವು ಅವರಿಗೆ ಹೇಳುತ್ತಲಿದ್ದೆವು. ಹೌದು, ಬೇಗ ತಲಪಿದರೆ ಸ್ನಾನ ಮಾಡಬಹುದು
ಎಂದು ಅವರೂ ನುಡಿದು ಹೆಜ್ಜೆ ಚುರುಕುಗೊಳಿಸುತ್ತಲಿದ್ದರು!
ಇನ್ನು ನಮ್ಮ ಗಮ್ಯ ತಲಪಲು ಕೇವಲ ೨ಕಿಮೀ ಎಂದು ನಾವು ಉತ್ಸಾಹಗೊಂಡೆವು. ನಡೆಯುತ್ತ ಸಾಗಿದಂತೆ, ಏರುಗತಿ ಸಿಗಲು ತೊಡಗಿತು. ಆಗ ಹೆಬ್ಬಾರರು ಡಾಕ್ಟರರಿಗೆ ಇಷ್ಟೇ ದೂರ ಏರು, ಮತ್ತೆ ಇಳಿಜಾರು ಎಂದು ನುಡಿಯುತ್ತಿದ್ದರು. ನೋಡಿ, ಕುದುರೆಗೆ ಹುಲ್ಲು ಆಸೆ ತೋರಿಸುವಂತೆ ನನಗೆ ಹೀಗೆ ಆಸೆ ತೋರಿಸುತ್ತಿದ್ದಾರೆ ಇವರು ಎಂದು ಹುಸಿಕೋಪದಿಂದ ಡಾಕ್ಟರ್ ಹೇಳುತ್ತಲಿದ್ದರು! ಆಳದ ಕಣಿವೆ, ಕಣಿವೆಯಾಚೆ ಹೊಲಗಳು, ಮಧ್ಯೆ ಒಂದೊಂದು ಒಂಟಿ ಗುಡಿಸಲು ಕಾಣುತ್ತಲಿತ್ತು. ಅವನ್ನೆಲ್ಲ ನೋಡುವಾಗ, ಅಬ್ಬ, ಇಲ್ಲಿಯವರ ಜೀವನ ಸಾಹಸಮಯ, ಕಠಿಣ ಶ್ರಮದಾಯಕ ಎಂಬ ಭಾವನೆ ಮನದಲ್ಲಿ ಏಳುತ್ತಲಿತ್ತು. ಹುಶಾರು ತಪ್ಪಿದರೆ ಎಷ್ಟು ದೂರ ನಡೆದು ಹೋಗಬೇಕಪ್ಪ ಎಂದು ಮಾತಾಡಿಕೊಂಡೆವು. ಆದರೆ ಇಲ್ಲಿಯವರು ಆರೋಗ್ಯವಂತರಾಗಿರುತ್ತಾರೆ, ಖಾಯಿಲೆ ಕಡಿಮೆ ಇರಬಹುದು, ಅಂಥ ಹಾಳು ಪರಿಸರ ಅವರಿಗೆ ಇಲ್ಲ. ಎಂದೂ ಮಾತಾಡಿಕೊಂಡೆವು.
ನಡೆದೂ ನಡೆದೂ ಅಂತೂ ಅಗೋಡಾ ಹಳ್ಳಿ ತಲಪಿದೆವು. ಬಂದೇ ಬಂತು ಎಂಬ ಖುಷಿ ಜೊತೆಗೆ ದೂರದಲ್ಲಿ ಎತ್ತರದ ರಸ್ತೆ ತೋರಿಸಿ ಅಲ್ಲಿಗೆ ತಲಪಬೇಕು ಎಂದು ಸಾಜನ್ ಹೇಳಿದಾಗ ನಮ್ಮ ನಡಿಗೆ ನಿಧಾನವಾಯಿತು!
ಅಗೋಡಾ-
ಉತ್ತರಕಾಶಿ
ಅಗೋಡದಿಂದ ಗಂಗೋರಿಗೆ ರಸ್ತೆ
ನಿರ್ಮಿಸಿ ಹೆಚ್ಚು ವರ್ಷಗಳಾಗಿರಲಿಕ್ಕಿಲ್ಲವೆನಿಸಿತು. ಪರ್ವತ ಕಡಿದು ರಸ್ತೆ ನಿರ್ಮಿಸಿದ್ದಾರೆ. ಕಲ್ಲುಮಣ್ಣಿನ
ರಸ್ತೆ. ಆ ದಾರಿಯಲ್ಲಿ ಚಲಿಸುವ ಜೀಪಿನ ಚಕ್ರ ಹೆಚ್ಚುಸಮಯ ಬಾಳಿಕೆ ಬರಲಿಕ್ಕಿಲ್ಲವೆನಿಸಿತು. ಅಗೋಡದಿಂದ
ಉತ್ತರಕಾಶಿಗೆ ಸುಮಾರು ೨೨ಕಿಮೀ. ನಾವು ೭.೧೫ಕ್ಕೆ ಉತ್ತರಕಾಶಿಯ ಕೀರ್ತಿ ಪ್ಯಾಲೇಸ್ ತಲಪಿದೆವು.
ಕೀರ್ತಿ ಪ್ಯಾಲೇಸ್
ಕಳೆದ ೧೫ ದಿವಸಗಳಿಂದ ಅಲ್ಲೆ ಇದ್ದ (ಕ್ಯಾಂಪ್ ಉಸ್ತುವಾರಿ) ಅಶೋಕ ಅಗರ್ವಾಲ್ ಹಾಗೂ ಅವರ ಪತ್ನಿ ನಮ್ಮನ್ನು ಬರಮಾಡಿಕೊಂಡರು.
ನಾವು ಕೋಣೆಗೆ ಹೋಗಿ ಸಂಭ್ರಮದಿಂದ ಬಿಸಿನೀರು ಸ್ನಾನ
ಮಾಡಿದೆವು. ರಾತ್ರಿ ೮ಕ್ಕೆ ಊಟ ( ಚಪಾತಿ, ಪನ್ನೀರ್ ಸಾಗು, ಅನ್ನ ಸಾರು ಹಪ್ಪಳ, ಪಾಯಸ) ಮಾಡಿದೆವು.
ಅಂಜಲಿ, ಮಾಲಿನಿ ಹಾಗೂ ನಾನು ಒಂದು ಕೋಣೆಯಲ್ಲಿ. ರಾತ್ರೆ ಹತ್ತಕ್ಕೆ ನಾವು ಮಲಗಿದೆವು.
ಉತ್ತರಕಾಶಿಗೆ
ವಿದಾಯ
ರಾತ್ರೆ ಮಲಗಿದ್ದೊಂದೇ ಗೊತ್ತು. ಮತ್ತೆ ಬೆಳಗ್ಗೆ ೫ ಗಂಟೆಗೇ
ಎಚ್ಚರ. ೧೬-೫-೨೨ರಂದು ಸ್ನಾನಾದಿ ಮುಗಿಸಿ ಕೂತಾಗ,
ಚಾರಣದಲ್ಲಿ ಭಾಗವಹಿಸಿದ್ದಕ್ಕೆ ಸರ್ಟಿಫಿಕೆಟ್ ತಲಪಿಸಿದರು. ನಮ್ಮ ಅನಿಸಿಕೆ ನಮೂದಿಸಲು ಒಂದು ಫಾರ್ಮ್
ಕೊಟ್ಟು ತುಂಬಿಕೊಡಲು ಹೇಳಿದರು.
ಮಸ್ಸೂರಿ ಯೂಥ್ ಹಾಸ್ಟೆಲ್
ನಾವು ೬ ಮಂದಿ ನವೀನನ ಜೀಪಿನಲ್ಲಿ ಮಸ್ಸೂರಿಗೆ ಹೊರಟೆವು. ದಾರಿಯಲ್ಲಿ ಚಹಾ, ಕಾಫಿ
ವಿರಾಮ,(ಡಾಕ್ಟರರ ಕೊಡುಗೆ), ಪೀಚ್ ಹಣ್ಣು ಕಿಲೋಗೆ ರೂ.೮೦ ತೆಗೆದುಕೊಂಡು (ಅದೂ ಅವರದೇ ಕೊಡುಗೆ) ಮಸ್ಸೂರಿ
ಯೂಥ್ ಹಾಸ್ಟೆಲ್ ತಲಪಿದಾಗ ೧.೨೦ ದಾಟಿತ್ತು. ಹತ್ತು ಜನ ವಸತಿ ಮಾಡುವಂಥ ಕೋಣೆಯಲ್ಲಿ ನಾವು ಆರು ಮಂದಿ
ಸೇರಿಕೊಂಡೆವು. ಬಾಡಿಗೆ ದರ ರೂ. ೧೨೦೦
ಅಲ್ಲಿಯೇ ಊಟ (ಚಪಾತಿ ಪಲ್ಯ,
ಅನ್ನ ಸಾರು, ಮೊಸರು) ಮಾಡಿದೆವು.
ಊಟವಾಗಿ ನಾವು ೩ ಗಂಟೆಗೆ ಜೀಪ್ ಬಾಡಿಗೆಗೆ ಮಾಡಿಕೊಂಡು
ಮಸ್ಸೂರಿ ಸುತ್ತಲು ಹೊರಟೆವು.
ಕೆಂಪ್ಟೀ ಜಲಪಾತ
ಸುಮಾರು ೧೫ ಕಿಮೀ ದೂರದಲ್ಲಿರುವ (ಮಸ್ಸೂರಿಯಿಂದ ಯಮುನೋತ್ರಿಗೆ
ಹೋಗುವ ಮಾರ್ಗ) ಕೆಂಪ್ಟೀ ಜಲಪಾತ ನೋಡಲು ಹೋದೆವು. ದಾರಿಯಲ್ಲಿ ಮಳೆ. ನಾವು ಜೀಪಿನಲ್ಲಿ ಕೂತೇ ಜಲಪಾತ
ನೋಡಬೇಕಷ್ಟೇ ಎಂದು ಮಾತಾಡಿಕೊಂಡೆವು. ಆದರೆ ಕೆಂಪ್ಟೀ ತಲಪಿದಾಗ ಮಳೆಯೂ ನಿಂತಿತ್ತು. ಜಲಪಾತ ನೋಡಲು ಸುಮಾರು ೧೫೦
ಮೆಟ್ಟಲು ಇಳಿಯಬೇಕು.
ಜಲಪಾತದ ಧಾರೆಯೆದುರು ಜನ ಮೈಯೊಡ್ದಿ
ನಿಂತಿದ್ದರು. ನಾವು ಮೇಲಿಂದ ನೋಡಿ ಪಟ ತೆಗೆದು ಹಿಂತಿರುಗಿದೆವು.
ದೂರದರ್ಶಕದಿಂದ ಮಸ್ಸೂರಿ ನೋಟ
ಅಲ್ಲಿಂದ ನಾವು ಕ್ಯಾಮಲ್ ರಾಕ್, ಲಾಲ್ ದಿಬ್ಬ, ಹಳೆಯ ಮಸ್ಸೂರಿ ಪೇಟೆ, ನಾಗದೇಗುಲ ಇವಿಷ್ಟನ್ನು ದೂರದರ್ಶಕದ ಮೂಲಕ ನೋಡಿ ದೂರದರ್ಶಕದವನ ಮುಖದಲ್ಲಿ ಹರ್ಷ ತುಂಬಿಸುವಲ್ಲಿ ಯಶ ಸಾಧಿಸಿದೆವು! ನಾನೂ ಸವಿತಾ ಮಾತ್ರ ನೋಡಿರುವುದು. ಅವೆಲ್ಲ ಬರಿಗಣ್ಣಿಗೂ ಕಾಣುತ್ತಲಿದ್ದುವುದು—ಆದರೆ ಚಿಕ್ಕದಾಗಿ. ನಾವು ಚಳಿಗೆ ಬೆಚ್ಚನೆ ಬಟ್ಟೆ ಏನೂ ಕೊಂಡೋಗಿರಲಿಲ್ಲ. ಶೀತಗಾಳಿ ಬೀಸುತ್ತಲಿತ್ತು.
ಗನ್ ಪಾಯಿಂಟ್ಗನ್ ಪಾಯಿಂಟ್ ನೋಡುವ ಸಲುವಾಗಿ ಕೇಬಲ್ ಕಾರು ಏರಿದೆವು. ಮಸ್ಸೂರಿಗೆ ಹೋಗಿ ಕೇಬಲ್ ಕಾರಿನಲ್ಲಿ ಕೂರಲಿಲ್ಲವೆ? ಎಂದು ಯಾರೂ ಪ್ರಶ್ನೆ ಮಾಡಬಾರದಲ್ಲ! ಅಲ್ಲಿ ನೋಡಲು ಏನೇನೂ ಇಲ್ಲ. ಆಗಲೇ ಕತ್ತಲಾವರಿಸುತ್ತಲಿತ್ತು. ಮಸ್ಸೂರಿ ಪೇಟೆ ವಿದ್ಯುದ್ದೀಪಗಳಿಂದ ಅಲಂಕೃತವಾಗಿರುವುದು ನೋಡಿ ಸಂತಸಪಟ್ಟು ವಾಪಾಸಾದೆವು!
ಸ್ಥಳೀಯ ಆಹಾರ ಸೇವನೆ
ಬೀದಿಬದಿಯಲ್ಲಿ ಮೊದಲಿಗೆ ಗೋಲ್ಗೊಪ್ಪ ಸವಿದೆವು. ಡಾಕ್ಟರರಿಗೂ
ರುಚಿ ನೋಡಲು ವಿನಂತಿಸಿದಾಗ, ಅವರೂ ಖುಷಿಯಿಂದಲೇ ಪ್ರಥಮಬಾರಿ ಗೋಲ್ಗೊಪ್ಪ ತಿಂದರು.
ಮತ್ತೆ ಒಂದು ಹೊಟೇಲಿಗೆ ಹೋಗಿ ಮೊಮೊ, ಚೌಮಿನ್, ಸ್ಪ್ರಿಂಗ್
ರೋಲ್ ಹಂಕೊಂಡು ತಿಂದೆವು. ಡಾಕ್ಟರ್ ಎಲ್ಲವನ್ನೂ ರುಚಿ
ನೋಡಿ ಗೋಲ್ಗೊಪ್ಪಕ್ಕೆ ಹೆಚ್ಚು ಅಂಕ ಕೊಟ್ಟು, ಪುನಃ ಅದನ್ನು ತಿಂದೆವು! ೮.೪೫ಕ್ಕೆ ವಾಪಾಸು ಯೂಥ್ ಹಾಸ್ಟೆಲಿಗೆ ಹಿಂತಿರುಗಿದೆವು.
ಡೆಹರಾಡೂನಿಗೆ
ಪಯಣ
ತಾರೀಕು ೧೭-೩-೨೨ರಂದು ನಿಧಾನವಾಗಿ ೬ ಗಂಟೆಗೆದ್ದು,
ಸ್ನಾನಾದಿ ಮುಗಿಸಿ ತಯಾರಾದೆವು. ಡಾಕ್ಟರ್ ರೆಡಿ ಟು ಈಟ್ ಅವಲಕ್ಕಿ ತಂದಿದ್ದರು. ಅದಕ್ಕೆ ಬಿಸಿನೀರು
ಹಾಕಿ ಅವಲಕ್ಕಿ ತಯಾರಿಸಿದೆವು. ಕಲ್ಲಂಗಡಿಹಣ್ಣು ತಂದಿದ್ದೆವು, ಅದನ್ನೂ ಹೆಚ್ಚಿ ಬೆಳಗಿನ ತಿಂಡಿ ಮುಗಿಸಿದೆವು.
ನಾನು ಬಿಸಿಬಿಸಿ ಪರೊಟ (ರೂ. ೩೦) ಒಂದು ತಿಂದೆ. ಮಧ್ಯಾಹ್ನಕ್ಕಾಗಿ
ಆಲೂ ಪರೋಟ ಕಟ್ಟಿಸಿಕೊಂಡೆವು.
ಕೋಣೆ ಖಾಲಿ ಮಾಡಿ ಲೆಕ್ಕ ಚುಕ್ತಾ ಮಾಡಿ, ೯.೧೫ಕ್ಕೆ ಇನ್ನೋವಾ
ಕಾರಿನಲ್ಲಿ (ಬಾಡಿಗೆ ರೂ. ೫೦೦೦) ಡೆಹರಾಡೂನಿಗೆ ಹೊರಟೆವು. ದಾರಿಯಲ್ಲಿ ಕಾಫಿ ಚಹಾ ವಿರಾಮವಾಗಿ ನಾವು
ವಿಮಾನ ನಿಲ್ದಾಣ ತಲಪಿದಾಗ ೧೨ ಗಂಟೆ. ಅಲ್ಲಿ ತಪಾಸಣೆಯಾಗಿ ಒಳಗೆ ಹೋಗಿ ಕೂತೆವು. ಕಟ್ಟಿ ತಂದಿದ್ದ
ಪರೋಟ ತಿಂದಾಗುವಾಗ ವಿಮಾನ ಏರುವ ಸಮಯವಾಗಿತ್ತು.
ವಿಮಾನ ಏರಿ ಕೂತೆವು. ೧.೨೦ಕ್ಕೆ ಸರಿಯಾಗಿ ವಿಮಾನ ಮೇಲೇರಿತು.
ಕಡ್ಲೆಕಾಯಿ, ಹುರಿಗಾಳು ಡಾಕ್ಟರ್ ಚೀಲದಿಂದ ಹೊರಗೆ ತೆಗೆದರು. ಅವನ್ನು ಕಾಲಿ ಮಾಡಿದೆವು. ೪.೨೦ಕ್ಕೆ ಸರಿಯಾಗಿ ಬೆಂಗಳೂರಿನಲ್ಲಿ ಇಳಿಯಿತು.
ಬಂದ (ಮೈಸೂರು) ದಾರಿಗೆ ಸುಂಕವಿದೆ!
ಬ್ಯಾಗ್ ಪಡೆದು ಹೊರಗೆ ಬಂದು
ಫ್ಲೈ ಬಸ್ ಹತ್ತಿದೆವು. ೫.೧೫ಕ್ಕೆ ಬಸ್ ಹೊರಟಿತು. ವಾಹನ ದಟ್ಟಣೆಯಿಂದಾಗಿ ಕೆಂಗೇರಿ ತಲಪಲು ಒಂದೂವರೆ
ಗಂಟೆ ಹಿಡಿಯಿತು. ಮೈಸೂರು ತಲಪಿದಾಗ ೧೦ ಗಂಟೆಯಾಗಿತ್ತು.
ನಾನು ಹಾಗೂ ಮಾಲಿನಿ ಪೂರ್ವಪಾವತಿ ರಿಕ್ಷಾದಲ್ಲಿ ಮನೆ ಸೇರಿದೆವು. ಅಲ್ಲಿಗೆ ನಮ್ಮ ೮ ದಿನದ ಚಾರಣ ಯಾತ್ರೆ
ಯಶಸ್ವಿಯಾಗಿ ಸಂಪನ್ನಗೊಂಡಿತು.
ಮುಗಿಸುವ
ಮುನ್ನ
ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರದಾದ್ಯಂತ
ಚಾರಣ ಕಾರ್ಯಕ್ರಮಗಳನ್ನು ಬಲು ಕಡಿಮೆ ಖರ್ಚಿನಲ್ಲಿ ಸುರಕ್ಷಿತವಾಗಿ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ
ಪ್ರತೀವರ್ಷ ನಡೆಸುತ್ತ ಬರುತ್ತಿದೆ. ವಿವರಗಳಿಗೆ ನೋಡಿ
(www.yhaindia.org) ಲಾಭರಹಿತ ಸಂಸ್ಥೆ ಇದು. ಈ ಚಾರಣ ನಡೆಸುವ ಸಂದರ್ಭಗಳಲ್ಲಿ ಶಿಬಿರ ಪ್ರಮುಖರಾಗಿ
ಕೆಲಸ ಮಾಡುವವರೆಲ್ಲರೂ ಸೇವಾಮನೋಭಾವದಿಂದ ಸೇವೆ ಸಲ್ಲಿಸುವವರು. ನಾವು ಹೋದ ಕೀರ್ತಿ ಪ್ಯಾಲೇಸಿನಲ್ಲಿ
ಬೇಬಿ, ಅಶೋಕ ಅಗರವಾಲ್, ಹಾಗೂ ಅವರ ಪತ್ನಿ, ಬೆಬ್ರದಲ್ಲಿ ಆಭಾ ಜೋಷಿ, ಹೀಗೆ ಎಲ್ಲ ಕಡೆ ಸ್ವಯಂ ಸೇವಕರು
ಸೇವೆ ಸಲ್ಲಿಸಿದ್ದರು. ಎಲ್ಲ ಕಡೆಗಳಲ್ಲೂ ಆದಷ್ಟೂ ಅನುಕೂಲಕರ ವ್ಯವಸ್ಥೆ ಕಲ್ಪಿಸಿದ್ದರು. ಊಟತಿಂಡಿ
ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ನಮ್ಮೆಲ್ಲರ ತಂಡಗಳ ಪರವಾಗಿ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್
ಇಂಡಿಯಾದ ಎಲ್ಲ ಸಿಬ್ಬಂದಿವರ್ಗದವರಿಗೆ ಹಾಗೂ ಸ್ವಯಂಸೇವಕರಿಗೆ ಧನ್ಯವಾದ.
ಈ ಚಾರಣದ ಸಲುವಾಗಿ, ವಿಮಾನ ಟಿಕೆಟ್, ವಸತಿ, ಒಡಾಟಕ್ಕೆ
ಜೀಪ್, ಇತ್ಯಾದಿ ಮಾತುಕತೆ, ಮಸ್ಸೂರಿ ಸುತ್ತಾಟ ಎಲ್ಲವನ್ನೂ ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮಾಡಿದವರು
ಕೃಷ್ಣ ಹೆಬ್ಬಾರ ಹಾಗೂ ಶ್ರೀಹರಿ. ಇವರಿಬ್ಬರಿಗೆ ನಮ್ಮ ತಂಡದವರ ಪರವಾಗಿ ಧನ್ಯವಾದ. ನಮಗೆ ಒಬ್ಬೊಬ್ಬರಿಗೆ
ಸರಿ ಸುಮಾರು ರೂ. ೨೭೦೦೦ ಖರ್ಚಾಗಿತ್ತು. (ಜಾಸ್ತಿ ಯಾದದ್ದು ವಿಮಾನದ ಟಿಕೆಟ್ ದರ.)
ಇಲ್ಲಿ ಬಳಸಿದ ಕೆಲವು ಚಿತ್ರಗಳು ಸಹಚಾರಣಿಗರದು.
ಓದಿದೆ ರುಕ್ಮಿಣಿ, ತುಂಬಾ ಖುಷಿ ಆತು. ಎನ್ನಂದಂತೂ ಹೋಪಳೆಡಿಯ, ನೀನು ಬರದ್ದರ ಓದಿ ಆನೇ ಹೋದ ಹಾಂಗಾತು. ಭಗವಂತ ನಿನಗೆ ಇನ್ನೂ ಹಿಂಗೆ ಹೋಪ ಶಕ್ತಿ ಕೊಡಲಿ.
ಪ್ರತ್ಯುತ್ತರಅಳಿಸಿವೀಣಾ.
ಧನ್ಯವಾದ
ಪ್ರತ್ಯುತ್ತರಅಳಿಸಿ