ಶಿವಗಂಗೆ ಬೆಟ್ಟ
ಪಾವಗಡ
ಕೋಟೆ
ಮೈಸೂರಿನಿಂದ ನಾವು ೨೨ ಮಂದಿ ಶಿವಗಂಗೆ ಹಾಗೂ ಪಾವಗಡ ಕೋಟೆ ನೋಡಲು ೨೫.೬.೨೦೨೨ರಂದು ಬೆಳಗ್ಗೆ ೫.೩೦ಗಂಟೆಗೆ ಹೊರಟೆವು. ದಾರಿಯಲ್ಲಿ ತಿಂಡಿ ತಿಂದು ಶಿವಗಂಗೆ ಬೆಟ್ಟದ ಪಾದ ತಲಪಿದಾಗ ಗಂಟೆ ೯.೩೦ ದಾಟಿತ್ತು. ಪುಷ್ಕರಿಣಿ ಬಳಿಯಿಂದ ಮೊದಲಿಗೆ ೫೦ ಮೆಟ್ಟಲು ಹತ್ತಿ ದೇವಾಲಯಕ್ಕೆ ಹೋದೆವು. ಈ ದೇವಾಲಯದಲ್ಲಿರುವ ಶಿವಲಿಂಗಕ್ಕೆ ತುಪ್ಪ ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ ಎಂಬುದು ಪ್ರತೀತಿ.
ಪಾತಾಳ ಗಂಗೆ – ಒಳಕಲ್ಲು ತೀರ್ಥ
ಮುಂದೆ ನಾವು ಪಾತಾಳಗಂಗೆಯೆಡೆಗೆ
ಸಾಗಿದೆವು. ಕಡಿದಾದ ಬಂಡೆಗಳಲ್ಲಿ ಮೆಟ್ಟಲು ಕೊರೆದಿದ್ದಾರೆ. ಕೈ ತಾಂಗು ಹಾಕಿರುವುದರಿಂದ ಆರಾಮವಾಗಿ
ಮೆಟ್ಟಲು ಹತ್ತಬಹುದು. ಶನಿವಾರವಾದ್ದರಿಂದ ಹೆಚ್ಚು ಪ್ರವಾಸಿಗರು ಇರಲಿಕ್ಕಿಲ್ಲ ಎಂದು ಭಾವಿಸಿದ್ದೆವು.
ಆದರೆ ಶಾಲಾ ಮಕ್ಕಳ ಸೈನ್ಯವೇ (೩ ಬಸ್) ಎದುರಾಯಿತು.
ಹತ್ತಿಪ್ಪತ್ತು ಮಕ್ಕಳು ಒಂದೆಡೆ ಕುಳಿತಿದ್ದರು. ಮುಂದೆ
ಹೋಗಲು ಅವರಿಗೆ ಸುಸ್ತಾಯಿತಂತೆ. ಹಾಗಾಗಿ ಅಲ್ಲೇ ಕುಳಿತಿರಿ ಎಂದು ಪಿ.ಟಿ ಮಾಸ್ತರರು ಅಪ್ಪಣೆ ಕೊಟ್ಟರಂತೆ. ನಮ್ಮ ತಂಡದಲ್ಲಿ ೬೦ ದಾಟಿದವರು ಆರೇಳು ಮಂದಿ ಇದ್ದರು.
ಅವರೆಲ್ಲ ಸೇರಿ ಆ ಮಕ್ಕಳನ್ನು ಹುರಿದುಂಬಿಸಿ ಕೂತಲ್ಲಿಂದ ಎಬ್ಬಿಸಿ ಪಾತಾಳಗಂಗೆವರೆಗೆ ಕರೆತರಲು ಯಶ
ಸಾಧಿಸಿದರು. ಆ ಮಕ್ಕಳೂ ಖುಷಿಯಿಂದಲೇ ನಡೆದಿದ್ದರು.
ಪಾತಾಳಗಂಗೆಯಲ್ಲಿ ವೀರಭದ್ರೇಶ್ವರ ದೇಗುಲವಿದೆ. ಅಲ್ಲಿಗೆ ಹೋಗಲು ಎರಡಡಿ ನೀರಲ್ಲೇ ತೆರಳಬೇಕು. ಎಲ್ಲ ಕಾಲದಲ್ಲೂ ಅಲ್ಲಿ ನೀರಿರುತ್ತದಂತೆ. ಒಳಗೆ ಒಳಕಲ್ ತೀರ್ಥವನ್ನು (ಒರಳುಕಲ್ಲಿನಾಕಾರದ ಚಿಲುಮೆಯೊಳಗೆ ಕೈ ಹಾಕಿದರೆ ನೀರು ಕೈಗೆ ಸಿಗುತ್ತದೆ.) ಕೈ ಹಾಕಿ ತೆಗೆದು ಕುಡಿದೆವು. ಒಳ ಹೋಗಲು ಟಿಕೆಟ್ (ರೂ. ೫) ಪಡೆಯಬೇಕು. ದ್ವಾದಶ ಜ್ಯೋತಿರ್ಲಿಂಗ
ಪಾತಾಳಗಂಗೆ ನೋಡಿ ಮುಂದೆ ಮತ್ತಷ್ಟು ಮೆಟ್ಟಲೇರಿ ಮುಂದುವರಿದು
ದ್ವಾದಶ ಜ್ಯೋತಿರ್ಲಿಂಗ ತಲಪಿದೆವು. ಪ್ರವಾಸಿಗಳಲ್ಲಿ ಹೆಚ್ಚಿನವರೂ ಪಾತಾಳಗಂಗೆ ವರೆಗೆ ಮಾತ್ರ ಬಂದು
ಹಿಂದುರುಗುವರಂತೆ. ಬೆಟ್ಟದ ತುದಿಗೆ ತೆರಳುವವರು ಕಡಿಮೆಯಂತೆ. ನಾವು ಹೋದ ದಿನ ಕೆಲವು ಮಂದಿ ಪ್ರವಾಸಿಗರು
ತರುಣ ತರುಣಿಯರು) ನಮ್ಮ ಹಿರಿತಲೆಯವರು ಹತ್ತುವುದು ನೋಡಿ ಸ್ಫೂರ್ತಿಗೊಂಡು ಜ್ಯೋತಿರ್ಲಿಂಗದವರೆಗೂ
ನಮ್ಮೊಡನೆ ಬಂದು ಸಂತಸಪಟ್ಟರು.
ಶಿವ ಪಾರ್ವತಿಯರ ದೊಡ್ದದಾದ ವಿಗ್ರಹ ದೂರದಿಂದಲೇ ಗಮನಸೆಳೆಯುತ್ತವೆ.
ಒಳಗೆ ಗಣಪತಿ, ಸುಬ್ರಹ್ಮಣ್ಯ ಹಾಗೂ ೧೨ ಜ್ಯೋತಿರ್ಲಿಂಗಗಳನ್ನು
ಸಾಲಾಗಿ ಸ್ಥಾಪಿಸಿದ್ದಾರೆ.
ದ್ವಾದಶಲಿಂಗದ ದರ್ಶನ ಪಡೆದು ನಾವು ಶಿವಗಂಗೆ ಬೆಟ್ಟ ಏರಲು
ಮುಂದುವರಿದೆವು. ೧೩೮೦ ಮೀಟರ್ ಎತ್ತರವಿರುವ ಈ ಬೆಟ್ಟ ಏರಲು ತಾಕತ್ತು ಬೇಕೇ ಬೇಕು. ಮೇಲಕ್ಕೆ ಕಡಿದಾದ
ಬಂಡೆ ಏರಬೇಕು. ಬಂಡೆಯಲ್ಲೇ ಮೆಟ್ಟಲು ಕೊರೆದು ಕೈತಾಂಗು ಹಾಕಿರುವುದರಿಂದ ಸಲೀಸಾಗಿ ಹತ್ತಬಹುದು. ನಮ್ಮ
ತಂಡದಲ್ಲಿ ೨ ಪುಟಾಣಿ ಮಕ್ಕಳು ಇದ್ದರು. ಅವರು ಬಹಳ ಲವಲವಿಕೆಯಿಂದಲೇ ಬೆಟ್ಟ ಏರಿದರು. ಅವರ ಉಲ್ಲಾಸ
ಕಂಡು ನಮ್ಮ ಉತ್ಸಾಹ ಹೆಚ್ಚಿತು.
ಬೃಹತ್ ಬಂಡೆ ಮೇಲೆ ನಂದಿ ವಿಗ್ರಹವಿದೆ. ಅದನ್ನು ಏರುವುದೇ
ಸಾಹಸ. ಬಂಡೆ ಏರಿ ಕಿರಿದಾದ ಸ್ಥಳದಲ್ಲಿ ನಂದಿಗೆ ಪ್ರದಕ್ಷಿಣೆ ಹಾಕಿ ಇಳಿದೆವು.
ಈ ಬಸವ ವಿಗ್ರಹ ಸ್ಥಾಪನೆ ಮಾಡಿದವರು ಕಲ್ಯಾಣ ರಾಜ ಬಿಜ್ಜಳನ ಮಂತ್ರಿ ಎಂಬ ಉಲ್ಲೇಖವಿದೆ.
ಅಲ್ಲಿಂದ ಇನ್ನಷ್ಟು ಮೇಲೇರಿದರೆ ಗಂಗಾಧರೇಶ್ವರ ದೇವಾಲಯ
ಸಿಗುತ್ತದೆ. ಅಗಸ್ತ್ಯರ ಕಾಲದಲ್ಲೆ ಇದ್ದ ದೇಗುಲವಿದು. ದೇವಾಲಯದ ಪಾರ್ಶ್ವ ಭಾಗದಲ್ಲಿ ಬಂಡೆಮೇಲೆ ಎರಡು
ದೊಡ್ದದಾದ ಕಲ್ಲುಗಂಬಗಳಿವೆ. ಅಲ್ಲಿ ಕೆಲವು ಯುವಕರು ಕಂಬದ ಮೇಲಕ್ಕೆ ನಾಣ್ಯ ಎಸೆಯುತ್ತಲಿದ್ದರು. ಕುತೂಹಲಗೊಂಡು,
ನಾಣ್ಯ ಎಸೆಯುವ ಉದ್ದೇಶವೇನು ಎಂದು ಕೇಳಿದಾಗ, ನಾವು ಏನಾದರೂ ಹೇಳಿಕೊಂಡು ನಾಣ್ಯ ಎಸೆದಾಗ ಆ ನಾಣ್ಯ
ಕಂಬದ ಮೇಲೆ ನಿಂತರೆ ಅದು ಈಡೇರುತ್ತದೆ ಎಂಬ ನಂಬಿಕೆಯಂತೆ. ಕೆಲವರು ಎಸೆದ ನಾಣ್ಯ ಕಂಬದಲ್ಲೇ ನಿಂತಿತು.
ವಿಷ್ಣುವರ್ಧನನ ಪತ್ನಿ ನಾಟ್ಯರಾಣಿ ಶಾಂತಲೆ ತನಗೆ ಗಂಡುಮಗುವಾಗಲಿಲ್ಲ ಎಂಬ ಖಿನ್ನತೆಯಿಂದ ಈ ಬೆಟ್ಟದಿಂದ ಕೆಳಗೆ ಹಾರಿ ಸಾವನ್ನಪ್ಪಿದಳು ಎಂಬುದು ಇತಿಹಾಸ.
ಶಿವಗಂಗೆ ಬೆಟ್ಟ ಹೊಯ್ಸಳ ರಾಜರ ಆಳ್ವಿಕೆಯಲ್ಲಿತ್ತು. ೧೬ನೇ ಶತಮಾನದಲ್ಲಿ ಶಿವಪ್ಪನಾಯಕರ ವಶದಲ್ಲಿತ್ತು. ಮುಂದೆ
ಕೆಂಪೇಗೌಡರ ಕಾಲದಲ್ಲಿ ಇಲ್ಲಿಯ ದೇಗುಲ ಜೀರ್ಣೋದ್ಧಾರಗೊಂಡಿತು.
ಬೆಟ್ಟದ ಮೇಲೆ ೨ ಗಂಟೆಗಳ ಕಾಲ ಇದ್ದು ಪ್ರಕೃತಿಯ ವೈಭವವನ್ನು ಕಣ್ಣುತುಂಬಿಕೊಂಡೆವು. ಆಗಾಗ ಮೋಡ ಮಂಜು ಕವಿದು ಏನೂ ಕಾಣದಾದರೆ, ಮರುಕ್ಷಣವೇ ಎಲ್ಲವೂ ನಿಚ್ಚಳ ಶುಭ್ರ. ನಿಸರ್ಗದ ಕಣ್ಣಾಮುಚ್ಚಾಲೆ ಆಟವನ್ನು ನಾವು ಮೈಮರೆತು ನೋಡಿ ಆನಂದಿಸಿದೆವು. ಕೋತಿಗಳ ದೆಸೆಯಿಂದ ಕಿರಿಕಿರಿ ಅನುಭವಿಸಿದೆವು. ಹೊರಗೆ ಬುತ್ತಿ ಬಿಚ್ಚಿ ಊಟ ಮಾಡಲು ಮಂಗಗಳು ಬಿದಲಿಲ್ಲ. ಹಾಗಾಗಿ ದೇವಾಲಯದ ಒಳಗೆ ಊಟ ಮಾಡಲು ಅರ್ಚಕರು ಅನುವು ಮಾಡಿಕೊಟ್ಟರು.
ಪಾವಗಡ
ನಮ್ಮ ಮುಂದಿನ ಪಯಣ ಪಾವಗಡ. ಶಿವಗಂಗೆಯಿಂದ ಪಾವಗಡಕ್ಕೆ ಸುಮಾರು
೧೨೦ಕಿಮೀ. ಪಾವಗಡ ತಲಪಿದಾಗ ರಾತ್ರೆ ೮.೧೫. ಅಲ್ಲಿ ಶನಿ ಮಹಾತ್ಮ ದೇಗುಲದ ವಿಶ್ರಾಂತಿಗೃಹದಲ್ಲಿ ನಮ್ಮ
ವಾಸ್ತವ್ಯ. ಒಂದು ಕೊಟಡಿಯಲ್ಲಿ ೩ ಮಂದಿ. ಶೋಬಾ, ಪ್ರಭಾಮಣಿ, ನಾನು ಒಂದು ಕೊಟಡಿ ಹೊಕ್ಕೆವು. ದೇವಾಲಯದ ವತಿಯ ಅನ್ನ ದಾಸೋಹದಲ್ಲಿ ರಾತ್ರೆ ಉಟವಾಯಿತು.
ಬೆಳಗ್ಗೆ ೬.೩೦ ಗಂಟೆಗೆ ತಯಾರಾಗಿ ನಾವು ಶನಿ ಮಹಾತ್ಮನನ್ನು
ನೋಡಲು ಹೋದೆವು. ೧೯೫೫ರಲ್ಲಿ ಕಟ್ಟಿದ ಈ ದೇಗುಲಕ್ಕೆ ಈಗ ಎಲ್ಲ ಕಡೆಯಿಂದಲೂ ಭಕ್ತಾದಿಗಳು ಬರುತ್ತಾರೆ.
ಇಲ್ಲಿ ಪ್ರತೀದಿನವೂ ಸಾವಿರಾರು ಭಕ್ತರು ಬರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ದೇವಾಲಯದ ವತಿಯ ಬೃಹತ್
ವಿಶ್ತ್ರಾಂತಿ ಗೃಹ ನೋಡಿದರೆ ತಿಳಿಯುತ್ತದೆ.
ದೇವಾಲಯದೊಳಗೆ ಆ ಸಮಯದಲ್ಲಿ ಭಕ್ತರ ಸಂಖ್ಯೆ ಬೆರಳೆಣಿಕಯಲ್ಲಿತ್ತು.
ಪಟ ತೆಗೆಯಬಹುದೆ? ಎಂದು ಅರ್ಚಕರನ್ನು ಕೇಳಿದಾಗ, ತೆಗೆಯಬಹುದು. ಆದರೆ ಶನಿ ಪಟ ಯಾರೂ ತೆಗೆಯುವುದಿಲ್ಲ
ಅಂದರು!
ಪಾವಗಡ ಕೋಟೆ ಬಳಿಯಿರುವ ಆಂಜನೇಯ ದೇಗುಲಕ್ಕೆ ಹೋದೆವು. ಆಂಜನೇಯನಿಗೆ
ನಮಿಸಿ ಹಿಂದುರುಗಿದೆವು.
ಲಕ್ಷ-
ಕೋಟಿ ವಹಿವಾಟು
ನಾವಿದ್ದ ವಿಶ್ರಾಂತಿ ಗೃಹದಲ್ಲಿ ಅಲ್ಲಲ್ಲಿ ಉಪಯೋಗಿಸಿದ
ಬಟ್ಟೆಗಳ ರಾಶಿ ಇತ್ತು. ಇದರ ವಿಲೇವಾರಿ ಹೇಗೆ ಎಂಬ ಕುತೂಹಲ ಇತ್ತು. ಪ್ರತೀವರ್ಷ ಹಳೆಬಟ್ಟೆ ವಿಲೇವಾರಿಗೆ
ಗುತ್ತಿಗೆ ಕೊಡುತ್ತಾರಂತೆ. ಈ ವರ್ಷದ ಏಲಂನಲ್ಲಿ ಭಾಗವಹಿಸಿದವರೊಬ್ಬರು ಬಟ್ಟೆಗಳನ್ನು ಪ್ಯಾಂಟ್, ಅಂಗಿ,
ಟವೆಲ್ ಎಂದು ಪ್ರತ್ಯೇಕಿಸುತ್ತಲಿದ್ದರು. ಅವರಿಂದ ವಿವರ ಪಡೆದೆ. ಈ ವರ್ಷ ೬ ಲಕ್ಷದ ೩೦ ಸಾವಿರಕ್ಕೆ
ಗುತ್ತಿಗೆ ಪಡೆದಿರುವರಂತೆ. ಅಷ್ಟು ಕೊಟ್ಟು ಲಾಭ ಬರ್ತದ ಎಂಬ ಪ್ರಶ್ನೆಗೆ ಯಾವತ್ತೂ ಕೈಬಿಟ್ಟಿಲ್ಲ
ಶನಿ ಮಹಾತ್ಮ, ಇದುವರೆಗೆ ನಾಲ್ಕೈದು ಸಲ ಗುತ್ತಿಗೆ ಪಡೆದಿರುವೆ. ನಷ್ಟವಾಗಿಲ್ಲವಂತೆ. ಬಟ್ಟೆಗಳನ್ನು ಪ್ರತ್ಯೇಕಿಸಿ ಗಂಟು ಕಟ್ಟಿ ಇಡುತ್ತಾರೆ.
ಅದನ್ನು ಕೊಳ್ಳುವವರು ಲಾರಿಯಲ್ಲಿ ಸಾಗಿಸುತ್ತಾರಂತೆ. ಆ ಬಟ್ಟೆಗಳನ್ನು ಅವರೇನು ಮಾಡುತ್ತಾರೆ ಎಂಬ
ಪ್ರಶ್ನೆಗೆ ಉತ್ತರ, ಬೀದಿಬದಿಯಲ್ಲಿ ಮಾರಾಟ ಮಾಡುತ್ತಾರಂತೆ. ಹೇಗೆಲ್ಲ ವಹಿವಾಟು ನಡೆಯುತ್ತದೆ ಎಂದು
ಆಶ್ಚರ್ಯಗೊಂಡೆವು.
ಪಾವಗಡ
ಕೊಟೆಗೆ ಲಗ್ಗೆ
ಪಾವಗಡದ ಹೊಟೇಲೊಂದರಲ್ಲಿ ಇಡ್ಲಿ ಪೂರಿ ತಿಂದು ಪಾವಗಡ ಕೋಟೆಗೆ
ಲಗ್ಗೆ ಇಡಲು ಸಜ್ಜಾದೆವು. ಏಳು ಸುತ್ತಿನ ಕೋಟೆಗೆ
ಒಟ್ಟು ೧೦ ದಿಡ್ಡಿ ಬಾಗಿಲುಗಳಿವೆ. ಒಂದೊಂದೇ ಬಾಗಿಲು ದಾಟುತ್ತ ಮುನ್ನಡೆದೆವು. ದಾಟುತ್ತ ಹೋದಂತೆ
ದೊಡ್ಡ ಬಂಡೆಯೊಂದರಲ್ಲಿಆಂಜನೇಯ ನನ್ನು ಕಂಡೆವು. ಅಲ್ಲಿಯ ಆಂಜನೇಯನ ಪಟ, ಹಾಗೂ ಕೋಟೆ ಆಂಜನೇಯ ಮೂರ್ತಿಯ
ಪಟ ಒಟ್ಟಿಗೆ ತೋರಿಸಿದ ಚನ್ನಮಲ್ಲ ನಾಯಕರು, ಈ ಎರಡೂ ಶಿಲ್ಪಗಳೂ ಒಂದೇ ತೆರೆನಾಗಿವೆ. ಇವನ್ನು ಕೆತ್ತಿದ
ಶಿಲ್ಪಿ ಒಬ್ಬನೇ ಇರಬೇಕು ಎಂದು ಹೇಳಿದಾಗ ನಾವು ಹೌದೆಂದು
ತಲೆದೂಗಿದೆವು.
ನಾವು ನಿಧಾನವಾಗಿ ಸಾಗುತ್ತ, ಕೋಟೆಯ ಸೊಬಗನ್ನು ಇಂಚಿಂಚು ನೋಡುತ್ತ ಸಾಗಿದೆವು. ಮಂಗರಬಳ್ಳಿ ಎಂಬ ಔಷಧೀಯ ಸಸ್ಯ ಅಲ್ಲಲ್ಲಿ ಸಾಕಷ್ಟು ಹಬ್ಬಿತ್ತು. ನಾವು ಒಂದೆರಡು ಬಳ್ಳಿ ಕೊಯಿದುಕೊಂಡೆವು. ಮೂಳೆಗಳ ಬಲವರ್ಧನೆಗೆ ಈ ಸಸ್ಯ ಬಲು ಹಿತವಂತೆ. ಅಲ್ಲಲ್ಲಿ ವಿಶ್ರಮಿಸುತ್ತ, ಸಾಗಿ ೧೨ ಗಂಟೆಗೆ ಕೋಟೆಯ ತುದಿ ತಲಪಿದೆವು. ಕೋಟೆಯ ಮೇಲಿಂದ ಪಾವಗಡ ಪೇಟೆ ಸೊಗಸಾಗಿ ಕಾಣುತ್ತಲಿತ್ತು. ಅಲ್ಲಿ ಅರ್ಧ ಗಂಟೆ ವಿರಮಿಸಿ ಸಾಕಷ್ಟು ಪಟ ತೆಗೆದು ನಾವು ಕೋಟೆಯಿಂದ ನಿರ್ಗಮಿಸಿದೆವು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಗೊರವನಹಳ್ಳಿ
ಮಹಾಲಕ್ಷ್ಮಿ ದೇಗುಲ ನೋಡಲು ಹೋದೆವು. ದೇವಾಲಯದೊಳಗೆ ಹೋಗಲು ಸರತಿ ಸಾಲು ಉದ್ದವಾಗಿತ್ತು. ಮಹಾಲಕ್ಷ್ಮಿಯ
ಸಾನ್ನಿಧ್ಯದಲ್ಲಿ ಕೆಲವು ನಿಮಿಷವಿದ್ದು ಹೊರಬಂದೆವು.
‘ನಾನು ನಿನ್ನ ಮನೆಗೆ ಬರುತ್ತೇನೆ’ ಎಂದು ಒಂದು ಹೆಣ್ಣಿನ
ಅಶರೀರವಾಣಿ ಗೊರವನಹಳ್ಳಿಯಲ್ಲಿಯ ಅಬ್ಬಯ್ಯನವರಿಗೆ ಆಗಾಗ ಕೇಳಿಸುತ್ತಿತ್ತಂತೆ. ಈ ಸುದ್ದಿಯನ್ನು ತನ್ನ ತಾಯಿಗೆ ಹೇಳಿದಾಗ, ಇನ್ನೊಮ್ಮೆ ಆ
ಧ್ವನಿ ಕೇಳಿದರೆ, ನೀನು ದೆವ್ವವಾದರೆ ಅಲ್ಲೇ ಇರು, ದೇವರಾದರೆ ಇಲ್ಲಿ ಬಾ ಎಂದು ಹೇಳು ಎಂದರಂತೆ. ಆ
ಧ್ವನಿ ಮತ್ತೆ ಅಬ್ಬಯ್ಯನಿಗೆ ಕೇಳಿಸಿದಾಗ, ತಾಯಿ ಹೇಳಿಕೊಟ್ಟಂತೆಯೇ ಹೇಳಿದರಂತೆ. ಆಗ ಮಹಾಲಕ್ಷ್ಮಿ
ಕೊಳದಿಂದ ಎದ್ದು ಬಂದು ಅಬ್ಬಯ್ಯನ ಮನೆ ಸೇರಿದಳಂತೆ.
ಅಂದಿನಿಂದ ಗೊರವನಹಳ್ಳಿ ಪವಿತ್ರ ಪುಣ್ಯ ಕ್ಷೇತ್ರವಾಯಿತು ಎಂಬುದು ಕಥೆ.
ಇಸವಿ ೧೯೨೫ರನಂತರ ಗ್ರಾಮಸ್ಥರ ಮನವೊಲಿಸಿ ಕಮಲಮ್ಮ ದೇಗುಲ
ನಿರ್ಮಿಸಿದರು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಿಂದ ಗೊರವನಹಳ್ಲಿಗೆ ೧೦ಕಿಮೀ
ಲೇಖನ ತುಂಬಾ ಸೊಗಸಾಗಿ ಮೂಡಿಬಂದಿದೆ. ಧನ್ಯವಾದ
ಪ್ರತ್ಯುತ್ತರಅಳಿಸಿಧನ್ಯವಾದ
ಅಳಿಸಿಕಣ್ಣಿಗೆ ಕಟ್ಟಿದ ಹಾಗೆ ಹೇಳಿದೀರಿ ರುಕ್ಮಿಣಿ...ಸೊಗಸಾದ ಬರಹ....ಓದುತ್ಠಿರುವವರಿಗೆ ಒಂದೊಮ್ಮೆ ಹತ್ತಿ ನೋಡಿ ಬಂದೇಬೀಡಬೇಕು ಅನ್ನಿಸುವಷ್ಟು ಸ್ಪೂರ್ತಿದಾಯಕವಾಗಿದೆ..ಧನ್ಯವಾದಗಳು ರುಕ್ಮಿಣಿ
ಪ್ರತ್ಯುತ್ತರಅಳಿಸಿಧನ್ಯವಾದ
ಅಳಿಸಿAwesome mam, i felt like travelled again, indeed it was a wonderful trek / trip
ಪ್ರತ್ಯುತ್ತರಅಳಿಸಿಧನ್ಯವಾದ
ಪ್ರತ್ಯುತ್ತರಅಳಿಸಿ