ಶನಿವಾರ, ಮೇ 28, 2022

ದೋಡಿತಾಲ್ –ದರ್ವಾ ಪಾಸ್ ಚಾರಣ ಭಾಗ - ೧

ಜನವರಿ ತಿಂಗಳ ಒಂದು  ದಿನ ಯಾವುದೋ ಚಾರಣದ ಸಮಯದಲ್ಲಿ ಕೃಷ್ಣ ಹೆಬ್ಬಾರರು, ಉತ್ತರಾಖಂಡ ಜಿಲ್ಲೆಯ ದೋಡಿತಾಲ್ ಚಾರಣದ ವಿವರ ಹೇಳುತ್ತಲಿದ್ದರು. ನಾನು ಅವರ ಹಿಂದೆ ಬರುತ್ತಲಿದ್ದೆ. ಈ ವಿವರ ಕೇಳಿ ನನ್ನ ಕಿವಿ ನೆಟ್ಟಗಾಗಿ, ಅದರ ಸಂಪೂರ್ಣ ವಿವರ ಕೇಳಲಾಗಿ, ಆ ಚಾರಣಕ್ಕೆ ಹೋಗುವುದೆಂದು ಆಗಲೇ ನಿಶ್ಚಯ ಮಾಡಿದೆವು.

   ಹಿಮಾಲಯದ ಸರಹದ್ದಿನಲ್ಲಿ ಒಂದಾದರೂ ಚಾರಣದಲ್ಲಿ ಭಾಗವಹಿಸಬೇಕೆಂಬುದು ಬಹುದಿನದ ಕನಸಾಗಿತ್ತು. ಫೆಬ್ರವರಿ ತಿಂಗಳಿನಲ್ಲಿ ದೋಡಿತಾಲ್-ದರ್ವಾಪಾಸ್ ಚಾರಣಕ್ಕೆ ಹೆಸರು ನೋಂದಾಯಿಸಿ ರೂ.೮೫೦೦ ಕಟ್ಟಿದೆವು.

     ಮೈಸೂರಿನಿಂದ ಡಾ. ಪ್ರಹ್ಲಾದ ರಾವ್, ಕೃಷ್ಣ ಹೆಬ್ಬಾರ, ಪ್ರಭಾಕರ, ಮಾಲಿನಿ, ರುಕ್ಮಿಣಿಮಾಲಾ, ಬೆಂಗಳೂರಿನಿಂದ ಸವಿತಾ, ಶ್ರೀಹರಿ-ಅನನ್ಯಾ ದಂಪತಿ ಸೇರಿ ಒಟ್ಟು ೮ ಮಂದಿಯ ಗುಂಪು ನಮ್ಮ ಕರ್ನಾಟಕದಿಂದ. 

   ಚಾರಣದ ವಿವರ

೧೧.೫.೨೨ ಬೆಳಗ್ಗೆ ಡೆಹರಡೂನ್ ತಲಪಬೇಕು. ಅಲ್ಲಿಂದ ಜೀಪಿನಲ್ಲಿ ಉತ್ತರಕಾಶಿಗೆ ಪಯಣ. ಅಲ್ಲಿ ವಾಸ್ತವ್ಯ

೧೨.೫.೨೨ ಉತ್ತರಕಾಶಿಯಿಂದ ಸಂಗಮಚಟ್ಟಿಗೆ ಜೀಪಿನಲ್ಲಿ ಪಯಣ, ಅಲ್ಲಿಂದ ೮ಕಿಮೀ ಬೆಬ್ರಿಗೆ ಚಾರಣ. ಬೆಬ್ರಿಯಲ್ಲಿ ವಾಸ್ತವ್ಯ

೨೩-೫-೨೨ ಬೆಬ್ರಿಯಿಂದ ೧೪ಕಿಮೀ ದೋಡಿತಾಲ್ ಗೆ ಚಾರಣ. ಅಲ್ಲಿ ವಾಸ್ತವ್ಯ.

೧೪-೫-೨೨ ದೋಡಿತಾಲ್ ನಿಂದ ೫ಕಿಮೀ ದರ್ವಾಪಾಸ್ ಗೆ ಆರೋಹಣ, ವಾಪಾಸ್ ೫ಕಿಮೀ ದೋಡಿತಾಲ್ ಗೆ ಅವರೋಹಣ.

೧೫.೫.೨೦೨೨ರಂದು ದೋಡಿತಾಲ್ ನಿಂದ ೧೬ಕಿಮೀ ಅಗೋಡಗೆ ಚಾರಣ. ಅಲ್ಲಿಂದ ಜೀಪಿನಲ್ಲಿ ಉತ್ತರಕಾಶಿಗೆ.

೧೬.೫.೨೨ ಉತ್ತರಕಾಶಿಯಿಂದ ನಿರ್ಗಮನ

ಈ ಚಾರಣವನ್ನು ಯೂಥ್ ಹಾಸ್ಟೆಲ್ ದೆಹಲಿ ವಿಭಾಗದಿಂದ ಆಯೋಜನೆ ಮಾಡಿದ್ದರು.

   ಬೆಂಗಳೂರಿಗೆ ಪಯಣ

ತಾರೀಕು ೧೦.೫.೨೦೨೨ರಂದು ಬೆಳಗ್ಗೆ ೩ ಗಂಟೆಯ ಫ್ಲೈ ಬಸ್ಸಿನಲ್ಲಿ ನಾವು ೪ ಮಂದಿ ಬೆಂಗಳೂರಿಗೆ ಹೊರಟೆವು. ಬೆಳಗ್ಗೆ ೭ ಗಂಟೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ತಲಪಿದೆವು. ಬಸ್ಸಿನಲ್ಲಿ ಆರೇಳು ಜನರಷ್ಟೇ ಇದ್ದುದು. ಇದರಿಂದ ರಾಜ್ಯ ಸಾರಿಗೆ ನಿಗಮಕ್ಕೆ ಎಷ್ಟು ನಷ್ಟ ಎಂದು  ಮನಸ್ಸಿಗೆ ಖೇದವಾಯಿತು.

  ಕಾಫಿಹಟ್ಟಿ

ಡಾಕ್ಟರ್‍ ಪ್ರಹ್ಲಾದರಾಯರ ಕೊಡುಗೆಯಿಂದ ಕಾಫಿಹಟ್ಟಿಯಲ್ಲಿ ದೊಡ್ಡ ಲೋಟ ಕಾಫಿ ಕುಡಿದೆವು.

ಕಾಫಿಕುಡಿದು ನಾವು ಲಗೇಜು ತಪಾಸಣೆ, ನಮ್ಮ ತಪಾಸಣೆ ಎಲ್ಲ ವಿಧಿವಿಧಾನ ಮುಗಿಸಿ, (ಈಗ ಬೋರ್ಡಿಂಗ್ ಪಾಸ್, ನಮ್ಮ ಲಗೇಜಿಗೆ ಹಾಕುವ ಸ್ಟಿಕರ್ ಎಲ್ಲವನ್ನೂ ನಾವೇ ಹೊರಗೆ ಕಿಯೋಸ್ಕಿಯಿಂದ ತೆಗೆದುಕೊಳ್ಳಬೇಕು.  ನನ್ನಂಥವರಿಗೆ ಇದು ಕಷ್ಟದ ಕೆಲಸ. ಡಾಕ್ಟರ್, ಹೆಬ್ಬಾರರು ನಮಗೆ ಸಹಾಯ ಮಾಡಿದರು.) ೯ನೇ ಗೇಟಿನ ಬಳಿ ಹೋಗಿ ಕೂತೆವು. ಕಟ್ಟಿ ತಂದಿದ್ದ ಚಪಾತಿ ಮುಗಿಸಿದೆವು. ಅಷ್ಟರಲ್ಲಿ ಉಳಿದವರೂ ಬಂದು ಸೇರಿಕೊಂಡರು. ಅಲ್ಲಿ ಕನ್ನಡ ಪತ್ರಿಕೆ ಜೋಡಿಸಿಟ್ಟಿರುವುದು ಕಂಡು ಆಶ್ಚರ್ಯವೂ ಖುಷಿಯೂ ಆಯಿತು. ಸಮಯ ಕಳೆಯಲು ಒಳ್ಳೆಯ ಸಾಧನ ಎಂದು ಒಬ್ಬೊಬ್ಬರು ಒಂದೊಂದು ಪತ್ರಿಕೆ ಹಿಡಿದು ಓದಿದೆವು.

  ಡೆಹರಡೂನಿಗೆ ಹಾರಾಟ

  ೧೦.೨೦ಕ್ಕೆ ಸರಿಯಾಗಿ ಇಂಡಿಗೋ ವಿಮಾನ ಹೊರಟಿತು. ದಾಕ್ಟರ್ ಕಡ್ಲೆಕಾಯಿ, ಹುರಿಗಾಳು ತಂದಿದ್ದರು. ಬಾಯಾಡಿಸಲು ಆರೋಗ್ಯವಾದ್ದು ಅದಕ್ಕಿಂತ ಉತ್ತಮ ಬೇರೇನಿದೆ? ಅರ್ಧ ಡಬ್ಬಿ ಖಾಲಿ ಮಾಡಿದೆವು.  ೧.೨೦ಕ್ಕೆ ಸರಿಯಾಗಿ ವಿಮಾನ ಡೆಹ್ರಾಡೂನ್ ತಲಪಿತು.

    ವಿಷ್ಣು.ಇನ್ ಹೊಟೇಲ್

  ನಾವು ವಿಮಾನ ಇಳಿದು, ನಮ್ಮ ಲಗೇಜು ತೆಗೆದುಕೊಂಡು ೨ ಕಾರಿನಲ್ಲಿ ರೈಲ್ವೇ ನಿಲ್ದಾಣದ ಸಮೀಪವಿರುವ ಹೊಟೇಲ್ ವಿಷ್ಣು ಇನ್ ತಲಪಿದಾಗ ೩ ಗಂಟೆ. ಅಲ್ಲಿ ಊಟ (ಚಪಾತಿ, ಪಲ್ಯ, ಅನ್ನ ಸಾರು) ಮಾಡಿದೆವು.

ಒಂದೊಂದು ಕೋಣೆಯಲ್ಲಿ ಇಬ್ಬರಂತೆ ನಾಲ್ಕು ಕೋಣೆ ಮಾಡಿದ್ದೆವು. ಇಬ್ಬರ ಜಗಳದಲ್ಲಿ ಮೂರನೆಯವರು ಸೋತ ಕಥೆ

ಊಟವಾಗಿ ನಾವು ರಾಬರ್ಸ್ ಕೇವ್ ನೋಡಲು ಹೋಗುವುದೆಂದು ಓಲಾ ಟ್ಯಾಕ್ಸಿ ಬುಕ್ ಮಾಡಿ, ರೈಲು ನಿಲ್ದಾಣದ ಬಳಿ ನಿಂತಿದ್ದೆವು. ಅರ್ಧ ಗಂಟೆಯಾದರೂ ಕಾರು ಬರಲಿಲ್ಲ. ಕಾದು ಕಾದು ಅಂತೂ ಕಾರು ಬಂತು. ಕಾರು ಹತ್ತಿ ಕೂತಿದ್ದೇವಷ್ಟೇ. ಇಳಿಯಿರಿ, ಬೇಗ ಇಳಿಯಿರಿ ಎಂದು ಚಾಲಕ ಕೂಗಿದ. ಏನಾಯಿತಪ್ಪ ಎಂದು ಆತಂಕದಲ್ಲೇ ಗಡಬಡಿಸಿ ಇಳಿದೆವು. ನೋಡಿದರೆ, ಟ್ಯಾಕ್ಸಿಯವರ ಒಳಜಗಳ. ಅಲ್ಲಿಯ ಟ್ಯಾಕ್ಸಿ ನಿಲ್ದಾಣದಿಂದಲೇ ಟ್ಯಾಕ್ಸಿ ಹತ್ತಬೇಕಂತೆ. ಓಲಾದವರಿಗೆ ಅಲ್ಲಿ ಪ್ರವೇಶವಿಲ್ಲವಂತೆ. ಅವರದೋ ಬಾಯಿಗೆ ಬಂದ ರೇಟು.  ಅವರ ಜಗಳದಲ್ಲಿ ನಮಗೆ ಎಲ್ಲಿಗೂ ಹೋಗಲಾಗಲಿಲ್ಲ. ಕೋಣೆಗೆ ಬಂದು ವಿಶ್ರಾಂತಿ ಪಡೆದೆವು.

   ಡೆಹರಾಡೂನ್ ನಗರ ವೀಕ್ಷಣೆ

 ಸಂಜೆ ಅಲ್ಲಿಯೇ ಮಾರುಕಟ್ಟೆಯ ರಸ್ತೆಯಲ್ಲಿ ಒಂದೆರಡು ಕಿಮೀ ಸುತ್ತಿದೆವು. ಚಹಾ, ಕಾಫಿ ಸೇವಿಸಿದೆವು.  ರಾತ್ರಿ ಊಟದ ಶಾಸ್ತ್ರವನ್ನು ರಾಜಹಂಸ ಹೊಟೇಲಿನಲ್ಲಿ ಮಾಡಿ ಕೋಣೆಗೆ ವಾಪಾಸಾದೆವು. ಸ್ವಲ್ಪ ಮಳೆಯೂ ಬಂತು.

  ಬೆಳಗಿನ ನಡಿಗೆ

ತಾರೀಕು ೧೧.೫.೨೨ರಂದು ಬೆಳಗ್ಗೆ ೫ ಗಂಟೆಗೆ ಎಚ್ಚರವಾಯಿತು. ಎಚ್ಚರವಾದಮೇಲೆ ಮಲಗಲು ಮನಸ್ಸು ಬರುವುದಿಲ್ಲ. ಅಲ್ಲಿ ಬೇಗ ಬೆಳಕಾಗುತ್ತದೆ. ನಿತ್ಯದ ಕೆಲಸ ಮುಗಿಸಿ, ನಾನು ಮಾಲಿನಿ ಎರಡು ಕಿಮೀ ನಡೆದೆವು. ಅಗರವಾಲ್ ಭವನ ರೈಲ್ವೇ ನಿಲ್ದಾಣದ ಇರುವುದು ತಿಳಿಯಿತು. ಅಲ್ಲಿ ರಿಯಾಯತಿ ದರದಲ್ಲಿ ವಸತಿಗೆ ಕೋಣೆಗಳು ಲಭಿಸುತ್ತವೆ. ಸಮೀಪ  (೬೫, ಗಾಂಧಿ ರಸ್ತೆ, ಪ್ರಿನ್ಸ್ ಚೌಕ್ ಹತ್ತಿರ, ಡೆಹ್ರಡೂನ್,ಸಂಪರ್ಕ ಸಂಖ್ಯೆ ೦೧೩೫-೨೬೨೨೫೯೭, ೦೯೪೧೦೭೨೮೩೮೪, ಮಿಂಚಂಚೆ:agarwalbhawan61@gmail.com   

  ಉತ್ತರಕಾಶಿಗೆ ಪಯಣ

೭ ಗಂಟೆಗೆ ಪರೋಟ ತಿಂದು ಹೊಟೇಲ್ ಕೋಣೆ ಕಾಲಿ ಮಾಡಿ ೭.೪೫ಕ್ಕೆ ೨ ಜೀಪಿನಲ್ಲಿ ಉತ್ತರಕಾಶಿಗೆ ೧೨ ಮಂದಿ ಹೊರಟೆವು. ನಾಲ್ಕು ಮಂದಿ, ದೆಹಲಿ, ಮಹಾರಾಷ್ಟ್ರ, ಗೋವಾ, ಪಂಡರಾಪುರದಿಂದ ಬಂದಿದ್ದರು. ನಮ್ಮ ಜೀಪಿನ ಚಾಲಕ ನವೀನ. ಅವನ ಸಂಪರ್ಕ ಸಂಖ್ಯೆ (08958663744) ಒಳ್ಳೆಯ ಚಾಲಕ. ಡೆಹರಾಡೂನಿನಿಂದ (೧೪೧೦ ಅಡಿ) ಉತ್ತರಕಾಶಿಗೆ (೩೭೯೯ ಅಡಿ) ಏರಬೇಕು. ದಾರಿಯೂ ಈಗ ಚೆನ್ನಾಗಿ ಆಗಿದೆ. ಒಂದು ಪರ್ವತ ಏರಿದರೆ ಇನ್ನೊಂದು ಇಳಿಯಬೇಕು, ಹತ್ತಬೇಕು ಹಾಗಿರುವ ಮಾರ್ಗ.   ಮಸ್ಸೂರಿ ದಾಟಿ ಸಾಗಬೇಕು. ಊರು ದಾಟುವಾಗ ದಾರಿಯಲ್ಲಿ ಕಾಣುವ ಹೊಲಗಳ ದೃಶ್ಯ ಮನಮೋಹಕ. ಆದರೆ ಅವರ ಕೆಲಸ ಶ್ರಮದಾಯಕ. ಇಳಿಜಾರು ಪ್ರದೇಶದಲ್ಲಿ ತುಂಡು ತುಂಡು ಹೊಲಗಳು, ಅದರಲ್ಲಿ ಆಲೂಗಡ್ಡೆ, ರಾಜ್ಮಾ ಬೆಳೆಗಳು.

ಸ್ಥಳೀಯ ಭಾಷೆಯಲ್ಲಿ ಆಡು ಎಂದು ಕರೆಯಲ್ಪಡುವ ಪೀಚ್ ಹಣ್ಣನ್ನು ದಾರಿ ಮಧ್ಯೆ ಒಂದು ಕಡೆ ಕೊಂಡೆವು.  ೧.೪೫ಕ್ಕೆ ನಾವು ಉತ್ತರಕಾಶಿ ತಲಪಿದೆವು.

   ಕೀರ್ತಿ ಪ್ಯಾಲೇಸ್

ನಮಗೆ ಕೀರ್ತಿ ಪ್ಯಾಲೇಸಿನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಒಂದು ಕೋಣೆಯಲ್ಲಿ ನಾವು ೫ ಮಂದಿ ಹೆಂಗಸರು ಸೇರಿಕೊಂಡೆವು.

ಕೀರ್ತಿ ಪ್ಯಾಲೇಸ್ ೨ ವರ್ಷದ ಹಿಂದೆ ಕಟ್ಟಿದ ವಸತಿ ಗೃಹ. ಆದರೆ ಕೊರೋನಾ ಕಾರಣದಿಂದ ಯಾರೂ ಇದುವರೆಗೂ ಪ್ರವಾಸಿಗರು ಬಂದಿರಲಿಲ್ಲವಂತೆ. ಈ ಸಲ ಯೂಥ್ ಹಾಸ್ಟೆಲ್ ಏರ್ಪಡಿಸಿದ್ದ ದೋಡಿತಾಲ್- ದರ್ವಾ ಪಾಸ್  ಚಾರಣದಲ್ಲಿ ಭಾಗವಹಿಸಲು ಬಂದಿದ್ದ ವರೇ ಉದ್ಘಾಟನೆ ಮಾಡಿದ್ದಂತೆ. ಹೊಟೇಲ್ ಕೋಣೆ ಚೆನ್ನಾಗಿದೆ. ಬಿಸಿನೀರು ವ್ಯವಸ್ಥೆ ಇತ್ತು. ಒಂದು ಕೋಣೆಗೆ (ಇಬ್ಬರು) ದಿನವೊಂದಕ್ಕೆ ರೂ. ೧೫೦೦ ಬಾಡಿಗೆಯಂತೆ.

   ಎದುರಿದ್ದ ಶಾಂತಿ ಹೊಟೇಲಿನಲ್ಲಿ ಊಟ ಮಾಡಿದೆವು.  ನಾವು ಬರುವಷ್ಟರಲ್ಲಿ ಅಲ್ಲಿ ಊಟ ಖಾಲಿ ಆಗಿತ್ತು. ನಮಗಾಗಿ ಮತ್ತೆ ಅನ್ನ ಸಾರು ಮಾಡಿ ಬಡಿಸಿದ್ದರು. 

ಕೀರ್ತಿ ಪ್ಯಾಲೇಸಿನ ತಾರಸಿಯಲ್ಲಿ ನಿಂತರೆ ಗಂಗಾನದಿಯ ಹರಿವು, ಉತ್ತರಕಾಶಿಯ ನೋಟ ಬಲು ಚೆನ್ನಾಗಿ ಕಾಣುತ್ತದೆ. ರಾತ್ರಿಯಂತೂ ವಿದ್ಯುದ್ದಿಪಗಳಿಂದ ಇಂದ್ರನ ಅಮರಾವತಿಯೇನೋ ಎಂಬಂಥ ದೃಶ್ಯ.  ಮೋದಿ ಎಂಬವರು ಅಲ್ಲಿ ಪಟ ತೆಗೆಯುತ್ತಲಿದ್ದರು. ಹಾಗೆಯೇ ನಮ್ಮ ಪಟ ಕ್ಲಿಕ್ಕಿಸಿದರು. 



   ಸಂಜೆ ೪ ಗಂಟೆಗೆ ಚಹಾ, ಕಡ್ಲೆಬೀಜ, ಮಿಕ್ಷ್ಚರ್. ಅದಾಗಿ ಪರಿಚಯ ಕಾರ್ಯಕ್ರಮ, ಚಾರಣದ ವಿವರ, ಬೇಸ್ ಕ್ಯಾಂಪ್ ಗಳಲ್ಲಿ ಸಿಗುವ ಸವಲತ್ತು ಇತ್ಯಾದಿ ಬಗ್ಗೆ ಮಾಹಿತಿ ಕೊಟ್ಟರು. ಗಂಟೆಗೆ ಎಷ್ಟು ಕಿಮೀ ನಡೆಯಬಹುದು ಎಂದು ಕೇಳಿದರು. ನಾವೆಲ್ಲ ನಮ್ಮ ಊರಿನಲ್ಲಿ ನಡೆಯುವಂತೆ, ಅದೇ ಅನುಭವದಿಂದ, ನಾಲ್ಕುಕಿಮೀ, ೫ಕಿಮೀ ಎಂದಾಗ, ನಮ್ಮ ಉತ್ತರ ತಪ್ಪಾಗಿತ್ತು. ಅಲ್ಲಿ ಎತ್ತರದ ಪ್ರದೇಶವಾದ್ದರಿಂದ ಆಮ್ಲಜನಕದ ಕೊರತೆ ಹಾಗೂ ನಮಗೆ ಆ ಹವೆಯ ಅಭ್ಯಾಸವಿಲ್ಲದಿರುವುದರಿಂದ ಅಷ್ಟು ದೂರ ನಡೆಯಲು ಸಾಧ್ಯವಾಗುವುದಿಲ್ಲ. ಗಂಟೆಗೆ ೨ ಕಿಮೀ ಸಾಧ್ಯವಾಗಬಹುದು ಎಂದರು. ನೀವು ನಿಧಾನವಾಗಿ ಒಟ್ಟಿಗೇ ಹೋಗಬೇಕು. ಸ್ಪರ್ಧೆಯಲ್ಲ ಇದು. ಪ್ರಕೃತಿಯ ಸೌಂದರ್ಯವನ್ನು ನೋಡಿ ಅನುಭವಿಸಿ ನಡೆಯಿರಿ. ನಾನು ಮೊದಲು ಗುರಿ ತಲಪಬೇಕು ಎಂಬಂತೆ ಹೋಗದಿರಿ. ೨ ಮಂದಿ ಗೈಡ್ ಇರುತ್ತಾರೆ. ಅವರನ್ನು ದಾಟಿ ಮುಂದೆ ಹೋಗದಿರಿ. ಎಂದು ಕಿವಿಮಾತು ಹೇಳಿದರು. ನಮ್ಮ ತಂಡದಿಂದ ದೆಹಲಿಯ ಸಂದೀಪ ಅವರನ್ನು ನಾಯಕನಾಗಿ ನೇಮಕಮಾಡಿದರು.

    ಪ್ರವೇಶಪತ್ರ, ಆಧಾರಕಾರ್ಡ್ ಪರಿಶೀಲನೆ ಇತ್ಯಾದಿ ಆಗಿ ನಮಗೆ ಐಡಿ ಕಾರ್ಡ್ ಕೊಟ್ಟರು. ಬೆನ್ನಚೀಲ ತರದಿದ್ದವರಿಗೆ ಚೀಲ, ಹೊದೆಯಲು ಬಟ್ಟೆ ಕೊಟ್ಟರು.

 ರಾತ್ರೆ ೮ ಗಂಟೆಗೆ ಊಟ (ಚಪಾತಿ, ಪಲ್ಯ, ಅನ್ನ ಸಾರು, ಪಾಯಸ) ಮಾಡಿ ೧೦ಗಂಟೆಗೆ ನಿದ್ರಿಸಿದೆವು.

   ಉತ್ತರಕಾಶಿ-ಸಂಗಮಚಟ್ಟಿ

ತಾರೀಕು ೧೨-೫-೨೦೨೨ರಂದು ೫ ಗಂಟೆಗೆದ್ದು ಸ್ನಾನಾದಿ ಮುಗಿಸಿ ತಯಾರಾದೆವು. ಮುಂದೆ ಎರಡು ದಿನ ಸ್ನಾನವಿಲ್ಲ ಎಂದು ೨ ದಿನಕ್ಕೆ ಸೇರಿಸಿಯೇ ಸ್ನಾನ ಮಾಡಿದೆ! ೫.೩೦ಗೆ ಚಹಾ. ೬.೩೦ಗೆ ತಿಂಡಿ(ಹೆಸರುಕಾಳು ಕೋಸಂಬರಿ, ಬ್ರೆಡ್, ಕಾರ್ನ್ ಫ್ಲೇಕ್) ತಿಂದೆವು. ನಮ್ಮ ಹೆಚ್ಚುವರಿ ಬಟ್ಟೆ ತುಂಬಿದ ಚೀಲ ಅಲ್ಲಿ ಕಾರಿಡಾರಿನಲ್ಲಿ ಇಟ್ಟೆವು. ೩ ದಿನಕ್ಕೆ ಅವಶ್ಯ ಬಟ್ಟೆ ಇತ್ಯಾದಿ ಬೆನ್ನ ಚೀಲಕ್ಕೆ ತುಂಬಿಸಿಟ್ಟೆವು.


    ೭.೪೫ಕ್ಕೆತಂಡದ ಪಟ ತೆಗೆಸಿಕೊಂಡು, ಹಸಿರು ಬಾವುಟ ಬೀಸಿ ನಮ್ಮನ್ನು ಬೀಳ್ಕೊಟ್ಟರು. ಉತ್ತರಕಾಶಿಯಿಂದ ಸಂಗಮಚಟ್ಟಿಗೆ ೧೫ಕಿಮೀ ಜೀಪಿನಲ್ಲಿ ಹೋದೆವು.

     ಬೆಬ್ರದೆಡೆಗೆ ನಡಿಗೆ

ದೋಡಿತಾಲ್ ಕಡೆಗೆ ನಡಿಗೆ ಸುರುವಾಗುವ ದ್ವಾರ ಹಾದು ನಾವು ಮುಂದುವರಿದೆವು. ೯.೧೦ಕ್ಕೆ ನಾವು ನಡೆಯಲು ಪ್ರಾರಂಭಿಸಿದೆವು. ನಮಗೆ ಮಾರ್ಗದರ್ಶಕರಾಗಿ ಶ್ರವನ್ ಸಾವಂತ್, ಹಾಗೂ ಮುಖೇಶ್ ಜೊತೆಗೂಡಿದರು.


ಮೊದಲ ಹಂತವಾಗಿ ಸಂಗಮಚಟ್ಟಿಯಿಂದ ಅಗೋಡಕ್ಕೆ ಹಾದಿ ಸವೆಸಿದೆವು. ಏರುಗತಿ ಆದಕಾರಣ ರಭಸದ ನಡಿಗೆ ಸಾಧ್ಯವಿಲ್ಲ. ನಿಧಾನವಾಗಿಯೇ ನಡೆದೆವು.

 ದಾರಿಯಲ್ಲಿ ಅಲ್ಲಲ್ಲಿ ನಿಂತು ಕೂತು ನೀರು ಕುಡಿಯುತ್ತ, ವಿಶ್ರಾಂತಿ ಪಡೆಯುತ್ತ ಸಾಗಿದೆವು. ೧೧ ಗಂಟೆಗೆ ಬುತ್ತಿ ಬಿಚ್ಚಿ ಚಪಾತಿ ಪಲ್ಯ ತಿಂದು ಸಾಗಿದೆವು. ಓಕ್, ದೇವದಾರು, ಫೈನ್ ಮರಗಳಿಂದಾವೃತವಾದ ಕಣಿವೆ ಪ್ರದೇಶ.  ಎಲ್ಲೆಲ್ಲೂ ಹಸುರು ತೋರಣ. ಕಾಡು ಹೂಗಳ ಚೆಲುವು, ಹೂವಿಗೆ ಚಿಟ್ಟೆಗಳ ಹಾರಾಟ ನೋಡುತ್ತ ನಡೆದೆವು. ಅಲ್ಲಲ್ಲಿ ಕಲ್ಲು ತುಂಬಿದ ಸಪೂರ ದಾರಿ. ಕೆಳಗೆ ಪ್ರಪಾತ ಕಣಿವೆ. ಆಳ ನೋಡಲು ಭಯವಿದ್ದವರು ನಡೆಯುವುದು ಕಷ್ಟ.



 

ಮಧ್ಯಾಹ್ನ  ೧.೩೦ ಗಂಟೆಗೆ ನಾವು ೬ಕಿಮೀ ಕ್ರಮಿಸಿ ಅಗೋಡ ತಲಪಿದೆವು. ಅಲ್ಲಿ ಭರತ್ ಹೋಮ್ ಸ್ಟೇಯಲ್ಲಿ ಕಟ್ಟಿ ತಂದಿದ್ದ ಬುತ್ತಿ ತೆರೆದು ಉಳಿದ ಚಪಾತಿ ತಿನ್ನಲು ನೋಡಿದೆ. ಆದರೆ ತಿನ್ನಲು ಸಾಧ್ಯವಾಗಲೇ ಇಲ್ಲ. ಪಲ್ಯದಲ್ಲಿ ಹಾಕಿದ ಎಣ್ಣೆ ಎರೆಡೆರಡು ಪ್ಲಾಸ್ಟಿಕ್ ಕವರ್ ಹಾಕಿದರು ಚೀಲಕ್ಕೆ ತೊಟ್ಟಿಕ್ಕಿತ್ತು. ಅಷ್ಟೂ ಎಣ್ಣೆಯಲ್ಲಿ ಮುಳುಗಿತ್ತು. ಅವನ್ನೆಲ್ಲ ಅಲ್ಲೇ ಇದ್ದ ದಷ್ಟಪುಷ್ಟವಾಗಿದ್ದ ನಾಯಿಗೆ ಹಾಕಿದೆ. ಖುಷಿಯಿಂದಲೇ ತಿಂದಿತು. ಇನ್ನಷ್ಟು ಪುಷ್ಟಿಯಾಗಲು ಸಹಕಾರಿಯಾಯಿತು! ಯಾರೋ ಬುತ್ತಿ ತೆರೆದು ಕೂತಿದ್ದರು. ನಾಯಿ ಹೋಗಿ ಬುತ್ತಿಗೇ ಬಾಯಿಹಾಕಿತು! ಅದಕ್ಕೆ ಚಪಾತಿಯ ರಸದೌತಣ! 

ಅಗೋಡದಲ್ಲಿ ಸುಮಾರು ೧೦೦ ಮನೆಗಳಿವೆಯಂತೆ. ೫ ಮತಗಟ್ಟೆ ಇದೆ ಎಂದು ಶ್ರವನ್ ಹೇಳಿದ. ಅಲ್ಲಲ್ಲಿ ತುಂಡು ತುಂಡು ಹೊಲಗಳು ಕಾಣುತ್ತಲಿತ್ತು. ಆಲೂಗಡ್ಡೆ, ಗೋಧಿ, ರಾಜ್ಮಾ ಅಲ್ಲಿಯ ಪ್ರಮುಖ ಬೆಳೆಗಳು. 

  ದಾರಿಯಲ್ಲಿ ಮೂಳೆಗಳು ಕಂಡಿತು. ಬಹುಶಃ ಅವು ಹಸುವಿನದ್ದಾಗಿಬಹುದು. ಯಾವುದಾದರೂ ಪ್ರಾಣಿ ತಿಂದದ್ದೋ, ಅಲ್ಲ, ಹಾಗೆಯೇ ಸತ್ತು ಕೊಳೆತು ಹೋದದ್ದೊ ಮಾಹಿತಿ ತಿಳಿಯಲಿಲ್ಲ.

    ೨ ಗಂಟೆಗೆ ನಾವು ಬೆಬ್ರಿಯೆಡೆಗೆ ಮುಂದುವರಿದೆವು. ಇನ್ನೇನು ಎರಡೇ ಕಿಮೀ ಎಂದು ಡಾಕ್ಟರರಿಗೆ ಆಗಾಗ ಹೇಳುತ್ತ ನಡೆಯುತ್ತಿದ್ದೆ. ಆದರೆ ಎಷ್ಟು ಕ್ರಮಿಸಿದರೂ ಬೆಬ್ರಿ ತಲಪುವುದು ಮಾತ್ರ ಬಲು ನಿಧಾನವಾಗುತ್ತಿದೆ ಎಂಬ ಭಾವ ಒಳೊಗೊಳಗೇ ಕಾಡುತ್ತಲಿತ್ತು! ಒಮ್ಮೆ ಏರುಗತಿ, ಮುಂದೆ ಸಮತಟ್ಟು, ಮತ್ತೆ ತುಸು ಇಳಿಜಾರು, ಹೀಗೆ ಸಮ್ಮಿಶ್ರ ದಾರಿಯಲ್ಲಿ ಸಾಗಿದೆವು.  ಸಣ್ಣಗೆ ಮಳೆಯೂ ಹನಿಯಿತು. ಮಳೆ ಅಂಗಿ ಚೀಲದಿಂದ ತೆಗೆಯಬೇಕಾಯಿತು. ಅಲ್ಲಲ್ಲಿ ನೀರ ತೊರೆಗಳು ಸಿಕ್ಕಿದಾಗ ನೀರು ಕುಡಿದು, ಖಾಲಿಯಾಗಿದ್ದ ಬಾಟಲಿ ತುಂಬಿಸಿಕೊಳ್ಳುತ್ತಲಿದ್ದೆವು. ಹಾಗಾಗಿ ತುಂಬ ನೀರು ಹೊರುವ ಕೆಲಸ ತಪ್ಪಿತು. ಅಸ್ಸಿ ಗಂಗಾನದಿ ದಾಟಿ ೩.೩೦ಗಂಟೆಗೆ ಬೆಬ್ರಿ ತಲಪಿದೆವು. ಹೆಚ್ಚುಕಡಿಮೆ ೬.೩೦ ಗಂಟೆಯಲ್ಲಿ ನಾವು ೮ಕಿಮೀ ಕ್ರಮಿಸಿದ್ದೆವು.

 ಅಲ್ಲಿಗೆ ಆ ದಿನದ ಚಾರಣ ಮುಕ್ತಾಯ. ಅಲ್ಲಿಯ ಕ್ಯಾಂಪ್ ಲೀಡರ್ ಪಂಜಾಬಿನ ತರುಣಿ ನಗುಮೊಗದ ಆಭಾ ಜೋಷಿ. ಬಹಳ ಪ್ರೀತಿಯಿಂದ ನಮ್ಮನ್ನು ಬರಮಾಡಿಕೊಂಡಳು. ಕಷ್ಟವಾಯಿತೆ? ಎಂದು ತಮ್ಮ ಮನೆಗೆ ಅತಿಥಿಗಳು ಬಂದವರನ್ನು ಮಾತಾಡಿಸುವಂತೆ ಮಾತಾಡಿಸಿದರು. ಅವರು ನಮಗೆ ಅಪರಿಚಿತರು ಎಂಬ ಭಾವನೆಯೇ ಬರಲಿಲ್ಲ.

     ಸ್ವಾಗತ ಪಾನೀಯ (ಸ್ಥಳೀಯವಾಗಿ ಬೆಳೆಯುವ ಬುರಾನ(burans) (ಸಾಮಾನ್ಯ ಹೆಸರು) ವೈಜ್ಞಾನಿಕ ನಾಮಧೇಯ rhododendron) ಹೂವಿನಿಂದ ತಯಾರಿಸಿದ್ದಂತೆ.) ಪಿಂಕ್ ಬಣ್ಣದ ದ್ರವ ಕೊಟ್ಟರು. ಯಾವುದೇ ಪರಿಮಳ ಇರಲಿಲ್ಲವಂತೆ. (ನಾನು ಕುಡಿಯಲಿಲ್ಲ) ನಾವು ದಾರಿಯಲ್ಲಿ ಬರುತ್ತ, ಈ ಮರವನ್ನು, ಹೂವನ್ನು ನೋಡಿದ್ದೆವು. ಸುಮಾರು ೨೦ಮೀಟರ್ ಎತ್ತರ ಬೆಳೆಯುವ ಮರ. ಮರದ ತುಂಬ ಕೆಂಪು, ಪಿಂಕ್ ಬಣ್ಣದ ಹೂವು. ನೋಡಲು ಚಂದವಾಗಿದೆ. ಬುರಾನ್ಸ್ ಹೂ ಔಷಧೀಯ ಗುಣಗಳನ್ನು ಹೊಂದಿದೆಯಂತೆ, ಉರಿಯೂತ, ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆಯಂತೆ. ಇದರಿಂದ ಚಟ್ನಿ, ಹಾಗೂ ಪಾನಿಯ ತಯಾರಿಸುತ್ತಾರಂತೆ.

   ಸಂಜೆ ೪ ಗಂಟೆಗೆ ಚಹಾ, ಪಕೋಡ (ಸ್ಥಳೀಯವಾಗಿ ಮಟ್ಟಿ ಎನ್ನುವುದು) ಸವಿದೆವು. ೫.೩೦ಗೆ ಜೋಳದ ಸೂಪ್ ಕುಡಿದೆವು. ಚಳಿಯ ವಾತಾವರಣಕ್ಕೆ ಹಿತಕರವಾಗಿತ್ತು.  

ಒಂದು ಗುಡಿಸಲಿನಲ್ಲಿ ಸೋಲಾರ್ ದೀಪದ ಬೆಳಕಿನಲ್ಲಿ ಇಬ್ಬರು ಅಡುಗೆಯಲ್ಲಿ ನಿರತರಾಗಿದ್ದುದು ಕಂಡಿತು. (ಬಹಳ ರುಚಿಕರ ತಿನಿಸನ್ನು ಮಾಡಿದ್ದರು) ಅಲ್ಲಿಗೆ ಅಡುಗೆ ಸಾಮಾನು, ಗ್ಯಾಸ್ ಸಿಲಿಂಡರ್ ಎಲ್ಲ ಹೇಸರಗತ್ತೆಯ ಮೂಲಕ ಸಾಗಿಸಲಾಗುತ್ತದೆ.

    ಆಭಾ ಜೋಷಿಯವರೊಡನೆ ಹರಟುತ್ತ ಕೂತೆವು. ಅವರು ಸುಮಾರು ೧೫ ದಿನ ಅಲ್ಲಿ ವಾಸವಾಗಿದ್ದರು. ಅವರ ಈ ಸೇವೆಯನ್ನು ನಿಜಕ್ಕೂ ಮೆಚ್ಚಬೇಕು. ವಿದ್ಯುತ್, ಮೊಬೈಲ್ ಸಂಪರ್ಕ, ಇತ್ಯಾದಿ ಯಾವ ಆಧುನಿಕ ಸೌಕರ್ಯವೂ ಇಲ್ಲದ ಸ್ಥಳದಲ್ಲಿ ಅದೂ ಒಬ್ಬರೇ (ಇಬ್ಬರು ಸಹಾಯಕ ಅಡುಗೆಯವರನ್ನು ಹೊರತುಪಡಿಸಿ) ಪರಸ್ಥಳದಲ್ಲಿ ಅಷ್ಟು ದಿನ ಇರುವುದು ಸಾಮಾನ್ಯ ಸಂಗತಿಯಲ್ಲ. (ನಮ್ಮದು ಏಳನೇ  ತಂಡ. (ಒಟ್ಟು ಹತ್ತು ತಂಡಗಳು.) ಆದರೂ ಅವರ ಮುಖದಲ್ಲಿ ನಗು ಮಾಸಿರಲಿಲ್ಲ.) ನಮಗೆ ಊಟ ತಿಂಡಿ ಬಡಿಸಲು ಅವರೇ ನಿಂತಿದ್ದರು, ಹಾಗೂ ಬೆಳಗ್ಗೆ ಪೂರಿ ಮಾಡಿದ ಹಾಗೆಯೇ ಬಿಸಿ ಬಿಸಿ ಫೂರಿ ತಂದು ನಾವು ಕೂತಲ್ಲಿಗೇ ಬಡಿಸುತ್ತಲಿದ್ದರು.  

 
    ಅಲ್ಲೆ ಹರಿಯುತ್ತಲಿದ್ದ ಅಸ್ಸಿಗಂಗಾನದಿಗೆ ಇಳಿದೆವು.  ನೀರು ತಣ್ಣಗೆ ಕೊರೆಯುತ್ತಲಿತ್ತು. ರಾತ್ರಿಯಾಗುತ್ತಿದ್ದಂತೆಯೇ ಚಳಿ ಸುರುವಾಗಿತ್ತು. (೭ಡಿಗ್ರಿ ತಾಪಮಾನ) ಸ್ವೆಟರ್, ಟೊಪ್ಪಿಧಾರಿಗಳಾದೆವು. 


 ಬೆಳಕು ಕಂತುವ ಮೊದಲು ೬.೩೦ಗೆ ರಾತ್ರಿಯೂಟ (ಚಪಾತಿ, ಪಲ್ಯ, ಅನ್ನ ಸಾರು, ಹಪ್ಪಳ, ಪಾಯಸ) ಮುಗಿಸಿದೆವು.  
  ಅಲ್ಲಿ ಪಾಯಿಖಾನೆ ವ್ಯವಸ್ಥೆ, ನೀರಿನ ಸೌಕರ್ಯವಿತ್ತು. ನಮಗೆ ಮಲಗಲು ಒಂದು ಕಟ್ಟಡದಲ್ಲಿ ವ್ಯವಸ್ಥೆಯಾಗಿತ್ತು. ಅಲ್ಲಿ ನೆಲಕ್ಕೆ ಜಮಾಖಾನ, ಮಲಗಲು ಮಲಗುಚೀಲದ ಸೌಕರ್ಯವಿತ್ತು. ಅವೆಲ್ಲ ತಣ್ಣಗೆ ಕೊರೆಯುತ್ತಲಿತ್ತು!  ಮಾಡಲು ಬೇರೇನು ಕೆಲಸವಿಲ್ಲದ ಕಾರಣ ಬೇಗನೆ ಮಲಗಿ ನಿದ್ರಿಸಿದೆವು.
  ಇಲ್ಲಿ ಬಳಸಿದ ಕೆಲವು ಚಿತ್ರಗಳು ಸಹಚಾರಣಿಗರದು. 
ಮುಂದುವರಿಯುವುದು

3 ಕಾಮೆಂಟ್‌ಗಳು: