ಸೋಮವಾರ, ಆಗಸ್ಟ್ 1, 2022

ದೇವಲಾಪುರದ ತೋಟದಲ್ಲೊಂದು ದಿನ

 ಮೈಸೂರು ತಾಲೂಕಿನ ದೇವಲಾಪುರದ  (ಸೋಮೇಶ್ವರಪುರ) ಬಳಿ ಇರುವ ತೋಟಕ್ಕೆ ನಾವು ೩೧-೭-೨೦೨೨ರಂದು ಹತ್ತನ್ನೆರಡು ಕಾರುಗಳಲ್ಲಿ  ಸುಮಾರು ೬೦ ಮಂದಿ ಹೋಗಿದ್ದೆವು. ೯.೪೫ಕ್ಕೆ ಸಚ್ಚಿದಾನಂದ ಆಸಶ್ರ್ಮದ ಬಳಿ ಎಲ್ಲರೂ ಸೇರಿಕೊಳ್ಳಬೇಕು ಎಂದಿದ್ದರು. ಅಲ್ಲಿಂದ ಎಲ್ಲರೂ ಬಂದು ಹೊರಡುವಾಗ ೧೦.೩೦ ದಾಟಿತ್ತು! ಶ್ರೀನಿವಾಸ ಹಾಗೂ ಜಯಶ್ರೀ, ಶಾಮಸುಂದರ ಹಾಗೂ ರಾಜೇಶ್ವರಿ ನಮ್ಮನ್ನು ಆದರದಿಂದ ಬರಮಾಡಿಕೊಂಡರು. ಮೊದಲಿಗೆ ನಮ್ಮೆಲ್ಲರ ಸ್ವಪರಿಚಯ ಮಾಡಿಕೊಂಡು ತೋಟ ಸುತ್ತಲು ಹೊರಟೆವು. ಎಲ್ಲರಿಗೂ ತೋಟದ  ತಾಜಾ ರುಚಿಯಾದ ಎಳನೀರು ಕೊಟ್ಟರು. ನೆಲ್ಲಿಕಾಯಿ, ಸಿಹಿಯಾದ ದಾರೆಹುಳಿ ಸವಿದೆವು. 

 ಸುಮಾರು ೩೦ ಎಕರೆಯಲ್ಲಿ ವಿಶಾಲವಾದ ಮನೆ, ಸುತ್ತ ಆವರಣ ಗೋಡೆ, ತೆಂಗು, ಅಡಿಕೆ, ಮಾವು, ಸಪೋಟ,ನಿಂಬೆ ದಾಳಿಂಬೆ, ಪೇರಳೆ, ಇತ್ಯಾದಿ ಫಸಲು ಬರುವ ಮರಗಳು, ಮನೆ ಖರ್ಚಿಗೆ ತರಕಾರಿ ಬೆಳೆಸಿದ್ದಾರೆ, ಮನೆಯ ಅಂದಕ್ಕೆ ಹೂಗಿಡಗಳು ಶೋಭೆ ತಂದಿವೆ. ತೋಟವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಎಮ್ಮೆ, ದನಗಳು ಇವೆ. ತೋಟದ ಮಧ್ಯೆ ಕಾಲುವೆ ಹರಿಯುತ್ತದೆ. ಚಾಮುಂಡಿಬೆಟ್ಟದಿಂದ ಮಳೆಗಾಲದಲ್ಲಿ ಹರಿದು ಬರುವ ನೀರಂತೆ. ಅದಕ್ಕೆ ಟರ್ಬೈನ್ ಅಳವಡಿಸಿ ವಿದ್ಯುತ್ ಉತ್ಪಾದನೆಯನ್ನೂ ಮಾಡಿದ್ದಾರೆ.





    ಈಜು ಬಲ್ಲವರು ಅಲ್ಲಿದ್ದ ಎರಡು ದೊಡ್ಡ ಟ್ಯಾಂಕಿನಲ್ಲಿ ಈಜು ಹೊಡೆದರು.

   ತೋಟದಲ್ಲಿ ಹಸಿಯಾದ ನೆಲದಲ್ಲಿ ಚಿರತೆಯ ಹೆಜ್ಜೆ ಗುರುತನ್ನು ನೋಡಿದೆವು. ರಾತ್ರೆ ಹೊತ್ತು ಚಿರತೆಗಳು ಅಲ್ಲಿ ಓಡಾಡುತ್ತಿರುತ್ತವಂತೆ. 

    ಮದ್ಯಾಹ್ನ ಮನೆಯೊಳಗೆ ನೆಲದಲ್ಲಿ ಕುಳಿತು ಬಾಳೆಲೆಯಲ್ಲಿ ಸವಿ ಭೋಜನ. ಅನ್ನ ಸಾರು, ಎರಡು ಕೋಸಂಬರಿ, ಪಲ್ಯ, ಹಪ್ಪಳ, ಮೊಸರು,ಮಜ್ಜಿಗೆ ಉಪ್ಪಿನಕಾಯಿ, ಪಲಾವ್, ಮೊಸರು ಗೊಜ್ಜು, ಹಲಸಿನಹಣ್ಣು ಪಾಯಸ, ಹಾಲುಬಾಯಿ.

   ಶ್ರೀನಿವಾಸ ಅವರು ಬೀಡಾ ತಯಾರಿಸಿ ಇಟ್ಟಿದ್ದರು. ಎಲ್ಲರೂ ತಿಂದು ಖಾಲಿಯಾಗಿ ಪುನಃ ತಯಾರು ಮಾಡಬೇಕಾಯಿತು.

ಊಟದನಂತರ ಸಭಾ ಕಾರ್ಯಕ್ರಮ. ನಂಜನಗೂಡಿನ ಯೋಗಬಂಧುಗಳು ಯೋಗ ಪ್ರಾತ್ಯಕ್ಶಷಿ  ನಡೆಸಿಕೊಟ್ಟರು.  ಸೋಮಶೇಖರ್ ಮ್ಯಾಜಿಕ್ ಪ್ರದರ್ಶನ ನಡೆಸಿ ಮಕ್ಕಳನ್ನು ಸಂತೋಷಪಡಿಸಿದರು. ಹಿಮಾಲಯ ಚಾರಣ ಕುರಿತು ಗೋಪಕ್ಕ ಮಾಹಿತಿ ನೀಡಿದರು. ಅತಿಥಿಗಳಿಗೆ ಹೂ ಕೊಟ್ಟು ಗೌರವಿಸಿದರು. ತೋಟದ ಮಾಲೀಕರಿಗೆ ನೆನಪಿನ ಕಾಣಿಕೆ ಕೊಟ್ಟು ಸತ್ಕರಿಸಿದರು. ಚಹಾ ಮದ್ದೂರು ವಡೆ ವಿತರಣೆ ಬಳಿಕ ಕಾರ್ಯಕ್ರಮ ಮುಕ್ತಾಯವಾಯಿತು.

ಶ್ರೀನಿವಾಸರ ತಾಯಿ ೯೦ ವರ್ಷದ ಅಜ್ಜಿ ಲವಲವಿಕೆಯಿಂದ ನಮ್ಮೆಲ್ಲರಲ್ಲೂ ಮಾತಾಡಿದರು. ಅವರ ಕೆಲಸವನ್ನು ಅವರೇ ಮಾಡುತ್ತಾರಂತೆ. ದಿನವಿಡೀ ಓಡಾಡುತ್ತ ಏನಾದರೂ ಕೆಲಸ ಮಡುತ್ತಿರುತ್ತಾರಂತೆ. ಅಂಥ ಹಿರಿಯರಿದ್ದರೆ ಮನೆಗೆ ಶೋಭೆ. 





 

ಬಾಳೆಕಾಯಿ, ಬಾಳೆದಿಂಡು, ದೀಗುಜ್ಜೆ ಮನೆಗೊಯ್ಯಲು ಇಟ್ಟಿದ್ದರು.  

 ಈ ಕಾರ್ಯಕ್ರಮವನ್ನು ಮೈಸೂರಿನ ಯೂಥ್ ಹಾಸ್ಟೆಲಿನ ಗಂಗೋತ್ರಿ ಘಟಕದ ವತಿಯುಂದ ಸರೋಜ ಶೇಖರ್ ಹಾಗೂ ಪೂರ್ಣಿಮ ಸುರೇಶ್ (ತಲಾ ಒಬ್ಬರಿಗೆ ರೂ.೧೫೦) ಏರ್ಪಡಿಸಿದ್ದರು. ಅವರಿಗೆ ಹಾಗೂ ಅವಕಾಶ ಕಲ್ಪಿಸಿದ ತೋಟದ ಮಾಲೀಕರಿಗೆ ಮತ್ತು ರುಚಿಯಾದ ಊಟ ತಯಾರಿಸಿದ ಸುಬ್ರಹ್ಮಣ್ಯ ಹಾಗೂ ತಂಡದವರಿಗೆ ಹಾಗೂ ಅದನ್ನು ಸರಿಯಾದ ಸಮಯಕ್ಕೆ ತಂದ ಸುರೇಶ ಹಾಗೂ ಅವರ ಮಗಳಿಗೆ ಮತ್ತು ದೇಶಪಾಂಡೆಯವರಿಗೆ (ಅವರ ಕಾರಿನಲ್ಲಿ ನಾನು ಹೋದದ್ದು) ನಮ್ಮ ತಂಡದ ಪರವಾಗಿ ಧನ್ಯವಾದ.



12 ಕಾಮೆಂಟ್‌ಗಳು:

  1. ಈ ಅಂಕಣ ತೆರೆದಿರುವುದು ಸೂಕ್ತವಾಗಿದೆ. ಆ ಮೂಲಕ ಒಂದು ದಿನದ ವನಭೋಜನ ಕಾರ್ಯಕ್ರಮದ ವರದಿ/ಲೇಖನವನ್ನು ಕೂಡ ಬಹಳ ಸೊಗಸಾಗಿ ಬರೆದು ಪ್ರಕಟಿಸಿದ್ದೀರಿ. ಚೆನ್ನಾಗಿ ಮೂಡಿಬಂದಿದೆ, ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  2. ವಾಹ್ವ್!! ಊಟದಷ್ಟೇ ರುಚಿ ಮತ್ತು ಅಚ್ಚುಕಟ್ಟಾದ ಲೇಖನ, ಚಿತ್ರೀಕರಣ..ಹೃದಯ ಪೂರ್ವಕವಾದ ಧನ್ಯವಾದ...

    ಪ್ರತ್ಯುತ್ತರಅಳಿಸಿ
  3. ಈ ಒಂದು ದಿನದ ವನಭೋಜನ ಕಾರ್ಯಕ್ರಮ ವನ್ನು ಆರಂಭ ದಿಂದ ಅಂತ್ಯದವರೆಗೂ ತುಂಬಾ ಚೆನ್ನಾಗಿ ಬರೆದು ಸದಾಕಾಲ ನಮ್ಮ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದೀರ , ಧನ್ಯವಾದಗಳು. ಈ ಕಾರ್ಯಕ್ರಮ ಏರ್ಪಾಡು ಮಾಡಿದ ಧನ್ಯವಾದ ಗಳು.

    ಪ್ರತ್ಯುತ್ತರಅಳಿಸಿ
  4. ನಿಮ್ಮ ಪ್ರವಾಸ ಕಥನ ಅಲ್ಲಿಯೇ ವನಭೊಜನ ಸವಿದಷ್ಟೇ ರುಚಿಯಾಗಿತ್ತು.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  5. ನಮ್ಮ ಶ್ರೀ ನಣ್ಣ ನವರ ಆತಿಥ್ಯ ವನ್ನು USನಲ್ಲಿ ಇದ್ದಾಗಿನಿಂದ ಸವಿದ ನನಗೆ ಇದನ್ನು ಓದಿ ತುಂಬಾ ಸಂತೋಷ ಆಯಿತು. ದೇವರು ಅವರಿಗೆ ಹಾಗೂ ಅವರ ಮನೆಯ ಎಲ್ಲಾ ಸದಸ್ಯರಿಗೂ ಆಯುರಾರೋಗ್ಯ ಸದಾ ದಯಪಾಲಿಸಲಿ.

    ಪ್ರತ್ಯುತ್ತರಅಳಿಸಿ
  6. ದೇವಲಾಪುರದ ತೋಟದ ಮನೆಯ ಸೊಬಗು ಮತ್ತು ಮನೆಯವರ ಸದಾ ನಗುಮೊಗದ ಆತಿಥ್ಯವನ್ನು ಬಹಳ ಹತ್ತಿರದಿಂದ ಬಲ್ಲ ನನ್ನಂಥವರಿಗೆ ಇದು ಆಶ್ಚರ್ಯದ ಸಂಗತಿಯೇನಲ್ಲ. ಭಗವಂತ ಅವರ ಮನೆಯ ಎಲ್ಲರಿಗೂ ಆಯುರಾರೋಗ್ಯ ಹಾಗೂ ಇನ್ನೂ ಹೆಚ್ಚಿನ ಅಭಿವೃದ್ದಿಯನ್ನುದಯಪಾಲಿಸಲಿ ಎಂದು ಪ್ರಾರ್ಥನೆ. ಲೇಖನ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ