ಸುಲ್ ಸುಲೊ ಜಲಪಾತ (SULSULO waterfall)
ತಾರೀಕು ೨೫.೭.೨೦೨೨ರಂದು ಎಂದಿನಂತೆ ೬ ಗಂಟೆಗೆ ಎದ್ದು ತಯಾರಾಗಿ ೭.೧೫ಕ್ಕೆ
ತಿಂಡಿ ನೂಡಲ್ಸ್ ತಿಂದು ೮.೧೫ಕ್ಕೆ ಬುತ್ತಿಗೆ ಪೂರಿ ಪಲ್ಯ, ಸಿಹಿ ಉಂಡೆ ತುಂಬಿ ತಯಾರಾದೆವು. ಈ ದಿನ
ನಡೆಯುವುದು ಸ್ವಲ್ಪ ಜಾಸ್ತಿ ಇರುತ್ತದೆ ಎಂದಿದ್ದರು. ಕೆಲವು ಮಂದಿ ಜ್ವರದಿಂದ ಬಳಲಿದ ಕಾರಣ ಚಾರಣಕ್ಕೆ
ಗೈರು ಘೋಷಿಸಿದ್ದರು.
ಸತ್ತಾರಿಯ ಶೆಲೋಪ್ ಬುಡ್ರುಕ್ ಹಳ್ಳಿಯಲ್ಲಿರುವ ಹಚ್ಚಹಸಿರಿನ ಕಾಡುಗಳಲ್ಲಿ ನಡೆಯುತ್ತ ಸಾಗಿದೆವು. ಈ ದಿನ ಒಟ್ಟು ನಾಲ್ಕು ಸುಲ್ ಸುಲೊ ಜಲಪಾತ ನೋಡುವುದಿತ್ತು. ಸುಲ್ ಸುಲೊ ಅಂದರೆ ಜಾರುವುದು ಎಂದರ್ಥವಂತೆ. ಹಾಗಾಗಿ ಎಚ್ಚರದಿಂದ ಹೆಜ್ಜೆ ಇಡಿ ಎಂದು ಮೊದಲೇ ಎಚ್ಚರಿಸಿದ್ದರು. ಮೊದಲಿಗೆ ಒಂದು ಪುಟ್ಟ ಜಲಪಾತ ಎದುರಾಯಿತು. ಅಲ್ಲಿ ಅರ್ಧ ಗಂಟೆ ನೀರಲ್ಲಿ ಇದ್ದು ಎದ್ದು ಮುಂದೆ ನಡೆದೆವು.
ಮಧ್ಯೆ
ಮಧ್ಯೆ ತೊರೆಗಳನ್ನು ದಾಟಿ ಸಾಗಿದೆವು. ಕಾಡು ದಾರಿಯ
ನೆಲದಲ್ಲಿ ಸೊಪ್ಪುಗಳು ಕೊಳೆತು ಜಾರುತ್ತಲಿತ್ತು. ನಾವು ಹತ್ತಿಪ್ಪತ್ತು ಮಂದಿ ಮುಂದಿದ್ದೆವು. ಅಷ್ಟರಲ್ಲಿ
ಸುದ್ದಿ ಬಂತು. ಮೈಸೂರಿನ ಪ್ರಮೀಳಾ ಎಂಬವರು ಜಾರಿ ಬಿದ್ದರು. ಬೀಳುವಾಗ ಕೈ ಊರಿ ಮಣಿಗಂಟಿನ ಬುಡದಲ್ಲಿ
ಕೂದಲಳತೆಯ ಮುರಿತ ಆಗಿ, ಅಲ್ಲೇ ಇದ್ದ ಮೂಳೆ ವೈದ್ಯರು (ಗುಜರಾತಿನವರು) ಪ್ರಥಮ ಚಿಕಿತ್ಸೆ ನೀಡಿ ಕ್ರೇಪ್
ಬ್ಯಾಂಡೇಜು ಬಿಗಿಯಾಗಿ ಕಟ್ಟಿದರು. ಅವರೂ ಕೈ ಕಟ್ಟಿಕೊಂಡೇ ಮುಂದೆ ಚಾರಣ ಮುಂದುವರಿಸಿದರು.
ಎರಡನೇ ಪುಟ್ಟ
ಜಲಪಾತ ಎದುರಾಯಿತು. ನಾವು ಕೆಲವರು ಅದರಲ್ಲಿ ಇಳಿಯುವ ಮನಸ್ಸು ಮಾಡದೇ ದೂರದಿಂದಲೇ ನೋಡಿ ತೃಪ್ತಿ ಹೊಂದಿದೆವು. ಮುಂದೆ ನಡೆದು ಮೂರನೇ ಜಲಪಾತದ
ಬಳಿ ಬಂದೆವು. ಅಲ್ಲಿ ನೀರೊಳಗೆ ಕೂತು ಜಲ ಥೆರಪಿ ಪಡೆದುಕೊಂಡೆವು! ನೀರ ರಭಸದ ಹರಿವಿನಿಂದ ನಾನು ಹಾಗೂ
ತಂಗಿ ಸವಿತಳೂ ಓಲಾಡುತ್ತಲಿದ್ದೆವು. ಸವಿತಾ ಲೋಕೇಶ್ (ಜಿಮ್ ಕಸರತ್ತು ವ್ಯಾಯಾಮದಿಂದ ಸದೃಢವಾದ ಶರೀರ
ಅವಳದು) ನಮ್ಮನ್ನು ಗಟ್ಟಿಯಾಗಿ ಹಿಡಿದುಕೊಂಡಕಾರಣ ನಾವು ತುಸು ಹೊತ್ತು ನೀರಧಾರೆಗೆ ಮೈ ಒಡ್ಡಿ ನಿಲ್ಲಲು
ಸಾಧ್ಯವಾಯಿತು!
ಮುಂದೆ ನಾಲ್ಕನೇ ಜಲಪಾತದೆಡೆಗೆ ಹೋದೆವು. ಈ ಎಲ್ಲ ಜಲಪಾತಗಳು ಇದ್ದುದು ಕಾಡಿನೊಳಗೊಂದು ವೃತ್ತ ಸುತ್ತು ಬಂದಂತೆ. ಆಗ ಜಲಪಾತ ದರ್ಶನವಾಗುತ್ತದೆ. ನಾಲ್ಕನೇ ಜಲಪಾತ ಕೂಡ ಸಣ್ಣದೇ. ವಿಶಾಲವಾಗಿ ನೀರು ಹರಿಯುತ್ತಲಿತ್ತು. ಅಲ್ಲಿ ಕೂತು ಊಟ ಮಾಡಿದೆವು. ೨.೩೦ಗೆ ತಲೆ ಲೆಕ್ಕ ಮಾಡಿ ಅಲ್ಲಿಂದ ಹೊರಟೆವು. ಹೋಗುವ ದಾರಿ ಬೇರೆಯೇ. ಸು್ಮಾರು ೧೦ಕಿಮೀ ಊರೊಳಗೆ ನಡೆದು ನಾವು ಪಂಚಾಯತ್ ಕಟ್ಟಡ ತಲಪಿದಾಗ ೪.೩೦ ಗಂಟೆ. ರಸ್ತೆ ದಾರಿಯಲ್ಲಿ ಸಿಕ್ಕಿದ ಬೈಕ್, ಸ್ಕೂಟರಿನಲ್ಲಿ ಸುಸ್ತಾದವರು ಕೆಲವರು ಗಮ್ಯ ತಲಪಿಕೊಂಡರು. ಸುಸ್ತಾದವರು ಗಾಡಿ ಹತ್ತಿ ಬರಬಹುದು ಎಂದು ಮುಕ್ತ ಅವಕಾಶ ಮೊದಲೇ ಕೊಟ್ಟಿದ್ದರು.
ಒಣಗಿದ ಬಟ್ಟೆ ಧರಿಸಿ
ಬಂದು ಬಿಸಿ ಬಿಸಿ ಆಲೂ, ಮೆಣಸಿನ ಬಜ್ಜಿ ಸವಿದೆವು.
ರಾತ್ರಿ ೮ಕ್ಕೆ ಊಟ (ಅನ್ನ ಸಾರು, ಬೆಂಡೆ ಪಲ್ಯ, ಹಪ್ಪಳ, ಕಡ್ಲೆ, ಸಾಗು ಪಾಯಸ, ಪಾವು ಬಾಜಿ) ರಾತ್ರೆ
೯ಕ್ಕೆ ಎಂದಿನಂತೆ ವಿಚಾರವಿನಿಮಯ, ಚಾರಣ ಅನುಭವ ಇತ್ಯಾದಿ ನಡೆಯಿತು. ಆಗ ಬಂದ ಸುದ್ದಿ ಅಂದರೆ ನಮ್ಮ
ತಂಡದಲ್ಲಿದ್ದವರು ಹತ್ತು ಮಂದಿ ಆಲ್ಕೋಹಾಲ್ ಸೇವಿಸಿ ಅನುಚಿತವಾಗಿ ನಡೆದುಕೊಂಡಿದ್ದರಂತೆ. (ಗುಜರಾತಿನವರೆಂದು
ತೋರುತ್ತದೆ.) ಹಾಗಾಗಿ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿದರಂತೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಎಲ್ಲ ವಿದ್ಯಾವಂತರೇ ಇದ್ದುದು. ಇನ್ನು ಒಂದು ದಿನ ತಡೆದು ಚಾರಣ ಎಲ್ಲ ಮುಗಿಸಿ ಅಲ್ಲಿಂದ ತೆರಳಿದ ಬಳಿಕ
ಮನಸೋ ಇಚ್ಛೆ ಕುಡಿಯಬಹುದಿತ್ತಲ್ಲ. ಆ ಒಂದು ದಿನ ಕುಡಿಯದೆ ಇರಲು ಸಾಧ್ಯವಾಗಲಿಲ್ಲವೆ? ಅವರಿಗೆ ಎಂದು
ನಾವು ಮಾತಾಡಿಕೊಂಡೆವು. ನಶೆ ಬಲು ಕೆಟ್ಟದು ನೋಡಣ್ಣ .
ಕುಮ್ತಾಲ್ ಜಲಪಾತ kumthal
waterfall
ತಾರೀಕು ೨೬.೭.೨೦೨೨ರಂದು ಬೆಳಗ್ಗೆ ೬ಕ್ಕೆ ಎದ್ದು ತಯಾರಾಗಿ ಬಿಸಿ ಬಿಸಿ ಚನ್ನ ಬತೂರ ತಿಂದು ಬುತ್ತಿಗೆ ಪೂರಿ ಪಲ್ಯ (ಮೂರು ದಿನದಿಂದ ಪೂರಿ ಪಲ್ಯ!) ಸಿಹಿ ಉಂಡೆ ಹಾಕಿಕೊಂಡು ತಯಾರಾದೆವು. ೯ ಗಂಟೆಗೆ ಬಸ್ಸಿನಲ್ಲಿ ಸವರ್ಡೆ ಹಳ್ಳಿಗೆ ಹೋಗಿ ಅಲ್ಲಿಂದ ಕಾಡೊಳಗೆ ೪ಕಿಮೀ ನಡೆದು ಕುಮ್ತಾಲ್ ಜಲಪಾತದೆಡೆಗೆ ಹೋದೆವು. ಶ್ವೇತ ಜಲಲ ಜಲಧಾರೆ ಹರಿಯುತ್ತಲಿತ್ತು. ಇದೇ ನಮ್ಮ ಕೊನೆಯ ಜಲಪಾತ ಭೇಟಿ. ಹಾಗಾಗಿ ನೀರೊಳಗೆ ಇಳಿದು ಚೆನ್ನಾಗಿ ಆಟವಾಡಬೇಕು ಎಂಬುದು ಎಲ್ಲರ ತುಡಿತ. ನೀರೊಳಗೆ ಇಳಿದವರು ಅಲ್ಲಿಂದ ಮೇಲೆ ಬರಲು ಒಪ್ಪುತ್ತಲೇ ಇರಲಿಲ್ಲ. ಎಮ್ಮೆಗಳು ನೀರೊಳಗೆ ಇಳಿದರೆ ಹೇಗೆ ಹೊರಗೆ ಬರುವುದಿಲ್ಲವೋ ಹಾಗೆಯೇ ಇಲ್ಲಿ ಕೂಡ ಅದೇ ಸ್ಥಿತಿಯಂತಿತ್ತು!
ನಾವೂ ನೀರೊಳಗೆ ಕಾಲು ಹಾಕಿಕೊಂಡು ಕೂತೆವು. ಅಷ್ಟರಲ್ಲಿ ಧಾರಾಕಾರ ಮಳೆ ಸುರಿಯಿತು.
ನಾವು ಬರುವಾಗ ಇದ್ದ ಶುಭ್ರ ಜಲಪಾತ ಈಗ ಸಂಪೂರ್ಣ ಬೇರೆಯೇ
ರೂಪ ತಳೆಯಿತು. ನೀರ ಹರಿವು ಹೆಚ್ಚಿ ಕೆಂಪುವರ್ಣಕ್ಕೆ
ತಿರುಗಿತು. ಒಂದೇ ಜಲಪಾತ ಎರಡು ವಿಧದಲ್ಲಿ ನೋಡುವ ಭಾಗ್ಯ ನಮಗೆ ದೊರೆಯಿತು. ಮಳೆಯಲ್ಲೇ ಊಟ ಮಾಡಿದೆವು. ಮಧ್ಯಾಹ್ನ ೨.೩೦ ವರೆಗೆ ಅಲ್ಲೇ
ಕಾಲ ಕಳೆದೆವು. ಧಾರಾಕಾರ ಮಳೆಯಲ್ಲಿ ನೆನೆದದ್ದರಿಂದಾಗಿ ಕೆಲವರಿಗೆ ಚಳಿ ತಡೆದುಕೊಳ್ಳಲು ಕಷ್ಟವಾಯಿತು.
ಆ ದಿನ ಬಟ್ಟೆ ಒಣಗಲು
ಸಮಯ ಇರಲಿಲ್ಲ. ಒದ್ದೆ ಬಟ್ಟೆಯನ್ನು ಹಾಗೆಯೇ ಚೀಲಕ್ಕೆ
ತುಂಬಿ ನಮ್ಮ ಸಾಮಾನೆಲ್ಲವನ್ನೂ ಚೀಲಕ್ಕೆ ತುಂಬಿ ತಯಾರಾದೆವು. ನಮಗೆ ಕೊಟ್ಟ ಬಟ್ತಲು, ಲೋಟ, ಚಮಚ,
ಜಮಾಖಾನವನ್ನು ಹಿಂದಿರುಗಿಸಿದೆವು. ನಾಲ್ಕು ದಿನ ಚಾರಣದಲ್ಲಿ ಭಾಗವಹಿಸಿದ್ದಕ್ಕಾಗಿ ಸರ್ಟಿಫಿಕೇಟ್
ಕೊಟ್ಟರು.
ಸಂಜೆ ಬಿಸಿಬಿಸಿ
ಈರುಳ್ಳಿ ಪಕೋಡ ಚಟ್ನಿ ಸವಿದೆವು. ರಾತ್ರೆ ಊಟಕ್ಕೆ ಪಲಾವ್ ಬುತ್ತಿಗೆ ತುಂಬಿಕೊಂಡೆವು. ಕಿರಣ ಶಾನಭೋಗ್
ಹಾಗೂ ಮೂರು ಮಂದಿ ಸಹಾಯಕ ಬಾಣಸಿಗರು ರುಚಿಕಟ್ಟಾಗಿ ಅಷ್ಟು ದಿನವೂ ಅಡುಗೆ ತಯಾರಿಸಿದ್ದರು. ಕಿರಣ ಅವರು
ಕುಮಟದವರು ಕನ್ನಡಿಗರು. ಗೋವಾದ ದೇವಾಲಯವೊಂದರಲ್ಲಿ ಕೆಲಸವಂತೆ. ಒಂದು ತಿಂಗಳಿನ ಮಟ್ಟಿಗೆ ಇಲ್ಲಿಗೆ
ಬಂದದ್ದೆಂದು ತಿಳಿಸಿದರು.
ಮರಳಿ ವಾಸ್ಕೋ
ರಾತ್ರೆ ೧೦.೨೦ಕ್ಕೆ
ಹೊರಡುವ ವಾಸ್ಕೋ – ಯಶವಂತಪುರ ರೈಲಿಗೆ ಟಿಕೆಟ್ ಕಾದಿರಿಸಿದ್ದೆವು.
ಹಾಗಾಗಿ ನಾವು ಅಲ್ಲಿಂದ ಹೊರಡಬೇಕಿತ್ತು. ರಾತ್ರೆಯ ಬಿಳ್ಕೊಡುಗೆ ಸಮಾರಂಭಕ್ಕೆ ನಾವು ಗೈರಾದಾವು. ಅಲ್ಲಿಂದ
ಹೊರಡುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಸತ್ತಾರಿಯಿಂದ ಸಂಜೆ ೪.೪೫ಕ್ಕೆ ವಾಲ್ಪೋಯಿಗೆ ಕೊನೆಯ ಬಸ್
ಇದೆ. ಮತ್ತೆ ವಾಲ್ಪೋಯಿಯಿಂದ ಪಣಜಿಗೆ ಒಂದು ಬಸ್, ಪಣಜಿಯಿಂದ ವಾಸ್ಕೋಗೆ ಇನ್ನೊಂದು ಬಸ್ ಹಿಡಿದು ಹೋಗಬೇಕು.
ನಮ್ಮ ಲಗೇಜ್ ಹೊತ್ತುಕೊಂಡು ಮೂರು ಬಸ್ ಬದಲಾಯಿಸಿ ಹೋಗುವುದು ಕಷ್ಟ ಸಾಧ್ಯ ಎನಿಸಿದ್ದರಿಂದ ನಾವು ಪಣಜಿಗೆ
ಬಂದ ನಿಂಗು ಅವರಿಗೆ ಪೋನಾಯಿಸಿದೆವು. ಅವರು ರಜಾದಲ್ಲಿದ್ದರು. ಆದರೆ ಪರ್ಯಾಯ ಚಾಲಕನ ದೂರವಾಣಿ ಸಂಖ್ಯೆ
ಕೊಟ್ಟು ಸಹಕರಿಸಿದರು. ಹನುಮಂತ ಎಂಬ ಕನ್ನಡಿಗ ಕರೆ ಮಾಡಿ ೧೩ ಆಸನಗಳಿರುವ ವಿಂಗರ್ ಗಾಡಿ (ರೂ.೫೫೦೦)
ತರುವೆ ಎಂದು ನುಡಿದರು. ಸಂಜೆ ೬ ಗಂಟೆಗೆ ವಿಂಗರ್ ಗಾಡಿಯಲ್ಲಿ ಹನುಮಂತನ ಆಗಮನವಾದಾಗ, ಸಾಕ್ಶಾತ್
ಹನುಮಂತನೇ ಪ್ರತ್ಯಕ್ಷನಾದಷ್ಟು ಸಂತೋಷವಾಗಿ ನಿರಾಳವಾಯಿತು. ನಾವು ೯ ಮಂದಿ ಹಾಗೂ ಗುಜರಾತಿನ ನಾಲ್ಕು ಮಂದಿ ಅಲ್ಲಿದ್ದ
ಎಲ್ಲರಿಗೂ ವಿದಾಯ ಹೇಳಿ ಗಾಡಿ ಹತ್ತಿದೆವು. ೬.೩೦
ಗಂಟೆಗೆ ಹೊರಟು ನಾವು ವಾಸ್ಕೋ ತಲಪಿದಾಗ ಗಂಟೆ ೮.೩೦ ಆಗಿತ್ತು. ಹನುಮಂತ ನಮ್ಮನ್ನಿಳಿಸಿ ಅವರ ವಿಸಿಟಿಂಗ್
ಕಾರ್ಡ್ ಕೊಟ್ಟು ವಿನಮ್ರವಾಗಿ ಮುಂದೆ ಹೋದರು. ವಾಸ್ಕೋ-ಡ-
ಗಾಮದಲ್ಲಿ ಅವರದು ಟೂರ್ಸ್ ಆಂಡ್ ಟ್ರಾವೆಲ್ಸ್ ಅಂಗಡಿ ಇದೆ. ದಕ್ಷಿಣ ಗೋವಾ, ಉತ್ತರ ಗೋವಾದಲ್ಲಿ ಅವರದು
ಸೈಟ್ ಸೀಯಿಂಗ್ ವ್ಯವಸ್ಥೆ ಬೆಳಗ್ಗೆ ೯ರಿಂದ ಸಂಜೆ ೬ ರ ತನಕ ಇದೆಯಂತೆ. ದಿನದ ೨೪ ಗಂಟೆ ಕಾರ್ ಸರ್ವಿಸ್
ಲಭಿಸುತ್ತದಂತೆ. ಹನುಮಂತ ಅವರ ಸಂಪರ್ಕ ಸಂಖ್ಯೆ: ೯೯೨೩೯೨೨೦೮೯, ೯೭೬೭೧೯೨೩೫೨, ೮೫೫೧೦೨೫೭೨೯.
ನಾವು ವಾಸ್ಕೋ ನಿಲ್ದಾಣ
ಪ್ರವೇಶಿಸಿದಾಗ ಗಾಡಿ ಅಲ್ಲಿ ನಿಂತಿತ್ತು. ಆದರೆ ರೈಲು ಬಾಗಿಲು ತೆರೆದಿರಲಿಲ್ಲ. ಬಾಗಿಲನು ತೆರೆದು
ಸೇವೆಯನು ಕೊಡು ಎಂದು ಜಪಿಸುತ್ತ ಕೆಳಗೆ ಕೂತು ಊಟ ಮುಗಿಸಿದೆವು. ನಮ್ಮ ಮೊರೆ ಕೇಳಿತೇನೋ ಸ್ವಲ್ಪ ಸಮಯದಲ್ಲಿ
ಬಾಗಿಲು ತೆರೆದರು! ರೈಲು ಹತ್ತಿದೆವು.
ರೈಲು ಹತ್ತಿದ್ದೇ
ನಮ್ಮ ನಮ್ಮ ಸೀಟಿನಲ್ಲಿ ಮಲಗಿ ನಿದ್ರಿಸಿದೆವು.
ಮರಳಿ ಅರಸೀಕೆರೆ
ತಾರೀಕು ೨೭-೭-೨೦೨೨ರಂದು
ಬೆಳಗ್ಗೆ ೬.೩೦ಗೆ ಎಚ್ಚರವಾಯಿತು. ಹಲ್ಲುಜ್ಜಿ ಬಂದು ಕುತಾಗುವಾಗ ಮಸಾಲೆದೋಸೆ ಬಂತು. ತಿಂಡಿ ತಿಂದು
ಕೂತೆವು. ಬೆಳಗ್ಗೆ ೯.೧೫ಕ್ಕೆ ಅರಸೀಕೆರೆ ತಲಪಿ ಇಳಿದೆವು. ತಂಗಿ ಸವಿತಾ ಮಾತ್ರ ಯಶವಂತಪುರದೆಡೆಗೆ
ತೆರಳಿದಳು.
ರೈಲಿಳಿದು ಅನತಿ ದೂರದಲ್ಲೇ ಇದ್ದ ಬಸ್ ನಿಲ್ದಾಣಕ್ಕೆ ಹೋಗಿ ಮೈಸೂರು
ಬಸ್ ಹತ್ತಿದೆವು. ೯.೪೫ಕ್ಕೆ ಬಸ್ ಹೊರಟಿತು. ಮಧ್ಯಾಹ್ನ ೧.೩೦ಗೆ ಮೈಸೂರು ಮನೆ ತಲಪಿದೆವು. ಅಲ್ಲಿಗೆ
ನಮ್ಮ ರೈನಥಾನ್ ಚಾರಣ ಕಾರ್ಯಕ್ರಮಕ್ಕೆ ತೆರೆ ಬಿತ್ತು.
ಈ ಯಶಸ್ವೀ ಕಾರ್ಯಕ್ರಮದ ಹಿಂದೆ ಯೂಥ್ ಹಾಸ್ಟೆಲಿನ ಸಿಬ್ಬಂದಿ ವರ್ಗ ಹಾಗೂ ಅಲ್ಲಿಯ ಕಾರ್ಯಕರ್ತರ ಹಿಂಡೇ ಇದೆ. ಅವರೆಲ್ಲ ತಿಂಗಳ ಕಾಲ ತಮ್ಮ ಮನೆ ಕೆಲಸ ಬದಿಗೊತ್ತಿ ನಮ್ಮ ಅನುಕೂಲಕ್ಕಾಗಿ ಅಲ್ಲಿ ಬಂದು ದುಡಿದಿದ್ದಾರೆ. ಅಂಥ ಮಹನೀಯರಿಗೆಲ್ಲರಿಗೂ (ಜ್ಯೋತಿ, ಮನೋಜ ಜೋಷಿ, ಕಿರಣ, ಪ್ರಸಾದ್, ಕೃಷ್ಣ, ಆಪಾ, ರೂಪಾ ನಾಯರ್, ಹಾಗೂ ಇತರರು) ಗೋವಾ ಚಾರಣಿಗರ ನಮ್ಮ ೫ ತಂಡದವರೆಲ್ಲರ ಪರವಾಗಿ ಧನ್ಯವಾದ. ನಾವು ಮೈಸೂರಿಗರು ಅವರಿಗೆಲ್ಲ ಮೈಸೂರು ಸ್ಯಾಂಡಲ್ ಅಗರಬತ್ತಿ, ಸ್ಯಾಂಡಲ್ ಟಾಲ್ಕಂ ಪೌಡರ್, ಸೆಂಟು ಬಾಟಲ್ ಉಡುಗೊರೆ ಕೊಟ್ಟೆವು.
ಗೋವಾದ ಯೂಥ್ ಹಾಸ್ಟೆಲ್ ಸಿಬ್ಬಂದಿ ಈ ಚಾರಣವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ್ದರು. ಪ್ರತೀದಿನ ಊಟೋಪಚಾರ ಬಹಳ ಚೆನ್ನಾಗಿತ್ತು.
ನಮಗೆ ಈ ಚಾರಣಕ್ಕೆ ಎಲ್ಲ ಖರ್ಚು ಸೇರಿ ಸರಿಸುಮಾರು ರೂ. ೭ಸಾವಿರ ಖರ್ಚಾಗಿತ್ತು.
ಈ ಚಾರಣಕ್ಕೆ ಅಂತರ್ಜಾಲದಲ್ಲಿ ಅರ್ಜಿ ಗುಜರಾಯಿಸುವಲ್ಲಿಂದ ಹಿಡಿದು, ರೈಲು ಟಿಕೆಟ್ (ರೂ. ೬೭೪) ಕಾದಿರಿಸುವಲ್ಲೀವರೆಗೆ ಸಹಾಯ ಮಾಡಿದ ಹೇಮಮಾಲಾ ಅವರಿಗೆ ನಮ್ಮೆಲ್ಲರ ಪರವಾಗಿ ಧನ್ಯವಾದ.
ಮುಗಿಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ