ಮಳೆಯಲಿ ಜೊತೆಯಲಿ
ಗೋವಾ ಚಾರಣ
ಮಳೆಗಾಲದಲ್ಲಿ ಗೋವಾ ಕಾಡಿನಲ್ಲಿ ಚಾರಣ ಮಾಡಬೇಕು ಬಹಳ ಚೆನ್ನಾಗಿರುತ್ತದೆ
ಎಂದು ಈಗಾಗಲೇ ಆ ಚಾರಣ ಕೈಗೊಂಡ ಸ್ನೇಹಿತೆಯರು ಹೇಳಿದ್ದರು. ಇಸವಿ ೨೦೨೦ರಲ್ಲಿ ನಾವು ರೂ. ೪೮೦೦ ಕಟ್ಟಿ
ಹೆಸರು ನೋಂದಾಯಿಸಿದ್ದೆವು. ಆದರೆ ಕೊರೋನಾ ಹಾವಳಿಯಿಂದ ಆಗ ಚಾರಣ ರದ್ದಾಗಿತ್ತು. ಈ ವರ್ಷ ಜುಲೈ ೨೨ರಿಂದ
೨೭ರ ತನಕದ ಚಾರಣಕ್ಕೆ ನಾವು ಹೋಗಿ ಬಂದಿದ್ದೆವು.
ನಮ್ಮ ಚಾರಣದ ವಿವರ
ಮೊದಲ ದಿನ ೨೨.೭.೨೦೨೨ ಗೋವಾದ ಪಣಜಿಯ ಮಿರಾಮರ್ ನಲ್ಲಿರುವ ಯೂಥ್ ಹಾಸ್ಟೆಲ್
ತಲಪುವುದು. ಅಲ್ಲಿಂದ ಉತ್ತರ ಗೋವಾದ ಥಾಣೆಯ ಡೊಂಗುರ್ಲಿಯ
ಪಂಚಾಯತ್ ಕಟ್ಟಡಕ್ಕೆ ರವಾನೆ
೨೩-೭-೨೦೨೨ ಹಿವ್ರೆ
ಜಲಪಾತ- ೧೦ಕಿಮೀ ಚಾರಣ
೨೪-೭-೨೦೨೨ ಪಾಲಿ ಜಲಪಾತ ೧೦ಕಿಮೀ ಚಾರಣ
೨೫-೭-೨೦೨೨ ಸುಲ್ ಸುಲ್ ಸುಲೊ ಜಲಪಾತ ೧೬ಕಿಮೀ ಚಾರಣ
೨೬-೭-೨೦೨೨ ಕುಮ್ತಾಲ್ ಜಲಪಾತ ೪ಕಿಮೀ ಚಾರಣ
೨೭-೭-೨೦೨೨ ಬೆಳಗ್ಗೆ ಪಣಜಿಗೆ ವಾಪಾಸ್ .
ಗೋವಾಗೆ ಪಯಣ
ನಾವು ಮೈಸೂರಿನಿಂದ ಅರಸೀಕೆರೆಗೆ ೨೧.೭.೨೦೨೨ರಂದು ಮಧ್ಯಾಹ್ನ ೧೨.೧೫ರ
ಬಸ್ಸಿನಲ್ಲಿ (ರೂ.೧೪೬) ಹೊರಟೆವು. ಸಂಜೆ ೪ ಗಂಟೆಗೆ ಅರಸೀಕೆರೆ ತಲಪಿ, ನಾವು ೯ ಮಂದಿ (ಹೇಮಮಾಲಾ,
ಸವಿತಾ, ಮಾಲಿನಿ, ಮಂಜುಳ, ರುಕ್ಮಿಣಿಮಾಲಾ, ಸವಿತಾ ಲೋಕೇಶ್, ಉಷಾ, ಆನಂದ ಗುಪ್ತ, ಪ್ರಭಾಕರ್) ೫.೧೦ರ
ಯಶವಂತಪುರ- ವಾಸ್ಕೋ ರೈಲೇರಿದೆವು. ಹರಟುತ್ತ, ಮಧ್ಯೆ ಮಧ್ಯೆ ತಿಂಡಿ ಮೆಲ್ಲುತ್ತ ಸಮಯ ಕಳೆದೆವು.
ಎತ್ತಣ ಮಾಮರ
ಹರಿಹರದಲ್ಲಿ ನಮ್ಮ ಬೋಗಿಗೇ ಸೆಂಥಿಲ್ ಎಂಬವರು ಹತ್ತಿದರು. ಲೋಕಾಭಿರಾಮವಾಗಿ
ಅವರೊಡನೆ ಮಾತುಕತೆ ನಡೆಸಿದಾಗ, ಅವರು ರೈಲ್ವೇ ಇಲಾಖೆಯಲ್ಲಿ ಗೋವಾದಲ್ಲಿ ಕೆಲಸ, ಮೂಲತಃ ಚೆನ್ನೈಯವರು
ಎಂಬುದು ತಿಳಿಯಿತು. ಬಹಳ ಚೆನ್ನಾಗಿ ಕನ್ನಡ ಮಾತಾಡುತ್ತಿದ್ದರು. ನಾವು ಚಾರಣ
ಹೋಗುವ ವಿಷಯ ತಿಳಿಸಿದೆವು. ರೈಲಿಳಿದು ನಮಗೆ ಪಣಜಿಗೆ ಹೋಗುವ ಸಲುವಾಗಿ, ಅವರ ಸ್ನೇಹಿತರ ಬಾಡಿಗೆ
ಕಾರು (ರೂ. ೧೫೦೦) ಮಾತಾಡಿದರು. ಆ ಚಾಲಕನಲ್ಲಿ‘ ಬರುತ್ತಿರುವವರು ನಮ್ಮ ದೊಡ್ಡಮ್ಮ, ಚಿಕ್ಕಮ್ಮಂದಿರು.
ಚೆನ್ನಾಗಿ ನೋಡಿಕೋ ಎಂದು ಹೇಳಿದ್ದರು!
ನಾವು ನಿರಾಳವಾಗಿ
ಮಲಗಿದೆವು. ೨೨ರಂದು ಬೆಳಗ್ಗೆ ಎಚ್ಚರ ಆದಾಗ ರೈಲು ವಾಸ್ಕೋದಲ್ಲಿ ನಿಂತಿತ್ತು. ಸೆಂಥಿಲ್ ಅವರು ಮಡಗಾಂವ್ ನಿಲ್ದಾಣದಲ್ಲಿ ಇಳಿದು ಹೋಗಿದ್ದರು.
ಅಷ್ತರಲ್ಲಿ ಚಾಲಕನ ಕರೆಯೂ ಬಂತು. ನಾವು ರೈಲಿಳಿದು ಹೊರಗೆ ಬಂದಾಗ, ನಿಂಗು ಅವರು (ಉತ್ತರಕರ್ನಾಟಕದವರು
ಕನ್ನಡಿಗರು.) ನಮಗಾಗಿ ಕಾಯುತ್ತಲಿದ್ದರು. ನಾವು ಅವರ ಎರ್ಟಿಗಾ ಕಾರೇರಿದೆವು.
ಪಣಜಿಯ ಯೂಥ್ ಹಾಸ್ಟೆಲ್
ಸುಮಾರು ೩೦ ಕಿಮೀ ದೂರದಲ್ಲಿರುವ ಪಣಜಿಯ ಮಿರಾಮರ್ ಕಡೆಗೆ ಹೊರಟೆವು.
ಗೋವಾದ ಸಮುದ್ರದ ಹಿನ್ನಿರಿನಲ್ಲಿ ಅದೆಷ್ಟೊಂದು ಜೂಜು ಅಡ್ಡೆಗಳು ತೇಲುತ್ತಲಿದ್ದುವು. ಬೆಳಗ್ಗೆ ಗೋವಾ
ನಗರ ದರ್ಶನವಾಯಿತು. ಯೂಥ್ ಹಾಸ್ಟೆಲ್ ಕಟ್ಟಡದ ಎದುರು ನಮ್ಮನ್ನು ಇಳಿಸಿದರು. ಬೆಳಗ್ಗೆ ೬.೩೦ಗೆ ನಾವು ತಲಾ ರೂ. ೩೫೦ಕೊಟ್ಟು ಡಾಮೆಟ್ರಿಯಲ್ಲಿ ತಂಗಿದೆವು.
ಬಿಸಿನೀರು ಸ್ನಾನವಾಗಿ ತಿಂಡಿ ತಿನ್ನಲು ಹೊರಟೆವು.
ಅಲ್ಲಿ ಯಾವ ಹೊಟೇಲ್ ತೆರೆದಿರಲಿಲ್ಲ. ೯.೩೦ ಮೇಲೆ ತೆರೆಯುವುದಂತೆ. ಹಾಗಾಗಿ ಟೀ ಶಾಪಿನಲ್ಲಿ ವಡಪಾವ್,
ಪಾವು ಬಾಜಿ ತಿಂದೆವು.
ಮಿರಾಮರ್ ಕಡಲ ದಂಡೆ
ಮಿರಾಮರ್ ಕಡಲ ತಡಿಗೆ ಹೋದೆವು. ಅಲ್ಲಿ ಅಡ್ಡಾಡಿದೆವು. ನೀರಲ್ಲಿ ಆಟವಾಡುವವರು
ನೀರಿಗೆ ಇಳಿದರು. ಕಡಲ ದಂಡೆ ಚೊಕ್ಕವಾಗಿತ್ತು.
ಅಲ್ಲೇ ಎದುರು ಭಾಗದಲ್ಲಿರುವ
ಹನುಮಂತ ದೇಗುಲಕ್ಕೆ ಹೋಗಿ ಅಲ್ಲಿಂದ ಯೂಥ್ ಹಾಸ್ಟೆಲಿಗೆ ಬಂದೆವು. ಅಲ್ಲಿ ಸಮುದ್ರದ ಬಳಿ ಸ್ವಲ್ಪ ಹೊತ್ತು
ಕುಳಿತೆವು.
ಸುಂದರ ಪರಿಸರದಲ್ಲಿರುವ ಯೂಥ್ ಹಾಸ್ಟೆಲಿನ ಕಟ್ಟಡ ನೋಡಿದರೆ ಬಹಳ ಬೇಸರ ಬರುವಂತಿತ್ತು. ಒಳಗೆ ಗೋಡೆಗಳ ಬಣ್ಣ ಮಾಸಿತ್ತು. ಸೀಲಿಂಗಿನ ಗಾರೆ ಉದುರಿ ವಿಕಾರವಾಗಿತ್ತು. ನಮ್ಮ ಮೇಲೆ ಉದುರದಿದ್ದರೆ ಸಾಕು ಎಂಬ ಭಾವ ಬರುವಂತಿತ್ತು. ಕಟ್ಟಡದ ಸಂರಕ್ಷಣೆಯ ಹೊಣೆ ಯಾರದೋ ತಿಳಿಯಲಿಲ್ಲ.
೧೨.೩೦ಗೆ ಒಂದು ಕಿಮೀ ನಡೆದು ಶೀತಲ್ ಎಂಬ ಸಸ್ಯಾಹಾರಿ ಹೊಟೇಲಿಗೆ ಊಟಕ್ಕೆ ಹೋಗಿ ಬಂದೆವು.
ನೋಂದಣಿ- ಸತ್ತಾರಿಗೆ (sattari) ರವಾನೆ
ಚಾರಣಕ್ಕೆ ಸಂಬಂಧಿಸಿದ ನಮ್ಮ ಕೆಲವು ದಾಖಲೆಗಳನ್ನು ಪರಿಶೀಲಿಸಿದರು.
೨.೪೫ಕ್ಕೆ ಎರಡು ಬಸ್ಸಿನಲ್ಲಿ ಹೊರಟು ನಮ್ಮನ್ನು(೭೯ ಮಂದಿ, ನಾವು ಮೈಸೂರಿನಿಂದ ೧೬ ಜನ) ಉತ್ತರ ಗೋವಾದ
ಥಾಣೆಯ ಸತಾರಿಯಲ್ಲಿರುವ ಪಂಚಾಯತ್ ಕಟ್ಟಡಕ್ಕೆ ಸಂಜೆ ೪.೩೦ಗೆ ತಲಪಿಸಿದರು. ೨ ದೊಡ್ಡ ಸಭಾಂಗಣದಲ್ಲಿ ನಮಗೆ ವಾಸ್ತವ್ಯ ಕಲ್ಪಿಸಿದ್ದರು.
೬ ಪಾಯಿಖಾನೆ (ಮಹಿಳೆ-ಪುರುಷರಿಗೆ ಪ್ರತ್ಯೇಕ)ಗಳಿದ್ದುವು. ಆದರೆ ಸ್ನಾನಕ್ಕೆ ವ್ಯವಸ್ಥೆ ಇರಲಿಲ್ಲ.
(ಮುಂದಿನ ನಾಲ್ಕು ದಿನವೂ ಸ್ನಾನ ಮಳೆಯಲ್ಲಿಯೇ ಹಾಗೂ ಜಲಪಾತದಲ್ಲಿ ಮಾತ್ರ!) (ಮುಂದಿನ ವರ್ಷ ಯೂಥ್
ಹಾಸ್ಟೆಲ್ ಸ್ವಂತ ಕಟ್ಟಡ ಹೊಂದುತ್ತದಂತೆ. ಸ್ಥಳ ಕೊಂಡುಕೊಂಡಿರುವರಂತೆ)
ಸತಾರಿಯಲ್ಲಿ ಒಟ್ಟು ೭೦ ಹಳ್ಳಿಗಳಿವೆ. ಮಾಂಡೋವಿ ನದಿಯ ಸುತ್ತ ಹಸಿರು
ದಟ್ಟ ಅರಣ್ಯದಿಂದ ಆವೃತವಾಗಿವೆ. ಮಹದಾಯಿ ವನ್ಯಜೀವಿ ಅಭಯಾರಣ್ಯವು ೨೦೮ ಕಿಮೀ ಸುತ್ತಳತೆಯಲ್ಲಿ ವ್ಯಾಪಿಸಿದೆ.
ಅಲ್ಲಿ ಮಳೆಯೂ ಹೆಚ್ಚು.
ತಿಂಡಿ-ಊಟದ ಸಮಯ
ಸಂಜೆ ನಮಗೆ ಒಂದು ತಟ್ಟೆ, ಲೋಟ, ಜಮಾಖಾನ ಕೊಟ್ಟರು. ಬಿಸಿ ಬಿಸಿ ನೀರುಳ್ಳಿ
ಪಕೋಡ ಚಹಾ, ಕಾಫಿ ಕೊಟ್ಟರು. ಹೊಟ್ಟೆ ಬಿರಿಯುವಷ್ಟು ತಿನ್ನಬಹುದು!
ರಾತ್ರೆ ೮ ಗಂಟೆಗೆ ಊಟದ ಗಂಟೆ ಬಾರಿಸಿದರು. ನಾವು ತಟ್ಟೆ ಲೋಟದೊಂದಿಗೆ
ಹಾಜರಾದೆವು. ಒಳಾಂಗಣ ಕ್ರೀಡಾಂಗಣದಲ್ಲಿ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು. ಅನ್ನ, ಸಾರು,
ಪಲ್ಯ, ಹಪ್ಪಳ, ಪಾವು ಬಾಜಿ, ಕ್ಷೀರ.
ವಿಚಾರ ವಿನಿಮಯ
ರಾತ್ರೆ ೯ ಗಂಟೆಗೆ ಕ್ರೀಡಾಂಗಣದೊಳಗೆ ಸೇರಿದೆವು. ಮರುದಿನದ ಚಾರಣದ
ವಿವರ, ನೀತಿ ನಿಯಮಗಳ ಬಗ್ಗೆ ವಿವರಿಸಿದರು. ಯೂಥ್ ಹಾಸ್ತೆಲಿನ ವತಿಯ ಚಾರಣದಲ್ಲಿ ಚಡ್ದಿ ವಿರೋಧವಿದೆ.
ಆದರೆ ಗೋವಾದ ವಿಶೇಷ ಎಂದು ಇಲ್ಲಿ ಚಡ್ದಿ ಧರಿಸಲು ಅವಕಾಶವಿದೆ, ಹಾಗೂ ಸಿಗರೇಟ್ ವಿರೋಧ. ಆದರೆ ಹೊರಗೆ
ಹೋಗಿ ಸೇದಬಹುದು ಎಂಬ ರಿಯಾಯಿತಿ ಕೊಟ್ತರು! ಆದರೆ ಆಲ್ಕೋಹಾಲ್ ಮಾತ್ರ ಯಾವ ಕಾರಣಕ್ಕೂ ಸೇವಿಸಿ ಇಲ್ಲಿ
ಇರುವಂತಿಲ್ಲ. ಯಾರಾದರೂ ಕದ್ದು ಸೇವಿಸಿದರೂ ನಮ್ಮ ಸಿಬ್ಬಂದಿಯವರಿಗೆ ವಾಸನೆಯಲ್ಲಿ ಗೊತ್ತಾಗುತ್ತದೆ.
ಕೂಡಲೇ ಅವರನ್ನು ಶಿಬಿರದಿಂದ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.
ಹಿವ್ರೆಂ ಜಲಪಾತ( Hivrem waterfall)
ತಾರೀಕು ೨೩-೭-೨೦೨೨ರಂದು ಬೆಳಗ್ಗೆ ೬ ಗಂಟೆಗೆದ್ದು ತಯಾರಾದೆವು. ಪ್ರತೀದಿನ ೬ ಗಂಟೆಗೆ
ಚಹಾ ತಯಾರಿರುತ್ತಲಿತ್ತು. ೭.೩೦ಕ್ಕೆ ಉಪ್ಪಿಟ್ಟು ತಿಂಡಿ. ೮.೩೦ಗೆ ಬುತ್ತಿಗೆ ಪಲಾವ್. ೮.೪೫ಕ್ಕೆ
ಎಲ್ಲರೂ ಒಂದೆಡೆ ಸೇರಿ ತಲೆ ಲೆಕ್ಕ ಹಾಕಿ ಚಾರಣ ಪ್ರಾರಂಭ. ಮುಂದೆ ಇಬ್ಬರು ಹಿಂದೆ ಇಬ್ಬರು ಮಾರ್ಗದರ್ಶಿಗಳು. ಬಸ್ಸಿನಲ್ಲಿ
೪ಕಿಮೀ ಚಲಿಸಿ ಹಿವ್ರೆ ಕುರ್ಡ್ ದೇವಾಲಯದವರೆಗೆ
ಹೋದೆವು. ಅಲ್ಲಿಂದ ಕಾಡಿನ ದಾರಿಯಲ್ಲಿ ಸುಮಾರು ೬ಕಿಮೀ ನಡೆದೆವು. ದೂರದಿಂದಲೇ ಮೂರು ಜಲಪಾತಗಳ
ನೋಟ ಕಾಣುತ್ತದೆ. ಸ್ವಲ್ಪ ದೂರ ನಡೆದು ಮುಂದೆ ಹೋದಾಗ, ಸಣ್ಣಗೆ ಮಳೆ ಸುರಿಯಿತು. ಮಳೆಯಲ್ಲಿ ನೆನೆಯುತ್ತ
ನಡೆಯುವುದು ಚೇತೋಹಾರಿ ಅನುಭವ. ಮಳೆಗಾಲದ ಚಾರಣಕ್ಕೆ ಬಂದು ಮಳೆ ಸುರಿಯದಿದ್ದರೆ ನಿರಾಶೆ ಆಗುತ್ತಿತ್ತು.
ಅದರೆ ನಮಗೆ ಆ ನಿರಾಶೆ ಆಗದಂತೆ ಚಾರಣದ ನಾಲ್ಕೂ ದಿನವೂ ಮಳೆರಾಯ ಸಹಕರಿಸಿದ್ದ.
ಮೊದಲಿಗೆ ಒಂದು ದೊಡ್ದ ಜಲಪಾತ ಎದುರಾಯಿತು. ಸ್ವಚ್ಛ ಜಲಧಾರೆ. ಮನದನಣಿಯೆ ಅಲ್ಲಿ ನೀರೊಳಗೆ ಕುಳಿತು (ಎಮ್ಮೆಗಳು ನೀರಿನಲ್ಲಿ ಬಿದ್ದಂತೆ) ಮಜಾ ಅನುಭವಿಸಿದೆವು.
ಅಲ್ಲಿಂದ ಏಳಲು ಯಾರಿಗೂ ಮನವಿಲ್ಲ. ಮುಂದೆ ಇನ್ನೂ ಎರಡು ಜಲಪಾತ ನೋಡಬೇಕು
ಎಂಬ ಹುಮ್ಮಸ್ಸಿನಲ್ಲಿ ಮುಂದುವರಿದೆವು. ಮುಂದೆ ನಡೆದಂತೆ ಸಣ್ಣ ಝರಿ ಎದುರಾಯಿತು. ಶುಭ್ರ ಜಲವನ್ನು
ಕುಡಿದು ಮುಂದೆ ಸಾಗಿದೆವು.
ಧರಿಕಾ ಜಲಪಾತ.
ದೂರದಿಂದಲೇ ಜಲಪಾತದ
ಹರಿವಿನ ಸದ್ದು ಕೇಳಿಸುತ್ತಲೇ ಇತ್ತು. ಒಂದು ಕಿಮೀ ನಡೆದಾಗುವಾಗ ಎತ್ತರದಿಂದ ನೀರು ಧುಮುಕುವ ದೃಶ್ಯ
ಎದುರಾಯಿತು. ಸ್ಥಳೀಯ ಮಾರ್ಗದರ್ಶಿ ಪ್ರಭಾಕರ ಗಾಂವ್ಕರ ಅವರ ಪ್ರಕಾರ ಇದು ಧರಿಕಾ ಜಲಪಾತ. ಧರಿಕಾ ಎಂಬ
ಗ್ರಾಮವಿದೆಯಂತೆ. ಅದರ ಹೆಸರೇ ಅಂತೆ. ಮಳೆಗಾಲದ ಜಲಪಾತಗಳು ಒಂದಕ್ಕಿಂತ ಒಂದು ನೋಡಲು ಬಹಳ ಸುಂದರವಾಗಿರುತ್ತವೆ.
ಸ್ವಚ್ಚ ಜಲದಲ್ಲಿ ಆಟ ಮನಸ್ಸಿಗೆ ಉಲ್ಲಾಸವೀಯುತ್ತದೆ.
ಜಲಪಾತದ ಬಳಿಯೇ
ಕೂತು ಊಟ ಮಾಡಿದೆವು. ಮಳೆಯಲ್ಲಿ ಕೆಲವರು ಮಳೆ ಅಂಗಿ ಧರಿಸಿದ್ದರು, ನಾನು ತಲೆಗೆ ಮಾತ್ರ ಷವರ್ ಟೊಪ್ಪಿ
ಹಾಕಿಕೊಂಡಿದ್ದೆ. ಮಳೆಯಲ್ಲಿ ನೆನೆಯುವುದು ನನಗೆ ಬಹಳ ಖುಷಿ. ಆದರೆ ಜಲಪಾತದಲ್ಲಿ ನೀರಿಗೆ ಇಳಿಯುವುದು
ಬಲು ಅಪರೂಪ. ಇಲ್ಲಿ ಬಂದದ್ದೇ ನೀರಿಗೆ ಇಳಿಯಲು ಎಂಬ ಉದ್ದೇಶವಿದ್ದುದರಿಂದ ಇಲ್ಲಿ ಮಾತ್ರ ಎಲ್ಲ ಜಲಪಾತಗಳಲ್ಲೂ
ನೀರಿಗೆ ಇಳಿದು ಸಂತೋಷ ಪಟ್ಟೆ. ಮನ ತೃಪ್ತಿಯಾಗುವಷ್ಟು
ಜಲದೊಳಗಿದ್ದು ಎದ್ದು ನಡೆದೆವು.
ವಡಾ ಪಾವ್ ತಿಂದು
ಹರಟುತ್ತ ಕೂತೆವು. ರಾತ್ರೆ ಊಟಕ್ಕೆ ಪರೋಟ, ಗಸಿ,
ಹೆಸರುಬೇಳೆ ಪಾಯಸ, ಅನ್ನ ಸಾರು, ಪಲ್ಯ, ಹಪ್ಪಳ.
ರಾತ್ರೆ ಒಂದು ಗಂಟೆಗಳ
ಕಾಲ ಆ ದಿನದ ಚಾರಣ ಅನುಭವ, ಮುಂದಿನ ಚಾರಣದ ಬಗ್ಗೆ ಮಾತುಕತೆ, ಹಾಡು ಮುಗಿಸಿ ನಿದ್ದೆಗಿಳಿಯುವಾಗ ಹತ್ತು
ದಾಟಿತ್ತು.
ಪಾಲಿ ಜಲಪಾತ
ತಾರೀಕು ೨೪-೭-೨೦೨೨ರಂದು
ಬೆಳಗ್ಗೆ ೭.೩೦ಗೆ ತಿಂಡಿ ಅವಲಕ್ಕಿ ತಿಂದು ಬುತ್ತಿಗೆ ಪೂರಿ ಪಲ್ಯ, ಸಿಹಿ ಉಂಡೆ ತುಂಬಿಸಿ ೮.೪೫ಕ್ಕೆ ತಯಾರಾಗಿ ನಿಂತೆವು. ಮಾರ್ಗದರ್ಶಕರ
ನೆರವಿನಿಂದ ನಮ್ಮ ಚಾರಣ ಸುರುವಾಯಿತು. ಸುಮಾರು ೩ಕಿಮೀ ಕಾಡೊಳಗೆ ನಡೆದಾಗುವಾಗ ಒಂದು ಸಣ್ಣ ಜಲಪಾತ
ಎದುರಾಯಿತು. ಅಲ್ಲಿ ನೀರಲ್ಲಿ ಇಳಿದು ಆಟವಾಡಿ ಮುಂದೆ ೫೦೦ಮೀಟರು ನಡೆದಾಗ ಪಾಲಿ ಯಾನೆ ಶಿವಲಿಂಗ ಜಲಪಾತದೆದುರು
ತಲಪಿದೆವು. ಎತ್ತರದಿಂದ ನೀರು ಧುಮುಕಿ ಶಿವಲಿಂಗದಾಕಾರದ ಕಲ್ಲಿಗೆ ಎರಡು ಕವಲಾಗಿ ನೀರು ಹರಿಯುವ ಸೊಬಗನ್ನು
ನೋಡುತ್ತ ಕೂತೆವು. ಜಲಪಾತದ ಚೆಲುವನ್ನು ನೋಡುತ್ತ ಕೂತರೆ ಹೊತ್ತು ಸರಿಯುವುದೇ ಗಮನಕ್ಕೆ ಬಾರದು. ನೀರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದರು. ಬೇರೆ ಪ್ರವಾಸಿಗರೂ
ಇದ್ದರು. ನೀರೊಳಗೇ ಕೂತು ಬೀರು ಕುಡಿಯುತ್ತಲಿದ್ದರು. ಕುಡಿದ ಡಬ್ಬವನ್ನು ಅಲ್ಲೇ ಎಸೆಯುತ್ತಲಿದ್ದರು.
ಜಲಪಾತದ ಎದುರು ಭಾಗದಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹಗ್ಗ ಕಟ್ಟಿ ಸೊಂಟಕ್ಕೆ ಬೆಲ್ಟ್ ಸಿಕ್ಕಿಸಿ ಒಂದು ಬದಿಯಿಂದ ಇನ್ನೊಂದು ಬದಿಗೆ ಹಗ್ಗದಲ್ಲಿ ಜಾರುತ್ತ ಸಾಗುವ ಆಟ ಆಡುತ್ತಲಿದ್ದರು. ನಾವು ಊಟ ಮಾಡಿ ೨.೩೦ಕ್ಕೆ ಅಲ್ಲಿಂದ ಹೊರಟೆವು.
ನಾವು ನಿಧಾನವಾಗಿ ಮಳೆಯಲ್ಲಿ ನಡೆಯುತ್ತ, ಸಾಗಿ ೪.೩೦ಕ್ಕೆ ಸತ್ತಾರಿ ತಲಪಿದೆವು. ಬಟ್ಟೆ ಬದಲಿಸಿ ಬೇಲ್ ಪುರಿ ತಿಂದು ವಿಶ್ರಾಂತಿ ಪಡೆದೆವು.
ಸವಿತಾ ಎಂಬ ಬೆರಗು
ನಮ್ಮ ತಂಡದ ಮೈಸೂರಿನ ಸವಿತಾ ಲೋಕೇಶ್ ಎಂಬ ತರುಣಿ ಎಲ್ಲರ ಬಳಿ ಗಲ ಗಲ
ಮಾತಾಡುತ್ತ, ನಮ್ಮೆಲ್ಲರನ್ನೂ ಹೊಟ್ಟೆತುಂಬ ನಗಿಸುತ್ತಿದ್ದಳು. ಕಲ್ಲನ್ನೂ ಮಾತಾಡಿಸಬಲ್ಲ ಕಲೆಗಾರಿಕೆ
ಅವಳಲ್ಲಿತ್ತು. ಸಹಕಾರ ಮನೋಭಾವದ ಸವಿತಾ, ಗುಜರಾತ್, ಮಹಾರಾಷ್ಟ್ರ ಇತ್ಯಾದಿಗಳಿಂದ ಬಂದವರ ಜೊತೆಯಲ್ಲೂ
ಸ್ನೇಹ ಸಂಪಾದಿಸಿ, ಅವರು ಕೊಟ್ಟ ತಿಂಡಿ ಮೆಲ್ಲುತ್ತ, ಅವರನ್ನು ಸಂತೋಷಪಡಿಸಿ, ನಮಗೂ ಅವರಿಂದ ತಿಂಡಿ
ಕೊಡಿಸುತ್ತಿದ್ದಳು! ಅವಳ ಈ ಪರಿಯ ಮಾತುಗಾರಿಕೆ ನೋಡಿ ಬೆರಗಿನಿಂದ ನಾವೂ ಹಿಗ್ಗುತ್ತಿದ್ದೆವು. ಅವಳಿಂದ
ರೀಲ್ (ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ) ಮಾಡುವ ಬಗ್ಗೆ ಪಾಟ ಕಲಿಯುತ್ತ, ಅವಳ ಕಾಲೆಳೆಯುತ್ತ ಕೂತರೆ
ಸಂಜೆ ಕಾಲ ಸರಿಯುವುದೇ ಗೊತ್ತಾಗುತ್ತಿರಲಿಲ್ಲ. ಅಷ್ಟರಲ್ಲಿ ರಾತ್ರೆ ಊಟದ ಗಂಟೆ ಕೇಳಿಸುತ್ತಲಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ