ಸೋಮವಾರ, ಸೆಪ್ಟೆಂಬರ್ 19, 2022

ಮಮತೆಯ ಅತ್ತೆಗೆ ನುಡಿನಮನ

 ನಮಗೆ ೫ ಮಂದಿ ಸೋದರತ್ತೆಯರು. ಅವರಲ್ಲಿ ಜೆಡ್ಡು (ಎಡೆಕ್ಕಾನ) ಸಾವಿತ್ರಿ ಅತ್ತೆ ೯೨ ವರ್ಷ ತುಂಬುಜೀವನ ನಡೆಸಿ ೮-೯-೨೦೨೨ರಂದು ಇಹಲೋಕ ಬಿಟ್ಟರು. ರಾತ್ರಿ ಮಲಗಿದವರು ಬೆಳಗ್ಗೆ ಏಳಲಿಲ್ಲ. ಸುಖ ಮರಣ. ಅವರು ಆರೋಗ್ಯವಾಗಿಯೇ ಇದ್ದರು. ಒಂದೇ ಒಂದು ದಿನವೂ ಅವರ ಆರೋಗ್ಯ ಏರುಪೇರು ಆದದ್ದಿಲ್ಲ. ಹಾಗಾಗಿ ಮಾತ್ರೆ , ಆಸ್ಪತ್ರೆವಾಸ ಕಂಡವರಲ್ಲ. ವಾತದಿಂದ ಇತ್ತೀಚಿಗೆ ಮೊಣಕಾಲು ನೋವು ಇರುತ್ತಲಿತ್ತು. ಅದರ ನೋವು ಉಪಶಮನಕ್ಕೆ ತೈಲ ಉಜ್ಜುತ್ತಲಿದ್ದರು. 

   ನಮ್ಮತ್ತೆ ಮದುವೆಯಾಗಿ ಸೇರಿದ(ಜೆಡ್ಡು) ಮನೆಯಲ್ಲಿ ಒಟ್ಟು ಕುಟುಂಬವಿದ್ದ ಕಾಲ.ಆಗ ಸುಮಾರು ೨೨ ಮಂದಿ ಇದ್ದರಂತೆ. ಮಾವನ ವೃತ್ತಿ ಕೃಷಿ ಜೊತೆಗೆ ಪೌರೋಹಿತ್ಯ.  ಮುಂದೆ ಮಾವ ಎಡೆಕ್ಕಾನ (ಕೇರಳ) ಎಂಬಲ್ಲಿ ಕೃಷಿಭೂಮಿ ಖರೀದಿಸಿ ಅಲ್ಲಿಗೆ ವಲಸೆ ಹೋದರು. ಅವರಿಗೆ ಎಂಟು (ಆರು ಗಂಡು, ೨ ಹೆಣ್ಣು) ಮಕ್ಕಳು. ಅಲ್ಪ ಆದಾಯದಲ್ಲಿ ಅವರೆಲ್ಲರನ್ನೂ ಸಲಹಿ ವಿದ್ಯಾಭ್ಯಾಸ ಕೊಡಿಸಿ ಸಂಸ್ಕಾರವಂತರನ್ನಾಗಿ ಬೆಳೆಸಿದವರು.  ಹಿರಿ ಮಗ, ಮಗಳು ಕೆಲವು ವರ್ಷಗಳ ಹಿಂದೆ ತೀರಿ ಹೋಗಿದ್ದಾರೆ. ಆ ನೋವನ್ನು ಅತ್ತೆ ಹೊರಗೆ ತೋರ್ಪಡಿಸದೆ ನುಂಗಿಕೊಂಡವರು. 
ಅವರಿಗೆ ತವರುಮನೆ ಅಂದರೆ ಬಲು ಪ್ರೀತಿ, ಸೊಸೆಯಂದಿರು, ಅಳಿಯಂದಿರ (ಅವರ ಅಣ್ಣ ತಮ್ಮನ ಮಕ್ಕಳು) ಬಗ್ಗೆ ಬಲು ಪ್ರೀತಿ. ನಮಗೂ ಅಷ್ಟೇ ಅವರ ಬಗ್ಗೆ ಮಮತೆ. ನಮ್ಮ ಮಗಳು ಅಕ್ಷರಿ ಜೊತೆ ಅವಳ ಬಾಲ್ಯದಲ್ಲಿ(ತವರಿನಲ್ಲಿ) ಮಗುವಾಗಿ ಆಟ ಆಡಿದ್ದರು. ಅಕ್ಷರಿಗೂ ಅವರೆಂದರೆ ಬಲು ಅಕ್ಕರೆ.  ನಮ್ಮ ಅಮ್ಮ ಮತ್ತು ಅತ್ತೆ ಪಟ್ಟಂಗಕ್ಕೆ ಕೂರುವುದನ್ನು ನೋಡುವುದೇ ಸೊಗಸು. ಅಮ್ಮನಿಗೆ ಅತ್ತಿಗೆ ಅಂದರೆ ಒಲವು. 


ಎಡದಿಂದ ಬಲಕ್ಕೆ ಅಕ್ಕ(ಗೀತಾ)ಅತ್ತೆ (ಪಾರ್ವತಿ) ಅಮ್ಮ (ಭಾರತಿ) ಅತ್ತೆ (ಪದ್ನಾವತಿ) ಅತ್ತೆ (ಸಾವಿತ್ರಿ) ನಿಂತವರು: ಅಕ್ಕ (ಮಂಗಲಾ) ಮತ್ತು ನಾನು ರುಕ್ಮಿಣಿಮಾಲಾ , 


ಕಳೆದ ೨೦೨೦ರಲ್ಲಿ ತವರಿಗೆ ಬಂದಾಗ ತೆಗೆದ ಪಟ. 
ಅತ್ತೆ ಹಿರಿ ಮೊಮ್ಮಗನ (ಡಾ. ಪ್ರಶಾಂತ) ಕೈ ಹಿಡಿದು ನಡೆಯುವ ವೀಡಿಯೋ ನೋಡುವಾಗ ಖುಷಿಯಾಗುತ್ತದೆ. ಇದನ್ನು ಕಳೆದ ವರ್ಷ ಅವರ ಸೊಸೆ (ಮೂರನೇ ಮಗ ತಿರುಮಲೇಶ್ವರನ ಪತ್ನಿ) ಉಷಾ ಚಿತ್ರೀಕರಿಸಿರುವುದು.

ಅವರ ಒಬ್ಬ ಮಗ (ಶಂಭು ಉಪಾಧ್ಯಾಯ) ಸೊಸೆ (ವಿನೋದ) ಅಮೇರಿಕಾ ವಾಸಿ. ಅಲ್ಲಿಗೆ ಅತ್ತೆ ಮಾವ (ಸುಮಾರು ಅಂದಾಜು ಇಪ್ಪತ್ತು ವರ್ಷದ ಹಿಂದೆ) ಹೋಗಿ ಅಲ್ಲಿ  ಕೆಲವು ತಿಂಗಳು ತಂಗಿದ್ದು, ಊರು ನೋಡಿ ಸಂತಸಪಟ್ಟವರು. 
ಅತ್ತೆ ಪ್ರತೀದಿನ ಬೆಳಗ್ಗೆ ಎದ್ದು ಏನು ಕೆಲಸ ಮಾಡಲಿ ಎಂದು ಕೇಳುತ್ತಿದ್ದರಂತೆ. ಬಚ್ಚಲು ಒಲೆ ಉರಿ ಹಾಕುವುದು, ಅಡಿಕೆ ಸುಲಿಯುವುದು, ಹಸಿ ಅಡಿಕೆ ಭಾಗ ಮಾಡುವುದು, ತರಕಾರಿ ಕೊರೆದು ಕೊಡುವುದು ಎಲ್ಲ ಮಾಡುತ್ತಿದ್ದರಂತೆ. ಅತ್ತೆ ಅವರ ಕಿರಿ ಮಗ (ಹರಿಕೃಷ್ಣ) ಸೊಸೆ (ಅನ್ನಪೂರ್ಣ) ಜೊತೆ ಖುಷಿಯಿಂದ ಇದ್ದರು. ಮಗಸೊಸೆ ಅವರನ್ನು ಬಲು ಅಕ್ಕರೆಯಿಂದ ನೋಡಿಕೊಂಡಿದ್ದರು.  ಅತ್ತೆಯ ಜೀವನೋತ್ಸಾಹ ನೋಡುವಾಗ ಬಹಳ ಖುಷಿಯಾಗುತ್ತಲಿತ್ತು. ನಮ್ಮ ಪ್ರೀತಿಯ ಅತ್ತೆ ಯಾರಿಂದಲೂ ಚಾಕರಿ ಮಾಡಿಸಿಕೊಳ್ಳದೆ ಬದುಕಿರುವಷ್ಟು ಕಾಲವೂ ಇತರರಿಗೆ ತಮ್ಮ ಕೈಲಾದ ಸೇವೆ  ಮಾಡಿಯೇ ಈ ಲೋಕ ಬಿಟ್ಟು ತೆರಳಿದವರು. ಅವರಿಗೆ ನಮ್ಮೆಲ್ಲರ (ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು, ಅಳಿಯಂದಿರು) ನುಡಿನಮನ. ಅವರ ಉತ್ತರಕ್ರಿಯೆಯಲ್ಲಿ  ನಾವೆಲ್ಲರೂ ಭಾಗಿಯಾಗಿದ್ದೆವು.. ಅತ್ತೆ ನಮ್ಮ ನೆನಪಿನಲ್ಲಿ ಸದಾ ಚಿರಸ್ಮರಣೀಯರು.. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ