ಮಂತ್ರಾಲಯಕ್ಕೆ ಹೋಗಬೇಕು ಎಂದು ನಾವು ಒಂದು ವರ್ಷದಿಂದ ಅಂದುಕೊಂಡಿದ್ದೆವು. ಆ ಸುಸಮಯ ಬಂದೇ ಬಂತು. ಅಕ್ಕ ಭಾವ ಕೇವಲ ಒಂದು ವಾರದಲ್ಲಿ ತಾರೀಕು ನಿಶ್ಚಯಿಸಿ, ತಂಗಿ ಬಾಡಿಗೆ ಕಾರು ಕಾದಿರಿಸುವ ಜವಾಬ್ದಾರಿ ವಹಿಸಿಕೊಂಡಳು. ತಾರೀಕು ೨೨-೯-೨೨ರಂದು ಸಂಜೆ ಅಕ್ಕ ಭಾವ ಕಾರಿನಲ್ಲಿ ಮೈಸೂರಿಗೆ ಬಂದು ನನ್ನನ್ನು ಹತ್ತಿಸಿಕೊಂಡು ಬೆಂಗಳೂರಿನ ಮುತ್ಯಾಲನಗರದಲ್ಲಿರುವ ತಂಗಿ ಮನೆಗೆ ರಾತ್ರೆ ೯.೪೫ಕ್ಕೆ ತಲಪಿದೆವು. ಬೆಂಗಳೂರು ಮೈಸೂರು ರಸ್ತೆ ಈಗ ಬಹಳ ಚೆನ್ನಾಗಿ ಆಗಿದೆ. ೨ ಗಂಟೆಯಲ್ಲಿ ಕೆಂಗೇರಿ ತಲಪಲು ಸಾಧ್ಯವಾಗುತ್ತದೆ.
ತಾರೀಕು ೨೩.೯.೨೨ರಂದು
ಬೆಳಗ್ಗೆ ೫.೧೫ ಗಂಟೆಗೆ ನಾವು ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ೭ ಮಂದಿ (ಬಾಲಸುಬ್ರಹ್ಮಣ್ಯ-ಮಂಗಲಗೌರಿ,
ರವಿಶಂಕರ-ಸವಿತಾ, ನರಸಿಂಹಕುಮಾರ್- ಶಾರದಾ, ರುಕ್ಮಿಣಿಮಾಲಾ.) (ಸಂಘಸಂಸ್ಥೆಗಳ ಲೆಕ್ಕಪರಿಶೋಧನೆಯ ಕಾರ್ಯದೊತ್ತಡದಿಂದ
ಅನಂತನಿಗೆ ಹೊರಡಲು ಸಾಧ್ಯವಾಗಿರಲಿಲ್ಲ) ಮಂತ್ರಾಲಯದೆಡೆಗೆ ಹೊರಟೆವು.. ಬೆಂಗಳೂರಿನಿಂದ ಮಂತ್ರಾಲಯ
ಸುಮಾರು ೩೭೦ಕಿಮೀ. ದಾರಿ: ಯಲಹಂಕ- ಹೈದರಾಬಾದ್ ಹೈವೇ- ಅನಂತಪುರ- ಗೂಟಿ (ಗುತ್ತಿ)- ಅದೋನಿ- ಮಂತ್ರಾಲಯ
ಗೂಟಿ ಕಳೆದ ಮೇಲೆ ಎಲ್ಲಿ ನೋಡಿದರೂ ಕಲ್ಲುಬಂಡೆಗಳಿಂದ ಕೂಡಿದ ಪ್ರದೇಶ ಕಂಡೆವು. ದೊಡ್ಡ ಸಣ್ಣ ಬಂಡೆಕಲ್ಲುಗಳು ನೋಡಲು ಆಕರ್ಷಕವಾಗಿತ್ತು. ಕೆಲವೆಡೆ ‘ಬಂಡೆ’ ಕರಗಿರುವುದು
ಕಂಡಿತು. ಅದು ಯಾರ ‘ಕೈ’ವಾಡವೋ ತಿಳಿಯಲಿಲ್ಲ.
ಆದರೆ ದಾರಿ ಚೆನ್ನಾಗಿ ಇಲ್ಲದಿದ್ದರೂ ದಾರಿಯ ಇಕ್ಕೆಲೆಗಳಲ್ಲಿ ಕೃಷಿಭೂಮಿ ಕಂಡು, ಅಲ್ಲಿ ಬೆಳೆದ ಬೆಳೆ ನೋಡಿ ಸಂತೋಷಗೊಂಡೆವು. ದಾರಿಯುದ್ದಕ್ಕೂ ಬಯಲು ಪ್ರದೇಶ. ಎಕರೆಗಟ್ಟಲೆ ಸಮತಟ್ಟಾದ ಕೃಷಿಭೂಮಿ. ಅದರಲ್ಲಿ ಭತ್ತ, ಕಬ್ಬು, ಹತ್ತಿ, ಈರುಳ್ಳಿ, ಸಜ್ಜೆ,ಮೆಣಸು, ಟೊಮ್ಯಾಟೊ, ಕಡಲೆ ಹೀಗೆ ವೈವಿಧ್ಯ ಬೆಳೆಗಳು ನಳನಳಿಸುತ್ತಲಿದ್ದುವು. ಅಲ್ಲಿ ಬಹುಶಃ ಹತ್ತಿ ಪ್ರಮುಖ ಬೆಳೆಯಾಗಿರಬೇಕು. ರೈತನ ಶ್ರಮವನ್ನು ನೋಡಿ ಹೆಮ್ಮೆ ಪಟ್ಟುಕೊಂಡೆವು.
ಮಂತ್ರಾಲಯ
ಕೋಣೆಯಲ್ಲಿ ನಮ್ಮ ಚೀಲ ಇಟ್ಟು, ದೇವಾಲಯಕ್ಕೆ ಹೋದೆವು. ಮೊದಲಿಗೆ ಮಂಚಾಲಮ್ಮನ ದರ್ಶನ ಪಡೆದೆವು. ಮಂಚಾಲಮ್ಮನಿಗೆ ನಮ್ಮ ಕೈಯಿಂದಲೇ ಆರತಿ ಮಾಡಿಸುತ್ತಾರೆ.
ಮಂತ್ರಾಲಯದ ಐತಿಹ್ಯ: ಮೊದಲು ಇಲ್ಲಿಗೆ ಮಂಚಾಲೆ ಎಂಬ ಹೆಸರಿತ್ತು. ಅಧಿದೇವತೆ ಮಂಚಾಲಾಂಬಿಕೆ ಆದ್ದರಿಂದ ಈ ಹೆಸರು ಬಂದಿರಬಹುದು. ಮಂಚಾಲೆ ಹಿರಣ್ಯಕಶಿಪುವಿನ ರಾಜ್ಯವಾಗಿತ್ತೆಂದೂ, ಮಂಚಾಲಾಂಬಿಕೆ ಆತನ ಕುಲದೇವತೆಯಾಗಿದ್ದಳೆಂದೂ, ಪ್ರಹ್ಲಾದ ಮಂಚಾಲಾಂಬಿಕೆಯನ್ನು ಪೂಜಿಸುತ್ತ, ಯಜ್ಞ ಯಾಗಾದಿಗಳನ್ನು ನಡೆಸಿದನೆಂದೂ
ಪ್ರತೀತಿ. ಇಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನವಿದೆ. ಎದುರಿಗೇ ಆಂಜನೇಯನ ವಿಗ್ರಹವಿದೆ. ರಾಘವೇಂದ್ರ ಗುರುಗಳು ಮಧ್ವಮತ ಸಂಪ್ರದಾಯಸ್ಥರು. ಅವರು ಇಲ್ಲಿ ಸಶರೀರರಾಗಿ ಕ್ರಿ.ಶ. ೧೬೭೧ ಶ್ರಾವಣ ಬಹುಳ ಬಿದಿಗೆ ಗುರುವಾರದಂದು ಬೃಂದಾವನಸ್ಥರಾದರು. ದೇಗುಲದ ಬಲಭಾಗದಲ್ಲಿ ಇದುವರೆಗೆ ಮಠದ ಸ್ವಾಮಿಗಳಾಗಿ, ನಿಧನರಾದವರ ಬೃಂದಾವನಗಳೂ ಇವೆ. ಅಲ್ಲಿಯೂ ನಿತ್ಯ ಪೂಜೆ ನಡೆಯುತ್ತದೆ.
ಮಹಾಮಂಗಳಾರತಿ ನೋಡಿ ನಾವು ದೇಗುಲದ ವತಿಯಿಂದ ನಡೆಸಲ್ಪಡುವ ಅನ್ನ ಪ್ರಸಾದ ಊಟ ಮಾಡಿದೆವು. (ಬ್ರಾಹ್ಮಣರಿಗೆಂದು ಪ್ರತ್ಯೇಕ ಊಟದ ವ್ಯವಸ್ಥೆ ಇದೆ.) ಬಾಳೆಲೆಯಲ್ಲಿ ಅನ್ನ ಸಾರು, ಪಲ್ಯ, ಪಾಯಸ, ಸಾಂಬಾರು, ಹಯಗ್ರೀವ, ಮೊಸರನ್ನದಿಂದ ಕೂಡಿದ ಪುಷ್ಕಳ ಭೋಜನ. ಇತ್ತೀಚೆಗೆ ಫೇಸ್ಬುಕ್ ಪುಟದಲ್ಲಿ, ಬಾಳೆಲೆಯಲ್ಲಿ ಊಟ ಮಾಡಿ, ಎಲೆ ತೊಳೆದಿಟ್ಟಂತೆ ಕಾಣುವ ಹಾಗೆ ಇರುವ ಪಟ ಬಂದಿತ್ತು. ಅಂದರೆ ಒಂದಗುಳನ್ನೂ ಬೀಸಾಕಬಾರದು ಎಂಬ ನಿಲುವು. ಅದರ ನೆನಪಾಗಿ ನಾನು ಊಟ ಮಾಡಿದ ಮೇಲೆ ಖಾಲಿ ಎಲೆಯ ಪಟ ತೆಗೆದೆ. (ಬೇಕಷ್ಟನ್ನು ಮಾತ್ರ
ಹಾಕಿಸಿಕೊಂಡು ತಟ್ಟೆ, ಎಲೆಯಲ್ಲಿ ಏನೂ ಬಿಡದೆ ಊಟ ಮಾಡುವುದು ನನಗೆ ಮೊದಲಿನಿಂದಲೂ ರೂಢಿ) ಉಪ್ಪು ಮಾತ್ರ ವಿಧಿಯಿಲ್ಲದೆ ಬಿಡಬೇಕಾಯಿತು. (ಹತ್ತು ಜನಕ್ಕೆ ಸಾಕಾಗುವಷ್ಟು ಉಪ್ಪು
ಸುರಿದಿದ್ದರು.
ದಾರಿಯಲ್ಲಿ ಸಾಗುತ್ತಿರಬೇಕಾದರೆ, ರಾಘವೇಂದ್ರ ಮಠದ ವತಿಯಿಂದ ನಡೆಸಲ್ಪಡುವ ಗೋಶಾಲೆಯ ನೂರಾರು ಗೋವುಗಳು ಸಂಜೆ ಸಾಲಾಗಿ ಗೋಶಾಲೆಗೆ ಹಿಂತಿರುಗುವ ಮನಮೋಹಕ ದೃಶ್ಯ ನೋಡಿ ಪುಳಕಿತರಾದೆವು.
ಚಿತ್ರಕೃಪೆ: ಅಂತರ್ಜಾಲ |
ಮಹಾಲಕ್ಷ್ಮಿ ದೇಗುಲ
ಆಂಜನೇಯ ದೇಗುಲದ ಹಿಂಭಾಗದಲ್ಲಿ ನೂರು ಹೆಜ್ಜೆ ದೂರದಲ್ಲಿ ಬಂಡೆಯಡಿಯಲ್ಲಿ ಮಹಾಲಕ್ಷ್ಮಿ ದೇಗುಲವಿದೆ. ಅಲ್ಲಿಗೆ ನಡೆದೆವು. (ಈಗ ಒಂದು ಬೈಕ್ ಆದರೂ ಇಲ್ಲಿ ಬಂದರೆ ಅಕ್ಕನಿಗೆ ಅದರಲ್ಲಿ ಹೋಗಬಹುದಿತ್ತು ಎಂದು ಮನದಲ್ಲಿ ಭಾವಿಸುವುದಕ್ಕೂ ಬೈಕ್ ಬರುವುದಕ್ಕೂ ಸರಿ ಹೋಯಿತು. ಆಗ ನನಗಾದ ಖುಷಿ
ವರ್ಣಿಸಲು ಸಾಧ್ಯವಿಲ್ಲ. ಆ ಬೈಕಿನಲ್ಲಿ ಅಕ್ಕ ದೇವಾಲಯಕ್ಕೆ ಹೋದಳು. ಮಹಾಲಕ್ಷ್ಮಿಯನ್ನು ನೋಡಿದ ಬಳಿಕ ಅಕ್ಕನನ್ನು ಅವನು ಆಂಜನೇಯ ದೇಗುಲದ ಬಳಿ ಇಳಿಸಿ ಹೋದನಂತೆ. ಸಹಾಯ ಮಾಡಿದ ಆ ಅಪರಿಚಿತ ಯುವಕನಿಗೆ ನಮಸ್ಕಾರ.) ದೇಗುಲದಲ್ಲಿ ಲಕ್ಷ್ಮೀ ಸಹಿತ ವೆಂಕಟೇಶ್ವರ
ವಿಗ್ರಹವಿದೆ.
ಅಲ್ಲಿಂದ ಹೊರಟು ದಾರಿಯಲ್ಲಿ ಗಿಲ್ಲಿಸಗೂರ್ ಕ್ಯಾಂಪ್ ಎಂಬಲ್ಲಿ ಪಂಚಮುಖಿ ಎಂಬ ಕಾಫಿ ಚಹಾ ಪೆಟ್ಟಿಗೆ ಅಂಗಡಿಯಲ್ಲಿ ಚಹಾ ಕಾಫಿ ಸೇವನೆಗಾಗಿ ನಿಲ್ಲಿಸಿದೆವು. ಎಲಿಶ -ತಾಯಪ್ಪ ದಂಪತಿ ನಗುಮೊಗದಿಂದ ರುಚಿಕಟ್ಟಾದ ಕಾಫಿ ಚಹಾ ತಯಾರಿಸಿ ಕೊಟ್ಟಿದ್ದರು.
ಬಿಚ್ಚಾಲೆ-ಬೃಂದಾವನ
ಅಪ್ಪಣ್ಣಾಚಾರ್ಯರ ಕಾರ್ಯಕ್ಷೇತ್ರದ, ಅವರು ಸ್ಥಾಪಿಸಿದ ಬೃಂದಾವನ ನೋಡಲು ನಾವು ಬಿಚ್ಚಾಲೆಗೆ ಹೋದೆವು. ಸ್ವಲ್ಪ ದಾರಿ ತಪ್ಪಿದ್ದರಿಂದ ನಾವು ಅಲ್ಲಿ ತಲಪುವಾಗ ಕತ್ತಲಾವರಿಸಿತ್ತು. ಅಲ್ಲಿ ತುಂಗಾಭದ್ರಾ ನದಿ ದಂಡೆಯಲ್ಲಿ ಬೃಂದಾವನ ಇದೆ, ಬಿಚ್ಚಾಲಮ್ಮನ ದೇಗುಲವಿದೆ. ತುಂಗೆ ರಭಸದಿಂದ ಹರಿಯುತ್ತಿದ್ದಳು. ಕತ್ತಲಾದುದರಿಂದ ನೀರಿನ ಬಳಿ ಹೋಗಲಾಗಲಿಲ್ಲ.
ಅರ್ಚಕರಾದ ಪ್ರಹ್ಲಾದಾಚಾರ್ಯರು ಅಲ್ಲಿಯ ಐತಿಹ್ಯವನ್ನು ನಮಗೆ ತಿಳಿಸಿದರು.
೧೨ ವರ್ಷ ಗುರುರಾಯರು ಇಲ್ಲಿ ವಾಸವಾಗಿದ್ದರು. ಅಪ್ಪಣ್ಣಾಚಾರ್ಯರು ಗುರುರಾಯರ ಪರಮಭಕ್ತರಾಗಿದ್ದರು. ಅವರಿಬ್ಬರೂ ಗಂಟೆಗಟ್ಟಲೆ ಚರ್ಚಿಸುತ್ತಿದ್ದರಂತೆ. ಈಗಲೂ ಅವರಿಬ್ಬರೂ ಅಲ್ಲಿ ಬಂದು ಮಾತಾಡಿಕೊಳ್ಳುತ್ತಾರೆ ಎಂಬುದು ನಂಬಿಕೆ.
ಅಪ್ಪಣ್ಣಾಚಾರ್ಯರು ಗುರುರಾಯರಿಗೆ ಚಟ್ನಿ ರುಬ್ಬುತ್ತಿದ್ದ ಕಲ್ಲು ಎಂದು ಹೇಳಲಾಗುವ ಒರಳುಕಲ್ಲು ಈಗಲೂ ಅಲ್ಲಿ ಕಾಣಬಹುದು.
ತುಂಗೆಯ ತಟದಲ್ಲಿ
ತಾರೀಕು ೨೪.೯.೨೦೨೨ರಂದು ಬೆಳಗ್ಗೆ ಬೇಗನೆ ಎದ್ದು ತಯಾರಾದೆವು. ನಮ್ಮ ಕೋಣೆಯ ಸನಿಹದಲ್ಲೇ ಇರುವ ತುಂಗಾಭದ್ರಾ ನದಿಗೆ ನಾವು ೬ಗಂಟೆಗೆ ಹೊರಟೆವು. ಅಲ್ಲಿ ಸ್ನಾನ ಮಾಡಲಿಲ್ಲ. ನೀರಿಗೆ ಇಳಿದು ಪ್ರೋಕ್ಷಣೆ ಮಾಡಿಕೊಂಡೆವು.
https://youtu.be/xjT3HP5_8ac
ಕನಕಾಭಿ಼ಷೇಕಅಕ್ಕ ಭಾವ ಕನಕಾಭಿಷೇಕ ಸೇವೆ ಮಾಡಿಸಲು ಚೀಟಿ ಮಾಡಿದ್ದರು. ಹಾಗಾಗಿ ನಾವು ಆ ಸಮಯಕ್ಕೋಸ್ಕರ ದೇಗುಲದಲ್ಲೇ ಕಾಲ ಕಳೆದೆವು. ಪಾದಪೂಜೆ,, ಕನಕಾಭಿ಼ಷೇಕ ಇತ್ಯಾದಿ ವಿವಿಧ ನಮೂನೆಯ ಸೇವೆ ಸಲ್ಲಿಸಲು ಚೀಟಿ ಪಡೆದವರನ್ನು ಒಂದು ಸಭಾಂಗಣಕ್ಕೆ ಕಳುಹಿಸುತ್ತಾರೆ. ೭.೩೦ಗೆ ನಾವು ಅಲ್ಲಿ ಕೂತೆವು. ೮ ಗಂಟೆಗೆ ಅರ್ಚಕರು ಬಂದು ಶಾಸ್ತ್ರೋಕ್ತವಾಗಿ ರಾಯರ ಪಾದುಕಾಪೂಜೆ, ಕನಕಾಭಿಷೇಕ ನೆರವೇರಿಸಿದರು.
ಕಲ್ಲು ಸಕ್ಕರೆ, ಮಿಠಾಯಿ ಮಾರತ್ತಲಿದ್ದ ವಿಕಲಚೇತನದವನೊಬ್ಬ ನಮ್ಮ ಎದುರು ಬಂದು ಈ ಪ್ರಸಾದ ತೆಗೆದುಕೊಂಡು ಸಹಾಯಮಾಡಿ ಎಂದು ಭಿನ್ನವಿಸಿದ. ಅಲ್ಲಿ ಭಿಕ್ಷೆ ಬೇಡುವವರ ಹಾವಳಿ ವಿಪರೀತವಾಗಿತ್ತು. ಅಂಥದ್ದರಲ್ಲಿ ಈ ಯುವಕ ಸ್ವಾಭಿಮಾನದಿಂದ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾನಲ್ಲ ಎಂದು ಖುಷಿಯಾಗಿ ನಾನು ಹಾಗೂ ಅಕ್ಕ ಅವನಿಂದ ನಾಲ್ಕು ಪೊಟ್ಟಣ ಪ್ರಸಾದ ಖರೀದಿಸಿದೆವು. ಇಲ್ಲೇ ಹತ್ತಿರದಲ್ಲಿರುವ ವೆಂಕಟೇಶ್ವರ ದೇಗುಲಕ್ಕೆ ಹೋಗಿ. ಅದನ್ನು ನೋಡದೆ ಹೋಗಬೇಡಿ ಎಂದು ಅವನು ಹೇಳಿದ.
ವೆಂಕಟೇಶ್ವರ ದೇವಾಲಯ
ಉಡುಪಿಭವನದಲ್ಲಿ ತಿಂಡಿ ಕಾಫಿಯಾಗಿ ಮಂತ್ರಾಲಯದ ಹಳ್ಳಿ ಮನೆಗಳ ಸಂದುಗೊಂದಿನಲ್ಲಿ ಸಾಗಿ ನಾವು ವೆಂಕಟೇಶ್ವರ ದೇಗುಲಕ್ಕೆ ಹೋದೆವು. ಈ ದೇಗುಲವನ್ನು ಗುರು ರಾಘವೇಂದ್ರ ಸ್ವಾಮಿಗಳು ಸ್ಥಾಪಿಸಿ, ಪೂಜೆ ಮಾಡುತ್ತಿದ್ದದ್ದು ಎಂದು ಅರ್ಚಕರಾದ ಶ್ರೀಪಾದ ಆಚಾರ್ಯರು ಹೇಳಿದರು.
ಗೋಶಾಲೆ
ಹಿಂದಿನ ದಿನ ಗೋಶಾಲೆಯ ಗೋವುಗಳ ದರ್ಶನ ಆದಾಗಲೇ ಅಲ್ಲಿಗೆ ಭೇಟಿಕೊಡಬೇಕೆಂದು ಭಾವಿಸಿದ್ದೆವು. ಒಂದು ಘಳಿಗೆ ಅಲ್ಲಿಗೆ ಹೊಕ್ಕು, ಹಾಲು ಕರೆಯುವ ಗೋವುಗಳನ್ನು ನೋಡಿದೆವು. ಬೇರೆಲ್ಲ ಮೇಯಲು ಹೊರಗೆ ಹೋಗಿದ್ದುವು. ೭ ಮಂದಿ ಕೆಲಸಗಾರರು ಸುಮಾರು ೩೦ ಗೋವುಗಳ ಹಾಲು ಕರೆಯುತ್ತಾರಂತೆ. ಹಾಲನ್ನು ಮಠಕ್ಕೇ ಕಳುಹಿಸುತ್ತಾರೆ. ಅಲ್ಲಿ ಅಭಿಷೇಕಕ್ಕೆ ಹಾಗೂ ಅನ್ನ ಪ್ರಸಾದದ ಮೊಸರನ್ನಕ್ಕೆ ಉಪಯೋಗಿಸುತ್ತಾರಂತೆ.
ಗೋಶಾಲೆಯಲ್ಲಿ ಸರಿ ಸುಮಾರು ೧೫೦೦ ಗೋವುಗಳಿವೆಯಂತೆ. ಯಥಾನುಶಕ್ತಿ ದೇಣಿಗೆ ಸಲ್ಲಿಸಿ ನಾವು ಅಲ್ಲಿಂದ ನಿರ್ಗಮಿಸಿದೆವು.
ಮಂತ್ರಾಲಯದಿಂದ ೯.೧೫ಕ್ಕೆ ಹೊರಟೆವು. ಈ ಸಲ ಗೂಗಲಣ್ಣನ ಸಹಾಯ ಇಲ್ಲದೆಯೇ ಸರಿದಾರಿಯಲ್ಲಿ ಸಾಗಿದೆವು. ದಾರಿಯಲ್ಲಿ ಟೊಮ್ಯಾಟೊ ಹೊಲದ ಬಳಿ ಗಾಡಿ ನಿಲ್ಲಿಸಿ ಹೊಲದೊಳಗೆ ಹೋದೆವು. ಅಲ್ಲಿ ಟೊಮ್ಯಾಟೊ ಕೊಂಡೆವು. ಧನಲಕ್ಷ್ಮೀ ಹಾಗೂ ಶೇಖರ ಎಂಬ ಕಾರ್ಮಿಕರು ಟೊಮೆಟೊ ಕೊಯಿಲು ಮಾಡುತ್ತಲಿದ್ದರು. ಶಂಕರ ಭಂಡ ಎಂಬವರಿಗೆ ಸೇರಿದ ಹೊಲವಂತೆ ಅದು. ನಾವು ಅವರಿಂದ ಬಿಳ್ಕೊಂಡು ಕಾರು ಹತ್ತಿದೆವು. ಆಗ ಶೇಖರ ಓಡಿ ಬಂದು ಒಂದು ಸೌತೆಕಾಯಿ ಕೊಟ್ಟು, ಒಂದೇ ಇದ್ದದ್ದು ಎಂದರು. ಅವರ ಆ ಪ್ರೀತಿಗೆ ನಮೋ ನಮಃ.
ಸಸ್ಯಾಹಾರಿ ಹೊಟೇಲ್ ಹುಡುಕುತ್ತ ಸಾಗಿದೆವು. ಒಂದು ಹೊಟೇಲ್ ಪಕ್ಕ ನಿಲ್ಲಿಸಿದಾಗ, ಅದು ಸಸ್ಯ, ಮಾಂಸ ಎರಡೂ ಇರುವಂಥದ್ದೆಂದು ತಿಳಿದು, ಮುಂದೆ ಯಾವ ಹೊಟೇಲಿದೆ ಎಂದು ಅಲ್ಲಿಯ ಕಾವಲುಗಾರನನ್ನು ಕೇಳಿದಾಗ, ವಿವಾಹ ಭೋಜನ ಎಂಬ ಹೆಸರು ಹೇಳಿದ. ವಿವಾಹ ಭೋಜನ ಹೆಸರೇ ಆಕರ್ಷಕ, ಹೆಸರಿನ ಮೋಡಿಗೆ ಬಿದ್ದ ನಾವುಗಳು ಹಿಂದುಮುಂದೆ ಯೋಚಿಸದೆ ಆ ಹೊಟೇಲ್ ಒಳಹೊಕ್ಕು ಊಟಕ್ಕೆ ಕೂತೆವು. ಮೊದಲಿಗೆ ಜಿಲೇಬಿ ಬಂತು. ಜಿಲೇಬಿ ಖಾಲಿ ಮಾಡಿ ಅವರ ಆಹಾರದ ವಿವರವಿರುವ ಕಡತ ನೋಡಿದಾಗ ನಾವು ಪೆಚ್ಚಾದೆವು. ಅಲ್ಲಿಯೂ ಎರಡೂ ಆಹಾರ ಪದ್ದತಿ ಇತ್ತು! ಹಾಗಾಗಿ ವಿವಾಹ ಭೋಜನ ರುಚಿಸಲಿಲ್ಲ! ಊಟ ಮಾಡಿ ಅಲ್ಲಿಂದ ಮುಂದೆ ಸಾಗಿದಾಗ ಬೆನ್ನು ಬೆನ್ನು ಸಸ್ಯಾಹಾರಿ ಹೊಟೇಲುಗಳ ಹೆಸರು ಕಂಡು ಪರಿತಪಿಸಿದೆವು.
ವಿವಾಹ ಭೋಜನವುಂಡು ಗಂಡಸರು ಗಾಢ ನಿದ್ದೆಗಿಳಿದರು. ನಾವು ಹರಟುತ್ತ ಇದ್ದೆವು. ಏನೋ ಮಾತಿಗೆ ನಮ್ಮ ನಗೆಯು ಸ್ಫೋಟಗೊಂಡಾಗ ಮಲಗಿದ್ದವರೆಲ್ಲ ಎಚ್ಚರಗೊಂಡರು!
ಮುಂದೆ ನಾವು ಆಂದ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಗ್ರಾಮವಾದ ಲೇಪಾಕ್ಷಿಗೆ ಹೋದೆವು. ಹಿಂದೂಪುರದಿಂದ ೧೫ಕಿಮೀ, ಬೆಂಗಳೂರಿನಿಂದ ೧೩೦ಕಿಮೀ. ಅಲ್ಲಿ ವಿವಿಧ ಶಿಲ್ಪಗಳ ಕೆತ್ತನೆಗಳಿಂದ ಕೂಡಿದ ಭವ್ಯವಾದ ಪ್ರಾಚೀನ ದೇವಾಲಯವಿದೆ.
ಲೇಪಾಕ್ಷಿ ದೇಗುಲ ವಿಜಯನಗರದ ವಾಸ್ತುಶಿಲ್ಪ ಶೈಲಿಯಲ್ಲಿದ್ದು ೭ ಪ್ರಾಕಾರಗಳನ್ನು ಹೊಂದಿದೆ. ಆದರೆ ಈಗ ೩ ಪ್ರಾಕಾರಗಳು ಮಾತ್ರ ಉಳಿದುಕೊಂಡಿದೆ. ಒಟ್ಟು ೭೦ ಕಂಬಗಳಿದ್ದು, ಅವುಗಳಲ್ಲಿ ವಿವಿಧ ರೀತಿಯ ಶಿಲ್ಪಗಳು ಕೆತ್ತನೆಗೊಂಡಿವೆ. ಒಂದು ಕಂಬದ ತಳಭಾಗ ಮತ್ತು ನೆಲದ ನಡುವೆ ಅಂತರವಿದ್ದು, ತೆಳುವಾದ ಬಟ್ಟೆ ಅಥವ ಕಾಗದ ತೂರಿಸಬಹುದು. ಛಾವಣಿಯಲ್ಲಿ ನೈಸರ್ಗಿಕ ಬಣ್ಣದಿಂದ ಚಿತ್ರಿಸಿದ ವರ್ಣಚಿತ್ರಗಳು ಗಮನಸೆಳೆಯುತ್ತವೆ.
ನಾಗಲಿಂಗ ಶಿಲ್ಪ
ಏಳು ಹೆಡೆಗಳಿರುವ ನಾಗಲಿಂಗ ಶಿಲ್ಪ ನೋಡಲು ಬಹಳ ಸುಮ್ದರವಾಗಿದೆ. ಈ ಶಿಲ್ಪ ನಿರ್ಮಾಣಗೊಂಡದ್ದು ಅತ್ಯಲ್ಪ ಕಾಲದಲ್ಲಿ ಎಂದು ಇತಿಹಾಸ ಹೇಳುತ್ತದೆ. ಅದರ ಒಂದು ಪಾರ್ಶ್ವದಲ್ಲಿ ಗಣೇಶನ ವಿಗ್ರಹ ಇದೆ.
ಅಲ್ಲಿ ಅಪೂರ್ಣಗೊಂಡ ಕಲ್ಯಾಣಮಂಟಪ ಇದೆ. ಅದರ ಕಂಬದಲ್ಲೂ ಕೆತ್ತನೆಗಳಿವೆ. ಕಲ್ಯಾಣಮಂಟಪದ ಹಿಂದೆ ಒಂದು ದಂತ ಕಥೆಯಿದೆ. ವಿರೂಪಣ್ಣ ನಾಯಕ ಕಲ್ಯಾಣಮಂಟಪದ ನಿರ್ಮಾಣಕ್ಕೆ ರಾಜ್ಯದ ಖಜಾನೆಯನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು ಮಂತ್ರಿ ಅಚ್ಯುತರಾಯನಿಗೆ ದೂರು ಸಲ್ಲಿಸಿದ. ಮಂತ್ರಿಯ ದೂರು ಕೇಳಿದ ರಾಜ, ವಿರೂಪಣ್ಣ ನಾಯಕನ ಕಣ್ಣು ಕೀಳುವಂತೆ ಸೈನಿಕರಿಗೆ ಹೇಳುತ್ತಾನೆ. ಇದರಿಂದ ನೊಂದ ವಿರೂಪಣ್ಣ ನಾಯಕ ತಾನೇ ತನ್ನ ಕಣ್ಣುಗಳನ್ನು ಕಿತ್ತು ಮುಂಭಾಗದ ಗೋಡೆಗೆ ಎಸೆಯುತ್ತಾನೆ. ಈ ಚಿಹ್ನೆ ಈಗಲೂ ಗೋಡೆಯಲ್ಲಿ ಇದೆ ಎಂಬುದು ಪ್ರತೀತಿ. ಅಲ್ಲಿಗೆ ಕಲ್ಯಾಣ ಮಂಟಪದ ಕೆಲಸವೂ ನಿಂತುಬಿಟ್ಟಿತು.
ಒಂದು ಪಾರ್ಶ್ವದಲ್ಲಿ ಒಂದು ಶಿವಲಿಂಗ ಕಾಣುತ್ತದೆ. ಅಲ್ಲಿ ಒಂದು ನಾಯಿ ನಿಂತಿತ್ತು. ಪಟಕ್ಕೆ ಚಂದವಾಗಿ ಫೋಸು ಕೊಟ್ಟಿತು.
ನಂದಿ
ದೇಗುಲಕ್ಕೆ ಹೋಗುವ ರಸ್ತೆಯಲ್ಲಿ ದೊಡ್ಡದಾದ ನಂದಿ ಇದೆ. ಏಕಶಿಲೆಯಲ್ಲಿ ಕೆತ್ತಿದ ಈ ನಂದಿವಿಗ್ರಹ ೧೬ ಅಡಿ ಎತ್ತರ, ೨೭ ಅಡಿ ಉದ್ದವಿದ್ದು, ಇದು ಜಗತ್ತಿನಲ್ಲಿ ಅತಿ ಎತ್ತರದ ನಂದಿ ಎಂದು ಹೆಸರು ಪಡೆದಿದೆ.
ಜಟಾಯು
ಎತ್ತರದ ಬಂಡೆ ಮೇಲೆ ಹದ್ದಿನ (ಜಟಾಯು) ಪ್ರತಿಮೆ ನಂದಿ ಬಳಿಯಿಂದ ಸುಂದರವಾಗಿ ಕಾಣುತ್ತದೆ. ಅಲ್ಲಿಗೆ ನಾವು ಹತ್ತಲಿಲ್ಲ. ದೂರದಿಂದಲೇ
ನೋಡಿ ತೃಪ್ತಿ ಹೊಂದಿದೆವು.
ಮರಳಿ ಮನೆಗೆ
೨೫.೯.೨೦೨೨ರಂದು ಅಕ್ಕ ಭಾವನ ಜೊತೆ ಅಕ್ಜನ ಮಗಳ ಮನೆಗೆ ಬೆಳಗ್ಗೆ ಹೊರಟಾಗ, ನನ್ನ ಚರವಾಣಿ ತಂಗಿ ಮನೆಯಲ್ಲೇ ಬಾಕಿಯಾಗಿದ್ದ ವಿಷಯ ತಿಳಿಸಿ, ಅಲ್ಲೇ ನಿಲ್ಲಿ ತಂದು ಕೊಡುವೆವು ಎಂದಾಗ, ನಾವು ಅಲ್ಲೇ ಕಾರು ನಿಲ್ಲಿಸಿದೆವು. ಭಾವ ಸ್ಕೂಟರಲ್ಲಿ ೨೦ ನಿಮಿಷದಲ್ಲಿ ಮೊಬೈಲ್ ತಂದು ಕೊಟ್ಟ. ಅವನಿಗೆ ಅನವಶ್ಯ ಕೆಲಸ ಕೊಟ್ಟದ್ದಕ್ಕೆ ಸಂಕಟವಾಯಿತು. ಮತ್ತೆ ಹೊರಟು ಅಕ್ಕನ ಮಗಳ ಮನೆ ಕೆಂಗೇರಿ ತಲಪಿ ಅಲ್ಲಿ ಊಟ ಮಾಡಿದೆವು. ಮಧ್ಯಾಹ್ನ ೧.೩೦ ಗಂಟೆಗೆ ಅಲ್ಲಿಂದ ಹೊರಟು ಮೈಸೂರಿಗೆ ತಲಪಿದಾಗ ೩.೩೦ ಗಂಟೆ. ಮಗಳು ಅಕ್ಷರಿ ಮನೆಯಲ್ಲಿ ನನ್ನನ್ನಿಳಿಸಿ ಕಾಫಿಂಡಿಯಾಗಿ ಅವರು ಅವರೂರು ಸುಳ್ಯಕ್ಕೆ ತೆರಳಿದರು. ಅಲ್ಲಿಗೆ ನಮ್ಮ ಮಂತ್ರಾಲಯ ಯಾತ್ರೆ ಸುಖಕರವಾಗಿ ಸಂಪನ್ನಗೊಂಡಿತು. ಕಾರುಬಾಡಿಗೆ, ಊಟ, ವಸತಿ ಸೇರಿ ನಮಗೆ ತಲಾ ಒಟ್ಟು ಸರಿಸುಮಾರು ರೂ. ೩೫೧೦ ಖರ್ಚಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ