ಮಂಗಳವಾರ, ನವೆಂಬರ್ 22, 2022

ಮೇರುತಿ ಏರುತಿ (ಮೈಸೂರಿನಿಂದ ಕುದುರೆಮುಖದೆಡೆಗೆ ಭಾಗ ೨)

 ಸಮಾರೋಪ ಸಮಾರಂಭ

  ತಾರೀಕು ೧೩-೧೧-೨೨ರಂದು  ಹೆಚ್ಚಿನವರೂ ಸಂಜೆಯೇ ಅವರವರ ಊರಿಗೆ ಹೋಗುವವರಿದ್ದ ಕಾರಣ ಒಂದು ದಿನ ಮೊದಲೇ ಸಮಾರೋಪ ಸಮಾರಂಭವನ್ನು ಏರ್ಪಡಿಸಿದ್ದರು.   ಭಾಗವಹಿಸಿದ ಚಾರಣಿಗರಿಗೆ ಸರ್ಟಿಫಿಕೇಟ್ ಕೊಡುವ ಜೊತೆಗೆ ನಡು ನಡುವೆ ಏಕತಾನತೆ ತಪ್ಪಿಸುವ ಸಲುವಾಗಿ ಚಾರಣಿಗರಿಂದಲೇ ಹಾಡು, ನೃತ್ಯ, ಲಾವಣಿಪದ, ಮನರಂಜನ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿದ್ದರು.  ಒಬ್ಬ ಹಿರಿಯರಂತೂ ನಾಗಿಣಿ ನೃತ್ಯವನ್ನು ಬಹಳ ಉತ್ಸಾಹದಿಂದ ಪ್ರದರ್ಶಿಸಿದಾಗ, ಒನ್ಸ್ ಮೋರ್ ಎಂಬ ಕೂಗು ಕೇಳಿಸಿತು.  ಸರ್ಟಿಫಿಕೇಟನ್ನು ಬಹಳ ಚೆನ್ನಾಗಿ ವಿನ್ಯಾಸ ಮಾಡಿ ಅಚ್ಚು ಹಾಕಿದ್ದರು..  

 ಬೆಂಗಳೂರಿಂದ ಬಂದು ಇಲ್ಲಿ ಅಡುಗೆ ನೇತೃತ್ವ ವಹಿಸಿದ ಉದಯ, ಶಂಕರ,ಕಿರಣ ಹಾಗೂ ಪಾತ್ರೆ ಪಗಡ ಸ್ವಚ್ಚತೆಯ ಉಸ್ತುವಾರಿ ವಹಿಸಿದ ಗಿರಿಜ ಲಲಿತ ಅವರನ್ನು ವೇದಿಕೆಗೆ ಕರೆದು ನೆನಪಿನ ಕಾಣಿಕೆ ಕೊಟ್ಟದ್ದು ಎಲ್ಲಕ್ಕಿಂತಲೂ ಹೆಚ್ಚು ಖುಷಿ ಕೊಟ್ಟ ಸಂದರ್ಭವಾಗಿತ್ತು. ದೃಶ್ಯ ನೋಡುತ್ತ ಇದ್ದಂತೆ ಆನಂದಭಾಷ್ಪ ಉಕ್ಕಿತು. ಹೌದು. ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆ ಎರಡು ವಿಷಯ ಸಮರ್ಪಕವಾಗಿ ಸಾಗಿದರೆ ಮಾತ್ರ ಪರಿಪೂರ್ಣತೆ ಕಾಣಲು ಸಾಧ್ಯ. ಅಡುಗೆಯವರು ನಾಲ್ಕು ದಿನವೂ ಬಹಳ ಪ್ರೀತಿಯಿಂದ ಬೆಳಗಿನ ಝಾವ ಎದ್ದು ರುಚಿಕರವಾದ ಬಗೆ ಬಗೆಯ ಪಾಕೇತನದಿಂದ ಅಡುಗೆ ತಯಾರಿಸಿ ನಮ್ಮ ಹೊಟ್ಟೆದೇವರನ್ನು ಸಂತೃಪ್ತಿ ಪಡಿಸಿದ್ದರು. ಅವರ ಕೆಲಸವನ್ನು ಗುರುತಿಸಿ ಗೌರವ ಸಮರ್ಪಣೆ ಮಾಡುವುದು ವಿರಳ. ಇಲ್ಲಿ ಆ ಕೆಲಸ ಮಾಡಿದ್ದು ಮಾದರಿ ಎನಿಸಿತು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತ್ರೈರತ್ನಭವನದ ವ್ಯವಸ್ಥಾಪಕರಾದ    ಪ್ರಕಾಶ ಜೈನ್ (ಗ್ರಾಮಪಂಚಾಯತಿ ಸದಸ್ಯರೂ ಕೂಡ) ಒಳಿತು ಮಾಡು ಮನುಷ, ನೀನಿರುವುದು ಮೂರು ದಿವಸ ಎಂಬ ಹಾಡಿನೊಂದಿಗೆ ಪ್ರಾರಂಭಿಸಿ, ಸಮಾಜದ ಋಣ ತೀರಿಸುವ ಬಗೆ ಇತ್ಯಾದಿ ವಿಷಯಗಳ ಬಗ್ಗೆ ಬಹಳ ಚೆನ್ನಾಗಿ ಮಾತಾಡಿ, ಗೆಳೆತನದ ಮಹತ್ತ್ವದ ಹಾಡಿನೊಂದಿಗೆ ಮಾತು ಮುಗಿಸಿದರು. ಯೂಥ್ ಹಾಸ್ಟೆಲ್ ಮಂಗಳೂರು ಶಾಖೆಯ ಸದಸ್ಯರನೇಕರು ಕಾರ್ಯಕರ್ತರಾಗಿ ಬಂದು ಚಾರಣ ತಂಡವನ್ನು ಮುನ್ನಡೆಸಿದ ಪುನೀತ್, ಜ್ಯೋತಿರ್ಲಿಂಗಪ್ಪ, ಕೇಶವ ಸುವರ್ಣ, ಚನ್ನಕೇಶವ, ಅಮೃತ ಭಂಡಾರಿ, ಪಲ್ಲವಿ ಗುಲ್ವಾಡಿ,ವಿ ಶಂಕರ್, ಪ್ರಶಾಂತಕೃಷ್ಣ , ಪ್ರಶಾಂತ ಹಾಗೂ ಶಿಬಿರದಲ್ಲಿಯ ಉಸ್ತುವಾರಿ ವಹಿಸಿದ ವಿಕೆ ಮೂರ್ತಿ,ದೀಪಕ್ ಗುಲ್ವಾಡಿ, ಶಾಂತಾರಾಮ, ರಾಜಕುಮಾರ್, ಲಲಿತರಜನನೀಶ್, ಋಷಿಕೇಶ, ಗಾಯತ್ರಿಗಿರಿಧರ ಕಾಮತ್, ರೆನಾಲ್ಡ್ ಅವರೆಲ್ಲರೂ ತಮ್ಮ ಕೆಲಸ ಬದಿಗೊತ್ತಿ ನಾಲ್ಕೈದು ದಿನ ಹಗಲಿರುಳು ಸೇವೆ ಸಲ್ಲಿಸಿದ್ದರು. ಅವರೆಲ್ಲರಿಗೂ ಕೃತಜ್ಞತಾ ಸಮರ್ಪಣೆ ಅರ್ಹವಾಗಿಯೇ ಸಲ್ಲಬೇಕು. ಯೂಥ್ ಹಾಸ್ಟೆಲಿನ ಮಂಗಳೂರು ಶಾಖೆಯ ಅಧ್ಯಕ್ಷರಾದ ಸುದರ್ಶನ ಪೈ, ಮನಮೋಹನ, ಕಾರ್ಯದರ್ಶಿ ರಾಧೇಶ್ಯಾಮ, ಕಾರ್ಯನಿರ್ವಾಹಕರಾದ ರವೀಂದ್ರ ಅರೂರ್ ಉಪಸ್ಥಿತರಿದ್ದರು.
   ನಮ್ಮ ತಂಡದ ಪಟ ತೆಗೆದರು. ನಾವು ಮೈಸೂರು ಗುಂಪಿನ ಪಟ ತೆಗೆಸಿಕೊಂಡೆವು. 

ಸಮಾರೋಪ ಕಲಾಪ ಮುಗಿದು, ನಾಳೆಯ ಚಾರಣದ ಬಗ್ಗೆ ಮಾಹಿತಿ ವಿವರಿಸಿ ಊಟಕ್ಕೆ ದೌಡು. ರಾತ್ರೆ ಊಟ (ಕಡ್ಲೆ ಪಾಯಸ, ಗೀರೈಸ್, ಗಸಿ, ಪಲ್ಯ, ಅನ್ನ, ಸಾಂಬಾರು,ಸಂಡಿಗೆ, ಮಜ್ಜಿಗೆ, ಬಾಳೆಹಣ್ಣು) ಅದ್ದೂರಿಯಾಗಿ ನಡೆಯಿತು. ತದನಂತರ ಸೊಂಪಾದ ನಿದ್ದೆ.

ಮೇರುತಿ ಏರುತಿ

ತಾರೀಕು ೧೩.೧೧.೨೨ ರಂದು ೪ಗಂಟೆಗೆ ಗಂಟೆನಾದ ಮೊಳಗಿದಾಗ ಎದ್ದು ತಯಾರಾದೆವು.‌ಬೆಳಗ್ಗೆಯ ಚಹಾ ಇರಲಿಲ್ಲ. .೩೦ಗೆ ತಿಂಡಿ (ಸೆಟ್ ದೋಸೆ ಚಟ್ನಿ, ಸಾಂಬಾರು, ಕೇಸರಿಭಾತ್ ಕಾಫಿ, ಚಹಾ)ತಿಂದು, ಬುತ್ತಿಗೆ ಹುಳಿಯನ್ನ ಹಾಕಿಕೊಂಡು ಗಂಟೆಗೆ ಹೊರಟು ನಿಂತೆವು. ಬೆಳಗ್ಗೆ ಎದ್ದು ೪.೩೦ಗೆ ತಿಂಡಿ ತಿಂದದ್ದು ಜೀವನದ ಪ್ರಥಮ ನಡೆದ ಹೊತ್ತದು! ಯಾರಾದ್ರೂ ತಿಂಡಿ ಮಾಡಿ ಬಡಿಸಿದ್ರೆ ಹೊತ್ತುಗೊತ್ತಿಲ್ಲದೆ ತಿನ್ನುವುದಕ್ಕೆ ಸದಾ ಸಿದ್ದವೇ! ಮೂರೂ ದಿನವೂ ಒಂದೊಂದು ಸಂಚಿಯಲ್ಲಿ ೨ಕಿತ್ತಳೆ, ಖರ್ಜೂರ(ಒಂದುದಿನ), ೨ ಮಜ್ಜಿಗೆ ಪೊಟ್ಟಣ, (ಎರಡು ಮಜ್ಜಿಗೆ ಬದಲು ಒಂದು ಹಣ್ಣಿನ ರಸದ ಪೊಟ್ಟಣ ಕೊಟ್ಟಿದ್ದರೆ ಆಗುತ್ತಿತ್ತು), ಇತ್ತು.( ಆ ಬಟ್ಟೆ ಸಂಚಿಯನ್ನು  ಸ್ವಾವಲಂಬಿ ಉತ್ಪನ್ನದ ನಾರಾಯಣ ವಿಶೇಷ ಮಕ್ಕಳ ಶಾಲೆಯ ಮಕ್ಕಳು ತಯಾರಿಸಿದ್ದಾರೆ. ತಮ್ಮ ಜೀವನ ಕಲಿಕೆಯ ಅಂಗವಾಗಿ ಅವರಿಗೆ ಈ ತರಬೇತಿ ಕೊಡುತ್ತಿದ್ದಾರೆ. ಮತ್ತು ಚೀಲ ಮಾರಾಟದ ಲಾಭಾಂಶವನ್ನು ಅಲ್ಲಿಯ ಮಕ್ಕಳ ನಿರ್ವಹಣೆಗಾಗಿ ಬಳಕೆ ಮಾಡುತ್ತಾರಂತೆ. ವಿಳಾಸ: ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ) ನಾರಾಯಣ ವಿಶೇಷ ಮಕ್ಕಳ ಶಾಲೆ, ತಲ್ಲೂರು, ಎನ್.ಎಚ್, ೬೬, ಕುಂದಾಪುರ ೫೭೬೨೩೦ www.tallur.org ಮಿಂಚಂಚೆ: tallurspecialschool@gmail.com ಚೀಲ ಅವಶ್ಯ ಇರುವವರು ಸಂಪರ್ಕಿಸಬಹುದು. ಒಳ್ಳೆಯ ಕೆಲಸಕ್ಕೆ ನೆರವಾಗಬಹುದು.  

ಎರಡು ಬಸ್ .೩೦ಗೆ ಬಂತು. ಅದರಲ್ಲಿ ಹತ್ತಿ ನಾವು ಸುಮಾರು ೧೩ಕಿಮೀ ಹಾದು ಹಳುವಳ್ಳಿ ತಲಪಿ ಅಲ್ಲಿಳಿದು ನಾವುಮೇರುತಿಯನ್ನು ಏರಲು .೩೦ಗೇ ಸಜ್ಜಾದೆವು. ಸುಮಾರು ಮೂರು ಕಿಮೀ ದೂರ ಏರು ರಸ್ತೆಯಲ್ಲೇ ನಡೆದೆವು. ಎರಡೂ ಕಡೆ ಕಾಫಿತೋಟ. ಏರು ರಸ್ತೆಯಾದ ಕಾರಣ ನಾವು ಮೊದಲ ಗೇರ್ ಬಿಟ್ಟು ಗಾಡಿ ಚಲಿಸಲು ಮುಂದಾಗಲೇ ಇಲ್ಲಯಾವ ಅವಸರವೂ ಇಲ್ಲದೆ ನಿಧಾನವಾಗಿ ಪ್ರಕೃತಿಯ ಸೊಬಗನ್ನು ನೋಡುತ್ತ ನಡೆದೆವು. ಎಲ್ಲೂ ಸಮತಳ ಸಿಗಲೇ ಇಲ್ಲ. ಎರಡು ಕಡೆ ತುಸು ವಿಶ್ರಾಂತಿ ಬಳಿಕ ಮುನ್ನಡೆದೆವು. ಅಲ್ಲಿ ಡ್ರೋನ್ ಕ್ಯಾಮರದಲ್ಲಿ ಸೆರೆ ಆದೆವು




ಮುಂದೆ ಮೂರು ಕಿಮೀ ಸಾಗಿದಮೇಲೆ ಅಲ್ಲಿಂದ ಎರಡು ಗುಡ್ಡ ಹತ್ತಿ ಮೇರುತಿ ತುದಿ ತಲಪಬೇಕು. ಅಲ್ಲಿಂದ ಮುಂದಕ್ಕೆ ಏಳೆಂಟು ಮಂದಿ ಬರದೆ ಅಲ್ಲೇ ಉಳಿದರು. ನಾವು ಕೆಲವರು ಒಬ್ಬರಿಗೊಬ್ಬರು ಹುರುಪು ತುಂಬುತ್ತ ಮುನ್ನಡೆದೆವು. ಗುಡ್ಡ ಹತ್ತುತ್ತ ಒಂದೆಡೆಗೆ ಹೊರನಾಡು ದೇಗುಲ ಹಾಗೂ ಇನ್ನೊಂದು ದಿಕ್ಕಿನಲ್ಲಿ ಕೆಳಗೆ ಟಾಟಾದವರ ಚಹಾ ತೋಟ ಸುಂದರವಾಗಿ ಕಾಣುತ್ತಲಿತ್ತು. ಮೇಲೆ ಹತ್ತುತ್ತಿದ್ದಂತೆ ಮಂಜು ಕಣ್ಣಾಮುಚ್ಚಾಲೆ ಆಟವಾಡುವುದನ್ನು ನೋಡಿದೆವು. ಗಾಳಿಯೂ ಜೋರಾಗಿತ್ತು. ರವಿಯ ಸುಳಿವೇ ಇರದೆ ಗುಡ್ಡ ಹತ್ತಲು ಹವೆ ಬಹಳ ಹಿತಕಾರಿಯಾಗಿತ್ತು. ಅಲ್ಲಲ್ಲಿ ನೀಲಕುರುಂಜಿ ಹೂವು ವಿರಳವಾಗಿ ಕಂಡೆವು




ಮೇರುತಿ ನಾ ಏರುತಿ ಎಂದು ಹೇಳಿಕೊಳ್ಳುತ್ತ ೧೧ ಗಂಟೆಗೆ ಮೇರುತಿ ಗುಡ್ಡದ ತುದಿ ತಲಪಿದೆವು. ಅಲ್ಲಂತೂ ಮಂಜಮ್ಮನಾಟ ಹಾಗೂ ವಾಯುಜೀವೋತ್ತಮರು ನಮ್ಮೊಡನೆ ಬೆರೆತು ಬಲು ಖುಷಿ ಕೊಟ್ಟರು.

ಗುಡ್ಡದ ಮೇಲೆ ಪುಟ್ಟದಾದ ಗಣಪತಿ ಗುಡಿ ಇದೆ. ಗಣಪನಿಗೆ ನಮಸ್ಕರಿಸಿ ಅಲ್ಲೇ ಅರ್ಧ ಗಂಟೆ ಕುಳಿತು ಗುಡ್ಡ ಹತ್ತಿ ಬಂದ ಆಯಾಸವನ್ನು ಪರಿಹರಿಸಿಕೊಂಡೆವುಸುತ್ತಲೂ ಹಸಿರು ಹೊದ್ದ ಶಿಖರಗಳನ್ನು ನೋಡುತ್ತ ಕೂರುವುದು ಬಹಳ ಚೇತೋಹಾರಿ ಅನುಭವ. ಯಾವ ಜಂಜಾಟವೂ  ಇಲ್ಲದೆ ಮೂರು ದಿನ ರಮಣೀಯವಾದ ಬೆಟ್ಟ ಹತ್ತಿ ನಿಸರ್ಗದ ಮಡಿಲಲ್ಲಿ ಕೂತು ಭೂದೇವಿಯ ಸೌಂದರ್ಯ ಮೀಮಾಂಸೆ ನಡೆಸಿದ್ದು  ನೆನಪಿನ ಪುಟದಲ್ಲಿ ಅಚ್ಚಳಿಯದೆ ದಾಖಲಾದ  ದಿನಗಳವು.



ಸುಬ್ರಹ್ಮಣ್ಯ ಅವರು ಚಳಿಯಲ್ಲಿ ನಡುಗುತ್ತ ಕೂತಿದ್ದರು. ಕೆಳಗಿಳಿಯಿರಿ ಎಂದರೆ ಅಲ್ಲಿಂದ ಏಳಲು ಮನವಿಲ್ಲ. ಚಳಿಯಾದರೇನು ಶಿವ, ಚಳಿಯ ಸುಖ ಬಿಡಲುಂಟೆ ಎಂದು ನಡುಗಿಗೊಂಡೇ ಕೂತೇ ಇದ್ದರು! ಹೆಚ್ಚಿನವರು ಚಳಿಗಾಳಿಯಲ್ಲೂ ಅಲ್ಲೇ ಬುತ್ತಿಯೂಟ ಮಾಡಿದರು

ನಮ್ಮೊಡನೆ ಮಾರ್ಗದರ್ಶಿಗಳಾಗಿ ಮೂವರು ಬಂದಿದ್ದರು. ಅವರು ಮಾತಾಡುತ್ತ, ನಿಮ್ಮ ತಂಡದವರ ವರ್ತನೆ ನಮಗೆ ಬಹಳ ಖುಷಿಯಾಯಿತು. ಈಗಿನ ಕೆಲವು ಯುವಕ ಯುವತಿಯರು ಹೇಳಿದ್ದು ಕೇಳುವುದೇ ಇಲ್ಲ. ಅಂಥವರ ಜೊತೆ ಮಾರ್ಗದರ್ಶಿಗಳಾಗಿ ಹೋಗಲು ನಾವು ಯಾರೂ ಸಿದ್ದರಿಲ್ಲಅಂಥವರ ಜೊತೆ ಹೋಗಿ ಕಹಿ ಅನುಭವ  ಸಾಕಷ್ಟು ಆಗಿದೆ ಎಂದರು. ಚಂದ್ರಶೇಖರ ಅವರ ಸಂಪರ್ಕ ಸಂಖ್ಯೆ 9449700218. ಮೇರುತಿ ಗುಡ್ಡ ಹತ್ತಲು   ಅರಣ್ಯ ಇಲಾಖೆಯ ಅನುಮತಿ ಬೇಡ

   ಚಂದ್ರಶೇಖರರು ಹೇಳಿದ ವಿಷಯಕ್ಕೆ ನಿಜಕ್ಕೂ ಚಿಂತನ ನಡೆಸಲೇಬೇಕಾಗಿದೆ. ಈಗಿನ ಪೀಳಿಗೆಯವರ ಅಂಥ ವರ್ತನೆಗೆ ಕಾರಣವೇನು? ನಾವೆಲ್ಲಿ ತಪ್ಪುತ್ತಿದ್ದೇವೆ? ಪೋಷಕರ ಶಿಕ್ಷಕರ ಕರ್ತವ್ಯವೇನು? ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ಕೊಡುವ ವಿಷಯದಲ್ಲಿ ಎಡವುತ್ತಿದ್ದೇವೆಯೆ? ಎಂದೆಲ್ಲ ಗಂಭೀರವಾಗಿ ಚಿಂತಿಸಬೇಕಾದ ವಿಷಯವಿದು. ಇದು ಹೀಗೆಯೇ ಮುಂದುವರಿದರೆ ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಯ.

೧೧.೩೫ಕ್ಕೆ ಅಲ್ಲಿಂದ ಕೆಳಗೆ ಇಳಿಯಲು ತೊಡಗಿದೆವು. ಇಳಿಯುವುದು ನನಗೆ ಬಹಳ ಖುಷಿ ಕೊಡುತ್ತದೆ. ಏರುವಾಗ ಮೊದಲ ಗೇರಿನಲ್ಲಿದ್ದರೆ, ಇಳಿಯುವಾಗ ಮೂರು ನಾಲ್ಕನೇ ಗೇರಿನಲ್ಲೇ ಇಳಿಯಲು ಬಲು ಖುಷಿ.  

ಎರಡು ಗುಡ್ಡ ಇಳಿದಾಗುವಾಗ ೧೨.೧೫. ಅಲ್ಲಿ ನಾವು ಊಟ ಮಾಡಿದೆವು. ಸುಮಾರು ಅರ್ಧ ಗಂಟೆ ಅಲ್ಲೇ ಕೂತಿದ್ದೆವು. ತಂಡದ ಪಟ ತೆಗೆಸಿಕೊಂಡು ಹೊರನಾಡು ಕಡೆಗೆ ಇಳಿಯಲು ಉಪಕ್ರಮಿಸಿದೆವು.



ಖಾಸಗೀ ಕಾಫಿತೋಟದೊಳಗಿನ ರಸ್ತೆಯಲ್ಲಿ ಸಾಗಲು ನಮಗೆ ಮಾರ್ಗದರ್ಶಿಗಳು ಅನುಮತಿ ದೊರಕಿಸಿದ್ದರು. ಕೆಲವು ಕಾಫಿಗಿಡಗಳು ಬಟ್ಟೆಯ ಬ್ಯಾಂಡೇಜಿನಿಂದಾವೃತವಾಗಿದ್ದದ್ದು ಕುತೂಹಲ ಮೂಡಿಸಿತು.  (ಮನುಷ್ಯರಿಗೆ ಕಾಲುಮುರಿದಾಗ ಬ್ಯಾಂಡೇಜ್ ಸುತ್ತುವರಲ್ಲ ಹಾಗೆಯೇ ತೋರುತ್ತಲಿತ್ತು!) ಕಾಫಿಗಿಡಕ್ಕೆ ರೋಗ ತಗುಲಿದಾಗ, ಅದು ಬೇರೆ ಗಿಡಗಳಿಗೆ ಹರಡಬಾರದೆಂದು ಔಷಧೋಪಚಾರ ಮಾಡಿ ಬಟ್ಟೆ ಸುತ್ತುವುದಂತೆ

 ಮುಂದೆ ಒಂದುತೊರೆ ಎದುರಾಯಿತು. ಶೂ ಒದ್ದೆಯಾಗದೆ ಅದನ್ನು ದಾಟಲು ಸಾಧ್ಯವಿಲ್ಲ. ಶೂ ತೆಗೆದು ಪುನಃ ಹಾಕುವ ಮನವಿಲ್ಲದೆ, ವಾಟರ್ ಪ್ರೂಪ್ ಹೌದಾ ಅಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ನೀರೊಳಗೆ ನಡೆದೆ. ನಿಜಕ್ಕೂ ಪರೀಕ್ಷೆಯಲ್ಲಿ ಶೂ ಪಾಸಾಯಿತು! ಅಲ್ಲಿ ಸುಮಾರು ಹೊತ್ತು ಕೂತಿದ್ದೆವು

ಸಂಜೆ .೩೦ಕ್ಕೆ ನಾವು ಹೊರನಾಡು ತಲಪಿದೆವು. ಸುಮಾರು ೧೮ (+) ಕಿಮೀ ನಡೆದಿದ್ದೆವು.  ಮೂರು ದಿನದ ಚಾರಣದಲ್ಲಿ ಯಾವ ವೋಲಿನಿ ಹಚ್ಚದೆ, ನೋವು ನಿವಾರಕ ಮಾತ್ರೆ ನುಂಗುವ ಪ್ರಮೇಯ ಬಾರದೆ ಇದ್ದುದು ಖುಷಿಯಾಯಿತು.

  ದಾರಿಯಲ್ಲಿ ಕೆಲವು ಕಡೆ ವಿರಳವಾಗಿ ಜಿಗಣೆ ದರ್ಶನ ಆಯಿತು. ಆದರೆ ರಕ್ತದಾನ ಮಾಡುವ ಅವಕಾಶ ಲಭಿಸಲಿಲ್ಲ! 

ಹೊರನಾಡಲ್ಲಿ ನಮ್ಮ ಬಸ್ ಇತ್ತು. ತುರ್ತು ಇದ್ದವರೆಲ್ಲ ಮೊದಲು ಹೊರಡುವ ಬಸ್ಸಿನಲ್ಲಿ ಸಂಸೆಗೆ ತೆರಳಿದರು.  ಅನ್ನಪೂರ್ಣೇಶ್ವರಿ ಅಮ್ಮನವರ ದರ್ಶನ (ಹೊರಗಿನಿಂದಲೇ) ಮಾಡಿದೆ. ದೇಗುಲದೊಳಗೆ ತೆರಳಲು ಉದ್ದದ ಸರತಿ ಸಾಲಿನಲ್ಲಿ ಜನ ನಿಂತಿದ್ದರು. ಹೊರನಾಡು, ಕಳಸ, ಸಂಸೆಯಲ್ಲಿ ಒಳ್ಳೆಯ ಕಾಫಿಹುಡಿ, ಚಹಾಪುಡಿ, ಏಲಕ್ಕಿ ದೊರೆಯುತ್ತದೆ.

    ಮಂಜುಳಾ ಹಾಗೂ ಸಂಕಲ್ಪ ಹೊರನಾಡಿನಲ್ಲಿ ಉಳಿದುಕೊಂಡರು. ಮರುದಿನ ಅಲ್ಲಿಂದಲೇ ಬಸ್ ಹತ್ತುವ ನಿರ್ಧಾರ ಮಾಡಿ ಅವರ ಚೀಲಗಳನ್ನು ಬೆಳಗ್ಗೆಯೇ ಬಸ್ಸಿಗೆ ಹಾಕಿದ್ದರು. ಸುಮಾರು ಮಂದಿ ಹಾಗೆಯೇ ಅಲ್ಲಿಂದ ಹೊರಟಿದ್ದರುನಾವು ಉಳಿದವರು ಎರಡನೇ ಬಸ್ಸಲ್ಲಿ ಹೊರಟು ಸಂಸೆಗೆ ತಲಪಿದಾಗ .೩೦ನಾಲ್ಕು ದಿನವೂ ಸಂಜೆ ಸ್ವಾಗತ ಶರಬತ್ತು ಇತ್ತು. 

ಸ್ನಾನ ಮಾಡಿ ತಯಾರಾಗಿ ಬಂದಾಗ ನೀರುಳ್ಳಿ ಪಕೋಡ, ಬಾಳೆಹಣ್ಣು ಹಲುವ, ಕಾಫಿ ಬಾಯಲ್ಲಿ ನೀರೂರಿಸಿತು. ಎರಡನೆ ಸಲ ಹಾಕಿಸಿಕೊಳ್ಳಬಹುದು ಎಂದಾಗಲಂತೂ ಎಲ್ಲರೂ ಸಡಗರದಿಂದ ಎದ್ದು ಪಕೋಡ  ಸವಿದರು

  ಪ್ರಶಾಂತನ ಕಾರಲ್ಲಿ ಜನಾರ್ದನ, ವಿನಯಾ ಅವರ ಜೊತೆ ಒಂದು ಸೀಟು ಇದೆಯೆಂದಾಗ ನಾನು ಬರುವೆನೆಂದು ತಿಳಿಸಿದೆ. ೧೪ರ ಬೆಳಗ್ಗೆ ಹೊರಡುವುದು ಎಂದು ಇದ್ದದ್ದು ಅವತ್ತೇ ಸಂಜೆಯೇ ಹೊರಡೋಣ ಎಂದು ಪ್ರಶಾಂತ ತೀರ್ಮಾನಿಸಿದಾಗ ನಾವೆಲ್ಲ ಸೈ ಎಂದು .೩೦ಗೆ ಎಲ್ಲರಿಗೂ ಟಾಟಾ ಮಾಡಿ ಕಾರೇರಿದೆವು. ಕೊಟ್ಟಿಗೆಹಾರದಲ್ಲಿ ಶ್ರೀಕೃಷ್ಣಭವನದಲ್ಲಿ ಜನಾರ್ದನ ಅವರು ನೀರುದೋಸೆ, ಬಜ್ಜಿ ಕೊಡಿಸಿ ಉದರ ಶಮನಗೊಳಿಸಿದರು. ಅಲ್ಲಿ,ನೀರುದೋಸೆ ಹಾಕುವ, ಬಜ್ಜಿ ಮಾಡುವ, ದೋಸೆ ಸರಬರಾಜು ಮಾಡುವ, ಮೇಜು ಒರೆಸುವ,ಹಣ ಪಡೆಯುವ  ಸವ್ಯಸಾಚಿ ಒಬ್ಬನನ್ನು ಕಂಡೆವು. ಅವನ ಕೆಲಸ ಕಂಡು, ಅಪಹರಿಸಿ ಮೈಸೂರಿಗೆ ಎತ್ತಾಕಿಕೊಂಡು ಹೋದರೆ ಹೇಗೆ ಎಂದೂ ಮನಸಿನಲ್ಲಿ ಮೂಡಿತ್ತು!  ಕೊಟ್ಟಿಗೆಹಾರದಲ್ಲಿ ದಿನದ ೨೪ ಗಂಟೆಯೂ ನೀರುದೋಸೆ ಸಿಗುತ್ತದಂತೆ. ಅಲ್ಲಿಯ ಎಲ್ಲಾ ಹೊಟೇಲುಗಳಲ್ಲಿ ನೀರು ದೋಸೆ ಸಿಗುತ್ತದೆ. 

ರಾತ್ರೆ ೧೨.೧೫ ಕ್ಕೆ ಮೈಸೂರು ತಲಪಿದೆವು. ಸುಖವಾಗಿ ಮನೆ ಮುಟ್ಟಿಸಿದ ತ್ರಿಮೂರ್ತಿಗಳಿಗೆ ಧನ್ಯವಾದ

    ಮೂರು ದಿನದ ಚಾರಣವನ್ನು ಪರಸ್ಥಳದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಸಂಘಟಕರ ಪರಿಶ್ರಮ ಅಪಾರ. ಯೂಥ್ ಹಾಸ್ಟೆಲ್ ಮಂಗಳೂರು ಶಾಖೆಯ ಅಧ್ಯಕ್ಷರಾದ ಸುದರ್ಶನ ಪೈ ಹಾಗೂ ಅವರ ಬಳಗದವರು ಚಾರಣವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿ ಎಲ್ಲರಿಂದ ಪ್ರಶಂಸೆಗೊಳಗಾಗಿದ್ದಾರೆ.  ಅವರೆಲ್ಲರಿಗೂ ನಮ್ಮ ಸಹಚಾರಣಿಗರೆಲ್ಲರ ಪರವಾಗಿ ಅನಂತಾನಂತ ಧನ್ಯವಾದ

    ಯೂಥ್ ಹಾಸ್ಟೆಲ್ ನಡೆಸುವ ಚಾರಣಗಳಲ್ಲಿ ಹತ್ತನ್ನೆರಡು ಕಿಮೀ ನಡೆಯಲಿದ್ದು, ಒಂದೆರಡು ಕಿಲೋ ತೂಕ ಕಮ್ಮಿ ಆಗುತ್ತದೆ ಎಂದು ಭಾವಿಸಿದಿರಾದರೆ ಅದು ನಮ್ಮ ತಪ್ಪು ಕಲ್ಪನೆ.! ಚಾರಣ ಹೋಗಿ ಬಂದಬಳಿಕ ಚೆನ್ನಾಗಿ ಹಸಿವೆ ಆಗುತ್ತದೆ. ಅದಕ್ಕೆ ತಕ್ಕಂತೆ ವಿವಿಧ ಬಗೆಯ ಭಕ್ಷ್ಯ ಭೋಜ್ಯ ಮಾಡಿಟ್ಟಿರುತ್ತಾರೆ. ಅವುಗಳಿಗೆ ನಾವು ನ್ಯಾಯ ಸಲ್ಲಿಸದೆ ಇರಲು ಸಾಧ್ಯವೆ? ಮಾಡಿದ ಅಡುಗೆಯನ್ನು ಸಾಕೆನಿಸುವಷ್ಟು ಪ್ರೀತಿಯಿಂದ ಬಡಿಸುತ್ತಾರೆ. ನಾವೂ ಅಷ್ಟೇ ಅವರು ಬಡಿಸಿದ್ದನ್ನೆಲ್ಲವನ್ನೂ ತೃಪ್ತಿಯಿಂದ ತಿಂದು ಪವಡಿಸುತ್ತೇವೆ. ಯೂಥ್ ಹಾಸ್ಟೆಲಿನ ವಿವಿಧ ಶಾಖೆಯವರು ನಡೆಸಿದ ಸುಮಾರು ಚಾರಣದಲ್ಲಿ ಭಾಗವಹಿಸಿದ ಅನುಭವದಿಂದ ಹೇಳುವುದಾದರೆ, ಅವರು ಚಾರಣಕ್ಕೆ ಎಷ್ಟು ಮಹತ್ತ್ವ ಕೊಡುತ್ತಾರೋ ಅಷ್ಟೇ ಮುತುವರ್ಜಿ ತಿನ್ನುವ ಆಹಾರಗಳಲ್ಲೂ ಕಾಣುತ್ತೇವೆ.  ಜೈ ಯೂಥ್ ಹಾಸ್ಟೆಲ್ ಅಸೋಸಿಯೇಷನ್ಸ್.

 ತುಂಬ ಜನರದ್ದು ಆಕ್ಷೇಪ ಇದೆ- ನಾನು ಕೈಗೊಳ್ಳುವ ಪ್ರತೀ ಚಾರಣ ವಿವರ ಬರೆಯುವಾಗ ಚಾರಣದ ವಿಷಯಕ್ಕೆ ಒತ್ತು ಕೊಟ್ಟು ಬರೆಯುವಂತೆ, ಅಲ್ಲಿ ಬಡಿಸಿದ ಖಾದ್ಯಗಳ ವಿವರಗಳಿಗೂ ಅಷ್ಟೇ ಪ್ರಾಮುಖ್ಯ ನೀಡಿ ಒಂದೂ ಬಿಡದೆ ನಮೂದಿಸುತ್ತೇನೆ. ಅದನ್ನು ಓದಿದಾಗ ಹೊಟ್ಟೆ ಉರಿ ಬರುತ್ತಂತೆ! ಅವನ್ನು ಬರೆಯಬಾರದು ಎಂದು ನನಗೆ ಸಲಹೆಗಳು ಬಂದಿವೆ. ಆ ಸಲಹೆಗಳನ್ನು ಇದುವರೆಗೂ ಮಾನ್ಯ ಮಾಡಿಲ್ಲ!  ಮುಂದೆಯೂ ಮಾಡುವ ಸಂಭವ ಇಲ್ಲ! ಏಕೆಂದರೆ ನನಗೆ ಚಾರಣದಷ್ಟೇ ಪ್ರೀತಿ ತಿನ್ನುವುದರಲ್ಲಿಯೂ ಇದೆ! ತಿನ್ನುವುದಕ್ಕಾಗಿಯೇ ಬದುಕಿರುವುದು ಎಂದೆನ್ನಲು ಅಡ್ಡಿಯಿಲ್ಲ! ಉದರನಿಮಿತ್ತಂ ಬಹು ಬಹು ಖಾದ್ಯಂ!

 ಮುಗಿಸುವ ಮುನ್ನ: ಮುಂದಿನ ಚಾರಣ ಯಾವಾಗ? ಎಲ್ಲಿಗೆ? ತಿಳಿಸಿ!

 ನಮಸ್ಕಾರ

ರುಕ್ಮಿಣಿಮಾಲಾ

ಮೈಸೂರು

 

 

2 ಕಾಮೆಂಟ್‌ಗಳು: