ಬುಧವಾರ, ಆಗಸ್ಟ್ 23, 2017

ಮುದಿಯರೂ ಹತ್ತಿದ ಮುದಿಬೆಟ್ಟ!



ಮಂಡ್ಯಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಮುದಿಬೆಟ್ಟಕ್ಕೆ ಚಾರಣ ಕಾರ್ಯಕ್ರಮ ಎಂದು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ದಿನ ನಿಗದಿಗೊಳಿಸಿದ ಮಾಹಿತಿ ಹೊರಬಿದ್ದಾಗ ಪೂರ್ತಿ ಮುದಿಯಾದಮೇಲೆ ಮುದಿಬೆಟ್ಟ ಹತ್ತುವ ಬದಲು ಅರ್ಧ ಮುದಿಯಾಗಿದ್ದಾಗಲೇ ಹೋಗುವುದೊಳ್ಳೆಯದೆಂದು ರೂ. ೩೫೦ ಶುಲ್ಕ ಕಟ್ಟಿ ಹೆಸರು ನೋಂದಾಯಿಸಿದೆ! 
   ತಾರೀಕು ೨೦-೮-೨೦೧೭ರಂದು ಮೈಸೂರಿನ ವಾರ್ತಾಭವನದ ಬಳಿ ಎಲ್ಲರೂ ಸುಮಾರು ೪೭ ಮಂದಿ ಒಟ್ಟು ಸೇರಿ ೨ ಮಿನಿ ವ್ಯಾನ್ ಮತ್ತು ಒಂದು ಕಾರಿನಲ್ಲಿ ಹೊರಡುವಾಗ (೬.೩೦ಗೆ ಹೊರಡಬೇಕಿದ್ದವರು)  ಬೆಳಗ್ಗೆ ಬರೋಬ್ಬರಿ ೭.೧೫. ಮೈಸೂರಿನಿಂದ ಶ್ರೀರಂಗಪಟ್ಟಣವಾಗಿ ಕೆ.ಆರ್.ಪೇಟೆ ತಲಪಿ, ಅಲ್ಲಿಂದ ನಾಗಮಂಗಲ ರಸ್ತೆಯಲ್ಲಿ ಸಾಗಿ ಬನುಮೇನಹಳ್ಳಿಯ ತೋಟದ ಮನೆ ತಲಪುವಾಗ ಗಂಟೆ ೮.೩೦ ದಾಟಿತ್ತು. ಮೈಸೂರಿನಲ್ಲಿ ವಾಸವಾಗಿರುವ ಸತೀಶ್ ಎಂಬವರಿಗೆ ಸೇರಿದ ತೋಟವದು. ಈ ಚಾರಣದ ಆಯೋಜಕರಾದ ಜಗದೀಶ ಅವರ ಸ್ನೇಹಿತರೇ ಸತೀಶ್. ಅವರು ಉದಾರತೆಯಿಂದ ತೋಟದಮನೆಯಲ್ಲಿ ನಮಗೆ ಸಕಲ ವ್ಯವಸ್ಥೆ ಮಾಡಿಸಿದ್ದರು. ತೋಟದ ಉಸ್ತುವಾರಿ ನೋಡಿಕೊಳ್ಳುವ ವೆಂಕಟೇಶ್ ನಮಗಾಗಿ ತಿಂಡಿ ತರಿಸಿಟ್ಟು ಕಾದಿದ್ದರು. ಬಿಸಿಬಿಸಿ ಉಪ್ಪಿಟ್ಟು, ಕೇಸರಿಭಾತ್, ಕಾಫಿ ಸೇವನೆಯಾಯಿತು. ತಿಂಡಿ ತಿಂದು ಅಲ್ಲಿಂದ ೯.೩೦ಗೆ ಹೊರಟೆವು. 
    ಸುಮಾರು ಏಳೆಂಟು ಕಿಮೀ ಸಾಗಿ ರಾಯಸಮುದ್ರ ತಲಪಿ ಅಲ್ಲಿಂದ ಮುಂದೆ ಸಾಗುವಾಗ ಬಲಕ್ಕೆ ನಾರಾಯಣದುರ್ಗಕ್ಕೆ ದಾರಿ ಎಂಬ ಫಲಕ ಕಾಣುತ್ತದೆ. ನಾವು ಎಡಕ್ಕೆ ಸಾಗಿದೆವು. ಸುಮಾರು ಮೂರು ನಾಲ್ಕು ಕಿಮೀ ಸಾಗಿದಾಗ ಮರುಗುನಕೊಪ್ಪಲು ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಮುದಿಬೆಟ್ಟ ಕಾಣುತ್ತದೆ. ಅಲ್ಲಿ ಬಸ್ಸಿಳಿದು ಕಾಲುದಾರಿಯಲ್ಲಿ ಹೋಗಿ ಬೆಟ್ಟದ ಬುಡ ತಲಪಿ ಬೆಟ್ಟದೆಡೆಗೆ ಸಾಗುವಾಗ ಗಂಟೆ ಹತ್ತೂಕಾಲು.

 ನೋಡಲು ಅಷ್ಟೇನೂ ಎತ್ತರವಿಲ್ಲದ ಬೆಟ್ಟ. ಆದರೆ ಹತ್ತುತ್ತ ಹತ್ತುತ್ತ ಇನ್ನೂ ಎಷ್ಟು ದೂರ ಎಂದು ಅನಿಸಲು ತೊಡಗಿತ್ತು. ಕುರುಚಲುಗಿಡ, ಮಜ್ಜಿಗೆಹುಲ್ಲು, ಪೊದೆಗಳಿಂದ ಕೂಡಿದ ಎಲ್ಲಿ ನೋಡಿದರೂ ಕಲ್ಲುಬಂಡೆಗಳೇ ಕಾಣುವ ಹಾದಿಯಲ್ಲಿ ಸಾಗಿದೆವು.


 ಬೆಟ್ಟ ಏರಲು ಮೆಟ್ಟಲುಗಳಿಲ್ಲ. ಸರಿಯಾದ ಹಾದಿ ಇದೆಯೋ ನಮಗೆ ಗೊತ್ತಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ನಾವು ನಡೆದದ್ದೇ ದಾರಿಯಾಗಿತ್ತು. ಕೆಲವೆಡೆ ಬಂಡೆಹತ್ತಿ ಇಳಿದು ಸಾಗಬೇಕಿತ್ತು. ಬೋರೆದೇವರಬೆಟ್ಟದಲ್ಲಿ ಪುಟ್ಟ ದೇವಾಲಯವಿದೆ ಎಂದಿದ್ದರು. ನಮಗೆ ಕೆಲವರಿಗೆ ದೇವಾಲಯ ಕಂಡಿರಲಿಲ್ಲ. ನಾವು ಹೋದ ದಾರಿ ತಪ್ಪಿತ್ತು. ಸರಿಯಾದ ಹಾದಿಯಲ್ಲಿ ಸಾಗಿದ ಕೆಲವರಿಗೆ ಬಂಡೆಯಡಿಯಲ್ಲಿ ಪುಟ್ಟ ದೇವಾಲಯ ಕಾಣಿಸಿತ್ತಂತೆ. ನಾವೂ ಅಲ್ಲಿಯ ಸ್ಥಳೀಯರಾದ ಯಾರಾದರೊಬ್ಬರನ್ನು ಕರೆದುಕೊಂಡು ಹೋಗಿದ್ದರೆ ಬಹಳ ಒಳ್ಳೆಯದಿತ್ತು ಎನಿಸಿತ್ತು. ಕರೆದುಕೊಂಡು ಹೋಗದ ಕಾರಣ ಬೋರೆದೇವರ ಗುಡಿಯನ್ನು ನಮಗೆ ನೋಡಲಾಗಲಿಲ್ಲ. 
   ಇದು ಸಣ್ಣ ಬೆಟ್ಟವಾ? ಓಹ್ ತುಂಬ ಸುಸ್ತಾಯಿತು. ಎಂದು ಬೆಟ್ಟ ಹತ್ತುತ್ತ ಕೆಲವರು ಹೇಳಿದರು! ಆಯೋಜಕರಾದ ಸೋಮಶೇಖರ್ ಹಾಗೂ ಜಗದೀಶರು ಇದು ಬಹಳ ಸಣ್ಣಬೆಟ್ಟ ಎಂದು ನುಡಿದಿದ್ದರಂತೆ! ಇನ್ನೇನು ಬೆಟ್ಟದ ತುದಿ ಕಾಣುತ್ತಲಿದೆ. ಸ್ವಲ್ಪವೇ ಏರಿದರಾಯಿತು ಎಂದು ಎಲ್ಲರನ್ನು ಹುರುದುಂಬಿಸಿ ಸಾಗಿದೆವು. ಕೆಲವು ಬಂಡೆಗಲ್ಲುಗಳ ಎಡೆಯಲ್ಲಿ ಪುಟ್ಟ ಸಸಿಗಳು ಹುಟ್ಟಿದ್ದು ಕಂಡಾಗ ಬಂಡೆಯೊಳು ಸಸಿನೆಟ್ಟು ನೀರೆರೆದವರು ಯಾರು? ಎಂದು  ಗುನುಗುತ್ತ ಸಾಗಿದೆ. 


ಬಿಸಿಲಿಲ್ಲದೆ ಹವೆಯೂ ನಮಗೆ ಸಹಕರಿಸಿತ್ತು. ಅಂತೂ ಬೆಟ್ಟದ ತುದಿ ತಲಪಿದೆವು. ಅಲ್ಲಿ ವಿಶಾಲವಾದ ಸಮತಟ್ಟು ಪ್ರದೇಶ. ಅದರ ಪಕ್ಕದಲ್ಲಿ ಮತ್ತೊಂದು ಬೆಟ್ಟ. ದೊಡ್ಡ ಬಂಡೆಗಲ್ಲು ಕಂಡಿತು. 




ಕೆಲವರೆಲ್ಲ ಅದನ್ನು ಏರಿ ನಿಂತಿದ್ದರು. ಒಹೊ ಇನ್ನೂ ಹೋಗಬೇಕಾ? ನಮ್ಮಿಂದ ಸಾಧ್ಯವಿಲ್ಲ ಎಂದು ಕೆಲವರು ಅಲ್ಲೇ ಕೂತರು.   ಇನ್ನೂ ಕೆಲವರು ಹಿಂದಿದ್ದು, ನಿಧಾನವಾಗಿ ಹತ್ತುತ್ತ ಬರುತ್ತಿದ್ದರು.  ನಾವು ಕೆಲವರು ಉತ್ಸಾಹದಿಂದ ಆ ಬಂಡೆಗಲ್ಲನ್ನು ಕೋತಿಗಳು ಏರುವಂತೆ ಏರಿದೆವು. ಅಲ್ಲೂ ವಿಶಾಲ ಬಯಲು. ಕೂತು ದಣಿವಾರಿಸುತ್ತಿರಬೇಕಾದರೆ ನಮ್ಮಿಂದ ಸಾಧ್ಯವಿಲ್ಲ ಎಂದು ಕೆಳಗೆ ಕೂತವರು ಬಂಡೆ ಏರಿ ಮೇಲೆ ಬಂದದ್ದು ಕಂಡಿತು! ಇಷ್ಟು ಹತ್ತಿದ ಮೇಲೆ ಈ ಬಂಡೆ ಯಾವ ಲೆಕ್ಕ ಎಂದು ಅವರನ್ನು ಹುರಿದುಂಬಿಸಿ ಮೇಲೆ ಹತ್ತಿಸುವಲ್ಲಿ ಗೋಪಕ್ಕ ಯಶಸ್ವಿಯಾಗಿದ್ದರು. ಅವರೆಲ್ಲರೂ ಹತ್ತಿ ಬಂದು ತುಂಬ ಖುಷಿಪಟ್ಟರು. ಮೂರು ನಾಲ್ಕು ಮಂದಿ ವಯಸ್ಸು ೬೫ ಮೀರಿದವರು ಯಶಸ್ವಿಯಾಗಿ ಮುದಿಬೆಟ್ಟ ಏರಿದ್ದರು. ಬೆಟ್ಟದ ತುದಿಯಲ್ಲಿ ನಿಂತು ಸುತ್ತ ಕಣ್ಣು ಹಾಯಿಸುವಾಗ ಒಂದೆಡೆ ದೂರದಲ್ಲಿ ಮೇಲುಕೋಟೆ, ಪಕ್ಕದಲ್ಲಿ ನಾರಾಯಣದುರ್ಗ ಎಲ್ಲ ಕಾಣುತ್ತಲಿತ್ತು. ಅಲ್ಲಿ ಅರ್ಧ ಗಂಟೆ ಕುಳಿತು ಗಾಳಿಯ ಸುಖವನ್ನು ಆಸ್ವಾದಿಸುತ್ತ ಪ್ರಕೃತಿಯ ಚೆಲುವನ್ನು ನೋಡುತ್ತ ಕಾಲ ಕಳೆದೆವು. 


ನಾರಾಯಣದುರ್ಗದ ತಲೆಮೇಲೆ ಮೋಡದ ಚಿತ್ತಾರ

  ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಮತ್ತೆ ಕೆಳಗೆ ಇಳಿಯಲು ಮುಂದಾದೆವು. ಇಳಿಯಲು ಹೆದರಿಕೆ ಇರುವವರ ಕೈ ಹಿಡಿದು ಇಳಿಸಿದೆವು. 

ಆ ಬಂಡೆಗಲ್ಲು ಇಳಿದಾಗುವಾಗ ಸಣ್ಣಗೆ ಮಳೆಹನಿಯಲು ಸುರುವಾಯಿತು. ಮಳೆ‌ಅಂಗಿ ತಂದವರು ಹಾಕಿಕೊಂಡು ಮಳೆಯಲ್ಲೆ ಇಳಿಯಲು ತೊಡಗಿದೆವು. ಏನೂ ತಾರದಿದ್ದವರು ಬಂಡೆ ಅಡಿ ಕೂತರು. ಮಳೆ ಹೆಚ್ಚು ತೊಂದರೆ ಕೊಡದೆ ಕೆಲವೇ ನಿಮಿಷಗಳಲ್ಲಿ ನಿಂತಿತು. ಮಳೆ ಬಂದ ಕಾರಣ ಎಚ್ಚರಿಕೆಯಿಂದ ಬೆಟ್ಟ ಇಳಿಯಬೇಕಿತ್ತು. ಕೆಲವೆಡೆ ಬಂಡೆ ಒದ್ದೆಯಾಗಿ ಜಾರುತ್ತಿತ್ತು. ಅದಾಗಲೇ ಮಧ್ಯಾಹ್ನ ಒಂದು ಗಂಟೆ ದಾಟಿತ್ತು. ಕೆಲವೆಡೆ ಜಾರುಬಂಡೆಯಂತೆ ಕುಳಿತು ಜಾರಿ ಇಳಿದೆವು. ನನಗಂತೂ ಮುದಿಬೆಟ್ಟ ಹತ್ತಿ ಇಳಿಯಲು ತುಂಬ ಖುಷಿಯೆನಿಸಿತು. ಬೆಟ್ಟಕ್ಕೆ ಸರಿಯಾಗಿ ಮೆಟ್ಟಲಿದ್ದು ಅದನ್ನು ಏರಲು ಅಂಥ ಖುಷಿ ಎನಿಸುವುದಿಲ್ಲ. ಇಂಥ ಬಂಡೆ ಏರಿ ಇಳಿಯುವುದರಿಂದಲೇ ನಿಜವಾದ ಚಾರಣ ಸುಖ ಲಭಿಸುವುದು ಎಂಬುದು ನನ್ನ ಅಭಿಮತ. ನಾವು ಏರಿದ ದಾರಿ ತಪ್ಪಿ ಬೇರೆ ಸ್ವಲ್ಪ ಕಷ್ಟದ ದಾರಿಯಲ್ಲಿ ಬೆಟ್ಟ ಇಳಿದೆವು! ಎಲ್ಲರೂ ಬೆಟ್ಟ ಇಳಿದಾಗುವಾಗ ಗಂಟೆ ೨.೩೦ ದಾಟಿತ್ತು. ನಮ್ಮ ತಂಡದಲ್ಲಿ ಅನೇಕರು ಇದೇ ಮೊದಲಬಾರಿಗೆ ಚಾರಣ ಬಂದವರಿದ್ದರು. ಮೊದಲ ಚಾರಣವೇ ಕಷ್ಟವಾದರೂ ಯಶಸ್ವಿಯಾಗಿ ಮಾಡಿದೆವು ಎಂದು ಅವರಿಗೆ ಖುಷಿಯೋ ಖುಷಿ. ಇನ್ನು ಆಗಾಗ ಇಂಥ ಚಾರಣದಲ್ಲಿ ತಪ್ಪದೆ ಭಾಗಿಯಾಗುತ್ತೇವೆ ಎಂದು ಹೇಳಲು ಮರೆಯಲಿಲ್ಲ. ಒಮ್ಮೆ ಈ ಘಟಕದ ವತಿಯಿಂದ ಚಾರಣಕ್ಕೆಂದು ಬಂದವರು ಪುನಃ ಮತ್ತೆ ಬಾರದೆ ಇರುವುದಿಲ್ಲ. ಅಷ್ಟು ಸುರಕ್ಷಿತವಾಗಿ ಚೆನ್ನಾದ ವ್ಯವಸ್ಥೆಯಿಂದ ಚಾರಣ ಕರೆದೊಯ್ಯುತ್ತಾರೆ. ಇದು ಗಂಗೋತ್ರಿ ಘಟಕಕ್ಕೆ ಸಿಕ್ಕಿದ ದೊಡ್ಡ ಹಿರಿಮೆಯೇ ಹೌದು ಎಂದು ಅದರ ಸದಸ್ಯಳಾಗಿ ಹೆಮ್ಮೆಯಿಂದ ಹೇಳುವೆ. 
  ಮತ್ತೆ ಅಲ್ಲಿಂದ ಒಂದು ಕಿಮೀ ನಡೆದು  ಬಸ್ ನಿಲ್ಲಿಸಿದ ಸ್ಥಳ ಮರುಗುನಕೊಪ್ಪಲಿಗೆ  ಹೋದೆವು. ಅಲ್ಲಿ ಸ್ಥಳೀಯರಾದ ಪುಟ್ಟತಾಯಮ್ಮ ಸಿಕ್ಕಿ ನಮ್ಮನ್ನು ಮಾತಾಡಿಸಿದರು. ‘ಬೋರೆದೇವರು ನಿಮ್ಮ ಮನೆದೇವರ? ದೇವರಿಗೆ ಪೂಜೆ ಮಾಡಿಸಲು ಬಂದಿದ್ದೀರ? ಏಕೆ ಕೇಳಿದೆನೆಂದರೆ ನಾರಾಯಣದುರ್ಗಕ್ಕೆ ತುಂಬ ಜನ ಹೋಗುತ್ತಾರೆ. ಆದರೆ ಮುದಿಬೆಟ್ಟಕ್ಕೆ ಯಾರೂ ಹೋಗಲ್ಲ’ ಎಂದು ಕೇಳಿದಳು. ಎಲ್ಲಿಯೋ ಇರುವ ಯಾವುದೇ ಬೆಟ್ಟವಾದರೂ ಸರಿ. ಅದೇ ನಮ್ಮ ದೇವರು ಎಂದು ಹೇಳಬೇಕೆನಿಸಿತು! ಆದರೆ ಅವರೆದುರು ಹಾಗೆ ಹೇಳಲಿಲ್ಲ. ಅವರು ಮಾತಾಡುತ್ತ ಬೆಟ್ಟದ ಕತೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಊರಲ್ಲಿ ಅಣ್ಣತಮ್ಮನಿಗೆ ಜಗಳವಾಯಿತು. ಅಣ್ಣನಾದವ ಓಡಿ ಹೋಗಿ ಬೆಟ್ಟ ಹತ್ತಿದನಂತೆ. ತಮ್ಮನಿಗೆ ಕಾಲುನೋವಿನಿಂದ ಹತ್ತಲಾಗಲಿಲ್ಲವಂತೆ. ಆಗ ಅಲ್ಲಿ ಒಬ್ಬ ಮುದುಕಪ್ಪ ಪ್ರತ್ಯಕ್ಷವಾಗಿ ಜಗಳ ಯಾಕೆ ಮಾಡುತ್ತಿದ್ದೀರಿ ಎಂದು ಕೇಳಿದರಂತೆ.  ನನ್ನನ್ನೂ ಕರಕ್ಕೊಂಡು ಹೋಗು ಎಂದು ತಮ್ಮ ಹೇಳಿದನಂತೆ. ಒಂದು ಬಂಡೆ ಉರುಳಿಸುತ್ತೇನೆ. ನೀನು ಅದನ್ನು ಹಿಡಿಯಬೇಕು. ಹಾಗಾದರೆ ಕರೆದುಕೊಂಡು ಹೋಗುತ್ತೇನೆ ಅಂದನಂತೆ ಅಣ್ಣ. ಅಣ್ಣ ಬಂಡೆ ಉರುಳಿಸಿದಾಗ ತಮ್ಮ ಅದನ್ನು ಕಿರುಬೆರಳಿನಿಂದ ಹಿಡಿದು ನಿಲ್ಲಿಸಿದನಂತೆ. ಹಾಗೆ ಮುದುಕಪ್ಪ ಅಣ್ಣ ತಮ್ಮರಿಗೆ ರಾಜಿ ಮಾಡಿಸಿದನಂತೆ. ಅಣ್ಣ ತಮ್ಮನನ್ನು ಬೆಟ್ಟಕ್ಕೆ ಕರೆದುಕೊಂಡು ಹೋದನಂತೆ. ಮತ್ತೆ ಕೆಳಗೆ ಬಂದು ನೋಡಿದರೆ ಮುದುಕಪ್ಪ ಪತ್ತೆಯೇ ಆಗಲಿಲ್ಲವಂತೆ. ಹಾಗಾಗಿ ಇದಕ್ಕೆ ಮುದಿಬೆಟ್ಟ ಎಂದು ಹೆಸರು ಬಂದದ್ದು ಎಂದು ಹೇಳಿ ಕಥೆ ನಿಲ್ಲಿಸಿದಳು! 

  ‘ಊಟಕ್ಕೆ ಏನು ಮಾಡುವಿರಿ?’ ಎಂದು ಅವಳು ನಮ್ಮನ್ನು ಕೇಳಿದಾಗ, ಯಾರೊ ಒಬ್ಬರು ತಮಾಷೆಗಾಗಿ ನಿಮ್ಮ ಮನೆಗೆ ಬರುತ್ತೇವೆ ಎಂದಾಗ, ‘ಓ ಅದಕ್ಕೇನಂತೆ. ನೀವು ಮೊದಲೇ ಹೇಳಿದ್ದರೆ ಪಲಾವ್, ಮೊಸರನ್ನ ತಯಾರಿಸಿ ಇಟ್ಟಿರುತ್ತಿದ್ದೆ. ನಾವು ಹಸು ಸಾಕುತ್ತೇವೆ. ಹತ್ತು ಲೀಟರು ಹಾಲು ಡೈರಿಗೆ ಹಾಕದೆ ಮೊಸರು ಮಾಡುತ್ತಿದ್ದೆ ಅಷ್ಟೆ.’ ಎಂದಳು. ನಾವು ೫೦ ಮಂದಿ ಇದ್ದೇವೆ ಎಂದಾಗ ೫೦ ಅಲ್ಲ ನೂರು ಮಂದಿ ಬೇಕಾದರೂ ಬನ್ನಿ. ಊಟ ಹಾಕಲು ನಾವೇನು ಕಾಸು ತೆಗೆದುಕೊಳ್ಳುವುದಿಲ್ಲ. ಆದರೆ ಮೊದಲೇ ಹೇಳಿ ಬನ್ನಿ ಎಂದು ತಮ್ಮ ಹೃದಯವಂತಿಕೆ ಮೆರೆದರು. ಅವರ ಈ ಪ್ರೀತಿಯ ಮುಂದೆ ನಾವೇ ಸೋತೆವು. ಒಂದು ತೋಟದ ಮನೆಯಲ್ಲಿ ನಮಗೆಲ್ಲ ಊಟದ ವ್ಯವಸ್ಥೆಯಾಗಿದೆ ಎಂದು ಹೇಳಿ ಅವರನ್ನು ಬೀಳ್ಕೊಂಡು ಬಸ್ ಹತ್ತಿದೆವು. 
    ಅಲ್ಲಿಂದ ಸೀದಾ ಬನುಮೇನಹಳ್ಳಿಯ ತೋಟದಮನೆಗೆ ಹೋದೆವು. ತೋಟದ ಮಾಲೀಕರಾದ ಸತೀಶ್ ಅವರು ಕುಟುಂಬ ಸಮೆತರಾಗಿ ಬಂದು ಅಲ್ಲಿ ನಮ್ಮನ್ನು ಸ್ವಾಗತಿಸಿದರು. ಸುಮಾರು ಹತ್ತು ಎಕರೆ ತೋಟದಲ್ಲಿ ಮಾವು, ತೆಂಗು, ಅಡಿಕೆ, ಸಾಗುವಾನಿ ಇತ್ಯಾದಿ ಮರಗಳಿವೆ. ನವಿಲುಗಳ ಕಾಟದಿಂದ ಬೇರೇನೂ ಬೆಳೆ ಬೆಳೆಯಲಾಗುವುದಿಲ್ಲವೆಂದು ಸತೀಶ್ ಅವರ ತಾಯಿ ಜಯಮ್ಮ ಹೇಳಿದರು. ಮನೆ ಪಕ್ಕವೇ ಸುಸಜ್ಜಿತವಾದ ಈಜುಕೊಳವೂ ಇದೆ.  
   ೩ ಗಂಟೆಗೆ ನಾವು ಸಾಲಾಗಿ ಊಟಕ್ಕೆ ಕೂತೆವು. ಬಾಳೆಲೆಯಲ್ಲಿ ಪಲ್ಯ, ಅನ್ನ, ಸಾರು, ಮಜ್ಜಿಗೆಹುಳಿ, ಪಕೋಡ, ಹೋಳಿಗೆ ತುಪ್ಪದಿಂದ ಕೂಡಿದ ಭರ್ಜರಿ ಊಟ. ಊಟದನಂತರ ಬಾಳೆಹಣ್ಣು ಸಮಾರಾಧನೆ. ಊಟವಾದಮೇಲೆ ಈಜುವ ಕಾರ್ಯಕ್ರಮ ಸುರುವಾಯಿತು. ಈಜುವ ಅಭ್ಯಾಸವಿದ್ದವರು ಸುಮಾರು ಮಂದಿ ಇದ್ದರು. ಅವರೆಲ್ಲ ಕೊಳಕ್ಕೆ ಧುಮುಕಿದರು. ಭರ್ಜರಿ ಊಟವಾದ ಕೂಡಲೇ ಹೇಗೆ ಈಜುತ್ತಾರಪ್ಪ ಎಂದು ಈಜಲು ಬರದ ನಾನು ಆಶ್ಚರ್ಯದಿಂದ ಈಜುವವರನ್ನು ನೋಡುತ್ತ ಕುಳಿತೆ. ಇನ್ನು ಕೆಲವರು ನೀರು ಪ್ರಿಯರು ಕೊಳಕ್ಕೆ ಕಾಲು ಹಾಕಿ ಕಟ್ಟೆಯಲ್ಲಿ ಕೂತು ಅರ್ಧಂಮರ್ಧ ಒದ್ದೆಯಾಗಿ ಸಂತೋಷಪಟ್ಟರು. ಕೆಲವರು ಮೇಲಿನಿಂದ ಕೊಳಕ್ಕೆ ಡೈವ್ ಹೊಡೆದು ಈಜಿದರು. ಸಂಜೆ ೫ ಗಂಟೆವರೆಗೂ ಕೊಳದಲ್ಲಿ ಕಾಲ ಕಳೆದರು. 


   ನಮಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನನ ಊಟವನ್ನು ಸತೀಶ್ ಅವರೇ ಪ್ರಾಯೋಜಿಸಿದ್ದರು. ಸತೀಶ್ ಕುಟುಂಬದವರಿಗೆ ನೆನಪಿನ ಕಾಣಿಕೆಯಾಗಿ ೨೦೧೪ರಲ್ಲಿ ಗಂಗೋತ್ರಿ ಘಟಕದ ವತಿಯಿಂದ ಪ್ರಕಟಪಡಿಸಿದ ಚಾರಣಶ್ರೀ ನೆನಪಿನ ಸಂಚಿಕೆಯನ್ನು ಸೋಮಶೇಖರ್ ನೀಡಿ, ನಮಗೆ ಸಕಲ ವ್ಯವಸ್ಥೆ ಮಾಡಿದ ಅವರಿಗೆ ಧನ್ಯವಾದ ಅರ್ಪಿಸಿದರು. ಅವರಿಗೆ ವಂದನೆ ಸಲ್ಲಿಸಿ ನಾವು ಬಸ್ಸೇರಿದೆವು. 

   ಅಲ್ಲಿಂದ ಹೊರಟು ಕೆಲವು ಕಿಮೀ ದೂರದಲ್ಲಿರುವ ಅಗ್ರಹಾರಬಾಚಹಳ್ಳಿಗೆ ಹೋದೆವು. ಅಲ್ಲಿ ಪುರಾತನವಾದ ಹುಣಸೇಶ್ವರ ದೇವಾಲಯ ನೋಡಿದೆವು. ಧರ್ಮಸ್ಥಳದ ಧರ್ಮೋಸ್ಥಾನ ಟ್ರಸ್ಟ್ ವತಿಯಿಂದ ಹಾಗೂ ಊರವರು ಸೇರಿ ಹೊಯ್ಸಳರ ಕಾಲದ ಈ ದೇವಾಲಯವನ್ನು ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಳಿಸಿದ್ದಾರೆ. ಅಲ್ಲಿ ಕೆಲವು ಶಾಸನಗಳು, ವಿಗ್ರಹಗಳನ್ನು, ವೀರಗಲ್ಲುಗಳನ್ನು ಸಾಲಾಗಿ ನಿಲ್ಲಿಸಿದ್ದಾರೆ. 




ಅಲ್ಲಿಂದ ಆರು ಗಂಟೆಗೆ ಹೊರಟು ಎಲ್ಲೂ ನಿಲ್ಲದೆ ರಾತ್ರಿ ಎಂಟು ಗಂಟೆಗೆ ಮೈಸೂರು ಸೇರಿದೆವು. ಈ ಚಾರಣವನ್ನು ಜಗದೀಶ್ ಹಾಗೂ ಸೋಮಶೇಖರ್ ಯಶಸ್ವಿಯಾಗಿ ನಿರ್ವಹಿಸಿದ್ದರು. ಅವರಿಗೆ ತಂಡದವರೆಲ್ಲರ ಪರವಾಗಿ ಧನ್ಯವಾದ. 

ಶನಿವಾರ, ಜೂನ್ 3, 2017

ಕೊಡಗಿನ ಬೆಡಗಿನ ಕೋಟೆಬೆಟ್ಟ ಹತ್ತೋಣ ಬನ್ನಿರೋ


ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ವತಿಯಿಂದ  ಮೇ ತಿಂಗಳ ೨೧ ಮೇ ೨೦೧೭ರಂದು ಕೋಟೆಬೆಟ್ಟಕ್ಕೆ ಚಾರಣ ಎಂದು ನನಗೆ ತಿಳಿಯುವಷ್ಟರಲ್ಲಿ ಅದಾಗಲೆ ಸೀಟು ಭರ್ತಿಯಾಗಿತ್ತು. ಛೆ! ಕೋಟೆಬೆಟ್ಟ ನೋಡುವ ಭಾಗ್ಯ ಸಿಗುವುದಿಲ್ಲ ಎಂದು ಬೇಸರವಾಗಿತ್ತು. ಎರಡು ದಿನದ ಮೊದಲು ಒಂದು ಸೀಟು ಇದೆ ಬರ್ತೀರ ಎಂದು ಯೋಗೇಂದ್ರ ಕೇಳಿದಾಗ ಎರಡನೇ ಮಾತಿಲ್ಲದೆ ಬರುವೆನೆಂದು ಹೇಳಿದೆ. ಏಕೆಂದರೆ ಕೋಟೆಬೆಟ್ಟ ನೋಡಲೇಬೇಕೆಂದು ಎಷ್ಟೋ ಸಮಯದಿಂದ ಕಾಯುತ್ತಲಿದ್ದೆ. 
    ಮೈಸೂರು- ಮಡಿಕೇರಿ ದಾರಿಯಲ್ಲಿ ಸಾಗಿ ಮಡಿಕೇರಿ ಪೇಟೆಗೂ ಮೊದಲೇ ಬಲಕ್ಕೆ (ಮಡಿಕೇರಿಯಿಂದ ಸುಮಾರು ೨೨ಕಿಮೀ.) ಸೋಮವಾರಪೇಟೆ ರಸ್ತೆಯಲ್ಲಿ ತಿರುಗಿ ಮುಂದೆ ಹೋದಾಗ ಹಟ್ಟಿಹೊಳೆ ಎಂಬ ಫಲಕ ಕಾಣುವಲ್ಲಿ ಎಡಕ್ಕೆ ಹೊರಳಿ ಸುಮಾರು ೩-೪ಕಿಮೀ ಸಾಗಿದಾಗ ಮುಕ್ಕೋಡ್ಲು ಎಂಬ ಹಳ್ಳಿ ಕಾಣುತ್ತದೆ. ಅಲ್ಲಿ ಬಲಕ್ಕೆ ಕೋಟೆಬೆಟ್ಟಕ್ಕೆ ೭ಕಿಮೀ ಎಂಬ ತುಕ್ಕುಹಿಡಿದು ಮಾಸಲಾಗಿ ಬಿದ್ದ ಫಲಕ ಕಾಣುತ್ತದೆ. ಆ ರಸ್ತೆಯಲ್ಲಿ ಸುಮಾರು ೮-೯ ಕಿಮೀ ಸಾಗಿದರೆ ಕೋಟೆಬೆಟ್ಟ ತಲಪುತ್ತೇವೆ. ಸರಿಸುಮಾರು ೫ಕಿಮೀ ವರೆಗೂ ರಸ್ತೆ ಇದೆ. ಕೊಡಗಿನ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಕೋಟೆಬೆಟ್ಟ ಮೂರನೆಯ ಸ್ಥಾನದಲ್ಲಿದೆ. ಸಮುದ್ರಮಟ್ಟದಿಂದ ೫೨೭೬ಅಡಿ ಎತ್ತರದಲ್ಲಿದೆ. (ಮೊದಲೆರಡು ತಡಿಯಂಡಮೋಳ್, ಬ್ರಹ್ಮಗಿರಿ)

     ಮೈಸೂರಿನಿಂದ ಬೆಳಗ್ಗೆ ೬ ಗಂಟೆಗೆ ನಾವು ೨೩ ಮಂದಿ ಸಣ್ಣ ಬಸ್ಸಿನಲ್ಲಿ ಹೊರಟು ಹಟ್ಟಿಹೊಳೆ ದಂಡೆಯಲ್ಲಿ ಬೆಳಗ್ಗೆ ೯.೩೦ಗೆ ಇಡ್ಲಿ ವಡೆ, ಕೇಸರಿಭಾತ್ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡೆವು. ತಿಂಡಿ ತಿನ್ನುತ್ತಲೇ ಪರಸ್ಪರ ಪರಿಚಯ ಕಾರ್ಯ ಮುಗಿಸಿದೆವು. ಐದಾರು ಮಂದಿ ಯುವಕ ಯುವತಿಯರು ಇದೇ ಮೊದಲಬಾರಿ ಚಾರಣ ಕೈಗೊಂಡವರಿದ್ದರು. ಮುಂದೆ ದಾರಿಯಲ್ಲಿ ಜಿಗಣೆಗಳು ಇರಬಹುದು. ಅವುಗಳಿಗೆ ರಕ್ತದಾನ ಮಾಡುವ ಅವಕಾಶ ಲಭಿಸಬಹುದು ಎಂದು ತಂಡದ ಮುಖ್ಯಸ್ಥರು ಎಚ್ಚರಿಸಿದರು. ಬುತ್ತಿಗೆ ಬಿಸಿಬೇಳೆಭಾತ್, ಮೊಸರನ್ನ ತುಂಬಿಸಿ ಚೀಲಕ್ಕೇರಿಸಿ ಹಟ್ಟಿಹೊಳೆಯಿಂದ ನಮ್ಮ ಸವಾರಿ ೧೦.೧೫ಕ್ಕೆ ಕೋಟೆಬೆಟ್ಟದತ್ತ ಹೊರಟಿತು. ರಸ್ತೆಯ ಇಕ್ಕೆಲಗಳಲ್ಲೂ ಕಾಫಿತೋಟ, ಅಲ್ಲಲ್ಲಿ ಕೆಲವು ಮನೆಗಳು ಕಂಡಿತು. ಇಷ್ಟು ದೂರ ಮನೆಮಾಡಿ ವಾಸಮಾಡುತ್ತಿದ್ದಾರಲ್ಲ ಎಂದು ಪೇಟೆಮಂದಿ ಉದ್ಗಾರ ತೆಗೆದರು. ನಮ್ಮ ನಡಿಗೆ ರಸ್ತೆಯಲ್ಲೆ ಸಾಗಿತು. ಜಿಗಣೆಗಳಿಗೆ ರಕ್ತದಾನ ಮಾಡಲು ಮನಸ್ಸಿಲ್ಲದ ಕೆಲವರು  ಕೈಕಾಲುಗಳಿಗೆ ಡೆಟ್ಟಾಲ್ ಸವರಿಕೊಂಡರು. ಇನ್ನೊಬ್ಬರು ಸ್ಪೆಷಲ್ ಕಾಲುಚೀಲ ಹಾಕಿಕೊಂಡರು.  ಈ ಕಾಲುಚೀಲ ಹಾಕಿಕೊಂಡರೆ ಜಿಗಣೆಗಳು ಕಚ್ಚುವುದಿಲ್ಲ. ಜಿಗಣೆಗಳು ಹೆಚ್ಚು ಇರುವ ಸ್ಥಳಕ್ಕೆ ಚಾರಣ ಹೋಗಿದ್ದಾಗ ಒಂದೂ ಕಚ್ಚಿರಲಿಲ್ಲ ಎಂದರವರು. ನಾಲ್ಕಾರು ಮಳೆ ಬಿದ್ದ ಕಾರಣದಿಂದ ಎಲೆಗಳೆಲ್ಲ ನೆನೆದು ದಾರಿಯಲ್ಲಿ ಅವುಗಳಲ್ಲಿ ಅಲ್ಲಲ್ಲಿ ಜಿಗಣೆಗಳು ಕಾಣಿಸಿದುವು. ಅವನ್ನು ನೋಡಿದಾಗ ಒಂದು ಜಿಗಣೆ ತೆಗೆದು ಆ ಸ್ಪೆಷಲ್ ಕಾಲುಚೀಲಕ್ಕೆ ಹಾಕಿ ಪರೀಕ್ಷಿಸಬೇಕು ಎಂಬ ತುಡಿತ ಜಾಸ್ತಿ ಆದದ್ದನ್ನು ಹೇಗೋ ನಿಗ್ರಹಿಸಿಕೊಂಡೆ!




     ದಾರಿಯಲ್ಲಿ  ಬಸವನಹುಳು, ಕೆಲವು ಚಿಟ್ಟೆಗಳು ನಮ್ಮ ಕಣ್ಣಿಗೆ ಕಾಣಿಸಿಕೊಂಡವು. ಬಿರುಸಾಗಿ ನಡೆದು ಮುಂದೆ ಹೋಗುವವರು ಸ್ವಲ್ಪ ದೂರ ಹೋದರೂ, ಹಿಂದೆ ನಿಧಾನಗತಿಯಲ್ಲಿ ಬರುತ್ತ ಇರುವವರ ತಲೆ ಕಾಣುವಲ್ಲಿವರೆಗೆ ಅಲ್ಲಲ್ಲಿ ನಿಲ್ಲುತ್ತ  ಸಾಗಬೇಕು ಎಂದು ಆಯೋಜಕರು ಮೊದಲೇ ಎಚ್ಚರಿಸಿದ್ದರು. ಹಾಗಾಗಿ ನಾವು ಕೆಲವರು  ಮುಂದೆ ಸಾಗಿದರೂ ಅಲ್ಲಲ್ಲಿ ಕುಳಿತು ವಿಶ್ರಮಿಸುತ್ತ ದಾರಿ ಸವೆಸಿದೆವು. ೫ಕಿಮೀ ರಸ್ತೆ ಇರುವ ದಾರಿಯನ್ನು ಮಧ್ಯಾಹ್ನ ೧೨.೩೦ಕ್ಕೆ ಕ್ರಮಿಸಿದೆವು. ಕೋಟೆಬೆಟ್ಟ ತಲಪಲು ಇನ್ನೂ ೩ಕಿಮೀ ಹೋಗಬೇಕಿತ್ತು. ಅಲ್ಲಿಗೆ ಕೋಟೆಬೆಟ್ಟ ದೂರದಲ್ಲಿ ಕಾಣುತ್ತಿತ್ತು.  ಇಷ್ಟು ನಿಧಾನ ಹೋದರೆ ನಾವು ಅಲ್ಲಿ ತಲಪುವುದು ಯಾವಾಗ? ಎಂಬ ಪ್ರಶ್ನೆ ನಮ್ಮ ಮನದಲ್ಲಿ ಎದ್ದಿತು.








    ಮುಂದೆ ಕಾಡುದಾರಿಯಾಗಿ ಸಾಗಿದೆವು. ಏರುದಾರಿ ಪ್ರಾರಂಭವಾಗಿತ್ತು. ಸುಮಾರು ದೂರದವರೆಗೆ ದಾರಿ ತಪ್ಪಲು ಅವಕಾಶವಿಲ್ಲ. ಒಂದು ಕಡೆ ಮಾತ್ರ ಬಲಭಾಗಕ್ಕೆ ಹೊರಳಿದರೆ ಕೋಟೆಬೆಟ್ಟ ತಲಪುವ ಬದಲು ಮಾದಾಪುರದ ಕಡೆಗೆ ಸಾಗುವ ಅಪಾಯವಿತ್ತು. ಯಾರೂ ಮುಂದೆ ಹೋಗತಕ್ಕದ್ದಲ್ಲ ಎಂದು ಸಂಘಟಕರು ಮೊದಲೇ ಎಚ್ಚರಿಸಿದ್ದರು. ಹಾಗಾಗಿ ನಾವು ಯೋಗೇಂದ್ರ, ಅಮಾನ್ ಅವರ ಕಣ್ಗಾವಲಿನಲ್ಲೇ ಮುಂದುವರಿದೆವು. ಕುರುಚಲು ಸಸ್ಯ ಹಾಗೂ ಕೆಲವು ಮರಗಳಿರುವ ಕಾಡುದಾರಿ. ಕೆಲವು ಪಕ್ಷಿಗಳ ಕಲರವ ಕೇಳುತ್ತಲಿತ್ತು. ಆದರೆ ನಮ್ಮ ಕಣ್ಣಿಗೆ ಗೋಚರಿಸಲಿಲ್ಲ. ಒಂದೆಡೆ ವಿಶ್ರಮಿಸಿದ್ದಾಗ ಸಾವಿರಾರು ಜೇನುನೊಣಗಳ ಹಿಂಡು ನಮ್ಮ ತಲೆಮೇಲಿಂದಲೇ ಸವಾರಿ ಹೊರಟ ಸುಂದರ ದೃಶ್ಯ ನೋಡಿದೆವು. ಮಳೆ, ಬಿಸಿಲೂ ಇಲ್ಲದೆ ಮೋಡಕವಿದ ವಾತಾವರಣವಿದ್ದು ಪ್ರಕೃತಿ ನಮಗೆ ಬಹಳವಾಗಿ ಸಹಕರಿಸಿತ್ತು. ಗಾಳಿ ಬಹಳ ಕಡಿಮೆ ಇತ್ತು. ಒಮ್ಮೊಮ್ಮೆ ಜೋರಾಗಿ ಗಾಳಿಬೀಸಿದಾಗ ಒಂದುಕ್ಷಣ ನಿಂತು ಅದರ ಸುಖವನ್ನು ಅನುಭವಿಸಿ ಮುಂದೆ ಸಾಗುತ್ತಿದ್ದೆವು. ಒಂದು ಜಾತಿಯ ನೊಣ ನಮ್ಮನ್ನು ಮುತ್ತಿಗೆ ಹಾಕಿ ಕಚ್ಚುತ್ತಲಿತ್ತು. ಅದರ ಪೀಡೆಯಿಂದ ತಪ್ಪಿಸಿಕೊಳ್ಳಲು ಎಲೆಗಳಿದ್ದ ಕೊಂಬೆಯಿಂದ ಚಾಮರ ಬೀಸಿಕೊಳ್ಳುತ್ತಲೇ ನಡೆದೆವು. (ಅವು ಕಚ್ಚಿದ ಸ್ಥಳ ಕೆಂಪಾಗಿ ಅಸಾಧ್ಯ ತುರಿಕೆ ಸುರುವಾಗಿತ್ತು. ನನಗೆ ಬೆನ್ನು ಕೈಕಾಲುಗಳಲ್ಲಿ ಅದರ ಕುರುಹು ಕಂಡಿತು. ಸುಮಾರು ನಾಲ್ಕು ದಿನ ತುರಿಕೆ ಇತ್ತು).

ಕಾಡುಸುಮಗಳು ಅಲ್ಲಲ್ಲಿ ಬಿರಿದು ನಮ್ಮ ಮನಸು ಅರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಅದರ ಚಿತ್ರ ಕ್ಲಿಕ್ಕಿಸಿಕೊಂಡು ಮುಂದುವರಿದೆವು. ಮುಂದೆ ಸಾಗಿದಂತೆ ಆನೆಲದ್ದಿ ದರ್ಶನಭಾಗ್ಯವೂ ಲಭಿಸಿತು! ಆನೆಲದ್ದಿ ಲೆಕ್ಕ ಹಾಕಿ ಆನೆಗಣತಿಯನ್ನು ನಾವೂ ಮಾಡಿದೆವು!


  ಅಲ್ಲಲ್ಲಿ ಕುಳಿತು ಕಿತ್ತಳೆ, ಸೌತೆಕಾಯಿ ತಿನ್ನುತ್ತ ಶಕ್ತಿ ಊಡಿಕೊಂಡು,  ಹಿಂದೆ ಬರುವವರ ತಲೆ ಕಾಣುತ್ತಲೇ ನಡೆಮುಂದೆ ನುಗ್ಗಿ ನಡೆಮುಂದೆ ಎಂದು ಬೆಟ್ಟದತ್ತ ದೌಡಾಯಿಸಿದೆವು. ಮಧ್ಯಾಹ್ಯ ೨.೧೫ಕ್ಕೆ ನಾವು ಕೋಟೆಬೆಟ್ಟದಮೇಲೆ ತಲಪಿದೆವು. ಅಲ್ಲಿ ವಿಶಾಲ ಬಯಲು ಪ್ರದೇಶದಲ್ಲಿ ಶಿವನ ಪುಟ್ಟದಾದ ಗುಡಿ ಇದೆ. ಅದರ ಬಾಗಿಲಿಗೆ ಹಾಕಿದ ಬೀಗ ನೋಡಿದರೆ ಶಿವನ ಆಸ್ತಿಪಾಸ್ತಿ ಬಲು ಜೋರಿರಬೇಕು ಅನಿಸಿತು. ಬಾಗಿಲಿಗೆ ಮೂರು ದೊಡ್ಡ ಬೀಗದ ಪಲ್ಲೆಗಳು ಹಾಕಿದ್ದರು. ದೇವಾಲಯದ ಪಕ್ಕದಲ್ಲಿ ಎರಡು ಪುಟ್ಟ ಕೊಳಗಳಿವೆ. ಅದರಲ್ಲಿ ನೀರಿತ್ತು. ಅಲ್ಲಿ ಬರುವ ಪ್ರಾಣಿಗಳ ದಾಹ ನೀಗಿಸಲು ಆ ಕೊಳಗಳು ಸಹಕಾರಿಯಾಗಿವೆ.








  ಬೆಟ್ಟದ ಮೇಲೆ ಹೀಗೊಂದು ವಿಶಾಲ ಬಯಲು ಇದ್ದೀತೆಂಬ ಕಲ್ಪನೆಯೇ ನಮಗೆ ಅದನ್ನು ನೋಡುವ ಮೊದಲು ಬರಲು ಸಾಧ್ಯವಿಲ್ಲ. ಪ್ರಕೃತಿಯ ಈ ವೈವಿಧ್ಯದ ಬಗ್ಗೆ ಬಲು ವಿಸ್ಮಯವೆನಿಸುತ್ತದೆ. ಸುತ್ತಲೂ ಬೆಟ್ಟಗಳು ಮೋಡದಿಂದ ಆವೃತವಾಗಿ ಬಲು ಸುಂದರವಾಗಿ ಕಂಗೊಳಿಸುತ್ತಿದ್ದುವು. ಪ್ರಕೃತಿಯ ಆಟವನ್ನು ನೋಡುತ್ತಲೇ ಕಣ್ಣುತುಂಬಿಸಿಕೊಂಡು ತಂದ ಬುತ್ತಿ ಬಿಚ್ಚಿ ಹೊಟ್ಟೆಯನ್ನೂ ತುಂಬಿಸಿಕೊಂಡೆವು. ಮೋಡಗಳ ಚಿತ್ತಾರ ಎಷ್ಟು ನೋಡಿದರೂ ಸಾಕೆನಿಸದು.   ಮೂರು ಗಂಟೆಗೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಮುಂದೆ ಕಾಣುವ ಗುಡ್ಡವನ್ನು ನಾವು ಕೆಲವರು ಹತ್ತಿದೆವು. ಏರುದಾರಿಯನ್ನು ಉಬ್ಬಸ ಬಿಡುತ್ತ ಹತ್ತಿದೆವು.  ಅಲ್ಲೂ ಕೂಡ ವಿಶಾಲವಾದ ಬಯಲು ಪ್ರದೇಶ. ಅಲ್ಲಿ ತುಸು ವಿರಮಿಸಿ ಸುತ್ತಲೂ ಪ್ರಕೃತಿಯ ಅಗಾಧ ಹಸುರು ರಾಶಿಯನ್ನು ಕಂಡು ಪುಳಕಗೊಂಡೆವು.  ಹೆಚ್ಚು ಹೊತ್ತು ವಿಳಂಬಮಾಡದೆ ಕೆಳಗೆ ಇಳಿದು ಬಂದೆವು.




  ಮೋಡದ ಚಿನ್ನಾಟವನ್ನು ನೋಡುತ್ತಲೇ ಪರಸ್ಪರ ಹರಟೆ ಹೊಡೆಯುತ್ತ ಸಂಜೆ ನಾಲ್ಕು ಗಂಟೆವರೆಗೆ ಅಲ್ಲಿ ಕಾಲ ಕಳೆದೆವು. ತಂಡದ ಚಿತ್ರ ಕ್ಲಿಕ್ಕಿಸಿಕೊಂಡು ಹೊರಡಲು ಯಾರಿಗೂ ಮನವಿಲ್ಲದಿದ್ದರೂ, ಎಲ್ಲರನ್ನೂ ಹೊರಡಿಸುವಲ್ಲಿ ಅಮಾನ್ ಹಾಗೂ ಯೋಗೇಂದ್ರ    ಯಶಸ್ವಿಯಾದರು. ನಾವು ಬೆಟ್ಟ ಇಳಿಯುತ್ತಲಿರುವಾಗ ಕೆಲವು ಯುವಕ ಯುವತಿಯರು ಬೆಟ್ಟ ಹತ್ತುತ್ತಿದ್ದರು. ಅದಾಗಲೇ ಸಂಜೆಯಾಗಿತ್ತು. ಇನ್ನು ಇವರು ಹಿಂದೆ ಬರುವಾಗ ರಾತ್ರಿಯಾಗುತ್ತದೆ. ಕೈಯಲ್ಲಿ ನೀರಿಲ್ಲ, ಟಾರ್ಚ್ ಇಲ್ಲ. ಸಾಲದ್ದದಕ್ಕೆ ಕಾಲಿನಲ್ಲಿ ಹೈಹೀಲ್ಡ್ ಚಪ್ಪಲಿ! ಎಂಥ ಅವಸ್ಥೆ ಅವರದು ಎಂದು ನಮಗನಿಸಿತ್ತು.





  ದಾರಿಯಲ್ಲಿ ಬರುತ್ತಿರಬೇಕಾದರೆ ಸ್ಥಳೀಯರು ನಮ್ಮನ್ನು ನಿಲ್ಲಿಸಿ ‘ನಮ್ಮ ತೋಟದ ಕಬ್ಬು ಕಿತ್ತದ್ದು ಯಾಕೆ? ಎಲ್ಲ ಹಾಳುಮಾಡಿದ್ದೀರಲ್ಲ? ಕೇಳಿದರೆ ನಾವೇ ಕಿತ್ತು ಕೊಡುತ್ತಿದ್ದೆವಲ್ಲ?’  ಎಂದು ತರಾಟೆಗೆ ತೆಗೆದುಕೊಂಡರು. ನಮ್ಮ ತಂಡದ ಯಾರೂ ಅಂಥ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ. ನಾವು ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಸದಸ್ಯರು ಎಂದು ಹೆಮ್ಮೆಯಿಂದ ಉತ್ತರಿಸಿದೆ. ‘ಹೌದಾ? ನಾವೂ ಹಿಂದೆ ಮೈಸೂರಿನ ಯೂಥ್ ಹಾಸ್ಟೆಲಿಗೆ  ಹೋಗಿದ್ದೆವು’ ಎಂದರು. ಕಬ್ಬು ಮುರಿದದ್ದು ಯಾರಿರಬಹುದು? ಎಂಬ ಜಿಜ್ಞಾಸೆ ಕಾಡಿತು.
    ಕೆಲವರಿಗೆ ಬೆಟ್ಟ ಹತ್ತುವುದು ಬಲು ಸಲೀಸು. ಆದರೆ ಇಳಿಯಲು ಬಲು ಕಷ್ಟ. ನನಗೋ ಬೆಟ್ಟ ಹತ್ತುವುದು ಕಷ್ಟ, ಇಳಿಯುವುದು ಬಲು ಸುಲಭ. ಒಟ್ಟೊಟ್ಟಿಗೇ ಇಳಿಯಬೇಕು ಯಾರೂ ಮುಂದೆ ಹೋಗತಕ್ಕದ್ದಲ್ಲ ಎಂದು ಆಯೋಜಕರು ಹೇಳಿದ ಕಟ್ಟಪ್ಪಣೆಯನ್ನು ನಾವು ಪಾಲಿಸಿದೆವು. ತಂಡದ ಮುಖ್ಯಸ್ಥರು ಹೇಳಿದ ಕಟ್ಟಪ್ಪಣೆಯನ್ನು ನಾವು ಪಾಲಿಸಿದೆವು. (ಬೇಗನೆ ಇಳಿದರೂ ಅಲ್ಲಲ್ಲಿ ಕೂತು ವಿರಮಿಸಿದೆವು. ಆಗ ಕಂಡಿತು ನನ್ನ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತು. ಓಹೋ ನಾನು ಜಿಗಣೆಗೆ ರಕ್ತದಾನ ಮಾಡಿದ್ದೆ ಎಂದು ಖುಷಿಯಾಯಿತು! ಒ ಪಾಸಿಟಿವ್ ಗುಂಪಿನ ರಕ್ತ ಸ್ವೀಕರಿಸಿದ ಆ ಇಂಬಳುವಿನ ಗತಿ ಏನಾಯಿತೋ ತಿಳಿಯದಾಯಿತು! ಅದರ ರಕ್ತದ್ದು ಯಾವ ಗುಂಪೋ? ಬೇರೆ ಯಾರೂ ರಕ್ತದಾನ ಮಾಡಲಿಲ್ಲ.)   ಬೆಟ್ಟ ಇಳಿದು ರಸ್ತೆ ಸಿಗುವಲ್ಲಿವರೆಗೆ ಇಂಥ ಕಟ್ಟುಪಾಡು. ಮುಂದೆ ದಾರಿ ತಪ್ಪುವ ಯಾವ ಭಯವೂ ಇಲ್ಲದ ಕಾರಣ, ಅದಾಗಲೇ ಗಂಟೆ ೫.೩೦ ದಾಟಿರುವುದರಿಂದ ನಾವು ಏಳೆಂಟು ಮಂದಿ ಮುಂದೆ ಎಲ್ಲೂ ನಿಲ್ಲದೆ ನಮ್ಮ ಬಸ್ ನಿಂತಿದ್ದ ಸ್ಥಳದೆಡೆಗೆ ಸಾಗಲು ಗಮನವಿತ್ತೆವು. ೬.೧೫ಕ್ಕೆ ನಾವು ಗುರಿಮುಟ್ಟಿದೆವು. ಎಲ್ಲರೂ ಬಂದು ಸೇರುವಾಗ  ೬.೪೫ .

  ನಾವು ಬಸ್ ಬಳಿ ಬಂದಾಗ ಕೆಲವು ಯುವಕರು ಅಲ್ಲಿದ್ದರು. ಅವರ ತಂಡದವರೇ ಬೆಟ್ಟ ಹತ್ತಲು ಹೋದದ್ದಂತೆ. ಅವರೂ ಸ್ವಲ್ಪ ದೂರ ಹೋಗಿ ಇನ್ನು ಮುಂದೆ ಹೋದರೆ ಬರುವಾಗ ರಾತ್ರಿಯಾದೀತು ಎಂದು ಹೆದರಿ ಹಿಂದೆ ಬಂದರಂತೆ. ಈ ಯುವಕ ಯವತಿಯರು ಬೆಂಗಳೂರಿನಿಂದ ಬಂದದ್ದಂತೆ.  ಈ ಯುವಕರು ಹೋಗುತ್ತ ಅಲ್ಲಿ ತೋಟಕ್ಕೆ ನುಗ್ಗಿ ಕಬ್ಬು ಕಿತ್ತು ತಿಂದದ್ದೆಂದು ನಮಗೆ ಹೇಳಿದರು. ನೀವು ಮಾಡಿದ ತಪ್ಪು ಕೆಲಸದಿಂದ ನಾವು ಬೈಸಿಕೊಳ್ಳಬೇಕಾಯಿತು ಎಂದು ಹೇಳಿದೆ.  ನಾವು ಅಲ್ಲಿ ನಮ್ಮ ತಂಡದವರ ಆಗಮನವನ್ನು ಕಾಯುತ್ತಲಿದ್ದಾಗ ಕಾರಿನಲ್ಲಿ ಒಬ್ಬ ಯುವಕ ಯುವತಿ ಕೋಟೆಬೆಟ್ಟದತ್ತ ತೆರಳಲು ಬಂದರು. ಈಗ ಹೋಗಬೇಡಿ. ೮ಕಿಮೀ ಇದೆ. ರಸ್ತೆ ೫ಕಿಮೀ ಮಾತ್ರ. ಮತ್ತೆ ನಡೆಯಬೇಕು. ರಾತ್ರಿಯಾಗುತ್ತದೆ ಎಂದು ನಾವು ಹೇಳಿದೆವು. ನಮ್ಮ ಮಾತನ್ನು ಕೇಳದೆಯೇ ಅವರು ಹೋದರು. ಕಾಲುಗಂಟೆಯಲ್ಲೆ ವಾಪಾಸಾಗಿ ‘ಮಾದಾಪುರದಿಂದ ಹೋಗಲು ಸಾಧ್ಯವೇ?’ ಎಂದು ಕೇಳಿದರು. ಇಲ್ಲ. ಯಾವ ದಾರಿಯಿಂದಲೂ ಇವತ್ತು ಇನ್ನು ಸಾಧ್ಯವಿಲ್ಲ ಎಂದುತ್ತರಿಸಿದೆವು. 
  ಕೋಟೆಬೆಟ್ಟಕ್ಕೆ ತೆರಳಲು ಒಟ್ಟು ಮೂರು ದಾರಿಗಳಿವೆಯಂತೆ.  ೧) ಮಾದಾಪುರದಿಂದ ೪-೫ಕಿಮೀ. ನಡಿಗೆ ೨) ಹಟ್ಟಿಹೊಳೆಯಿಂದ ೮-೯ಕಿಮೀ. ನಡಿಗೆ ೩) ಕೋಟೆಬೆಟ್ಟದ ಉತ್ತುಂಗದ ನೇರ ಪಾದದಲ್ಲಿರುವ ದೇವಸ್ಥಾನದ ಬಳಿಯಿಂದ ಸಾಗುವ ಹಾದಿ. 
  ಏಳುಗಂಟೆಗೆ ನಾವು ಬಸ್ಸೇರಿ ಮೈಸೂರಿಗೆ ಹೊರಟೆವು. ಹುಣಸೂರಿನಲ್ಲಿ ಊಟವಾಗಿ ಮೈಸೂರು ತಲಪುವಾಗ ರಾತ್ರಿ ೧೧ ಗಂಟೆ. ಅವರವರ ಮನೆ ಬಳಿ ಇಳಿಸಿದರು. ಯೂಥ್ ಹಾಸ್ಟೆಲಿನ ಗಂಗೋತ್ರಿ ಘಟಕದ ವತಿಯಿಂದ ಅಮಾನ್ ಮತ್ತು ಯೋಗೇಂದ್ರ ಈ ಚಾರಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಅವರಿಗೆ ಎಲ್ಲ ಚಾರಣಿಗರ ಪರವಾಗಿ ಧನ್ಯವಾದ. 

ಗುರುವಾರ, ಮಾರ್ಚ್ 30, 2017

ಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟ

   ಮಂಡ್ಯ ತಾಲೂಕಿನ ಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟಕ್ಕೆ ೧೯-೩-೨೦೧೭ರಂದು ಚಾರಣ ಏರ್ಪಡಿಸಿದ್ದೇವೆ ಎಂದು ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕ ಮೈಸೂರಿನವರು ಪ್ರಕಟಣೆ ಹೊರಡಿಸಿದ್ದರು. ಮಾರ್ಚ್ ತಿಂಗಳಿನಲ್ಲಿ ಬಿಸಿಲು ಜಾಸ್ತಿ. ಚಾರಣ ಹೋಗುವುದಾ ಬೇಡವಾ ಎಂಬ ಜಿಜ್ಞಾಸೆ ಎದುರಾಯಿತು. ಬಿಸಿಲೇ ಇರಲಿ ಮಳೆಯೇ ಬರಲಿ ಅದಕ್ಕೆಲ್ಲ ಅಂಜಿದರೆ ಏನು ಶಿವಾ? ಬಿಸಿಲು, ಮಳೆನಾಡಿನಲ್ಲಿ ಜನಿಸಿದ ನಾನು ಅವಕ್ಕಂಜಿದರೆ ನಾನು ಹುಟ್ಟಿದ ತಾಯಿನಾಡಿಗೇ ಅವಮಾನ ಎಂದು ತೀರ್ಮಾನಿಸಿ ಚಾರಣ ಹೊರಡುವುದೆಂದು ರೂ. ೫೫೦ ಕಟ್ಟಿ ರಸೀತಿ ಪಡೆದೆ. 
   ಆ ದಿನ ಬೆಳಗ್ಗೆ ೬.೩೦ಗಂಟೆಗೆ ನಾವು ೩೨ ಮಂದಿ ಸಣ್ಣ ಬಸ್ಸಿನಲ್ಲಿ ಮೈಸೂರಿನಿಂದ ಹೊರಟು ಶ್ರೀರಂಗಪಟ್ಟಣವಾಗಿ ನಾಗಮಂಗಲಕ್ಕೆ ೭.೫೦ಕ್ಕೆ ತಲಪಿದೆವು. ಅಲ್ಲಿಯ ವಸಂತ ಖಾನಾವಳಿಯಲ್ಲಿ ಇಡ್ಲಿ ವಡೆ ಕಾಫಿ ಸೇವನೆಯಾಯಿತು. ನನ್ನ ಪಕ್ಕ ಕೂತವರೊಬ್ಬರು ವಡೆ ಮುರಿಯುತ್ತ ತುಂಬ ಎಣ್ಣೆ ಇದೆ ಏನೂ ಚೆನ್ನಾಗಿಲ್ಲ ಎಂದು ಅರ್ಧ ವಡೆ ತಟ್ಟೆಯಲ್ಲೇ ಬಿಟ್ಟರು. ಛೇ! ಎಂಥ ಅನ್ಯಾಯವಿದು. ಅಂಥ ರುಚಿಯ ವಡೆಯನ್ನು ಬಿಡುವುದುಂಟೆ? ಎಣ್ಣೆ ಇಲ್ಲದೆ ವಡೆ ಹೇಗೆ ಮಾಡುವುದು? ನಾನು ಎರಡು ವಡೆ ತಿಂದು ಆಹಾ ಎಂಥ ರುಚಿ ಎಂದು ಮನದಲ್ಲೇ ಹೇಳಿಕೊಂಡೆ. ತಿಂಡಿಯಾಗಿ ೮.೨೦ಕ್ಕೆ ಹೊರಟು ನೆಲ್ಲೀಗೆರೆ ಹಾದು ಅಲ್ಲಿಂದ ಬಲಕ್ಕೆ ಹಾಸನ ಬೆಂಗಳೂರು ಹೈವೇಯಲ್ಲಿ ಮುಂದೆ ಸಾಗುವಾಗ ಟೋಲ್ ಸಿಗುತ್ತದೆ. ಮತ್ತೂ ಸಾಗಿ ಸ್ವಲ್ಪವೇ ದೂರದಲ್ಲಿ ಎಡಕ್ಕೆ ತಿರುಗಿದಾಗ ಹನುಮಂತರಾಯ ಬೆಟ್ಟಕ್ಕೆ ಹೋಗುವ ಸಲುವಾಗಿ ದೊಡ್ಡ ಕಮಾನು ಕಾಣುತ್ತದೆ. ಅಲ್ಲಿಂದ ಕೆಲವೇ ಕಿಮೀ ಸಾಗಿದಾಗ ಭೈರಸಂದ್ರ ಊರು ಸಿಗುತ್ತದೆ. ಬೆಟ್ಟದ ಬುಡದವರೆಗೆ ಹೋಗಿ ನಾವು ಬಸ್ಸಿಂದ ಇಳಿದೆವು. ಬಾಲರವಿಯೂ ನಮ್ಮೊಡನೆಯೇ ಸಾಗುತ್ತ ಬಂದು ಕ್ರಮೇಣ ಪ್ರಖರವಾಗಿ ನಾವು ಕಿಟಕಿಯಿಂದ ತಲೆ ಹೊರಹಾಕದಂತೆ ಚಳಕ ತೋರಿಸಿದ.







 ಹದ್ದಿನಕಲ್ಲು ಒಂದು ಪುಟ್ಟಬೆಟ್ಟ. ಅಗಲವಾಗಿ ವಿಶಾಲವಾಗಿ ನಮ್ಮೆದುರು ಕಾಣುತ್ತದೆ. ನಾವು ಬೆಟ್ಟ ಹತ್ತಲು ಪ್ರಾರಂಭಿಸಿದಾಗ ಗಂಟೆ ೯.೧೫. ನಾಲ್ಕೈದು ಮಂದಿ ಮೊದಲ ಬಾರಿಗೆ ಚಾರಣ ಬಂದವರಿದ್ದರು. ಅವರೂ ಹುರುಪಿನಿಂದಲೇ ಹತ್ತಲು ತೊಡಗಿದರು. ಬೆಟ್ಟ ಹತ್ತಲು ಮೆಟ್ಟಲುಗಳಿವೆ. ಚಪ್ಪಲಿ ಶೂ ಧರಿಸಿ ಬೆಟ್ಟ ಹತ್ತಬಾರದು ಎಂದು ಸ್ಥಳೀಯರು ಬಲವಾಗಿ ವಿರೋಧಿಸಿದರು. ಅಲ್ಲಿ ಹಾಗೆ ಫಲಕ ಹಾಕಿದ್ದು ಕಂಡಿತು. ಆದರೆ ನಾವು ಅವರ ಮಾತನ್ನು ಮಾನ್ಯ ಮಾಡದೆ ಚಪ್ಪಲಿ ಶೂ ಸಮೇತವೇ ಅಡಿ ಇಟ್ಟೆವು. ಪ್ರಾರಂಭದಲ್ಲಿ ಹತ್ತಿಪ್ಪತ್ತು ಮೆಟ್ಟಲು ಚಪ್ಪಡಿಕಲ್ಲುಗಳಿಂದ ಹೊಸದಾಗಿ ಕಟ್ಟಿದ್ದರು. ಮುಂದೆ ನಿಸರ್ಗನಿರ್ಮಿತ ಕಲ್ಲುಗಳ ಮೆಟ್ಟಲುಗಳು. ಬೆಟ್ಟದ ತುದಿವರೆಗೂ ಹಳೆಮೆಟ್ಟಲುಗಳನ್ನು ತೆಗೆದು ಹೊಸದಾಗಿ ಮೆಟ್ಟಲುಗಳನ್ನು ಕಟ್ಟಿಸುತ್ತಾರಂತೆ. ಅದಕ್ಕಾಗಿ ಭಕ್ತಾದಿಗಳು ತುಂಬ ಮಂದಿ ರೂ. ದಾನ ಮಾಡಿದ್ದರ ಬಗ್ಗೆ ಫಲಕ ಹಾಕಿದ್ದರು. ಬಿಸಿಲು ಜೋರಾಗಿತ್ತು. ಬೆಟ್ಟ ಹತ್ತುತ್ತಿದ್ದಂತೆ ಬೆವರು ಇಳಿಯುತ್ತಿತ್ತು. ನಾವು ಅಲ್ಲಲ್ಲಿ ನಿಲ್ಲುತ್ತ ನಿಧಾನವಾಗಿಯೇ ಮೆಟ್ಟಲು ಹತ್ತಿದೆವು. ಸ್ವಲ್ಪ ದೂರ ಹತ್ತಿದಾಗ ಹದ್ದಿನ ಬಾಯಿ ತೆರೆದಂತೆ ಎರಡು ಬೃಹತ್‌ಬಂಡೆಗಳು ಕಾಣುತ್ತವೆ. ಸುತ್ತಲೂ ಬೃಹದಾಕಾರದ ಬಂಡೆಗಳು ಸಾಕಷ್ಟಿವೆ. ಆ ಬಂಡೆಗಳ ಮೇಲೆಲ್ಲ ಆಂಜನೇಯನ ಚಿತ್ರವನ್ನು ಸೊಗಸಾಗಿ ಬಣ್ಣದಲ್ಲಿ ರಚಿಸಿದ್ದಾರೆ. ಆಕಾಶದಲ್ಲಿ ಏಳೆಂಟು ನಿಜ ಹದ್ದುಗಳು ಗಸ್ತು ತಿರುಗುತ್ತಿದ್ದುದು ಕಂಡುಬಂತು. 





    ಹದ್ದಿನಕಲ್ಲು ಬೆಟ್ಟದಲ್ಲಿ ಗಿಡಮರಗಳು ಕಡಿಮೆ. ಇದ್ದದ್ದೂ ಬಿಸಿಲಿಗೆ ಒಣಗಿದ್ದುವು. ನೆರಳಿಗಾಗಿ ಒಂದೂ ಮರ ಇರಲಿಲ್ಲ. ಕೋತಿಗಳು ಸುಮಾರಿದ್ದುವು. ಕೆಲವು ಕೋತಿಗಳು ಬಡವಾಗಿ ಮೂಳೆಚಕ್ಕಳ ಎದ್ದು ಕಾಣುತ್ತಿತ್ತು. ಬಸ್ಸಲ್ಲಿ ನಮಗೆ ಎರಡು ಸೌತೆಕಾಯಿ, ಎರಡು ಕಿತ್ತಳೆ, ಕೋಡುಬಳೆ ಒಬ್ಬಟ್ಟು ಇದ್ದ ಚೀಲ ಕೊಟ್ಟಿದ್ದರು. ರಾಜೇಂದ್ರ ಹಾಗೂ ರಶೀದ್ ಅವರಿಗೆ ಕೋತಿಗಳ ಆ ಸ್ಥಿತಿ ಕಂಡು ಕನಿಕರ ಉಕ್ಕಿ ಸೌತೆಕಾಯಿಗಳನ್ನು ಅವುಗಳಿಗೆ ಹಂಚಿದರು.  ಮುಕ್ಕಾಲುಭಾಗ ಹತ್ತಿಯಾಗುವಾಗ ಸಣ್ಣ ಕೊಳ ಸಿಗುತ್ತದೆ. ಅದರ ನೀರು ಪಾಚಿಕಟ್ಟಿ ಹಸಿರಾಗಿತ್ತು. ಮತ್ತು ಅದರಲ್ಲಿ ಪ್ಲಾಸ್ಟಿಕ್ ಕಸ ಧಾರಾಳವಾಗಿತ್ತು. ಭಕ್ತಾದಿಗಳ ಕೆಟ್ಟ ಚಾಳಿ ಕೆರೆಯಲ್ಲಿ ಕಾಣುತ್ತಿತ್ತು. ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಚಪ್ಪಲಿ ಹಾಕಿ ಹತ್ತಬಾರದು ಎಂದು ಹೇಳುವ ಬದಲು ಕಸ, ಪ್ಲಾಸ್ಟಿಕ್ ಹಾಕಬಾರದು ಎಂದು ಕಟ್ಟುನಿಟ್ಟಾಗಿ ಹೇಳಿ ಅದರ ಆಚರಣೆಗೆ ಮನಸ್ಸು ಮಾಡಲಿ ಎಂದು ನಮ್ಮ ತಂಡದವರೊಬ್ಬರು ಹೇಳಿಕೊಂಡರು.

 ಕೆಲವೆಡೆ ಮರಗಳ, ಗಿಡಪೊದೆಗಳಮೇಲೆಲ್ಲ ಹಳೆಬಟ್ಟೆ ನೇಲುತ್ತಿದ್ದುದು ಕಂಡಿತು. ಇದೇನು ಹರಕೆಗಳು ಇರಬಹುದು? ಎಂದು ಮನದಲ್ಲಿ ಪ್ರಶ್ನೆ ಎದ್ದಿತು. ಹೊಸಬರಿಗೆ ಹುರಿದುಂಬಿಸುತ್ತ ಮೆಟ್ಟಲು ಹತ್ತಿ ಬೆಟ್ಟದ ತುದಿ ತಲಪಿದಾಗ ಗಂಟೆ ೧೦.೪೫. 


  ಅಲ್ಲಿ ಆಂಜನೇಯನ ಪುಟ್ಟ ದೇವಾಲಯವಿದೆ. ನಿಜವಾದ ಹನುಮರು (ಕೋತಿಗಳು) ಸಾಕಷ್ಟಿದ್ದರು. ಈ ಹನುಮಂತ ದೇವಾಲಯ ೧೨ನೇ ಶತಮಾನದಲ್ಲಿ ಸ್ಥಾಪನೆಯಾದದ್ದಂತೆ. ಚೋಳರ ಕಾಲದಲ್ಲಿ ದೊಡ್ಡ ಕಲ್ಲುಕಂಬದಲ್ಲಿರುವ ಹನುಮನನ್ನು ಬೇಲೂರಿನಿಂದ ತಂದು ಸ್ಥಾಪನೆ ಮಾಡಿದ್ದಂತೆ. ಭಾರವಾದ ಈ ಕಂಬವನ್ನು ಹೇಗೆ ಬೆಟ್ಟದ ಮೇಲಕ್ಕೆ ಒಯ್ಯುವುದು ಎಂದು ಜನರೆಲ್ಲ ಚಿಂತಿತರಾಗಿದ್ದಾಗ ಕಲ್ಲುಕಂಬ ಬಹಳ ಹಗುರವಾಗಿತ್ತಂತೆ. ಏನೊಂದೂ ಕಷ್ಟವಿಲ್ಲದೆ ಹೂ ಎತ್ತಿದಂತೆ ಕಲ್ಲುಕಂಬವನ್ನು ಬೆಟ್ಟದಮೇಲಕ್ಕೆ ಸಾಗಿಸಿದರಂತೆ. ಮೊದಲಿಗೆ ಆಲಯವಿಲ್ಲದೆ ಬಯಲಲ್ಲೇ ಕಲ್ಲುಕಂಬವಿದ್ದದ್ದಂತೆ. ಇತ್ತೀಚೆಗೆ ಮೇಲಕ್ಕೆ ಶೀಟ್ ಹಾಕಿ ಸುತ್ತಲೂ ಕಬ್ಬಿಣದ ಜಾಲರಿ ಹಾಕಿ ಕೋತಿಗಳು ಒಳಗೆ ಬರದಂತೆ ಬಂದೋಬಸ್ತ್ ಮಾಡಿದ್ದಾರೆ. ಕಲ್ಲುಕಂಬದಲ್ಲಿ ಒಂದೆಡೆ ಹನುಮ, ಹನುಮನ ಕಾಲ ಕೆಳಗೆ ಇಂದ್ರಜಿತ್, ಇನ್ನೊಂದು ಪಾರ್ಶ್ವದಲ್ಲಿ ನರಸಿಂಹ, ಮತ್ತೊಂದು ಭಾಗದಲ್ಲಿ ಗಣಪತಿ ಕಾಣಬಹುದು. ಬೆಟ್ಟದಮೇಲೆ ಮೊದಲು ಪ್ರಾಣಿ ಬಲಿ ಕೊಡುವುದು ಇತ್ತಂತೆ. ಈಗ ಅದು ಬೆಟ್ಟದಕೆಳಗೆ ನಡೆಯುತ್ತದಂತೆ. ಅಲ್ಲಿ ಇಂದ್ರಜಿತ್ ಮೂರ್ತಿ ಇರುವ ಸ್ಥಳದಲ್ಲಿ ಪ್ರಾಣಿಬಲಿ ಕೊಡುತ್ತಾರಂತೆ. ಇಲ್ಲಿಯ ಹನುಮಂತನ ವೈಶಿಷ್ಟ್ಯವೆಂದರೆ ಗಾಳಿ ಬಿಡಿಸುವುದಂತೆ. ಗಾಳಿ ಬಿಡಿಸುವುದು ಎಂದರೆ ಏನು? ಎಂದು ಯಾರೊ ಒಬ್ಬರು ಕೇಳಿದರು. ಅಂದರೆ ಭೂತ, ಪಿಶಾಚಿ ಮೈಮೇಲೆ ಬರುವುದು ಎಂದು ಅರ್ಚಕರಾದ ಕೃಷ್ಣಮೂರ್ತಿ ಹೇಳಿದರು. ನೀವು ವಿದ್ಯಾವಂತರು ಇದನ್ನು ನಂಬಲಿಕ್ಕಿಲ್ಲ, ಆದರೆ ನಾನು ಕಣ್ಣಾರೆ ನೋಡಿದ್ದೇನೆ. ಭೂತ ಪಿಶಾಚಿ ಮೈಮೇಲೆ ಬಂದವರು ಇಲ್ಲಿ ಬಂದು ಹನುಮನಲ್ಲಿ ಕೇಳಿಕೊಂಡರೆ ಅವರು ಈ ಕಾಯಿಲೆಯಿಂದ ಮುಕ್ತರಾಗಿ ವಾಪಾಸಾಗುತ್ತಾರೆ. ಇಷ್ಟೇ ದುಡ್ಡು ಕೊಡಿ ಎಂದು ಕೇಳುವುದಿಲ್ಲ. ತಮ್ಮ ಇಚ್ಛೆಗೆ ಅನುಸಾರ ಎಷ್ಟಾದರೂ ಕಾಣಿಕೆ ಹಾಕಬಹುದು. ಹನುಮನಿಗೆ ಒಂದು ಹೂ ಹಾಕಿ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂದು ಅರ್ಚಕರು ಹೇಳಿದರು. ಅವರವರ ನಂಬಿಕೆ ಅವರವರಿಗೆ.  
 ಭೂತ ಹಿಡಿದವರು ದೇವಾಲಯಕ್ಕೆ ಬಂದು ಪೂಜೆ ಮಾಡಿಸಿ ಹೋಗುವಾಗ ತೊಟ್ಟುಕೊಂಡು ಬಂದಿದ್ದ ಬಟ್ಟೆಯನ್ನು ಅಲ್ಲಿ ಹಾಕಿ ಹೋಗುವುದಂತೆ. ಬಟ್ಟೆ ಬೀಸಾಕದೆ ಕೊಂಡೋಗಿ. ಬಟ್ಟೆಯಿಂದ ಏನೂ ತೊಂದರೆ ಇಲ್ಲ ಎಂದು ಎಷ್ಟು ಹೇಳಿದರೂ ಕೇಳದೆ ಬಟ್ಟೆ ಬೀಸಾಕಿಯೇ ಹೋಗುತ್ತಾರೆಂದು ಅರ್ಚಕರು ಹೇಳಿದರು.  ಮನಸ್ಸಿಗೆ ಹೊಕ್ಕಿದ ಮೌಡ್ಯನಂಬಿಕೆಯನ್ನು ಹೋಗಲಾಡಿಸುವುದು ಬಹಳ ಕಷ್ಟ. ನನ್ನ ಮನದಲ್ಲೆದ್ದ ಪ್ರಶ್ನೆಗೆ ಉತ್ತರ ಸಿಕ್ಕಿತು! 

ತಾತ ಮುತ್ತಾತನ ಕಾಲದಿಂದಲೂ ಅರ್ಚಕರ ಕುಟುಂಬದವರೇ ಇಲ್ಲಿ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರಂತೆ.  
ನಾವು ಅಲ್ಲಿ ಒಂದು ಗಂಟೆ ವಿರಮಿಸಿದೆವು. ತಂಪಾದ ಗಾಳಿ ಬೀಸುತ್ತಿತ್ತು. ವೈದ್ಯನಾಥನ್, ಅಹಲ್ಯಾ ಭಕ್ತಿಗೀತೆಗಳನ್ನು ಹಾಡಿದರು. ಅರ್ಚಕರು ಮಂಗಳಾರತಿ ಮಾಡಿ ತೀರ್ಥ ಕೊಟ್ಟರು.  ತಂಡದ ಛಾಯಾಚಿತ್ರ ಕ್ಲಿಕ್ಕಿಸಿಕೊಂಡು ಅಲ್ಲಿಂದ ನಾವು ೧೧.೪೫ಕ್ಕೆ ಬೆಟ್ಟ ಇಳಿಯಲು ತೊಡಗಿದೆವು. 





 ಸ್ವಲ್ಪ ಕೆಳಗೆ ಬರುತ್ತಿರಬೇಕಾದರೆ ಮಗುವನ್ನೆತ್ತಿಕೊಂಡಿದ್ದ ದಂಪತಿಗಳು ಮೆಟ್ಟಲಲ್ಲಿ ಬಸವಳಿದು ಕೂತಿದ್ದರು. ಅವರನ್ನು ಮಾತಾಡಿಸಿದಾಗ, ಅವರು ತಂದ ನೀರು ಖಾಲಿಯಾಗಿ, ಮೇಲೆ ದೇವಾಲಯಕ್ಕೆ ಬರಲೆ ಇಲ್ಲವಂತೆ. ಬೆಟ್ಟದಮೇಲೆ ಕುಡಿಯಲು ನೀರು ಸಿಗುವುದಿಲ್ಲ ಎಂದು ಯಾರೋ ಹೇಳಿದರಂತೆ. ಈಗಲೆ ಬಾಯಾರಿಕೆಯಾಗಿದೆ. ಇನ್ನೂ ಮೇಲೆ ಹತ್ತಿಹೋದರೆ ಕಷ್ಟ ಎಂದು ಇಳಿಯಲು ತೊಡಗಿದ್ದರು. ಇನ್ನು ಐದು ನಿಮಿಷ ಹತ್ತಿದ್ದರೆ ದೇವಾಲಯ ಕಾಣುತ್ತದೆ ಹೋಗಬಹುದಿತ್ತು ಎಂದೆ. ನೀರಿಲ್ಲದೆ ಹೋಗಲು ಅವರಿಗೆ ಧೈರ್ಯವಾಗದೆ ಹಿಂತಿರುಗಿದರಂತೆ. ಅವರು ಬರಿಕಾಲಲ್ಲಿ ಬಂದಿದ್ದರು. ಮೆಟ್ಟಲಿನ ಕಲ್ಲು ಕಾದು ಕಾಲಿಗೆ ಸರಿಯಾಗಿ ಶಾಖ ಕೊಡುತ್ತಿತ್ತು. ಕಾಲಿಡಲೇ ಕಷ್ಟ ಪಡುತ್ತಿದ್ದರು. ಭಕ್ತಿ ಇರಬೇಕು ನಿಜ. ಆದರೆ ಅತೀ ಭಕ್ತಿಯಾದರೆ ಈ ಕಷ್ಟ ಎಂದೆನಿಸಿತು. ಅವರ ಕಷ್ಟ ನೋಡಲಾರದೆ ನಾನು ಹಾಕಿಕೊಂಡಿದ್ದ ಕಾಲುಚೀಲ (ಸಾಕ್ಸ್) ಬಿಚ್ಚಿ ಆ ಹೆಂಗಸಿಗೆ ಕೊಟ್ಟೆ. ಅವಳು ಖುಷಿಯಿಂದ ಪಡೆದು ಹಾಕಿಕೊಂಡು ಮೆಟ್ಟಲಿಳಿದಳು. ಅವರ ಮಗುವಿಗೆ ಟೊಪ್ಪಿ ಕೊಟ್ಟರು ಸುಬ್ಬಲಕ್ಷ್ಮೀ. ಕೆಳಗೆ ೧೨.೩೦ಗೆ ಇಳಿದು ಕಬ್ಬಿನ ಹಾಲು ಕುಡಿದೆವು. ರಾಜೇಂದ್ರ ಅವರು ಎಲ್ಲರಿಗೂ ಅವರ ವತಿಯಿಂದ ಕಬ್ಬಿನ ಹಾಲು ಕೊಡಿಸಿದರು.
ಆಂಜನೇಯ ದೇವಾಲಯ
 ಅಲ್ಲಿಂದ ಬಸ್ ಹತ್ತಿ ಭೈರಸಂದ್ರದ ಆಂಜನೇಯ ದೇವಾಲಯಕ್ಕೆ ಬಂದೆವು. ಈ ದೇವಾಲಯ ಇತ್ತೀಚೆಗೆ ನಿರ್ಮಾಣಗೊಂಡಿರುವುದು. ಬೃಹತ್ ಆಂಜನೇಯ ವಿಗ್ರಹ ಸೊಗಸಾಗಿದೆ. ಏಳು ವರ್ಷದ ಮೊದಲು ಪುಟ್ಟದಾಗಿರುವ ಗುಡಿ ಇತ್ತಂತೆ. 

ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯ  ನಾಗಮಂಗಲ

ನಾವು ಅಲ್ಲಿಂದ ನಾಗಮಂಗಲದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯಕ್ಕೆ ಹೋದೆವು. ಸರಿಯಾಗಿ ಮಹಾಮಂಗಳಾರತಿಯ ಸಮಯವಾಗಿತ್ತು. ದೇವಾಲಯದೊಳಗೆ ಸುಮಾರು ಹಣತೆಗಳನ್ನು ಹಚ್ಚಿಟ್ಟಿದ್ದರು. ಅದು ಬಹಳ ಸೊಗಸಾಗಿ ಕಾಣುತ್ತಿತ್ತು. ಭಕ್ತಾದಿಗಳು ಸಾಕಷ್ಟಿದ್ದರು.
 ಕ್ರಿಶ. ೧೨ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಬಹಳ ವಿಶಾಲವಾದ ದೇವಾಲಯವಿದು. ಏಳು ಅಂತಸ್ತಿನ ದ್ರಾವಿಡ ಶೈಲಿಯ ರಾಯಗೋಪುರವು ವಿಜಯನಗರ ವಾಸ್ತಿಶಿಲ್ಪದ ಶೈಲಿಯಲ್ಲಿದೆ. ಇದು ತ್ರಿಕೂಟಾಚಲ ದೇವಾಲಯವಾಗಿದ್ದು, ವಿಶಾಲ ತಳಹದಿಯಮೇಲೆ ನಿರ್ಮಾಣವಾಗಿದೆ. ನಾಲ್ಕು ಅಡಿ ಎತ್ತರದ ನಕ್ಷತ್ರಾಕಾರದ ಕೋನದಿಂದ ಕೂಡಿದ ವಿಶಾಲವಾದ ಐದು ಅಂತಸ್ತುಗಳ ಜಗತಿ ಇದೆ. ಮೂರು ಗರ್ಭಗೃಹಗಳಿದ್ದು, ಪೂರ್ವಕ್ಕೆ ಮುಖ್ಯಗುಡಿಯಲ್ಲಿ ಏಳು‌ಅಡಿ ಎತ್ತರದ ಸುಂದರವಾದ ಸೌಮ್ಯಕೇಶವ ವಿಗ್ರಹವಿದೆ. ನಾಲ್ಕು ಕೈಗಳಿದ್ದು, ಮೇಲಿನ ಬಲ ಹಾಗೂ ಎಡ ಕೈಗಳಲ್ಲಿ ಶಂಖ ಚಕ್ರಗಳಿದ್ದು, ಕೆಳಗಿನ ಬಲ ಹಾಗೂ ಎಡಗೈಗಳಲ್ಲಿ ಪದ್ಮ ಹಾಗೂ ಗದೆಗಳಿವೆ. ಉತ್ತರದ ಗರ್ಭಗೃಹದಲ್ಲಿ ಹೊಯ್ಸಳಕಾಲದ ಲಕ್ಷ್ಮೀನಾರಸಿಂಹ, ದಕ್ಷಿಣಭಾಗದ ಗರ್ಭಗೃಹದಲ್ಲಿ ವೇಣುಗೋಪಾಲ, ರುಕ್ಮಿಣಿ ಮತ್ತು ಸತ್ಯಭಾಮೆಯರ ಸುಂದರ ವಿಗ್ರಹಗಳಿವೆ. 
ಈ ದೇವಾಲಯದ ಮುಂಭಾಗ ಐದು ಅಡಿ ಪೀಠದ ಮೇಲೆ ಸುಮಾರು ೪೭ ಅಡಿ ಎತ್ತರದ ಏಕಶಿಲಾ ದೀಪಸ್ತಂಭವಿದ್ದು, ಸರಪಳಿ ಮೂಲಕ ಕಂಬದ ಮೇಲೆ ದೀಪ ಹೊತ್ತಿಸುವ ಯಾಂತ್ರಿಕ ವ್ಯವಸ್ಥೆ ಇಂದಿಗೂ ಕೂಡ ಸುಸ್ಥಿತಿಯಲ್ಲಿದೆ. ಈ ದೇವಾಲಯ ವಿಶಾಲವಾಗಿ ಬಹಳ ಸುಂದರವಾಗಿದೆ.  

ನಾವು ದೇವಾಲಯ ನೋಡಿಯಾದಮೆಲೆ ೧.೩೦ಗೆ ಊಟಕ್ಕೆ ಅಣಿಯಾದೆವು. ದೇವಾಲಯದ ಹೊರಭಾಗದ ಪಾರ್ಶ್ವದಲ್ಲಿರುವ ಕಟ್ಟಡದಲ್ಲಿ ಪ್ರತೀ ಶನಿವಾರ ಭಾನುವಾರಗಳಂದು ಪ್ರಸಾದ ಭೋಜನವನ್ನು ಸತತ ಎರಡು ವರ್ಷಗಳಿಂದ ದೇವಾಲಯದ ವತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ನೆಲದಲ್ಲಿ ಕುಳಿತು ಬಾಳೆಲೆಯಲ್ಲಿ ಊಟ. ಅನ್ನ, ಪಲ್ಯ, ಸಾಂಬಾರು, ಚಿತ್ರಾನ್ನ, ಪಾಯಸ, ಮಜ್ಜಿಗೆ ಇವಿಷ್ಟಿದ್ದ ಪುಷ್ಕಳ ಊಟ ಮಾಡಿದೆವು. ದೇವಾಲಯಗಳಲ್ಲಿ ಊಟ ಮಾಡುವುದೆಂದರೆ ನನಗೆ ಬಹಳ ಇಷ್ಟ ಮತ್ತು ಅಷ್ಟೇ ರುಚಿಯೂ ಆಗುತ್ತದೆ. ಭೋಜನಕ್ಕೆ ಕೈಲಾದ ದೇಣಿಗೆ ಕೊಡಬಹುದು. ನಮ್ಮ ತಂಡದ ವತಿಯಿಂದ ದೇಣಿಗೆ ನೀಡಿ ನಿರ್ಗಮಿಸಿದೆವು. 




 ಮೇಲುಕೋಟೆಯ ಧನುಷ್ಕೋಟಿಗೆ ಪಯಣ
 ನಾವು ಊಟವಾಗಿ ೨ ಗಂಟೆಗೆ ಹೊರಟು ೨೫ಕಿಮೀ ದೂರದಲ್ಲಿರುವ ಮೇಲುಕೋಟೆಗೆ ಹೋದೆವು. ಧನುಷ್ಕೋಟಿ ನೋಡಲೇಬೇಕು ಎಂದು ಸರ್ವಾನುಮತದಿಂದ ತೀರ್ಮಾನವಾಗಿ ಅಲ್ಲಿಗೆ ಹೋದೆವು. ಹತ್ತಿಪ್ಪತ್ತು ಮೆಟ್ಟಲು ಹತ್ತಿ ಹೋಗಬೇಕು. ರಾಮ ಲಕ್ಷ್ಮಣ ಸೀತೆ ವನವಾಸದ ಸಂದರ್ಭದಲ್ಲಿ ಮೇಲುಕೋಟೆಗೆ ಹೋಗಿದ್ದಾಗ ಸೀತೆಗೆ ಭಯಂಕರ ಬಾಯಾರಿಕೆಯಾದಾಗ ರಾಮ ಅಲ್ಲಿದ್ದ ಒಂದು ದೊಡ್ಡ ಬಂಡೆಗೆ ಬಾಣಬಿಟ್ಟಾಗ ನೀರು ಒಸರಿತಂತೆ. ಅದೇ ಸ್ಥಳವೀಗ ಧನುಷ್ಕೋಟಿ ಎಂದು ಹೆಸರಾಗಿದೆ. ಅಲ್ಲಿ ರಾಮನ ಪಾದುಕೆ ಹಾಗೂ ರಾಮ ಸೀತೆ ಲಕ್ಷ್ಮಣರ ಪುಟ್ಟ ದೇಗುಲವೂ ಇದೆ. ಬಂಡೆ ಕೆಳಗೆ ನೀರಿನ ಒರತೆ ಇದೆ. ಅಲ್ಲಿ ಒಬ್ಬ ಮೂಗ ಹುಡುಗಿ ಪೂಜೆ ಮಾಡುತ್ತ, ಸೌತೆಕಾಯಿ, ಇತ್ಯಾದಿ ವ್ಯಾಪಾರ ಮಾಡುತ್ತ ಕುಳಿತಿರುವುದು ಕಂಡಿತು. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ ತಂಡದ ಛಾಯಾಚಿತ್ರ ಕ್ಲಿಕ್ಕಿಸಿಕೊಂಡು ಹೊರಟೆವು. 


ಚೆಲುವರಾಯಸ್ವಾಮಿ ದೇವಾಲಯ 
ಅಲ್ಲಿಂದ ಚೆಲುವರಾಯಸ್ವಾಮಿ ದೇವಾಲಯ ನೋಡಿದೆವು. ಜನಸಂದಣಿ ಇರಲಿಲ್ಲ. ಹೊರಗೆ ರಸ್ತೆಯಲ್ಲಿ ಉದ್ದಕ್ಕೂ ಪುಳಿಯೋಗರೆ ಪುಡಿ, ಗೊಜ್ಜು, ಮತ್ತು ಪುಳಿಯೋಗರೆ, ಸಕ್ಕರೆ ಪೊಂಗಲ್ ಮಾರಾಟ ಜೋರಾಗಿತ್ತು. ಅವರ ಗಾಡಿಗಳಲ್ಲಿ ಆಕರ್ಷಕ ಫಲಕ ಹಾಕಿದ್ದು ಗಮನಸೆಳೆಯಿತು. ‘ಎಲ್ಲಾ ನೀನೇ ಎಲ್ಲಾ ನಿಂದೇ ಪ್ರಾಡೆಕ್ಟ್’  ‘ರ್ರೀ, ಸ್ವಾಮಿ, ಒಂದ್ಸಲ ರುಚಿ ನೋಡ್ರಿ ಇದು ಸ್ವರ್ಗಲೋಕದ ಮೃಷ್ಟಾನ್ನ ಕಣ್ರಿ’ 

ಯೋಗಾನರಸಿಂಹ ದೇವಾಲಯ
ಯೋಗಾನರಸಿಂಹನನ್ನು ನೋಡಬೇಕಾದರೆ ಸುಮಾರು ೩೬೦ ಮೆಟ್ಟಲು ಹತ್ತಬೇಕು. ವಾನರರು ನಮಗೆ ಸ್ವಾಗತಕೋರಲು ಸಜ್ಜಾಗಿ ನಿಂತಿರುವುದು ಕಾಣುತ್ತದೆ. ದೇವರಪೂಜೆಗೆಂದು ಕೈಯಲ್ಲಿ ಹಣ್ಣು ತೆಂಗಿನಕಾಯಿ ಹಿಡಿದಿರೋ ನಿಮಗೇಕೆ ಒಯ್ಯುವ ಕಷ್ಟವೆಂದು ಅವು ನಿಮ್ಮ ಕೈಯಿಂದ ಕ್ಷಣಮಾತ್ರದಲ್ಲಿ ಅವನ್ನು ಪಡೆಯುತ್ತ ಸ್ವಾಹಾ ಮಾಡುತ್ತವೆ. ಅಲ್ಲಿ ನಾಲ್ಕೈದು ಮಂದಿ ಕ್ಯಾಮಾರ ಹಿಡಿದು ಸಜ್ಜಾಗಿ ನಿಂತು ನಮ್ಮ ಪಟ ತೆಗೆದು ಅಲ್ಲೇ ಪ್ರಿಂಟ್ ಹಾಕಿ ಕೊಡುತ್ತಾರೆ.  ಅವರು ಹೊಟ್ಟೆಪಾಡಿಗಾಗಿ ಮಾಡುವ ಈ ಕೆಲಸದಿಂದ ಅಲ್ಲಿ ಬರುವ ಭಕ್ತಾದಿಗಳು ನೆನಪಿಗೋಸ್ಕರ ತಮ್ಮ ಪಟ ತೆಗೆಸಿಕೊಳ್ಳುತ್ತ ನೆನಪನ್ನು ಶಾಶ್ವತವಾಗಿ ಕಾಪಾಡಿಕೊಳ್ಳುತ್ತಿರುತ್ತಾರೆ. ಒಂದು ಪ್ರತಿಗೆ ರೂ. ೫೦ ಪಡೆಯುತ್ತಾರೆ. ವಯರಿನಿಂದ ಹೂಬುಟ್ಟಿ ಹೆಣೆದು ಮಾರುವ ಮಹಿಳೆಯರು, ಮಜ್ಜಿಗೆ ಮಾರುವ ಮಕ್ಕಳು ಕಾಣುತ್ತಾರೆ. ಭವ್ಯ ಚೆಲುವನಾರಾಯಣನನ್ನು ನೋಡಿ ನಾವು ಕೆಳಗೆ ಇಳಿದು ಪುಷ್ಕರಣಿ ಬಳಿ ಸ್ವಲ್ಪ ಹೊತ್ತು ಕುಳಿತಿದ್ದು ಬಸ್ ಏರಿದಾಗ ಗಂಟೆ ಸಂಜೆ ಆರು ದಾಟಿತ್ತು. 







 ಮರಳಿ ಮೈಸೂರು
ನಾಗಮಂಗಲದಲ್ಲಿ ಚಹಾ-ಕಾಫಿ ಸೇವನೆಯಾಯಿತು. ಬಸ್ಸಲ್ಲಿ ಅಂತ್ಯಾಕ್ಷರಿ ಬಹಳ ಸೊಗಸಾಗಿ ನಡೆಯಿತು. ರವಿಬಾಹುಸಾರ್ ಇದ್ದಲ್ಲಿ ನಗುವಿಗೆ ಬರವಿಲ್ಲ. ರವಿ, ಸುಜಾತ, ನಾಗೇಂದ್ರಪ್ರಸಾದ್, ವೈದ್ಯನಾಥನ್, ಉಮಾಶಂಕರ್, ಇತ್ಯಾದಿ ಮಂದಿ ಬಲು ಹುರುಪಿನಿಂದ ಪುಂಖಾನುಪುಂಖವಾಗಿ ಹಾಡಿದರು. ಹಾಡದೆ ಇದ್ದವರು ಹಾಡು ಕೇಳುತ್ತ ಅವರ ಈ ಸಂತೋಷದಲ್ಲಿ ಭಾಗಿಯಾಗಿ ಖುಷಿ ಅನುಭವಿಸಿದೆವು. ಇಷ್ಟು ಬೇಗ ಮೈಸೂರು ತಲಪಿತೆ ಎಂದು ಅಂತ್ಯಾಕ್ಷರೀ ಹಾಡಿನಲ್ಲಿ ಭಾಗಿಯಾದವರಿಗೆ ಅನಿಸಿತು. ನಾವು ಮೈಸೂರು ತಲಪಿದಾಗ ರಾತ್ರಿ ೮.೧೫.
  ಈ ಚಾರಣವನ್ನು ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ನಾಗೇಂದ್ರಪ್ರಸಾದ್, ವೈದ್ಯನಾಥನ್ ಜೋಡಿ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಅವರಿಗೆ ನಮ್ಮೆಲ್ಲರ ಧನ್ಯವಾದ.