ಬುಧವಾರ, ಸೆಪ್ಟೆಂಬರ್ 8, 2021

ಭಾರತದ ಮುಕುಟಮಣಿ ಹಿಮಾಲಯ - ಭಾಗ - ೩

  ಜಮ್ಮು, ವೈಷ್ಣೋದೇವಿ, ಶ್ರೀನಗರ, ಕಾರ್ಗಿಲ್, ಲಡಾಖ್, ಲೇಹ್,  ಮನಾಲಿ, ಚಂಡೀಗಢ

ಸೋನಮ್ ಹಮ್ಚುಕೆ
ಹೊಟೇಲ್ ಏಷಿಯಾದ ಒಡೆಯ ಸೋನಮ್ ಹಮ್ಚುಕೆ. ಹತ್ತನೇ ತರಗತಿವರೆಗೆ ವ್ಯಾಸಂಗ. ೬೧ ವರ್ಷದವರು. ಹಸನ್ಮುಖಿ, ಆಳಾಗಿ ದುಡಿಯುವವ ಅರಸನಾಗಿ ಬಾಳಬಲ್ಲ ಎಂಬ ನಾಣ್ನುಡಿಗೆ ತಕ್ಕಂತೆ ಬಾಳುತ್ತಿರುವವರು. ಅವರೇ ಹೊಟೇಲಿಗೆ ಹಾಲು ತರುತ್ತಾರೆ, ಬಟ್ಟೆ ತೊಳೆಯುತ್ತಾರೆ, ತರಕಾರಿ ಸಸಿಗಳಿಗೆ ನೀರು ಹಾಯಿಸುತಾರೆ, ಕಳೆ ಕೀಳುತ್ತಾರೆ. . ಕೃಷಿಯಲ್ಲೂ ಪಳಗಿದವರು. ಅವರ ಕೆಲಸ ನೋಡಿ ಖುಷಿಪಟ್ಟೆವು. ಚಾನ್ಸ್ಪ ಲೇಹ್ ನಲ್ಲಿ (ಫೋನ್ ೫೨೭೯೭)  ಕೊಠಡಿಯಿಂದ ಸುರುಮಾಡಿದ ಹೊಟೇಲಿನಲ್ಲಿ ಈಗ ವಾಸ್ತವ್ಯಕ್ಕೆ ೬೧ ಸುಸಜ್ಜಿತ ಕೊಠಡಿಗಳಿವೆ ಪ್ರತೀ ವರ್ಷದಲ್ಲಿ ೨ ತಿಂಗಳು ಜಮ್ಮುವಿಗೆ ಸ್ಥಳಾಂತರಗೊಳ್ಳುವರಂತೆ. ನಿಮ್ಮ ಕರ್ನಾಟಕದವರು ಬುದ್ಧಿವಂತರು. ಹೆಚ್ಚು ಓದಿರುತ್ತಾರೆ ಎಂಬ ಬಿರುದು ಕೊಟ್ಟರು! ಜೂನ್ ಜುಲೈ ಆಗಸ್ಟ್ ಸೆಪ್ಟೆಂಬರ್ ನಾಲ್ಕು ತಿಂಗಳು ಮಾತ್ರ ಪ್ರವಾಸಿಗರಿಗೆ ಲೇಹ್ ಗೆ ಭೇಟಿಕೊಡಲು ಸಕಾಲ.

ವಿಶ್ರಾಂತಿ

ಲೇಹ್ ಸಮುದ್ರಮಟ್ಟದಿಂದ ೧೧೫೦೦ ಅಡಿ ಎತ್ತರದ ಪ್ರದೇಶದಲ್ಲಿ ಇರುವುದರಿಂದ ನಮಗೆ ಹೊಂದಿಕೊಳ್ಳಲು ಕೆಲವು ಗಂಟೆಗಳು ಬೇಕು. ಆಮ್ಲಜನಕ ಸಾಕಾಗದೆ ಕೆಲವರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಅರ್ಧ ದಿನ ವಿಶ್ರಾಂತಿ ಪಡೆಯಿರಿ ಎಂಬ ಸೂಚನೆ ಸಿಕ್ಕಿತ್ತು. ತಾರೀಕು ೭ರಂದು ಮಧ್ಯಹ್ನದವರೆಗೆ ಅಲ್ಲೇ ವಿಶ್ರಾಂತಿ ಪಡೆದೆವು.
ನಾವು ಎಲ್ಲರೂ ಒಂದೇ ಕೋಣೆಯಲ್ಲಿ ಕುಳಿತು ಲೊಟ್ಟೆ ಪಟ್ಟಾಂಗ ಹೊಡೆದೆವು.

ಸುಂದರ ಪರಿಸರ

ಹೊಟೇಲ್ ಸುತ್ತ ಹಲವು ಬಗೆಯ ಹೂವಿನ ಗಿಡಗಳನ್ನು ವಿವಿಧ ತರಕಾರಿಗಳನ್ನು ಬೆಳೆಸಿದ್ದಾರೆ. ಅವನ್ನೆಲ್ಲ ನೋಡುತ್ತ ಕಾಲ ಕಳೆದೆವು. ಅಲ್ಲಿ ಹೂ, ತರಕಾರಿಗಳು ಚೆನ್ನಾಗಿ ಫಸಲು ಕೊಡುತ್ತವೆ. ಮಣ್ಣಿನಲ್ಲಿ ಪೋಷಕಾಂಶದ ಆಗರವಿರುವುದರಿಂದ ಬೇರೆ ಗೊಬ್ಬರ ಹಾಕುವ ಅವಶ್ಯವಿಲ್ಲವಂತೆ. ಗಿಡ ನೆಟ್ಟು ಬೇಕಷ್ಟು ನೀರು ಹಾಯಿಸಿ ಬಿಟ್ಟರಾಯಿತುಅವರೇ ಬೆಳೆಸಿದ ತರಕಾರಿಯಿಂದ ಪಲ್ಯ ಮಾಡಿದ್ದರು. ತರಕಾರಿ ಬಲು ರುಚಿಕರವಾಗಿರುತ್ತವೆ.

   ಹೊಟೇಲ್ ಕೋಣೆಯಲ್ಲಿ ಕೂತು ಬೇಸರವಾಗಿ, ಅಲ್ಲೇ ಸುತ್ತಮುತ್ತ ಸ್ವಲ್ಪ ದೂರ ಹೋದೆವು. ಸಮೀಪದಲ್ಲೇ ಇದ್ದ ಒಂದೆರಡು ಅಂಗಡಿಗೆ ಭೇಟಿ ಇತ್ತೆವು. ಈಗ ಬರಬೇಡಿ. ಸಂಜೆ ೪ ಗಂಟೆಮೇಲೆ ಬನ್ನಿ. ವಿಶ್ರಾಂತಿ ಮಾಡಿ. ಬಿಸಿಲು ಜೋರಿದೆ ಎಂದು ಅಂಗಡಿಯಾತ ನಮಗೆ ಸಲಹೆ ಇತ್ತರು! ಅಲಿಗೆ ಹೆಚ್ಚಾಗಿ ವಿದೇಶೀಯರೇ ಬಂದು ವಾಸ್ತವ್ಯಗೊಳ್ಳುತ್ತಿರುವುದಂತೆ. ಈಗ ಕಳೆದ ಒಂದೂವರೆ ವರ್ಷದಿಂದ ಯಾರೂ ಬರದೆ ನಷ್ಟದಿಂದ ಹೆಚ್ಚಿನ ಹೊಟೇಲ್, ಅಂಗಡಿಗಳು ಮುಚ್ಚಿವೆಯಂತೆ.  ಅಲ್ಲಿ ಆಸುಪಾಸು ಬಹಳ ವಸತಿಗೃಹಗಳಿರುವುದನ್ನು ಕಂಡೆವು.

ಮಾಯಾ ಪ್ಯಾಲೇಸ್

ಸಂಜೆ ೩ ಗಂಟೆಗೆ ಮಾಯಾಪ್ಯಾಲೇಸಿನಲ್ಲಿ ಸೇರಲು ಹೇಳಿದ್ದರು. ಆದರೆ ಎಲ್ಲರಿಗೂ ಸಮಯಕ್ಕೆ ಗಾಡಿಗಳು ಸಿಗದೆ ಹೆಚ್ಚಿನವರಿಗೆ ಅಲ್ಲಿಗೆ ಬರಲಾಗಲಿಲ್ಲ. ನಾವು ಕೆಲವರು ಮಾತ್ರವೇ ಸ್ಥಳೀಯ ಬಾಡಿಗೆ ಕಾರಿನಲ್ಲಿ ಹೋದೆವು. ಕೊರೊನಾ ಕಾರಣದಿಂದ ದೊಡ್ಡ ಕಾರಾದರೂ  ಒಂದು ಕಾರಿನಲ್ಲಿ ನಾಲ್ಕು ಮಂದಿಗೆ ಮಾತ್ರ ಅವಕಾಶ. ಇಂದ್ರೇಶ್ ಜಿ ಅವರಿಂದ ಸಿಂಧೂ ಯಾತ್ರೆಯ ಪರಿಚಯ, ಹಾಗೂ ಪ್ರತಿಭಟನೆಗೆ ಘೋಷವಾಕ್ಯ ಮೊಳಗಿಸಿದರುನಾವು ಮುಂದಿನ ಘೋಷಣೆಗಳನ್ನು ಪ್ರತಿ ದಿನ  ಜೋರಾಗಿ ಜನ ಸೇರಿಸಿಕೊಂಡು ಹೇಳಬೇಕು. ಅದು ಚೀನಾದ ಬಿಜೆಂಗ್ ಗೆ ಕೇಳಬೇಕು- ಕೈಲಾಸ ಮಾನಸ ಸರೋವರ ನಮ್ಮದೂ ನಮ್ಮದೂ, ಕಾಲಿ ಮಾಡಿ ಕಾಲಿ ಮಾಡಿ.

ಇದು ಪಾಕಿಸ್ತಾನದ ನಾಯಕರಿಗೂ  ಜನತೆಗೂ ಕೇಳಬೇಕು- ಪಿಒಕೆ Pakistan occupied Kashmir (POK) ಕಾಲಿ ಮಾಡಿ, ಕಾಲಿ ಮಾಡಿ, ಅದು ನಮ್ಮದೂ ನಮ್ಮದೂ. ಪಾಕಿಸ್ತಾನದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಿಸಿ ನಿಲ್ಲಿಸಿ.ಭಾರತ್ ಮಾತಾ ಕೀ ಜೈ. ವಂದೇ ಮಾತರಂ.
 ಅಲ್ಲಿ ನಮಗೆಲ್ಲರಿಗೂ ಸ್ಮರಣಿಕೆ ಕೊಟ್ಟರು.

    ಹಿರಿಯ ದಂಪತಿಗಳೊಡನೆ ಕೆಲವು ಕ್ಷಣ

ಮಾಯಾಪ್ಯಾಲೇಸ್ ಮಾಲಿಕರ ತಂದೆತಾಯಿ ಅಲ್ಲೇ ಹೊರಗೆ ಸೇಬು ಮರದಡಿ ಕೂತಿದ್ದರು. ಅವರನ್ನು ಮಾತಾಡಿಸಿದೆವು. ಅಜ್ಜಿಗೆ ೮೧ ವರ್ಷವಂತೆ. ನೀವು ಇನ್ನು ಒಂದು ತಿಂಗಳು ಬಿಟ್ಟು ಬಂದಿದ್ದರೆ ಸೇಬು ಕೊಡಬಹುದಿತ್ತು. ಈಗ ಇನ್ನೂ ಬೆಳೆದಿಲ್ಲ ಎಂದು ಅಜ್ಜಿ ಪೇಚಾಡಿಕೊಂಡರು! ಮಾಸ್ಕ್ ಸರಿಯಾಗಿ ಹಾಕಿ. ಕೊರೊನಾ ಹಾವಳಿ ಬಲು ಕೆಟ್ಟದ್ದು ಎಂದು ನಮಗೆ ಎಚ್ಚರ ವಹಿಸಲು ಹೇಳಿದರು.

ಶಾಂತಿ ಸ್ತೂಪ

ನಾವು ಸಂಜೆ ನಗರ ಸುತ್ತಾಟಕ್ಕೆ ಹೊರಟೆವು. ಮೊದಲಿಗೆ ಶಾಂತಿಸ್ತೂಪಕ್ಕೆ ಭೇಟಿಕೊಟ್ಟೆವು ಸ್ತೂಪವು ಲೇಹ್ ನಗರದ ೪೨೬೬ ಮೀಟರ್ ಎತ್ತರದಲ್ಲಿದೆ. ಹಾಗಾಗಿ ದೂರದಿಂದಲೇ ಎದ್ದು ಕಾಣುತ್ತದೆ. ಇದು ಎರಡು ಹಂತದ ರಚನೆಯಾಗಿದೆ. ಇದನ್ನು ಲಡಾಖ್ ಮತ್ತು ಜಪಾನೀಸ್ ಬೌದ್ಧರು ವಿಶ್ವ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿ, ಮತ್ತು ಬೌದ್ಧ ಧರ್ಮದ ೨೫೦೦ ವರ್ಷಗಳ ನೆನಪಿಗಾಗಿ ಶಾಂತಿ ಸ್ತೂಪವನ್ನು  ನಿರ್ಮಿಸಿದರು.

ಲೇಹ್ ಅರಮನೆ
ಲೇಹ್  ಅರಮನೆಗೆ ಭೇಟಿ ಕೊಟ್ಟೆವು.  ಒಂಬತ್ತು ಅಂತಸ್ತಿನ ಅರಮನೆ. ೧೭ನೇ ಶತಮಾನದಲ್ಲಿ ರಾಜ ಸೆಂಗೇ ನಾಮ್ ಗ್ಯಾಲ್ ಕಾಲದಲ್ಲಿ ಅರಮನೆ ನಿರ್ಮಾಣವಾಯಿತು.ಸ್ಥಳೀಯ ಮರದಿಂದ ನಿರ್ಮಾಣವಾಗಿದೆ. ಪ್ರವೇಶ ಶುಲ್ಕವಿದೆ.
ಅರಮನೆಯ ಛಾವಣಿ ಮೇಲಿನಿಂದ ನಿಂತು, ನೋಡಿದಾಗ ಲೇಹ್ ಪಟ್ಟಣದ ವಿಹಂಗಮ ನೋಟ ಕಾಣುತ್ತೇವೆ. ಮೈಸೂರು ಅರಮನೆಯ ಚಂದ  ನೋಡಿದವರಿಗೆ ಬೇರೆ ಯಾವ ಅರಮನೆ ನೋಡಿದರೂ ಮೈಸೂರು ಅರಮನೆ ಮುಂದೆ ಇವೆಲ್ಲ ಅರಮನೆಯೇ ಅಲ್ಲ ಎಂದು ಮನ ಪಿಸು ನುಡಿಯುತ್ತದೆ!

ಅಲ್ಲಿಗೆ ಆ ದಿನದ ನಗರ ಸುತ್ತಾಟ ಮುಗಿಯಿತು. ಮರಳಿ ಹೊಟೇಲಿಗೆ ಬಂದೆವು. ಸ್ವಲ್ಪ ಚಳಿಯ ಅನುಭವ ಆಯಿತು. ಬಿಸಿ ಬಿಸಿ ಊಟವಾಗಿ ನಿದ್ದೆಗಿಳಿದೆವು.


  ಹೆಮಿಸ್ ಸ್ತೂಪ

   ತಾರೀಕು ೮ರಂದು ಬೆಳಗ್ಗೆ ೬ ಗಂಟೆಗೆದ್ದು ತಯಾರಾಗಿ, ತಿಂಡಿ ತಿಂದು ೮.೧೫ಕ್ಕೆ ಹೆಮಿಸ್ ಸ್ತೂಪ ನೋಡಲು ಹೋದೆವು. ಲೇಹ್ ನಲ್ಲಿ ಎಲ್ಲಿ ನೋಡಿದರೂ ಸ್ತೂಪಗಳೇ. ಒಂದು ಸ್ತೂಪ ನೋಡಿದ ಮೇಲೆ ಮತ್ತೆ ಬೇರೆ ಸ್ತೂಪ ನೋಡುವ ಆಸಕ್ತಿ ಕುಂದುತ್ತದೆ. ಹೆಮಿಸ್ ಸ್ತೂಪ ಲಡಾಖ್ ಅತಿ ದೊಡ್ಡ ಮಠವಾಗಿದೆ. ಹೆಮಿಸ್ ಸ್ತೂಪವನ್ನು ೧೬೭೨ರಲ್ಲಿ ಲಡಾಖಿ ರಾಜ ಸೆಂಗೇ ನಮಗ್ಯಾಲ್ ಪುನರ್ಸ್ಥಾಪಿಸಿದರು. ಟಿಬೆಟಿಯನ್ ವಾಸ್ತುಶಿಲ್ಪ ಶೈಲಿಯಲ್ಲಿದೆ. ಲೇಹ್ ನಿಂದ ೪೫ಕಿಮೀ ದೂರದಲ್ಲಿದೆ. ಪ್ರವೇಶ ಶುಲ್ಕ ರೂ. ೫೦ 


ತಿಕ್ಸೆ (THIKSEY) ಸ್ತೂಪ
ತಿಕ್ಸೆ ಸ್ತೂಪ ಲೇಹ್ ಸುಂದರವಾದ ಸ್ತೂಪವೆಂದು ಹೆಸರಾಗಿದೆ. ಸಿಂಧೂ ಕಣಿವೆಯಲ್ಲಿ ೩೬೦೦ ಮೀಟರ್( ೧೧೮೦೦ ಅಡಿ) ಎತ್ತರದಲ್ಲಿದೆ. ಹನ್ನೆರಡು ಅಂತಸ್ತಿನ ಕಟ್ಟಡ. ಇಲ್ಲಿ  ೧೯೭೦ರಲ್ಲಿ ೧೪ನೇ ದಲೈ ಲಾಮಾ ಈ ಮಠಕ್ಕೆ ಭೇಟಿ ನೀಡಿದ ನೆನಪಿಗಾಗಿ  ೪೯ ಅಡಿ ಎತ್ತರದ ಮೈತ್ರೇಯ (ಬುದ್ಧ) ಪ್ರತಿಮೆ ಸ್ಥಾಪಿಸಲಾಗಿದೆ.  ನೋಡಲು ಆಕರ್ಷಕವಾಗಿದೆ. ಪಕ್ಕದಲ್ಲೇ ತಾರಾ ದೇವಾಲಯ ಇದೆ.  ಪ್ರವೇಶ ಶುಲ್ಕ ರೂ. ೫೦


ಸಿಂಧೂ ಘಾಟ್

ತಿಕ್ಸೆ ಸ್ತೂಪ ನೋಡಿ ನಾವು ಸಿಂಧೂ ಘಾಟ್ ಗೆ ಹೊರಟೆವು. ಆಗಲೇ ಗಂಟೆ ಒಂದು ದಾಟಿತ್ತು. ಊಟಕ್ಕೆ ನಮಗೆ ಸರಿಯಾದ ಹೊಟೇಲ್ ಸಿಗಲಿಲ್ಲ. ಹಾಗಾಗಿ ಸೌತೆಕಾಯಿ, ಸೇಬು ತಿಂದು ಹೊಟ್ಟೆ ತಂಪಾಗಿಸಿಕೊಂಡೆವು.  ನಾವು ಸಿಂಧೂ ಘಾಟಿಗೆ ಕಾಲಿಟ್ಟಾಗ ಸಾಂಕೇತಿಕವಾದ ಸಾಂಸ್ಕೃತಿಕ ಹಬ್ಬ, ಉದ್ಘಾಟನಾ ಕಾರ್ಯಕ್ರಮ, ಭಾಷಣ ಎಲ್ಲ ಮುಗಿದಿತ್ತು. ಕೇವಲ ೫೦ ಮಂದಿಗೆ ಮಾತ್ರ ಅವಕಾಶವಿದ್ದುದ ರಿಂದ ನಮಗೆ ನೋಡಲು ಸಿಗಲಿಲ್ಲ.

  ಸಿಂಧೂ ಘಾಟ್ ನದಿಯ ದಂಡೆಯಾಗಿದ್ದು, ಪ್ರಶಾಂತವಾದ ವಾತಾವರಣದಲ್ಲಿ ಶೇ (shey) ಹಳ್ಳಿಯಲ್ಲಿದೆ. ಸಿಂಧೂ ನದಿ ಟಿಬೆಟಿನ ಮಾನಸ ಸರೋವರದ ಬಳಿ ಹುಟ್ಟಿ, ಪಾಕಿಸ್ತಾನದ ಸಂಗಮವನ್ನು ತಲಪುವ ಮೊದಲು ಭಾರತದ ವಿಭಿನ್ನ ಭೂಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಏಳು ಪ್ರಮುಖ ನದಿಗಳಲ್ಲಿ ಸಿಂಧೂ ನದಿಯೂ ಒಂದು. ಈ ನದಿಯ ದಂಡೆಯಲ್ಲಿ ಪ್ರತೀವರ್ಷ ಜೂನ್ ತಿಂಗಳಲ್ಲಿ ಗುರುಪೂರ್ಣಿಮೆಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ಹಬ್ಬ ನಡೆಯುತ್ತದೆ. ಇಲ್ಲಿ ಸ್ವಾಗತ ಸಮಾರಂಭವನ್ನು ವಿವಿಧ ಧಾರ್ಮಿಕ ಗುಂಪುಗಳ ಸಂಘಗಳಿಂದ (ಬೌದ್ಧ, ಹಿಂದೂ, ಶಿಯಾ, ಸುನ್ನಿ, ಕ್ರಿಶ್ಚಿಯನ್ ಮತ್ತು ಸಿಖ್) ಕೋಮು ಸೌಹಾರ್ದತೆಯ ಪ್ರತೀಕವಾಗಿ ಇಲ್ಲಿ ಸಾಂಸ್ಖೃತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ.


ಇಸವಿ ೨೦೦೦ದಲ್ಲಿ ಇಲ್ಲಿ ಸಿಂಧೂ ಘಾಟ್ ನಿರ್ಮಾಣ. ಅದನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸಿದರು. 



 
ನಾವು ಸಿಂಧೂ ನದಿಗೆ ಇಳಿದು, ನೀರನ್ನು ಪ್ರೋಕ್ಷಿಸಿಕೊಂಡೆವು. ಸ್ನಾನ ಮಾಡಲಿಲ್ಲ. ಗಂಡಸರೆಲ್ಲ ಸ್ನಾನ ಮಾಡಿದರು. ನಮ್ಮ ಶೋಭಕ್ಕನಿಗೆ ಅಲ್ಲಿಯ ನೀರು ನೋಡಿದಾಗ ಇಲ್ಲಿ ಮುಳುಗು ಹಾಕಲೇಬೇಕೆನಿಸಿತು. ಮುಳುಗು ಹಾಕಿ ಧನ್ಯರಾದರು. ಮಂಗಲಕ್ಕ ಅವಳಿಗೆ ನೆರವು ನೀಡಿದಳು. ನದಿಯಲ್ಲಿಳಿದು, ಪಟ ತೆಗೆಸಿಕೊಂಡು, ಸಂಘದ ಪ್ರಾರ್ಥನೆಯಲ್ಲಿ ಭಾಗಿಯಾಗಿ ನಾವು ಅಲ್ಲಿಂದ ನಿರ್ಗಮಿಸಿದೆವು.





ಹಾಲ್ ಆಫ್ ಫೇಮ್

ಭಾರತ- ಪಾಕ್ ಯುದ್ದದಲ್ಲಿ ತಾಯಿ ನಾಡನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ವೀರ ಭಾರತೀಯ ಸೈನಿಕರ ನೆನಪಿಗಾಗಿ ಭಾರತೀಯ ಸೇನೆಯಿಂದ ನಿರ್ಮಿಸಲಾದ ವಸ್ತು ಸಂಗ್ರಹಾಲಯ.   ಮ್ಯೂಸಿಯಂ ನಲ್ಲಿ ಯುದ್ಧದ ಸಂದರ್ಭದಲ್ಲಿ ಉಪಯೋಗಿಸಿದ ಶಸ್ತ್ರಾಸ್ತ್ರಗಳು, ಮಡಿದ ಸೈನಿಕರ ವಿವರಣೆ, ಬಳಸಿದ ಉಡುಪುಗಳು, ಕಾರ್ಗಿಲ್ ಯುದ್ಧ ಚಿತ್ರಗಳು,ಹಿಮನದಿಯ ಮೇಲೆ ಸಾಗುವ ದೃಶ್ಯ, ಯುದ್ಧದ ತರಬೇತಿ ಇತ್ಯಾದಿ ಎರಡು ಮಹಡಿಗಳಲ್ಲಿ ವ್ಯಾಪಿಸಿದೆ.ಹಲವಾರು ವಸ್ತುಗಳ ಖರೀದಿಗೆ ಒಂದು ಅಂಗಡಿಯೂ ಇದೆ. ಹೊರಗೆ ಶೌರ್ಯ ವಿಭಾಗದಲ್ಲಿ ಯುದ್ದದಲ್ಲಿ ಮಡಿದವರಿಗೆ ನೆನಪಿನ ಸ್ಮಾರಕ ಇದೆ. ಯುದ್ಧದಲ್ಲಿ ಮಡಿದವರ ಫಲಕ ಅಲ್ಲಿ ಹಾಕಿದ್ದಾರೆ. ಅದನ್ನು ನೋಡುವಾಗ ಮನಸ್ಸು ಭಾರವಾಗಿ ಗಂಟಲು ಕಟ್ಟುತ್ತದೆ.





ಧ್ವನಿ ಬೆಳಕು ಕಾರ್ಯಕ್ರಮ
ತಾರೀಕು ೧೦ರಂದು ನಾವು ಹಾಲ್ ಆಫ್ ಫೇಮ್ ನಲ್ಲಿಧ್ವನಿ ಬೆಳಕು ಕಾರ್ಯಕ್ರಮ ವೀಕ್ಷಿಸಲು ಹೋದೆವು.  ರಾತ್ರಿ ೮ರಿಂದ .೪೫ರವರೆಗೆ ಕಾರ್ಗಿಲ್ ಯುದ್ಧ ಕಥನ ವಿವರಣೆ ಲೇಸರ್ ಶೋ ಮೂಲಕ ಭಿತ್ತರವಾಗುತ್ತದೆ.
ಮ್ಯೂಸಿಯಂ ಅವಧಿ ಬೆಳಗ್ಗೆ ೯ರಿಂದ ಮದ್ಯಾಹ್ನ . ಮಧ್ಯಾಹ್ನ ೨ರಿಂದ  ಸಂಜೆ . ಶುಲ್ಕ ರೂ. ೨೦೦

ಚಸ್ಕ ಮಸ್ಕ ಹೊಟೇಲ್

  ಮಧ್ಯಾಹ್ನ ಊಟವಾಗಿಲ್ಲವಾದ್ದರಿಂದ ಲೇಹ್ ನಲ್ಲಿ ಚಸ್ಕಮಸ್ಕ ಹೊಟೇಲಿಗೆ ಹೋದೆವು. ಅಲ್ಲಿ ವಿವಿಧ ದೇಸೆಗಳು ಲಭ್ಯವೆಂದು  ತಿಳಿದು ಖುಷಿಯಾಗಿ ನೀರುಳ್ಳಿ ದೋಸೆ ತರಲು ಹೇಳಿದೆವು. (ರೂ.೧೧೦) ದೋಸೆಯೇನೋ ಬಂತು. ಹಸಿದ ಹೊಟ್ಟೆಯಾದ್ದರಿಂದ  ತಕ್ಕಮಟ್ಟಿಗೆ ರುಚಿಯಾಗಿತ್ತು! ಸ್ಥಳೀಯ ತಿಂಡಿ ನೂಡಲ್ಸ್ ತುಪ್ಕ (ರೂ.೧೬೦) ಹಂಚಿಕೊಂಡು ತಿಂದೆವು. ಬರೋಬ್ಬರಿ ಒಂದು ಗಂಟೆ ಅಲ್ಲಿ ವ್ಯಯವಾಯಿತು.

ಮಾರುಕಟ್ಟೆ ವೀಕ್ಷಣೆ

ಲೇಹ್ ಗೆ ಬಂದು ಅಲ್ಲಿಯ ಮಾರುಕಟ್ಟೆ ನೋಡದಿದ್ದರೆ ಪ್ರವಾಸ ಪೂರ್‍ಣವಾದೀತೆ? ಹಾಗಾಗಿ ಅಲ್ಲಿಗೆ ಭೇಟಿ ಇತ್ತೆವು. ಲೇಹ್ ಮಾರುಕಟ್ಟೆಯೊಳಗೆ ವಾಹನ ಪ್ರವೇಶವಿಲ್ಲ. ರಸ್ತೆ ಮಧ್ಯೆ ಅಲ್ಲಲ್ಲಿ ಕಟ್ಟೆ ಕಟ್ಟಿದ್ದಾರೆ. ತಿರುಗಾಡುತ್ತ, ಅಂಗಡಿಯೊಳಗೆ ಸುತ್ತುತ್ತ, ವ್ಯಾಪಾರ ಮಾಡುತ್ತ, ಸುಸ್ತಾದರೆ ಕಟ್ಟೆಮೇಲೆ ಕೂರಬಹುದು! ಬಟ್ಟೆಗಳು, ಸ್ವೆಟರ್, ಟೋಪಿ, ಮುತ್ತು, ಆಭರಣ ಇತ್ಯಾದಿ ಮನ ಸೋಲುವಂತೆ ಸರಕುಗಳಿವೆ. ಟಿ ಶರ್ಟ್, ಶಾಲ್ ಇತ್ಯಾದಿ ಖರೀದಿಸಿದೆವು. ಕ್ಯಾರೆಟ್ ಖರೀದಿಸಿದೆವು. ಸುಮಾರು ೪ಕಿಮೀ ನಡೆದೇ ಹೊಟೇಲ್ ತಲಪಿದೆವು. ಎಲ್ಲರಿಗೂ ಸಾಕಷ್ಟು ಸುಸ್ತಾಗಿತ್ತು. ಊಟವಾಗಿ ಮಲಗಿದ್ದೊಂದೇ ಗೊತ್ತು! 




ಪಂಗೊಂಗ್ ಸರೋವರ

ತಾರೀಕು ೯ರಂದು ನಾವು ಬೆಳಗ್ಗೆ ೪.೩೦ಗೆ ಎದ್ದು ನಿತ್ಯವಿಧಿ ಪೂರೈಸಿ, ಬ್ರೆಡ್ ತಿಂದು ೬.೪೫ಕ್ಕೆ  ಪಂಗೊಂಗ್ ಸರೋವರ ನೋಡಲು ಹೊರಟೆವು. ನಮ್ಮ ವ್ಯಾನ್ ಚಾಲಕ ದುರ್ಜಿ. ಅವರ ಬಳಿ ಅಲ್ಲಿ ಬೆಳೆಯುವ ಮರಗಳ ಹೆಸರು ಕೇಳಿದೆ. ಅಲ್ಲಿ ಮರಗಳೇ ವಿರಳ. ಒಂದೆರಡು ವಿಧದ ಮರಗಳಿದ್ದುವು.  ೧೪ ಅಡಿ ಎತ್ತರ ಬೆಳೆಯುವ ಮರ ಯರ್ಪ.. ಇನ್ನೊಂದು ಮರದ ಹೆಸರು ಮರ್ಚಂಗ್. ಎರಡೂ ಮರ ಪೀಠೋಪಕರಣಕ್ಕೆ ಬಳಕೆ. 




 ಹೋಗುವ ದಾರಿಯಲ್ಲಿ ಬೆಟ್ಟ ಹತ್ತಿ ಇಳಿದು ಮಗದೊಮ್ಮೆ ಹತ್ತಿ ಹೀಗೆಯೇ ಸಾಗುತ್ತದೆ ರಸ್ತೆ. ಪರ್ವತ ಸಾಲುಗಳನ್ನು ಅದೂ ಬೃಹತ್ ಬಂಡೆಗಲ್ಲುಗಳು ನೋಡಿದಷ್ಟೂ ಕಣ್ಣು ತಣಿಯದು.  ಲೇಹ್ ನಿಂದ ಸುಮಾರು ೧೭೮೦೦ ಅಡಿ ಎತ್ತರದಲ್ಲಿದೆ. ಲೇಹ್ ನಿಂದ ೨೨೩ ಕಿಮೀ ದೂರವಿದೆ. ಮೂರನೇ ಅತಿ ಎತ್ತರದ ಮೋಟಾರು ವಾಹನ ಸಾಗುವ ಸಾಮರ್ಥ್ಯವಿರುವ ರಸ್ತೆ. ಯುವಕ ಯುವತಿಯರಿಗೆ ಇಲ್ಲಿ ಬೈಕ್ ಸವಾರಿ ಅತ್ಯಂತ ಸವಾಲು, ಸಾಹಸ ಮುದ ಕೊಡುತ್ತದೆ. ಅನೇಕ ಮಂದಿ ಬೈಕ್ ಸವಾರಿಯಲ್ಲಿ ಸಾಗುವುದನ್ನು ನೋಡಿದೆವು. ಸೇನೆಯವರ ವಾಹನಗಳೂ ಸಾಲಾಗಿ ಹೋಗುವುದನ್ನು ಕಂಡೆವು. ಅವರಿಗೆ ಜೈ ಜವಾನ್ ಎಂದು ಸೆಲ್ಯೂಟ್ ಹಾಕಿದೆವು. ಅವರೂ ನಕ್ಕು ಪ್ರತಿ ಸೆಲ್ಯೂಟ್ ಕೊಟ್ಟರು. ಕೆಲವು ಕಡೆ ದುರ್ಗಮ ರಸ್ತೆ. 


        ದಾರಿ ಮಧ್ಯೆ ಸೌತ ಸರೋವರ ಸಿಗುತ್ತದೆ. ಸೌ ಅಂದರೆ ಸರೋವರ, ಅಂದರೆ ಮೇಲೆ ಎಂದರ್ಥವಂತೆ. ಅಲ್ಲಿ ಕಟ್ಟಿ ತಂದಿದ್ದ ತಿಂಡಿ ತಿಂದೆವು. ಮುಂದುವರಿದು,



೧೭೬೮೮ ಅಡಿ ಎತ್ತರದಲ್ಲಿರುವ ಎರಡನೆ ಎತ್ತರದ ಚಾಂಗ್ ಲಾ ಪಾಸ್ ದಾಟಿ   ಸಾಗಬೇಕು. ಅಲ್ಲಿ ಬಸ್ ಇಳಿದಾಗ ಅತ್ಯಂತ ಚಳಿಯ ಅನುಭವವಾಯಿತುಎಲ್ಲರೂ ಸ್ವೆಟರ್ ಧರಿಸಲೇಬೇಕಾಯಿತು. ಅಲ್ಲಿ ಕೇವಲ ಹತ್ತು ನಿಮಿಷವಿದ್ದು, ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ನೋಡಿ ಅಲ್ಲಿಂದ ನಿರ್ಗಮಿಸಿದೆವು.



ಪಾಂಗಾಂಗ್ ಸರೋವರ ತಲಪಲು ಗಂಟೆ ಹಿಡಿಯಿತುಪಾಂಗಾಂಗ್ ಉಪ್ಪು ಸರೋವರ ಭಾರತ ಮತ್ತು ಚೀನಾ ನಡುವೆ ಸುಮಾರು ೧೩೪ ಕಿಲೋಮೀಟರ್ ವಿಸ್ತಾರವಾಗಿದೆ೪೨೫೦ ಮೀಟರ್ ಎತ್ತರದಲ್ಲಿದೆ. ನೀಲ ಬಣ್ಣದ ನೀರಿನಿಂದ ಶುಭ್ರವಾಗಿ  ಕಂಗೊಳಿಸುತ್ತದೆ. ನೀರು ಸಿಹಿನೀರಲ್ಲ. ತುಸು ಉಪ್ಪು ಮಿಶ್ರಿತವಾಗಿದೆ. (ಬಾಯಿಗೆ ಹಾಕಿ ಖಚಿತಪಡಿಸಿಕೊಂಡೆ!) ಪರ್ವತದ ಹಿಮ ಕರಗಿ ಬರುವ ನೀರು ಬಹುಶಃ ಕ್ಷಾರೀಯವಾಗಿರಬಹುದು. ವಲಸೆ ಹಕ್ಕಿಗಳಿಗೆ ನೆಚ್ಚಿನ ಸಂತಾನೋತ್ಪತ್ತಿ ತಾಣವಾಗಿದೆ. ಅಲ್ಲಿಂದ ಸುಮಾರು ೧೦೦ಕಿಮೀ ಚಲಿಸಿದರೆ ಚೀನಾ. ಸರೋವರದ ಶೇ.೪೬ಭಾಗ ಮಾತ್ರ ಭಾರತದಲ್ಲಿದೆ. ಉಳಿದ ೫೪ ಭಾಗ ಚೀನಾಕ್ಕೆ ಸೇರಿದೆಯಂತೆ.





ಸರೋವರದಲ್ಲಿಳಿದು ನಡೆದೆವು. ಚಳಿಗೆ ಕಾಲು ಮರಗಟ್ಟಿತು. ಕಾಲಿಗೆ ಜಲಥೆರಪಿ ಕೊಟ್ಟಂತಾಯಿತು.  ತ್ರೀ ಈಡಿಯೆಟ್ಸ್ ಸಿನಿಮಾ ಚಿತ್ರೀಕರಣ ಇಲ್ಲಿ ಮಾಡಿದ್ದಾರೆ. ನಾವೂ  ಖುರ್ಚಿಯಲ್ಲಿ ಕೂತು ಫೋಸು ಕೊಟ್ಟೆವು!  ಅಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಕಳೆದೆವು.


  ೨.೩೦ ಗಂಟೆಗೆ ಅಲ್ಲಿಂದ ಹೊರಟೆವು. ದಾರಿಮಧ್ಯೆ ೪.೩೦ ಗಂಟೆಗೆ ಕಟ್ಟಿ ತಂದಿದ್ದ ಪರೋಟ ತಿಂದೆವು. ವಾಹನ ಗಂಟೆಗೆ ೨೦-೩೦ ಕಿಮೀ ಮಾತ್ರ ಚಲಾಯಿಸಬಹುದಷ್ಟೆ. ರಸ್ತೆ ಸಪೂರ ಹಾಗೂ ದುರ್ಗಮ. ರಾತ್ರಿ ೮.೩೦ಗೆ ನಾವು ಹೊಟೇಲ್ ಏಷಿಯಾ ತಲಪಿದೆವು. ನಾವೇ ವಾಹನ ಶುಲ್ಕ ಭರಿಸಬೇಕು ಅಂದಿದ್ದರು. ಆದರೆ ಸಮಿತಿ ವತಿಯಿಂದಲೇ ಹಣ ಪಾವತಿಸಿದರು. ಪಾಂಗಾಂಗ್ ಲೇಕ್ ಹಾಗೂ ಖರ್ದೂಂಗ್ಲಾ ಪಾಸ್ ಗೆ ಹೋಗಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪತ್ರ ಕಡ್ಡಾಯ.   

 ಖರ್ದ್ಲೂಂಗ್ ಲಾ  ಪಾಸ್

ತಾರೀಕು ೧೦ರಂದು ಬೆಳಗ್ಗೆ ೫.೩೦ಗೆ ಎದ್ದು ತಯಾರಾಗಿ, ತಿಂಡಿ ತಿಂದು ೮.೪೫ಕ್ಕೆ ಖರ್ದ್ಲೂಂಗ್ ಲಾ  ಪಾಸ್ ಗೆ ಹೋಗಲು ಸ್ವರಾಜ್ ಮಜ್ಡಾ ಏರಿದೆವು. ಲೇಹ್ ನಿಂದ ಸುಮಾರು ೪೦ ಕಿಮೀ. ರಸ್ತೆ ಚೆನ್ನಾಗಿದೆ. ಇದನ್ನು ಜಮ್ಮು ಕಾಶ್ಮೀರದ ಲಡಾಖ್ ಪ್ರದೇಶದ ನುಬ್ರಾ ಶ್ಯೋಕ್ ಕಣಿವೆಗಳ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆಮಿಲಿಟರಿ ಪ್ರದೇಶ. ಎಲ್ಲೆಲ್ಲೂ ಅವರ ಹಸುರು ಲಾರಿಗಳೇ ಕಾಣುತ್ತಿತ್ತು. ಬೈಕ್ ಸವಾರರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ದಿನಕ್ಕೆ ೨೫೦೦ ರೂ. ಬಾಡಿಗೆ ಆಧಾರದಲ್ಲಿ ಬೈಕ್ ಲಭ್ಯ. ಪೆಟ್ರೋಲ್ ಖರ್ಚು ನಮ್ಮದೇ. ನಮ್ಮ  ತಂಡದಿಂದಲೂ ಹರಿಕೃಷ್ಣ, ಭರಧ್ವಾಜ್  ಎಂಬ ಇಬ್ಬರು ತರುಣರು ಬೈಕ್ ಸವಾರಿ ಮಾಡಿದ್ದಾರೆ. ಭರಧ್ವಾಜ್ ಒಬ್ಬನೇ ಹೋಗಲು ತಂದೆ ನಾಗೇಶ್ ಅವರಿಗೆ ಧೈರ್ಯವಿಲ್ಲದೆ ಅವರೂ ಮಗನ ಜೊತೆ ಬೈಕೇರಿದ್ದರು.  








 
.
 
ಖರ್ದುಂಗ್ ಲಾ ಪಾಸ್ ೧೭೫೮೨ ಅಡಿ ಇರುವ ಅತ್ಯಂತ ಎತ್ತರದ ವಾಹನ ಚಲಿಸುವ ರಸ್ತೆ ಎಂದು ಪ್ರಸಿದ್ಧಿ ಪಡೆದಿದೆ. ಪ್ರದೇಶದಲ್ಲಿ ಚಳಿ ಬಹಳವಾಗಿ ಇರುತ್ತದೆ. ೧೯೮೮ರಲ್ಲಿ ಇಲ್ಲಿ ಸಾರ್ವಜನಿಕ ವಾಹನ ಪ್ರವೇಶಕ್ಕೆ ಅನುಮತಿಸಲಾಯಿತು. ಹಿಮದ ಗಡ್ಡೆಯನ್ನು ಕೈಯಲ್ಲಿ ಹಿಡಿದು ಸಂತೋಷಪಟ್ಟೆವು. ಹೆಚ್ಚು ಹೊತ್ತು ಅಲ್ಲಿ ಕಳೆದರೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎಂದು ಮೊದಲೇ ಎಚ್ಚರ ಕೊಟ್ಟಿದ್ದರು. ಅಲ್ಲಿ ಸೇನಾ ಕ್ಯಾಂಟೀನ್ ಇದೆ. ಅಲ್ಲಿಂದ ಆಪ್ರಿಕಾಟ್ ಹಣ್ಣಿನ ಮೊರಬ್ಬ ಖರೀದಿಸಿದೆವು. ಸೇನೆಗೆ ದುಡ್ಡು ಸಂದಾಯವಾಗಬೇಕು  ಎಂಬ ಭಾವದಿಂದ  ಭಾವ ಅಲ್ಲಿ ತಲಾ ಸಾವಿರದಂತೆ ೪ ಟಿ ಶರ್ಟ್ ಖರೀದಿ ಮಾಡಿದರು.  ಒಂದು ಗಂಟೆ ಅಲ್ಲಿದ್ದು ಪ್ರಕೃತಿ ಸೌಂದರ್ಯ ಸವಿದು ೧೧ ಗಂಟೆಗೆ ಹಿಂದಿರುಗಿದೆವು. ದಾರಿ ಮಧ್ಯೆ ವ್ಯೂ ಪಾಯಿಂಟ್ ಸ್ಥಳದಲ್ಲಿ ನಿಂತು ಲೇಹ್ ಪಟ್ಟಣದ ದೃಶ್ಯ ವೀಕ್ಷಿಸಿದೆವು. ನುಬ್ರಾ ಕಣಿವೆಗೆ ಅಲ್ಲಿಂದ ೮೬ ಕಿಮೀ.   ಸಮಯದ ಅಭಾವದಿಂದ ಅಲ್ಲಿಗೆ ನಮಗೆ ಹೋಗಲಾಗಲಿಲ್ಲ. ಮಧ್ಯಾಹ್ನ ಹೊಟೇಲಿಗೆ   ಹಿಂದಿರುಗಿದೆವು. ಊಟಾವಾಗಿ ವಿಶ್ರಾಂತಿ. 




    ಸಂಜೆ ೪ ಗಂಟೆಗೆ  ಹತ್ತಿರವಿದ್ದ ಅಂಗಡಿಗೆ ಭೇಟಿ ಕೊಟ್ಟೆವು. ಝಹೀರ್ ಅಮಾನ್ ಎಂಬ ಯುವಕ ಟಿಶರ್ಟಿಗೆ ಮಿಷನ್ನಿನಲ್ಲಿ ಕಸೂತಿ ಹಾಕುತ್ತಿರುವುದನ್ನು ಪುಟ್ಟ ವೀಡಿಯೋ ಮಾಡಿದೆ.

ಸಾಂಸ್ಕೃತಿಕ ಕಾರ್ಯಕ್ರಮ

 ಏಷಿಯಾ ಹೊಟೇಲ್ ಆವರಣದಲ್ಲಿ ಜನಪದ, ಭಾವಗೀತೆ, ಹಾಸ್ಯ, ಕಾಶ್ಮೀರ ಕಥನ ಇತ್ಯಾದಿ ನಮ್ಮ ತಂಡದವರಿಂದ ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ನಡೆಯಿತು. ವೆಂಕಟೇಶ ಮೌರ್ಯ, ಸೂರ್ಯನಾರಾಯಣ, ಮತ್ತು ಇತರರು ವೇದಿಕೆಯಲ್ಲಿದ್ದರು. ವಿಜಯಲಕ್ಶ್ಮೀಯವರು ನಿರೂಪಣೆ ಮಾಡಿದರು. ಸಂಜೆ ೫.೧೫ರಿಂದ  ೭.೧೫ರವರೆಗೆ ನಡೆಯಿತು.

  ರಾತ್ರಿ ಊಟವಾಗಿ ನಮ್ಮ ಸೂಟ್ಕೇಸಿಗೆ ಒಣಗಲು ಹಾಕಿದ ಬಟ್ಟೆ ಮಡಿಸಿ ಸರಿಯಾಗಿ ಪ್ಯಾಕ್ ಮಾಡಿದೆವು. ೪ ದಿನ ( ೫ ರಾತ್ರಿ) ನಾವು ಲೇಹ್ ನಲ್ಲಿ ಹೊಟೇಲ್ ಏಷಿಯಾದಲ್ಲಿ ತಂಗಿದ್ದೆವು. ಅದು ನಮ್ಮ ಮನೆಯೆಂದೇ ಭಾವಿಸಿದ್ದೆವು! ರಾಹುಲ್,ಸಂಜಯ್, ಶಂಕರ್ ಎಂಬ ಮೂವರು ತರುಣರು ನಮಗೆ ಬಹಳ ಚೆನ್ನಾಗಿ ಉಪಚರಿಸಿದ್ದರು. ಆ ಹುಡುಗರಿಗೆ ನಮ್ಮ ತಂಡದ ವತಿಯಿಂದ ಹಾಗೂ ನಾವು ಕೆಲವರು ವೈಯಕ್ತಿಕವಾಗಿಯೂ ಭಕ್ಷೀಸು ಕೊಟ್ಟ್ಟೆವು. ಅವರು ಜಾರ್ಖಂಡಿನಿಂದ ಕೆಲಸಕ್ಕೆ ಬಂದವರು.
ಲೇಹ್ ಗೆ ವಿದಾಯ

ತಾರೀಕು ೧೧ರಂದು ಬೆಳಗ್ಗೆ ೫ ಗಂಟೆಗೆದ್ದು, ೭ ಗಂಟೆಗೆ ಬ್ರೆಡ್ ಕಾಫಿ ಸೇವಿಸಿ, ೭.೧೫ಕ್ಕೆ ಏಷಿಯಾ ಹೊಟೇಲ್ ಸಿಬ್ಬಂದಿಗೆ ವಿದಾಯ ಹೇಳಿ ನಾವು ಬಸ್ ಹತ್ತಿದೆವು. ಹೊಟೇಲ್ ಮಾಲೀಕ ಸೋನಮ್ ಕೂಡ ಅವರ ಮನೆಗೆ ಬಂದ ನೆಂಟರನ್ನು ಕಳುಹಿಸಿಕೊಡುವಂತೆ ಬಸ್ ಬಳಿ ಬಂದು ನಮ್ಮನ್ನು ಆತ್ಮೀಯತೆಯಿಂದ  ಬೀಳ್ಕೊಟ್ಟರು!  ನಾಲ್ಕು ದಿನ ಕೆಲಸವಿಲ್ಲದೆ ಸುಮ್ಮನೆ ನಿಂತಿದ್ದ ಬಸ್ಸಿಗೆ ಚಾಲಕರಿಗೆ ಜೀವಕಳೆ ಬಂತು!

ಮನಾಲಿಯೆಡೆಗೆ ಪಯಣ

ಉತ್ಸಾಹದಲ್ಲಿ ಬಸ್ ಏರಿ ಕುಳಿತೆವು. ಸುಮಾರು ೪೦ ಕಿಮೀ ಚಲಿಸಿದಮೇಲೆ ಕಟ್ಟಿ ತಂದಿದ್ದ ಬೆಳಗ್ಗಿನ ತಿಂಡಿ ತಿಂದು ಮುಗಿಸಿದೆವು. ಸುಮಾರು ೧೦೦ ಕಿಮೀ ರಸ್ತೆ ಚೆನ್ನಾಗಿಯೇ ಇತ್ತು. ಆಮೇಲಿನದು ಬಹಳ ಕಷ್ಟ. ಸಪೂರ ರಸ್ತೆ. ಇನ್ನೊಂದು ವಾಹನ ದೂರದಲ್ಲಿ ಬರುವುದು ಕಂಡರೆ ಅದು ಸಾಗುವವರೆಗೆ ನಿಲ್ಲಬೇಕು. ಕೆಲವು ಕಡೆ ಗಂಟೆಗೆ ೨೦-೩೦ ಕಿಮೀ ವೇಗದಲ್ಲಿ ಸಾಗಲು ಸಾಧ್ಯ ಅಷ್ಟೇ. ರಸ್ತೆ ಸಣ್ಣ ಗಾತ್ರದ ವಾಹನ ಚಾಲನೆಗೆ ಸೂಕ್ತವೆನಿಸಿತು. ಎಲ್ಲರಿಗೂ ಸಾಕೆನಿಸಿತು. ಲೇಹ್ ವರೆಗೆ ಮಾತ್ರ ಸಾಕಿತ್ತು. ಲೇಹ್ ನಿಂದಲೇ ವಿಮಾನ ಏರಬೇಕಿತ್ತು ಎಂದು ಅನಿಸಿತ್ತು. ಆದರೆ ರಸ್ತೆ ಮಾರ್ಗದಲ್ಲಿ ಹೋಗುವಾಗ ಕಾಣುವ ಪ್ರಕೃತಿ ಸೌಂದರ್ಯ ಮಾತ್ರ ಅದ್ಭುತ. ಪ್ರತೀ ಬಂಡೆ, ಕಲ್ಲುಗಳಲ್ಲಿ ಚಿತ್ತಾರ ವೈವಿಧ್ಯವನ್ನು ನೋಡಿದಷ್ಟೂ ಕಣ್ಣು ದಣಿಯದು.  ದಾರಿ ಮಧ್ಯೆ ಅಪರೂಪಕ್ಕೆ ಕಾಡು  ಹೂವಿನ ಚೆಲುವು ಕಾಣಲು ಸಿಕ್ಕಿತು.




ಪಾಂಗ್ ಎಂಬ ಸ್ಥಳದಲ್ಲಿ  ಕಟ್ಟಿ ತಂದಿದ್ದ ಪರೋಟವನ್ನು ಮಧ್ಯಾಹ್ನ ತಿಂದೆವು. ಅಲ್ಲಿ ನೀರಿಗೆ ಸ್ವಲ್ಪ ಕಷ್ಟವೇ ಇರಬೇಕು. ಲಾರಿಯಲ್ಲಿ ನೀರು ತಂದು ತುಂಬುತ್ತಿರುವುದು ಕಂಡೆವು.

 ರಾತ್ರಿಗೆ ಮನಾಲಿ ತಲಪುವುದೆಂದು ಭಾವುಸಿದ್ದೆವು. ಆದರೆ ರಸ್ತೆಯಲ್ಲಿ ಸಾಗಿ ರಾತ್ರಿ ಗಮ್ಯ ತಲಪಲು ಸಾಧ್ಯವಿಲ್ಲ ಎಂದು ಭಾಸವಾಯಿತು. ಸಾರ್ಚ್ ಎಂಬ ಸ್ಥಳದಲ್ಲಿ ರಾತ್ರಿ ಊಟವಾಯಿತು. ಅಲ್ಲಿರುವ ಕೆಲವು ಹೊಟೇಲಿನಲ್ಲಿ ಹಂಚಿ ಹೋಗಿ ಊಟ ಮಾಡಿದೆವು. ನಾವು ಕೆಲವರು ನೂಡಲ್ಸ್ ತಿಂದೆವು.  ಮುಂದೆ ಸಾಗುವುದಾ ಅಲ್ಲ ಅಲ್ಲೇ ಉಳಿದು ಬೆಳಗ್ಗೆ ಹೊರಡುವುದಾ ಎಂಬ ಜಿಜ್ಞಾಸೆ ಚರ್ಚೆಯಾಗಿ, ರಾತ್ರಿ ಪ್ರಯಾಣವೇ ಮಾಡುವುದೆಂದು ತೀರ್ಮಾನವಾಯಿತು. ನಾವೇನೋ ಕಣ್ಣುಮುಚ್ಚಿ ಕುಳಿತೆವು. ಆದರೆ  ೨೪ ಗಂಟೆ ನಿರಂತರ ಬಸ್ ಚಾಲನೆ ಮಾಡಿದ ಚಾಲಕನ ಬಗ್ಗೆ ಬಹಳ ಯೋಚನೆಯಾಯಿತು. ಲೇಹ್–ಮನಾಲಿ  ೪೨೭ಕಿಮೀ ದೂರ ಪಯಣ.




ಕೆಲವು ಕಡೆ ರಸ್ತೆಯೇ ಕಾಣುವುದಿಲ್ಲ. ಧೂಳುಮಯ ಗದ್ದೆಯಂತಿತ್ತು. ಹಲವು ಕಡೆ ರಸ್ತೆ ರಿಪೇರಿ, ನಿರ್ಮಾಣ ಕಾರ್ಯ ನಡೆಯುತ್ತಲಿತ್ತು. ಆಮೆವೇಗದಲ್ಲಿ ಪಯಣ. ಇಂಥ ರಸ್ತೆಯಲ್ಲಿ ೨೪.೩೦ ಗಂಟೆ ಬಸ್ ಚಲಾಯಿಸಿ  ತಾರೀಕು ೧೨ರಂದು ಬೆಳಗ್ಗೆ .೪೫ ಕ್ಕೆ ಮನಾಲಿ ತಲಪಿಸಿದರು. ಬಸ್ ಇಳಿದದ್ದೇ  ಚಾಲಕ ಪವನಕುಮಾರರಿಗೆ ಒಂದು ಸೆಲ್ಯೂಟ್ ಹಾಕಿದೆ. ಅವರು ನಕ್ಕು ಪ್ರತಿ ಸೆಲ್ಯೂಟ್ ಕೊಟ್ಟರು. ಅವರು ಜಮ್ಮುವಿನ ಕತ್ರಾದವರು.

   ಜಮ್ಮುವಿನಿಂದ ಲೇಹ್ ವರೆಗೆ ನಮ್ಮ ಯಾವುದೇ ಪ್ರಿಪೈಡ್ ಸಿಮ್ ಮೊಬೈಲ್ ಗೆ ಕರೆ ಬರುವುದಿಲ್ಲ, ಮಾಡಲೂ ಸಾಧ್ಯವಿಲ್ಲ. ಏನಿದ್ದರೂ ಪೋಸ್ಟ್ ಪೈಡ್ ಮಾತ್ರ ಕೆಲಸ ಮಾಡುತ್ತದೆ. ಚಿಂತಿಸಬೇಕಿಲ್ಲ. ಹೊಟೇಲ್ ವಸತಿಯಿರುವಲ್ಲಿ ವೈಫೈ ಸಂಪರ್ಕ ಇರುವುದರಿಂದ ಕರೆ ಮಾಡಲು ಅದನ್ನು ಉಪಯೋಗಿಸಿಕೊಳ್ಳಬಹುದು.

ಮುಂದುವರಿಯುವುದು

4 ಕಾಮೆಂಟ್‌ಗಳು:

  1. ಪ್ರವಾಸ ಕಥನ ಲಾಯಿಕು ಬತ್ತ ಇದ್ದು,ಇನ್ನು ಕೊನೆಯ ಕಂತು ಇರೆಕ್ಕು,ಬೇಗನೆ ಬರಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಓದಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದ. ಅಪ್ಪು ಇನ್ನು ಒಂದು ಕಂತಿಲಿ ಮುಗುಶುತ್ತೆ.
      ಆರು ಹೇಳಿ ಗೊಂತಾಯಿದಿಲ್ಲೆ.

      ಅಳಿಸಿ
  2. ಓದಿ ಖುಷಿಪಟ್ಟೆ. ಹಿಂಗೇ ಪ್ರವಾಸ ಕಥನ ಬರೆತ್ತನೆ ಇರು. ಆನು ಓದಿ ಅನುಭವಿಸುತ್ತೆ.

    ಪ್ರತ್ಯುತ್ತರಅಳಿಸಿ