ಗುರುವಾರ, ಸೆಪ್ಟೆಂಬರ್ 9, 2021

ಭಾರತದ ಮುಕುಟಮಣಿ ಹಿಮಾಲಯ - ಭಾಗ - ೪ ಕೊನೆಯ ಕಂತು

  ಜಮ್ಮು, ವೈಷ್ಣೋದೇವಿ, ಶ್ರೀನಗರ, ಕಾರ್ಗಿಲ್, ಲಡಾಖ್, ಲೇಹ್,  ಮನಾಲಿ, ಚಂಡೀಗಢ

 ಮನಾಲಿ  ನಗರ ಸುತ್ತಾಟ

ತಾರೀಕು ೧೩ರಂದು ಬೆಳಗ್ಗೆ ಮನಾಲಿ ಕ್ವೀನ್ ಹೊಟೇಲಿನಲ್ಲಿ ಸ್ನಾನಾದಿ ಕಾರ್ಯ ಮುಗಿಸಿದೆವು. ಹಿಂದಿನ ದಿನ ರಾತ್ರೆ ಊಟಕ್ಕಾಗಿ ಮಾಡಿದ ಚಪಾತಿ ಅನ್ನ ಇತ್ಯಾದಿ ಉಟಾದ ಕೋಣೆಯಲ್ಲಿ ಇತ್ತು. ನಾವು ಎರಡು ಬಸ್ ಮಂದಿಗೆ ತಯಾರಿಸಿದ ಊಟವದು. ನಾವು  ತಿಂಡಿ ತಿಂದು ೧೨.೪೫ಕ್ಕೆ ಬಾಡಿಗೆ ಕಾರಿನಲ್ಲಿ ನಗರ ಸುತ್ತಲು ಹೊರಟೆವು.


ಸೋಲಂಗ್ ಕಣಿವೆರೂ. ೭೦೦ ಕೊಟ್ಟು ಕೇಬಲ್ ಕಾರಿನಲ್ಲಿ ಸೋಲಂಗ್ ಕಣಿವೆ ವೀಕ್ಷಣೆ ಮಾಡಲು ಹೋದೆವು. ೮೪೦೦ ಅಡಿ ಎತ್ತರದಲ್ಲಿದೆ. ಕೊರೊನಾ ಕಾರಣದಿಂದ ಪ್ರವಾಸಿಗರೇ ಇಲ್ಲ. ನಾವೇ ಕೆಲವಾರು ಜನ ಮಾತ್ರ ಅಲ್ಲಿದ್ದೆವು.  ನಿಸರ್ಗದ ಸೌಂದರ್ಯವನ್ನು ನೋಡಿದೆವು.  ನಿರ್ಮಲಂಬ ಮಹಿಳೆ ಒಂಟಿಯಾಗಿ ಬಿಹಾರದಿಂದ ಪ್ರವಾಸ ಬಂದಿದ್ದರು. ಅಲ್ಲಿ ಅವರ ಕೆಲವು ಪಟ ಕ್ಲಿಕ್ಕಿಸಲು ಹೇಳಿದರು. ಹಾಗೂ ಮರೆಯದೆ ಮಗಳಿಗೆ ಕಳುಹಿಸಲು ತಾಕೀತು ಮಾಡಿದ್ದರು. ನಾವು ಪಟ ಕಳುಹಿಸಿದ್ದೆವು. ಆದರೆ ತಲಪಿದ ಬಗ್ಗೆ ಮಾರುತ್ತರ ಬಂದಿಲ್ಲ!  ಈ ಸಮಯದಲ್ಲಿ ಹಿಮವಿಲ್ಲದ ಕಾರಣ ಹಸಿರು ಮರಗಳ ವೀಕ್ಷಣೆ ಮಾಡಿ ಹಿಂತಿರುಗಿದೆವು
ದಾರಿಯಲ್ಲಿ ಸಾಗುವಾಗ ಎಲ್ಲಿ ನೋಡಿದರೂ ಸೇಬು, ಪೀರ್ ಹಣ್ಣಿನ ಮರಗಳು. ಮರದ ತುಂಬ ಹಣ್ಣುಗಳು. ನೋಡಿದಷ್ಟೂ ಆಹಾ ಎಷ್ಟು ಚಂದ ಎಂಬ ಉದ್ಗಾರ ನಮ್ಮ ಬಾಯಿಯಿಂದ ಹೊರಡುತ್ತಿತ್ತು. 

                                                  





ವಸಿಷ್ಠ ಮಂದಿರ

ಕುಲು ಜಿಲ್ಲೆಯ ಮನಾಲಿಯಲ್ಲಿರುವ ಬಿಯಾಸ್ ನದಿ ಪಕ್ಕ ಮರದಂದಲೇ ನಿರ್ಮಾಣವಾದ ವಸಿಷ್ಠ ದೇವಾಲಯ ನೋಡಿದೆವು. ಈ ದೇವಾಲಯಕ್ಕೆ ೪೦೦೦ ವರ್ಷಗಳ ಹಿಂದಿನ ಇತಿಹಾಸವವಿದೆಯಂತೆ. ಅದು ವಸಿಷ್ಠರ ನೆಲೆಬೀಡಾಗಿತ್ತಂತೆ. ಅಲ್ಲಿ ಬಿಸಿನೀರಿನ ಬುಗ್ಗೆಯೂ ಇದೆ. ವಸಿಷ್ಠರು ಸ್ನಾನಕ್ಕಾಗಿ ಲಕ್ಷ್ಮಣ ಬಾಣವನ್ನು ನೆಲಕ್ಕೆ ಹೊಡೆದಾಗ ಬಿಸಿನೀರ ಬುಗ್ಗೆ ಚಿಮ್ಮಿತೆಂಬುದು ಕಥೆ. ಪ್ರವೇಶ ಸಮಯ ಬೆಳಗ್ಗೆ ೭ರಿಂದ ರಾತ್ರಿ ೯ರವರೆಗೆ

 



ರಾಮ- ಶಿವ ಮಂದಿರ

      ಪಕ್ಕದಲ್ಲೇ ಕಲ್ಲಿನಿಂದಲೇ ನಿರ್ಮಾಣವಾದ ರಾಮ ಮಂದಿರ ಹಾಗೂ ಮರದಿಂದ ನಿರ್ಮಿಸಿದ ಶಿವ ಮಂದಿರ ಕೂಡ ಇದೆ. ಶಿವ ದೇಗುಲದಲ್ಲಿ ತಾಮ್ರದ ಕೊಡ ತೊಳೆದು ಇಟ್ಟದ್ದು ಫಳ ಫಳ ಮಿಂಚುತ್ತಿತ್ತು. 


 ಮನೆ ಛಾವಣಿಗೆ ಚಪ್ಪಡಿ ಕಲ್ಲನ್ನು ಹೊದೆಸಿದ್ದು,  ದೊಡ್ಡ ದೊಡ್ಡ ಕಲ್ಲನ್ನು ಹೊರುವ ಬಗೆ ನೋಡಿದೆವು.

ಹಿಡಿಂಬಾ ದೇವಾಲಯ
ಪ್ರಪಂಚದಲ್ಲೇ ಏಕೈಕ ಹಿಡಿಂಬಾ ದೇವಾಲಯ ಇರುವುದು ಮನಾಲಿಯಲ್ಲಿ ಮಾತ್ರ. ದೇವಾಲಯದ ನಿರ್ಮಾಣ ಕತೃ ರಾಜ ಬಹದ್ದೂರ್ ಸಿಂಗ್. ಬೆಟ್ಟದ ಮೇಲೆ ದೇವಾದಾರು ಅರಣ್ಯದ ಮಧ್ಯೆ ೧೬ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಯಲ್ಲಿದೆ.
ಭೀಮನ ಪತ್ನಿಯಾಗಿದ್ದ ಹಿಡಿಂಬೆ ಇಲ್ಲಿ ತಾನು ಮಾಡಿದ ಪಾಪಗಳ ಕ್ಷಮೆಗಾಗಿ ಧ್ಯಾನ ಮಾಡಿದ್ದಳಂತೆ. ಹಾಗೆ ಅವಳಿಗೆ ದೇವಿಯ ಅಂಶ ನೀಡಲಾಯಿತಂತೆ.


  ನಾವು ಅಲ್ಲಿ ಸೇಬು ಹಾಗು ಪ್ಲಮ್ ಹಣ್ಣು ತೆಗೆದುಕೊಂಡೆವು. ಪಾನ್ ಮಾರುವವರು, ಹಣ್ಣು ಮಾರುವವರು, ಮನಾಲಿ ಉಡುಗೆ ತೊಡಿಸುವವರು,  ಯಾಕ್ ಮೇಲೆ ಸವಾರಿ, ಮೊಲ ಕೈಗೆ ಕೊಟ್ಟು ಅದರಿಂದ ಸಂಪಾದನೆ ಹೀಗೆ ಹೊಟ್ಟೆಪಾಡಿಗಾಗಿ ನಾನಾ ನಮೂನೆಯ ಜನರಿದ್ದರು.





ಸುಮಾರು ೭೦ ಮೀಟರ್ ಅಂತರದಲ್ಲಿ ಘಟೋದ್ಗಜನ ತೆರೆದ ದೇವಾಲಯವೂ ಇದೆ. ಮರದ ಬುಡದಲ್ಲಿ ಸಾಕಷ್ಟು ತ್ರಿಶೂಲಗಳು ಈಟಿಗಳು, ತಗಡಿನ ಮನೆಗಳು ಕಂಡಿತು. ಬಹುಶಃ ಹರಕೆ ಸಂದಾಯದ ಸರಕುಗಳವು.  




ಅಲ್ಲಿ ಷರಬತ್ತು ಕುಡಿದೆವು. ಅಲ್ಲಿಂದ ನಾವು ಹೊಟೇಲ್ ಕ್ವೀನಿಗೆ ಸಂಜೆ ೪ ಗಂಟೆಗೆ ಮರಳಿದೆವು. ಆದರೆ ಊಟದ ಅವಧಿ ಮುಗಿದಿತ್ತು.  ಹಾಗಾಗಿ ನಾವು ಹತ್ತಿರದಲ್ಲೆ ಇದ್ದ ಹೊಟೇಲಿಗೆ ಹೋಗಿ ಊಟ, ತಿಂಡಿ ಮಾಡಿದೆವು.

ಚಂಡೀಗಢದೆಡೆಗೆ ಪಯಣ

 ರಾತ್ರೆ ೮ ಗಂಟೆಗೆ ಮನಾಲಿಯಿಂದ ಚಂಡೀಗಢಕ್ಕೆ ಹೋಗಲು ಬಸ್ ಹತ್ತಿದೆವು. ರಸ್ತೆ ಹೇಗಿದೆ? ರಾತ್ರಿ ಪಯಣವಾದುದರಿಂದ ರಸ್ತೆ ಬದಿಯ ಬೆಟ್ಟ ಗುಡ್ದಗಳ ಸೌಂದರ್ಯ ಯಾವುದನ್ನೂ ನೋಡಲು ಸಾಧ್ಯವಾಗಲಿಲ್ಲ. ಸುಮಾರು ೩೦೨ ಕಿಮೀ ಪಯಣ.

ತಾರೀಕು ೧೩ರಂದು ಬೆಳಗ್ಗೆ ೮.೪೫ ಗಂಟೆಗೆ ಚಂಡೀಗಢ ತಲಪಿ ಅಗರವಾಲ್ ಭವನದಲ್ಲಿ ವಾಸ್ತವ್ಯ. (ಪ್ಲಾಟ್ ನಮ್. ೧ ಸುಖ್ನಾನಾಥ್ ಸೆಕ್ಟರ್ ೩೦ ಎ ಚಂಡೀಗಢ.) ಪ್ರವೇಶದ ಬಲಭಾಗದಲ್ಲಿ ಗೊಂಬೆಗಳನ್ನು ಜೋಡಿಸಿಟ್ಟಿದ್ದಾರೆ. ಅಲ್ಲಿಯ ಕ್ಯಾಂಟೀನಿನಲ್ಲಿ ಬಿಸಿಬಿಸಿ ಪರೋಟ ತಿಂದೆವು. ಒಂದು ಪರೋಟಕ್ಕೆ ರೂ. ೨೦ ಮಾತ್ರ.


 ಕುರುಕ್ಷೇತ್ರ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಎಂದು ಭಗವದ್ಗೀತೆಯಲ್ಲಿ ಓದಿ ಗೊತ್ತು. ಆದರೆ ಕುರುಕ್ಷೇತ್ರ ಎಂಬ ಊರಿದೆ ಎಂದು ಗೊತ್ತಾದದ್ದೇ ಸಿಂಧೂ ಯಾತ್ರೆಯ ಮೂಲಕ. ಹಾಗೆ ನಾವು ಒಂದಷ್ಟು ಮಂದಿ ಬಾಡಿಗೆ ವಾಹನ ಮಾಡಿಕೊಂಡು ಮಧ್ಯಾಹ್ನ ೧೧.೪೫ಕ್ಕೆ ಕುರುಕ್ಷೇತ್ರಕ್ಕೆ ಹೊರಟೆವು. ಕುರುಕ್ಷೇತ್ರ ಹರ್ಯಾಣ ರಾಜ್ಯದಲ್ಲಿದೆ. ದಾರಿಯುದ್ದಕ್ಕೂ ಹಸುರು ಸಮೃದ್ಧಿ. ಸಾಲು ಸಾಲು ಭತ್ತದ ಗದ್ದೆಗಳು. ಚಂಡೀಗಢದಿಂದ ಸುಮಾರು ೯೫ಕಿಮೀ ದೂರವಿದೆ. ದಾರಿಯಲ್ಲಿ ಹೊಟೇಲ್ ಗುಲಾಬಿಯಲ್ಲಿ ಊಟ ಮಾಡಿದೆವು.

ಶ್ರೀಕೃಷ್ಣ ಮ್ಯೂಸಿಯಂ

ಮೊದಲಿಗೆ ನಾವು ಶ್ರೀಕೃಷ್ಣ ವಸ್ತುಪ್ರದರ್ಶನಾಲಯಕ್ಕೆ ಹೋದೆವು. ಒಟ್ಟು ಆರು ಗ್ಯಾಲರಿಗಳಲ್ಲಿ ಸಮೃದ್ಧ ಕಲಾಕೃತಿಗಳಿವೆ. ಮಹಾಭಾರತದ ಇತಿಹಾಸವನ್ನು ಬಹಳ ಚೆನ್ನಾಗಿ ಕಲಾಕೃತಿಗಳಲ್ಲಿ ತೋರಿಸಿದ್ದಾರೆ. ಭೀಷ್ಮ ಶರಶಯ್ಯೆಯಲ್ಲಿ ಮಲಗಿದ, ಅಭಿಮನ್ಯು ಭೇದಿಸಿದ ಚಕ್ರವ್ಯೂಹ ಮಾದರಿ,  ಇತ್ಯಾದಿ. ಹರ್ಯಾಣ ಸರ್ಕಾರ ಭಾರತ ಸರಕಾರದ ಪ್ರವಾಸೋದ್ಯಮ ಸಚಿವಾಲಯದ ಸಹಕಾರದಲ್ಲಿ ಬೃಹತ್ತಾದ ಮ್ಯೂಸಿಯಮನ್ನು ಬಹಳ ವ್ಯವಸ್ಥಿತವಾಗಿ ಕಟ್ಟಿದ್ದಾರೆ. ಪಕ್ಕದಲ್ಲೇ ಕುರುಕ್ಷೇತ್ರ ಪನೋರಮಾ ಸಯನ್ಸು ಸೆಂಟರ್ ಕೂಡ ಇದೆ. ಮ್ಯೂಸಿಯಮ್ ಸರಿಯಾಗಿ ನೋಡಲು ಅರ್ಧ ದಿನವೇ ಬೇಕು. ಕುರುಕ್ಷೇತ್ರ ತೀರ್ಥ ಪರಿಕ್ರಮ ಎಂದು ಬಸ್ ಸರ್ವಿಸ್ ಇಟ್ಟಿದ್ದಾರೆ. ತಲಾ ರೂ. ೫೦ ಕ್ಕೆ ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು ೧೫ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರಂತೆ. ಪ್ರವೇಶ ಶುಲ್ಕ ರೂ. ೩೦, ಮಕ್ಕಳಿಗೆ ರೂ.೧೦ ಪ್ರವೇಶ ಸಮಯ: ಬೆಳಗ್ಗೆ ೧೦ರಿಂದ ಸಂಜೆ ೪.೧೫. ಸೋಮಾವಾರ ರಜಾ ದಿನ









     ಬ್ರಹ್ಮ ಸರೋವರ

ಈ ಸರೋವರ ಏಷ್ಯಾದ ಅತಿದೊಡ್ಡ ಮಾನವ ನಿರ್ಮಿತ ಕೊಳವೆಂದು ಪ್ರಸಿದ್ಧಿ ಪಡೆದಿದೆ.   ೩೬೦೦ ಅಡಿ ಉದ್ದ, ೧೫೦೦ ಅಡಿ ಅಗಲ, ೪೫ ಅಡಿ ಆಳವಿದೆ. ಬ್ರಹ್ಮನು ಬೃಹತ್ ಯಜ್ಞ ಕೈಗೊಂಡ ಬಳಿಕ ಕುರುಕ್ಷೇತ್ರ ಭೂಮಿಯಿಂದ ವಿಶ್ವವನ್ನು ಸೃಷ್ಟಿ ಮಾಡಿದನು. ಇಲ್ಲಿನ ಬ್ರಹ್ಮ ಸರೋವರವು ನಾಗರೀಕತೆಯ ತೊಟ್ಟಿಲು ಎಂದು ಉಲ್ಲೇಖಿಸಲಾಗಿದೆ. ಮಹಾಭಾರತದ ಯುದ್ಧದಲ್ಲಿ ಯುದ್ಢ ಮುಕ್ತಾಯದ ದಿನ ದುರ್ಯೋಧನ ಇದೇ ಸರೋವರದಲ್ಲಿ ನೀರಿನೊಳಗೆ ಕುಳಿತಿದ್ದ  ಎಂಬುದು ಪ್ರತೀತಿಯಲ್ಲಿದೆ.



  ಆ ಸರೋವರದಲ್ಲಿ  ಮಕ್ಕಳು ಈಜಿ ಅಲ್ಲಿ ಹಾಕಿದ ನಾಣ್ಯವನ್ನು ಹೆಕ್ಕುತ್ತಿದ್ದುದು ಕಂಡೆವು. 

   ಪ್ರವೇಶ ಶುಲ್ಕವಿ್ಲ್ಲ. ನಿಗದಿತ ಸಮಯವೆಂದಿಲ್ಲ. ಯಾವಾಗ ಬೇಕಾದರೂ ಹೋಗಬಹುದು.

ಭದ್ರಕಾಳಿ ಮಂದಿರ- ಶಕ್ತಿಪೀಠ

  ಭದ್ರಕಾಳಿ ಮಂದಿರ ನೋಡಿ ಅದರ ಐತಿಹ್ಯ ಕೇಳಿದೆವು. ಶಿವನು ಸತಿಯ ದೇಹವನ್ನು ಹೃದಯಕ್ಕೆ ಒತ್ತಿಕೊಂಡು ವಿಶ್ವಾದ್ಯಂತ ಸಂಚರಿಸಲು, ಆಗ ಅದನ್ನು ನೋಡಿದ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಕತ್ತರಿಸುತ್ತಾನೆ. ಅವಳ ದೇಹದ ಅಂಗಗಳು  ೫೨ ಭಾಗಗಳಾಗಿ ೫೨ ಭಾಗಗಳು ಬಿದ್ದ ಸ್ಥಳಗಳು ಶಕ್ತಿಪೀಠಗಳಾಗಿ ಪ್ರಸಿದ್ಧಿ ಪಡೆದುವು. ಇದು ಸತಿಯ ಬಲ ಪಾದ ಬಿದ್ದ ಸ್ಥಳ.

 ಮಾಹಾಭಾರತದ ಕುರುಕ್ಷೇತ್ರದಲ್ಲಿ ಯುದ್ಧಕ್ಕೆ ಹೊರಡುವ ಮೊದಲು ಪಾಂಡವರು ಶ್ರೀಕೃಷ್ಣನೊಂದಿಗೆ ತಮ್ಮ ವಿಜಯಕ್ಕಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸಿದರು.  ಮತ್ತು ತಮ್ಮ ರಥದ ಕುದುರೆಗಳನ್ನು ದಾನ ಮಾಡಿದರು.  ಎಂಬುದು ಕಥೆ. ಭಕ್ತರು ಹರಕೆಮೂಲಕ ಸಲ್ಲಿಸಿದ ಕೆಲವಾರು ಕುದುರೆಗಳ ಮೂರ್ತಿ ಅಲ್ಲಿ ಕಾಣುತ್ತೇವೆ.





ಭೀಷ್ಮಕುಂಡ, ನರಕತಾರಿ

ಭೀಷ್ಮನು ಶರಶಯ್ಯೆಯಲ್ಲಿ ಮಲಗಿದನೆಂದು ಹೇಳಲಾದ ಸ್ಥಳದಲ್ಲಿ ಒಂದು ಕೆರೆ ಹಾಗೂ ಸಣ್ಣ ದೇವಾಲಯ ಇದೆ.  ಭೀಷ್ಮ ಶರಶಯ್ಯೆಯಲ್ಲಿ ಮಲಗಿದ್ದಾಗ ಅವನ ಬಾಯಾರಿಕೆ ತಣಿಸುವ ಸಲುವಾಗಿ ಅರ್ಜುನ ಬಾಣವನ್ನು ನೆಲಕ್ಕೆ ಹೊಡೆದಾಗ ನೀರು ಚಿಮ್ಮಿತಂತೆ. ಹಾಗೆ ಈ ಭೀಷ್ಮಕುಂಡ ಅಸ್ತಿತ್ತ್ವಕ್ಕೆ ಬಂತು ಎಂಬುದು ದಂತಕಥೆ.



 ಜ್ಯೋತಿಸಾರ ಭಗವದ್ಗೀತೆ ರಚನೆಗೊಂಡ ಸ್ಥಳ

ಮಹಾಭಾರತ ಯುದ್ಧ ಸುರುವಾಗುವ ಮುನ್ನಾದಿನ ಅರ್ಜುನನಿಗೆ ಶ್ರೀಕೃಷ್ಣ ಗೀತೋಪದೇಶ ಮಾಡಿದ ಸ್ಥಳವಂತೆ. ಇಲ್ಲಿ ಶಿವ ದೇವಾಲಯವಿದೆ. ಗೀತಾ ಉಪದೇಶ ಮಾಡಿದ ರಥದ ಪ್ರತಿಮೆ ಸ್ಥಾಪಿಸಲಾಗಿದೆ.  ಬಲು ದೊಡ್ಡ ಆಲದ ಮರವೂ ಇದೆ. 

  ಇಷ್ಟೆಲ್ಲ ಸುತ್ತಿ ಆಗುವಾಗಲೆ ಗಂಟೆ ೮ ಆಗಿತ್ತು. ಅಲ್ಲಿಂದ ನಾವು ಅಗರವಾಲ್ ಭವನಕ್ಕೆ ರಾತ್ರೆ೧೦ ಗಂಟೆಗೆ ತಲಪಿದೆವು. ಕ್ಯಾಂಟೀನಿನಲ್ಲಿ ಊಟ ಮಾಡಿ ವಿಶ್ರಾಂತಿ ಪಡೆದೆವು.

ಚಂಡೀಗಢ ನಗರ ಸುತ್ತಾಟ

 ತಾರೀಕು ೧೪ರಂದು  ಬೆಳಗ್ಗೆ ೭ ಗಂಟೆಗೆದ್ದು ತಯಾರಾಗಿ, ತಿಂಡಿ ತಿಂದು,  ೧೦ ಗಂಟೆಗೆ ಅಗರ್ವಾಲ್ ಭವನದಿಂದ ಲಗೇಜು ಸಮೇತ ಹೊರಟು ಬಾಡಿಗೆ ವ್ಯಾನಿನಲ್ಲಿ ಚಂಡೀಗಢದಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೊರಟೆವು. ಚಂಡೀಗಢ ಅತ್ಯುತ್ತಮ ಯೋಜಿತ ನಗರ. ಎತ್ತ ನೋಡಿದರತ್ತ ಹಸುರು ಕಾಣುವ ಸ್ಥಳ. ಸಮೃದ್ಧಿ ಊರು.

ರಾಕ್ ಗಾರ್ಡನ್

ಮೊದಲಿಗೆ ನಾವು ರಾಕ್ ಗಾರ್ಡನಿಗೆ ಹೋದೆವು. ಕೈಗಾರಿಕೆ, ಮನೆಯ ತ್ಯಾಜ್ಯ, ಕಲ್ಲು, ಪಿಂಗಾಣಿ ಚೂರು, ಮಡಿಕೆ,ಬಳೆ ತುಂಡುಗಳಿಂದ ಕಲಾತ್ಮಕವಾಗಿ ರಚಿಸಿದ ಈ ಉದ್ಯಾನವನ ಬಹಳ ಅದ್ಭುತ ಪರಿಕಲ್ಪನೆ.  ನೆಕ್ ಚಂದ್ ಸೈನಿ ಎಂಬ ಅಧಿಕಾರಿ ತಮ್ಮ ಬಿಡುವಿನ ವೇಳೆಯಲ್ಲಿ ೧೯೫೭ರಲ್ಲಿ ಗುಟ್ಟಾಗಿ ಈ ಉದ್ಯಾನವನ ರಚಿಸಿ, ೧೯೭೬ರಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ವೀಕ್ಷಣೆಗೆ ಇಟ್ಟರು.  ಇಂದು ಅದು ೪೦ ಎಕರೆ ವಿಸ್ತೀರ್ಣಕ್ಕೆ ಹರಡಿದೆ.  ನೆಕ್ ಚಂದ್ ೧೯೨೪ರಲ್ಲಿ ಜನಿಸಿ, ೨೦೧೫ರಲ್ಲಿ ನಿಧನರಾದರು. ೧೯೮೪ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದರು.  ಈ ಉದ್ಯಾನವನ ಸರಿಯಾಗಿ ಪೂರ್ಣವಾಗಿ ನೋಡಲು ಮೂರು ಗಂಟೆ ಬೇಕು. ಒಂದೆರಡು  ನೀರಿನ ಝರಿ ಬಿಳುವ ಸ್ಥಳವಿದೆ. ನಾವು ಒಂದೂವರೆ ಗಂಟೆಕಾಲ ಸುತ್ತಿದೆವು.  ಪ್ರವೇಶ ಶುಲ್ಕ ರೂ. ೩೦













   
ಸುಖ್ನಾ ಸರೋವರ

ಸುಖ್ನಾ ಸರೋವರ ನೋ್ಡಲು ಹೋದೆವು. ಸುಮಾರು ೩ಕಿಮೀ ವಿಸ್ತೀರ್ಣ ಹೊಂದಿರುವ, ೧೬ ಅಡಿ  ಆಳವಿರುವ ಸುಖ್ನಾ ಸರೋವರವನ್ನು೧೯೫೮ರಲ್ಲಿ ಶಿವಾಲಿಕ್ ಬೆಟ್ಟಗಳಿಂದ ಹರಿಯುವ ನೀರಿನ ಶೇಖರಣೆಗೆ ನಿರ್ಮಿಸಲಾಯಿತು.  ಬೋಟಿಂಗ್, ವಿಹಾರ ನೌಕೆ, ವಾಟರ್ ಸ್ಕೀಯಿಂಗ್ ಇತ್ಯಾದಿ ಜಲಕ್ರೀಡಾಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದೆ.  ವಾರದ ಎಲ್ಲಾ ದಿನಗಳಲ್ಲೂ ಉಚಿತ ಪ್ರವೇಶ. ಸಮಯ ಬೆಳಗ್ಗೆ ೫ರಿಂದ ರಾತ್ರಿ ೯ರತನಕ


ಮಾತೆ ಮಾನಸಾದೇವಿ ಮಂದಿರ

ಮಾನಸಾದೇವಿ ಮಂದಿರ ನೊದಲು ಹೋದೆವು. ದೇವಾಲಯಕ್ಕೆ ಹೋಗಲು ಈಗ ಮೆಟ್ತಲು ಹತ್ತಬೇಕೆಂದಿಲ್ಲ. ಎತ್ತುಯಂತ್ರ ಸೌಕರ್ಯವಿದೆ. ಪಂಚಕುಲ ಎಂಬಲ್ಲಿ  ಎರಡು ದೇವಾಲಯಗಳಿವೆ. ೧೦೦ ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿ ದೇವಾಲಯವಿದೆ. ಮುಖ್ಯ ದೇವಾಲಯವು ಬಹಳ ಪುರಾತನವಾದುದು. ಮಹಾರಾಜ ಗೋಪಾಲದಾಸ್ ಸಿಂಗ್, ೧೮೧೧ರಲ್ಲಿ ನಿರ್ಮಾಣ ಪ್ರಾರಂಭಿಸಿ ೧೮೧೫ರ ಅವಧಿಯಲ್ಲಿ ಪೂರ್ಣಗೊಂಡಿತು. ಮಾನಸ ದೇವಿ ದೇವಾಲಯದಿಂದ ೨೦೦ ಮೀಟರ್ ದೂರದಲ್ಲಿ ೧೮೪೦ರಲ್ಲಿ ಪಟಿಯಾಲ ಮಹಾರಾಜ ಕರಮ್ ಸಿಂಗ್ ನಿರ್ಮಿಸಲಾದ ಶಿವಾಲಯ ದೇವಸ್ಥಾನವಿದೆ. ಕೆಳಗಿನ ನಾಲ್ಕು ಪಟಗಳ ಕೃಪೆ: ಅಂತರ್ಜಾಲ




      ದೇವಿ ಮಾನಸ, ದೇವಿ ಸರಸ್ವತಿ ಮತ್ತು ಲಕ್ಷ್ಮಿಯೊಂದಿಗೆ ಗರ್ಭಗುಡಿಯಲ್ಲಿ ಪೂಜಿಸಲಾಗುತ್ತದೆ. ಮಾನಸದೇವಿಯನ್ನು ಪಿಂಡಿ ರೂಪದಲ್ಲಿ ಪೂಜಿಸಲಾಗುತ್ತಿತ್ತು. ಹಾಗೂ ಮಾನವರೂಪದ ಅಮೃತಶಿಲೆಯ ಕೆತ್ತನೆಯ ರೂಪವನ್ನು ಇತ್ತೀಚೆಗೆ ರಚಿಸಲಾಯಿತು.

 ದಂತಕಥೆಯ ಪ್ರಕಾರ ದೇವಿ ಸತಿಯ ತಲೆ ಇಲ್ಲಿ ಬಿದ್ದಿತ್ತು. ಪ್ರಮುಖ ಶಕ್ತಿಪೀಠಗಳಲ್ಲಿ ಇದೂ ಒಂದು.

ಅಲ್ಲಿರುವ ಮರದಲ್ಲಿ ಭಕ್ತರು ಕಟ್ಟಿದ ಹರಕೆರೂಪದ ಬಟ್ಟೆಗಳು ಮರವನ್ನೇ ಮುಚ್ಚುಬಿಡುವಷ್ಟು ತುಂಬಿತ್ತು. 

ಪ್ರವೇಶ ಸಮಯ : ಬೇಸಗೆಯಲ್ಲಿ ೪ರಿಂದ ರಾತ್ರಿ ೧೦ ಚಳಿಗಾಲ: ಬೆಳಗ್ಗೆ ೫ರಿಂದ ರಾತ್ರಿ ೯ 

ಶುಕ್ರವಾರ ಶನಿವಾರ ೨೪ ಗಂಟೆಯೂ ತೆರೆದಿರುತ್ತದೆ.ಪ್ರವೇಶ ಶುಲ್ಕವಿಲ್ಲ.

   ನಾಡ ಸಾಹಿಬ್ ಗುರುದ್ವಾರ ಪಂಚಕುಲ

 ಈ ಗುರುದ್ವಾರ ಘಗ್ಗರ್ ನದಿಯ ದಡದಲ್ಲಿದೆ. ೧೬೮೮ರಲ್ಲಿ ಪಾವಂತಾ ಸಾಹಿಬ್ ನಿಂದ ಆನಂದಪುರ ಸಾಹಿಬ್ ವರೆಗೆ ಭಂಗನಿ ಕದನದ ನಂತರ ಗುರು ಗೋವಿಂದ ಸಿಂಗ್ ಪ್ರಯಾಣಿಸುತ್ತಿದ್ದಾಗ, ಅವರು ನೆಲೆ ನಿಂತ ಸ್ಥಳವಂತೆ ಇದು. ಇಲ್ಲಿ ಭವ್ಯವಾದ ಗುರುದ್ವಾರವಿದೆ. ಹಸಿದವರಿಗೆ ನೀರು ಊಟ ಸದಾ ಲಭ್ಯ. ಬಿಸಿ ಬಿಸಿ ಚಹಾ ಎಲ್ಲಾ ವೇಳೆಯಲ್ಲೂ ಲಭಿಸುತ್ತದೆ.

   ನಮ್ಮ ಪಾದುಕೆಯನ್ನುಉಚಿತವಾಗಿ  ಇಡಲು ಸ್ಥಳವಿದೆ. ನಮ್ಮ ಚಪ್ಪಲಿಯನ್ನು ಕೈಯಲ್ಲಿ ತೆಗೆದುಕೊಂಡು ತಲೆಗೆ ಒತ್ತಿಕೊಂಡು ಸೇವೆಯ ರೂಪದಲ್ಲಿ ಎತ್ತಿಡುತ್ತಾರೆ. ನೋಡುವಾಗ ಆಶ್ಚರ್ಯವಾಗುತ್ತದೆ. ಪ್ರವೇಶ ಸಮಯ ಬೆಳಗ್ಗೆ ೪ರಿಂದ ರಾತ್ರೆ ೮






ಅಲ್ಲಿ ನಾವು ಚಪಾತಿ ತಿಂದು ತೆರಳಿದೆವು.

 ಪ್ರವಾಸದ ಸಮಾಪ್ತಿ-ಮರಳಿ ಗೂಡಿಗೆ

    ಮಧ್ಯಾಹ್ನ  ೨.೩೦ಗೆ ವಿಮಾನ ನಿಲ್ದಾಣಕ್ಕೆ  ಹೊರಟೆವು. ದಾರಿಯಲ್ಲಿ ಎಲ್ಲಿಯಾದರೂ ಹೊಟೇಲಿನಲ್ಲಿ ನಿಲ್ಲಿಸ್ಲು ಮನವಿ ಮಾಡಿದೆವು. ರಾತ್ರಿಗೆ ಏನಾದರೂ ಕಟ್ಟಿಸ್ಕೊಳ್ಳುವ ಇರಾದೆ ನಮ್ಮದು. ವಿಮಾನ ನಿಲ್ದಾಣದಲ್ಲಿ ನಮಗೆ ಆಗುವಂತದು ಏನೂ ಸಿಗುವುದಿಲ್ಲ. ಸಿಕ್ಕರೂ ಬಲು ದುಬಾರಿ. ಈಗ ಕಟ್ಟಿಸಿಕೊಂದರೆ ಹಳಸೀತು ಎಂದ ಚಾಲಕ ಎಲ್ಲೂ ನಿಲ್ಲಿಸದೆ ೩.೩೦ಗೆ ನಮ್ಮನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟ.   

ನಮ್ಮ ಹಾಗೂ ಲಗೇಜು ತಪಾಸಣೆಯಾಗಿ ನಾವು ಒಳಗೆ ಹೋದೆವು. ಸಂಜೆ ನೂಡಲ್ಸ್, ಕೇವಲ ರೂ ೨೦೦! ಕಾಫಿ ರೂ ೧೮೦ ಕೊಟ್ಟು ಅವನ್ನು ಹೊಟ್ಟೆಗೆ ಹಾಕಿಕೊಂಡೆವು!

  ಇಂಡಿಗೋ  ವಿಮಾನ ಏರಿದೆವು. ಕೋವಿಡ್ ನಿಯಮಾನುಸಾರ ಮಧ್ಯ ಸೀಟಿನಲ್ಲಿ ಕೂರುವವರು ಬಿಳಿ ಕೋಟು ಧರಿಸಬೇಕಿತ್ತು. ನನಗೆ ಆ ಭಾಗ್ಯ ಲಭಿಸಿತ್ತು! ೭.೧೦ಕ್ಕೆ ಹೊರಟ ವಿಮಾನ ೯.೧೦ಕ್ಕೆ ಕೊಲ್ಕತ್ತ ತಲಪಿತು. ಅಲ್ಲಿಳಿದು ಬೆಂಗಳೂರಿಗೆ ವಿಮಾನ ಏರಿದೆವು.  ೧೦.೧೦ಕ್ಕೆ ಹೊರಟು ೧೫ರಂದು ೧ ಗಂಟೆಗೆ ಬೆಂಗಳೂರಲ್ಲಿ ಇಳಿಯಿತು. ಸ್ವಾತಂತ್ರ್ಯ ದಿನಾಚರಣೆಯಂದು ನಾವು ಬೆಳಗಿನ ಝಾವ ೨.೩೦ ಗಂಟೆ  ಬಸ್ಸಿನಲ್ಲಿ ಹೊರಟು ಮೈಸೂರಿಗೆ ೬.೨೫ಕ್ಕೆ ತಲಪಿದೆವು. ಅಲ್ಲಿಗೆ ನಮ್ಮ ೧೪ ದಿನದ ಪ್ರವಾಸ ಪ್ರಯಾಸವಿಲ್ಲದೆಯೇ ಸಮಾಪ್ತಿಯಾಯಿತು.  





 ಉಪಸಂಹಾರ

ಯಾತ್ರಿಗಳಿಗೆ ಸೂಚನೆ:  ಪ್ರಯಾಣ ಕಾಲದಲ್ಲಿ ಚಳಿ ಪ್ರದೇಶದಲ್ಲಿ ಟೊಪ್ಪಿ ಸ್ವೆಟರ್ ಅವಶ್ಯ ಧರಿಸಬೇಕು. ಆದಷ್ಟೂ ಗುಂಪಿನೊಂದಿಗೇ ಇರಬೇಕು. ಸಮಯಕ್ಕೆ ಸರಿಯಾಗಿ ಹೊರಡಬೇಕು.  ಸಹಯಾತ್ರಿಗಳೊಂದಿಗೆ ಹೊಂದಿಕೊಳ್ಳುವ ಗುಣ ಇರಬೇಕು. ಆಯೋಜಕರೊಡನೆ ಸಹಕರಿಸಬೇಕು. ವಿಶಾಲ ಮನವಿರಬೇಕು.

   ಆಹಾರಕ್ರಮಕ್ಕೆ ಹೊಂದಿಕೊಳ್ಳಬೇಕು. ಬೆಳಗ್ಗೆ ತಿಂಡಿಗೆ ಪರೋಟ, ಅವಲಕ್ಕಿ, ಕಾರ್ನ್ಪ್ಲೇಕ್, ಬ್ರೆಡ್ ಚಹಾ, ಕಾಫಿ. ಮಧ್ಯಾಹ್ನ ರಾತ್ರೆ ಊಟಕ್ಕೆ ಚಪಾತಿ, ಪಲ್ಯ, ಪನೀರ್ ಕರಿ, ಅನ್ನ ದಾಲ್, ಸಿಹಿ (ಪಾಯಸ, ಗುಲಾಬ್ ಜಾಮೂನ್) ಹಸಿ ತರಕಾರಿ ಸೌತೆ, ನೀರುಳ್ಳಿ, ಕ್ಯಾರೆಟ್, ಟೊಮೆಟೊ, ಮೂಲಂಗಿ. ಇಷ್ಟು ನಮಗೆ ಲಭ್ಯವಿತ್ತು.  ತಿಂಡಿ ಊಟ ಹೊಟ್ಟೆ ಬಿರುಯುವಷ್ಟು!

ಇಲ್ಲಿಗೆ ನಮ್ಮ ೧೪ ದಿನದ ಯಾತ್ರೆ ಸಂಪೂರ್ಣಗೊಂಡು ನಮ್ಮ ಮನೆಗೆ ಸುರಕ್ಷಿತವಾಗಿ ಹಿಂದಿರುಗಿದೆವು. ಎಲ್ಲೂ ರಸ್ತೆ ತಡೆ (ಗುಡ್ಡ ಜರಿತ ಇತ್ಯಾದಿ ಯಾವುದೇ ಅವಘಡ ಸಂಭವಿಸದೆ ಸುಖವಾಗಿ ಪ್ರಯಾಣ ಸಾಧ್ಯವಾಗಿತ್ತು. ನಮ್ಮ ಗುಂಪಿನ ಒಬ್ಬರಿಗೆ ಒಂದು ದಿನ ಹೊಟ್ಟೆ ಕೆಟ್ಟಿತ್ತಷ್ಟೆ. ಮಾರನೇದಿನ ಸರಿ ಹೋಗಿತ್ತು. ನಮಗೆ ತಲಾ ಒಬ್ಬರಿಗೆ ಸುಮಾರು ೫೦ ಸಾವಿರ ರೂಪಾಯಿ ಖರ್ಚು ಬಿತ್ತು. ನಾವು ಅಕ್ಕ ತಂಗಿ ನಮ್ಮ ನಮ್ಮ ಗಂಡನ ಜೊತೆ ಒಟ್ಟಿಗೆ ಸೇರಿ ಪ್ರವಾಸ ಮಾಡಿರುವುದು ನಮಗೆ ಬಹಳ ಖುಷಿ ಕೊಟ್ಟಿತು. ನಮ್ಮ ಅಕ್ಕ ಭಾವನಿಗೆ ಇದು  ಪ್ರಥಮ ಪ್ರವಾಸ. ಅವರಿಬ್ಬರೂ ಬಹಳ ಖುಷಿಪಟ್ಟರು. 

    ನಮ್ಮ ಯಾತ್ರೆಯಲ್ಲಿ ನಮ್ಮೊಂದಿಗೆ ಬಸ್ಸಿನಲ್ಲಿ ಸೂರ್ಯನಾರಾಯಣ (ಭಜರಂಗದಳದ ಪ್ರಮುಖರು), ಇವರು ನಮ್ಮ ಎಲ್ಲಾ ಅಗತ್ಯಗಳನ್ನು (ಬಸ್ ವ್ಯವಸ್ಥೆ, ಹೊಟೇಲ್ ವಾಸ್ತವ್ಯ, ನಗರ ಸುತ್ತಾಟಕ್ಕೆ ವಾಹನ ವ್ಯವಸ್ಥೆ ಇತ್ಯಾದಿ) ಬಲು ಸಮರ್ಥವಾಗಿ ನಿಭಾಯಿಸಿದ್ದರು.  ಡಾ. ವೆಂಕಟೇಶ ಮೌರ್ಯ ( ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ಹಾಗೂ ತಮಿಳುನಾಡು ಪ್ರಭಾರಿ ಬಿಜೆಪಿ ಎಸ್ ಸಿ ಮೋರ್ಚಾ) ಒಟ್ಟಾರೆ ವ್ಯವಸ್ಠೆಯನ್ನು ಬಲು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಇವರಿಗೆ ಹಾಗೂ ಸಿಂಧೂ ಯಾತ್ರಾ ಸಮಿತಿಯ ಸಕಲರಿಗೆ ನಮ್ಮ ತಂಡದ ಪರವಾಗಿ ಧನ್ಯವಾದ. ಪ್ರವಾಸ ಹೋಗಲು ತುಂಬು ಧೈರ್ಯ ತುಂಬಿದವರು ವೈದ್ಯಮಿತ್ರ ಪ್ರಹ್ಲಾದ ರಾವ್. ಅವರಿಗೂ ಧನ್ಯವಾದ.


ರುಕ್ಮಿಣಿಮಾಲಾ

ಮೈಸೂರು

ಮುಕ್ತಾಯ 

 

 

 

 

 

 

 

 

 

 

 




4 ಕಾಮೆಂಟ್‌ಗಳು: