ಬುಧವಾರ, ಸೆಪ್ಟೆಂಬರ್ 1, 2021

ಭಾರತದ ಮುಕುಟಮಣಿ ಹಿಮಾಲಯ - ಭಾಗ ೨

 ಜಮ್ಮು, ವೈಷ್ಣೋದೇವಿ, ಶ್ರೀನಗರ, ಕಾರ್ಗಿಲ್, ಲಡಾಖ್, ಲೇಹ್,  ಮನಾಲಿ, ಚಂಡೀಗಢ


ಶ್ರೀ ಖೀರ್ ಭವಾನಿ ಮಂದಿರ

ತಾರೀಕು ೫ರಂದು ಬೆಳಗ್ಗೆ ೫ಗಂಟೆಗೆದ್ದು ತಯಾರಾಗಿ ಕೆಳಗೆ ಬಂದೆವು. ಸಣ್ಣ ಸಭೆ. ಭಾರತೀಯ ಸಂವಿಧಾನದ ೩೭೦ನೇ ವಿಧಿ ರದ್ದಾಗಿ ಅಂದಿಗೆ ಸರಿಯಾಗಿ ಎರಡು ವರ್ಷ. ಅದರ ಬಗ್ಗೆ ಹಾಗೂ ಕಾರ್ಗಿಲ್ ಯುದ್ಧಕಥನದ ಬಗ್ಗೆ ನಾ. ನಾಗರಾಜರು ಕಿರು ಮಾಹಿತಿ ನೀಡಿದರು. ನಮ್ಮ ತಂಡದ ಪಟ ತೆಗೆಸಿಕೊಂಡ ಬಳಿಕ ತಿಂಡಿ ತಿಂದು ೮ ಗಂಟೆಗೆ ಬಸ್ ಹತ್ತಿದೆವು. ಮುಂದಿನ ಗುರಿ ಕಾರ್ಗಿಲ್ ಕಡೆಗೆ. ನಮ್ಮ ತಂಡದಲ್ಲಿ ನಮ್ಮ ಬಸ್ಸಿನಲ್ಲಿ ಒಟ್ಟು ೩೨ ಮಂದಿಯಲ್ಲಿ ಹತ್ತು ವರ್ಷದ ಬಾಲಕ ಚಾಣಕ್ಯ, ೭೭ ವರ್ಷದ ಅವನಜ್ಜಿ ಸುಜಾತ,  ಕೆ. ಆರ್ ನಗರದ ವೈದ್ಯರು ೮೦ ವರ್ಷದ ಮೋಹನದಾಸ್ ಭಟ್ ಉತ್ಸಾಹದಿಂದ ಭಾಗಿಯಾಗಿದ್ದರು.  ಮೋಹನದಾಸ್ ಭಟ್ ಅವರೇ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದರು.  

ನಾವು ಮೊದಲು ಖೀರ್ ಭವಾನಿ ದೇವಾಲಯಕ್ಕೆ ಭೇಟಿಕೊಟ್ಟೆವು. ಶ್ರೀನಗರದಿಂದ ೧೪ ಮೈಲಿ ದೂರದಲ್ಲಿ ತುಲ್ಮುಲ್ ಹಳ್ಳಿಯಲ್ಲಿದೆ. ಪ್ರವೇಶ ದ್ವಾರದಲ್ಲಿ ರಸ್ತೆಯಲ್ಲೇ ಬೃಹತ್ತಾಗಿ ಭತ್ತ ಒಣಗಿಸುವವುದನ್ನು ನೋಡಿದೆವು. 

ಬೃಹತ್ತಾದ ಮರಗಳಿರುವ ವಿಶಾಲವಾದ ಸ್ಥಳದಲ್ಲಿ   ಶಿವ ಭವಾನಿ ಜೊತೆಯಾಗಿರುವ ಮೂರ್ತಿ ಇಲ್ಲಿ ಕಾಣಬಹುದು. ಈ ದೇವಾಲಯದ ವಿಶೇಷವೆಂದರೆ ಇದು ಪುಟ್ಟ ಕೆರೆಯ ಮಧ್ಯೆ ಇದೆ. ಕೆರೆಗೆ ಹಾಲಿನ ಅಭಿಷೇಕ ಮಾಡಬಹುದು. ಇಲ್ಲಿ ಖೀರ್ ಪ್ರಸಾದ ಎಲ್ಲರಿಗೂ ಕೊಡುತ್ತಾರೆ. ಕೆರೆಯ ನೀರಿನ ಬಿಳಿಬಣ್ಣ ಬದಲಾದರೆ ಏನೋ ಕಂಟಕ ಎದುರಾಗಲಿದೆ ಎಂಬ ಮುನ್ಸೂಚನೆಯಂತೆ. ಈ ದೇವಾಲಯವು ಭಾರತೀಯ ಸೇನೆಯ ಸುಪರ್ದಿಯಲ್ಲಿದೆ. ಪ್ರವೇಶ ಸಮಯ: ಬೆಳಗ್ಗೆ ೬ರಿಂದ ರಾತ್ರಿ ೮ರ ತನಕ



ಪೌರಾಣಿಕ ಕಥೆ

ಶ್ರೀಲಂಕೆಯಲ್ಲಿ ರಾವಣ ದೇವಿಯ ಪ್ರತಿಮೆಯನ್ನು ಸ್ಥಾಪಿಸಿದನು. ರಾವಣನ ಕೆಟ್ಟ ಗುಣದಿಂದ ಬೇಸತ್ತ ದೇವಿ ಅಲ್ಲಿಂದ ತಲ್ಮುಲ್ ಹಳ್ಳಿಗೆ ಬಂದು ನೆಲೆನಿಂತಳು ಎಂಬುದು ಕಥೆ
ಸಿಂಧೂನಾಲೆ
ಶ್ರೀನಗರದಿಂದ ಸೋನ್ಮಾರ್ಗ್ ಗೆ ತೆರಳುವ ದಾರಿಯಲ್ಲಿ ಸಿಂಧೂ ನಾಲೆ ಕಾಣುತ್ತೇವೆ. ಸುತ್ತಲೂ ಪರ್ವತ ಪ್ರದೇಶ, ಸಿಂಧೂ ನಾಲೆಯಲ್ಲಿ ಉದ್ದಕ್ಕೂ ನೀರು ಹರಿಯುವುದನ್ನು ನೋಡುತ್ತ, ಸಾಗುವಾಗ ಅಬ್ಬ ಸೃಷ್ಟಿಯ ವೈಚಿತ್ರದ ಬಗ್ಗೆ ಬೆರಗಾಗುತ್ತೇವೆ.



ಸೋನ್ಮಾರ್ಗ್
೮೯೬೦ ಅಡಿ ಎತ್ತರದಲ್ಲಿರುವ  ಸೋನ್ಮಾರ್ಗ್ ಗಿರಿಧಾಮದಲ್ಲಿ ಪ್ರಕೃತಿ ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಂಡು ಊಟ ಮಾಡಿ ಅಲ್ಲಿಂದ ಮುಂದುವರಿದೆವು. ಇಲ್ಲಿ ಲಿಡರ್, ಸಿಂಡ್, ನೀಲಂ ನದಿಗಳು ಹರಿಯುತ್ತವೆ. ಇವನ್ನು ತ್ರೀ ಸಿಸ್ಟರ್ಸ್ ಎಂದು ಕರೆಯುತ್ತಾರೆ.


ಡ್ರಾಸ್
ಬಸ್ಸಿನಲ್ಲಿ ಸಾಗುತ್ತ, ಕಾರ್ಗಿಲ್ ಜಿಲ್ಲೆಯ ಡ್ರಾಸ್ ಪ್ರವೇಶಿಸಿದೆವು. ೧೦೮೦೦ ಅಡಿ ಎತ್ತರದಲ್ಲಿರುವ  ನಮ್ಮ ದೇಶದ ಎರಡನೇ ಅತ್ಯಂತ ಶೀತಪ್ರದೇಶವದು.ಅತ್ಯಂತ ಶೀತಲ ಉಷ್ಣಾಂಶ -೨೩ಡಿಗ್ರಿ ಸೆಲ್ಸಿಯಸ್. ರಾಷ್ರೀಯ ಹೆದ್ದಾರಿ ಸಂಖ್ಯೆ ೧.  ಮಿನಿ ಅಮರನಾಥ ಅಂತಲೂ ಕರೆಯುತ್ತಾರೆ. ಜೀರೋ ಪಾಯಿಂಟ್ ಎಂದೂ ಹೇಳುತ್ತಾರೆ.ಅಲ್ಲೀವರೆಗೂ ಜಮ್ಮು ಪ್ರಾಂತ್ಯ. ಅಲ್ಲಿಂದ ಮುಂದೆ ಲಡಾಕ್ ಪ್ರವೇಶ. ಡ್ರಾಸನ್ನು ಲಡಾಖಿನ ಹೆಬ್ಬಾಗಿಲು ಎಂದು ಹೇಳುತ್ತಾರೆ. ೧೯೯೯ರಿಂದ ಕಾರ್ಗಿಲ್ ಯುದ್ಢದ ಬಳಿಕ ಪ್ರವಾಸೀತಾಣವಾನ್ನಾಗಿ ಅಭಿವೃದ್ಧಿಗೊಳಿಸಲಾಯಿತು.

ಅಲ್ಲಿ ಮಂಜುಗಡ್ಡೆಯ ಪದರವೇ ಇತ್ತು. ಅಮರನಾಥದಿಂದ ಹಿಮ ಕರಗಿ ಹರಿಯುವ ಪ್ರದೇಶವದು. ಅಲ್ಲಿ ಹಿಮದ ಬಳಿ ತೆರಳಿ ತುಸು ಹೊತ್ತು ಕಳೆದೆವು. ಹಿಮದಲ್ಲಿ ನಡೆದೆವು. ಅಲ್ಲಿ ಹಿಮದಲ್ಲಿ ಸ್ಕೀಯಿಂಗ್, ಬೈಕಿಂಗ್ ಎಲ್ಲ ಸಾಹಸ ಮಾಡಲು ಅವಕಾಶವಿತ್ತು. ಸ್ಕೀಯಿಂಗ್ ಕೇವಲ ರೂ. ೩೦೦, ಬೈಕಿಂಗ್ ರೂ೧೦೦೦ ಬನ್ನಿ ಎಂದು ಗೋಗರೆಯುತ್ತಲಿದ್ದರು.


ನಾವು ಅಲ್ಲಿ ಕಾಫಿ ಕುಡಿದು ಮುಂದುವರಿದೆವು.

ಕಾರ್ಗಿಲ್  ಯುದ್ಧಸ್ಮಾರಕ

    ದೂರದಿಂದಲೇ ಎತ್ತರದಲ್ಲಿ ಹಾರಾಡುವ ಭಾರತದ ಧ್ವಜವೊಂದು ಕಾಣುತ್ತಲಿತ್ತು.  ಹತ್ತಿರ ಬಂದಾಗ ಅದೇ ಕಾರ್ಗಿಲ್ ಯುದ್ಧ ಸ್ಮಾರಕ ಪ್ರದೇಶ ಎಂದು ತಿಳಿಯಿತು. ಅಲ್ಲಿ ಬಸ್ಸಿಳಿದೆವು. ಚಲಿ ಸುಮಾರಾಗಿ ಇತ್ತು. ಒಳಪ್ರವೇಶಿಸಿದೆವು.  ೨ ತಿಂಗಳು ಕಾರ್ಗಿಲ್ ಯುದ್ಧ ನಡೆಯಿತು. ೨೭ ಮಂದಿ ಬಲಿದಾನವಾದ ಸ್ಥಳದಲ್ಲಿ ನಾವು ಕಾಲಿಟ್ಟೆವು. , ನಮ್ಮ ಸೈನಿಕರು ಹೋರಾಡಿ ಶತ್ರುಗಳನ್ನು ಸದೆಬಡಿದರು ಎಂದು ತಿಳಿದು ಮೈ ಎಲ್ಲ ರೋಮಾಂಚನಗೊಂಡಿತು.ಬಲಿದಾನಗೈದವರೆಲ್ಲರ ಪುತ್ಥಳಿಗಳನ್ನು ಅಲ್ಲಿ ಸ್ಥಾಪನೆ ಮಾಡಿದ್ದು ನೋಡಿದಾಗ ಮನ ಮೂಕವಾಯಿತು. ಹದಿಹರೆಯದ ತರುಣರು ಇವರೆಲ್ಲರ ಸಾವುನೋವುಗಳಿಂದ ನಮ್ಮ ನೆಲ ನಮಗೇ ಉಳಿಯಿತು. ಹಾಗಾಗಿ ಇಲ್ಲಿ ಕಾಲೂರಲು ಸಾಧ್ಯವಾಯಿತು, ನಾವು ನಮ್ಮೂರಲ್ಲಿ ಎಷ್ಟು ಸುಖವಾಗಿದ್ದೇವೆ ಎಂದು ತಿಳಿಯಿತು. ನಮ್ಮ ನೆಲವನ್ನು ಆಕ್ರಮಿಸಲು ಬಂದವರನ್ನು ಸದೆಬಡಿಯುತ್ತ, ಉರಿಬಿಸಿಲು, ಚಳಿಯಲ್ಲೂ ಸದಾ ಕಾವಲು ಕಾಯುತ್ತ ಕಟ್ಟೆಚ್ಚರವಾಗಿರುವ ಸೈನಿಕರನ್ನು ನೋಡುವಾಗ ಹೃದಯ ಭಾರವಾಗುವುದರ ಜೊತೆಗೆ ಅವರ ಬಗ್ಗೆ ಹೆಮ್ಮೆ ಉಕ್ಕುತ್ತದೆ. ಮೈ ನಡುಗುವ ಚಳಿ ಹಿಮದಲ್ಲೂ ಅವರು ಗೈಯುವ ದೇಶಸೇವೆ ಅನುಪಮವಾದುದು. ಎಲ್ಲಾ ನೋಡಿ ಹೊರಬರುವಾಗ ನಮ್ಮ ಮನ ನಮ್ಮ ಸೈನಿಕರ ಅನುಪಮ ಸೇವೆಯ ಬಗ್ಗೆಯೇ ಗಿರಕಿ ಹೊಡೆಯುತ್ತಲಿತ್ತು.  ಅಲ್ಲಿಯ ನೆನಪಿಗಾಗಿ  ಟೊಪ್ಪಿ ಕೊಂಡೆವು.
ಅಲ್ಲಿ ಮ್ಯೂಸಿಯಂ ಇದೆ. ಆದರೆ ಸಮಯದಲ್ಲಿ ಪ್ರವೇಶವಿರಲಿಲ್ಲ.





೧೯೯೮-೧೯೯೯ರ ಚಳಿಗಾಲದಲ್ಲಿ ಪಾಕಿಸ್ತಾನ ಸೇನೆ ನಿಯಂತ್ರಣ ರೇಖೆ ದಾಟಿ ಭಾರತದ ನೆಲಕ್ಕೆ ದಾಳಿಯಿಟ್ಟಿತು. ಈ ಪ್ರದೇಶವನ್ನು ಮರಳಿ ಪಡೆಯಲು ಬಾರತೀಯ ಸೇನೆ ಮೇ ೧೯೯೯ರಲ್ಲಿ ಅಪರೇಷನ್ ವಿಜಯ ಆರಂಭಿಸಿತು. ೨ ತಿಂಗಳು ನಡೆದ ಭೀಕರ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿತು. ಭಾರತೀಯ ಸೇನೆ ೨೦೦೦ದಲ್ಲಿ ಈ ಸ್ಮಾರಕವನ್ನು ನಿರ್ಮಿಸಿ ಮಡಿದ ಸೈನಿಕರಿಗೆ ಗೌರವ ಅರ್ಪಿಸಿತು. ೨೦೧೨ ಜುಲೈ ೨೬ರಂದು ಬೃಹತ್ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.  ಈ ತಾಣ ಪ್ರವಾಸೀ ಆಕರ್ಷಣೆಯ ತಾಣವಾಗಿ ಅಭಿವೃದ್ಧಿಹೊಂದಿತು.

ಆ ದಿನ ಲಡಾಕಿನ ಕಾರ್ಗಿಲ್ ನಲ್ಲಿ ಸಿಯಾಚಿನ್ ಹೊಟೇಲಿಗೆ ರಾತ್ರಿ ೯.೩೦ಕ್ಕೆ ತಲಪಿ ಅಲ್ಲಿ ವಾಸ್ತವ್ಯ. ಸುಮಾರು ೨೦೨ ಕಿಮೀಪಯಣ ಮಾಡಿದೆವು. ಒಂದು ರಾತ್ರೆ ಮಾತ್ರ ಅಲ್ಲಿ ತಂಗಲಿರುವುದರಿಂದ ನಮ್ಮ ದೊಡ್ಡ ಲಗೇಜು ಬಸ್ಸಲ್ಲೇ ಬಿಟ್ಟೆವು. ಅವಶ್ಯ ಬಟ್ಟೆ ಮಾತ್ರ ಕೈಚೀಲದಲ್ಲಿ ಹಾಕಿಕೊಂಡಿದ್ದೆವು. ಅಲ್ಲಿ ಆದಿನ ಭರ್ಜರಿ ಊಟವಿತ್ತು. ಹೊಟೇಲ್ ಸಿಬ್ಬಂದಿ ಬಹುವಾಗಿ ಉಪಚರಿಸಿದರು.    .

ಲೇಹ್ ಕಡೆಗೆ ಬಸ್ ಯಾನ

ತಾರೀಕು ೬ರಂದು ಬೆಳಗ್ಗೆ ಕಾರ್ಗಿಲನಿಂದ ಲೇಹ್ ಕಡೆಗೆ ಬಸ್ ಪಯಣ. ರಸ್ತೆದಾರಿಯಲ್ಲಿ ಈ ದಾರಿಯಲ್ಲಿ ಒಮ್ಮೆಯಾದರೂ ಪಯಣಿಸಿ ಸೃಷ್ಟಿ ಸೌಂದರ್ಯವನ್ನು ನೋಡಬೇಕು. ಎಲ್ಲಿ ನೋಡಿದರೂ ಬರೀ ಪರ್ವತಗಳೇ. ಒಮ್ಮೆ ಬೃಹತ್ ಬಂಡೆಗಳನ್ನು ಕಂಡರೆ ಮುಂದೆ ಬರೀ ಮರಳು ದಿಬ್ಬಗಳು,, ಕಲ್ಲಿನ ರಚನೆಗಳ ವೈವಿಧ್ಯವನ್ನು ಕಾಣಬಹುದು.

ಬಂಡೆಮೇಲೆ ಬುದ್ದ  ವಿಗ್ರಹ

ಮುಲ್ಬೆಕ್ Chumba mulbekh ) ಎಂಬಲ್ಲಿ ದೊಡ್ಡ ಬಂಡೆಯಲ್ಲಿ ಬುದ್ದ ವಿಗ್ರಹ ಕೆತ್ತನೆ ನೋಡಿದೆವು.
ಸಿಂಧೂನದಿ ಜಂಸ್ಕರ್ ನದಿ ಸಂಗಮ ಸ್ಥಳ
ಬಸ್ಸಿನಲ್ಲಿ ಲಡಾಖಿನಿಂದ ಲೇಹ್ ಕಡೆಗೆ ಸಾಗುವಾಗ ಒಂದು ಕಡೆ ಜಂಸ್ಕರ್ ನದಿ ಮತ್ತು ಸಿಂಧು ನದಿ ಸಂಗಮಗೊಳ್ಳುವ ಸ್ಥಳ ಸಿಗುತ್ತದೆ. ಅಲ್ಲಿ ಬಸ್ ನಿಲ್ಲಿಸಿ, ಇಳಿದು ಮೇಲಿಂದಲೇ ಎರಡೂ ನದಿ ಸೇರುವ ಸುಂದರ ದೃಶ್ಯ ನೋಡಿದೆವು.

ಮೂನ್ ಲ್ಯಾಂಡ್
ಲಾಮಾಯೂರ್ (lamayur) ಎಂಬಲ್ಲಿ ಮೂನ್ ಲ್ಯಾಂಡ್ ಹೊಟೇಲಿನಲ್ಲಿ ನಮಗೆ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ನಿಜಕ್ಕೂ ಆ ಜಾಗ ಚಂದ್ರನ ನಾಡೇ ಸರಿ.  ರಾಷ್ಟ್ರೀಯ ಹೆದ್ದಾರಿ ಒಂದರಲ್ಲಿ ಸುತ್ತಲೂ ಬೆಟ್ಟಗಳಲ್ಲಿ ಚಿತ್ರವಿಚಿತ್ರ ಕೊರೆತಗಳು. ಪ್ರಕೃತಿ ಅದೆಷ್ಟು ಚಂದವಾಗಿ ಕಲ್ಲನ್ನು ಕೊರೆದಿದೆ ಅಂದರೆ ಚಂದ್ರನಲ್ಲಿ ಕುಳಿಗಳಿರುತ್ತವಲ್ಲ ಹಾಗೆ! ಬೇಗ ಬೇಗ ಊಟ ಮಾಡಿ ಒಂದಷ್ಟು ದೂರ ರಸ್ತೆಯಲ್ಲಿ ಸಾಗಿ ಪ್ರಕೃತಿಯ ಈ ವಿಸ್ಮಯವನ್ನು ಕಣ್ಣಲ್ಲಿ ಕ್ಯಾಮಾರದಲ್ಲಿ ತುಂಬಿಕೊಂಡು ಧನ್ಯಳಾದೆ!  ಒಂದು ಕಡೆ ಬೆಟ್ಟ ರಾವಣನ ತಲೆಯಂತೆ ಕಾಣುತ್ತಲಿತ್ತು! ನೋಡಿದಷ್ಟೂ ವಿಸ್ಮಯಗಳು.  


   ಅಲ್ಲಿ ನರೇಂದ್ರ   ಮೋದಿಯವರ ಆಪ್ತ ಸ್ನೇಹಿತರು  ಗೌತಮ ಜೀ ಅವರ ಭೇಟಿ ಆಯಿತು.  ಮೋದಿಯವರು ಗಡ್ಡ ಬೆಳೆಸಿದ್ದು ಯಾಕಂತೆ ಎಂಬ ಪ್ರಶ್ನೆಅವರಲ್ಲಿ ಕೇಳಿದೆ! ಅವರು ನಗುತ್ತ, ಗೊತ್ತಿಲ್ಲ ಎಂದುತ್ತರಿಸಿದರು. ಬಹುಶಃ ಗಡ್ಡ ಕೆರೆಯಲೂ ಪುರುಸೊತ್ತಿಲ್ಲ ಅವರಿಗೆ ಎಂದು ಯಾರೋ ಉತ್ತರ ಕೊಟ್ಟರು. 



ಸಿಂಧೂನದಿ- ಜಂಸ್ಕರ್ ನದಿ ಸಂಗಮ ಸ್ಥಳ

ಬಸ್ಸಿನಲ್ಲಿ ಲಡಾಖಿನಿಂದ ಲೇಹ್ ಕಡೆಗೆ ಸಾಗುವಾಗ ಒಂದು ಕಡೆ ಜಂಸ್ಕರ್ ನದಿ ಮತ್ತು ಸಿಂಧು ನದಿ ಸಂಗಮಗೊಳ್ಳುವ ಸ್ಥಳ ಸಿಗುತ್ತದೆ. ಅಲ್ಲಿ ಬಸ್ ನಿಲ್ಲಿಸಿ ಮೇಲಿಂದಲೇ ಎರಡೂ ನದಿ ಸೇರುವ ಸುಂದರ ದೃಶ್ಯ ನೋಡಿದೆವು.

ಲಡಾಕ್ ನೆಲ ಉಳಿಸಿದ ಧೀರ ಕರ್ನಲ್ ಠಾಕೂರ್ ಕುಶಲ್ ಚಂದ್

ಪಾಕಿಸ್ತಾನದ ಸೇನೆ ಲಡಾಕ್ ಪ್ರಾಂತ್ಯದಲ್ಲಿ ೧೯೪೭ರಲ್ಲಿ ಆಕ್ರಮಣಕ್ಕೆ ಮುಂದಾದಾಗ ಕುಶಲ್ ಚಂದ್ ಬೊಬ್ಬಿರಿಯುತ್ತ ಮುನ್ನುಗ್ಗಿ, ಹೆಚ್ಚು ಸೇನಾ ಸೈನ್ಯ ಇಲ್ಲದಿದ್ದರೂ ತುಂಬ ಮಂದಿ ಇದ್ದೇವೆ ಎಂಬ ಭ್ರಮೆ ಪಾಕಿಸ್ತಾನಿಗಳಿಗೆ ಬರುವಂತೆ ಮಾಡಿ, ಮರದ ಸೇತುವೆಗೆ ಬೆಂಕಿ ಹಚ್ಚಿ ಪಾಕಿಸ್ತಾನ ಸೇನೆ ಹಿಮ್ಮೆಟ್ಟುವಂತೆ ಮಾಡುವಲ್ಲಿ ಮುಖ್ಯ  ಪಾತ್ರವಹಿಸಿದ ಧೀರ. ಅವರ ನೆನಪಿಗಾಗಿ ಅಲ್ಲಿ ಸ್ಮಾರಕವಿದೆ. ಅವರು ಕರ್ತವ್ಯದಲ್ಲಿದ್ದಾಗ ವಿಮಾನ ಅಪಘಾತದಲ್ಲಿ ಮರಣಹೊಂದಿದರು. ಅವರಿಗೊಂದು ಸೆಲ್ಯೂಟ್ ಸಲ್ಲಿಸಿ ಮುಂದುವರಿದೆವು.




ಮ್ಯಾಗ್ನೆಟಿಕ್ ಹಿಲ್ ಅಯಸ್ಕಾಂತದ ಬೆಟ್ಟ

ದಾರಿಯಲ್ಲಿ ಸಿಗುವ ಮ್ಯಾಗ್ನೆಟಿಕ್ ಹಿಲ್ ಬಳಿ ಬಸ್ ಇಳಿದೆವು. ಒಂದು ಸ್ಥಳದಲ್ಲಿ ಗಾಡಿ ನಿಲ್ಲಿಸಿದರೆ ಹಿಂದಕ್ಕೆ ಎಳೆಯುತ್ತದೆ ಎಂದು ಹೇಳುತ್ತಾರೆ. ಗಾಡಿ ನ್ಯೂಟ್ರಲಿನಟ್ಟರೆ ಹಿಂದಕ್ಕೆ ಇಳಿಜಾರು ಇದ್ದರೆ ಸಹಜವಾಗಿಯೇ ಹಿಮ್ಮುಖ ಚಲಿಸುತ್ತದೆ! ಅದೇನೂ ವಿಸ್ಮಯವೆನಿಸಲಿಲ್ಲ.

ಗುರುದ್ವಾರ ಪಠಾರ್ ಸಾಹಿಬ್ ( ನಾನಕ್ ಗುರುದ್ವಾರ)

ಗುರುನಾನಕ್ ಸ್ಮರಣಾರ್ಥವಾಗಿ ಲೇಹ್ ನಿಂದ ೨೫ಕಿಮೀ ದೂರದಲ್ಲಿ ಲೇಹ್ ಕಾರ್ಗಿಲ್ ರಸ್ತೆಯ ಬಳಿ ಸಮುದ್ರಮಟ್ಟದಿಂದ  ೧೨೦೦೦ ಅಡಿ ಎತ್ತರದಲ್ಲಿ ಈ   ಗುರುದ್ವಾರ ೧೫೧೭ರಲ್ಲಿನಿರ್ಮಿಸಲಾಗಿದೆ.

ದಂತಕಥೆ :  ರಾಕ್ಷಸನೊಬ್ಬ ಅಲ್ಲಿ ವಾಸವಾಗಿದ್ದನು. ಸ್ಥಳೀಯರಿಗೆ ಬಹಳ ತೊಂದರೆ ಕೊಡುತ್ತಿದ್ದನು. ಜನ ನಾನಕರ ಬಳಿ ಕಷ್ಟ ಹೇಳಿಕೊಂಡರು. ನಾನಕರು ಜನರ ಸಹಾಯಕ್ಕೆ ಬಂದರು. ನಾನಕರನ್ನು ಕೊಲ್ಲಲು ರಾಕ್ಷಸ ಬೆಟ್ಟದ ಮೇಲಿನಿಂದ ಒಂದು ಬಂಡೆಗಲ್ಲನ್ನು ತಳ್ಳಿ ನಾನಕರನ್ನು ಕೊಲ್ಲಲು ಹವಣಿಸುತ್ತಾನೆ. ಆದರೆ ಬಂಡೆ ನಾನಕರನ್ನು  ಸ್ಪರ್ಶಿಸಿದಾಗ ಮೃದು ಮೇಣದಂತಾಗಿ ಅವರ ಬೆನ್ನಿಗೆ ವರಗಿ ನಿಂತಿತು. ಅದನ್ನು ನೋಡಿದ ರಾಕ್ಷಸ ಕೋಪಗೊಂಡು  ಬಂಡೆಗೆ ಒದ್ದನು. ಬಂಡೆ ಮೇಣದಂತಿದ್ದುದರಿಂದ ಅವನ ಪಾದ ಅದರಲ್ಲಿ ಹುದುಗಿತು. ಅವನು ನಾನಕರ ಶಕ್ತಿ ಕಂಡು ಅವರ ಕ್ಷಮೆ ಯಾಚಿಸಿದನು. ಈಗಲೂ ಆ ಬಂಡೆಯನ್ನು ಅಲ್ಲಿ ನೋಡಬಹುದು.  ಗುರುದ್ವಾರದ ಒಳಗೆ ಬಂಡೆಗಲ್ಲು ಇದೆ.
 



ಲೇಹ್
ಸಂಜೆ .೩೦ಗಂಟೆಗೆ ನಾವು ಲೇಹ್ ತಲಪಿ ಹೊಟೇಲ್ ಏಷಿಯಾದಲ್ಲಿ ವಾಸ್ತವ್ಯ. ಕಾರ್ಗಿಲ್ ನಿಂದ ಲೇಹ್ ಗೆ ಸುಮಾರು ೨೧೭ಕಿಮೀ ಪಯಣ. ಬರುವ ದಾರಿಯಲ್ಲಿ ಒಂದು ಬೆಟ್ಟ ಹತ್ತಿದರೆ ಮುಂದೆ ಇನ್ನೊಂದು ಬೆಟ್ಟ ಇಳಿಯುವುದು. ಸಪೂರದ ರಸ್ತೆ, ಕೆಳಗೆ ಪ್ರಪಾತ, ನದಿ ಹರಿಯುತ್ತಿರುತ್ತದೆ. ಬರೀ ಬೋಳು ಬೆಟ್ಟಗಳು, ಬೃಹದಾಕಾರದ ಕಲ್ಲು ಬಂಡೆಗಳು ಅದರದ್ದೇ ಆದ ಸೌಂದರ್ಯ. ನೋಡಿದಷ್ಟೂ ಕಣ್ಣು ದಣಿಯದು. ಕಲ್ಲುಗಳ ಆಕಾರ, ಬಣ್ಣಗಳಲ್ಲಿ ವೈವಿಧ್ಯ. ಇದೇ ಪ್ರಕೃತಿಯ ಸೋಜಿಗ. ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆಲ್ಲ ರಸ್ತೆ ಪ್ರಯಾಣ ಮಾಡಬೇಕು.  ಕೆಳಗಿನ ವೀಡಿಯೋ ನೋಡಿ. 




5 ಕಾಮೆಂಟ್‌ಗಳು:

  1. ಬರೀ ಪಟಗಳನ್ನು ನೋಡಿದೆ, ನಂತರ ಓದುತ್ತೇನೆ. ಪಟಗಳು ತುಂಬಾ ಲಾಯಕಿದ್ದು. ಅದೇ ಅರ್ದ ಕತೆ ಹೇಳುತ್ತದೆ!!

    ಪ್ರತ್ಯುತ್ತರಅಳಿಸಿ
  2. ಆನು, ಓದುದು ಮಾತ್ರ. ಎನಗೆ ತಿರುಗಾಸು ರಸ್ತೆ ಆಗಲೇ ಆಗ.

    ಪ್ರತ್ಯುತ್ತರಅಳಿಸಿ