ಸೋಮವಾರ, ಮೇ 23, 2022

ಭಾರತ ದರ್ಶನ (ಪುರಿ, ಕೊನಾರ್ಕ್,ಕೊಲ್ಕತ್ತ, ಗಯಾ, ವಾರಣಾಸಿ, ಅಯೋಧ್ಯಾ, ಪ್ರಯಾಗರಾಜ್) ಭಾಗ ೨

 ವಾರಾಣಾಸಿ

 ತಾರೀಕು ೧.೪.೨೦೨೨ರಂದು ಬೆಳಗಿನ ಝಾವ ೨.೧೫ಕ್ಕೆ ವಾರಾಣಾಸಿ ರೈಲು ನಿಲ್ದಾಣ ತಲಪಿ, ಅಲ್ಲಿಂದ ಬಸ್ ಹತ್ತಿ ನಾಗಸಾಧು ಆಶ್ರಮ ತಲಪಿದಾಗ ೩.೩೦ ಗಂಟೆ. ಅಲ್ಲಿ ನಮಗೆ ಅನುಕೂಲಕರವಾದ ಕೋಣೆ ದೊರೆತಿತ್ತು. ಕೋಣೆಯೊಳಗೇ ಬಚ್ಚಲು ಪಾಯಿಖಾನೆ, ಬಿಸಿನೀರಿನ ಸೌಲಭ್ಯ ಕೂಡ ಇತ್ತು. ಎಲ್ಲರೂ ಖುಷಿಯಿಂದ ಸ್ನಾನ ಮಾಡಿ ೫.೩೦ಗೆ ಹೊರಟು ತಯಾರಾದೆವು.

  ಕಾಶಿ ವಿಶ್ವಣಾಥ ದೇಗುಲ

ರಿಕ್ಷಾದಲ್ಲಿ ಕಾಶಿ ವಿಶ್ವನಾಥನ ಸನ್ನಿಧಾನಕ್ಕೆ ಹೋದೆವು. ಅಲ್ಲಿ ಹೊರಗೆ ದೇವಾಲಯದ ವತಿಯಿಂದಲೇ ಉಚಿತವಾಗಿ ನಮ್ಮ ಮೊಬೈಲ್ ಇಡಲು ಲಾಕರ್ ವ್ಯವಸ್ಥೆ ಇತ್ತು. ರಿಕ್ಷಾದವರು ಕೆಲವು ಅಂಗಡಿಗಳ ಮುಂದೆ ನಿಲ್ಲಿಸಿ ಇಲ್ಲಿ ಲಾಕರ್ ಇದೆ, ಎಂದು ನಮ್ಮನ್ನು ಯಾಮಾರಿಸಲು ನೋಡುತ್ತಾರೆ. 

 ವಿಶ್ವನಾಥ ದೇಗುಲಕ್ಕೆ ಬೃಹತ್ ಆವರಣ ಗೋಡೆ (ಕಾರಿಡಾರ್) ಇತ್ತೀಚೆಗೆ ಭವ್ಯವಾಗಿ ಕಟ್ಟಿದ್ದಾರೆ. ಅದರ ಸೊಬಗನ್ನು ನೋಡಿದೆವು. ಹೇಗೆ ಒಳಗೆ ಹೋಗಬೇಕೆಂಬ ಬಗ್ಗೆ ಅಲ್ಲಿಯ ಪೊಲೀಸ್ ಅವರ ನೆರವು ಕೇಳಿದೆವು.

 ನಾವು ಒಂದು ಗೇಟಿನಲ್ಲಿ ದೇವಾಲಯದೊಳಗೆ ಹೋದೆವು. ಒಳಗೆ ಹೋಗಲು ತಪಾಸಣೆ ಜೋರಾಗಿದೆ. ಮೊಬೈಲ್ ಕೊಂಡೋಗುವಂತಿಲ್ಲ. ಸರತಿ ಸಾಲಿನಲ್ಲಿ ನಿಂತು ಸಾಗಿದೆವು. ಕೇವಲ ಅರ್ಧ ಗಂಟೆಯೊಳಗೆ ನಮಗೆ ವಿಶ್ವನಾಥನ ದರ್ಶನವಾಯಿತು. ಬಹಳ ಅಚ್ಚುಕಟ್ಟಾದ ವ್ಯವಸ್ಥೆ. ಮೂರು ಕಡೆಯಿಂದ ಸರತಿ ಸಾಲು. ಹಾಗಾಗಿ ನೂಕುನುಗ್ಗಲು ಇಲ್ಲವೇ ಇಲ್ಲ. ದೇವಾಲಯದ ಪರಿಸರ ಬಹಳ ಚೊಕ್ಕವಾಗಿದೆ.

 ವಿಶ್ವನಾಥನ ದೇಗುಲ ಗಂಗಾನದಿಯ ಪಶ್ಚಿಮ ದಡದಲ್ಲಿದೆ. ಈ ದೇಗುಲ ಅನೇಕ ಸಲ  ದುಷ್ಟರಿಂದ ಹಾನಿಗೊಳಗಾಗಿತ್ತು. ಈಗಿರುವ ದೇಗುಲವನ್ನು ೧೭೮೦ರಲ್ಲಿ ಇಂದೋರಿನ ರಾಣಿ ಅಹಲ್ಯಬಾಯಿ ಹೋಳ್ಕರ್ ಅವರ ನೇತೃತ್ತ್ವದಲ್ಲಿ ಅಸ್ತಿತ್ತ್ವಕ್ಕೆ ಬಂದಿತು. ೧೯೮೩ರಿಂದ ಈ ದೇವಾಲಯವನ್ನು ಉತ್ತರಪ್ರದೇಶ ಸರಕಾರ ನಿರ್ವಹಿಸುತ್ತ ಬರುತ್ತಿದೆ.

   ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ ೨೦೧೯ರಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಬಗ್ಗೆ ಕಾರ್ಯಪ್ರವೃತ್ತರಾಗಿ ಸುಮಾರು ೧೪೦೦ ನಿವಾಸಿಗಳನ್ನು ಮತ್ತು ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಅವರಿಗೆ ಯುಕ್ತ ಪರಿಹಾರವನ್ನೂ ನೀಡಲಾಯಿತು. ದೇಗುಲ ನವೀಕರಣದ ಸಮಯದಲ್ಲಿ ಗಂಗೇಶ್ವರ ಮಹಾದೇವ, ಮನೋಕಾಮೇಶ್ವರ ಮಹಾದೇವ, ಶ್ರೀ ವಿನಾಯಕ, ಶ್ರೀ ಕುಂಭ ಮಹಾದೇವ ದೇವಸ್ಥಾನ ಸೇರಿದಂತೆ ಪಾಳುಬಿದ್ದ ಶತಮಾನಗಳಷ್ಟು ಹಳೆಯ ಸುಮಾರು ೪೦ ಕ್ಕೂ ಹೆಚ್ಚು ದೇಗುಲಗಳನ್ನು ಪುನರ್ನಿರ್ಮಿಸಲಾಯಿತು.  ೧೩ ದಶಂಬರ ೨೦೨೧ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವನಾಥ ದೇಗುಲದ ಕಾರಿಡಾರನ್ನು ಉದ್ಘಾಟಿಸಿದರು. ಈ ಕಾರಿಡಾರನ್ನು ವಿಶ್ವನಾಥ ದೇಗುಲ ಮತ್ತು ಮಣಿಕರ್ಣಿಕಾ ಘಾಟ್ ನಡುವೆ ಗಂಗಾನದಿಯ ಉದ್ದಕ್ಕೂ ನಿರ್ಮಿಸಲಾಗಿದೆ. 

  ಅನ್ನಪೂರ್ಣ ದೇವಿ ಮಂದಿರ

 ವಿಶ್ವನಾಥ  ದೇಗುಲದ ಒಂದು ಪಾರ್ಶ್ವದಲ್ಲೇ ಇರುವ ಅನ್ನಪೂರ್ಣ ದೇವಿ ಮಂದಿರಕ್ಕೆ ಹೋದೆವು. ದೇವಾಲಯದಲ್ಲಿ ಒಂದು ಸುತ್ತು ಬರುತ್ತಿರಬೆಕಾದರೆ ಅಲ್ಲಿದ್ದ ಪಂಡಿತರೊಬ್ಬರು ಕರೆದು ದುಡ್ಡೇನೂ ಕೇಳದೆಯೇ ಕೈಗೆ ಒಂದು ಕೆಂಪು ಅರಿಶಿನ ದಾರ ಕಟ್ಟಿ ತಲೆಮೇಲೆ ಆಶೀರ್ವದಿಸಿ ಕಳುಹಿಸಿದರು.

 ಅನ್ನಪೂರ್ಣ ದೇಗುಲವನ್ನು ೧೮ನೇ ಶತಮಾನದಲ್ಲಿ ಮಾರಾಠ ಪೇಶ್ವೆ ಬಾಜಿರಾವ್ ನಿರ್ಮಿಸಿದನು ಎಂಬ ಉಲ್ಲೇಖವಿದೆ.     ನಮಗೆ ದೇವಾಲಯ ಸುತ್ತ ಕೂಲಂಕುಷವಾಗಿ ಎಲ್ಲಾ ನೋಡಲು ಸಾಧ್ಯವಾಗಲಿಲ್ಲ. ಅಹಲ್ಯಾಬಾಯಿ ಹೋಳ್ಕರ್ ಪ್ರತಿಮೆಯನ್ನೂ ನೋಡಲಾಗಲಿಲ್ಲ.

    ಅಸ್ಥಿ ವಿಸರ್ಜನೆ

ನಮ್ಮ ಭಾವ ಅವರ ಮಾತಾಪಿತೃಗಳ ಅಸ್ಥಿಯನ್ನು ಗಂಗೆಯಲ್ಲಿ ವಿಲೀನಗೊಳಿಸಲು ತಂದಿದ್ದರು. ಅದನ್ನು ವಿಸರ್ಜಿಸಲು ಕೇದಾರ್ ಘಾಟಿನಲ್ಲಿ ವ್ಯವಸ್ಥೆಮಾಡಲು ಹೇರಂಬ ಭಟ್ಟರ ಜೊತೆ ಮಾತಾಡಿ ನಿಗದಿಗೊಳಿಸಿದ್ದರು. ಗಲ್ಲಿ ಗಲ್ಲಿ ಸುತ್ತಿ ಅಂತೂ ಅವರ ಮನೆ ಪತ್ತೆ ಮಾಡಿದೆವು. (ಕಾಶೀ ಸಂಕೇತ ಭವನ, ಬಿ. ೧೪/೧೬, ಮಾನಸ ಸರೋವರ್, ಕೇದಾರ್ ಘಾಟ್ ಅಂಚೆಕಚೇರಿ ಪಕ್ಕ, ವಾರಣಾಸಿ ೨೨೧೦೦೧, ದೂರವಾಣಿ: ೦೫೪೨೨೪೫೫೦೭೬, ೦೯೬೧೬೭೪೬೨೮೭, ೦೮೫೭೬೦೩೦೩೧೪)  ಅಕ್ಕಭಾವ ಅಸ್ಥಿ ವಿಸರ್ಜನೆಯ ವಿಧಿ ವಿಧಾನಗಳಿಗೆ ಕೇದಾರ್ ಘಾಟಿನಲ್ಲಿ ಕುಳಿತರು. ಹೇರಂಬ ಭಟ್ಟರು ನಮ್ಮನ್ನು ನೋಡಿ, ನೀವು ಅಸ್ಥಿ ತಂದವರ ಜೊತೆ ಇದ್ದಿರಿ. ಪವಿತ್ರವಾಗಲು ಗಂಗಾನದಿಯಲ್ಲಿ ಮುಳುಗು ಹಾಕಿ ಏಳಿ ಎಂದರು.

 ನಾವಿನ್ನು ಅಲ್ಲೆ ಇದ್ದರೆ ನಮ್ಮನ್ನು ಗಂಗಾನದಿಯಲ್ಲಿ ಮುಳುಗಿಸಿಯಾರೆಂದು ನಾವು ಅಲ್ಲಿಂದ ಹೊರಟು ನಾಗಸಾಧು ಆಶ್ರಮಕ್ಕೆ ಹೋದೆವು.

ಒಂದು ಆಟೋ ಹತ್ತಿ ನಾಗಸಾಧು ಆಶ್ರಮಕ್ಕೆ ಬಿಡಲು ಹೇಳಿದೆವು. ಅವನು ಯಾವುದೋ ಗಲ್ಲಿ ಬಳಿ ಇಳಿಸಿ, ಇಲ್ಲೇ ಮುಂದೆ ಹೋಗಿ ಸಿಗುತ್ತದೆ ಎಂದು ಮಾಯವಾದ. ವಿಳಾಸ ಹೇಳಲು ನಮ್ಮಲ್ಲಿ ಪುಣ್ಯಕ್ಕೆ ಒಂದು ಕಾರ್ಡ್  ಇತ್ತು. (ನಾವು ಹೊರಡುವ ಮೊದಲು ಒಬ್ಬ ಸೀರೆ ಅಂಗಡಿಯವ ಅವನ ಕಾರ್ಡ್ ಕೊಟ್ಟಿದ್ದ. ಹಾಗಾಗಿ ನಾವು ಬಚಾವ್) ಗಲ್ಲಿ ಗಲ್ಲಿ ಸುತ್ತಿ ವಿಳಾಸ ಕೇಳುತ್ತ ನಾವು ಆಶ್ರಮ ತಲಪುವಲ್ಲಿ ಯಶಸ್ವಿ ಆದೆವು.

  ತಿಂಡಿ (ಪೊಂಗಲ್, ಸಾಂಬಾರ್, ವಡೆ, ಶ್ಯಾವಿಗೆ ಕೇಸರಿಭಾತ್)ತಿಂದು ಕೂತೆವು. ಅಕ್ಕ ಭಾವ ಬರಲು ಇನ್ನೂ ಸಮಯವಿತ್ತು. ಕೋಣೆಯಲ್ಲಿ ಸುಮ್ಮನೆ ಕೂರುವುದುಂಟೆ?

   ಕಾಶಿ ಗಲ್ಲಿಯಲ್ಲಿ ಸುತ್ತಾಟ.

  ತಂಗಿಯೂ ನಾನೂ ಹೊರಗೆ ಗಲ್ಲಿ ಸುತ್ತಲು ಹೊರಟೆವು. ಹಾಗೆ ಒಂದು ಗಲ್ಲಿಯಲ್ಲಿ ಹೋಗುತ್ತಿರುವಾಗ  ಒಬ್ಬರು ಸಿಕ್ಕರು. ಅವರು ಮಾತಾಡುತ್ತ, ನಮ್ಮನ್ನು ಸೀರೆಗಳಿಗೆ ಬಣ್ಣ ಹಾಕುವ ಸ್ಥಳಕ್ಕೆ ಕರೆದೊಯ್ದರು.

   ಅಲ್ಲಿ ನಾಲ್ಕಾರು ಮಂದಿ ಸೀರೆಗಳಿಗೆ ಬಣ್ಣ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದರು. ಅವರ ಅನುಮತಿ ಪಡೆದು ವಿಡಿಯೋ  ಮಾಡಿದೆ. ತುಸು ಹೊತ್ತು ನೋಡಿ ಅಲ್ಲಿಂದ ಮಗ್ಗದ ಮನೆಗೆ ಹೋದೆವು. ಅಲ್ಲಿ ವಿದ್ಯುತ್ ಚಾಲಿತ ಮಗ್ಗದಲ್ಲಿ ಸೀರೆ ನೇಯುತ್ತಲಿದ್ದದ್ದನ್ನು ನೋಡಿ ವಾಪಾಸಾದೆವು. ಅಷ್ಟರಲ್ಲಿ ಅಕ್ಕ ಭಾವ ಹಿಂದಿರುಗಿದ್ದರು.



   ಸಂಕಟಮೋಚನ ದೇಗುಲ (sankat mochan Rd, padampuri colony, bhelupur, Varanasi UP 221010)

 ಎರಡು ರಿಕ್ಶಾದಲ್ಲಿ ನಾವು ಕಾಶಿ ಸುತ್ತಲು ಹೊರಟೆವು. ಸಂಕಟಮೋಚನ ದೇಗುಲವನ್ನು ೧೬ನೇ ಶತಮಾನದಲ್ಲಿ ಕವಿ ಸಂತ ಶ್ರೀ ಗೋಸ್ವಾಮಿ ತುಳಸಿದಾಸ್ ಸ್ಥಾಪಿಸಿದರು. ಇದು ಅಸ್ಸಿ ನದಿಯ ದಡದಲ್ಲಿದೆ. ಇಲ್ಲಿ ಹನುಮ ಮತ್ತು ರಾಮನ ವಿಗ್ರಹಗಳಿವೆ. ತುಳಸೀದಾಸರು ಹನುಮಂತನ ದರ್ಶನ ಪಡೆದ ಸ್ಥಳದಲ್ಲಿಯೇ ಈ ದೇಗುಲ ನಿರ್ಮಿಸಲಾಗಿದೆ ಎಂಬುದು ನಂಬಿಕೆ.

ಪ್ರವೇಶ ಸಮಯ: ಬೆಳಗ್ಗೆ ೪ರಿಂದ ೧೧.೩೦ ಸಂಜೆ ೩ರಿಂದ ರಾತ್ರೆ ೧೦

   ತ್ರಿದೇವ್ ಮಂದಿರ (ಲಮ್ಕಾ ರಸ್ತೆ, ತುಳಸಿಮಾನಸ ಮಂದಿರ ಕಾಲೊನಿ, ನಾರಿಯಾ, ವಾರಣಾಸಿ, ಉತ್ತರಪ್ರದೇಶ)

   ತ್ರಿದೇವಮಂದಿರದಲ್ಲಿ ದುರ್ಗೆ, ರಾಮಸೀತೆ, ಲಕ್ಷ್ಮಣ, ಲಕ್ಷ್ಮೀನಾರಾಯಣರ ಮೂರ್ತಿಗಳಿವೆ. ಉತ್ತರದಲ್ಲಿ ದೇಗುಲದ ಮೂರ್ತಿಗಳು ಅಷ್ಟೇನೂ ಸುಂದರವಾಗಿರುವುದಿಲ್ಲ. ಬೊಂಬೆಗಳಂತೆ ಭಾಸವಾಗುತ್ತವೆ.  ನಮ್ಮ ದಕ್ಷಿಣದಲ್ಲಾದರೆ ಕಲ್ಲಿನ ಮೂರ್ತಿಗಳ ಕೆತ್ತನೆಗಳು ಬಲು ಚೆನ್ನಾಗಿರುತ್ತವೆ.

ತ್ರಿದೇವಿಯರು! 
ಪ್ರವೇಶ: ಬೆಳಗ್ಗೆ ೬ರಿಂದ ೧೨, ಸಂಜೆ ೫ರಿಂದ  ರಾತ್ರೆ ೧೦

ಮಣಿಮಂದಿರ

ಮಣಿಮಂದಿರ ದೇಗುಲದೊಳಗೆ ಕಾಲಿಟ್ಟೊಡನೆ ಗಮನ ಸೆಳೆದ ದೃಶ್ಯ ೧೫೦ಕ್ಕೂ ಹೆಚ್ಚು ಶಿವಲಿಂಗಗಳು ಸಾಲಾಗಿ ಎರಡೂ ಬದಿಗಳಲ್ಲಿ ಜೋಡಿಸಿಟ್ಟಿರುವುದು. ೧೯೪೦ರ ದಶಕದಲ್ಲಿ ಈ ಮಣಿಮಂದಿರವನ್ನು ನಿರ್ಮಿಸಲಾಯಿತು. ಭಗವಾನ್ ರಾಮನ ಪರಂಪರೆಯನ್ನು ಮುಂದುವರಿಸುವುದು ಈ ದೇವಾಲಯದ ಮುಖ್ಯ ಗುರಿಯಂತೆ. ಮಧ್ಯಭಾಗದಲ್ಲಿ ರಾಮದರ್ಬಾರ್ ಇದೆ. ದೇವಾಲಯದ ಒಳಭಾಗ ಗ್ರನೈಟ್ ಶಿಲೆಯಿಂದ ನಿರ್ಮಿಸಲಾಗಿದೆ. ಅಲ್ಲಿ ಅನ್ನಪೂರ್ಣ, ರಾಮಸೀತೆ, ಲಕ್ಷ್ಮಣ, ಆಂಜನೇಯ, ಶಿವ, ಸತ್ಯನಾರಾಯಣ ಪ್ರತಿಮೆಗಳಿವೆ.

  ತುಳಸಿಮಾನಸ ಮಂದಿರ (ಸಂಕಟ ಮೋಚನ ರಸ್ತೆ, ದುರ್ಗಾಕುಂಡ್ ಮಾರ್ಗ, ಜಲನ್, ವಾರಣಾಸಿ, ೨೨೧೦೦೫)

 ವಾರಣಾಸಿಯಲ್ಲಿರುವ ತುಳಸಿಮಾನಸ ಮಂದಿರವನ್ನು ೧೯೬೪ರಲ್ಲಿ ಭಾರತದ ಪಶ್ಚಿಮಬಂಗಾಳದ ಹೌರಾದ ಸುರೇಖಾ ಕುಟುಂಬದವರು ನಿರ್ಮಿಸಿದರು. ಗೋಸ್ವಾಮಿ ತುಳಸಿದಾಸ್ ಅವರು ರಾಮಚರಿತ  ಮಾನಸ ಬರೆದ ಅದೇ ಸ್ಥಳದಲ್ಲಿ ದೇವಾಲಯ ನಿರ್ಮಿಸಿದ್ದಂತೆ. ದೇವಾಲಯವನ್ನು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ದೇವಾಲಯದ ವಿಶೇಷ ಅಂದರೆ, ರಾಮಚರಿತ ಮಾನಸ ಪದ್ಯಗಳು ಮತ್ತು ದೃಶ್ಯಗಳನ್ನು ಗೋಡೆಮೇಲೆ ಉದ್ದಕ್ಕೂ ಕೆತ್ತಲಾಗಿದೆ. ದೇವಾಲಯದಲ್ಲಿ ಕಲಾಕೃತಿಗಳು, ಹಸ್ತಪ್ರತಿಗಳ ಸಂಗ್ರಹ, ಗ್ರಂಥಾಲಯವಿದೆ.

  ಗೌರಿ ಮಂದಿರ

ಯಾವುದೋ ಮೂಲೆಯಲ್ಲಿರುವ ಗೌರಿಮಂದಿರಕ್ಕೆ ರಿಕ್ಷಾ ಚಾಲಕರು ನಮ್ಮನ್ನು ಕರೆದೊಯ್ದರು. ಪುಟ್ಟದಾದ ಗೌರಿ ಗುಡಿ. ಅಲ್ಲಿಯ ಅರ್ಚಕರು, ಕನ್ನಡದಲ್ಲಿ, ‘ಕಾಶೀ ಫಲ ನಿಮಗೆ, ೩ ಕವಡೆ ದೇವಿಗೆ, ಒಂದು ಕವಡೆ ನಿಮಗೆ, ಹುಂಡಿಗೆ ೨೦ ರೂಪಾಯಿ ಹಾಕಿ ಎಂದು ಕನ್ನಡದಲ್ಲಿ ಹೇಳುತ್ತಲಿದ್ದರು! ಭಕ್ತಾದಿಗಳು ಕವಡೆ ಅರ್ಪಿಸುತ್ತಿದ್ದರು.

  ಕಾಳಿಮಂದಿರ

ನಮ್ಮ ಅರ್ಧ ದಿನದ ಕೊನೆಯ ದೇಗುಲ ದರ್ಶನ ಕಾಳಿಮಾತೆಯನ್ನು ನೋಡುವುದರ ಮೂಲಕ ಮುಕ್ತಾಯಗೊಂಡಿತು. ನಾವು ಅಲ್ಲಿ ಹೋದ ಸಮಯಕ್ಕೆ ಸರಿಯಾಗಿ ಮಹಾಮಂಗಳಾರತಿ ನಡೆಯುತ್ತಲಿತ್ತು.

  ರಾಧೆ ಸಿಲ್ಕ್ ಪ್ಯಾಲೇಸ್

  ಕಾಶಿಗೆ ಬಂದು ಸೀರೆ ಕೊಳ್ಳದೆ ಹೋಗುವುದುಂಟೆ ಎಂದು ನಾವು ರಾಧೆ ಸಿಲ್ಕ್ ಅಂಗಡಿಗೆ ಹೋದೆವು. ಅಲ್ಲಿ ಒಂದು ಗಂಟೆ ಸೀರೆ ಹರಗಿ ಅದು ಇದು ಎಂದು ನಾಲ್ಕಾರು ಸೀರೆ ಆರಿಸಿಕೊಂಡೆವು.  ಅಂಗಡಿಯಾತ ಬಹಳ ಚೆನ್ನಾಗಿ ಮಾತಾಡುತ್ತಲಿದ್ದ. ನಮಗೆ ಮಣ್ಣಿನ ಕುಡಿಕೆಯಲ್ಲಿ ಕಾಫಿ ತರಿಸಿ ಕೊಟ್ಟು ಉಪಚರಿಸಿದ. ಮಣ್ಣಿನ ಕುಡಿಕೆ ನೋಡಿ ಖುಷಿಯಾಗಿ ನಾವು ನಾಲ್ಕಾರು ಕುಡಿಕೆ ಕೊಂಡು ತಂದೆವು!

ಸೀರೆ ಖರೀದಿಸಿ ನಾವು ೨.೩೦ಗೆ ಆಶ್ರಮ ತಲಪಿ ಊಟ (ಅನ್ನ, ಸಾರು, ಸಾಂಬಾರು, ಪಲ್ಯ, ಹಪ್ಪಳ, ಮಜ್ಜಿಗೆ, ಉಪ್ಪಿನಕಾಯಿ) ಮಾಡಿ ತುಸು ವಿಶ್ರಾಂತಿ ಪಡೆದೆವು.

 ಕಾಲ ಭೈರವೇಶ್ವರ ದೇಗುಲ (ಭರೋನಾಥ್, ವಿಶ್ವೇಶ್ವರಗಂಜ್, ವಾರಣಾಸಿ)

 ಸಂಜೆ ೩.೩೦ಕ್ಕೆ ನಾವು ಕಾಲಭೈರವೇಶ್ವರ ದೇಗುಲಕ್ಕೆ ಹೊರಟೆವು. ಅನಂತ ಬರಲಿಲ್ಲ. ನಾವೈವರು ಹೊರಟೆವು.  ಸುಮಾರು ೧೩ಕಿಮೀ ದೂರದ ಕಾಲಭೈರವೇಶ್ವರ ವಾರಣಾಸಿಯಲ್ಲಿರುವ ಅತ್ಯಂತ ಹಳೆಯ (೧೭ನೇ ಶತಂಆನ) ಶಿವ ದೇಗುಲ. ಶಿವನ ಉಗ್ರರೂಪದ ಮೂರ್ತಿ.

   ಪ್ರವೇಶ ಸಮಯ: ಬೆಳಗ್ಗೆ ೫ರಿಂದ ೧.೩೦, ಸಂಜೆ ೩ರಿಂದ ರಾತ್ರೆ ೧೦

  ದೇವಾಲಯದಲ್ಲಿರುವಾಗಲೇ ನಮಗೆ ಚರವಾಣಿ ಬಂತು. ಎಲ್ಲಿರುವಿರಿ? ಗಂಗಾರತಿ ನೋಡಲು ದೋಣಿ ಹೊರಡುತ್ತಿದೆ. ಬೇಗ ಬನ್ನಿ ಎಂದರು. ನಾವು ರಿಕ್ಷಾ ಹತ್ತಿ ಶಿವಾಲಿ ಘಾಟಿಗೆ ಬಂದು ದೋಣಿ ಹತ್ತಿದೆವು.

  ಗಂಗಾನದಿಯಲ್ಲಿ ಒಂದು ಸುತ್ತು

ದೋಣಿಯಲ್ಲಿ ನಾವು ಗಂಗಾನದಿಯಲ್ಲಿ ವಿಹಾರ ನಡೆಸಿದೆವು. ನದಿ ಅತ್ಯಂತ ಚೊಕ್ಕವಾಗಿತ್ತು. ಪರಿಶುಭ್ರ ನದಿ ನೋಡುವುದೇ ಒಂದು ಆನಂದ. ದೋಣಿಯಲ್ಲಿ ಸುತ್ತುತ್ತ, ದೂರದಿಂದಲೇ ಎಲ್ಲಾ ಘಾಟ್ ಗಳನ್ನು ನೋಡಿದೆವು. ಒಟ್ಟು ೮೮ ಘಾಟ್ ಗಳು ಇವೆ. ೮೮ರಲ್ಲಿ ಒಂದು ಘಾಟ್ ಕರ್ನಾಟಕದ್ದು. ಅದರಲ್ಲಿ ಮೈಸೂರು ಮಹಾರಾಜರ ಘಾಟ್ ಎಂಬ ಫಲಕವಿದೆ. ಹೆಚ್ಚಿನ ಘಾಟ್ ಗಳು ಪೂಜಾ, ಮತ್ತು ಸ್ನಾನ ಘಟ್ಟಗಳಾಗಿ ಉಪಯೋಗವಾದರೆ, ಮಣಿಕರ್ಣಿಕಾ ಹಾಗೂ ಹರಿಶ್ಚಂದ್ರ ಘಾಟ್ ಗಳು ಸ್ಮಶಾನ ಸ್ಥಳಗಳಾಗಿ ಪ್ರತ್ಯೇಕವಾಗಿ ಬಳಸಲಾಗುತ್ತಿದೆ.  ಹರಿಶ್ಚಂದ್ರ ಘಾಟಿನಲ್ಲಿ ಸುಸಜ್ಜಿತ ವಿದ್ಯುತ್ ಚಿತಾಗಾರ ಕೂಡ ಇದೆ. ಮೊದಲೆಲ್ಲ ಅರೆಬೆಂದ ಹೆಣಗಳು ನದಿಯಲ್ಲಿ ತೇಲುತ್ತಿದ್ದುವಂತೆ. ಈಗ ಅಂಥ ದೃಶ್ಯ ಕಾಣಲು ಸಿಗುವುದಿಲ್ಲ. ನದಿಯಲ್ಲಿ ಯಾವುದೇ ಕಸ ಕೊಳಕು ಇಲ್ಲವೇ ಇಲ್ಲ.

  ವಾರಾಣಾಸಿಯ ಘಾಟ್ ಗಳನ್ನು ೧೮ನೇ ಶತಮಾನದಲ್ಲಿ ಮರಾಠರ ಆಶ್ರಯದಲ್ಲಿ ಪುನರ್ನಿರ್ಮಿಸಲಾಯಿತು. ಪ್ರಸ್ತುತ ಘಾಟ್ ಗಳ ಪೋಷಕರೆಂದರೆ ಮರಾಠ, ಶಿಂಧೆ(ಸಿಂಧ್ಯಾ), ಹೋಳ್ಕರ್, ಭೋಂಸ್ಲೆ, ಪೇಶ್ವೆ ಮತ್ತು ಬನಾರಸ್ಸಿನ ಮಹಾರಾಜರು.  ಈ ಎಲ್ಲಾ ಘಾಟ್ ಗಳ ಮೂಲಕ ಗಂಗಾನದಿಯಲ್ಲಿ ದೋಣಿವಿಹಾರ ಪ್ರವಾಸಿಗರ ಆಕರ್ಷಣೆಯಾಗಿದೆ.  ಹರಿಶ್ಚಂದ್ರ ಘಾಟಿನಲ್ಲಿ ಹೆಣ ಸುಡುವುದು ಕಾಣುತ್ತಲಿತ್ತು.

   ಗಂಗಾರತಿ

ನದಿಮೇಲೆ ದೋಣಿಯಲ್ಲಿ ಕುಳಿತು (ದೋಣಿ ಲಂಗರು ಹಾಕಿತ್ತು) ದಶಾಶ್ವಮೇಧ ಘಾಟಿನಲ್ಲಿ ನಡೆಯುವ ಗಂಗಾರತಿ ನೋಡಿದೆವು. ಪ್ರತೀ ದಿನ ಸಂಜೆ ೬.೩೦ರಿಂದ ೭.೩೦ರತನಕ ಭಜನೆ, ಆರತಿ ನಡೆಯುತ್ತದೆ. ಅಲ್ಲಿ ಗಂಗೆಯ ವಿಗ್ರಹ ಇದೆ. ೫-೬ ಮಂದಿ ರಾಗವಾಗಿ ಹಾಡುತ್ತ,   ಆರತಿ ಹಿಡಿದು  ಮೇಲೆ ಕೆಳಗೆ, ಗಂಗಾನದಿ ಎದುರು ಹಾಗೂ ಹಿಂದೆ ಕೂತ ಜನರೆದುರು ಆರತಿ ಎತ್ತುವ ದೃಶ್ಯ ನೋಡಿ ಪುಳಕಿತರಾದೆವು. ಆ ಕತ್ತಲೆಯಲ್ಲಿ ನೀರಿನ ಎದುರು ಕತ್ತಲೆ ಬೆಳಕಿನ ದೃಶ್ಯ ಬಲು ಸುಂದರವಾಗಿ ಕಾಣುತ್ತದೆ.  ಆ ಸಂದರ್ಭವನ್ನು ಡ್ರೋನ್ ಕ್ಯಾಮರಾ ಮೂಲಕ ಇಡೀ ದೃಶ್ಯಾವಳಿಗಳ ವೀಡಿಯೋ ಮಾಡುತ್ತಾರೆ. ಆ ದೃಶ್ಯಗಳು ಅಲ್ಲಿ ದೊಡ್ದ ಪರದೆಯ ಮೂಲಕ ಪ್ರದರ್ಶನವಾಗುತ್ತಿರುತ್ತದೆ.  

    

ಗಂಗಾರತಿ ನೋಡಿ ನಾವು ಕೋಣೆಗೆ ಹಿಂದಿರುಗಿದೆವು. ರಾತ್ರಿ ಊಟ ಸಿದ್ಧವಾಗಿತ್ತು. (ಪಲಾವ್, ಬದನೆ ಗಸಿ, ಬಾಳ್ಕ ಮೆಣಸು ಮೊಸರನ್ನ)

   ಕಾಶಿಗೆ ವಿದಾಯ

 ತಾರೀಕು ೨.೪.೨೨ರಂದು ಬೆಳಗ್ಗಿನ ಝಾವ ೨.೩೦ಗೆ ಎಚ್ಚರವಾಯಿತು. ವಿಪರೀತ ಸೆಖೆ ಇತ್ತು. ಇನ್ನೇನು ಮಲಗುವುದೆಂದು ಒಬ್ಬೊಬ್ಬರಾಗಿ ಸ್ನಾನಾದಿ ಮುಗಿಸಿ ೪.೩೦ಗೇ ತಯಾರಾಗಿ ಕೂತೆವು. ೫.೩೦ಗೆ ಕಾಶಿಗೆ ವಿದಾಯ ಹೇಳಿ ಬಸ್ ಹತ್ತಿದೆವು. ಕಾಶಿ ವೀಕ್ಷಣೆ ಪರಿಪೂರ್ಣವಾಗಲಿಲ್ಲ. ಕಾಶಿ ಗಲ್ಲಿ ಗಲ್ಲಿ ಸುತ್ತಬೇಕು, ವಿವಿಧ ಘಾಟ್ ಗಳನ್ನು ಹತ್ತಿರದಿಂದ ನೋಡಬೇಕು. ಹಾಗಾಗಿ ಮತ್ತೊಮ್ಮೆ ವಾರಾಣಾಸಿಗೆ ಹೋಗಬೇಕು!

  ರೈಲು ನಿಲ್ದಾಣಕ್ಕೆ ಹೋದೆವು. ಆ ದಿನ ಯುಗಾದಿ ಹಬ್ಬ. ಹೊಸ ವರ್ಷಾಚರಣೆ. ಬಸ್ಸಿನಲ್ಲಿ ವೀರಪ್ಪಾಚಾರಿ ಎಲ್ಲರಿಗೂ ಬೇವು ಬೆಲ್ಲ ಹಂಚಿದರು. ಇನ್ನು ಕೆಲವರು ಪಂಚಕಜ್ಜಾಯ ಹಂಚಿದರು. ಆ ದಿನ ಸಿಹಿ ಕಹಿಯೊಂದಿಗೆ ದಿನ ಪ್ರಾರಂಭವಾಯಿತು. ೬.೪೫ಕ್ಕೆ ರೈಲೇರಿದೆವು. ತಿಂಡಿ (ರಾಗಿ ಶ್ಯಾವಿಗೆ- ಅದರಲ್ಲಿ ಬರೀ ಕಾಯಿತುರಿ ಇರುತ್ತದೆ. ಉಪ್ಪು ಇರುವುದಿಲ್ಲ. ಅದಕ್ಕೆ ಸಕ್ಕರೆ ಬೆರೆಸಿ ತಿನ್ನುತ್ತಾರೆ. ಇಲ್ಲವೇ ಚಟ್ನಿಪುಡಿ ಬೆರೆಸಿ ತಿನ್ನಬಹುದು, ಇಡ್ಲಿ ಸಾಂಬಾರ್.) ಸರಬರಾಜಾಯಿತು.   

ಅಯೋಧ್ಯೆಗೆ ಪಯಣ

ಕಾಶಿ ಬಿಟ್ಟು ರೈಲು ೨೧೯ಕಿಮೀ ದೂರದ ಅಯೋಧ್ಯೆಯೆಡೆಗೆ ಸಾಗಿತು.   ಸುಮಾರು ೩.೩೦ ಗಂಟೆಯ ಹಾದಿ. ಆದರೆ ನಮ್ಮ ರೈಲಿಗೆ ಅಷ್ಟೆಲ್ಲ ಬೇಗ ಹೋಗಲು ಹಸಿರು ನಿಶಾನೆ ಸಿಗುವುದಿಲ್ಲವಾದ್ದರಿಂದ ನಾವು ಅಯೋಧ್ಯೆ ತಲಪುವಾಗ ೧೨ಗಂಟೆ ಆಗಿತ್ತು. ರೈಲಿಳಿಯಲು ಅನುಮತಿ ಸಿಕ್ಕಿರಲಿಲ್ಲ. ೧೨.೩೦ಗೆ ಊಟ ( ಸಾಂಬಾರನ್ನ, ಮೊಸರನ್ನ) ಮಾಡಿದ ಬಳಿಕ ಒಂದು ಗಂಟೆಗೆ ರೈಲಿಳಿದೆವು.

ಸಶೇಷ



1 ಕಾಮೆಂಟ್‌: