ಬುಧವಾರ, ಮೇ 25, 2022

ಭಾರತ ದರ್ಶನ (ಪುರಿ, ಕೊನಾರ್ಕ್,ಕೊಲ್ಕತ್ತ, ಗಯಾ, ವಾರಣಾಸಿ, ಅಯೋಧ್ಯಾ, ಪ್ರಯಾಗರಾಜ್) ಭಾಗ ೩

 ಅಯೋಧ್ಯಾ ದೇವಾಲಯ ಕಾರ್ಯಾಗಾರ

 ಅಯೋಧ್ಯೆ ಸುತ್ತುವುದು ನಮ್ಮ್ಮದೇ ಖರ್ಚು. ನಾವು ಆಟೋದಲ್ಲಿ ಅಯೋಧ್ಯೆಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೊರಟೆವು. ಒಂದು ಆಟೋದಲ್ಲಿ ಹತ್ತು ಮಂದಿ. ಯಾವ್ಯಾವ ಸ್ಥಳಗಳಿಗೆ ಹೋಗಬಹುದೆಂದು ಗೂಗಲ್ ಸಹಾಯದಿಂದ ಮೊದಲೇ ಪಟ್ಟಿ ಮಾಡಿಟ್ಟುಕೊಂಡಿದ್ದೆವು. ಮೊದಲಿಗೆ ನಾವು ಅಯೋಧ್ಯೆ ದೇಗುಲ ನಿರ್ಮಾಣ ಕಾರ್ಯಕ್ಕೆ ಬೇಕಾದ ಕಲ್ಲು ಕೆತ್ತನೆಗಳು ಮಾಡುವ ಸ್ಥಳಕ್ಕೆ ಹೋದೆವು.

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕಾಗಿ ಕರಸೇವಕಪುರ ಸಂಕೀರ್ಣದಲ್ಲಿ ಕಲ್ಲಿನ ಕೆತ್ತನೆ ಕಾರ್ಯ ಭರದಿಂದ ಸಾಗುತ್ತಲಿತ್ತು. ಸುಮಾರು ೩ ದಶಕಗಳ ಹಿಂದೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಲಾಯಿತು. ಅದೇ ಸಮಯದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕಾಗಿ ಇಲ್ಲಿ ಕಲ್ಲಿನ ಕೆತ್ತನೆ ಕಾರ್ಯ ಪ್ರಾರಂಭಿಸಲಾಗಿತ್ತು. ಸುಮಾರು ೧೫ ವರ್ಷಗಳ ಕಾಲ ಕಲ್ಲುಗಳ ಕೆತ್ತನೆ ಕಾರ್ಯ ಮುಂದುವರಿದಿತ್ತು. ಅನಂತರ ನಿಂತು ಹೋಗಿತ್ತು. ಈಗ ಪುನಃ ಕೆತ್ತನೆ ಕೆಲಸ ಮುಂದುವರಿದಿದೆ. ರಾಜಸ್ಥಾನದ ಕುಶಲಕರ್ಮಿಗಳು ಕಲ್ಲುಕೆತ್ತನೆ ಕೆಲಸ ಮಾಡುತ್ತಿರುವರು. ಅವನ್ನೆಲ್ಲ ನೋಡುವ ಅವಕಾಶ ನಮಗೆ ಲಭಿಸಿತ್ತು.


   
ರಾಮ ದರ್ಬಾರ್ ಮಂದಿರ

 ರಾಮನ ದೇವಾಲಯ, ದೇಗುಲ ಬಹಳ ದೊಡ್ದದಾಗಿದೆ. ಹಳೆಯ ಕಾಲದ ಕೆತ್ತನೆಗಳು, ಒಂದು ಪಾರ್ಶ್ವದಲ್ಲಿ ಸೀತಾಮಾತಾ ಕಾ ರಸೋಯಿ ಘರ್ ಇದೆ. ಸೀತೆ ಅಡುಗೆ ಮಾಡಿದ ಕೋಣೆ!


  

ಬಡೆ ಹನುಮಾನ್

ಹೇಸರೇ ಹೇಳುವಂತೆ ದ್ವಾರದಲ್ಲೇ ೧೫ ಅಡಿಯ ಬೃಹತ್ ಹನುಮಂತನ ಪ್ರತಿಮೆ ಗಮನ ಸೆಳೆಯುತ್ತದೆ. ಹನುಮನ ದೇಗುಲ.

  ರಾಮಮಂದಿರ

ಪ್ರಸ್ತುತ ರಾಮಮಂದಿರ ನಿರ್ಮಾಣವಾಗುವ ಸ್ಥಳದ ಸಮೀಪ ಈ ರಾಮಮಂದಿರ ಇದೆ. ಅಲ್ಲಿಗೆ ಹೋಗಲು ಕಠಿಣ ತಪಾಸಣೆ ಮಾಡುತ್ತಾರೆ. ಕೈಯಲ್ಲಿ ನೀರೂ ಒಯ್ಯುವಂತಿಲ್ಲ. ಸರತಿ ಸಾಲಿನಲ್ಲಿ ಅರ್ಧ ಗಂಟೆ ಸಾಗಿ ಒಳಗೆ ಹೋದೆವು. ದೂರದಲ್ಲಿ ರಾಮಂದಿರ ನಿರ್ಮಾಣ ಕಾರ್ಯ ಸಾಗಿರುವುದು ಕಾಣುತ್ತದೆ.  ೫ ಆಗಸ್ಟ್ ೨೦೨೦ರಂದು ಅಲ್ಲಿ ಭೂಮಿಪೂಜೆ ನಡೆದಿತ್ತು. ೨೦೨೩ಕ್ಕೆರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಬಹುದು ಎಂಬ ಅಂದಾಜು ಇದೆ. ಆಗಸ್ಟ್ ೨೦೨೧ರಲ್ಲಿ ರಾಮಮಂದಿರ ನಿರ್ಮಾಣವನ್ನು ಸಾರ್ವಜನಿಕರು ವೀಕ್ಷಿಸಲು ವೀಕ್ಷಣಾ ಸ್ಠಳ ರಚಿಸಲಾಯಿತು. ರಾಮಮಂದಿರ ನಿರ್ಮಾಣದ ಜವಾಬ್ದಾರಿ ಎಲ್ ಅಂಡ್ ಟಿ ಕಂಪೆನಿಗೆ ದೊರೆಯಿತು.

ಹನುಮಾನ್ ಗಢ

೧೦ನೇ ಶತಮಾನದಲ್ಲಿ ನಿರ್ಮಾಣವಾದ ಹನುಮಾನ್ ಗಢ ದೇಗುಲ ಅಯೋಧ್ಯೆಯಲ್ಲಿದೆ. ಸುಮಾರು ೭೦ ಮೆಟ್ಟಲು ಹತ್ತಿ ದೇಗುಲಕ್ಕೆ ಹೋಗಬೇಕು. ಅಂಜನಿಯ ತೊಡೆಮೇಲೆ ಹನುಮಂತನನ್ನು ಕೂರಿಸಿದ ಪ್ರತಿಮೆ.

  ರಾವಣನನ್ನು ಸೋಲಿಸಿದನಂತರ ರಾಮನು ಅಯೋಧ್ಯೆಗೆ ಹಿಂತಿರುಗುತ್ತಾನೆ. ಹನುಮಂತನೂ ಅಯೋಧ್ಯೆಯಲ್ಲೇ ವಾಸಿಸಲು ಪ್ರಾರಂಭಿಸುತ್ತಾನೆ. ಅದೇ ಸ್ಥಳ ಈಗ ಹನುಮಾನ್ ಗಢ ಅಥವಾ ಹನುಮಾನ್ ಕೋಟ್ ಎಂದು ಹೆಸರು ಪಡೆಯಿತು.

ಚಾರ್ಧಾಮ ಮಂದಿರ

ಮೂಲ ಚಾರ್ಧಾಮ ಮಂದಿರಕ್ಕೆ ಭೇಟಿ ನೀಡಲು ಸಾಧ್ಯವಿಲ್ಲದವರಿಗಾಗಿ ಈ ಚಾರ್ಧಾಮ ಮಂದಿರ ನಿರ್ಮಿಸಲಾಯಿತಂತೆ. ಇಲ್ಲಿ ರಾಮೇಶ್ವರ ಧಾಮ, ಶ್ರೀದ್ವಾರಕಾಧೀಶಧಾಮ, ಶ್ರೀ ಜಗನ್ನಾಥಧಾಮ ಮತ್ತು ಬದರೀನಾಥಧಾಮಗಳ ವಿಗ್ರಹಗಳಿವೆ.

  ವಾಲ್ಮೀಕಿ ಭವನ

ಮೂರು ಅಂತಸ್ತಿನ ವಾಲ್ಮೀಕಿ ಭವನದ ಒಳಗೆ ಗೋಡೆಗಳ ಮೇಲೆ ವಾಲ್ಮೀಕಿ ಬರೆದ ೨೪೦೦೦ ಶ್ಲೋಕಗಳನ್ನು ಕೆತ್ತಲಾಗಿದೆ. ರಾಷ್ಟ್ರದಾದ್ಯಂತ ಜನರು ರಾಮನಾಮ ಬರೆ್ದು ಕಳುಹಿಸಿದ ನೋಟ್ ಪುಸ್ತಕಗಳು ಇಲ್ಲಿ ಸಂಗ್ರಹವಾಗಿವೆ.

 

ಬಾಬಾ ಶ್ರೀ ಮಣಿರಾಮ್ ದಾಸ್ ಭವನ

 ವಾಲ್ಮೀಕಿ ಭವನದ ಎದುರು ಭಾಗದಲ್ಲೆ ಇರುವ ಈ ಕಟ್ಟಡದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪಟಗಳು, ರಾಮಸೀತೆ ಲಕ್ಷ್ಮಣರ ಪ್ರತಿಮೆಗಳಿವೆ. ಮಲಗಿರುವ ವಿಷ್ಣುವಿನ ವಿಗ್ರಹವಿದೆ.

ಪ್ರವೇಶ ಸಮಯ: ಬೆಳಗ್ಗೆ ೬-೧೧, ಸಂಜೆ ೪ರಿಂದ ೯.೩೦.

ಕನಕ ಭವನ

ವಿಶಾಲವಾದ ಕನಕಭವನದೊಳಗೆ ಹೊಕ್ಕೆವು. ಕನಕ ಭವನ ನೋಡಲು ಭವ್ಯವಾಗಿದೆ. ಸೀತೆಯು ರಾಮನನ್ನು ವಿವಾಹವಾದನಂತರ ಕೈಕೇಯಿ ಸೀತಾದೇವಿಗೆ ಈ ಭವನವನ್ನು ಉಡುಗೊರೆಯಾಗಿ ನೀಡಿದ್ದಳೆಂಬುದು ಪ್ರತೀತಿ. ರಾಮಸೀತೆಯರ ಖಾಸಗಿ ಅರಮನೆಯಾಗಿತ್ತಂತೆ. ೧೮೯೧ರಲ್ಲಿ ಚಂದ್ರಗುಪ್ತ ವಿಕ್ರಮಾದಿತ್ಯ ಅರಮನೆಯನ್ನು ನವೀಕರಿಸಿದನೆಂಬ ಉಲ್ಲೇಖವಿದೆ. ಗರ್ಭಗೃಹದಲ್ಲಿ ರಾಮ ಸೀತೆಯರ ವಿಗ್ರಹಗಳಿವೆ.

ರಾಮನ ಪುತ್ರ ಕುಶನೂ ಈ ದೇವಾಲಯವನ್ನು ನವೀಕರಿಸಿದನು ಎಂಬ ಉಲ್ಲೇಖವಿದೆ.


  ಸರಯೂ ನದಿ

  ಅಯೋಧ್ಯೆ ಸ್ಥಳ ವೀಕ್ಷಣೆಯ ಕೊನೆಯ ಘಟ್ಟ ಸರಯೂ ನದಿ ನೋಡಲು ಹೋದೆವು.

  ಸರಯೂ ನದಿಯು ಭಾರತದ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ನಂದಾಕೋಟ್ ಪರ್ವತದ ದಕ್ಷಿಣದ ಪರ್ವತದಲ್ಲಿ ಹುಟ್ಟುವ ನದಿಯಾಗಿದೆ. ಮಾಹಾಕಾವ್ಯ ರಾಮಾಯಣದಲ್ಲಿ ಈ ನದಿಯ ಉಲ್ಲೇಖವಿದೆ. ಶ್ರೀರಾಮನು ಅಯೋಧ್ಯೆಯ ನಿವಾಸಿಗಳೊಂದಿಗೆ ಸರಯೂ ನದಿಯ ಮೂಲಕ ವೈಕುಂಠಕ್ಕೆ ಹೋದನು ಎಂಬುದು ಪ್ರತೀತಿ.

   ಸರಯೂ ನದಿಯಲ್ಲಿಳಿದು ನೀರನ್ನು ಮುಖಕ್ಕೆ ಎರಚಿಕೊಂಡೆವು. ಆಗ ಒಬ್ಬ ಫೋಟೋಗ್ರಾಫರ್ ಅಲ್ಲಿ ಪ್ರತ್ಯಕ್ಷನಾಗಿ ದುಂಬಾಲು ಬಿದ್ದ. ಕೇವಲ ರೂ. ೨೦. ಒಂದು ಫೋಟೋ ತೆಗೆಸಿಕೊಳ್ಳಿ ಎಂದ. ಆಯಿತು ಎಂದೊಪ್ಪಿದೆವು. ಅವನು ಜೀವನೋಪಾಯಕ್ಕೆ ಈ ಕೆಲಸ ಹಿಡಿದಿರುವನು. ಪ್ರವಾಸಿಗರಿಂದಲೆ ಅವರ ಜೀವನ ಪಥ ಎಂದು ಕನಿಕರಿಸಿದ್ದೇ ತಪ್ಪಾಯಿತು! ಅವನು ಹೇ್ಳಿದಂತೆಲ್ಲ ಫೋಸು ಕೊಟ್ಟು ನಿಂತೆವು! ೨-೩ ಸಲ ಕ್ಲಿಕ್ ಮಾಡಿದ. ಪ್ರಿಂಟ್ ಮಾಡಲು ಓಡಿ ಹೋದ. ೧೦ ನಿಮಿಷದಲ್ಲಿ ೫-೬ ಪ್ರತಿ ಪಟ ಅಚ್ಚು ಹಾಕಿ ನಮ್ಮ ಮುಂದೆ ಹಿಡಿದು ರೂ. ೫೦೦ ಪೀಕಿಸಿಕೊಂಡು ಇನ್ನೊಂದು ಮಿಕ ಹಿಡಿಯಲು ಓಡಿದ!  ೨೦ ರೂಪಾಯಿ ಎಂದೊಪ್ಪಿದ್ದು, ರೂ.೫೦೦ ಕಳೆದುಕೊಳ್ಳಬೇಕಾಯಿತು! ಆ ಪಟ ನಮ್ಮಲ್ಲಿರುವಷ್ಟು ಸಮಯ ಅವನ ನೆನಪು ಸದಾ ಇರುತ್ತದೆ!

ಅಯೋಧ್ಯೆಗೆ ವಿದಾಯ

 ಅಯೋಧ್ಯೆ ಬಿಡುವ ಮುನ್ನ ಅಲ್ಲಿಯ ಚಹಾ ದುಖಾನದಲ್ಲಿ ಕುಡಿಕೆ ಚಹಾ ಕುಡಿಯಲು ನಿಲ್ಲಿಸಲಾಯಿತು. ಚಹಾದೊಂದಿಗೆ ಬಿಸಿಬಿಸಿ ನೀರುಳ್ಳಿ ಪಕೋಡವೂ ಸಾಥ್ ಕೊಟ್ಟಿತು.

ನಾವು ರೈಲು ನಿಲ್ದಾಣ ತಲಪಿದಾಗ ೭ ಗಂಟೆ. ರೈಲು ನಮ್ಮನ್ನು ಸ್ವಾಗತಿಸಿ ಒಳಗೆ ಬರಮಾಡಿಕೊಂಡಿತು! ರೈಲು ಹೊರಡುವಾಗ ರಾತ್ರಿ ೯.೩೦ ಗಂಟೆ. ಊಟಕ್ಕೆ ಪೂರಿ, ಸಾಗು, ಮೊಸರನ್ನ. 

  ಪ್ರಯಾಗ ರಾಜ್

ನಮ್ಮಈ ಪ್ರವಾಸದ  ಕೊನೆಯ ತಾಣ ಪ್ರಯಾಗರಾಜ್. ತಾರೀಕು ೩-೪-೨೦೨೨ರಂದು ಪ್ರಯಾಗ ತಲಪುವಾಗ ಬೆಳಗ್ಗೆ ೫ ಗಂಟೆ. ೮ ಗಂಟೆವರೆಗೂ ರೈಲಲ್ಲೇ ಕಾಲಕ್ಷೇಪ. ತಿಂಡಿ ಸಿಹಿ ಪೊಂಗಲ್, ಚಿತ್ರಾನ್ನ ತಿಂದ ಬಳಿಕವಷ್ಟೇ ಇಳಿಯಲು ಅನುಮತಿ.

 ತ್ರಿವೇಣೀ ಸಂಗಮ

ರೈಲಿಳಿದು ನಮ್ಮನ್ನು ತ್ರಿವೇಣಿಸಂಗಮಕ್ಕೆ ಹೋಗಲು ನದಿ ಬುಡದವರೆಗೆ  ಬಸ್ಸಿನಲ್ಲಿ ಬಿಟ್ಟರು.

ನಾವು ದೋಣಿ ಏರಿದೆವು. ದೋಣಿ ಬಾಡಿಗೆಯೂ ರೈಲ್ವೇಯವರದೇ. ಒಂದು ದೋಣಿಯಲ್ಲಿ ೧೦ ಮಂದಿಗೆ ಅವಕಾಶ. ಗಂಗಾ ಯಮುನಾ ಸರಸ್ವತೀ ನದಿ ಸಂಗಮವಾಗುವ ಸ್ಥಳದಲ್ಲಿ ದೋಣಿ ನಿಲ್ಲಿಸಿದರು.

ಅಲ್ಲಿ ಇನ್ನೊಂದು ದೋಣಿಗೆ ದಾಟಿ ಅಲ್ಲಿ ಗಂಗೆಗೆ ತರ್ಪಣ ಬಿಡಬಹುದು, ಪೂಜೆ ಸಲ್ಲಿಸಬಹುದು. ವೇಣಿದಾನ ನೀಡಬಹುದು. ಸಕಲ ಪೂಜಾ ಕೈಂಕರ್ಯನಡೆಸಲು ವ್ಯವಸ್ಥೆ ಇದೆ. ಒಬ್ಬರು ಪುರೋಹಿತರಿದ್ಡಾರೆ. ನಾವು ಇಷ್ಟಾನುಸಾರ ದಕ್ಷಿಣೆ ಕೊಟ್ಟು(ಇಷ್ಟೇ ಕೊಡಿ ಎಂದು ಕೇಳುವುದಿಲ್ಲ,) ನದಿಗೆ ತೆಂಗು, ಹಾಲು ಅರ್ಪಿಸಿ ನದಿನೀರಲ್ಲಿ ಮಿಂದು ಖುಷಿಪಟ್ಟೆವು. ಈಜು ಬರುವವರು ನದಿಗೆ ಇಳಿದು ಮೀಯಬಹುದು. ಈಜು ಬರದಿದ್ದವರಿಗೆ ಒಂದು ಪಾತ್ರೆಯಲ್ಲಿ ನೀರುಮೊಗೆದು ತಲೆಗೆ ಸುರುದುಕೊಳ್ಳುವ ವ್ಯವಸ್ಥೆ. ಅನಂತ ಚೆನ್ನಾಗಿ ಈಜು ಹೊಡೆದು ಮೇಲೆ ಬಂದ.  

 ದೋಣಿಯಲ್ಲಿ ಬಟ್ಟೆ ಮರೆ ಮಾಡಿ ಒದ್ದೆಬಟ್ಟೆ ಬದಲಾಯಿಸಿಕೊಂಡೆವು.  ಗಂಗಾ ಯಮುನಾ ನದಿಗಳು ರಭಸದಿಂದ ಹರಿಯುತ್ತಲಿತ್ತು. ಸರಸ್ವತಿ ನದಿ ಗುಪ್ತಗಾಮಿನಿಯಾಗಿ ಹರಿಯುವುದು.

ಬ್ರಹ್ಮ ಯಾಗ ಮಾಡಿದ ಸ್ಥಳವೇ ಪ್ರಯಾಗ ಎಂದು ಪ್ರತೀತಿ. ಇಲ್ಲಿ ಪ್ರತೀ ೧೨ ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ೧೯೪೯ರಲ್ಲಿ ಮಹಾತ್ಮಾ ಗಾಂಧಿಯವರ ಚಿತಾಭಸ್ಮವನ್ನು ತ್ರಿವೇಣೀಸಂಗಮದಲ್ಲಿ ವಿಸರ್ಜಿಸಲಾಗಿ ತ್ತಂತೆ.

 ನಾವು ಗಂಗಾಪೂಜೆಗೆ ಪುರೋಹಿತರಿಗೆ ೨೦೦ ರೂ. ಹಾಲಿನವನಿಗೆ ರೂ. ೫೦, ತೆಂಗಿನಕಾಯಿಯವನಿಗೆ ರೂ. ೧೦೦, ನಮ್ಮ ದೋಣಿ ನಡೆಸಿದವನಿಗೆ ರೂ.೫೦೦ ಕೊಟ್ಟೆವು.

  ನದಿ ಬಹಳ ಚೊಕ್ಕವಾಗಿದೆ. ಈಗ ನದಿಗೆ ಹಳೆಬಟ್ಟೆ ಹಾಕಲು ಅನುಮತಿ ಇಲ್ಲವಂತೆ. ಮೊದಲೆಲ್ಲಾ ಪೂಜೆ ಮಾಡಿ ಒದ್ದೆಯಾದ ಬಟ್ಟೆಯನ್ನು ನದಿಗೆ ಎಸೆಯುತ್ತಿದ್ದರಂತೆ. ಈಗ ದೋಣಿ ನಡೆಸುವವರಿಗೇ ಕೊಟ್ಟರೆ ತೆಗೆದುಕೊಳ್ಳುತ್ತಾರೆ. ಅನಂತ ಹಾಗೂ ದಾಮೋದರ ಕಿಣಿ ಅವರು ಧರಿಸಿದ ಒದ್ದೆಬಟ್ಟೆ ಅವನಿಗೆ ಕೊಟ್ಟರು.

೧೦.೨೦ಕ್ಕೆ ವಾಪಾಸು ದಡಕ್ಕೆ ಬಂದೆವು.  ಸರಿಯಾದ ಮಾಹಿತಿ ಇಲ್ಲದೆ ಎಲ್ಲಿಗೂ ಹೋಗಲಾಗದೆ ಅಲ್ಲೇ ಬಿಸಿಲಲ್ಲಿ ಸೆಖೆಯಿಂದ  ಒದ್ದಾಡಿದೆವು. ಐಸ್ಕ್ರೀಂ, ಸೌತೆಕಾಯಿ ತಿನ್ನುತ್ತ ಕಾಲ ಕಳೆದೆವು. ಅಂತೂ ೧೨.೧೫ಕ್ಕೆ ಎಲ್ಲರೂ ಬಂದು ಸೇರಿದಾಗ ಬಸ್ ಹೊರಟು ರೈಲು ನಿಲ್ದಾಣಕ್ಕೆ ನಮ್ಮನ್ನು ಹಾಕಿತು.

 ಪ್ರಯಾಗರಾಜ್ ಗೆ ಟಾಟಾ

ರೈಲುನಿಲ್ದಾಣದಲ್ಲಿ ೮೦೦ ಮಂದಿ ಕೂತು ನಿಂತು ನಿದ್ದೆ ತೂಗಿ, ಸೆಖೆಗೆ ಬಸವಳಿದು ಕಾಲಕಳೆದಾಗುವಾಗ ೨ ಗಂಟೆಗೆ ಅಂತೂ ಇಂತೂ ರೈಲು ಬಂತು. ರೈಲೇರಿ ಕೂತ ಕೂಡಲೇ ಅನ್ನಪೂರ್ಣರು ಬಂದು ಉಟ (ಅನ್ನ, ಸಾರು, ಸಾಂಬಾರು, ಮಜ್ಜಿಗೆ, ಹಪ್ಪಳ, ಅಕ್ಕಿ ಪಾಯಸ) ಬಡಿಸಿದರು.

ಸದ್ಯ ರೈಲು ಹೊರಟಿತು ಎಂದು ಸಂತಸ ಪಡುವಷ್ಟರಲ್ಲಿ ಸ್ವಲ್ಪ ಮುಂದೆ ಚಲಿಸಿ ಇನ್ನೊಂದು ನಿಲ್ದಾಣದಲ್ಲಿ ಟಿಕಾಣಿ ಹೂಡಿತು. ಅಲ್ಲಿ ನಿಂತ ರೈಲು ಸಂಜೆ ೬ ಗಂಟೆಗೆ ಹೊರಟಿತು. ಮುಂದೆ ಕೆಲ ನಿಲ್ದಾಣಗಳಲ್ಲೂ ನಿಂತೂ ಹೀಗೆ ಅಲ್ಲಲ್ಲಿ ನಿಂತು ಹೊರಡುತ್ತಲಿತ್ತು. ಹಸಿರು ನಿಶಾನೆ ಸಿಗಲು ಬಹಳ ಕಷ್ಟ. ರೈಲು ನಿಂತ ಕೂಡಲೇ ಒಳಗಿದ್ದವರು ಸೆಖೆಗೆ ಒಡ್ದಡುವಂತಾಗುತ್ತಲಿತ್ತು. ಕಾಲಕಾಲಕ್ಕೆ ಹೊಟ್ಟೆಗೆ ಏನೂ ಕೊರತೆಯಾಗದಂತೆ ರೈಲಿನ ಬಾಣಸಿಗರು ಹಾಗೂ ಬಡಿಸುವ ಮಂದಿ ಬಹಳ ಮುತುವರ್ಜಿಯಿಂದ ನೋಡಿಕೊಂಡಿದ್ದರು. ರಾತ್ರೆ ಊಟಕ್ಕೆ ಉಪ್ಪಿಟ್ಟು, ಬದನೆ ಗಸಿ, ಅನ್ನ ಮಜ್ಜಿಗೆ, ಉಪ್ಪಿನಕಾಯಿ ಬಡಿಸಿದರು. ನಾನು ರಾತ್ರೆಯ ಈ ಊಟ ಮಾಡಲಿಲ್ಲ. ನಾವು ಬೇಗನೇ ಮಲಗಿದೆವು.

ಬೆಂಗಳೂರಿನೆಡೆಗೆ ಗಮನ

 ತಾರೀಕು ೪-೪-೨೦೨೨ರಂದು ಬೆಳಗ್ಗೆ ೬.೩೦ಗೆ ಎದ್ದು ಆಂಧ್ರ ಗಡಿಗೆ ಬಂದಿದ್ದೇವೋ ಎಂದು ನೋಡಿದರೆ ಗೋಧಿ ಗದ್ದೆಯೇ ಕಾಣುತ್ತಲಿತ್ತು. ಇನ್ನೂ ಒಂದು ದಿನವಿಡೀ ರೈಲಲ್ಲಿ ಕಾಲ ಕಳೆಯಬೇಕು ಎಂಬ ಭಾವದಿಂದ ಬೇಸರಹೊತ್ತ ಮನಕ್ಕೆ ತಿಂಡಿ ಬಡಿಸಿ ಸಂತೃಪ್ತಿ ಪಡಿಸಿದರು! ರಾಗಿ ಶ್ಯಾವಿಗೆ, ಇಡ್ಲಿ ಸಾಂಬಾರ್, ಕೇಸರಿಭಾತ್. ಇಡ್ಲಿ ಇರುವಾಗಲೆಲ್ಲ ನಾನು ರಾಗಿ ಶ್ಯಾವಿಗೆಗೆ ಚಟ್ನಿಪುಡಿ ಬೆರೆಸಿ ತಿನ್ನುತ್ತಲಿದ್ದೆ.

  ಗೋಧಿ ಗದ್ದೆಯ ಸಾಲು ಹಿಂದೆ ಸರಿದು ಭತ್ತದ ಗದ್ದೆ ಕಂಡಾಗ ನಮ್ಮೂರಿಗೆ ಹತ್ತಿರ ಬರುತ್ತಲಿದ್ದೇವೆಯೊ ಎಂಬ ಆಶಾಭಾವ  ಹಣಕುತ್ತಿತ್ತು.

   ರೈಲ್ವೇ ಸಿಬ್ಬಂದಿಯಲ್ಲಿ ಪಟ ತೆಗೆಯುವವರಿದ್ದರು. ಅವರು ಪ್ರತೀ ಬೋಗಿಗೂ ಹೋಗಿ ಈ ಪ್ರವಾಸದ ಬಗ್ಗೆ ಪ್ರವಾಸಿಗರ ಅನುಭವಗಳನ್ನು ದಾಖಲಿಸಿಕೊಂಡರು. ನಮ್ಮಲ್ಲಿ ಭಾವ ತಮ್ಮ ಅನುಭವವನ್ನು ಸವಿಸ್ತಾರವಾಗಿ ಹೇಳಿದರು.

 ಹೊತ್ತು ಕಳೆಯಲು ಅಂತ್ಯಾಕ್ಷರಿ ಪ್ರಾರಂಭಿಸಿದರು. ತಂಗಿ, ಅಕ್ಕನೂ ಅವರೊಡನೆ ಸೇರಿಕೊಂಡರು. ಪದ್ಯ ಕೇಳುತ್ತ ಕೂತೆವು. ಹೀಗೆ ಸಮಯ ಸಾಗಲು, ಮಧ್ಯಾಹ್ನದ ಊಟ (ಅನ್ನ, ಆಲೂ ಪಲ್ಯ, ಸಾಂಬಾರ್, ಸಾರು, ಹಪ್ಪಳ, ಮಜ್ಜಿಗೆ ಉಪ್ಪಿನಕಾಯಿ) ಮಾಡಿ ನಿದ್ದೆ ಹೊಡೆದೆವು.

  ಭಜನೆ -ಕಾಲಕ್ಷೇಪ

ತ್ರಿವೇಣಿ ಸಂಗಮದಲ್ಲಿ ತಾಳ ತೆಗೆದುಕೊಂಡಿದ್ದೆವು. ರೈಲಲ್ಲಿ ಅದರ ಸದುಪಯೋಗವಾಯಿತು. ಸಂಜೆ ಹೊತ್ತು ಸುಮನ, ಹಾಗೂ ದಾಮೋದರ ಕಿಣಿ, ಸವಿತ, ಮಂಗಲ, ಲಕ್ಷ್ಮೀ ಎಲ್ಲ ಸೇರಿ ಒಂದು ಗಂಟೆ ತಾಳ ತಟ್ಟುತ್ತ ಸುಶ್ರಾವ್ಯವಾಗಿ ಭಜನೆ ಹಾಡಿದರು. ಹಾಡದ ನಾವು ಹಾಡು ಕೇಳುತ್ತ ತಲೆದೂಗುತ್ತ ಕೂತೆವು. ಅಷ್ಟರಲ್ಲಿ ರಾತ್ರೆ ಊಟ (ಚಪಾತಿ, ಬಟಣಿ ಗಸಿ, ಅನ್ನ ಮಜ್ಜಿಗೆ, ಉಪ್ಪಿನಕಾಯಿ) ಬಂತು. ಹೊಟ್ಟೆ ಪೂಜೆಯೂ ಭರ್ಜರಿಯಾಗಿಯೇ ನಡೆಯಿತು.

  ಆಂಧ್ರ ಪ್ರವೇಶ

ತಾರೀಕು ೫-೪-೨೦೨೨ರಂದು ಬೆಳಗ್ಗೆ ಎದ್ದು ನೋಡಿದಾಗ ಇನ್ನೂ ಆಂಧ್ರ ಗಡಿ ದಾಟಿರಲಿಲ್ಲ. ತಿಂಡಿ (ಪೊಂಗಲ್, ಪಕೋಡ, ಕೇಸರಿಭಾತ್) ತಿಂದು ಹೊಟ್ಟೆ ಗಟ್ಟಿಯಾಗಿ ನಮ್ಮ ಪಕ್ಕದ ವಿಭಾಗದವರೂ ನಮ್ಮವರೂ ಸೇರಿ ಪದಬಂಡಿ ಆಟ ಆಡಿದರು. ಸೊಗಸಾದ ಚಲನಚಿತ್ರ ಗೀತೆ ಕೇಳುತ್ತ ಕೂತಾಗ  ಸಮಯ ಸರಿದದ್ದೇ ತಿಳಿಯಲಿಲ್ಲ. ದಾವಣಗೆರೆಯ ಬಸವರಾಜು ಅವರು ಬಲು ಆತ್ಮೀಯವಾಗಿ ನಮ್ಮೊಡನೆ ಮಾತಾಡುತ್ತಲಿದ್ದರು. ಅವರೂ ಅವರ ತಮ್ಮ ಗಂಗಾಧರ ಜೊತೆಗೂಡಿ ಪ್ರವಾಸ ಬಂದಿದ್ದರು. ನಮ್ಮೊಡನೆ ಪಟ ತೆಗೆಸಿಕೊಂಡರು. ಅಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಊಟ (ಹುಳಿಯನ್ನ, ಕೊಕನಟ್ ರೈಸ್, ಚಟ್ನಿ, ಹಪ್ಪಳ ಬಡಿಸಿದರು. ಪೊಗದಸ್ತಾಗಿ ಊಟ ಮುಗಿಸುತ್ತಿದ್ದಂತೆ ೨.೨೦ಕ್ಕೆ ಯಲಹಂಕ ರೈಲು ನಿಲ್ದಾಣ ತಲಪಿಯೇ ಬಿಟ್ಟೆವು. ಹುರೆ ಎಂದು ಎಲ್ಲರಿಗೂ ಟಾಟಾ ಮಾಡಿ ರೈಲಿಳಿದು ಹೊರಗೆ ಬಂದೆವು.

ಮರಳಿ ಮೈಸೂರು

ಉಬರ್ ಕಾರು ಬಾಡಿಗೆಗೆ ಮಾಡಿಕೊಂಡು ನಾವು ೩.೩೦ಕ್ಕೆ ಹೊರಟು ಮೈಸೂರು ತಲಪಿದಾಗ ೭ ಗಂಟೆ ಆಗಿತ್ತು. ಅಲ್ಲಿಗೆ ನಮ್ಮ ೧೧ ದಿನದ ಪಯಣ ಯಶಸ್ವಿಯಾಗಿ ಮುಗಿದಿತ್ತು. ನಮಗೆ ಸರಿ ಸುಮಾರು ತಲಾ ರೂ.೧೯೦೦೦ ಖರ್ಚಾಗಿತ್ತು.

   ಮುಗಿಸುವ ಮುನ್ನ

   ಒಟ್ಟಿನಲ್ಲಿ ನಮ್ಮ ಈ ಯಾತ್ರೆ ಬಲುಕಾಲ ನೆನಪಿನಲ್ಲಿ ಉಳಿಯುವಂತದು. ನಮ್ಮ ಬೋಗಿಗೆ ಅಷ್ಟೂ ದಿನವೂ ಊಟ ಬಡಿಸಿದವರು ಅಂಡಮಾನಿನ ಸಿಂಘಾರಾಮ್, ಮದನಕುಮಾರ, ಕರುಣಾಕರ. ನಾವು ಅವರ ಮನೆಗೆ ಬಂದ ನೆಂಟರೇನೋ ಎಂಬಂತೆ ಕಕ್ಕುಲತೆಯಿಂದ ಮಾತಾಡಿಸಿ ಪ್ರೀತಿಯಿಂದ ಊಟ ಬಡಿಸುತ್ತಲ್ಲಿದ್ದರು. ಎಲ್ಲ ಕೆಲಸಗಾರರಿಗೂ ನಮ್ಮ ತಂಡದ ವತಿಯಿಂದ ಭಕ್ಷೀಸು ಕೊಡುವ ಏರ್ಪಾಡು ಮಾಡಿದ್ದೆವು. 

   ಅಷ್ಟು ದಿನದ ರೈಲು ಪಯಣದಲ್ಲಿ ನಮಗೆ ಸೆಖೆ ಬಿಟ್ಟರೆ ಬೇರೆ ಏನೂ ತೊಂದರೆಯಾಗಲಿಲ್ಲ. ಪಾಯಿಖಾನೆ ಅತ್ಯಂತ ಸ್ವಚ್ಛವಾಗಿ ಇತ್ತು. ಪಕ್ಕದ ಬೋಗಿಯವರಿಗೂ ವಾಸನೆ ಬರುತ್ತಲಿರಲಿಲ್ಲ.  ಪ್ರತಿ ದಿನ ಎರಡು ಸಲ ಪಿನಾಯಿಲ್ ಹಾಕಿ ಸ್ವಚ್ಛಗೊಳಿಸುತ್ತಲಿದ್ದರು. ಪಾಯಿಖಾನೆಯಲ್ಲಿ ನೀರು ಕಡಿಮೆಯಾದಾಗಲೆಲ್ಲ ಟ್ಯಾಂಕ್ ಭರ್ತಿ ಮಾಡುತ್ತಲಿದ್ದರು. ಪ್ರತೀ ದಿನ ತಿಂಡಿ ಊಟದ ಬಳಿಕ ರೈಲನ್ನು ಸ್ವಚ್ಛಗೊಳಿಸುತ್ತಲಿದ್ದರು. ರೈಲಿನ ಸಿಬ್ಬಂದಿ ವರ್ಗದವರು ನಮ್ಮೊಡನೆ ಆತ್ಮೀಯತೆಯಿಂದ ಇದ್ದರು. ಊಟ ತಿಂಡಿ ಅಂತೂ ಪ್ರತೀದಿನ ಬಹಳ ರುಚಿಯಾಗಿ ಆರೋಗ್ಯಕರವಾಗಿತ್ತು. ಹುಳಿ ಉಪ್ಪು, ಎಣ್ಣೆ ಹಿತಮಿತವಾಗಿತ್ತು. ಮಧುರೆ ವಿಭಾಗದ ವತಿಯಿಂದ ಬಾಣಸಿಗರು ಅಡುಗೆ ತಯಾರಿಸಿದ್ದಂತೆ.

ಸಿಂಘಾರಾಂ
  ಇಷ್ಟು ಜನರ ಯಾತ್ರೆ ಸಂಘಟಿಸುವುದು ಬಹಳ ದೊಡ್ದ ಕೆಲಸ. ಒಟ್ಟಿಗೆ ಯಾತ್ರೆ ಹೊರಟಾಗ ಆದಷ್ಟು ಸಂಘಟಕರೊಂದಿಗೆ ಸಹಕರಿಸಬೇಕು. ಸಣ್ಣಪುಟ್ಟ ತೊಂದರೆಯನ್ನು ದೊಡ್ಡ ವಿಷಯವಾಗಿ ಮಾಡಿ ಜಗಳಾಡದೆ ಹೊಂದಿಕೊಳ್ಳುವ ಮಾನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಒಮ್ಮೆಯಾದರೂ ಇಂಥ ಯಾತ್ರೆ ಮಾಡಲೇಬೇಕು. ಎಂತೆಂಥ ಜನರಿರುತ್ತಾರೆ ಎಂಬ ಅನುಭವ ಆಗುತ್ತದೆ ಹಾಗೂ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಲು ಅನುಕೂಲವಾದೀತು.

ನಮಗಾದ ಸಣ್ಣಪುಟ್ಟ ತೊಂದರೆ ಎಂದರೆ ಸರಿಯಾಗಿ ಸಿಗ್ನಲ್ ಸಿಗದೆ ಕೆಲವು ಕಡೆ ಘಂಟೆಗಟ್ಟಲೆ ರೈಲು ಹೊರಡದೆ ನಿಲ್ಲುತ್ತಿದ್ದುದು, ಅದರಿಂದ ವಾಪಾಸು ಊರು ತಲಪುವಾಗ ವಿಳಂಬವಾದದ್ದು, ಸೆಖೆಯ ವಾತಾವರಣ. ಬಾಕಿ ಬೇರೇನೂ ಸಮಸ್ಯೆಯಾಗಲಿಲ್ಲ. 

 ಕಡಿಮೆ ಖರ್ಚಿನಲ್ಲಿ ಆದಷ್ಟು ಉತ್ತಮ ಸವಲತ್ತು ಕೊಟ್ಟು ಅಚ್ಚುಕಟ್ಟಾಗಿ ಪ್ರವಾಸ ಯೋಜಿಸಿದ ಐಆರ್ಸಿಟಿಸಿ ರೈಲ್ವೇಯ ಸಿಬ್ಬಂದಿ ವರ್ಗದವರೆಲ್ಲರಿಗೂ ನಮ್ಮ ತಂಡದ ಪರವಾಗಿ ಅನಂತಾನಂತ ಧನ್ಯವಾದ  

 

 

 

 

 

 

 

 

 

 

 

 

 

6 ಕಾಮೆಂಟ್‌ಗಳು:

  1. ಸೊಗಸಾಗಿ ಬಂದಿದೆ ಪ್ರವಾಸ ಕಥನ.👌👌👍👍🙏🙏

    ಪ್ರತ್ಯುತ್ತರಅಳಿಸಿ
  2. ಚನ್ನಾಗಿತ್ತು. ಈ ರೈಲು ವರ್ಷ ಇಡೀ ಇರುತ್ತಾ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದ. ವರ್ಷದಲ್ಲಿ ಕೆಲವು ಬ್ಯಾಚ್ ಕರೆದೊಯ್ಯುತ್ತಾರೆ ಎಂದು ತೋರುತ್ತದೆ.

      ಅಳಿಸಿ