ಶನಿವಾರ, ಅಕ್ಟೋಬರ್ 15, 2022

ಪುಣೆಯ ಕೋಟೆಗೆ ಲಗ್ಗೆ - ಹೆಜ್ಜೆ- ೨

ಟಿಕೊನಾಕೋಟೆ (Tikona,Tikona peth tal , dist. mulshi, maharashtra 412108)
  ತಾರೀಕು ೧೦.೧೦.೨೨ರಂದು ಬೆಳಗ್ಗೆ ಗಂಟೆಗೆ ತಯಾರಾಗಿ, ಬುತ್ತಿಗೆ ಪೊಂಗಲ್ ಹಾಕಿಸಿಕೊಂಡು .೧೫ಕ್ಕೆ ಹೊರಟು ಟಿಕೊನಾ ಕೋಟೆ ಕಡೆಗೆ ಹೊರಟೆವು.
ಹೋಗುವ ದಾರಿಯಲ್ಲಿ ತುಂಗಿ ಕೋಟೆಯ ಕೆಳಗೆ ಪಾವ್ನಾ ನದಿ ಹಾಗೂ ಅದಕ್ಕೆ ಕಟ್ಟಿರುವ ಅಣೆಕಟ್ಟು ಕಾಣುತ್ತದೆ. ಪೂನಾದ ಜನತೆಗೆ ಕುಡಿಯುವ ನೀರು ಪಾವ್ನಾ ಅಣೆಕಟ್ಟೆಯಿಂದಲೇ ಸರಬರಾಜಾಗುತ್ತದೆ. ತುಂಗಿ ಕೋಟೆ ಕೆಳಗೆ ಸುತ್ತಮುತ್ತ ಬಾಲಿವುಡ್ ಮಂದಿಯ ಮನೆ  ತೋರಿಸಿದರು.ದೂರದಲ್ಲಿ ಕಾಣುವ ಸಂಗೀತ ಬಿಜಲಾನಿ ಮನೆಯನ್ನು  ತೋರಿಸಿದರು. ಬಾಲಿವುಡ್ ಮಂದಿ ಇಲ್ಲಿ ಭೂಮಿ ಖರೀದಿಸಿ ಬೆಲೆ ಗರಿಷ್ಠ ಮಟ್ಟ ಮುಟ್ಟಿದೆ ಎಂದು ಸೋಪನ್ ಹೇಳಿದರು. ತುಂಗಿ ಕೋಟೆ ನೋಡುವಾಗ ಅದನ್ನು ಏರಬೇಕು ಎಂಬ ಆಸೆ ನಮಗೆಲ್ಲರಿಗೂ ಆಯಿತು!  ಅಷ್ಟು ಸೊಗಾಸಾಗಿ ಕಾಣುತ್ತಲಿತ್ತು.
      ಟಿಕೊನಾ ಕೋಟೆ ಹತ್ತುವ ಮುನ್ನ ಕೆಳಗೆ ಇದ್ದ ಭೈರವೇಶ್ವರ ದೇಗುಲದ ಬಳಿ .೧೫ಕ್ಕೆ ತಿಂಡಿ ಪೊಂಗಲ್ ತಿಂದೆವು. ಚಹಾ ವಿತರಣೆಯಾಯಿತು.

     ೮.೧೫ಕ್ಕೆ ನಾವು ಟಿಕೊನಾ ಕೋಟೆ ಹತ್ತಲು ಸುರು ಮಾಡಿದೆವು. ಕೋಟೆಯನ್ನು ಏರುತ್ತ ಹೋದಂತೆ ದ್ವಾರಗಳಿಗೆ ದೊಡ್ಡ ದೊಡ್ದ ಬಾಗಿಲುಗಳು, ಮುಂದೆ ತ್ರಯಂಬಕೇಶ್ವರ ದೇಗುಲ, ಏಳು ನೀರಿನ ತೊಟ್ಟಿಗಳು, ಕೆಲವು ಗುಹೆಗಳು, ವೀರ ಮಾರುತಿಯ ವಿಗ್ರಹ ಎದುರಾಗುತ್ತವೆ. 



 ಟಿಕೊನಾ ಕೋಟೆ ಅರ್ಧಭಾಗ ಸಾಮಾನ್ಯ ಮೆಟ್ಟಲುಗಳಿದ್ದುವು. ಆರಾಮವಾಗಿ ಏರಬಹುದು. ಆದರೆ ಮುಂದೆ ೯೦ಡಿಗ್ರಿ ಮೆಟ್ಟಲು. ಹಿಡಿದುಕೊಳ್ಳಲು ಎರಡೂ ಬದಿಗೂ ತಂತಿ ಕಟ್ಟಿದ್ದಾರೆ. ಎಚ್ಚರದಿಂದ ಏರಬಹುದು. ನಾಲ್ಕೈದು ಮಂದಿ ಅದನ್ನು ಏರುವ ಸಾಹಸ ಮಾಡದೆ ಹಿಂದುಳಿದರು. ನಿಜಕ್ಕೂ ಚಾರಣದ ನಿಜ ಅನುಭವ ಖುಷಿ ಈ ಕೋಟೆ ಹತ್ತಿದಾಗ ಲಭಿಸಿತು. ಸಾಕಷ್ಟು  ಏದುಸಿರು ಬೆವರು ಹರಿಸಿದೆವು.

ಮೇಲೆ ಹತ್ತಿದಾಗ, ಅಲ್ಲಿ ಶಿವಾಜಿ ಧ್ವಜ ಹಾರಾಡುತ್ತಲಿತ್ತು. ವಿಶಾಲವಾದ ಸ್ಥಳ. ಅಲ್ಲಿಂದ ಸುತ್ತ ಕಾಣುವ ಬೆಟ್ಟಗಳನ್ನು ನೋಡುವ ಖುಷಿಯಿಂದ ಹತ್ತಿದ ಆಯಾಸವೆಲ್ಲ ಮಾಯ. ಹಸುರು ತುಂಬಿದ ಬೆಟ್ಟಗಳು ಅದರ ಕೆಳಗೆ ಹೊಲಗಳು, ಮನೆಗಳು, ನದಿ ಇಂಥ ದೃಶ್ಯ ನೋಡುವ ಕಣ್ಮನ ಧನ್ಯ.

ಕೋಟೆ ಮೇಲಿಂದ ತುಂಗಿ ಕೋಟೆ ಬಲು ಸೊಗಸಾಗಿ ಕಾಣುತ್ತಲಿತ್ತು.ನೀರಿನ ಮೇಲೆ ಪ್ರತಿಬಿಂಬ ಚೆನ್ನಾಗಿ ಕಾಣುತ್ತಲಿತ್ತು.



ಟಿಕೋನಾವನ್ನು ವಿತಂಡಗಡ ಎಂದೂ ಕರೆಯುತ್ತಾರೆ. ಪುಣೆಯಿಂದ ೬೦ ಕಿಮೀ ದೂರದಲ್ಲಿ ಕಾಮೈಟ್ ಬಳಿ ಇದೆ. ೩೫೮೦ ಅಡಿ ಎತ್ತರದ ಈ ಬೆಟ್ಟ ಪಿರಮಿಡ್ ಆಕಾರದಲ್ಲಿದೆ. ಶಿವಾಜಿ ಮಹಾರಾಜರು, ೧೬೫೭ರಲ್ಲಿ ಕರ್ನಾಲಾ. ಲೋಹ್ಗಡ್, ಮಾಹುಲಿ, ಸೋಂಗಾಡ್, ತಾಲಾ ಮತ್ತು ವಿಸಾಪುರದ ಕೋಟೆಗಳೊಂದಿಗೆ ಟಿಕೋನಾ ಕೋಟೆಯನ್ನು ನಿಜಾಮರಿಂದ ವಶಪಡಿಸಿಕೊಂಡರು. 


ಅಲ್ಲಿ ಮುಕ್ಕಾಲು ಗಂಟೆ ಕಾಲ ಕಳೆದು ಬೆಟ್ಟ ಇಳಿದು ಕೆಳಗೆ ಬಂದಾಗ ೧೨.೪೫. ಅಲ್ಲಿ ಕೆಫೆಯೊಂದರಲ್ಲಿ ರುಚಿಕಟ್ಟಾದ ಊಟ (ಚಪಾತಿ, ಎರಡು ಬಗೆಯ ಕೂಟಕ, ಅನ್ನ, ದಾಲ್, ಸಂಡಿಗೆ)ಮಾಡಿದೆವು.

ಕೋರಿಗಡ ಕೋಟೆ (aamby valley city, Maharashtra 412108)
ಮೂರು
ಗಂಟೆಗೆ  ಹೊರಟು ಕೋರಿಗಡದ ಕಡೆಗೆ ಹೊರಟೆವು. ಮಳೆ ಸಣ್ಣದಾಗಿ ಬರುತ್ತಲಿತ್ತು. ಗಂಟೆಗೆ ಕೋರಿಗಡದ ಬಳಿ ಬಂದಾಗ, ಮಂಜು ಮುಸುಕಿತ್ತು. ಹಿಂದೆ ಇದ್ದವರಿಗೆ ಮುಂದಿನವರು ಕಾಣರು ಅಷ್ಟೂ ಮಂಜು. ಚಂದದ ದೃಶ್ಯ. ಹತ್ತುವುದ ಬೇಡವ ಎಂಬ ಜಿಜ್ಞಾಸೆ ಕಾಡಿತು. ನಮ್ಮ ಮಾರ್ಗದರ್ಶಿಗಳಿಗೆ ಹೋಗಲು ಮನಸ್ಸಿಲ್ಲ. ನಮಗೋ ನೋಡಲೇಬೇಕೆಂಬ ತುಡಿತ. ಹೋಗುವುದೆಂದು ತೀರ್ಮಾನಕ್ಕೆ ಬಂದೆವು. ಮೊದಲಿಗೆ ಸ್ವಲ್ಪ ದಾರಿ ತಪ್ಪಿತು. ಮತ್ತೆ ಸರಿ ದಾರಿ ಸಿಕ್ಕಿ ಸಾಗಿದೆವು. ಸುಮಾರು ೭೦೦ ಮೆಟ್ಟಲು ಏರಿದಾಗ ದೊಡ್ಡದಾದ ದಿಡ್ಡಿಬಾಗಿಲು ಎದುರಾಯಿತು. ಕೋಟೆ ಬಲು ಚೆನ್ನಾಗಿತ್ತು. ಮೇಲೆ ಬೃಹತ್ತಾದ ಸ್ಥಳ. ಶಿವ ದೇಗುಲವಿದೆ. ದೇವಾಲಯದ ಎದುರು ಫಿರಂಗಿಗಳು ಇವೆ. ಎರಡು ಸರೋವರಗಳೂ ಇವೆ. ಕೋಟೆಯ ತುದಿಯಲ್ಲಿ ಪರಿಧಿಯ ಉದ್ದಕ್ಕೂ ಸುಮಾರು ೨ಕಿಮೀ ನಡೆಯಬಹುದು.   ಅದಾಗತಾನೆ ತುಂತುರುಮಳೆ ನಿಂತು ಹವೆಯೂ ಬಲು ಚೆನ್ನಾಗಿತ್ತು.‌ ಅಲ್ಲಿ ತಂಡದ ಪಟ ತೆಗೆಸಿಕೊಂಡು .೩೦ಗೆ ಕೋಟೆ ಕೆಳಗೆ ಇಳಿಯಲು ತೊಡಗಿದೆವು.೧೫ಕ್ಕೆ ನಾವು ಕೆಲವರು ಕೆಳಗೆ ಬಂದೆವು. ನಮ್ಮ ಬಸ್ ಬಳಿಗೆ ತೆರಳಲು ಸ್ಥಳೀಯರ ನೆರವು ಪಡೆದು ಕತ್ತಲಾಗುವ ಮುನ್ನ ತಲಪಿದೆವು. ಕೆಲವರು ಮಳೆ, ಕತ್ತಲಾವರಿಸುವ ಸಮಯ ಆದಕಾರಣದಿಂದ ಬರಲು ಹಿಂಜರಿದು ಬಸ್ಸಲ್ಲೇ ಕೂತರು.




  ಕೋರೈಗಡ್, ಕುಮ್ವಾರಿಗಡ್ ಎಂದೆಲ್ಲ ಕರೆಯಲ್ಪಡುವ ಕೋರಿಗಡ್ ಪುಣೆ ಜಿಲ್ಲೆಯ ಲೋನಾವಾಲದಿಂದ ದಕ್ಷಿಣಕ್ಕೆ ೨೦ಕಿಮೀ ದೂರದಲ್ಲಿದೆ. ಸಮುದ್ರಮಟ್ಟದಿಂದ ೩೦೨೮ ಅಡಿ (೯೨೩ಮೀ) ಎತ್ತರದಲ್ಲಿದೆ. ಈ ಕೋಟೆಯನ್ನು ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರು ೧೬೫೭ರಲ್ಲಿ ಲೋಹಗಡ್, ವಿಸಾಪುರ್, ತುಂಗಿ ಮತ್ತು ಟಿಕೋನಾ ಕೋಟೆಗಳೊಂದಿಗೆ ತನ್ನ ರಾಜ್ಯಕ್ಕೆ ಸೇರಿಸಿಕೊಂಡರು. ೧೮೧೮ರಲ್ಲಿ ಈ ಕೋಟೆಯು ಬ್ರಿಟೀಷರ ಸ್ವಾಧೀನಕ್ಕೆ ಒಳಪಟ್ಟಿತು.



ಎರಡೂ ದಿನವೂ ಕೋಟೆಯ ದಾರಿಯಲ್ಲಿ ಕಾಡು ಹೂವುಗಳ ಸೊಬಗು ಕಂಡೆವು. ಹೂಗಳಿಗೆ ಚಿಟ್ಟೆಗಳ ಹಾರಾಟವೂ ಸೊಗಸಾಗಿತ್ತು. ಕೋರಿಗಡ ಹತ್ತುವಾಗ ಗಿಡದ ಸಂದಿಯಲ್ಲಿ ಕೆಲವು ಮೊಟ್ಟೆಗಳೂ ಕಂಡಿತು. ಹಾವುಗಳೂ ಕಾಣಲು ಸಿಕ್ಕಿದುವಂತೆ.


ಲೋನಾವಾಲ

ಅಲ್ಲಿಂದ ನಾವು ಲೋನಾವಾಲಕ್ಕೆ ಹೋದೆವು. ಅಲ್ಲಿ ರಾತ್ರಿ .೪೫ಕ್ಕೆ ವಡಾಪಾವ್ ತಿಂದೆವು.‌ ಚಹಾ ಸೇವನೆಯಾಯಿತು. ಲೋನಾವಾಲ ಒಂದು ಗಿರಿಧಾಮ. ಪ್ರವಾಸೋದ್ಯಮ ತಾಣ. ನಮಗೆ ಸಮಯವಿಲ್ಲದ ಕಾರಣ ಏನೂ ನೋಡಲಾಗಲಿಲ್ಲ. ಈ ತಾಣ ಚಿಕ್ಕಿ ತಯಾರಿಯಲ್ಲಿ ಪ್ರಸಿದ್ಧಿ ಪಡೆದಿದೆ. ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಚಿಕ್ಕಿ ಅಂಗಡಿಗಳು. ವಿವಿಧ ಬಗೆಯ ಚಿಕ್ಕಿಗಳು. ಚಿಕ್ಕಿ ಬಲು ರುಚಿಯಾಗಿತ್ತು. ನಾವೂ ಅಲ್ಲಿ ಚಿಕ್ಕಿ ಖರೀದಿಸಿದೆವು

       ಅಲ್ಲಿಂದ .೧೫ ಗಂಟೆಗೆ ಹೊರಟು ರಾತ್ರೆ .೪೫ಕ್ಕೆ ಯೂಥ್ ಹಾಸ್ಟೆಲ್ ತಲಪಿ ಸ್ನಾನವಾಗಿ ಊಟ. ಪಲಾವ್, ಅನ್ನ ದಾಲ್,ಪಲ್ಯ, ಜಿಲೇಬಿ. ಊಟವಾಗಿ ಸಮಾರೋಪ ಸಮಾರಂಭ. ಚಾರಣದ ಸಂದರ್ಭದಲ್ಲಿ ಸಹಾಯ  ಮಾಡಿದವರಿಗೆ ಧನ್ಯವಾದ ಸಮರ್ಪಿಸಿದರು. ಚಾರಣದ ಬಗ್ಗೆ ತಮ್ಮ ಅನಿಸಿಕೆಗಳನ್ನು ಒಂದಿಬ್ಬರು ಹೇಳಿದರು. ಸಭೆ ಬರ್ಖಾಸ್ತಾಗಿ ನಾವು ಕೋಣೆಗೆ ಹಿಂದಿರುಗಿದೆವು.

ಮರಳಿ ಮನೆಗೆ

ತಾರೀಕು ೧೧.೧೦.೨೨ರಂದು ಬೆಳಗ್ಗೆ ೩ ಗಂಟೆಗೆ ಎದ್ದು ತಯಾರಾಗಿ ೪ಕ್ಕೆ ಬಸ್, ವ್ಯಾನಿನಲ್ಲಿ ಹೊರಟು ಪುಣೆ ರೈಲು ನಿಲ್ದಾಣ ತಲಪಿದಾಗ .೩೦. ಸ್ವರ್ಣಜಯಂತಿ ರೈಲು ಯಾವ ಹಳಿಯಲ್ಲಿ ಬರುತ್ತದೆ ಎಂದು ನಮೂದಿಸಿರಲಿಲ್ಲ. ಕೊನೆ ಘಳಿಗೆಯಲ್ಲಿ ಒಂದನೇ ಹಳಿಯಲ್ಲೇ ಬರುತ್ತದೆ ಎಂದು  ಹಾಕಿದರು. ಅದರಿಂದ ಮೇಲೆ ಹತ್ತಿ ಸಾಗುವ ಪ್ರಮೇಯ ಬರಲಿಲ್ಲ. .೨೫ಕ್ಕೆ ಹೊರಡಬೇಕಾದ ರೈಲು .೫೦ಕ್ಕೆ ಹೊರಟಿತು. .೩೦ಗೆ ತಿಂಡಿ ಇಡ್ಲಿ ವಡೆ ಕಾಫಿ ಚಹಾ ತಿಂದೆವು. ಹೊಟ್ಟೆದೇವರು ತೃಪ್ತಿಗೊಂಡಮೇಲೆ ನಿದ್ರಾದೇವಿ ತಲೆಗೆ ಕೈಇಟ್ಟ ಕಾರಣ ಮಲಗಿ ನಿದ್ರೆಗಿಳಿದೆವು.

೧೨ ಗಂಟೆಗೆ ತಂದ ತಿಂಡಿಗಳೆಲ್ಲ ಹಂಚಿಕೆ ಆಗಿ ಕೈ ಬಾಯಿಗೆ ಕೆಲಸ ಸಿಕ್ಕಿತು. ಮದ್ಯಾಹ್ನ ಗಂಟೆಗೆ  ಊಟ (ಚಪಾತಿ ಆಲೂ ಕರಿ.) ಮತ್ತೆ ಸುರುವಾದ ಅಂತ್ಯಾಕ್ಷರಿ, ಒಂದು ಪದ ಕೊಟ್ಟು ಅದಕ್ಕೆ ಹಾಡು. ಹಳೆಯ ಚಿತ್ರಗೀತೆಗಳು, ಭಕ್ತಿಗೀತೆಗಳು ಆಹಾ ಕೇಳಲು ಸೊಗಸು. ರಾತ್ರೆ ೧೦ರ ತನಕವೂ ಈ ತರಹದ ಚಟುವಟಿಕೆ ನಡೆಯಿತು. ಮಧ್ಯೆ ಮಧ್ಯೆ ಹೆಂಗಸರಿಂದ (ಚಂದವಾಗಿ ಅಲಂಕರಿಸಿಕೊಂಡು) ಬೆಕ್ಕಿನ ನಡಿಗೆ, ಗಂಡಸರಿಂದ ಅಬ್ಬರದ ಹಾಡಿಗೆ ರೈಲು ಅದುರುವಂತೆ ಕುಣಿತ ನಡೆಯಿತು. ಕುಣಿತಕ್ಕೆ ರೈಲಿನ ಹಳಿ ತಪ್ಪದೆ ಇದ್ದದ್ದು ನಮ್ಮ ಪುಣ್ಯ! ಹಾಡು ಕುಣಿತ, ನಗು ಇವುಗಳಿಂದ ಸಮಯ ಸರಿದದ್ದೇ ತಿಳಿಯಲಿಲ್ಲ. ಕುಣಿತವೂ ಒಂದು ಕಲೆ. ಅದು ಎಲ್ಲರಿಗೂ ಸಿದ್ದಿಸುವುದಿಲ್ಲ. ಉದಾಹರಣೆಗೆ: ನನ್ನಿಂದ ಹಾಗೆ ಕುಣಿಯಲು ಖಂಡಿತಾ ಸಾಧ್ಯವಿಲ್ಲ! ಸುಮಾರು ೨೦ ಗಂಟೆಗಳ ಕಾಲ ನಾವು ರೈಲಲ್ಲಿ ಇದ್ದೆವು.  ನಮ್ಮ ವಿಭಾಗದಲ್ಲಿ ರಾಜಸ್ಥಾನದ ಚೇತನ್ ಎಂಬವರು (ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಕೆಲಸದ ಸಲುವಾಗಿ) ಇದ್ದರು. ಹೀಗೂ ಪಯಣವನ್ನು ಸಾಗಿಸಬಹುದಲ್ಲ ಎಂದು ಅವರು ನಮ್ಮನ್ನು ನೋಡಿ ದಂಗುಬಡಿದರು. ಹಾಗೂ ಪ್ರೇರಣೆಗೊಂಡು ಯೂಥ್ ಹಾಸ್ಟೆಲ್ ಸದಸ್ಯರಾಗಲು ಮುಂದೆ ಬಂದರು. 
   ರೈಲು ಪಯಣದಲ್ಲಿ ಬೇಸರವೆಂಬುದೇ ಇಲ್ಲ. ಹೊರಗಿನ ದೃಶ್ಯಾವಳಿಗಳನ್ನು ನೋಡುತ್ತ ಕೂತರೆ ಸಮಯ ಸರಿದದ್ದೇ ತಿಳಿಯುವುದಿಲ್ಲ. ಗದ್ದೆಗಳ ಸೊಬಗು ಕಣ್ಣಿಗೆ ಬಲು ತಂಪು


    ಸಂಜೆ ವೇಳೆ ಚುರುಮರಿ ಮಾಡಿ ಹಂಚಿದರು. ಚುರುಮುರಿ ಬಹಳ ರುಚಿಯಾಗಿತ್ತು. ಚುರುಮುರಿ ಕೆಲಸದಲ್ಲಿ, (ಕೊತ್ತಂಬರಿ ಸೊಪ್ಪು, ಕ್ಯಾರೆಟ್, ಕೊಬ್ಬರಿ, ಈರುಳ್ಳಿ ತುರಿಯಲು ಹೆಚ್ಚಲು) ನಿರತರಾದ ಶೈಲಾ, ಚಂದ್ರಣ್ಣ, ಸುರೇಶ್, ಮಂಜುಳಾ,ದಿವ್ಯಾ ಬಳಗದವರಿಗೆ ಚುರುಮುರಿ ತಿಂದ ಸಹಚಾರಣಿಗರೆಲ್ಲರ ಪರವಾಗಿ ಧನ್ಯವಾದ.  ಎರಡೆರಡು ಸಲ ಚುರುಮುರಿ ಹಾಕಿಸಿಕೊಂಡು ತಿಂದದ್ದನ್ನು,  ನನ್ನ ತಿನ್ನುವ ಸಾಮರ್ಥ್ಯವನ್ನು ಬಾಲ್ಕನಿ ಮೇಲಿಂದ ನಂದಿತಾ, ಸುಮಲತಾ ನೋಡಿ ದಂಗುಬಡಿದರು ಎಂಬ ಗುಮಾನಿ ನನಗೆ ಬಂದಿದೆ! ರಾತ್ರೆ ಊಟಕ್ಕೆ ಮೊಸರನ್ನ, ಚಿತ್ರಾನ್ನ ಕೊಟ್ಟರು.  ೧೦.೩೦ಗೆ ನಿದ್ದೆ. 

                                    

   ಕೃತಜ್ಞತಾ ಸಮರ್ಪಣೆ

 ರೈಲಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರೆ ಊಟದ ಉಸ್ತುವಾರಿ ವಹಿಸಿ ರುಚಿಕಟ್ಟಾದ ಆಹಾರ ಒದಗಿಸಿದ ಸುರೇಶ್, ಈ ಚಾರಣದ ಕಾರ್ಯಕ್ರಮದ ಜವಾಬ್ದಾರಿ ವಹಿಸಿದ ಆಶೀಶ್ ಹಾಗೂ ಪರಶಿವಮೂರ್ತಿ, ಅವರಿಗೆ ಸಹಕಾರವಿತ್ತ ಸುರೇಶ್, ಉಮಾಶಂಕರ್, ಕಿಣಿ ಅವರೆಲ್ಲರಿಗೆ ನಮ್ಮ ಎಲ್ಲ ಸಹ ಚಾರಣಿಗರ ಪರವಾಗಿ ಧನ್ಯವಾದ. ಮಳವ್ಲಿಯ ಯೂಥ್ ಹಾಸ್ಟೆಲ್ ಸಿಬ್ಬಂದಿ (ನಾವು ಅವೇಳೆಯಲ್ಲಿ ಬಂದರೂ ಏನೊಂದು ಗೊಣಗಾಟವಿಲ್ಲದೆ ಬಿಸಿ ಬಿಸಿ ಊಟ ಹಾಕಿದ್ದಾರೆ) ವರ್ಗದವರಿಗೆ, ಕೈಯಾರೆ ತಿಂಡಿ ತಯಾರಿಸಿಅವನ್ನು ಹೊತ್ತು ತಂದು ಅಷ್ಟೂ ಜನರಿಗೆ ಹಂಚಿದ ಮಹಾನುಭಾವರಿಗೆ, ಹಣ್ಣು ಹಂಚಿದವರಿಗೆ,  ಪ್ರತೀ ದಿನ ಬೆಳಗ್ಗೆ ಚಾರಣ ಹೊರಡಲು ಕ್ಲುಪ್ತ ಸಮಯಕ್ಕೆ ಹೊರಟ ಹಾಗೂ ಅಷ್ಟೂ ದಿನವೂ ಒಂದೇ ಮನೆಯವರಂತೆ ಇದ್ದ ಸಹಚಾರಣಿಗರಿಗೆ ಧನ್ಯವಾದಗಳು.  ನಮ್ಮ ತಂಡದ ಛಾಯಾಚಿತ್ರಗಾರರೆಂದೇ ಬಿರುದಾಂಕಿತರಾದ ಸುಷ್ಮಾ (ಎಲ್ಲರ ಪಟಗಳನ್ನು ಬಹಳ ಖುಷಿಯಿಂದ ಕ್ಲಿಕ್ಕಿಸುತ್ತಿದ್ದರು), ಅವರಿಗೆ, ಬಸ್ಸಿನ ಚಾಲಕ ಅನಿಲ್ ಹಾಗೂ ವ್ಯಾನಿನ ಚಾಲಕ ಬಾಲು ಶೀತ್ಕಲ್. (ಇಬ್ಬರೂ  ಮೂರು ದಿನವೂ ಸಮಯಕ್ಕೆ ಸರಿಯಾಗಿ  ನಮ್ಮೊಂದಿಗೆ ಸಹಕರಿಸಿದ್ದರು.) ಅವರಿಬ್ಬರಿಗೂ ಮತ್ತು ಮಾರ್ಗದರ್ಶಿ ಸೋಪನ್ ಕೇನಟ್ ಅವರಿಗೆ ಧನ್ಯವಾದ. 

ಭಾರತದ ರೈಲ್ವೇಗೆ ಸೆಲ್ಯೂಟ್

ನಾವು ಮೈಸೂರು- ಪುಣೆ, ಪುಣೆ-ಮೈಸೂರು ಎಂದು ಎರಡು ದಿನ ಸ್ವರ್ಣಜಯಂತಿ ರೈಲಿನಲ್ಲಿ ಸುಮಾರು ೪೦ ಗಂಟೆಗಳ ಕಾಲ ಪಯಣಿಸಿದ್ದೆವು. ಪಾಯಿಖಾನೆಯಲ್ಲಿ ಸದಾ ನೀರಿನ ಸೌಕರ್ಯವಿದ್ದು, ಚೊಕ್ಕವಾಗಿತ್ತು.  ಪಿನಾಯಿಲ್ ಹಾಕಿ ಆಗಾಗ ಸ್ವಚ್ಚಗೊಳಿಸುತ್ತಿದ್ದರು. ರೈಲ್ವೇ ಭೋಗಿಗಳನ್ನು ಗುಡಿಸುತ್ತಲಿದ್ದರು. ಈಗ ಹೊಸ ರೈಲಿನಲ್ಲಿ ಕಿಟಕಿಯ ವಿನ್ಯಾಸ ಬದಲಾಗಿ ಅನುಕೂಲಕರವಾಗಿದೆ. ಚೆನ್ನಾಗಿ ಕೆಲಸ ಮಾಡುತ್ತಿರುವ ರೈಲ್ವೇ ಇಲಾಖೆಯ ಸಿಬ್ಬಂದಿಗಳಿಗೆ ಧನ್ಯವಾದ.

ಮರಳಿ ಮೈಸೂರು

ಮೈಸೂರು ಬಂತು ಎಲ್ಲರೂ ಎದ್ದೇಳಿ ಎಂಬ ಕರೆ ಕೇಳಿ ಬೆಳಗ್ಗೆ ೨.೧೫ಕ್ಕೆ ಎಚ್ಚರವಾಯಿತು.  ಕೊನೇ ನಿಲ್ದಾಣವಾದ ಕಾರಣ ಇಳಿಯಲು ಗಡಿಬಿಡಿ ಇರಲಿಲ್ಲ. ಎಲ್ಲರಿಗೂ ವಿದಾಯ ಹೇಳಿ ಹೊರಗೆ ಬಂದು ಮುಂಗಡ ಪಾವತಿ ಆಟೋರಿಕ್ಷಾ ಇದೆಯಾ ಇಲ್ಲವೆ? ಈ ರಾತ್ರಿಯಲ್ಲಿ ಮನೆಗೆ ಹೋಗುವುದು ಹೇಗೆ? ಎಂದು ಯೋಚಿಸುತ್ತ ಬರುತ್ತಿರಬೇಕಾದರೆ, ನಮ್ಮ ಮುಂದೆ ಒಬ್ಬ ವಯಸ್ಸಾದ ವ್ಯಕ್ತಿ ಪ್ರತ್ಯಕ್ಷವಾದರು. ಎಲ್ಲಿ ಹೋಗಬೇಕು? ಬನ್ನಿ ನಾನು ಕರೆದೊಯ್ಯುವೆ ಎಂದಾಗ, ನಾವು ಮೂವರು ಬೇರೆ ಯೋಚನೆ ಮಾಡದೆ ಮೈಸೂರು ರೈಲ್ವೇ ನಿಲ್ದಾಣದಿಂದ ಬೆಳಗ್ಗಿನ ಝಾವ ಸರಸ್ವತೀಪುರಕ್ಕೆ ಹೋಗಲು ಅವರ ಗಾಡಿ ಹತ್ತಿದೆವು. ರಿಕ್ಷಾ ಚಾಲಕರಿಗೆ ವಯಸ್ಸು ೬೫ ದಾಟಿರಬಹುದು. ರಿಕ್ಷಾ ಹತ್ತಿ ಕುಳಿತ ಬಳಿಕ ಚಾಲಕರ ಬಳಿ ಮಾತಾಡುತ್ತ ಸಾಗುವುದು ನನಗೆ ಖುಷಿ ಕೊಡುವ ಕೆಲಸ. ಅವರ ಬಳಿ ಎಷ್ಟೋ ವಿಷಯಗಳಿರುತ್ತವೆ. ನಾವೂ ಕಲಿಯುವುದಿರುತ್ತವೆ. ಬದುಕಿನ ಹಿಂದೆ ನೋವು ನಲಿವಿನ ಕಥೆಗಳಿರುತ್ತವೆ

    ಈ ವಯಸ್ಸಿನಲ್ಲಿ ಇಷ್ಟು ರಾತ್ರಿ ಆಟೋ ಓಡಿಸುವುದೇಕೆ? ಕಷ್ಟ ಆಗುವುದಿಲ್ಲವೆ? ಎಂದು ಕೇಳಿದೆ

ಅಪಘಾತದಿಂದ ಕಾಲಿಗೆ ಏಟಾಗಿದೆ. ಹಗಲು ಹೊತ್ತಿನಲ್ಲಿ ವಾಹನ ದಟ್ಟಣೆಯಲ್ಲಿ ಆಟೋ ಓಡಿಸಲು (ಪದೇ ಪದೇ ಬ್ರೇಕ್ ಹಾಕಲು) ಕಷ್ಟವಾಗುತ್ತದೆ. ಹಾಗಾಗಿ ರಾತ್ರಿಪಾಳಿಯಲ್ಲಿ ಆಟೋ ಓಡಿಸುವೆ ಎಂದರು.

ಮಕ್ಕಳು? ಎಂಬ ಪ್ರಶ್ನೆ ಹಾಕಿದೆ

ಮಕ್ಕಳ ವಿಷಯದ ಹಿಂದೆ ಎಷ್ಟೋ ವಿಷಾದದ ಕಥೆಗಳಿವೆ. ನಮಗೆ (ಎರಡು ಗಂಡು ಒಂದು ಹೆಣ್ಣುಮೂರು ಮಕ್ಕಳುಗಂಡು ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದಾರೆ. ಒಬ್ಬ ಕೆಇಬಿಯಲ್ಲೂ (೭೬ಸಾವಿರ ಪಗಾರ) ಇನ್ನೊಬ್ಬ ಉಪನ್ಯಾಸಕ (ಒಂದು ಲಕ್ಷ ಸಂಬಳ) ಆದರೆ ಇಬ್ಬರೂ ನಮ್ಮನ್ನು ನೋಡಲು ಬರುವುದೂ ಇಲ್ಲ, ಒಂದು ಪೈಸೆ ಕೊಡುವುದೂ ಇಲ್ಲ. ಚಿಕ್ಕವನ ಓದಿಗಾಗಿ ತುಂಬ ಖರ್ಚು ಮಾಡಿರುವೆ ಎಂದರು

ಎಂಥ ಕಷ್ಟ ಅವರ ಬಾಳಿನಲ್ಲಿ. ವಯಸ್ಸಿನಲ್ಲಿ ರಾತ್ರಿ ನಿದ್ದೆ ಕೆಟ್ಟು ದುಡಿಯುವ ಅನಿವಾರ್ಯತೆ ಅವರಿಗೆ ಬಂತಲ್ಲ ಎಂದು ಯೋಚಿಸುತ್ತ, ಈಗ ಇಂಥ ಕಷ್ಟದ ಸಂದರ್ಭದಲ್ಲಿ ನ್ಯಾಯಾಲಯದ ಮೆಟ್ಟಲೇರಿದರೆ ಅವರಿಗೆ ನ್ಯಾಯ ದೊರೆಯಬಹುದು. ಮಕ್ಕಳು ಅವರಿಗೆ ದುಡ್ಡು ಕೊಡುವಂತೆ ಮಾಡಬಹುದು ಎಂದು ಅವರಿಗೆ ಹೇಳಬೇಕು ಎಂದು ಮನಸ್ಸು ಚಿಂತನ ಮಂಥನ ನಡೆಸುತ್ತಿರುವಾಗಲೇ ನಮ್ಮ ಗಮ್ಯ ಬಂದದ್ದರಿಂದ ಇಳಿಯಬೇಕಾಯಿತು. ಮಾತು ಮನದಲ್ಲೇ ಉಳಿಯಿತು. ಇನ್ನೂ ಕೆಲವು ದಿನ ಅವರ ಬದುಕಿನ ಬಗ್ಗೆ ಅವರು ಸ್ವಾಭಿಮಾನದಿಂದ ದುಡಿಯುತ್ತಿರುವುದು ಇತ್ಯಾದಿ ವಿಷಯ ಮನದಲ್ಲಿ ದೊಂಬರಾಟ ಆಡುತ್ತಲೇ ಇರುತ್ತದೆ. ಪಾ಼ಷಾ ಅವರ ಮಕ್ಕಳಿಗೆ ಒಳ್ಳೆಯ ಮನಸ್ಸು ಬಂದು ಹೆತ್ತವರ ಬಳಿ ಬರುವಂತಾಗಲಿ ಎಂಬ ಹಾರೈಕೆ ನಮ್ಮದು.

  ಎರಡೂವರೆಗೆ ನಾವು ಮನೆ ತಲಪಿದೆವು. ಅಲ್ಲಿಗೆ ನಮ್ಮ ಪುಣೆಯ ಚಾರಣಕ್ಕೆ ತೆರೆ ಬಿತ್ತು.  ಒಟ್ಟು ರೂ. ೫೩೦೦ ಖರ್ಚಾಗಿತ್ತು.

   ಚಾರಣದಿಂದ ಆಗುವ ಲಾಭ ಅಂದರೆ ಶರೀರ, ಮನ ಎರಡೂ ಆರೋಗ್ಯದಿಂದ ಇರುತ್ತವೆ. ಹೊಸ ಹೊಸ ಸ್ನೇಹಿತರ ಸಂಘ ಲಭ್ಯವಾಗುತ್ತದೆ.

ಇಲ್ಲಿ ಬಳಸಿದ ಕೆಲವು ಪಟಗಳು ಸಹಚಾರಣಿಗರದೂ ಇವೆ. ಅವರಿಗೆ ಧನ್ಯವಾದ.

(ಮಾಹಿತಿ ಕೃಪೆ: ವಿಕಿಪೀಡಿಯಾ)

 

 

ಮುಕ್ತಾಯ

2 ಕಾಮೆಂಟ್‌ಗಳು: