ಯೂಥ್ ಹಾಸ್ಟೆಲಿನ ಮೈಸೂರಿನ ಗಂಗೋತ್ರಿ ಘಟಕದ ಸದಸ್ಯರು ಪೂನಾದ ಕೋಟೆಗೆ ಲಗ್ಗೆ ಇಟ್ಟ ಸುದ್ದಿಯ ಸವಿವರಗಳ ನೋಟ: ತಾರೀಕು ೭.೧೦.೨೨ರಂದು ಮೈಸೂರು ನಿಜಾಮುದ್ದೀನ್ ಸ್ವರ್ಣಜಯಂತಿ ರೈಲಿನಲ್ಲಿ ರಾತ್ರಿ ೮.೧೦ಕ್ಕೆ ೬೨ ಮಂದಿ ಪೂನಾ ಕಡೆಗೆ ಹೊರಟೆವು. ೩೨ ಮಂದಿ ಹೆಂಗಸರು, ೩೦ ಮಂದಿ ಗಂಡಸರು. ಹೆಣ್ಣುಮಕ್ಕಳೇ ಗಟ್ಟಿಗಿತ್ತಿಯರು!
(ನಮ್ಮ ಚಾರಣದ ವಿವರ ಹೀಗಿದೆ:
೭-೧೦.೨೨ರಂದು ಹೊರಟು ೮.೧೦.೨೨ ಸಂಜೆ ಪೂನಾ ತಲಪುವುದು. ಮಳೌಲಿಯ (Malavli) ಯೂಥ್
ಹಾಸ್ಟೆಲಿನಲ್ಲಿ ವಾಸ್ತವ್ಯ.
೯.೧೦.೨೨ರಂದು ಬೆಳಗ್ಗೆ ೫ ಗಂಟೆಗೆ ಹೊರಟು ಶಿವನೇರಿ ಕೋಟೆಗೆ ಹೊರಡುವುದು.ತದನಂತರ ಲೆನ್ಯಾದ್ರಿ ಬುದ್ದಿಸ್ಟ್ ಗುಹೆ, ಓಝರ್ ದೇವಾಲಯ(ಅಷ್ಟವಿನಾಯಕ ಗಣಪತಿ ಮಂದಿರ)ಕ್ಕೆ ಭೇಟಿ. ಯೂಥ್ ಹಾಸ್ಟೆಲ್ ವಾಸ್ತವ್ಯ.
೧೦.೧೦.೨೨. ಬೆಳಗ್ಗೆ ೫ ಗಂಟೆಗೆ ಹೊರಟು ಟಿಕೊನಾ ಕೋಟೆ, ಕೋರಿಗಢ ಕೋಟೆ, ಲೋನಾವಾಲಕ್ಕೆ ಭೇಟಿ. ಮಳೌವ್ಲಿ ಯೂಥ್ ಹಾಸ್ಟೆಲ್ ವಾಸ್ತವ್ಯ
೧೧.೧೦.೨೨ ಮಳೌವ್ಲಿ ಯೂಥ್ ಹಾಸ್ಟೆಲ್ ನಿಂದ ಬೆಳಗ್ಗೆ ೪ಕ್ಕೆ ಹೊರಟು ಮೈಸೂರು ನಿಜಾಮುದ್ದೀನ್ ಸ್ವರ್ಣಜಯಂತಿ ರೈಲಲ್ಲಿ ೬.೨೫ಕ್ಕೆ ಮೈಸೂರು ಕಡೆಗೆ ಪಯಣ. ೧೨ರಂದು ಬೆಳಗ್ಗೆ ೩.೩೦ಕ್ಕೆ ಮೈಸೂರು
ತಲಪುವುದು).
ರಾತ್ರೆ ೮.೧೦ಕ್ಕೆ ಸರಿಯಾಗಿ ರೈಲು ಹೊರಟಿತು. ನಮ್ಮ ನಮ್ಮ ಆಸನದಲ್ಲಿ ನಾವು ಆಸೀನರಾದೆವು. ಈ ದಿನ ವಿಶ್ವ ನಗು ದಿನ. ಸವಿತಾ ಲೋಕೇಶ್ ರೀಲು (ಬಿಡುವುದರಲ್ಲಿ) ಮಾಡಿ ಇನ್ಟಾಗ್ರಾಮಿನಲ್ಲಿ ಹಾಕುವುದರಲ್ಲಿ ನಿಸ್ಸೀಮೆ. ಹಾಗೆ ಒಂದಷ್ಟು ಮಂದಿ ಹಾಡಿಗೆ ಕೈ ಮೈ ಕುಣಿಸಿ ರೀಲ್ ತಯಾರಿಸಿ ಹಾಕಿದಳು. ರವಿ ಬಾಹುಸಾರ್ ಇದ್ದಲ್ಲಿ ನಗುವಿಗೆ ಕೊರತೆ ಇಲ್ಲ. ನಾನು ಅಣ್ಣ
ಬಾಂಡ್ ಆದರೆ ನೀವು ಅಕ್ಕ ಬಾಂಡ್. ನನ್ನನ್ನೂ ಮೀರಿಸುತ್ತೀರ ಎಂದು ಸವಿತಳಿಗೆ ಬಿರುದು ಕೊಟ್ಟರು. ೧೦ಗಂಟೆವರೆಗೂ ನಗು ಹರಟೆ ಹೊಡೆದು ನಕ್ಕು ನಲಿದು.ವಿಶ್ವನಗು ದಿನವನ್ನು ಸಾರ್ಥಕಗೊಳಿಸಿದೆವು. ಮೈಸೂರಿನ ಗಂಗಮ್ಮ ಅವರು ಕರಿಕಡುಬು, ಚಕ್ಕುಲಿ ಹಂಚಿದರು. ೧೦.೩೦ಗೆ ನಿದ್ರೆ
ಪೂನಾದೆಡೆಗೆ ರೈಲು ಪಯಣ
ಬೆಳಗ್ಗೆ ೯ ಗಂಟೆಗೆ ತಿಂಡಿ ಇಡ್ಲಿವಡೆ. ಚಟ್ನಿ. ಮಧ್ಯಾಹ್ನ ಜೋಳದರೊಟ್ಟಿ, ಬದನೆ ಎಣ್ಣೆಗಾಯಿ. ಹರಟೆ, ಹಾಡು,ನಗು, ಪುಸ್ತಕ ಓದು, ಇಸ್ಪೀಟ್, ಚೌಕಾಭಾರ ಆಟ ಹೀಗೆ ಹೊತ್ತು ಸರಿದದ್ದೇ ತಿಳಿಯಲಿಲ್ಲ. ಮಂಜುಳಾ ಪಾಟೀಲ್ ಚೌಕಾಭಾರ, ಹಗ್ಗದಾಟಕ್ಕೆ ಹಗ್ಗ ಎಲ್ಲ ತಂದಿದ್ದರು. ಸುಷ್ಮಾ ಹಾಗೂ ಸುಮಲತಾ ಎದುರು ಬದುರು ಕುಳಿತು ೧೨ ಗಂಟೆಗಳ ಕಾಲ ಗಹನ ಚಿಂತನ ನಡೆಸಿದರು. ಅವರ ಮುಖಭಾವವನ್ನೇ ಗಮನಿಸುತ್ತ ಇದ್ದ ನಮಗೆ ಅವರು ಏನು ಮಾತಾಡಿರಬಹುದು ಎಂದು ಕುತೂಹಲದಿಂದ ಅವರನ್ನೇ ನೋಡುತ್ತಿದ್ದೆವು! ಸವಿತಾ ಮೆತ್ತಗೆ ಅವರ ಫೋಟೋ ಕ್ಲಿಕ್ಕಿಸಿ ರೀಲು ಹರಿ ಬಿಟ್ಟಳು! ದಾರಿಯುದ್ದಕ್ಕೂ ಹೊಲಗಳು, ಬೆಟ್ಟಗಳು ಹಸಿರಿನಿಂದಾವೃತವಾಗಿ ನೋಡಲು ಖುಷಿಯೆನಿಸುತ್ತಲಿತ್ತು.
ನಾಲ್ಕು ಬಗೆಯ ಒಣಹಣ್ಣುಗಳನ್ನು ೬೫ ಪೊಟ್ಟಣಗಳಿಗೆ ತುಂಬಿಸಿದೆವು. ಪೊಟ್ಟಣ ತುಂಬಿಸುವಾಗ ಬಾಯಿಗೆ ಹಾಕೋಣವೆಂದರೆ ಸಿಸಿ ಕ್ಯಾಮಾರಾದ ಕಾಟ. ಹಾಗಾಗಿ ಒಂದು ಹಣ್ಣನ್ನೂ ಬಾಯಿಗೆ ಹಾಕಿಕೊಳ್ಳಲಾಗದೆ ನಿರಾಸೆಯಾಯಿತು! ಹಾವೇರಿಯ ಗಂಗಮ್ಮ ಅವರೂ ನಮ್ಮೊಂದಿಗೆ ಕೈ ಜೋಡಿಸಿದರು. ಅವರ ಪರಿಚಯ (ಶಿರಡಿಗೆ ಹೊರಟವರು) ಸ್ನೇಹಕ್ಕೆ ತಿರುಗಿ, ನಮ್ಮನ್ನು ಹಾವೇರಿಗೆ ಆಹ್ವಾನಿಸಿದರು. ಅವರ ಮನೆ ವಿಶಾಲವಾಗಿದೆಯಂತೆ. ಅಲ್ಲಿದ್ದು, ಹಾವೇರಿಯನ್ನು ನೋಡಬಹುದು ಎಂಬ ಆತ್ಮೀಯತೆ ತೋರಿಸಿದರು. ಅವರು ಕರೆಯುವುದು ಹೆಚ್ಚೋ ನಾವು ಹೋಗುವುದು ಹೆಚ್ಚೊ ಎಂದು ಮುಂದೆ ಎಂದಾದರೊಂದು ದಿನ ನಾವು ಅವರಲ್ಲಿಗೆ ಹೋಗುವುದೆಂದು ತೀರ್ಮಾನಿಸಿದ್ದೇವೆ! ಅಷ್ಟರಲ್ಲಿ ಸಂಜೆ ನಾವು ಇಳಿಯುವ ಸಮಯ ಬಂದೇ ಬಂತು. ಸಂಜೆ ೪ಕ್ಕೆ ಪುಣೆ ತಲಪಿದೆವು.
ಶಿವನೇರಿ ಕೋಟೆ (kusur, junnar, Maharashtra, 410502)
೯.೧೦.೨೨ರಂದು ಬೆಳಗ್ಗೆ ೫ ಗಂಟೆಗೆ ತಯಾರಾಗಿ ಬುತ್ತಿಗೆ ಪಲಾವ್ ತುಂಬಿಸಿಕೊಂಡೆವು. ಬಸ್ ಹಾಗೂ ವ್ಯಾನ್ ವ್ಯವಸ್ಥೆ ಮಾಡಿದ್ದರು. ನಾವು ೧೭ ಮಂದಿ ವ್ಯಾನ್ ಹತ್ತಿದೆವು. ಉಳಿದ ೪೫ ಮಂದಿ ಬಸ್ ಹತ್ತಿದರು. ೫.೧೫ಕ್ಕೆ ಹೊರಟು ೮.೧೫ಕ್ಕೆ ಶಿವನೇರಿ ತಲಪಿದೆವು.
ವ್ಯಾನಿನಲ್ಲೇ ಪಲಾವ್ ತಿಂದೆವು. ಮೊದಲಿಗೆ ಶಿವನೇರಿ ಕೋಟೆ ಏರಲು ತೊಡಗಿದೆವು.. ಏರಲು ಕಷ್ಟವೇನಿರಲಿಲ್ಲ. ಮೆಟ್ಟಲುಗಳಿವೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ಬಳಿ ಇರುವ ಶಿವನೇರಿ ಕೋಟೆ ೧೭ನೇ ಶತಮಾನದ್ದು. ಶಿವಾಜಿ ೧೯ ಫೆಬ್ರವರಿ ೧೬೩೦ರಂದು ಇಲ್ಲಿಯೇ ಜನ್ಮತಾಳಿರುವುದು. ಬಾಲ್ಯದ ಕೆಲವು ವರ್ಷಗಳ ಕಾಲ ಅಲ್ಲಿಯೇ ಕಳೆದರು. ಅಲ್ಲಿ ಶಿವಾಜಿಯದ್ದೆಂದು ಹೇಳಲಾಗುವ ತೊಟ್ಟಿಲು ಕಾಣಬಹುದು.
ಮೂರನೇ ಆಂಗ್ಲೋ – ಮರಾಠ ಯುದ್ಧದ ತರುವಾಯ ೧೮೨೦ರಲ್ಲಿ ಈ ಕೋಟೆಯು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು.
೨೦೨೧ರಲ್ಲಿ ಈ ಕೋಟೆಯನ್ನು ಮರಾಠ ಮಿಲಿಟರಿ ವಾಸ್ತುಶಿಲ್ಪದ ಸರಣಿಯ ಭಾಗವಾಗಿ ಯುನೆಸ್ಕೋ ವಿಶ್ವಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಯಿತು. ಮಹಾರಾಷ್ಟ್ರದಲ್ಲಿ ಒಟ್ಟು ೩೭೬ ಕೋಟೆಗಳಿವೆ ಎಂದು ಗೂಗಲಿನಲ್ಲಿ ಮಾಹಿತಿ ಸಿಕ್ಕಿತು. ಆ ಎಲ್ಲ ಕೋಟೆಗಳನ್ನು ಹತ್ತಲು ಈ ಜನ್ಮಸಾಕಾಗದು!
ಲೆನ್ಯಾದ್ರಿ ಗುಹೆ (lenyadri Ganapati raod, Junnar, maharAdshtra 410502)
ಅಲ್ಲಿಂದ ಲೆನ್ಯಾದ್ರಿಗೆ ಹೋದೆವು. ೨ ಗಂಟೆಗೆ ದೇವಸ್ಥಾನ ವತಿಯಿಂದ ಸಿಗುವ ಊಟ (ರೂ.೨೫ರ ಟೋಕನ್ ಪಡೆಯಬೇಕು.) ಮಾಡಿದೆವು. ಅನ್ನ ಸಾರು, ಸಾಂಬಾರು, ಕೇಸರಿಭಾತ್.
ಸುಮಾರು ೨೮೩ ಮೆಟ್ಟಲು ಹತ್ತಿ ೩೯೦ ಅಡಿ ಎತ್ತರದಲ್ಲಿರುವ ಗುಹಾ ಗಣಪತಿ ದೇಗುಲ ತಲಪಿದೆವು. ೭ನೇ ಗುಹೆಯ ಬಂಡೆಯಡಿಯಲ್ಲಿ ವಿಶಾಲವಾದ ಸ್ಥಳದಲ್ಲಿ ಗಣಪತಿ ದೇಗುಲ ಇದೆ.. ನೂರಾರು ಜನ ಕೂರಬಹುದು. ಮಹಾರಾಷ್ಟ್ರದಲ್ಲಿರುವ ಅಷ್ಟ ವಿನಾಯಕ ದೇಗುಲಗಳಲ್ಲಿ ಈ ದೇಗುಲವೂ ಒಂದು. ಇದು ಗಣೇಶನ ಜನ್ಮಸ್ಥಳವೆಂದೂ ಉಲ್ಲೇಖವಿದೆ. ಪಾರ್ವತಿಯು ಲೆನ್ಯಾದ್ರಿಯಲ್ಲಿ ೧೨ ವರ್ಷಗಳ ಕಾಲ ಗಣೇಶನನ್ನು ಧ್ಯಾನಿಸುತ್ತ ತಪಸ್ಸನ್ನಾಚರಿಸಿದಳು. ಅವಳ ತಪಸ್ಸಿಗೆ ಮೆಚ್ಚಿದ ಗಣೇಶ ಆಕೆಯ ಮಗನಾಗಿ ಜನಿಸುವ ವರ ನೀಡುತ್ತಾನೆ. ಅದರಂತೆ ಪಾರ್ವತಿ ಮಣ್ಣಿನ ಗಣಪನನ್ನು ನಿರ್ಮಿಸಿ ಪೂಜಿಸಿದಾಗ, ಆ ಗಣೇಶ ಜೀವತಳೆದನು ಎಂಬುದು ಕಥೆ.
ಇಲ್ಲಿ ಸುಮಾರು ೨೬ ಗುಹೆಗಳು ಇವೆ. ಕ್ರಿ.ಶ. ೧ ಮತ್ತು ೩ನೇ ಶತಮಾನದ ನಡುವೆ ಈ ಗುಹೆಗಳು ಇದ್ದು, ಹೀನಯಾನ ಬೌದ್ಧ ಸಂಪ್ರದಾಯಕ್ಕೆ ಸೇರಿವೆ ಎಂಬ ಉಲ್ಲೇಖವಿದೆ. ನಾವು ನಾಲ್ಕೈದು ಗುಹೆಗೆ ಹೋದೆವು. ಪ್ರಾರ್ಥನಾ ಮಂದಿರ, ಸಂನ್ಯಾಸಿಗಳ ನಿವಾಸಗಳು, ಬಂಡೆಯಡಿಯಲ್ಲಿ ನೀರಿನ ತೊಟ್ಟಿ ಕಂಡೆವು. ಬಂಡೆಯಿಂದ ನೀರು ತೊಟ್ಟಿಕ್ಕುತ್ತಲಿತ್ತು. ಗುಹಾ ನೋಡಿ ನಾವು ಕೆಳಗೆ ಬಂದೆವು. ಅಲ್ಲಿ ಚಹಾ ಕಾಫಿ ಕುಡಿದು ಹೊರಟೆವು.
ಓಝರ್ ಕುಕಾಡಿ ನದಿ ದಂಡೆಯಲ್ಲಿರುವ ಗಣಪತಿ ದೇಗುಲದ ಬಳಿ ಇಳಿದಾಗ ಸಂಜೆ ೬ ಗಂಟೆ. ಸೂರ್ಯ ತನ್ನ ಪಾಳಿ ಮುಗಿಸಿ ಅಸ್ತಂಗತನಾಗುವ ತಯಾರಿಯಲ್ಲಿದ್ದ ಆ ಸುಂದರ ದೃಶ್ಯ ನೋಡುತ್ತ ನಿಂತೆವು. ನದಿಯ ಹಿನ್ನೀರಿನಲ್ಲಿ ಒಂದು ಜೋಡಿ ಮೀನು ಹಿಡಿಯಲು ದೋಣಿಯಲ್ಲಿ ಸಾಗುವುದನ್ನು ಪಟ ಕ್ಲಿಕ್ಕಿಸಿದೆ. ನದಿಯಲ್ಲಿ ದೋಣಿ ವಿಹಾರವೂ ಇದೆಯೆಂದು ತೋರುತ್ತದೆ.
ಪೋರ್ಚುಗೀಸರಿಂದ ವಸಾಯಿ ಕೋಟೆಯನ್ನು ವಶಪಡಿಸಿಕೊಂಡ ಮೇಲೆ ಪೇಶ್ವೆ ಬಾಜಿ ರಾವ್ ಅವರ
ಕಿರಿಯ ಸಹೋದರ ಮತ್ತು ಮಿಲಿಟರಿ ಕಮಾಂಡರ್ ಚಿಮಾಜಿ ಅಪ್ಪಾ ಈ ದೇವಾಲಯವನ್ನು ನವೀಕರಿಸಿದರು, ಮುಂದೆ
೧೯೬೭ರಲ್ಲಿ ಗಣೇಶ ಭಕ್ತ ಅಪ್ಪಾ ಶಾಸ್ತ್ರಿ ಜೋಶಿಯವರು ದೇಗುಲದ ಜೀರ್ಣೋದ್ಧಾರ ಮಾಡಿದರು.
(ಮಾಹಿತಿ ಕೃಪೆ: ವೀಕಿಪಿಡಿಯಾ)
ಮುಂದುವರಿಯುವುದು
ನಿರೀಕ್ಷಿಸಿದ್ದಂತೆ, ಅಲ್ಪ ಅವಧಿಯಲ್ಲಿಯೇ,
ಪ್ರತ್ಯುತ್ತರಅಳಿಸಿಸೊಗಸಾದ ನಿಮ್ಮ ಅನುಭವಗಳ ಜೊತೆಗೆ, ಅವಶ್ಯ ವಿಷಯಗಳನ್ನೂ ಸಂಗ್ರಹಿಸಿ, ಉತ್ತಮ ಶೈಲಿಯಲ್ಲಿ ಚಿತ್ರಲೇಖನವನ್ನು ಓದುಗರಿಗೆ ಒದಗಿಸಿದ್ದೀರಿ.
ಚೆನ್ನಾಗಿ ಮೂಡಿಬಂದಿದೆ. ನಿಮಗೆ ಅಭಿನಂದನೆಗಳು.
ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ನಿಮ್ಮ ನೇತೃತ್ವದಲ್ಲಿ ನಡೆದ ಈ ಚಾರಣ ಕಾರ್ಯಕ್ರಮ ಯಶಸ್ವಿಯಾಗಿತ್ತು.
ಅಳಿಸಿಪ್ರವಾಸಕಥನ ಸೂಪರ್...ನಾನು ಮಿಸ್ ಮಾಡಿಕೊಂಡೆ..
ಪ್ರತ್ಯುತ್ತರಅಳಿಸಿಧನ್ಯವಾದ. ಹೌದು. ಮುಂದಿನ ಸಲ ಭಾಗವಹಿಸಿ
ಪ್ರತ್ಯುತ್ತರಅಳಿಸಿ