ಶುಕ್ರವಾರ, ಏಪ್ರಿಲ್ 16, 2021

ಮೈಸೂರುನಗರದ ಲೇಖಕಿಯರ ಪರಿಚಯ ಭಾಗ ೧

ಟಿಪ್ಪಣಿ

     ಮೈಸೂರಿನಲ್ಲಿ ವಾಸವಾಗಿರುವ  ಲೇಖಕಿಯರ ಸ್ಠೂಲ ಪರಿಚಯವನ್ನು  ಬಿ. ಆರ್. ನಾಗರತ್ನ ಹಾಗೂ ಸಿ.ಎನ್. ಮುಕ್ತಾ ಇಲ್ಲಿ ಪೋಣಿಸಿ   ಕೊಟ್ಟಿದ್ದಾರೆ.  ಇದೇನೂ ಪರಿಪೂರ್ಣವಲ್ಲ. ಲೇಖಕಿಯರ ಸಂಖ್ಯೆ ದಿನೇ ದಿನೇ ಹೆಚ್ಚಬಹುದು, ಕೆಲವರ ಹೆಸರು ಬಿಟ್ಟು ಹೋಗಿರಲೂ ಬಹುದು. ಅವರ ಗಮನಕ್ಕೆ ಬಂದದ್ದಷ್ಟನ್ನು ಕ್ರೋಢೀಕರಿಸಿದ್ದಾರೆ. ಅವರ ಈ ಕೆಲಸ ಸ್ತುತ್ಯರ್ಹವಾದುದು. ಒಟ್ಟು ನಾಲ್ಕು ಭಾಗಗಳಲ್ಲಿ ವಿಂಗಡಿಸಿ  ಬರೆದಿರುವರು. ಅವನ್ನಿಲ್ಲಿ  ಹಾಕಲು ನನಗೆ ಸಂತೋಷವೆನಿಸಿದೆ.  ನಿಮಗೆ ಗೊತ್ತಿರುವ ಲೇಖಕಿಯರ ಹೆಸರು ಇಲ್ಲಿ ಬಿಟ್ಟು ಹೋಗಿದ್ದು ನಿಮ್ಮ ಗಮನಕ್ಕೆ ಬಂದರೆ ತಿಳಿಸಬಹುದು.  ಮೊದಲ ಭಾಗವನ್ನು ಇಲ್ಲಿ ಹಾಕಿರುವೆನು. 

 ಪ್ರಾಸ್ತಾವಿಕ ನುಡಿ

ಇಪ್ಪತ್ತನೆಯ ಶತಮಾನ ’ಕನ್ನಡ ಸಾಹಿತ್ಯಲೋಕ’ ಅಪಾರ ಬದಲಾವಣೆ ಕಂಡಕಾಲ. ವಸಾಹತು ಶಾಹಿಯಿಂದ ಭಾರತೀಯ ಸಮಾಜದಲ್ಲಿ ಅನೇಕ ಸಮಸ್ಯೆಗಳು ಹುಟ್ಟಿದುವು ಎನ್ನುವುದರಲ್ಲಿ ಎರಡು ಮಾತಿಲ್ಲ. ಬ್ರಿಟೀಷರ ಆಡಳಿತ ಪ್ರಪಂಚದ ನಕ್ಷೆಯನ್ನೇ ಬದಲಾಯಿಸಿತು. ಅವರ ಆಡಳಿತ ಕಾಲ ಭಾರತೀಯರ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಜೀವನದಲ್ಲಿ ಅಚ್ಚರಿ ಹುಟ್ಟಿಸುವಂತಹ ಬದಲಾವಣೆ ತಂದಿದ್ದಲ್ಲದೆ, ವಿಚಾರಕ್ರಾಂತಿಗೆ ಕಾರಣವಾಯಿತು. ಮಹಿಳೆಯರು ತಮ್ಮ ಬಗ್ಗೆ ತಮ್ಮ ಸ್ಥಿತಿ-ಗತಿಗಳ ಬಗ್ಗೆ ಚಿಂತಿಸಲು ಆರಂಭಿಸಿದರು. ಪರಿಣಾಮವಾಗಿ ಅನೇಕ ಕಥೆಗಾರ್ತಿಯರೂ, ಕವಿಗಳೂ, ಸಮಾಜ ಸುಧಾರಕರೂ ಹುಟ್ಟಿಕೊಂಡರು. ಇಂದು ಕನ್ನಡ ಸಾಹಿತ್ಯದಲ್ಲಿ ಮಹಿಳಾ ಬರಹಗಾರರ ಸಂಖ್ಯೆ ೩,೫೦೦ರ ಗಡಿದಾಟಿದೆ. ನಮ್ಮ ಲೇಖಕಿಯರು ಕಥೆ, ಕಾದಂಬರಿ, ಕಾವ್ಯ, ನಾಟಕ, ಶಿಶುಸಾಹಿತ್ಯ, ಗ್ರಂಥ ಸಂಪಾದನೆ, ಸಂಶೋಧನೆ-ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ; ಮಾಡುತ್ತಲಿದ್ದಾರೆ.

ಮೈಸೂರು ನಗರದಲ್ಲಿರುವ ಮಹಿಳಾ ಬರಹಗಾರರ ಸಂಖ್ಯೆ ನೂರು ಅಥವಾ ಅದಕ್ಕೂ ಹೆಚ್ಚಿನದು. ಮೈಸೂರಿನ ಲೇಖಕಿಯರನ್ನು ಪರಿಚಯಿಸುವ ಒಂದು ಸ್ತುತ್ಯಾರ್ಹ ಕಾರ್ಯವನ್ನು ನನ್ನ ಆತ್ಮೀಯರಾದ ಲೇಖಕಿ ಶ್ರೀಮತಿ ಬಿ.ಆರ್.ನಾಗರತ್ನ ಮಾಡಿದ್ದಾರೆ. ಇವರು ’ಮೈಸೂರು ನಗರದಲ್ಲಿರುವ ಕನ್ನಡ ಲೇಖಕಿಯರ ಪರಿಚಯ’ ಎಂಬ ಕಿರುಹೊತ್ತಿಗೆ ಹೊರತಂದಿದ್ದಾರೆ. ಇದನ್ನು ರುಕ್ಮಿಣಿಮಾಲಾ ಅವರ ಬ್ಲಾಗಿನಲ್ಲಿ ಹಾಕಲು ಸಮ್ಮತಿಸಿದ್ದಾರೆ. ಈ ಮಾಹಿತಿಗಳು ಎಲ್ಲಾ ಓದುಗರನ್ನು ತಲುಪಬೇಕು ಎನ್ನುವುದೇ ನಮ್ಮ ಉದ್ದೇಶ.  ಇದೇನೂ ಪರಿಪೂರ್ಣವಲ್ಲ,   

ಬಿ.ಆರ್. ನಾಗರತ್ನ

ಸಿ.ಎನ್. ಮುಕ್ತಾ


ಪರಿವಿಡಿ

ಭಾಗ ೧

ಮಹಾಕಾವ್ಯ / ಸಂಶೋಧನೆ/ ದಾಸ ಸಾಹಿತ್ಯ/ ಆಧ್ಯಾತ್ಮ 

೧. ಡಾ|| ಲತಾರಾಜಶೇಖರ್

೨. ಡಾ|| ಲೀಲಾಪ್ರಕಾಶ್

೩. ಡಾ. ಸರಸ್ವತಿ ರಾಜೇಂದ್ರ

೪. ಡಾ|| ವೈ.ಸಿ. ಭಾನುಮತಿ

೫. ಡಾ|| ಟಿ.ಎನ್. ನಾಗರತ್ನ

೬. ಡಾ|| ಚಂದ್ರಮತಿ ಸೋಂದಾ

೭. ಡಾ|| ಜಯಲಕ್ಷ್ಮಿ ಸೀತಾಪುರ

೮. ಡಾ. ಕೆ.ಆರ್. ಪ್ರೇಮಲೀಲಾ

೯. ಡಾ. ಎಸ್.ಪಿ. ಉಮಾದೇವಿ

೧೦. ಡಾ|| ಎಂ. ಕನ್ನಿಕಾ

೧೧. ಲೀಲಾವತಿ ಎಸ್.ರಾವ್.

೧೨. ಡಾ. ಟಿ.ಎಸ್. ಶ್ರೀವಳ್ಳಿ

೧೩. ಬಿ.ಎಸ್. ರುಕ್ಕಮ್ಮ

೧೪. ಡಾ. ತುಳಸಿ ರಾಮಚಂದ್ರ

೧೫. ವಿ. ಭ್ರಮರಾಂಬ ಮಹೇಶ್ವರಿ

೧೬. ಡಾ. ಸಿ.ಜಿ. ಉಷಾದೇವಿ

೧೭. ಡಾ. ವಿಜಯಾಹರನ್


ಭಾಗ ೧)

                                            ೧)   ಡಾ|| ಲತಾರಾಜಶೇಖರ್

ಲೇಖಕಿಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಶ್ರೀಮತಿ ಡಾ|| ಲತಾ ರಾಜಶೇಖರ್ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಐದು ಮಹಾಕಾವ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರು ಮಂಡ್ಯ ಜಿಲ್ಲೆಯ ಅಂಬಿಗರಹಳ್ಳಿಯವರು. ತಂದೆ ಶ್ರೀ ಎಂ. ಕೃಷ್ಣೇಗೌಡ, ತಾಯಿ ಶ್ರೀಮತಿ ಕೆ.ಎಸ್. ಕಾವೇರಮ್ಮ. ಇವರು ಎಂ.ಎ., ಪಿ.ಎಚ್.ಡಿ. ಪದವೀಧರರು. ಇವರ ಪತಿ ಡಾ|| ಎಚ್.ಬಿ. ರಾಜಶೇಖರ್ ಮಕ್ಕಳ ತಜ್ಞರು ಹಾಗೂ ಮೈಸೂರಿನ ರಾಜಶೇಖರ್ ಮೆಡಿಕಲ್ ಫೌಂಡೇಶನ್ನಿನ ಅಧ್ಯಕ್ಷರು.

ಬರವಣಿಗೆ ಆರಂಭಿಸಿದಾಗ ಕವನ, ಕಾದಂಬರಿ ರಚನೆಯಲ್ಲಿ ಆಸಕ್ತಿ ಹೊಂದಿದ್ದ ಲತಾ ಕ್ರಮೇಣ ಮಹಾಕಾವ್ಯಗಳ ರಚನೆಯತ್ತ ಮನಸ್ಸು ಮಾಡಿದರು.

ಡಾ|| ಲತಾ ರಾಜಶೇಖರ್ ಕೃತಿಗಳು

೧. ಕವನ ಸಂಗ್ರಹಗಳು 

೧. ಕೋಗಿಲೆ ಕೂಗಿದಂತೆ

೨. ಬೆಳಕಿನ ಹನಿಗಳು

೩. ಶೇಫಾಲಿಕ

೨. ಕಾದಂಬರಿ

೧. ಈ ಸ್ನೇಹ ಈ ಜೀವನ

೩. ಮಹಾಕಾವ್ಯಗಳು

೧. ಬಸವ ಮಹಾದರ್ಶನ

೨. ಬುದ್ಧ ಮಹಾದರ್ಶನ

೩. ಯೇಸು ಮಹಾದರ್ಶನ

೪. ಮಹಾವೀರ ಮಹಾದರ್ಶನ

೫. ಶ್ರೀರಾಮ ಮಹಾದರ್ಶನ

೪. ಸಂಶೋಧನಾ ಕೃತಿ 

’ಕುವೆಂಪು ಕಾವ್ಯದಲ್ಲಿ ಪ್ರಕೃತಿ’

ಇವರ ಮಹಾಕಾವ್ಯಗಳು ಬಸವ ಮಹಾದರ್ಶನ, ಬುದ್ಧ ಮಹಾದರ್ಶನ ಆಂಗ್ಲಭಾಷೆಗೆ ಅನುವಾದವಾಗಿವೆ. ಇವರ ಕವನಗಳು ಇಂಗ್ಲೀಷ್ ಮತ್ತು ಹಿಂದಿಗೆ ಅನುವಾದವಾಗಿವೆ. ಇವರ ಕವನಗಳ ಎರಡು ಧ್ವನಿಸಾಂದ್ರಿಕೆಗಳು ಹೊರಬಂದಿವೆ. ಇವರ ಸಂಪಾದಕತ್ವದಲ್ಲಿ ಎರಡು ಧ್ವನಿಸಾಂದ್ರಿಕೆಗಳು ಹೊರಬಂದಿವೆ. ಇವರ ಸಂಪಾದಕತ್ವದಲ್ಲಿ ಅನೇಕ ಅಭಿನಂದನಾ ಗ್ರಂಥಗಳು ಹೊರಬಂದಿವೆ.

ಇವರಿಗೆ ಸಂದಿರುವ ಪ್ರಶಸ್ತಿ, ಪುರಸ್ಕಾರಗಳು ಅಸಂಖ್ಯಾತ. ಮುಖ್ಯವಾದುವುಗಳನ್ನು ಉಲ್ಲೇಖಿಸಲಾಗಿದೆ.

೧. ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ

೨. ಅಬುದಾಬಿಯ ’ವಿಶ್ವಕವಿ’ ಪ್ರಶಸ್ತಿ

೩. ರಾಷ್ಟ್ರಕವಿ ಕುವೆಂಪು ಪ್ರಶಸ್ತಿ

೪. ಅಂತರ ರಾಷ್ಟ್ರೀಯ ಮಹಿಳಾ ವರ್ಷದ ’ವರ್ಷದ ಮಹಿಳೆ ಪ್ರಶಸ್ತಿ’

೫. ಭಾರತೀಯ ವಿದ್ಯಾಭವನದ ಡಾ|| ಕೆ.ಎಂ. ಮುನ್ಷಿಪುರಸ್ಕಾರ

೬. ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ

೭. ಅತ್ತಿಮಬ್ಬೆ ಕಾವ್ಯ ಪ್ರಶಸ್ತಿ

೮. ದೇ.ಜ.ಗೌ. ಸಾಹಿತ್ಯ ಪ್ರಶಸ್ತಿ - ಇತ್ಯಾದಿ.

* * *

                                        ೨)   ಡಾ|| ಕೆ. ಲೀಲಾಪ್ರಕಾಶ್

ಪ್ರವಚನಪಟು, ವಿದ್ಯಾನಿಧಿ, ಸಾಹಿತ್ಯ ಸೇವಾರತ್ನ, ಸಾಹಿತ್ಯ ಸರಸ್ವತಿ ಹಾಗೂ ಚಾಣಕ್ಯಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೀಮತಿ ಡಾ|| ಕೆ. ಲೀಲಾ ಪ್ರಕಾಶ್, ಕನ್ನಡ ನಾಡಿನ ಪ್ರಖ್ಯಾತ ತ್ರಿಭಾಷಾ ವಿದ್ವಾಂಸರಾಗಿದ್ದ ವಿದ್ಯಾಸಾಗರ ಡಾ|| ಕೆ.ಕೃಷ್ಣಮೂರ್ತಿ ಮತ್ತು ಶ್ರೀಮತಿ ಸರೋಜಮ್ಮನವರ ಪುತ್ರಿ. ಇವರು ಎಂ.ಎ., ಪಿ.ಎಚ್.ಡಿ (ಸಂಸ್ಕೃತ) ಮತ್ತು ಎಂ.ಎಸ್.ಸಿ. (ಮನೋವಿಜ್ಞಾನ) ಪದವೀಧರರು.

ಇವರ ಪತಿ ಶ್ರೀ ಸಿ.ಎನ್.ಕೇಶವ ಪ್ರಕಾಶ್ ಮಹಿಕೋ ಹೈಬ್ರೀಡ್ ಸೀಡ್ಸ್ ಮತ್ತು ಕ್ರಿಮಿನಾಶಕಗಳ ಹಂಚಿಕೆದಾರರು. ಡಾ|| ಲೀಲಾ ಪ್ರಕಾಶ್ ೨೦೧೦ರಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ಕೆ. ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ (ರಿ.) ಆರಂಭಿಸಿ, ಸಂಸ್ಥಾಪಕ ನಿರ್ದೇಶಕರಾಗಿ ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಮ್ಮ ತಂದೆ ಶ್ರೀ ಕೃಷ್ಣಮೂರ್ತಿಯವರ ೫೦ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 

ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕಾದಂಬರಿ, ಕವನ, ಚುಟುಕ, ಕಾವ್ಯ ವಿಮರ್ಶೆ, ವ್ಯಾಕರಣ, ಅನುವಾದ, ಪ್ರವಾಸಕಥನ - ಈ ಎಲ್ಲಾ ಕ್ಷೇತ್ರಗಳಲ್ಲೂ ಕೃತಿಗಳನ್ನು ರಚಿಸಿ, ತಮ್ಮ ವಾಗ್‌ವೈಭವ ತೋರಿದ್ದಾರೆ. ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಲ್ಲಿ ವಿದ್ಯುಲ್ಲೇಖನಗಳನ್ನು ಮಂಡಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಮಾಯಣ, ಭಗವದ್ಗೀತೆ ಹಾಗೂ ಅಧ್ವೈತ ದರ್ಶನದ ಬಗ್ಗೆ ವಿಧ್ವತ್ಪೂರ್ಣ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ರೇಡಿಯೋ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ನಿರಂತರವಾಗಿ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಅನೇಕ ಸಾಹಿತ್ಯ ದಿಗ್ಗಜರ, ವಿಧ್ವಾಂಸರ ಕೃತಿಗಳಿಗೆ ಮುನ್ನುಡಿ ಬರೆದಿದ್ದಾರೆ. ಈ ಮುನ್ನುಡಿಗಳು ೨೦೧೯ರಲ್ಲಿ ’ಮುನ್ನುಡಿ-ಹೊನ್ನುಡಿ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.

ಸಾಹಿತ್ಯ ಪ್ರಪಂಚಕ್ಕೆ ಡಾ|| ಲೀಲಾಪ್ರಕಾಶ್ ಇವರ ಕೊಡುಗೆ ಅಪಾರ. ಕೆಲವನ್ನಷ್ಟೇ ಕೆಳಗೆ ಉಲ್ಲೇಖಿಸಲಾಗಿದೆ.

ಡಾ|| ಲೀಲಾಪ್ರಕಾಶ್ - ಕೃತಿಗಳು

ಕವನ ಸಂಕಲನಗಳು

೧. ೧. ಕವನ ಸಂಕಲನ - 

೧. ಸಮನ್ವಿತ ೨. ಕಾವ್ಯವಲ್ಲರಿ ೩. ಸಮುದ್ಯತಾ ೪. ಸಂಕಲಿತಾ ಇತ್ಯಾದಿ

೨. ಆಧ್ಯಾತ್ಮಕ ಕವನಗಳು - 

೧. ಲೀಲಾಪ್ರಿಯನ ಆಧ್ಯಾತ್ಮ ವಿಕಸನ

೩. ವೈಚಾರಿಕ ಕವನಗಳು - 

೧. ಓ ಮನುಜ (ವಚನ-ನಿರ್ವಚನ)

೨. ಜೀವನಾಮೃತವಾಣಿ (ಸಮಕ್ತಿ -ಸಂಗ್ರಹ)

೨. ಕಾದಂಬರಿ : ವಿಮಲಾ

೩. ಸಣ್ಣ ಕಥೆಗಳು : ಅನಿವಾಸ ಮತ್ತು ಇತರ ಕಥೆಗಳು

೪. ಕಾವ್ಯ ವಿಮರ್ಶೆ : 

೧. ಕವಿ -ಕಾವ್ಯ ವಿವೇಚನೆ

೨. ವಸ್ತು ವೈವಿಧ್ಯ

೩. ಲೇಖನೋಲ್ಲಾಸ

೪. ಸತ್ಯಂ ಶಿವಂ ಸುಂದರ

೫. ಚಿಂತನ-ಮಂಥನ : 

೧. ಚಿಂತನಧಾರಾ

೨. ಚಿಂತನ ಚಿತ್ತಾರ

೬. ಅನುವಾದ : 

೧. ಕನ್ನಡ ಭಗವದ್ಗೀತಾ

೨. ಸಿರಿಗನ್ನಡ ಭಗವದ್ಗೀತಾ

೩. ಆಯುರ್ವೇದೀಯ ಪವಿತ್ರ ಪ್ರಭೋಧೆಗಳು

೪. ವೈದ್ಯಕೀಯ ವಿಚಾರ ವಿಶ್ಲೇಷಣೆ

೫. ಶಂಕರಾಚಾರ್ಯರ ಮೋಹಮುದ್ಗರ

ಅನೇಕ ಹೆಸರಾಂತ ಸಾಹಿತಿಗಳು, ಅಭಿಮಾನಿಗಳು, ಮಿತ್ರರು ೨೦೨೦ರಲ್ಲಿ ಲೀಲಾಪ್ರಕಾಶ್ -ಇವರ ಷಷ್ಠ್ಯಬ್ಧಿ ಸಮಾರಂಭದಲ್ಲಿ ’ಲೀಲಾಭಾರತಿ’ ಎಂಬ ಗೌರವ ಗ್ರಂಥವನ್ನು ಸಮರ್ಪಿಸಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು

೧. ೨೦೦೧ - ಸುವರ್ಣಕರ್ನಾಟಕ ಹೊಯ್ಸಳ ಪ್ರಶಸ್ತಿ

೨. ೨೦೦೨ - ಉದಯ ಟಿ.ವಿ. ಕವಿಪ್ರತಿಭೆ ಪ್ರಶಸ್ತಿ

೩. ೨೦೦೬ - ಕೆ.ಎಸ್. ನರಸಿಂಹಸ್ವಾಮಿ ಪ್ರಶಸ್ತಿ

೪. ೨೦೦೭ - ಸದೋದಿತಾ ಸಂಶೋಧನಾ ಪ್ರಶಸ್ತಿ

೫. ೨೦೧೩ - ಸಾವಿತ್ರಮ್ಮ ದೇ.ಜ.ಗೌ ರಾಜ್ಯಮಟ್ಟದ ಪ್ರಶಸ್ತಿ

೬. ೨೦೧೫ - ವಿದ್ಯಾರಣ್ಯ ಪ್ರಶಸ್ತಿ

೭. ಬೆಂಗಳೂರಿನ ಎಂ.ಜಿ. ರಾಮನಾಥನ್ ಪ್ರಶಸ್ತಿ - ಇತ್ಯಾದಿ.

                                                                           * * *                               

                              ೩) ಡಾ|| ಸರಸ್ವತಿ ರಾಜೇಂದ್ರ

ಶ್ರೀಮತಿ ಡಾ|| ಸರಸ್ವತಿ ರಾಜೇಂದ್ರ ಸಮಾಜಸೇವೆಯ ಜೊತೆ ಸಾಹಿತ್ಯದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವವರು. ಇವರ ವಿದ್ಯಾಭ್ಯಾಸ ಎಂ.ಎ., ಪಿ.ಎಚ್.ಡಿ. ತಂದೆ ಶ್ರೀ ಮಾದಯ್ಯಗೌಡ, ತಾಯಿ ಶ್ರೀಮತಿ ಟಿ.ಶಾರದಮ್ಮ ಇವರ ಪತಿ ಡಾ|| ಡಿ.ಕೆ. ರಾಜೇಂದ್ರ ನಿವೃತ್ತ ಪ್ರಾಧ್ಯಾಪಕರು

ಇವರು ಕವನ, ಮಕ್ಕಳ ಸಾಹಿತ್ಯ, ಸಣ್ಣಕಥೆ, ವಿಮರ್ಶೆ, ಪ್ರಬಂಧ - ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಡಾ|| ಸರಸ್ವತಿ ರಾಜೇಂದ್ರ - ಇವರ ಕೃತಿಗಳು

೧. ನಾನೊಂದು ಲೋಲಕ (ಕವನ ಸಂಕಲನ)

೨. ಸಂಕಥನ

೩. ಸಂವರ್ಧನ ವಿಮರ್ಶಾ ಕೃತಿಗಳು

೪. ಸಂಚೇತನ 

೫. ಮಾತು ಮುತ್ತು (ಮಕ್ಕಳ ಸಾಹಿತ್ಯ)

೬. ಉತ್ತರ ರಾಮಕಥಾ ಕಾವ್ಯಗಳು (ಪ್ರೌಢಪ್ರಬಂಧ)

೭. ಚೆಲ್ಲಾಪಿಲ್ಲಿ (ಸಣ್ಣ ಕಥೆಗಳು) ಅಚ್ಚಿನಲ್ಲಿ

ಇವರ ಇತರ ಹವ್ಯಾಸಗಳು ಆಧ್ಯಾತ್ಮದಲ್ಲಿ ಆಸಕ್ತಿ ಸಮಾಜಸೇವೆ. ಶ್ರೀ ರಾಮಕೃಷ್ಣಾಶ್ರಮದಲ್ಲಿ ಸ್ವಯಂಸೇವಕಿಯಾಗಿ ಸೇವೆ.

ಪ್ರಶಸ್ತಿಗಳು

೧. ಮುಕ್ತ ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳಲ್ಲಿ ಐದು ಚಿನ್ನದ ಪದಕಗಳು ದೊರೆತಿವೆ.

೨. ’ಕವಿರತ್ನ’ ಪ್ರಶಸ್ತಿ (ಕವಿಗೋಷ್ಠಿಗಳಲ್ಲಿ ಭಾಗವಹಿಸುವಿಕೆಗೆ)

                                                             * * *

             ೪) ಡಾ|| ವೈ.ಸಿ. ಭಾನುಮತಿ

ಡಾ|| ವೈ.ಸಿ. ಭಾನುಮತಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಮತ್ತು ಗ್ರಂಥ ಸಂಪಾದನಾ ವಿಭಾಗದಲ್ಲಿ ಹಿರಿಯ ಸಂಶೋಧನಾ ಸಹಾಯಕರಾಗಿ ನಿವೃತ್ತರಾಗಿದ್ದಾರೆ. ಭಾನುಮತಿ ಪ್ರಾಚೀನ ಹಸ್ತಪ್ರತಿಗಳಲ್ಲಿರುವ ಕವಿಪದ್ಯಗಳನ್ನು ಪರಿಷ್ಕರಿಸಿ ಹೊಸಸಂಶೋಧಕರಿಗೆ ಮಾರ್ಗದರ್ಶಕರಾಗಿದ್ದಾರೆ.

೧೯೫೩ರ ಜನವರಿ ೧೪ರಂದು ಬೇಲೂರು ತಾಲ್ಲೂಕು ಯಮಸಂಧಿ ಎಂಬ ಗ್ರಾಮದಲ್ಲಿ ಶ್ರೀ ವೈ.ಬಿ. ಚನ್ನೇಗೌಡ ಮತ್ತು ಶ್ರೀಮತಿ ಎಚ್.ಎಸ್. ಜಯಮ್ಮ ದಂಪತಿಗಳಿಗೆ ಜನಿಸಿದ ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್.ಸಿ., ಎಂ.ಎ., ಪಿ.ಎಚ್.ಡಿ. ಪದವಿ ಪಡೆದು ಸುಮಾರು ೪೦ ವರ್ಷಗಳ ಕಾಲ ಸಂಶೋಧಕಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರ ಪತಿ ಶ್ರೀ ಯು.ಎಸ್.ರಾಮಣ್ಣ. ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದ ನಿವೃತ್ತ ಕ್ಯುರೇಟರ್ ಹಾಗೂ ಹವ್ಯಾಸಿ ರಂಗ ಕಲಾವಿದರು.

ಡಾ|| ವೈ.ಸಿ. ಭಾನುಮತಿ -ಇವರ ಪ್ರಕಟಿತ ಕೃತಿಗಳು ೫೪. ಸಂಶೋಧನಾ ಲೇಖನಗಳು ನೂರೈವತ್ತಕ್ಕೂ ಹೆಚ್ಚು. ಕೃತಿಗಳಲ್ಲಿ ಹಳೆಗನ್ನಡ ಗ್ರಂಥಸಂಪಾದನೆಗೆ ಸಂಬಂಧಿಸಿರುವ ಕೃತಿಗಳು ೨೮, ಜಾನಪದ ಕೃತಿಗಳು ೧೧, ವಿಮರ್ಶೆ, ಸಂಶೋಧನೆ ೦೭, ಆಧುನಿಕ ಸಾಹಿತ್ಯ ಸಂಪಾದನೆಗೆ ಸಂಬಂಧಿಸಿರುವುದು ೦೨. ಇತರರ ಸಹಭಾಗಿತ್ವದಲ್ಲಿ ೦೫.

ಶ್ರೀಮತಿ ವೈ.ಸಿ. ಭಾನುಮತಿ -ಇವರ ಕೃತಿಗಳು

೧. ಪುರಾತನರ ಚರಿತ್ರೆ

೨. ಬತ್ತೀಸ್ ಪುತ್ಥಳಿಕಥೆ

೩. ಅಜ್ಞಾತಕವಿಯ ’ಸಹ್ಯಾದ್ರಿ ಖಂಡ’

೪. ಸೂಳೆಕೆರೆಯ ದೃಷ್ಟಾಂತವುಳ್ಳ ಸಿದ್ಧಲಿಂಗಕಾವ್ಯ

೫. ಬಸವ ಮಹತ್ವದ ಸಾಂಗತ್ಯ

೬. ಪುಟ್ಟಮಲ್ಲಿಗೆ ಹಿಡಿತುಂಬ

೭. ಇತ್ತೀಚಿನ ಜಾನಪದ ಕಥೆಗಳು

೮. ಜಾನಪದ ಆಂತರ್ಯ

೯. ಮಲೆನಾಡಿನ ಶೈವ ಒಕ್ಕಲಿಗರು

೧೦. ಜನಪದ ಭಿತ್ತಿ

ಮಹಿಳಾ ಸಾಹಿತ್ಯ ಚರಿತ್ರೆಯ ಸಂಪುಟದಲ್ಲಿ ಕೆಲಸ ಮಾಡಿದ್ದಾರೆ.

ಡಾ|| ವೈ.ಸಿ. ಭಾನುಮತಿಯವರ ಸಾಹಿತ್ಯ ಸೇವೆಗೆ ಸಂದಿರುವ ಪ್ರಶಸ್ತಿ ಸನ್ಮಾನಗಳು ಅಪಾರ.

೧. ಪಿ.ಎಚ್.ಡಿ. ಪ್ರಬಂಧಕ್ಕೆ ಡಾ. ಆ.ನೇ. ಉಪಾಧ್ಯೆ ಚಿನ್ನದ ಪದಕ

೨. ಗುಂಡ್ಮಿ ಚಂದ್ರಶೇಖರ ಐತಾಳ ಸ್ಮಾರಕ ಪ್ರಶಸ್ತಿ

೩. ಫ.ಗು. ಹಳಕಟ್ಟಿ ಪ್ರಶಸ್ತಿ

೪. ಸಾವಿತ್ರಮ್ಮ ಸಂಶೋಧನಾ ಪ್ರಶಸ್ತಿ

೫. ಹ.ಕ. ರಾಜೇಗೌಡ ಗ್ರಂಥ ಸಂಪಾದನೆ ಪ್ರಶಸ್ತಿ - ಇತ್ಯಾದಿ.

ಇವುಗಳಲ್ಲದೆ ಬಿ.ಎಂ. ಶ್ರೀ ಪ್ರತಿಷ್ಠಾನದಿಂದ ೨ ಪ್ರಶಸ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನಿಂದ ೩ ಪ್ರಶಸ್ತಿಗಳು. ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ - ಇತ್ಯಾದಿ ದೊರಕಿವೆ.

                                                                      * * *

೫) ಡಾ|| ಟಿ.ಎನ್. ನಾಗರತ್ನ

ಶ್ರೀಮತಿ ಡಾ|| ಟಿ.ಎನ್. ನಾಗರತ್ನ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಿರಂತರವಾಗಿ ೩೫ ವರ್ಷಗಳ ಕಾಲ ಸೇವೆಸಲ್ಲಿಸಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾಗಿದ್ದಾರೆ. ಶಿವಮೊಗ್ಗದಲ್ಲಿ ವ್ಯಾಸಂಗಮಾಡಿ ಪದವಿ ಪರೀಕ್ಷೆಯಲ್ಲಿ ರ್‍ಯಾಂಕ್, ಐಚ್ಛಿಕ ಕನ್ನಡ ವಿಷಯದಲ್ಲಿ ಚಿನ್ನದ ಪದಕ ಪಡೆದು ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. ಪರೀಕ್ಷೆಯಲ್ಲಿ (೧೯೬೭) ಪ್ರಪ್ರಥಮವಾಗಿ ಚಿನ್ನದ ಪದಕದೊಡನೆ ತೇರ್ಗಡೆಹೊಂದಿದೆ ಹಿರಿಮೆ ಇವರದು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಪ್ರಥಮ ಮಹಿಳೆ ಇವರು.

ಶ್ರೀಮತಿ ನಾಗರತ್ನ ತಮ್ಮ ವಿದ್ವತ್ ಪ್ರತಿಭೆಯನ್ನು ಹರಿದಾಸ ಸಾಹಿತ್ಯ ಸಂಶೋಧನೆ, ವಿಶ್ಲೇಷಣೆ, ಸಂಪಾದನೆಗೆ, ಪ್ರಕಟಣೆಗೆ ಮೀಸಲಾಗಿಟ್ಟವರು. ಇವರು ಸ್ನಾತಕೋತ್ತರ ಪದವಿ ತರಗತಿಗಳಿಗೆ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಕೃತಿಗಳ ಸಂಖ್ಯೆ ಅಪಾರ ಮುಖ್ಯವಾದವು.

೧. ಶ್ರೀ ವಾದಿರಾಜರ ದೀರ್ಘ ಕೃತಿಗಳು

೨. ಶ್ರೀ ಗೋಪಾಲದಾಸರ ಕೃತಿಗಳು

೩. ಶ್ರೀ ಕನಕದಾಸರ ಕೀರ್ತನೆಗಳು

೪. ಶ್ರೀ ವ್ಯಾಸರಾಯರ ಕೃತಿಗಳು

೫. ಶ್ರೀ ರಾಮದಾಸರ ಕೃತಿಗಳು

೬. ಹರಪನಹಳ್ಳಿಯ ಭೀಮವ್ವನ ಹಾಡುಗಳು

೭. ದಾಸ ಸಾಹಿತ್ಯ ವೈಭವ

೮. ಹರಿದಾಸ ಸಾಹಿತ್ಯ - ಉಗಮ, ವಿಕಾಸ, ಸಾಧನೆ, ಸಿದ್ಧಿ

೯. ದಾಸ ಸಾಹಿತ್ಯ ದರ್ಪಣ

೧೦. ಮಕ್ಕಳ ಸಾಹಿತ್ಯ - ಹೈಹೈ ಕುದುರೆ

ಪ್ರಶಸ್ತಿ ಪುರಸ್ಕಾರಗಳು

೧. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ

೨. ಮಂತ್ರಾಲಯ ಶ್ರೀ ರಾಘವೇಂದ್ರ ಮಹಾಸ್ವಾಮಿಗಳಿಂದ ’ಹರಿದಾಸ ಸಾಹಿತ್ಯ ವಿದ್ವನ್ಮಣಿ’ ಬಿರುದು

೩. ಕರ್ನಾಟಕ ಸರ್ಕಾರದ ’ಕನಕಶ್ರೀ’ ಪ್ರಶಸ್ತಿ

೪. ಬೆಂಗಳೂರಿನ ಗುರುರಾಜ ಸೇವಾ ಸಮಿತಿಯಿಂದ ೨೦೧೬ರಲ್ಲಿ ’ಮಧ್ವ ಪುರಂಧರ ಪ್ರಶಸ್ತಿ’ ಇತ್ಯಾದಿ.

****

೬) ಡಾ|| ಚಂದ್ರಮತಿ ಸೋಂದಾ

ತಮ್ಮ ಅಂಕಣಬರಹಗಳಿಂದ ಚಿರಪರಿಚಿತರಾಗಿರುವ ಡಾ|| ಚಂದ್ರಮತಿ ಸೋಂದಾ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ., ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಹದಿನೈದು ವರ್ಷಗಳ ಕಾಲ ಸಂಶೋಧನಾ ಕಾರ್ಯದಲ್ಲಿ, ಎಂಟುವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಪತಿ ಡಾ|| ರಾಮಕೃಷ್ಣ ಜೋಶಿ

ಚಂದ್ರಮತಿ ಸೋಂದಾ ಒಟ್ಟು ೧೨ ಕೃತಿಗಳನ್ನು ಪ್ರಕಟಿಸಿದ್ದಾರೆ.

೧. ವಿಮರ್ಶಾ ಕೃತಿಗಳು : 

೧. ಮಾನಸ-ಮಾನಸಿ

೨. ಚಿಪ್ಪೊಡೆದಮೌನ

೩. ಹೆಣ್ಣಲ್ಲ ನಮಗೆ ರವಿಚಿನ್ನ

೪. ಶಬ್ಧದೊಳಗಣ ನಿಶ್ಯಬ್ಧ

೨. ಸಂಪಾದಿತ ಕೃತಿಗಳು :

೧. ಜಯಲಕ್ಷ್ಮಿ ದೇವಿ ವ್ಯಕ್ತಿ -ಅಭಿವ್ಯಕ್ತಿ

೨. ಮಹಿಳಾ ಸಾಂಸ್ಕೃತಿಕ ಕೋಶ ಭಾಗ -೩

೩. ಅಂಕಣ ಬರಹಗಳು : 

೧. ನಾರಿಮಿಡಿತ

೨. ಅಂತರಂಗದ ಅನಾವರಣ

೩. ನಾರಿಭಾವ

೪. ಆಟಕ್ಕೂ ಉಂಟು ಲೆಕ್ಕಕ್ಕೂ ಉಂಟು.

                                                                              * * *

೭) ಡಾ. ಜಯಲಕ್ಷ್ಮಿ ಸೀತಾಪುರ

ಗ್ರಾಮೀಣ ಬದುಕಿನ ಮೂಲದಿಂದ ಬಂದು ಜನಪದ ವಿಷಯವನ್ನು ಅಧ್ಯಯನ ಮಾಡಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ವಿಶ್ರಾಂತಿ ಜೀವನ ನಡೆಸುತ್ತಿರುವ ವಿದ್ವಾಂಸರು ಡಾ|| ಜಯಲಕ್ಷ್ಮಿ ಸೀತಾಪುರ. ಇವರ ತಂದೆ ಶ್ರೀ ತಿಮ್ಮೇಗೌಡ. ತಾಯಿ ಶ್ರೀಮತಿ ಬೋರಮ್ಮ. ಇವರು ಮೈಸೂರು ವಿಶ್ವವಿದ್ಯಾನಿಲಯದ ಜನಪದ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರ ಪತಿ ಪ್ರೊ. ರಾಜಶೇಖರ್ ನಿವೃತ್ತ ಪ್ರಾಂಶುಪಾಲರು. ಇವರು ಕವನ, ಜೀವನ ಚರಿತ್ರೆ, ನಾಟಕ ಎಲ್ಲವೂ ಸೇರಿ ಒಟ್ಟು ೩೦ ಕೃತಿಗಳನ್ನು ರಚಿಸಿದ್ದಾರೆ.

ಜನಪದ ಸಾಹಿತ್ಯ ಇವರ ಬದುಕು. ಜನಪದಕ್ಕೆ ತನ್ನತನ, ಸ್ವಶಕ್ತಿಯೊಂದು ಇದ್ದೇ ಇದೆ. ಕಾವ್ಯ, ನಾಟಕಗಳಿಗೆ ಮೂಲವಾಗಿದೆ ಎನ್ನುತ್ತಾರೆ.


ಪ್ರಶಸ್ತಿ, ಪುರಸ್ಕಾರ

೧. ಜಾನಪದ ಲೋಕ ಪ್ರಶಸ್ತಿ

೨. ಹಲಗೇಗೌಡ ಸಾಹಿತ್ಯ ಪ್ರಶಸ್ತಿ

೩. ಮುದ್ದು ಮಾದಪ್ಪ ಪ್ರಶಸ್ತಿ - ಇತ್ಯಾದಿ.

                                                           * * *

೮) ಪ್ರೊ. ಕೆ.ಆರ್. ಪ್ರೇಮಲೀಲಾ

ಪ್ರೊ. ಕೆ.ಆರ್. ಪ್ರೇಮಲೀಲಾ ಜೆ.ಎಸ್.ಎಸ್. ಸಂಸ್ಥೆಯ ಕಾಲೇಜಿನಲ್ಲಿ ೩೫ ವರ್ಷ ಸಂಸ್ಕೃತ ಪ್ರಾಧ್ಯಾಪಕಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿಯೂ ಅಪಾರ ಆಸಕ್ತಿ ಇರುವ ಇವರು ತುಮಕೂರು ಜಿಲ್ಲೆಯ ಕುಣಿಗಲ್‌ನವರು. ತಂದೆ ಶ್ರೀ ಕೆ.ಎ. ರೇವಣ್ಣಸಿದ್ಧಪ್ಪ, ತಾಯಿ ಶ್ರೀಮತಿ ಬಿ.ಎ. ಗೌರಮ್ಮ. ಇವರು ಎಂ.ಎ. (ಸಂಸ್ಕೃತ) ಎಂ.ಎ. (ಇಂಗ್ಲೀಷ್) ಮತ್ತು ಸ್ನಾತಕ್ಕೋತ್ತರ ಡಿಪ್ಲಮೋ ಇನ್ ಇಂಗ್ಲೀಷ್ - ಪದವಿಗಳನ್ನು ಪಡೆದಿದ್ದಾರೆ. ಇವರು ಬಿ.ಎ., ಎಂ.ಎ. ಪರೀಕ್ಷೆಗಳಲ್ಲಿ ಐದು ಸುವರ್ಣ ಪದಕಗಳನ್ನು ಗಳಿಸಿದ್ದಾರೆ.


ಪ್ರಕಟಿತ ಕೃತಿಗಳು

೧. ಕವನ ಸಂಕಲನಗಳು (೬)

೧. ಭಾವಯಾನ ೨. ಕಾವ್ಯಾಂಬರ

೩. ಕಾವ್ಯವಿನೋದ (ಹಾಸ್ಯ ಕವನಗಳು) ೪. ನವನೀತ

೫. ಒಲುಮೆಯ ಸಿರಿ (ಇಂಗ್ಲೀಷ್ ಕವಿತೆಗಳ ಅನುವಾದ)

೬. ಶರಣಜೀವಾಳ

೨. ವಚನ ಸಂಗ್ರಹ

೧. ಪ್ರೇಮಾಂಜಲಿ (ಆಧುನಿಕ ವಚನಗಳು) ೨.ವಚನ ಸಾಂಪ್ರತ (ಆಧುನಿಕ ವಚನಗಳು)

೩. ವಚನ ವಿನೂತನ (ಆಧುನಿಕ ವಚನಗಳು)

೩. ಮುಕ್ತಕಗಳು - ಮಿಂಚುಗಳು

೪. ಹಾಸ್ಯಲೇಖನಗಳು - ಪ್ರಬಂಧ ಬಂದುರ

೫. ವಿಮರ್ಶಾ ಲೇಖನಗಳು - ಸಾಹಿತ್ಯ ಮೋದ

೬. ವ್ಯಕ್ತಿ ಚಿತ್ರಣ - ಪ್ರೀಮಿಯರ್ ಸ್ಟುಡಿಯೋ ಬಸವರಾಜಯ್ಯ

೭. ಅಂಗಜೋಡಣೆ ಬಗ್ಗೆ (ಮೃತ್ಯುತ್ವದಿಂದ ಅಮೃತತ್ವದೆಡೆಗೆ)

ಪ್ರಶಸ್ತಿಗಳು

೧. ರತ್ನಮ್ಮ ದತ್ತಿ ಪ್ರಶಸ್ತಿ (ಕ.ಸಾ.ಪ ಬೆಂಗಳೂರು)

೨. ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಮೈಸೂರು

೩. ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ - ಇತ್ಯಾದಿ.

                                                       * * *

೯) ಡಾ|| ಎಸ್.ಪಿ. ಉಮಾದೇವಿ

ಮೈಸೂರಿನ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಮುಖ್ಯಸ್ಥರಾಗಿರುವ ಡಾ|| ಎಸ್.ಪಿ. ಉಮಾದೇವಿ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವವರು. ಶ್ರೀ ಎಸ್.ಎಂ. ಪ್ರಭುಸ್ವಾಮಿ ಮತ್ತು ಶ್ರೀಮತಿ ಶಿವನಾಗಮ್ಮ ದಂಪತಿಗಳ ಪುತ್ರಿ. ಇವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪಿ.ಎಚ್.ಡಿ.ಗಳಿಸಿದ್ದಾರೆ. ಇವರ ಪತಿ ಡಾ|| ಎಂ.ಸಿ. ಶಾಂತಮೂರ್ತಿ ಸಂಸ್ಕೃತ ಪ್ರಾಧ್ಯಾಪಕರು.

ಪ್ರಕಟಿತ ಕೃತಿಗಳು

ಸಂಶೋಧನಾ ವಿಷಯ - (ಮೂರನೆಯ ಮಂಗರಸನ ಕಾವ್ಯಗಳು : ಸಾಂಸ್ಕೃತಿಕ ಅಧ್ಯಯನ)

೧. ಕವನ ಸಂಕಲನಗಳು  

೧. ಮೌನದನಿಯ ಮಾತು

೨. ಅನುರಣನ

೨. ಶರಣ ಸಾಹಿತ್ಯ ಕುರಿತ ಪ್ರಬಂಧಗಳು

೧. ಅನಾವರಣ

೨. ಅನುಸಂಧಾನ

೩. ಅಕ್ಷತೆ (ಆಕಾಶವಾಣಿಯಲ್ಲಿ ಪ್ರಸಾರವಾದ ಚಿಂತನಗಳ ಸಂಗ್ರಹ)

೪. ಥೇಮ್ಸ್ ನದಿಯ ನಾಡಿನಲ್ಲಿ (ಇಂಗ್ಲೇಂಡ್ ಪ್ರವಾಸ ಕಥನ)

೫. ವಿಧಿಯಲೀಲೆ ಸಾವಿತ್ರಿ (ಸಂಪಾದಕಿ, ತಂದೆಯವರ ಕಾದಂಬರಿಗಳು)

೬. ಅಂಜಲಿ (ಆಧುನಿಕ ವಚನಗಳು)

ಪ್ರಶಸ್ತಿ ಪುರಸ್ಕಾರಗಳು

೧. ಪ್ರೊ. ಭೈರವಮೂರ್ತಿಯವರ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ

೨. ’ಕದಳಿಸಿರಿ’ ಪ್ರಶಸ್ತಿ

೩. ರೋಟರಿ ಸಂಸ್ಥೆಯಿಂದ ’ದತ್ತ ಟೀಚರ್ಸ್ ಅವಾರ್ಡ್’

                                                      * * *

೧೦) ಡಾ|| ಎಂ. ಕನ್ನಿಕಾ

ಡಾ|| ಎಂ. ಕನ್ನಿಕಾ ಕನ್ನಡ, ಇಂಗ್ಲೀಷ್, ಜಾನಪದ - ಈ ಮೂರು ವಿಷಯಗಳಲ್ಲಿಯೂ ಎಂ.ಎ. ಪದವಿ ಪಡೆದು, ಜಾನಪದದಲ್ಲಿ ಪಿ.ಎಚ್.ಡಿ.ಗಳಿಸಿದ್ದಾರೆ. (ಯುಜಿಸಿ ನವದೆಹಲಿ) ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಾನಿಲಯ. ಇವರ ತಂದೆ ಶ್ರೀ ಮಹದೇವಯ್ಯ, ತಾಯಿ ಶ್ರೀಮತಿ ಪುಟ್ಟಮ್ಮ.

ಪ್ರಕಟಿತ ಕೃತಿಗಳು

೧. ಕಥಾಸಂಕಲನ 

೧. ನಮ್ಮವರ ತುಳಿದವರು ನಾವು

೨. ಆತ್ಮಪೂರ್ತಿ

೩. ತಲೆಮಾರಿನ ಪೈಸ

೨. ಕವನ ಸಂಕಲನ

೧. ದಲಿತ ದೇಹ ದುಡಿಯುತಿದೆ ನೋಡಾ

೨. ಅಜಾತ ಶತ್ರು ನಾನಲ್ಲ

೩. ಜಾನಪದ ಕೃತಿಗಳು (ಸಂಶೋಧನಾ ಸಾಹಿತ್ಯ)

೧. ಜಾನಪದ ಅಂತರ

೨. ಜಾಗತಿಕ ಜನಪದ

೩. ಜನಜಾಗೃತಿ ಜಾನಪದ

೪. ಸ್ಪರ್ಶ ಜಾನಪದ

೫. ದೇಶೀ ಆಹಾರ ಸ್ಥಿತ್ಯಂತರ

ಪ್ರಶಸ್ತಿ ಪುರಸ್ಕಾರಗಳು

೧. ಬುದ್ಧ, ಇಂಟರ್‌ನ್ಯಾಷನಲ್ ಸೋಷಿಯಲ್ ಅವಾರ್ಡ್

೨. ನಿಟ್ಟೂರು ಶ್ರೀನಿವಾಸರಾವ್ ಅವಾರ್ಡ್

೩. ಮೈಸೂರು ರತ್ನ ಪ್ರಶಸ್ತಿ (ಸ್ಥಳೀಯ ಸಂಸ್ಥೆಗಳಿಂದ)

೪. ಮೈಸೂರು ನಕ್ಷತ್ರ ಪ್ರಶಸ್ತಿ (ಸ್ಥಳೀಯ ಸಂಸ್ಥೆಗಳಿಂದ)

೫. ಸಾರ್ಥಕ ಸಾಧಕ ಪ್ರಶಸ್ತಿ (ಸ್ಥಳೀಯ ಸಂಸ್ಥೆಗಳಿಂದ)

                                                    * * *                      

೧೧) ಲೀಲಾವತಿ ಎಸ್.ರಾವ್.

 ಶ್ರೀಮತಿ ಲೀಲಾವತಿ ಎಸ್.ರಾವ್ ಜನಿಸಿದ್ದು ದಿನಾಂಕ ೧೦ ಜುಲೈ ೧೯೪೩ರಲ್ಲಿ ದಾವಣಗೆರೆಯಲ್ಲಿ. ಇವರ ತಂದೆ ಶ್ರೀ ಪಿ.ಎಚ್.ಸೇತುರಾವ್, ತಾಯಿ ಶ್ರೀಮತಿ ಶಾಂತಾಬಾಯಿ. ಇವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾನಸಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ’ದಾಸ ಸಾಹಿತ್ಯ’ ವಿಭಾಗದಲ್ಲಿ ಎರಡುವರ್ಷ ಸಂಶೋಧನ ಸಹಾಯಕಿಯಾಗಿ, ಅನಂತರ ಸೂರತ್ಕಲ್ಲಿನ ’ಗೋವಿಂದದಾಸ್ ಕಾಲೇಜ್’ನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ೩೦ ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಪತಿ ಶ್ರೀ ಪಿ. ಶ್ರೀನಿವಾಸರಾವ್ ನಿವೃತ್ತ ಇಂಜಿನಿಯರ್.

ಲೀಲಾವತಿ ಎಸ್.ರಾವ್ ಕೃತಿಗಳು

೧. ವಿಮರ್ಶೆಗಳು

೧. ದಾಸಸಾಹಿತ್ಯದ ಕೆಲವು ನೋಟಗಳು ೨. ಪ್ರಾಚೀನ ಸಾಹಿತ್ಯದಲ್ಲಿ ಮಹಿಳೆ

೨. ವ್ಯಕ್ತಿ ಪರಿಚಯ 

೧. ಸೀತಾದೇವಿ ೨. ಡುರೋಣಿ

೩. ಸಂಪಾದಿತ ಕೃತಿಗಳು

೧. ಹೆಳವನ ಕಟ್ಟೆ ಗಿರಿಯಮ್ಮನ ಕೀರ್ತನೆಗಳು

೨. ನಿಡಗುರುಕಿ ಜೀವೂ ಬಾಯಿಯವರ ಕೀರ್ತನೆಗಳು

೩. ನಡುಗನ್ನಡ ಕಾವ್ಯ

೪. ಮಕ್ಕಳ ಕೃತಿಗಳು

೧. ಕಿರಿಯರಿಗೆ ಹಿರಿಯರ ಕೃತಿಗಳು

೨. ಏರುವ ಬಾ ಕೇದಾರ

೩. ಅಜ್ಜಿ ಹೇಳಿದ ಅದ್ಭುತ ಕಥೆಗಳು

ಲೀಲಾವತಿಯವರು ಪಡೆದ ಪ್ರಶಸ್ತಿ ಪುರಸ್ಕಾರಗಳು

೧. ದಾಸಸಾಹಿತ್ಯಕ್ಕೆ ’ಶ್ರೀ ಗುರುಗೋವಿಂದ’ ಪ್ರಶಸ್ತಿ

೨. ರಾಜರತ್ನಂ ಪುರಸ್ಕಾರ

೩. ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ

೪. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಲಭಿಸಿದೆ.

                                                        * * *                        

೧೨) ಡಾ. ಟಿ.ಎಸ್. ಶ್ರೀವಳ್ಳಿ

ಸಾಹಿತ್ಯ, ಸಂಗೀತ, ನಾಟಕ, ಅಭಿನಯ, ನಿರ್ದೇಶನ, ಬರವಣಿಗೆ ಮುಂತಾದ ಬಹುಮುಖ ಪ್ರತಿಭೆಯ ಲೇಖಕಿ ಡಾ|| ಟಿ.ಎಸ್. ಶ್ರೀವಳ್ಳಿಯವರು. ೧೯೪೭ರ ಮೇ ೨೦ರಂದು ಮೈಸೂರಿನ ಶ್ರೀ ಟಿ. ಸುಬ್ರಹ್ಮಣ್ಯ ಮತ್ತು ಎಸ್. ನಾಗರತ್ನಮ್ಮ ದಂಪತಿಗಳಿಗೆ ಜನಿಸಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ., ಪಿ.ಎಚ್.ಡಿ ಪದವೀಧರರು. ವೃತ್ತಿಯಿಂದ ಜೀವವಿಮಾ ನಿಗಮದ ಪ್ರತಿನಿಧಿಗಳು. ಇವರ ಪತಿ ಪ್ರೊ. ಎಸ್. ಬಾಲಸುಬ್ರಹ್ಮಣ್ಯ ಪ್ರಾಧ್ಯಾಪಕರು, ಲೇಖಕರು, ಕಲಾವಿದರು.

ಶ್ರೀವಳ್ಳಿಯವರ ಕೃತಿಗಳು :

೧. ಗಿರಿಬಾಲೆ ಅಕ್ಕನ ಓಲೆಗಳು ೨೦೧೩

೨. ಪಿ.ಎಚ್.ಡಿ.ಗಾಗಿ ಪ್ರೌಢಪ್ರಬಂಧ ’ಸರಸ್ವತಿ ಬಾಯಿ ರಾಜವಾಡೆ’ ಒಂದು ಅಧ್ಯಯನ (೨೦೦೦)

೩. ಗೋವಿಂದ ಪೈ ಪತ್ರಬಂಧ (೧೯೯೯)

೪. ಗಿರಿಬಾಲೆ (೧೯೯೪)

೫. ಸತ್ಯಕಾಮ

೬. ಗಿರಿಬಾಲೆ ಚಿಂತನಲಹರಿ

ಇವುಗಳಲ್ಲದೆ ಮಕ್ಕಳಿಗಾಗಿ ನಾಟಕಗಳನ್ನು ರಚಿಸಿದ್ದಾರೆ.

ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನೂ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ೧೯೯೬ರಿಂದ ಈವರೆಗೆ ನಡೆಸುತ್ತಿದ್ದಾರೆ.

                                                                             * * *

೧೩) ಬಿ.ಎಸ್. ರುಕ್ಕಮ್ಮ

೦೫-೦೯-೧೯೩೪ರಲ್ಲಿ ಶ್ರೀ ಬಿ.ಟಿ. ಶ್ರೀನಿವಾಸ ಅಯ್ಯಂಗಾರ್ ಮತ್ತು ಬಿ.ಎಸ್. ಸೀತಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಶ್ರೀಮತಿ ಬಿ.ಎಸ್.ರುಕ್ಕಮ್ಮ ಸ್ನಾತಕೋತ್ತರ ಪದವೀಧರರು. ಕನ್ನಡ ಭಾಷಾ ಉಪನ್ಯಾಸಕಿಯಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರುಕ್ಕಮ್ಮ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿ, ಸಾಹಿತ್ಯಲೋಕಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಪತಿ ಪ.ವಿ. ಚಂದ್ರಶೇಖರ್. ಇವರ ನಿರಂತರ ಪ್ರೋತ್ಸಾಹದಿಂದ ಲೇಖಕಿ ಬರವಣಿಗೆಯಲ್ಲಿ ತೊಡಗಿಸಿಕೊಂಡು, ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ.

ಶ್ರೀಮತಿ ಬಿ.ಎಸ್. ರುಕ್ಕಮ್ಮ ಇವರ ಕೃತಿಗಳು

೧. ವಿಜ್ಞಾನ ಸಾಹಿತ್ಯಕ್ಕೆ ಕೊಡುಗೆ

೧. ’ಕೀಟಗಳ ಒಡನಾಡಿ ಫೇಬರ್’ (೧೯೫೯-೬೦) (ಕನ್ನಡ ಸಂಸ್ಕೃತಿ-ಇಲಾಖೆಯಿಂದ ಬಹುಮಾನಿತ)

೨. ಮೇರಿಕ್ಯೂರಿ (ಜೀವನ ಚರಿತ್ರೆ ೧೯೬೮) ಪದವಿಪೂರ್ವ ಮತ್ತು ಬಿ.ಕಾಂ. ತರಗತಿಗಳಿಗೆ ಪಠ್ಯಪುಸ್ತಕವಾಗಿ (ತಿರುಪತಿ ವಿಶ್ವದ್ಯಾಲಯ) ಪಠ್ಯಪುಸ್ತಕವಾಗಿ ಆಯ್ಕೆಯಾಗಿ ಹೆಗ್ಗಳಿಕೆಗೆ ಪಾತ್ರವಾಗಿದೆ.

೨. ಸಂಪಾದಿತ ಕೃತಿಗಳು

೧. ಪ.ವಿ. ಚಂದ್ರಶೇಖರ್ -ಅವರೊಡನೆ ’ಸಂಯುಕ್ತ ಕೌಮುದಿ ಸಂಗ್ರಹ’

೨. ಪಂಚಾಮೃತ ಕನ್ನಡದ ಕಥೆಗಳು (ನೆಹರು ಬಾಲ ಪುಸ್ತಕಾಲಯ ಪ್ರಕಟಿತ)

೩. ಮಕ್ಕಳಸಾಹಿತ್ಯ (೧೯೮೪) ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿತ

೩. ಶಿಶುಸಾಹಿತ್ಯಕ್ಕೆ ಕೊಡುಗೆ

೧. ಅಮ್ಮನಿಗೆ ಪಾಪು ಹೇಳಿದ ಕಥೆಗಳು (೧೯೭೦) (ಭಾರತ ಸರ್ಕಾರದಿಂದ ಬಹುಮಾನಿತ)

೨. ಶಾಲೆಯ ಮಕ್ಕಳು

೩. ಮೇಕೆ ಮತ್ತು ಮೂರು ಮರಿಗಳು

೪. ಜಂಟಿ ಮತ್ತು ಜಾನಿ (ಈ ೨ ಪುಸ್ತಕಗಳೂ ರುಮೇನಿಯಾ ಸರ್ಕಾರದಿಂದ ಪ್ರಕಟಿತ)

೫. ನಂದಗೋಪಿ ಮತ್ತು ಕೃಷ್ಣ

೬. ವ್ಯಾಪಾರಿ ಮಂಗಣ್ಣ 

೭. ಕೆಂಡಸಂಪಿಗೆ

೭. ಕಚ ಮತ್ತು ಹರಿಹರ (೧೯೮೦) (ಭಾರತ ಭಾರತಿ ಪುಸ್ತಕ ಸಂಪದರಿಂದ ಪ್ರಕಟಿತ ಕುವೆಂಪು, ತಳುಕಿನ ವೆಂಕಯ್ಯ, ಆ.ರಾ.ಕೃ, ಆರ್ಯಾಂಬ ಪಟ್ಟಾಭಿ ಸಂಭಾವನ ಗ್ರಂಥಗಳಲ್ಲಿ -ಇವರ ಲೇಖನಗಳು ಪ್ರಕಟವಾಗಿವೆ.

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

                                                                 * * *      

೧೪) ಡಾ|| ತುಳಸೀ ರಾಮಚಂದ್ರ

ಶ್ರೀಮತಿ ಡಾ|| ತುಳಸೀ ರಾಮಚಂದ್ರ ಸಾಹಿತ್ಯ, ಸಂಗೀತ, ನೃತ್ಯ - ಈ ಮೂರು ಕ್ಷೇತ್ರಗಳಲ್ಲೂ ಸಾಧನೆಮಾಡಿರುವವರು. ಇವರ ಜನನ ಡಿಸೆಂಬರ್ ೨೧, ೧೯೫೧. ತಂದೆ ಎಂ.ಎಸ್. ಮಾಧವರಾವ್. ತಾಯಿ ಶ್ರೀಮತಿ ರುಕ್ಮಿಣಿಯಮ್ಮ. ಇವರು ಬಿ.ಎಸ್.ಸಿ., ಎಂ.ಎ.(ಕನ್ನಡ), ಪಿ.ಎಚ್.ಡಿ. ಪದವೀಧರರು.

ಶ್ರೀಮತಿ ತುಳಸಿ ರಾಮಚಂದ್ರ ಇವರ ಪತಿ ಶ್ರೀ ಕೆ. ರಾಮಚಂದ್ರ ನಿವೃತ್ತ ಕಾರ್ಯಪಾಲಕ ಇಂಜಿನಿಯರ್.

ಶ್ರೀಮತಿ ತುಳಸಿ ರಾಮಚಂದ್ರ ಇವರ ಕೃತಿಗಳು

೧. ಪದಗತಿ ಪಾದಗತಿ

೨. ಗೌಂಡಲೀ ಪ್ರೇರಣೆ

೩. ವೀರಶೈವ ಕಾವ್ಯಗಳಲ್ಲಿ ನೃತ್ಯ ಪ್ರಸಂಗ

೪. ಮಾಸ್ತಿಯವರ ನವರಾತ್ರಿ

೫. ಸಂಗೀತ ಮಕರಂದ (ಸಂಪಾದಿತ, ಅನುವಾದ)

ಶ್ರೀಮತಿ ತುಳಸಿ ರಾಮಚಂದ್ರ ಇವರ ಸಾಧನೆಗಳನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಪ್ರಶಸ್ತಿ ನೀಡಿ ಗೌರವಿಸಿದೆ.

೧. ೨೦೦೪ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ

೨. ಕರ್ನಾಟಕ ಕಲಾಶ್ರೀ ಗೌರವ

೩. ರೋಟರಿ ನಮನ ಪ್ರಶಸ್ತಿ

೪. ಹೊಯ್ಸಳ ಪ್ರಶಸ್ತಿ - ಇತ್ಯಾದಿ

                                                                           * * * 


೧೫) ವಿ. ಭ್ರಮರಾಂಬ ಮಹೇಶ್ವರಿ

ಶ್ರೀಮತಿ ಭ್ರಮರಾಂಬ ಮಹೇಶ್ವರಿ ಸಾಹಿತ್ಯ, ಸಂಗೀತ, ವೇದ, ಉಪನಿಷತ್‌ಗಳ ಅಧ್ಯಯನ ಮುಂತಾದ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡು ಇತರರಿಗೂ ಪ್ರೇರಣೆ ನೀಡುತ್ತಿದ್ದಾರೆ. ತಂದೆ ಶ್ರೀ ಎಸ್. ಪ್ರಸನ್ನಮೂರ್ತಿ. ತಾಯಿ ಶ್ರೀಮತಿ ಸಿ. ಲೀಲಾವತಿ. ಇವರು ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರ ಪತಿ ಶ್ರೀ ಕೆ.ಸಿ. ವಿಜಯಕುಮಾರ್ ನಿವೃತ್ತ ಇಂಜಿನಿಯರ್.

ಭ್ರಮರಾಂಬ ಮಹೇಶ್ವರಿ ರಚಿಸಿರುವ ಕೃತಿಗಳೆಲ್ಲಾ ಆಧ್ಯಾತ್ಮ ವಿಷಯಗಳನ್ನು ಕುರಿತಿದ್ದಾಗಿದೆ.

ಕೃತಿಗಳು

೧. ಗಾಯಿತ್ರಿ ಮಂತ್ರದ ಅಸಂಖ್ಯ ಶಕ್ತಿಗಳು ಹಾಗೂ ಸ್ತ್ರೀಯರಿಗೆ ಗಾಯಿತ್ರಿಯ ಅಧಿಕಾರ

೨. ವೇದಗಳ ಹಿರಿಮೆ

೩. ಸಂಸ್ಕಾರಗಳ ಮಹತ್ವ

೪. ವೇದೋಪನಿಷತ್ತು ಮತ್ತು ಶರಣ ಸಾಹಿತ್ಯದ ತೌಲನಿಕ ಅಧ್ಯಯನ

೫. ಮನುಸ್ಮೃತಿಯಲ್ಲಿ ಸ್ತ್ರೀಯರ ಸ್ಥಾನಮಾನ - ಇತ್ಯಾದಿ

ಇವರು ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

೧. ಮೈಸೂರಿನ ದಸರಾ ಮಹಿಳಾ ಪ್ರಶಸ್ತಿ - ೨೦೦೮

೨. ಬಸವನ ಬಾಗೇವಾಡಿಯ ’ಬಸವ ಭೂಷಣ’ ಪ್ರಶಸ್ತಿ

೩. ಬಿಜಾಪುರದ ಹಿಪ್ಪರಿಗೆ ಪ್ರತಿಷ್ಠಾನದ ಪ್ರಶಸ್ತಿ -೨೦೧೧

೪. ಮೈಸೂರಿನ ಸಂಘ ಸಂಸ್ಥೆಗಳಿಂದ ಸನ್ಮಾನ

೫. ಕರ್ಣಾಟಕ ಸರ್ಕಾರದ ’ಕಿತ್ತೂರು ರಾಣಿಚೆನ್ನಮ್ಮ’ ಪ್ರಶಸ್ತಿ

೬. ಹುಬ್ಬಳ್ಳಿಯ ’ಅವ್ವ’ ಪ್ರತಿಷ್ಠಾನದಿಂದ ’ಅವ್ವ’ ಪ್ರಶಸ್ತಿ.

               * * *

೧೬) ಡಾ|| ಸಿ.ಜಿ. ಉಷಾದೇವಿ

ಕನ್ನಡ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾಗಿರುವ ಡಾ|| ಸಿ.ಜಿ. ಉಷಾದೇವಿ ಮಹಿಳಾ ಸಾಹಿತ್ಯ, ವಚನ ಸಾಹಿತ್ಯಗಳೆರಡರಲ್ಲೂ ಆಸಕ್ತಿ ಇರುವ ಲೇಖಕರು. ಇವರ ತಂದೆ ಶ್ರೀ ಸಿ.ಎಸ್. ಗುರುಸಿದ್ಧಪ್ಪ, ತಾಯಿ ಶ್ರೀಮತಿ ಭ್ರಮರಾಂಬ. ಉಷಾದೇವಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ., ಬಿ.ಎಡ್., ಪಿ.ಎಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಟಿ.ನರಸೀಪುರದ ವಿದ್ಯೋದಯ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ.

ಇವರು ರಚಿಸಿ ಪ್ರಕಟಿಸಿರುವ ಕೃತಿಗಳು ಐದು.

೧. ಕನ್ನಡದಲ್ಲಿ ಐತಿಹಾಸಿಕ ನಾಟಕಗಳು (ಪ್ರೌಢ ಪ್ರಬಂಧ)

೨. ಕನ್ನಡದಲ್ಲಿ ಐತಿಹಾಸಿಕ ನಾಟಕಗಳು (ಸಂಕ್ಷಿಪ್ತ)

೩. ಶರಣೆ ಬೊಂತಾದೇವಿ

೪. ಶಿವಾನಂದ ಶರ್ಮ

೫. ಬೆಳಕಿಗೊಂದು ಹೆಜ್ಜೆ (ರೇಡಿಯೋ ಚಿಂತನಗಳ ಸಂಗ್ರಹ)

ಉಷಾದೇವಿಯವರ ಇತರ ಹವ್ಯಾಸಗಳು ಲೇಖನರಚನೆ, ಪ್ರಬಂಧಮಂಡನೆ, ಭಾಷಣ ನೀಡುವುದು, ಸಾಹಿತ್ಯ ಅಧ್ಯಯನ ಮತ್ತು ಸಂಗೀತ.

* * *

      ೧೭) ಡಾ. ಎಂ.ಎಸ್. ವಿಜಯಾಹರನ್

ಡಾ. ವಿಜಯಾಹರನ್ ಇವರ ಜನನ ೨೦ ಜುಲೈ ೧೯೫೨ರಂದು ಕೋಲಾರಜಿಲ್ಲೆಯ ಕೆ.ಜಿ.ಎಫ್.ನಲ್ಲಿ ತಂದೆ ಶ್ರೀ ಎಂ.ವಿ. ಶ್ರೀನಿವಾಸಮೂರ್ತಿ. ತಾಯಿ ಶ್ರೀಮತಿ ನರಸಮ್ಮ. ಇವರು ಎಂ.ಎ., ಪಿ.ಹೆಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಮೈಸೂರು ಆಕಾಶವಾಣಿಯ ನಿಲಯ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.

ಪ್ರಸಾರ ಕ್ಷೇತ್ರದಲ್ಲಿ ಹಲವು ಹೊಸ ಸಾಧನೆಗಳನ್ನು ಮಾಡಿದ್ದಾರೆ. ಬಹು ಮಾಧ್ಯಮ ಸಂದರ್ಭದಲ್ಲೂ, ಆಕಾಶವಾಣಿಯ ಸಾಮರ್ಥ್ಯ, ಪ್ರಸ್ತುತಿಯನ್ನು ಉಳಿಸಿಕೊಳ್ಳಲು ರೈತ ಬಂಧುಗಳಿಗೆ, ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ’ಬಾನುಲಿ ಬೆಳಗು’ ಎಂಬ ವಿಶೇಷ ಕಾರ್ಯಕ್ರಮಗಳ ಸರಣಿ ಪ್ರಸಾರವನ್ನೂ ತರಬೇತಿಗಳನ್ನೂ ಆಯೋಜಿಸಿದ್ದು ಪ್ರಸಾರ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಜನಮನ್ನಣೆಗಳಿಸಿತ್ತು.

ಆಕಾಶವಾಣಿಯ ಸಾಹಿತ್ಯ ಸಮ್ಮೇಳನವನ್ನು ಆಕಾಶವಾಣಿಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮೈಸೂರಿನಲ್ಲಿ ನಡೆಸಿದ್ದು ಅವರ ದೂರದೃಷ್ಟಿ. ಮಹತ್ವಾಕಾಂಕ್ಷೆಗೂ ಸಾಕ್ಷಿಯಾಗಿದೆ. ಅವರು ನಿರ್ಮಿಸಿದ ಅನೇಕ ಕಾರ್ಯಕ್ರಮಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಆಕಾಶವಾಣಿ ವಾರ್ಷಿಕ ಪ್ರಶಸ್ತಿಗಳು ಲಭ್ಯವಾಗಿವೆ.

ಸಾಹಿತ್ಯದ ಗಂಭೀರ ವಿದ್ಯಾರ್ಥಿನಿಯಾಗಿ, ಸಮೂಹ ಮಾಧ್ಯಮದ ಗಟ್ಟಿಗೊಂಡ ಸಾಂಸ್ಕೃತಿಕ ಕಾಳಜಿ ಇರುವ ಇವರು ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ.

ಆನಂದರ ಬದುಕು ಬರಹ - ಒಂದು ಅಧ್ಯಯನ

’ಅಲೋಕ’ - ಸಾಹಿತ್ಯಿಕ ಪ್ರಬಂಧಗಳ ಸಂಕಲನ

ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಗಾದೆಗಳು - ಸಂಶೋಧನಾತ್ಮಕ ಕೃತಿ

ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಓದುಗರ ಮನದಾಳದ ಮಾತು - ನಮ್ಮ ಭೈರಪ್ಪನವರು

’ಗಾದೆ ಗದ್ದುಗೆ -ನೂರಾರು ಗಾದೆಗಳ ಪ್ರಸಾರದ ಪುಸ್ತಕರೂಪ

ಸಂಪಾದಿತ ಕೃತಿಗಳು -ಸಂಕೇತಿ ಬೇಸಾಯದ ಬದುಕು

ಆನಂದ ಅವರ ಸಮಗ್ರ ಕತೆಗಳು

ಆಕಾಶವಾಣಿ ಸಾಹಿತ್ಯ, ಮೈಸೂರು ಆಕಾಶವಾಣಿಯ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಇತ್ಯಾದಿ. ಇವರ ಪತಿ ಡಾ.ಬಿ.ಎಸ್. ಪ್ರಣತಾರ್ತಿ ಹರನ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.

ಇವರ ಮಾತೃಭಾಷೆ ಕನ್ನಡ. ತಿಳಿದಿರುವ ಇತರ ಭಾಷೆಗಳು ತೆಲುಗು, ತಮಿಳು, ಸಂಕೇತಿ, ಇಂಗ್ಲೀಷ್, ಹಿಂದಿ, ಸಂಸ್ಕೃತ.

ಇವರ ಸೇವೆಗೆ ಸಂದಿರುವ ಪ್ರಶಸ್ತಿಗಳು

೧) ಕನ್ನಡ ಲೇಖಕಿಯರ ಸಂಘ ಮೈಸೂರಿನಿಂದ ಸನ್ಮಾನ.

೨) ರೋಟರಿ ಸಂಸ್ಥೆಯಿಂದ ’ವರ್ಷದ ಶ್ರೇಷ್ಠ ಸಾಧಕಿ’ ವಿಶೇಷ ಸನ್ಮಾನ

೩) ಗಮಕ ಕಲಾ ಪರಿಷತ್ ಹಾಸನ ಶಾಖೆಯ ಸನ್ಮಾನ

೪) ಸಮುದ್ಯತಂ ಶ್ರೋತೃ ಸಂಘದಿಂದ ಸನ್ಮಾನ ಹಾಗೂ ಹಲವು ಸ್ಥಳೀಯ ಸಂಘ ಸಂಸ್ಥೆಗಳಿಂದ ಸನ್ಮಾನಗಳು ಲಭಿಸಿವೆ.

* * *


ಬುಧವಾರ, ಮಾರ್ಚ್ 31, 2021

ಬಸರೀ ಭಾಗ್ಯವೂ ಬಾಣಂತನದ ಅನುಭವವೂ

 ನಮ್ಮ ಮಗಳು ಅಕ್ಷರಿ, ಅಳಿಯ ಮಹೇಶ ಅಮೇರಿಕಾವಾಸಿಗಳಾಗಿದ್ದಾಗ ನಾವಿಬ್ಬರೂ (೨೦೧೯) ಅಲ್ಲಿಗೆ ಹೋಗಿದ್ದೆವು. ಆಗ ಅಕ್ಷರಿ ಚೊಚ್ಚಲ ಗರ್ಭ ಹೊತ್ತಿದ್ದಳು. ಅಲ್ಲಿ ನಾವು ಸಾಕಷ್ಟು ತಿರುಗಿದ್ದೆವು. ಗರ್ಭಿಣಿಯಾಗಿದ್ದಾಗ ಪ್ರಯಾಣ ಮಾಡಬಾರದು ಎಂದೇನೂ ಅಮೇರಿಕಾದಲ್ಲಿ ಹೇಳುವುದಿಲ್ಲ. ನಮ್ಮಲ್ಲಾದರೆ ಅಷ್ಟೆಲ್ಲ ಪ್ರಯಾಣ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ರಸ್ತೆಗಳ ಸ್ಥಿತಿ ಏರು ತಗ್ಗು ದಿಣ್ಣೆ ಇತ್ಯಾದಿ ಜಾಸ್ತಿ. ಅಲ್ಲಾದರೆ ಹಾಗಲ್ಲ. ಸಪಾಟು ರಸ್ತೆ. ಪ್ರಯಾಣದ ಆಯಾಸ ಇಲ್ಲವೇ ಇಲ್ಲ.  ಕಾರಿನಿಂದ ಆಗಾಗ ಇಳಿದು ಕಾಲಿಗೆ ವ್ಯಾಯಾಮ ಕೊಡಿ ಎಂದಿದ್ದರು. ಹಾಗೆ ನಾವೂ ಧೈರ್ಯದಿಂದ ಪ್ರಯಾಣ ಬೆಳೆಸಿದ್ದೆವು.

ಆರನೆಯ ತಿಂಗಳು ತುಂಬುತ್ತಿದ್ದಂತೆ   ಅಕ್ಷರಿ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದಳು. ಮೈಸೂರಿನಲ್ಲೇ ಹೆರಿಗೆಯಾಗಬೇಕು, ಮಗು  ಭಾರತದ ಪ್ರಜೆಯಾಗಿಯೇ ಜನುಮ ತಾಳಬೇಕು ಎಂದು ನಮ್ಮೆಲ್ಲರ ಇಚ್ಛೆಯಾಗಿತ್ತು.  ಅಮೇರಿಕಾದಲ್ಲೇ ಹೆರಿಗೆಯಾಗಲಿ, ಇಲ್ಲಿಯ ಪೌರತ್ತ್ವ ಸಿಗುತ್ತದೆ. ಮುಂದೆ ಓದಲು ಇಲ್ಲಿ ಬರಬೇಕಾದರೆ ಸುಲಭವಾಗುತ್ತದೆ ಎಂದು ಸಲಹೆ ಕೊಟ್ಟವರಿದ್ದರು. ಮಗು ಮುಂದೆ ಸ್ವಂತ ಬಲದಿಂದ ಬೇಕಾದರೆ ಅಮೇರಿಕಾಗೆ ಹೋಗಿ ಓದಲಿ. ಅವರೆಲ್ಲರ ಸಲಹೆಗೆ ಅವಳದೊಂದೇ ದೃಢ ಉತ್ತರ.

  ಅಕ್ಷರಿ ಮೈಸೂರಿಗೆ ಬಂದ ಬಳಿಕ ನೆಂಟರಿಷ್ಟರು ಆಗಾಗ ಮನೆಗೆ ಬಂದು ಅವಳ ಯೋಗಕ್ಷೇಮ ವಿಚಾರಿಸಿ ಹೋಗುತ್ತಿದ್ದರು. ಬರುವಾಗ ಅಕ್ಷರಿಗೆ ಇಷ್ಟವೆಂದು ಸಿಹಿತಿಂಡಿ, ಕುರುಕುಲು ತಿಂಡಿ ಯಥೇಚ್ಛವಾಗಿ ತರುತ್ತಿದ್ದರು. ಡಬ್ಬಗಳಲ್ಲಿ ತಿಂಡಿ ಕಾಲಿಯಾದದ್ದೇ ಇಲ್ಲ. ಒಬ್ಬರಾದ ಮೇಲೆ ಒಬ್ಬರು ಬರುತ್ತ ತಿಂಡಿ ತರುತ್ತಲೇ ಇದ್ದರು. ಅಜ್ಜಿ ಮನೆ, ದೊಡ್ಡಮ್ಮಂದಿರ ಮನೆ, ಚಿಕ್ಕಮ್ಮನ ಮನೆ, ಅತ್ತೆ ಮನೆಯಿಂದ ಎಂದು ತಿಂಡಿ ತಪ್ಪುತ್ತಲೇ ಇರಲಿಲ್ಲ. ಅನಂತನೋ ಸಿಹಿಪ್ರಿಯ. (ಊಟಕ್ಕೆ ಏನಾದರೂ ಸಿಹಿ ಇದ್ದರೆ ಅವನಿಗಿಷ್ಟ. ಏನಿಲ್ಲವೆಂದರೆ ಚಾಕಲೇಟ್, ಕಡ್ಲೆಚಿಕ್ಕಿ ಅದೂ ಆಗುತ್ತದೆ!) ಆ ಸಮಯದಲ್ಲಿ ಸಿಹಿತಿಂಡಿಗೆ ಬಸರೀ ಭಾಗ್ಯ ಎಂದು ಅನಂತ ಹೆಸರಿಟ್ಟಿದ್ದ. ಊಟಕ್ಕೆ ಕೂತಾಗಲೆಲ್ಲ, ನಾವು ಸಿಹಿ ಇಡಲು ಮರೆತರೂ, ಬಸರೀ ಭಾಗ್ಯ ಹೊರ ಬರಲಿ. ಇಲ್ಲಾಂದರೆ ಕಸಂಟೀತು.  ಎಂದು ಹೇಳಲು ಮರೆಯುತ್ತಿರಲಿಲ್ಲ! ಅಮೃತ ಫಲ, ಬರ್ಫಿ, ಬಾಳೆಹಣ್ಣು ಹಲ್ವ, ಗೋಧಿ ಹಲ್ವ, ಬೇಸನ್ ಲಾಡು, ಮೈಸೂರು ಪಾಕು, ಇತ್ಯಾದಿ ಸಿಹಿತಿಂಡಿಗಳು. ಅಕ್ಷರಿ ಎಷ್ಟು ತಿಂದಳೋ ಗೊತ್ತಿಲ್ಲ. ಅನಂತನಿಗಂತೂ ಪ್ರತಿದಿನ ಹಬ್ಬ. ಅವನಂತೂ ಸಿಹಿತಿಂಡಿಗೆ ನ್ಯಾಯ ಸಲ್ಲಿಸಿದ. ಹಾಗೆ ನಿರಂತರ ಸಿಹಿ ತಿಂದು ಅವನ ತೂಕವೂ ಏರಿತು. ಪ್ಯಾಂಟಿಗೆ ಗುಂಡಿ ಇನ್ನೊಂದು ಹೊಲಿಯಬೇಕಾಯಿತು. ಇತ್ತ ಕರಿದ ತಿಂಡಿ ತಿಂದು ನನ್ನ ತೂಕವನ್ನೂ ಏರಿಸಿಕೊಂಡೇ ಮಗಳ ಬಾಣಂತನ ಮಾಡಲು ಸಜ್ಜಾದೆ! ಅತ್ತೆ ಮನೆಯಲ್ಲಿ ಸೀಮಂತ ಶಾಸ್ತ್ರವೂ ಆಯಿತು, ಬರುತ್ತ, ಇನ್ನಷ್ಟು ಸಿಹಿತಿಂಡಿ ಕಪ್ಪಕಾಣಿಕೆಗಳೊಂದಿಗೆ ಹಿಂದಿರುಗಿದೆವು!  ಅಳಿಯ ಸೀಮಂತ ಶಾಸ್ತ್ರ ಮುಗಿಸಿ ಅಮೇರಿಕಾಗೆ ವಾಪಾಸು ಹೋದ.

  ಸಿದ್ದಮ್ಮಳಿಗೆ ಸಡಗರವೋ ಸಡಗರ. ಅಕ್ಷರವ್ವ, ನೀವು ಹೆರಿಗೆ ಬಾಣಂತನಕ್ಕೆ ಇಲ್ಲಿ ಬಂದು ಒಳ್ಳೆಯ ಕೆಲಸ ಮಾಡಿದ್ರಿ. ಎಂದು ದಿನಕ್ಕೆ ಒಂದೆರಡು ಸಲಾವಾದರೂ ಹೇಳಿದರೇ ಸಮಾಧಾನ ಅವಳಿಗೆ. ಆಗ ಅಕ್ಷರಿಯೂ, ಹೌದು, ಆ ಚಳಿಯಲ್ಲಿ ಮನೆಯೊಳಗೆ ಅಬ್ಬ, ಸಾಧ್ಯವಿಲ್ಲವಪ್ಪ ಅಲ್ಲಿ. ಸ್ನಾನ ಕೂಡ ಟಬ್ಬಲ್ಲಿ ಮಾಡಬೇಕಿತ್ತು. ಇಲ್ಲಾದರೆ ಸ್ನಾನ ಮಾಡಿಸಲು ನೀನಿದ್ದೀಯ. ಎನ್ನುತ್ತಿದ್ದಳು. ಆಗ ಸಿದ್ದಮ್ಮನಿಗೆ ಸಂತಸ ಉಕ್ಕಿ ಹರಿಯುತ್ತಲಿತ್ತು.

   ನೀನು ಅಕ್ಷರಿಗೆ  ಸ್ನಾನ ಮಾಡಿಸುತ್ತೇನೆಂದು ಹೇಳಿದ್ದೆ. ಆದರೆ ಮಗುವಿಗೆ ಸ್ನಾನ ಮಾಡಿಸಲು ನಿನಗೆ ಬರುವುದಿಲ್ಲವಲ್ಲ. ಏನು ಮಾಡುವುದು ಈಗ? ಎಂದು ಒಂದು ದಿನ ಕೇಳಿದೆ ಸಿದ್ದಮ್ಮಳನ್ನು. ನೀವ್ಯಾಕೆ ಚಿಂತೆ ಮಾಡುತ್ತೀರ? ಯಾರನ್ನಾದರೂ ಕರೆ ತರುತ್ತೇನೆ. ನಮ್ಮ ಮಗಳು ಛಾಯಾಳ ಅತ್ತೆ ಪುಟ್ಟಮ್ಮ ಮಗುವಿಗೆ ಚೆನ್ನಾಗಿ ನೀರು ಹಾಕುತ್ತಾಳೆ. ಅವಳಿಗೆ ಹೇಳ್ತೇನೆ ಎಂದು ಅಭಯವನ್ನಿತ್ತಳು. ಆ ಸಮಸ್ಯೆ ನಿವಾರಣೆ ಆದ ಖುಷಿಯಿಂದ ಗೋಣಾಡಿಸಿ, ನೀನಿರುವಾಗ ನನಗೇಕೆ ಚಿಂತೆ ಎಂದು ಹೇಳಿ ಚಿಂತ್ಯಾಕೆ ಮಾಡುತ್ತಿದ್ದಿ ಸಿದ್ದಮ್ಮಳಿದ್ದಾಳೆ ಎಂದು ಹಾಡು ಗೊಣಗಿದೆ!

    ಆ ಸಮಯದಲ್ಲಿ ಅಕ್ಷರಿಯೂ ನಾನು ದಿನಾ ಸಂಜೆ ಒಂದೊಂದು ಉದ್ಯಾನವನಕ್ಕೆ ವಾಯುವಿಹಾರಕ್ಕೆ ಹೋಗುತ್ತಿದ್ದೆವು. ಮೂರು ನಾಲ್ಕು ಕಿಮೀ ನಡೆಯುತ್ತಿದ್ದೆವು.  ಸಿಹಿ ತಿಂಡಿ, ಕುರುಕು ತಿಂದದ್ದನ್ನು ಸ್ವಲ್ಪವಾದರೂ ಅರಗಿಸಿಕೊಳ್ಳಬೇಕಲ್ಲ!

  ಈ ಮಧ್ಯೆ ಅಕ್ಷರಿಗೆ ಒಣಕೆಮ್ಮು ಬಾಧಿಸಿತು. ಬೇರೆ ಔಷಧಿ ತೆಗೆದುಕೊಳ್ಳುವಂತಿಲ್ಲ. ಕಾಕೆಮಾಚಿ (ಗಿಣಿಕೆ) ಸೊಪ್ಪಿನ ಪಲ್ಯ ಮಾಡಿಕೊಡಿ ಎಂದಿದ್ದರು ಸಿದ್ದಮ್ಮ ಹಾಗೂ ನಾಗರತ್ನ. ಆದರೆ ಸೊಪ್ಪು ಸಿಗಬೇಕಲ್ಲ. ನಮ್ಮಲ್ಲಿ ಒಂದೇ ಒಂದು ಗಿಡವಿತ್ತು. ಒಂದು ದಿನ ತಂಬುಳಿ ತಿಂದದ್ದಾಯಿತು. ಸೊಪ್ಪು ಖಾಲಿ. ಅನಂತನ ಗುರುತಿನವರಾದ ರವೀಶ ಮನೆಗೆ ಬಂದಾಗ ಅಕ್ಷರಿ ಕೆಮ್ಮುವುದನ್ನು ನೋಡಿ, ಕಾಕೆಮಾಚಿ ಸೊಪ್ಪಿನ ಪಲ್ಯ ಸ್ವಲ್ಪ ದಿನ ತಿನ್ನಿ. ಕೆಮ್ಮು ಹೋಗುತ್ತೆ ಎಂದು ನುಡಿದು ಅವರು ಕೆಲಸಕ್ಕಿದ್ದ ತೋಟದಿಂದ ಆಗಾಗ ಸೊಪ್ಪು ಕಳುಹಿಸಿಕೊಟ್ಟಿದ್ದರು. ಏನಾಶ್ಚರ್ಯ! ಆ ಸೊಪ್ಪಿನ ಪಲ್ಯ, ತಂಬುಳಿ ಸೇವಿಸಿದ್ದೇ ಕೆಮ್ಮು ಮಾಯವಾಗಿತ್ತು. ಅವರೆಲ್ಲರ ಈ ಕಾಳಜಿಗೆ ಎಷ್ಟು ಧನ್ಯವಾದ ಅರ್ಪಿಸಿದರೂ ಸಾಲದು.

 ಬಸರಿಯಲ್ಲಿ ಯಾವ ತರಕಾರಿ ತಿನ್ನಬಹುದು ತಿನ್ನಬಾರದು ಎಂದು ಒಬ್ಬೊಬ್ಬರು ಒಂದೊಂದು ಸಲಹೆ ಕೊಡುತ್ತಿದ್ದರು. ಹಸಿಮೆಣಸು ತಿನ್ನಲೇಬೇಡಿ, ಕೆಂಪುಮೆಣಸು ತಿನ್ನಿ ಒಳ್ಳೆಯದು.  ಬಾಳೆದಿಂಡು ತಿನ್ನಬೇಡಿ ಅದು ಉಷ್ಣ ಎಂದು ಒಬ್ಬರೆಂದರೆ, ಬಾಳೆದಿಂಡು ತಿನ್ನಬಹುದು ಏನಾಗಲ್ಲ ಎಂದು ಒಬ್ಬರು. ಹೀಗೆ ಸಂದಿಗ್ಧ ಪರಿಸ್ಥಿತಿ ಬಂದಿತ್ತು. ನಾವೇನೂ ಅಂಥ ಮಾತುಗಳಿಗೆ ಹೆಚ್ಚು ಮಹತ್ತ್ವ ಕೊಟ್ಟಿರಲಿಲ್ಲ. ಅಕ್ಷರಿ ಬಾಳೆದಿಂಡು ತಿಂದಿದ್ದಳು.

   ನಮ್ಮ ಅತ್ತೆಯ ತಂಗಿ ಸೀತಾ. ಅವರ ಮನೆಗೆ ನಾವು ಹೋದಾಗಲೆಲ್ಲ ನೀರು ಮಾವಿನಕಾಯಿ ಚಟ್ನಿ ಮಾಡಿಡುತ್ತಿದ್ದರು. ಅದು ಅಕ್ಷರಿಗೆ ಬಹಳ ಇಷ್ಟ. ಹಾಗೆ ಒಮ್ಮೆ ಸೀತತ್ತೆ ಫೋನ್ ಮಾಡಿ ಬಸರಿಗೆ ಏನು ತಿನ್ನಬೇಕೆಂದು ಬಯಕೆ ಆಗುತ್ತದೆ ಎಂದು ಅವಳನ್ನು ಕೇಳಿದ್ದರು. ನೀವು ಮಾಡುವ ನೀರು ಮಾವಿನಕಾಯಿ ಚಟ್ನಿ ತಿನ್ನಬೇಕೆಂದು ಆಸೆ ಆಗುತ್ತದೆ. ನೀವು ಇಲ್ಲಿಗೆ ಬರುವಾಗ ಮಾವಿನಕಾಯಿ ತಂದು ಇಲ್ಲಿ ಮಾಡಿಕೊಡಿ ಎಂದು ಅವಳು ತಮಾಷೆಗೆ ಹೇಳಿದ್ದಳು. ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡು, ಅವರಿಗೆ ಬರಲು ಆರೋಗ್ಯದ ತೊಂದರೆ ಎಂದು, ಒಂದಷ್ಟು ನೆಂಟರಿಷ್ಟರಿಗೆ ಫೋನ್ ಮಾಡಿ ನಿಮ್ಮಲ್ಲಿ ನೀರು ಮಾವಿನಕಾಯಿ ಇದೆಯಾ ಎಂದು ಕೇಳಿ, ಅವರ ಒಬ್ಬ ತಂಗಿ ಮನೆಯಲ್ಲಿ ಇದೆ ಎಂದು ತಿಳಿದು, ಅಲ್ಲಿಂದ ಇಲ್ಲಿಗೆ ಬರುವವರೊಡನೆ ಕಳುಹಿಸಲು ಏರ್ಪಾಡು ಮಾಡಿ ನೀರು ಮಾವಿನಕಾಯಿ ಕಳುಹಿಸಿಕೊಟ್ಟಿದ್ದರು! ನೀರು ಮಾವಿನಕಾಯಿ ತಲಪಿತು. ಆದರೆ ನೀವು ಮಾಡಿಕೊಟ್ಟರೆ ನನ್ನ ಬಯಕೆ ತೀರುವುದು ಎಂದು ಅಕ್ಷರಿ ಅವರ ಕಾಲೆಳೆದಿದ್ದಳು!

    ನಮ್ಮ ಅತ್ತೆಯ ಸ್ನೇಹಿತೆ ನಾಗಮ್ಮನವರು ದೂರವಾಣಿಸಿ, ಅಕ್ಷರಿಗೆ ಹೆರಿಗೆಗೆ ದಿನ ಸಮೀಪಿಸಿತಾ? ಯಾರು ಸಹಾಯಕ್ಕೆ ಬರುತ್ತಾರೆ? ನಿಮ್ಮ ಅಮ್ಮ ಬರುತ್ತಾರ? ಏಕೆ ಕೇಳಿದೆ ಅಂದರೆ ನಿನಗೆ ಹೊಸದಲ್ವೆ? ಅನುಭವ ಬೇಕಲ್ಲ. ನಿಭಾಯಿಸುವುದು ಕಷ್ಟ. ಸಹಾಯ ಬೇಕಾದರೆ ಹೇಳು ಎಂದಿದ್ದರು. ನಮ್ಮ ವಾರಗಿತ್ತಿ ಮಂಗಳೂರಿಂದ ಬರುತ್ತೇನೆಂದಿದ್ದಾಳೆ. ನಿಮ್ಮ ಈ ಪ್ರೀತಿಯೇ ಸಾಕು. ಬೇಕಿದ್ದರೆ ಖಂಡಿತಾ ನಿಮಗೆ ದೂರವಾಣಿಸುತ್ತೇನೆ ಎಂದು ಹೇಳಿದಾಗ ಅವರಿಗೆ ಸಮಾಧಾನವಾಯಿತು.

 ನಾಲ್ಕಾರು ಮನೆ ಕೆಲಸ ಮಾಡುವ ಭಾಗ್ಯ, ನಾಗರತ್ನ, ಚಿಕ್ಕತಾಯಮ್ಮ ಮನೆಗೆ ಬಂದು, ಬಾಣಂತಿ, ಮಗುವಿನ ಬಟ್ಟೆ ಒಗೆಯಲು, ಇತ್ಯಾದಿ ನಿಮಗೆ ಏನಾದರೂ ಸಹಾಯ ಬೇಕಾದರೆ ಫೋನ್ ಮಾಡಿ. ಸಂಕೋಚ ಮಾಡಿಕೊಳ್ಳಬೇಡಿ ಎಂದು ಹೇಳಿ ಹೋಗಿದ್ದರು.  ಎಷ್ಟೆಲ್ಲ ಜನ ಸಹಾಯ ಹಸ್ತ ಚಾಚಿದ್ದಾರಲ್ಲ ಎಂದು ಅವರಿಗೆಲ್ಲ ಮನ ಧನ್ಯವಾದ ಅರ್ಪಿಸಿತು. 

  ಅಕ್ಷರಿಗೆ ತಿಂಗಳು ತುಂಬಿ ಹೆರಿಗೆಗೆ ದಿನ ಸಮೀಸಿದಾಗ ಮಹೇಶ ವಿದೇಶದಿಂದ ಆಗಮಿಸಿದ. ಹೆರಿಗೆ ಸಮಯದಲ್ಲಿ ನಾನು ಬರುವೆ ಎಂದು ದೇವಕ್ಕಿ ಅಕ್ಕ ಹೇಳಿದ್ದವಳು ಮಂಗಳೂರಿನಿಂದ ಬಂದದ್ದು ನಮಗೆ ನಿರಾಳವಾಯಿತು. ಜಯಶ್ರೀ ಅಮೇರಿಕಾದಿಂದ ತವರಿಗೆ ಬಂದವಳಿದ್ದಳು. ಅವಳೂ ಆ ಸಮಯದಲ್ಲಿ ಬಂದಳು. ಇಬ್ಬರು ವಾರಗಿತ್ತಿಯರೂ ಬಂದದ್ದು ಮನೆ ಮನ ತುಂಬಿತು. ೪ ಜನವರಿ ೨೦೧೯ರಂದು ಅಕ್ಷರಿಗೆ ಹೆರಿಗೆಯಾಯಿತು. ಗಂಡು ಮಗು ಧರೆಗೆ ಇಳಿದ. ಆಸ್ಪತ್ರೆಯಲ್ಲಿ ನಾಲ್ಕು ದಿನ ಇದ್ದೆವು. ಮನೆ ಕಡೆ ಯಾವ ಚಿಂತೆಯೂ ಇರಲಿಲ್ಲ. ಎಲ್ಲ ಕೆಲಸ ದೇವಕ್ಕಿ ಅಕ್ಕ, ಜಯಶ್ರೀ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅವರ ಈ ಸಹಾಯ ಲಭಿಸಿದ್ದು ನಮಗೆ ಬಹಳ ಉಪಕಾರವಾಯಿತು.



   ಇತ್ತ ಬಾಣಂತನದ ಕೆಲಸ ಸುರುವಾಯಿತು. ಮಗುವಿಗೆ ಸ್ನಾನ ಮಾಡಿಸಲು ಪುಟ್ಟಮ್ಮ ಬಂದಳು. ಒಂದು ತಿಂಗಳು ಗಂಧ ಚಂದನ ಮೈಗೆ ಹಚ್ಚಿ ಸ್ನಾನ. ೨ನೇ ತಿಂಗಳಿನಿಂದ ತುಪ್ಪ ಹಚ್ಚಿ ಸ್ನಾನ. ೨ ತಿಂಗಳು ಬಹಳ ಚೆನ್ನಾಗಿ ಸ್ನಾನ ಮಾಡಿಸಿದಳು. ಮಗುವಿಗೆ ಬಿಸಿನೀರು ಸುರಿದದ್ದೇ ಸುರಿದದ್ದು. ಅವರು ಹಾಕುವ ಬಿಸಿ ನೋಡಿ ನಾವು ಹೌಹಾರಿ ಇಷ್ಟು ಬಿಸಿ ಬೇಡ ಎಂದದ್ದಕ್ಕೆ, ನಿಮಗೆ ಗೊತ್ತಿಲ್ಲ. ಇಷ್ಟು ಬಿಸಿ ಹಾಕಬೇಕು. ಬಿಸಿ ನೀರು ಹಾಕಿ ಸ್ನಾನ ಮಾಡಿಸಿದರೇ ಮೈ ಬರುವುದು ಎಂದಿದ್ದರು. ಆಗ ಸಿದ್ದಮ್ಮನೂ ಹೌದವ್ವ, ಪುಟ್ಟಮ್ಮ ಸ್ನಾನ ಮಾಡಿಸಿದ ಮಕ್ಕಳೆಲ್ಲರೂ ಮೈಕೈ ತುಂಬಿ ಚೆನ್ನಾಗಿ ಬೆಳೆದಿದ್ದಾರವ್ವ ಎಂದು ಶಿಫಾರಿಸಿದಳು. ಆದರೂ ನಮಗೆ ಧೈರ್ಯ ಬರಲೇ ಇಲ್ಲ, ಡಾಕ್ಟ್ರು ಹೇಳಿದ್ದಾರೆ. ಇವನಿಗೆ ಇಷ್ಟು ಬಿಸಿನೀರು ಸ್ನಾನ ಮಾಡಿಸಬಾರದೆಂದು. ಎಂದು ಹೇಳಿದ್ದೆವು. ಆಗ ಮನಸ್ಸಿಲ್ಲದ ಮನಸ್ಸಿನಿಂದ ಸ್ವಲ್ಪ ಬಿಸಿ ಕಡಿಮೆ ಮಾಡಿದಳು. (ನಾವು ಬಿಸಿ ಬಿಸಿ ನೀರು ಹಾಕಲು ಬಿಡದೆ ಇದ್ದ ಕಾರಣ ಅವನು ಮೈತುಂಬಿ ಬೆಳೆಯಲಿಲ್ಲ. ಕಡ್ಡಿ ಪೈಲ್ವಾನನಾಗಿ ಬೆಳೆದದ್ದಿರಬೇಕು ಎಂದು ಈಗ ಅನಿಸುತ್ತದೆ!)  ಅವನಿಗೋ ತಲೆಗೆ ಸ್ನಾನ ಮಾಡಿಸಲೇ ಬಾರದು. ಮೈಗೆ ಎಷ್ಟು ನೀರು ಹಾಕಿದರೂ ಸೊಲ್ಲಿಲ್ಲ. ತಲೆಗೆ ನೀರು ಹಾಕಿದ ಕೂಡಲೇ ಸ್ವರ ತಾರವೇರುತ್ತಿತ್ತು. ನಿಲ್ಲಿಸುತ್ತಲೇ ಇರಲಿಲ್ಲ. ಸಾಕು ಸಾಕಾಗುತ್ತಿತ್ತು ಪುಟ್ಟಮ್ಮಳಿಗೆ.  ನನ್ನ ರಾಜ, ಚಿನ್ನು, ಆಯಿತು ಪುಟ್ಟ ಎಂದು ಎಷ್ಟು ರಮಿಸಿದರೂ ಅವನೇನೂ ಸುಮ್ಮನಾಗುತ್ತಿರಲಿಲ್ಲ. ಈಗಲೂ ಅಷ್ಟೆ ತಲೆಗೆ ನೀರು ಸುರಿದಾಕ್ಷಣ ಬೊಬ್ಬೆಯೇ. ಪುಟ್ಟಮ್ಮ ಮೈ ತಿಕ್ಕುವುದು, ಸಿದ್ದಮ್ಮ ನೀರು ಹಾಕುವುದು. ಮಗುವಿಗೆ ಒಬ್ಬರೇ ನೀರು ಹಾಕಿ ಸ್ನಾನ ಮಾಡಿಸಲು ಅವರಿಗೆ ಆಗುವುದಿಲ್ಲವಂತೆ. ನೀರು ಹಾಕಲು ಇನ್ನೊಬ್ಬರು ಇರಲೇಬೇಕಂತೆ. ನಮ್ಮಲ್ಲೆಲ್ಲ ಮಗುವನ್ನು ಕಾಲಲ್ಲಿ ಮಲಗಿಸಿ ಒಬ್ಬರೇ ನೀರು ಹಾಕಿ ಸ್ನಾನ ಮಾಡಿಸುತ್ತಿದ್ದುದು.

  ಮಗುವಿಗೆ ತುಪ್ಪ ಹಚ್ಚಿ ಕೈ ಕಾಲು ವ್ಯಾಯಾಮ ಮಾಡಿಸಬೇಕು ಎಂದು ತಿಳಿಸಿಕೊಟ್ಟಿದ್ದೆ ಪುಟ್ಟಮ್ಮಳಿಗೆ. ಅವಳು ತುಪ್ಪ ಮೆಲ್ಲಗೆ ಸವರಿ, (ಉಜ್ಜಿದರೆ ನೋವಾಗಬಾರದಲ್ಲ!) ಕೈ ಕಾಲನ್ನು ಮೇಲೆ ಕೆಳಗೆ ಒಮ್ಮೆ ಮಾಡಿ ಸಾಕು ಎನ್ನುತ್ತಿದ್ದಳು! ಅದನ್ನು ನೋಡಿ, ಇನ್ನು ಇವಳಿಗೆ ಈ ಕೆಲಸ ಹೇಳಬಾರದು ಎಂದು ನಾನೇ ತುಪ್ಪಹಚ್ಚಿ ಕೈಕಾಲು ವ್ಯಾಯಾಮ ಮಾಡಿಸುತ್ತಿದ್ದೆ.  ಕೈ ಕಟ್ಟಿ ಬಿಗಿದು ಮಾಡಿದರೆ ಅವನಿಗೆ ಬಹಳ ಸಂತೋಷ ಆಗುತ್ತಿತ್ತು.



  ಅವರು ಹೇಗೆ ಸ್ನಾನ ಮಾಡಿಸುತ್ತಾರೆ ಎಂದು ನಾವು ಹೋಗಿ ನೋಡುತ್ತಿದ್ದೆವು. ಅದು ಅವರಿಗೆ ಸರಿ ಬರುತ್ತಿರಲಿಲ್ಲ. ನೀವು ನೋಡ ಬಾರದು. ಕಣ್ಣೆಸರು ಆಗುತ್ತೆ ಮಗುವಿಗೆ ಎನ್ನುತ್ತಿದ್ದರು!  ನಾವು ಕಲಿತುಕೊಳ್ಳಬೇಕಲ್ಲ ಅದಕ್ಕೆ ನೋಡುವುದು ಎಂದು ಸಮಜಾಯಿಸಿ ಕೊಟ್ಟಿದ್ದೆವು! ಮಗಳು ವೀಡಿಯೋ ಕೂಡ ಮಾಡಿದಳು. ಅಕ್ಷರಿ ಊಟ ಮಾಡುವಾಗ ಅಪ್ಪಿತಪ್ಪಿಯೂ ಸಿದ್ದಮ್ಮ ಅಲ್ಲಿ ಕಾಲಿಡುತ್ತಿರಲಿಲ್ಲ. ಬಾಣಂತಿ ಊಟ ಮಾಡುವುದನ್ನು ನೋಡಬಾರದಂತೆ!

     ಅಕ್ಷರಿಗೆ ಸರಿಯಾಗಿ ಎಣ್ಣೆ ಮಸಾಜು ಮಾಡಿ ಬಿಸಿ ಬಿಸಿ ನೀರು ಒಂದು ಹಂಡೆ ಸ್ನಾನ ಮಾಡಿಸುತ್ತಿದ್ದಳು ಸಿದ್ದಮ್ಮ. ನಮ್ಮಲ್ಲಿ ಸೋಲಾರ್ ಇದ್ದರೂ ಅದು ಒಳ್ಳೆಯದಲ್ಲ ಮಗು ಬಾಣಂತಿಗೆ ಎಂದು ಸಿದ್ದಮ್ಮ ಒಲೆ ಉರಿ ಹಾಕಿ ಬಿಸಿ ನೀರು ಕಾಯಿಸುತ್ತಿದ್ದುದು! ಸಿದ್ದಮ್ಮ ತನ್ನ ಮಗಳಿಗಿಂತಲೂ ಹೆಚ್ಚಿನ ಮಮತೆಯಿಂದ ನೀರು ಹಾಕಿದ್ದಳು. ಸ್ನಾನದ ಸಮಯದಲ್ಲಿ ಅಕ್ಷರಿಗೂ ಅವಳಿಗೂ ಪುಂಖಾನುಪುಂಖವಾಗಿ ಮಾತಿನ ಲಹರಿ ನಡೆಯುತ್ತಲೇ ಇತ್ತು. ಇಬ್ಬರಿಗೂ ಮಾತು ಬಲು ಖುಷಿ. ಮಾತಿನ ಭರದಲ್ಲಿ ಸಲುಗೆಯಿಂದ ಏಕವಚನವೇ ಬರುತ್ತಿತ್ತಂತೆ. ಅದು ಸ್ನಾನದ ಮನೆಯಲ್ಲಿ ಮಾತ್ರ!  ಸ್ನಾನವಾದ ಮೇಲೆ ಅಕ್ಷರಿ ಹೊಟ್ಟೆಗೆ ಬಟ್ಟೆ ಬಿಗಿದು, ರಗ್ಗು ಹೊದ್ದು ಮಲಕ್ಕೊಳ್ಳಿ ಎನ್ನುತ್ತಿದ್ದಳು. ಇವಳು ಅವಳು ಇರುವಲ್ಲಿವರೆಗೆ ಹೊದ್ದಂತೆ ಮಾಡಿ ಆಚೆ ಹೋದ ಕೂಡಲೇ ಅಬ್ಬ ಸೆಖೆ ಎಂದು ರಗ್ಗು ಆಚೆ ಹಾಕುತ್ತಿದ್ದಳು. ಫ್ಯಾನ್ ಹಾಕಬಾರದು ಎಂದು ಉಪದೇಶಿಸಿದ್ದಳು. ಫ್ಯಾನ್ ಹಾಕಿದರೆ ಏನಾಗಲ್ಲ ಎಂದು ಅವಳಿಗೆ ಅಕ್ಷರಿ ಪಾಟ ಮಾಡಿದ್ದಳು. ಪಾಟ ಕೇಳಿ ಪ್ರಭಾವಿತಳಾದ ಸಿದ್ದಮ್ಮನೂ ಫ್ಯಾನ್ ಹಾಕಲು ಒಪ್ಪಿಗೆ ಕೊಟ್ಟಿದ್ದಳು!

   ಸಿದ್ದಮ್ಮ, ಅವಳ ಮಗಳು ಛಾಯಾ, ಅವಳತ್ತೆ ಪುಟ್ಟಮ್ಮ ಸೇರಿ್ಕೊಂಡು ಮಗು ಬಾಣಂತಿಯ ಎಲ್ಲ ಕೆಲಸವನ್ನೂ ಬಹಳ ಶ್ರದ್ಧೆ, ಪ್ರೀತಿಯಿಂದ ಮಾಡಿಕೊಟ್ಟಿದ್ದರು.

ಸಿದ್ದಮ್ಮ, ಛಾಯಾ
     ಸ್ನಾನವಾದಮೇಲೆ ಮಗು ಮಲಗುತ್ತಿದ್ದ. ಅವನನ್ನು ನಿದ್ದೆ ಮಾಡಿಸಲು ನಾವು ತೆಗೆದುಕೊಂಡಷ್ಟು ಸಮಯ ಕೂಡ ಅವನು ನಿದ್ದೆ ಮಾಡುತ್ತಿರಲಿಲ್ಲ! ಅಬ್ಬ ಇನ್ನೇನು ನಿದ್ದೆ ಮಾಡಿದ ಎಂದು ಮಲಗಿಸಿ ಬೇರೆ ಕೆಲಸಕ್ಕೆ ಹೋದರೆ ಹಿಂದಿನಿಂದಲೇ ಅಳು ಕೇಳಿಸುತ್ತಿತ್ತು! ಈಗಿನ ಮಕ್ಕಳಿಗೆ ನಿದ್ದೆ ಬಹಳ ಕಮ್ಮಿ ಎಂದು ನನ್ನನುಭವಕ್ಕೆ ಬಂದಿದೆ.  ರಾತ್ರೆ ಮಲಗಲು ಬಹಳ ಹೊತ್ತು ಮಾಡುತ್ತಾನೆ.  ಹೆತ್ತವರು ತಡ ರಾತ್ರೆ ಮಲಗಲು ತೆರಳಿದರೆ ಮಕ್ಕಳು ಕೂಡ ನಿಮ್ಮನ್ನು ಅನುಸರಿಸುತ್ತಾರೆ ಎಂದು ನಾನು ಮಗಳಿಗೆ ಹೇಳುತ್ತಿದ್ದೆ.

    ಮಗು ರಾತ್ರೆ ರಚ್ಚೆಕಟ್ಟಿ ಒಂದೆರಡು ಸಲ ಅತ್ತದ್ದಿತ್ತು. ಮಗು ಏಕೆ ಹಾಗೆ ಅಳುತ್ತಿದೆ ಎಂದು ತಿಳಿಯಲು ಈಗ ಅಜ್ಜಿ, ಅಮ್ಮನ ಅವಶ್ಯವಿಲ್ಲ.  ಗೂಗಲಮ್ಮನ ಒಳ ಹೊಕ್ಕು, ಓ ಅದು ಹೊಟ್ಟೆ ನೋವಿಗೆ ಅಳುತ್ತಿರುವುದು. ಹೊಕ್ಕುಳ ಸುತ್ತ ಇಂಗು ಹಚ್ಚಿದರೆ ಹೊಟ್ಟೆ ನೋವು ಕಡಿಮೆ ಆಗುತ್ತದೆ ಎಂದು ತಿಳಿದುಕೊಂಡು ಆ ಚಿಕಿತ್ಸೆ ಮಾಡಿದ್ದಳು! ಮಗು ಕೂಡ ಅಳು ನಿಲ್ಲಿಸಿ ನಿದ್ರಿಸಿತ್ತು! ಗ್ರೈಪ್ ವಾಟರ್ ಕೊಡು, ನಿನಗೆ ನಾನು ಅದೇ ಕೊಟ್ಟಿದ್ದೆ ಎಂದು ತಾಯಿ, ಅಜ್ಜಿ ಹೇಳುವ ದೃಶ್ಯ ಅವಶ್ಯವಿಲ್ಲ ಈಗ!

 ಮಗುವಿಗೆ ಮಾತ್ರವಲ್ಲ ಅವಳಿಗೂ ಏನಾದರೂ ಅಸೌಖ್ಯವಾದರೆ ಗೂಗಲಮ್ಮ ಪರಿಹಾರ ಸೂಚಿಸುತ್ತಿದ್ದಳು! ಅವಳು ದಶಮೂಲ ಅರಿಷ್ಟವನ್ನು ದಿನಕ್ಕೆ ಒಮ್ಮೆ ತೆಗೆದುಕೊಂಡಿದ್ದಳು. ಬೇರೆ ಔಷಧಿ ಲೇಹ್ಯ ಯಾವುದೂ ಇಲ್ಲ. ಪೌಷ್ಟಿಕ ಲಡ್ಡು (ಒಣಹಣ್ಣುಗಳನ್ನು ಹಾಕಿ) ಒಮ್ಮೆ ಮಹೇಶ ರುಚಿಯಾಗಿ  ಮಾಡಿದ್ದ. ಎರಡು ಸಲ ಮಾಡಿದ್ದೆವು ಅಷ್ಟೆ.  


 ಬಾಣಂತನ ಮಾಡುವ ಅನುಭವ ಸ್ವಲ್ಪ ಈ ಮೊದಲೇ ನನಗೆ ಇತ್ತು. ನನ್ನ ಅಕ್ಕಂದಿರ ಬಾಣಂತನ, ನನ್ನ ಬಾಣಂತನದ ನೆನಪಿನಿಂದ ಹಾಗೂ ಅಮ್ಮ, ಅಕ್ಕನಿಗೆ ದೂರವಾಣಿಸಿ ಸಲಹೆ ಪಡೆದು ಅಕ್ಷರಿಯ ಬಾಣಂತನ ಮಾಡಲು ಏನೂ ಕಷ್ಟವಾಗಲಿಲ್ಲ. ಹೆರಿಗೆಯಾಗಿ ಹತ್ತು ದಿನ ಬೆಳಗ್ಗೆ ಕುಚ್ಚಿಲಕ್ಕಿ ಗಂಜಿ, ಮತ್ತೆ ಬೆಳಗ್ಗೆ ನೀರುದೋಸೆ, ಅಕ್ಕಿ ಮುದ್ದೆ, ಅಕ್ಕಿ ರೊಟ್ಟಿ ಇತ್ಯಾದಿ, ಮಧ್ಯಾಹ್ನ ತಂಬುಳಿ, ಪಲ್ಯ, ಸೋರೆಕಾಯಿ ಬೋಳುಹುಳಿ, ಸಾಂಬಾರು, ಮಜ್ಜಿಗೆಹುಳಿ ನಮಗೆ ನಿತ್ಯ ಏನು ಮಾಡುತ್ತದೋ ಅದೇ ಅವಳ ಆಹಾರದ ಸೇವನೆ. ಮಗುವಿಗೆ ಆರು ತಿಂಗಳ ತನಕ ತಾಯಿಹಾಲು ಬಿಟ್ಟು ಬೇರೇನೂ ಕೊಡಲಿಲ್ಲ. ನೀರು ಸಹಿತ ಕುಡಿಸಲಿಲ್ಲ. ಆರು ತಿಂಗಳನಂತರ ೧೦ ತಿಂಗಳವರೆಗೂ ಕೂವೆಹುಡಿ ಮಣ್ಣಿ, ರಾಗಿ ಮಣ್ಣಿ. ಒಮ್ಮೊಮ್ಮೆ ಗಿವುಚಿದ ಅನ್ನ ಬೇಳೆ ತರಕಾರಿ.  ೧೦ ತಿಂಗಳನಂತರ   ಬೆಳಗ್ಗೆ ದೋಸೆ, ಇಡ್ಲಿ ಇತ್ಯಾದಿ. ಮದ್ಯಾಹ್ನ ಅನ್ನ ಸಾರು ತರಕಾರಿ ಇತ್ಯಾದಿ. ಊಟ. ಊಟ ತಿಂಡಿಯಲ್ಲಿ ಬಹಳ ರುಚಿ ಆಸ್ವಾದಿಸುವ ಕಲೆ ಈಗಿನಿಂದಲೇ ಬಂದಿದೆ ಅವನಿಗೆ! ರುಚಿ ಇಲ್ಲಾಂದರೆ ಹಾಕಿದ ತುತ್ತನ್ನು ಮುಲಾಜಿಲ್ಲದೆ ಉಗಿಯುತ್ತಿದ್ದ.

   ಮಗುವಿನ ಆರೈಕೆ, ಮಗಳ ಬಾಣಂತನ ಪಾಲನೆಯಲ್ಲಿ ದಿನ ಸರಿದದ್ದೇ ತಿಳಿಯಲಿಲ್ಲ. ಇಂದು ಯಾವ ದಿನ? ಯಾವ ತಿಂಗಳು ಎಂದೂ ತಿಳಿಯಲು ಸಮಯವಿಲ್ಲ! ಮಗು ಬಾಣಂತಿ ನೋಡಲೆಂದು ನೆಂಟರಿಷ್ಟರ ಆಗಮನ, ಹೀಗೆಯೇ ಮನೆಯಲ್ಲಿರುವ ನಾವು ಸಂಭ್ರಮದಿಂದ ದಿನ ಕಳೆದೆವು.




        ಮಗುವಿಗೆ ಆರು ತಿಂಗಳು ಕಳೆದಾಗ ನಾಮಕರಣವೂ ಅದ್ದೂರಿಯಾಗಿ ನೆರವೇರಿತು. ಮಗುವಿಗೆ  ಆರುಷ್ ಎಂದು ನಾಮಾಂಕುರ ಮಾಡಲಾಯಿತು.  ಆರುಷನ ಬಾಲಲೀಲೆಗಳನ್ನು ನೋಡುತ್ತ ದಿನ ಸರಿದದ್ದು ಬಲು ಬೇಗ ಎನಿಸಿತ್ತು.

  ಆರುಷನಿಗೆ ಬಲು ಚಂದದ ಮರದ ತೊಟ್ಟಿಲು ಮಾಡಿಸಿದ್ದೆವು. ಅದರಲ್ಲಿ ಅವನು ಮಲಗಿದ್ದೇ ಬಲು ಕಡಿಮೆ. ಆಟಕ್ಕೆ ಮಾತ್ರ ಅದರಲ್ಲಿ ಮಲಗುತ್ತಿದ್ದ. ಮಂಗಳೂರಿನ ದೇವಕ್ಕಿ ಅಜ್ಜಿ ಅವನಿಗೆ ಒಂದು ಜೋಲಿ ಕೊಟ್ಟಿದ್ದರು. ಅದರಲ್ಲಿ ಮಲಗುವುದೆಂದರೆ ಅವನಿಗೆ ಬಲು ಖುಷಿ. ಒಂದು ವರ್ಷದ ತನಕವೂ ಅದರಲ್ಲೆ ಮುದುಡಿ ಮಲಗಿ ಖುಷಿಯಿಂದ ನಿದ್ರಿಸಿದ್ದ. ಆರುಷನಿಗೆ ಪ್ರೀತಿ ತೋರಿಸಿದವರು ಅದೆಷ್ಟು ಮಂದಿ. ಡಜನುಗಟ್ಟಲೆ ಅಂಗಿ, ಚಡ್ಡಿ, ಆಟದ ಸಾಮಾನು ಉಡುಗೊರೆಯಾಗಿ ಬಂದಿತ್ತು. ನಮ್ಮ ಸಿದ್ದಮ್ಮ ಆರುಷನಿಗೆ (ಅವಳು ಕರೆಯುವುದು ನಮ್ಮ ಚಿನ್ನು) ಚಿನ್ನದ ಉಂಗುರ ಮಾಡಿಸಿ ತಂದು, ಅವ್ವ, ನೀವು ಬೈಬೇಡಿ. ರವಿ (ಅವಳ ಮಗ) ಮಾಡಿಸಿ ತಂದದ್ದು ಇದು ನಮ್ಮ ಚಿನ್ನುಗೆ ಎಂದು ಕೊಟ್ಟಿದ್ದಳು! ಛಾಯಾ ಪುಟ್ಟಮ್ಮ ತೊಟ್ಟಿಲಿಗೆ ಕಟ್ಟಲು ಗಿರಗಟ್ಲೆ ಗೊಂಬೆ ತಂದಿದ್ದರು. ನಾಗರತ್ನ ರೂ ೫೦೦ ಕೊಟ್ಟು ಹರಸಿದ್ದಳು.  ಇವರೆಲ್ಲರ ಪ್ರೀತಿಗೆ ನಮೋ ನಮಃ  

ಕೃಷ್ಟಾಷ್ಟಮಿ ದಿನ ಆರುಷನಿಗೆ ಕೃಷ್ಣನ ವೇಷ ಹಾಕಿ ನಾವು ಸಂಭ್ರಮಿಸಿದೆವು.


       ಆರುಷನಿಗೆ ಮೊದಲ ಜನುಮದಿನದ ಸಂಭ್ರಮವೂ ಕಳೆಯಿತು. ಕೆಲವೇ ಮಂದಿ ನೆಂಟರಿಷ್ಟರೊಡನೆ ಸರಳವಾಗಿ ಆಚರಿಸಿದೆವು. ಆರುಷ ಬುಗ್ಗೆ ನೋಡಿ ಬಹಳ ಖುಷಿ ಪಟ್ಟ. ಅವನಮ್ಮ ಮನೆಯಲ್ಲೇ ಕೇಕ್ ತಯಾರಿಸಿದ್ದನ್ನು ಖುಷಿಯಿಂದ ಕೈಯಲ್ಲಿ ಹಿಚುಕಿ ಮುಖಕ್ಕೆ ಅವನೇ ಮೆತ್ತಿಕೊಂಡು ಖುಷಿಪಟ್ಟ. ಅವನ ಅವತಾರ, ಖುಷಿ ನೋಡಿ ನಾವೂ ನಕ್ಕು ನಲಿದೆವು.


   ಮಕ್ಕಳನ್ನು ಬೆಳೆಸುವ ಬಗೆ ಹೇಗೆ ಎಂದು ನಮ್ಮ ಅತ್ತೆಯ ಸ್ನೇಹಿತೆ ಸುಂದರೀಮಣಿ  ಅಕ್ಷರಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದರು. ನೀನು ಅಡುಗೆ ಮಾಡುವ ಸಮಯದಲ್ಲಿ ಮಗುವಿಗೆ ಒಂದು ತಟ್ಟೆಯಲ್ಲಿ ಪುರಿ ಹಾಕಿ ಕೊಡು. ಅವನು ಅದನ್ನು ನೆಲಕ್ಕೆ ಚೆಲ್ಲಿ ಒಂದೊಂದೆ ಹೆಕ್ಕಿ ತಿನ್ನುವಾಗ ನಿನ್ನ ಕೆಲಸ ಮುಗಿಯುತ್ತದೆ. ಮಗುವಿಗೆ ಸಂಗೀತ ಹಾಕು. ಕೇಳಿ ಖುಷಿ ಪಡುತ್ತವೆ ಎಂದಿದ್ದರು. ಮಗಳು ಅವರ ಈ ಸಲಹೆಯನ್ನು ಚಾಚೂ ತಪ್ಪದೆ ಅನುಸರಿಸಿ ಗೆದ್ದಿದ್ದಳು.

    
ಈಗ ಆರುಷ್ ನಮಗೆ ಶಿಸ್ತಿನ ಪಾಟ ಕಲಿಸುವಷ್ಟು ತಯಾರಾದ. ಪೇಪರ್ ಓದುತ್ತ ಕಾಫಿ ಹೀರಿ, ಲೋಟ ಅಲ್ಲೇ ಕೆಳಗೆ ಇಟ್ಟು ಬಿಡುವ ಸ್ವಭಾವ ನನ್ನದು. ಆರುಷ್ ಅದನ್ನು ನೋಡಿ ಕೈ ತೋರಿಸಿ ಅಲ್ಲಿಂದ ಅದನ್ನು ತೆಗೆಯುವವರೆಗೂ ಬಿಡುವುದಿಲ್ಲ! ಅವನೇ ಲೋಟ ಎತ್ತಿ ಅಡುಗೆ ಮನೆಯಲ್ಲಿಟ್ಟು ಬರುತ್ತಾನೆ. ನೀರು ಚೆಲ್ಲಿದ್ದು ಕಂಡರೆ ಅದನ್ನು ಆ ಕೂಡಲೇ ಒರೆಸಬೇಕು. ಅಲ್ಲೆ ಯಾವ ಬಟ್ಟೆಯಾದರೂ ಕಂಡರೆ ಅವನೇ ಹೋಗಿ ಬಟ್ಟೆ ತಂದು ಒರೆಸುತ್ತಾನೆ. ಅವನು ಮೂತ್ರ ಮಾಡಿದರೂ ಅಷ್ಟೆ. ಅವನ ಚಡ್ಡಿ ಅಲ್ಲೆ ಇದ್ದರೆ ಅದರಲ್ಲೇ ಒರೆಸುತ್ತಾನೆ. ನನ್ನ ಚೂಡಿದಾರದ ಶಾಲು ಇದ್ದರೆ ಅದನ್ನೇ ವರೆಸಲು ಉಪಯೋಗಿಸುತ್ತಾನೆ! ಅನ್ನದ ಮುಚ್ಚಳ, ತುಪ್ಪದ ಮುಚ್ಚಳ, ಮೇಲೋಗರದ ಮುಚ್ಚಳ ತೆಗೆದಿಟ್ಟರೆ, ಮುಚ್ಚುವಲ್ಲಿವರೆಗೂ ಬಿಡುವುದಿಲ್ಲ. ಕೋಪ ಬಂದರೆ ನಮ್ಮ ಕೂದಲೂ ಎಳೆಯುತ್ತಾನೆ. ಆಗ ಅದೇನು ಶಕ್ತಿ, ಕಣ್ಣಲ್ಲಿ ನೀರೇ ಬಂದೀತು ನಮಗೆ. ನೀನು ಕೂದಲು ಎಳೆಯುವುದು ತಪ್ಪಲ್ವಾ? ಎಂದು ಜೋರು ಮಾಡಿದರೆ ಕೂಡಲೇ ತನ್ನ ಪುಟ್ಟ ಕೈಯನ್ನು ನಮ್ಮ ಮುಖಕ್ಕೆ ಸವರಿ ತಲೆ ಕೆಳಗೆ ಹಾಕಿ ಕ್ಷಮೆ ಕೋರುತ್ತಾನೆ. ಆಗ ನಮಗೆ ಬಂದ ಸಿಟ್ಟೆಲ್ಲ ಕರಗಿ ಮಾಯವಾಗಿ ಅವನನ್ನು ಮುದ್ದಿಸುವಂತಾಗುತ್ತದೆ. ಅಲ್ಲಿಗೆ ಅವನು ಸಂತುಷ್ಟ.


   ಕೊರೊನಾ ಹಾವಳಿಯಿಂದಾಗಿ ಆರುಷ್ ಒಡನಾಟ ಲಭಿಸಿದ್ದು ಲಾಭವಾಯಿತು. 










  ಆರುಷನಿಗೆ ಎರಡು ವರ್ಷವೂ ತುಂಬಿ ಜನುಮದಿನಾಚರಣೆಯೂ ನಡೆಯಿತು.




    ಮಕ್ಕಳು ಈ ಪ್ರಾಯದಲ್ಲಿ ನಮ್ಮನ್ನು ನೋಡಿ ಕಲಿಯುತ್ತವೆ. ಹಾಗಾಗಿ ನಾವು ಒಳ್ಳೆಯ ಮಾತನ್ನೇ ಆಡಬೇಕು. ನಮ್ಮ ಸದ್ವರ್ತನೆಯಿಂದ ಮಕ್ಕಳೂ ಒಳ್ಳೆಯ ಬುದ್ಧಿ ಕಲಿಯುತ್ತಾರೆ. ಮಕ್ಕಳು ಹಟ ಮಾಡಿ ಅತ್ತು ರಂಪ ಮಾಡಿದರೆ ಅವರ ಗಮನ ಬೇರೆಡೆಗೆ ಸೆಳೆಯಬೇಕು, ಇಲ್ಲವೆ ಅವರನ್ನು ಅಲ್ಲೇ ಬಿಟ್ಟು ಅವರ ಸುದ್ದಿಗೇ ಹೋಗಬಾರದು. ಆಗ ಸರಿಯಾಗುತ್ತಾರೆ ಎಂದಿದ್ದೆ ಮಗಳಿಗೆ. ಅವಳೇನೂ ನನ್ನ ಮಾತನ್ನು ಒಪ್ಪಿರಲಿಲ್ಲ ಆಗ. ಗೂಗಲಮ್ಮನ ಮೊರೆ ಹೊಕ್ಕು ಪರಿಶೀಲಿಸಿದಾಗ ನೀನು ಹೇಳಿದ್ದು ಸರಿ. ಹಾಗೆಯೇ ಮಾಡಬೇಕೆಂದು ಗೂಗಲಿನಲ್ಲಿತ್ತು ಎಂದಿದ್ದಳು! ಗೂಗಲಮ್ಮನ ಶಂಖದಿಂದ ಬಂದರೇ ತೀರ್ಥ! ಗೂಗಲಮ್ಮನಿಗೆ ಜೈ. ಅಕ್ಷರಿಯ ಬಾಣಂತನದ ಸಮಯದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದವರಿಗೆಲ್ಲ ತುಂಬು ಹೃದಯದಿಂದ ಧನ್ಯವಾದ ಅರ್ಪಿಸುತ್ತೇವೆ. ಇಲ್ಲಿಗೆ ಬಾಣಂತಿ ಪುರಾಣವನ್ನು ಕೊನೆಗಾಣಿಸುತ್ತೇನೆ.






ಶುಕ್ರವಾರ, ಮಾರ್ಚ್ 19, 2021

ಚರಿತ್ರೆಗೆ ಸಾಕ್ಷಿ ಚನ್ನರಾಯನ ದುರ್ಗ

     ಮೈಸೂರಿನ ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ೧೮ ಮಂದಿ ಸದಸ್ಯರು ತಾರೀಕು ೧೪-೩.೨೦೨೧ರಂದು ಮಿನಿ ಬಸ್ಸಿನಲ್ಲಿ ಕೊರಟಗೆರೆ ಚನ್ನರಾಯನದುರ್ಗಕ್ಕೆ ಬೆಳಗ್ಗೆ ೫.೪೫ಕ್ಕೆ ಹೊರಟೆವು. ಬಸ್ ಹತ್ತಿ ಕುಳಿತ ಬಳಿಕ ಹೆಚ್ಚಿನ ಮಂದಿಯೂ ನಿದ್ರಾದೇವಿಗೆ ಶರಣಾದರು.

   ಚನ್ನಮಲ್ಲನಾಯಕ ನವತರುಣ. ಈಗಾಗಲೇ ಕೆಲವಾರು ಸ್ಠಳಗಳಿಗೆ ಚಾರಣದ ನೇತೃತ್ವ ವಹಿಸಿ ಯಶಸ್ವಿಯಾಗಿದ್ದ.   ತಿಂಡಿಗೆ ೮.೩೦ಗೆ ನಿಲ್ಲಿಸುವುದೆಂದು ಹೇಳಿದ್ದ ನಾಯಕ, ಒಳ್ಳೆ ಸ್ಥಳ ಸಿಗಲು ಕಾಯುತ್ತಿದ್ದ. ಆ ಒಳ್ಳೆಯ ಸ್ಥಳ ೯ ದಾಟಿದರೂ ಅವನಿಗೆ ಸಿಗಲೇ ಇಲ್ಲ! ಆಗ ಒಂದಿಬ್ಬರು ಎದ್ದು ಒಂದೆಡೆ ಬಸ್ ನಿಲ್ಲಿಸುವಲ್ಲಿ ಸಫಲರಾದರು. ಒಂದು ಹುಣಸೆ ಮರದಡಿಯಲ್ಲಿ ಉಪ್ಪಿಟ್ಟು, ಕೇಸರಿಬಾತ್ ತಿಂದಾಗ ಬುಸುಗುಡುತ್ತಿದ್ದ ಹೊಟ್ಟೆರಾಯ ತೃಪ್ತಿಗೊಂಡ.  ಬರುವಾಗಲೇ ಡಬ್ಬದಲ್ಲಿ ತಿಂಡಿ ಊಟ ತಯಾರಿಸಿ ತಂದಿದ್ದರು.  ಬುತ್ತಿ ಡಬ್ಬಕ್ಕೆ ಮೊಸರನ್ನ, ಬಿಸಿಬೇಳೆಭಾತ್ ಹಾಕಿಕೊಂಡರು. ನಾನು ಉಪ್ಪಿಟ್ಟು ಪ್ರಿಯಳಾದ್ದರಿಂದ ಉಪ್ಪಿಟ್ಟೇ ತುಂಬಿಸಿಕೊಂಡೆ. ಸೌತೆಕಾಯಿ ಕೊಟ್ಟರು.

    ತುಮಕೂರು ದಾಟಿ ನಾವು ತುಂಬಾಡಿ ಬಸ್ ನಿಲ್ದಾಣದ ಬಳಿ ಸಿದ್ದರಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ (ದೊಡ್ಡ ಕಮಾನು ಇದೆ) ಎಡಕ್ಕೆ ತಿರುಗಿ ಕೆಲವಾರು ಕಿಮೀ ಸಾಗಿದಾಗ ಕೊರಟಗೆರೆಯ ಚನ್ನರಾಯನದುರ್ಗ ತಲಪಿದೆವು. ಅಲ್ಲಿ ಬಸ್ಸಿಳಿದು, ಊರೊಳಗಿನ ದಾರಿಯಲ್ಲಿ ಸಾಗಿದಾಗ ಹೆಂಗಸರು ಮನೆ ಮುಂದೆ ಹುಣಸೆಹಣ್ಣು, ಹೊಂಗೆ ಬೀಜ ಕುಟ್ಟುತ್ತಿದ್ದುದು ಕಂಡೆವು. ಅವರನ್ನು ಮಾತಾಡಿಸುತ್ತ ಮುಂದೆ ಹೋಗಿ ದೊಡ್ದದಾದ ಬಂಡೆ ಬುಡಕ್ಕೆ ಹೋದೆವು. ಇಲ್ಲಿಂದಲೇ ದುರ್ಗಕ್ಕೆ ಹೋಗಲು ದಾರಿ ಸುರುವಾಗುತ್ತದೆ. ಆ ಬಂಡೆಯನ್ನು ಹತ್ತಲು ತೊಡಗಿದೆವು. ಹತ್ತಲು ಭಯಪಡುವವರ ಕೈ ಹಿಡಿದು ಮುನ್ನಡೆಸಿದೆವು. ಬಂಡೆ ಏರಲು ಅಭ್ಯಾಸ ಇರುವವರಿಗೆ ಕಷ್ಟವೇನಿಲ್ಲ.


  ಬಿಸಿಲು ಜೋರಾಗಿದ್ದರೂ ತಣ್ಣಗೆ ಗಾಳಿ ಬೀಸುತ್ತಿದ್ದುದರಿಂದ ನಮಗೆ ಕಷ್ಟವಾಗಲಿಲ್ಲ. ಬಂಡೆ ಮೇಲೆ ಹತ್ತುವ ಸಂತೋಷ ಅನುಭವಿಸಿದೆ.  (ಹಿಂದಿನ  ವಾರ ದಾಂಡೇಲಿ ಚಾರಣ ಹೋಗಿದ್ದಾಗ, ಬಿಸಿಲಬೇಗೆಗೆ ಬಹಳ ಸುಸ್ತಾಗಿತ್ತು. ಇನ್ನು ಬೇಸಿಗೆ ಕಾಲದಲ್ಲಿ ಚಾರಣ ಹೊರಡುವುದಿಲ್ಲ ಎಂದು ಆ ಸಮಯದಲ್ಲಿ ಶಪಥ ಕೈಗೊಂಡಿದ್ದೆ. ೪ ದಿನ ಕಳೆದಾಗ ಈ ದುರ್ಗಕ್ಕೆ ಒಂದು ಹೋಗುತ್ತೇನೆ ಎಂದು ಶಪಥ ಮುರಿದು ಹೊರಟದ್ದು!)   

   ಎರಡು ಬೃಹತ್ ಬಂಡೆಯನೇರಿ ಮೇಲೆ ಹೋದಾಗ ಕೋಟೆಯ ಮೊದಲ ದ್ವಾರ ಎದುರಾಯಿತು.  ಒಟ್ಟು ಮೂರು ಹಂತದಲ್ಲಿ ಈ ಕೋಟೆ ಇವೆ. ಮೊದಲ ಹಂತದಲ್ಲಿ ಕೆರೆ ಹಾಗೂ ದೇವಾಲಯ ಇದೆ.  ವಿಶಾಲ ಸ್ಥಳದಲ್ಲಿ ಒಂದು ಕೆರೆ ಕಾಣುತ್ತದೆ. ಅದರಲ್ಲಿ ಈಗಲೂ ನೀರಿದೆ. ಮಳೆ ನೀರು ಸಂಗ್ರಹವದು. ಕೆರೆ ಏರಿಯ ಬಂಡೆಮೇಲೆ ಒಂದು ಸುಂದರ ಕೆತ್ತನೆಯ ದೇವಾಲಯವಿದೆ. ಈಗ ಪಾಳುಬಿದ್ದಿದೆ. ನಿಧಿ ಶೋಧಕ್ಕೆಂದು ಶಿವಲಿಂಗ, ಗಣಪತಿ ಮೂರ್ತಿಯನ್ನು  ಕಿತ್ತು ಹಾಕಿ ಗುಂಡಿ ತೋಡಿದ್ಡಾರೆ. ಎಂಥ ನೀಚರು ಅವರು.







  

ನಾವು ಹತ್ತಿದ್ದು ಕೋಟೆಯ ಹಿಂಬಾಗಿಲಿನ ಮೂಲಕ ಎಂದ ಚೆನ್ನಮಲ್ಲನಾಯಕ. ನಮ್ಮನ್ನು ಕೋಟೆಯ ಮುಂಬಾಗಿಲು ತೋರಿಸಲು ಕೆಳಗೆ ಇಳಿಸಿದ. ಅಲ್ಲಿ ಕಲ್ಲಿನ ಗೋಡೆಯಲ್ಲಿಅಭಯ ಹಸ್ತವಿರುವ ಆಂಜನೇಯನ ಮೂರ್ತಿ ಬಹಳ ಸುಂದರವಾಗಿ ಕೆತ್ತಿದ್ದು ಕಂಡೆವು. ಅಲ್ಲಿಂದ ಕೆಳಗೆ ಪುಟ್ಟ ಗುಡಿ ಕಾಣುತ್ತದೆ. ಆ ಸ್ಥಳದಿಂದ ಕೋಟೆಯನ್ನು ಹತ್ತುವ ದಾರಿ. ಅಲ್ಲಿಂದ ಹತ್ತಲು ಅರಣ್ಯ ಇಲಾಖೆಯವರ ಅನುಮತಿ ಬೇಕಂತೆ. ಹಾಗಾಗಿ ಎಲ್ಲರೂ ಹಿಂಬಾಗಿಲಿನ ಮೂಲಕ ಹತ್ತುತ್ತಾರೆ ಎಂದ. ಅಲ್ಲಿ ಸ್ವಲ್ಪ ಹೊತ್ತು ಕೂತೆವು.







   ಪ್ರತೀ ದ್ವಾರದಲ್ಲೂ ಪುಟ್ಟ ಮಂಟಪವಿದೆ. ಅಲ್ಲಿ ಬಹಳ ತಂಪಾದ ವಾತಾವರಣ. ಅಲ್ಲಿ ಆರಾಮವಾಗಿ ಕೂತು, ನೀರು ಕುಡಿದು ಮುಂದುವರಿದೆವು. ನಾವು ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸುತ್ತ, ನಿಧಾನವಾಗಿಯೇ ಹತ್ತಿದೆವು.




    ಎರಡನೆ ಹಂತದಲ್ಲಿ ಕೋಟೆ ಗೋಡೆ ಶಿಥಿಲಗೊಂಡಿವೆ. ಹಾಗೂ ನಿಧಿ ಹುಡುಕಾಟಕ್ಕೆಂದು ಗೋಡೆಯನ್ನೇ ಕೆಡವಿ ಅಗೆದು ಹಾಕಿದ್ದಾರೆ. ಈ ಕೋಟೆಯ ವಿಶೇಷತೆಯೆಂದರೆ ಒಂದು ಹಂತ ಹತ್ತಿದಾಗ ಇದೇ ಕೋಟೆಯ ಕೊನೆಯೇನೋ ಎಂಬಂತೆ ಭಾಸವಾಗುತ್ತದೆ. ಅಷ್ಟು ಚೆನ್ನಾಗಿ ಯೋಜನೆ ಮಾಡಿ ಕಟ್ಟಿದ್ದಾರೆ. ಹತ್ತುತ್ತ ಹೋದಂತೆ ಅಯ್ಯೊ ಇನ್ನೂ ಹತ್ತಬೇಕಲ್ಲಪ್ಪ ಎಂದು ಕೆಲವರು ಉದ್ಗಾರ ತೆಗೆದರು. ಇನ್ನು ಮೇಲೆ ಹತ್ತಲಾರೆ, ಎಂದವರಿಗೆ ಇಷ್ಟು ಹತ್ತಿದ್ದೀರಲ್ಲ, ಇನ್ನು ಒಂದು ಹಂತ ದಾಟಿದರೆ ಗುರಿ ತಲಪುತ್ತೀರಿ ಎಂದು ಹುರಿದುಂಬಿಸುತ್ತ, ಸಾಗಿದೆವು. ಐದನೇ ದ್ವಾರ ದಾಟಿ ಮುಂದೆ ಹೋದಾಗ ಅಲ್ಲಿ ದರ್ಬಾರ್ ಹಾಲ್, ಅರಮನೆ ಇದ್ದ ಕುರುಹನ್ನು ನಾಯಕ ತೋರಿಸಿದ. ದರ್ಬಾರ್ ಹಾಲಿಗೆ ಹೋಗಿ, ‘ಯಾರಲ್ಲಿ, ನರ್ತಕಿಯರನ್ನು ಬರಮಾಡಿ. ಎಂಬ ಕೂಗು ಹಾಕಿದ! ನಾವು ಮುಂದೆ ಹೋಗುತ್ತೇವೆ. ನೀನು ನರ್ತಕಿಯರು ಬಂದು ಅವರ ನರ್ತನ ನೋಡಿ ಬರುವಿಯಂತೆ ಎಂದು ಹೇಳಿದೆವು. ಧವಸ ದಾಸ್ತಾನು ಮಾಡುತ್ತಿದ್ದ ಸ್ಥಳ, ಖಜಾನೆಯನ್ನು ನೋಡಿದೆವು. ಎಷ್ಟೆಲ್ಲ ವೈಭವದಿಂದ ಇದ್ದಿರಬಹುದು ಎಂದು ಕಲ್ಪನೆ ಮಾಡಿಕೊಂಡೆವು.

 ಮೂರನೆ ಹಂತದಲ್ಲಿ ಸಿಗುವುದೇ ಕೋಟೆಯ ತುದಿ.  ಎಲ್ಲರೂ ಕೋಟೆ ಮೇಲೆ ತಲಪಿಬಿಟ್ಟೆವು.  ಆಹಾ ಏನು ಸೊಗಸಾಗಿದೆ ಆ ಸ್ಥಳ. ಆಗ ಗಂಟೆ ೧ ಆಗಿತ್ತು. ಇಲ್ಲಿ ಕೋಟೆಯ ಕಾವಲಿಗಾಗಿ ಮೂರು ಕಿಂಡಿಗಳಿವೆ.  ಕಾವಲು ಕಿಂಡಿಗಳಲ್ಲಿ ಇಣುಕಿದೆವು. ಅಬ್ಬ, ಈ ಕೋಟೆ ಕಟ್ಟಿದವರ ಜಾಣ್ಮೆ ಮೆಚ್ಚಬೇಕು. ಯಾವುದೇ ಕಡೆಯಿಂದ ಯಾರೇ ನುಸುಳಿ ಬಂದರೂ ಕಾಣುವಂಥ ವ್ಯವಸ್ಥೆ. ಚರಿತ್ರೆಗೆ ಸಾಕ್ಷಿಯಾಗಿ ಈ ಕೋಟೆ ಇದೆ. ಕೋಟೆ ಕಟ್ಟಿದವರ ಪರಿಣತಿಗೆ ಸಲಾಂ ಸಲ್ಲಲೇಬೇಕು.     







      ಕೋಟೆಯ ಸುತ್ತ ನಡೆದೆವು. ಕೋಟೆಯ ಮೆಲ್ಭಾಗದ ಆವರಣ ಗೋಡೆಯ ಇಟ್ಟಿಗೆ ಬಹಳ ಕಲಾತ್ಮಕವಾಗಿದೆ. ಅಲ್ಲಲ್ಲಿ ಜರಿದು ಬಿದ್ದರೂ ಚೆಲುವಿಗೆ ಮೋಸವಿಲ್ಲ. ಕೋಟೆಯ ಮೇಲಿಂದ ಸುತ್ತಲೂ ನೋಡಿದಾಗ ಎಲ್ಲೆಲ್ಲೂ ಬಂಡೆಗಲ್ಲುಗಳೇ ಕಾನುತ್ತವೆ.. ಕೆಲವು ದೊಡ್ಡದು, ಸಣ್ಣದು, ಮಧುಗಿರಿ ಬೆಟ್ಟ, ಸಿದ್ದರಬೆಟ್ಟ ಎಲ್ಲ ಕಾಣುತ್ತದೆ. ಬಿಸಿಲಲ್ಲಿ ಕೋಟೆ ನೋಡಲು  ಹೋದದ್ದು ಸಾರ್ಥಕ ಎನಿಸಿದ ಕ್ಷಣವದು. ಇನ್ನು ಕೆಲವೇ ವರ್ಷಗಳಲ್ಲಿ ಈ ಕೋಟೆ ಪೂರ್ಣ ಅವನತಿಯ ಅಂಚಿಗೆ ಸರಿಯಬಹುದು. ಈಗಲೇ ದೊಡ್ಡ ದೊಡ್ಡ ಮರಗಳು ಕೋಟೆಯ ಗೋಡೆಯಲ್ಲಿ ಬೆಳೆದು ನಿಂತಿವೆ. ಕೆಲವೆಡೆ ಜರಿದು ಬಿದ್ದಿವೆ. ಕಾಲಕ್ರಮೇಣ ಗೋಡೆಗಳು ಧರಾಶಾಯಿಯಾಗಬಹುದು.




     ಕೋಟೆಮೇಲೆ ವಿಶಾಲವಾದ ಸ್ಥಳವಿದೆ.  ಅಲ್ಲಿ ಅಡ್ಡಾಡಿ ಕೋಟೆಯ ಚೆಲುವನ್ನು ನೋಡಿ ಅಲ್ಲೇ ಕುಳಿತು ಊಟ ಮಾಡಿದೆವು. ಒಂದು ನಾಯಿಯೂ ಅಲ್ಲಿಗೆ ಬಂದಿತ್ತು. ಅದಕ್ಕೆ ಮೊಸರನ್ನ, ಉಪ್ಪಿಟ್ಟು ಹಾಕಿದರೆ ಚಪ್ಪರಿಸಿ ತಿಂದಿತು. ಬಿಸಿಬೇಳೆಬಾತ್ ಮೂಸಿಯೂ ನೋಡಲಿಲ್ಲ! ನಾವು ಇಳಿದಾಗ ನಮ್ಮೊಡನೆ ಕೆಳಗೆ ಇಳಿಯಿತು.



 ಕೋಟೆಯ ಬಗ್ಗೆ ಕಿರು ಮಾಹಿತಿ

    ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿರುವ ಚನ್ನರಾಯನ ದುರ್ಗ   ಸಮುದ್ರಮಟ್ಟದಿಂದ ೩೭೫೦  ಅಡಿ ಎತ್ತರದಲ್ಲಿದೆ.  ಈ ಕೋಟೆಯನ್ನು೧೭ನೇ ಶತಮಾನದಲ್ಲಿ  ಮೊದಲಿಗೆ ಕಟ್ಟಿದವನು ಮಧುಗಿರಿಯ ಪಾಳೇಗಾರ ಚಿಕ್ಕಪ್ಪ ಗೌಡ ಎಂದು ದಾಖಲಾಗಿದೆ. ಬಹಳಷ್ಟು ವರ್ಷಗಳ ಕಾಲ ಈ ಕೋಟೆ ಮಧುಗಿರಿಯ ಪಾಳೇಗಾರರ ವಶದಲ್ಲೇ ಇತ್ತು. ಮರಾಠರ ಆಕ್ರಮಣಕ್ಕೆ ಮಧುಗಿರಿ ತುತ್ತಾದಾಗ ಈ ಕೋಟೆ ಕೂಡ ಅವರ ಕೈವಶವಾಯಿತು. ಚಿಕ್ಕದೇವರಾಯ ಒಡೆಯರ ಆಳ್ವಿಕೆಯಲ್ಲಿ ಚನ್ನರಾಯನದುರ್ಗ ಮೈಸೂರು ಸಂಸ್ಥಾನಕ್ಕೆ ಸೇರಿತು. ಆಗ ಇಲ್ಲಿಗೆ ಪ್ರಸನ್ನಗಿರಿ ಎಂಬ ಹೆಸರಿತ್ತಂತೆ. ಮತ್ತೊಮ್ಮೆ ಮರಾಠರ ಪಾಲಾದ ಈ ದುರ್ಗ ಚಂದ್ರಾಯದುರ್ಗವೆಂದೂ ಕರೆಸಿಕೊಂಡಿತ್ತು, ಮರಾಠಾ ಸೇನಾಧಿಕಾರಿಗಳಾದ ಶ್ರೀಪಂತ ಪ್ರಧಾನ ಹಾಗೂ ಮಾಧವರಾಯ ಬಲ್ಲಾಳ ಪ್ರಧಾನರ ಹೆಸರಿನಲ್ಲಿರುವ ೧೭೬೬ರ ಶಿಲಾಶಾಸನವನ್ನು ಕೋಟೆಯ ದ್ವಾರದಲ್ಲಿ ಈಗಲೂ ಕಾಣಬಹುದಂತೆ.  ಟಿಪ್ಪುವಿನ ಆಡಳಿತದ ಸಮಯದಲ್ಲಿ ಚನ್ನರಾಯನದುರ್ಗ ಮತ್ತೆ ಮೈಸೂರು ಸಂಸ್ಥಾನಕ್ಕೆ ಸೇರಿತು. ಅಂತಿಮವಾಗಿ ಮೂರನೆಯ ಮೈಸೂರು ಯುದ್ಧದ ಸಂದರ್ಭದಲ್ಲಿ ಲೆಫ್ಟಿನೆಂಟ್ ಕರ್ನಲ್ ಮ್ಯಾಕ್ಸ್‌ವೆಲ್ ಎಂಬಾತನ ನೇತೃತ್ವದಲ್ಲಿದ್ದ ಬ್ರಿಟಿಷ್ ಸೇನೆ ಈ ದುರ್ಗವನ್ನು ವಶಪಡಿಸಿಕೊಂಡಿತು. (ಮಾಹಿತಿ ಕೃಪೆ: ಅಂತರ್ಜಾಲ)

         ನಾವು ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ತಂಡದ ಪಟ ತೆಗೆಸಿಕೊಂಡು ಕೆಳಗೆ ಇಳಿಯಲು ಹೊರಟಾಗ ಗಂಟೆ ೨.೩೦. ಬಂಡೆಗಲ್ಲು ಕಾದು ಬರಿಗಾಲಲ್ಲಿ ನಡೆಯಲು ಆಗದಷ್ಟು ಸುಡುತ್ತಿತ್ತು. ಚನ್ನಮಲ್ಲನಾಯಕ ಅವನ ಹವಾಯಿ ಚಪ್ಪಲಿಯನ್ನು ಕೆಳಗೆ ಬಿಟ್ಟು ಬರಿಗಾಲಲ್ಲಿ ಬಂದಿದ್ದ. ಬೇಗ ಬೇಗ ಇಳಿಯಿರಿ. ಎಂದು ಅವನು ಆಗಾಗ ಎಚ್ಚರಿಸುತ್ತಿದ್ದ! ಇಳಿಯಲು ಕಷ್ಟವಾದವರ ಕೈಹಿಡಿದು ಕೆಳಗೆ ಇಳಿಸಿದೆವು. ನಾಲ್ಕು ಗಂಟೆಗೆ ನಾವು ಕೆಳಗೆ ತಲಪಿದೆವು.



 ಅಲ್ಲಿ ಯಲಿಯಮ್ಮದೇವಿ ದೇವಾಲಯವಿದೆ. ಒಬ್ಬಾತ ರಶೀತಿ ಪುಸ್ತಕ ಹೀಡಿದು ಅಲ್ಲಿ ಕುಳಿತು, ದೇವಾಲಯದ ಅಭಿವೃದ್ಧಿಗೆ ಧನ ಸಹಾಯ ಮಾಡಿ ಎಂದು ಕೋರಿಕೊಂಡ. ಕೆಲವರು ಹಣಕೊಟ್ಟು ರಸೀತಿ ಪಡೆದರು.

    ಕೆಳಗೆ ಬಂದು ಮುಖಕ್ಕೆ ನೀರು ಹಾಕಿ ತೊಳೆದಾಗ ಸುಖವೆನಿಸಿತು. ಚಹಾಪ್ರಿಯರು ಅಲ್ಲೇ ಪೆಟ್ಟಿಗೆ ಅಂಗಡಿಯಲ್ಲಿ ಚಹಾ ಹೀರಿದರು.

    ಅಲ್ಲಿ ಆದಿನ ರಾತ್ರೆ ಕುರುಕ್ಷೇತ್ರ ನಾಟಕ ಇತ್ತು. ಅದಕ್ಕಾಗಿ ರಸ್ತೆಯಲ್ಲಿ ರಂಗಸ್ಥಳ ಕಟ್ಟುತ್ತಿದ್ದರು.  ಇಲ್ಲೆ ಇದ್ದು, ನಾಟಕ ನೋಡಿ ಹೋಗಿ ಎಂದು ನಮಗೂ ಆಮಂತ್ರಣ ಕೊಟ್ಟರು. ಊರವರ ಜೊತೆ ಮಾತಾಡುತ್ತ ನಡೆದೆವು. ಎಲ್ಲಿಂದ ಬಂದಿರಿ? ಬೆಟ್ಟ ಹತ್ತಿದ್ರ? ನಮ್ಮವರ  ಬಿಳಿತಲೆ ನೋಡಿ ಅಜ್ಜಿಯರೂ ಹತ್ತಿದ್ರ?  ಎಂದು ಆಶ್ಚರ್ಯದಿಂದ ಕೇಳಿದರು. ಅಲ್ಲಿ ರಾಗಿ ಕಣಜ ಎಲ್ಲ ನೋಡಿದ್ರ? ಈ ಕೋಟೆಯಲ್ಲಿ ಭಾರತಿಯವರು ಅಭಿನಯಿಸಿದ ಬಂಗಾರದ ಜಿಂಕೆ ಸಿನೆಮಾ ಶೂಟಿಂಗ್ ಆಗಿದೆ. ಅಲ್ಲಿಂದ ಮತ್ತೆ ಬೆಟ್ಟಕ್ಕೆ ವಸಿ ಜನ ಬರಲು ಸುರುಮಾಡಿದರು. ಮತ್ತೂ ಒಂದೆರಡು ಸಿನೆಮಾ ಶೂಟಿಂಗ್ ಆಗಿತ್ತು.  ಎಂದರು.

ರಾಗಿ ಕಣಜ ಯಾವುದು ಎಂದು ಗೊತ್ತಿಲ್ಲ. ಆದರೆ ಎಲ್ಲವನ್ನೂ ನೋಡಿದೆವು ಎಂದೆವು.

ನಮ್ಮ ಹುಡುಗರನ್ನು ಕರೆದುಕೊಂಡು ಹೋಗಬೇಕಿತ್ತು. ಎಲ್ಲ ಚೆನ್ನಾಗಿ ವಿವರಿಸಿ ತೋರಿಸುತ್ತಿದ್ದರು ಎಂದರು.

    ಅಲ್ಲೆ ಹುಡುಗರು ಗೋಲಿಯಾಡುತ್ತಿದ್ದರು. ಅದನ್ನು ತುಸುಹೊತ್ತು ನೋಡಿ ಬಸ್ಸಿಗೆ ಹತ್ತಿದೆವು. ೪.೩೦ಗೆ ಅಲ್ಲಿಂದ ಹೊರಟೆವು. ಎಲ್ಲರಿಗೂ ದ್ರಾಕ್ಷೆ ಹಂಚಿದರು. ಆ ಹೊತ್ತಲ್ಲಿ ದ್ರಾಕ್ಷೆ ಬಹಳ ರುಚಿಯಾಗಿ ಹೊಟ್ಟೆ ಸೇರಿತ್ತು.

         ಮದ್ದೂರು ತಲಪಿದಾಗ ೭.೧೦. ಶಿವದಾಸ್ ಖಾನಾವಳಿಯಲ್ಲಿ ಸೆಟ್ ದೋಸೆ ಕಾಫಿ ಕುಡಿದು ಹೊರಟು ಮೈಸೂರು ಮನೆ ತಲಪಿದಾಗ ಗಂಟೆ ೯.೩೦ ಆಗಿತ್ತು.

    ಸೋಮಶೇಖರ್ ಹಾಗೂ ಚನ್ನಮಲ್ಲನಾಯಕರ ನೇತೃತ್ವದಲ್ಲಿ  ಚನ್ನರಾಯನದುರ್ಗಕ್ಕೆ  ಚಾರಣವನ್ನು ಯಶಸ್ವಿಯಾಗಿ ಮಾಡಿದ್ದೆವು. ಅವರಿಗೆ ನಮ್ಮ ಸಹಚಾರಣಿಗರೆಲ್ಲರ ಪರವಾಗಿ ಧನ್ಯವಾದ.  ಚಾರಣ ಶುಲ್ಕ ರೂ.೯೫೦

ದಾರಿ:    ಮೈಸೂರು-ಮಂಡ್ಯ-ಮದ್ದೂರು-ಕುಣಿಗಲ್-ತುಮಕೂರು-ತುಂಬಾಡಿ-ಕೊರಟಗೆರೆ-ಚನ್ನರಾಯನದುರ್ಗ. ಸುಮಾರು ೨೧೦ಕಿಮೀ. ಬೆಂಗಳೂರಿನಿಂದ ೧೦೦ಕಿಮೀ.

ಇಲ್ಲಿ  ಕೆಲವು ಪಟಗಳು ಸಹಚಾರಣಿಗರು ಕ್ಲಿಕ್ಕಿಸಿದ್ದನ್ನು ಬಳಸಿಕೊಂಡಿರುವೆ. ಅವರಿಗೆ ಧನ್ಯವಾದ.


ದಾರಿ:    ಮೈಸೂರು-ಮಂಡ್ಯ-ಮದ್ದೂರು-ಕುಣಿಗಲ್-ತುಮಕೂರು-ತುಂಬಾಡಿ-ಕೊರಟಗೆರೆ-ಚನ್ನರಾಯನದುರ್ಗ. ಸುಮಾರು ೨೧೦ಕಿಮೀ. ಬೆಂಗಳೂರಿನಿಂದ ೧೦೦ಕಿಮೀ.