ಬುಧವಾರ, ನವೆಂಬರ್ 20, 2019

ಅಮೇರಿಕಾ ಪರ್ಯಟನ ಭಾಗ ೨

 ಮಿನಿಯಾ ಪೊಲೀಸ್, ಮಿನಸೋಟ ರಾಜ್ಯದೆಡೆಗೆ ಪಯಣ
   ಮಿನಸೋಟ ರಾಜ್ಯದ ಮಿನಿಯಾಪೊಲೀಸ್ ಎಂಬ ಊರಿನಲ್ಲಿ ನನ್ನ ತಂಗಿ ಸವಿತನ ಮಗ ಶಶಾಂಕ ಇದ್ದಾನೆ. ಅವನನ್ನು ಭೇಟಿಯಾಗಲು ನಾವು ಕಾರಿನಲ್ಲಿ ೨೫.೫.೧೮ರಂದು ಬೆಳಗ್ಗೆ ೧೦.೩೦ಗಂಟೆಗೆ ನಾವು ಓಕ್ ಕ್ರೀಕ್ ಮನೆಯಿಂದ ಹೊರಟೆವು. ಸುಮಾರು ೩೫೦ ಮೈಲಿ ದೂರ, ೬ ಗಂಟೆಗಳ ದಾರಿ. ರಸ್ತೆ ಸಮತಟ್ಟಾಗಿ ಬಲು ಚೆನ್ನಾಗಿದೆ. ದಾರಿಯಲ್ಲಿ ಕಂಡ ಹೆಚ್ಚಿನ ಕಾರುಗಳ ಮೇಲೂ ದೋಣಿ ಕಂಡೆವು. ವಾರಾಂತ್ಯದಲ್ಲಿ ಸರೋವರಗಳಿಗೆ ತಮ್ಮ ದೋಣಿ ಕೊಂಡೋಗಿ ಅಲ್ಲಿ ವಿಹರಿಸುತ್ತಾರೆ. 


 ೪೦-೫೦ ಮೈಲಿಗೊಮ್ಮೆ ಅಲ್ಲಲ್ಲಿ ವಿಶ್ರಾಂತಿಧಾಮ (ರೆಸ್ಟ್ ಏರಿಯಾ) ಸಿಗುತ್ತದೆ. ಅಲ್ಲಿ ಪಾಯಿಖಾನೆಗಳು ಇವೆ.  ಹೊರಗೆ ಮರದ ನೆರಳಿನಲ್ಲಿ ಅಲ್ಲಲ್ಲಿ ಬೆಂಚು ಹಾಕಿದ್ದಾರೆ. ಅಲ್ಲಿ ಕುಳಿತು ಊಟ ಮಾಡಬಹುದು. ಅಂಥ ಒಂದು ವಿಶ್ರಾಂತಿಧಾಮದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ನಾವು ಕಟ್ಟಿ ತಂದಿದ್ದ ಚಿತ್ರಾನ್ನ ತಿಂದೆವು. ಅಮೇರಿಕಾದಲ್ಲಿ ಸೊಳ್ಳೆಗಳಿಲ್ಲ ಎಂದು ಕೇಳಿದ್ದೆ. ಆದರೆ ಅದು ನಿಜವಲ್ಲ ಎಂಬುದು ತಿಳಿಯಿತು. ನಾವು ಕೂತಲ್ಲಿ ಸೊಳ್ಳೆಗಳ ಹಿಂಡೇ ಮುತ್ತಿಗೆ ಹಾಕುತ್ತಲಿತ್ತು. ಹುಲ್ಲಿನ ಮೇಲೆ ನಾಯಿ ಹೇಲಿನ ವಾಸನೆ ಕೂಡ ಬರುತ್ತಲಿತ್ತು. ನಾಯಿಗಳನ್ನು ತಂದು ಅಲ್ಲಿ ಹುಲ್ಲಿನಲ್ಲಿ ಅಡ್ಡಾಡಿಸಿ ಪಾಯಿಖಾನೆ ಮಾಡಿಸುತ್ತಾರೆ. ಮತ್ತೆ ಅದರ ಹೇಲನ್ನು ಗೋಚುವ ಗೋಜಿಗೆ ಹೋಗುವುದಿಲ್ಲ!

 ಸಂಜೆ ೫ ಗಂಟೆಗೆ ನಾವು ಪ್ರಿಟ್ಲೆ ಲಿವ್ ಇನ್ ಹೊಟೇಲ್ ತಲಪಿದೆವು. ಅಲ್ಲಿ ನಾವು ವಾಸ್ತವ್ಯಕ್ಕೆ ಕೊಟಡಿ  ಕಾದಿರಿಸಿದ್ದೆವು. ಅಲ್ಲಿ ನಮ್ಮ ಬ್ಯಾಗ್ ಇಳಿಸಿದೆವು. ದಿನಕ್ಕೆ ೮೩ ಡಾಲರ್ ಬಾಡಿಗೆ ಇರುವ ಟಿವಿ, ಪ್ರಿಡ್ಜ್, ಒವೆನ್, ಎಸಿ ಇತ್ಯಾದಿ ಸಕಲ ಸೌಕರ್ಯವಿರುವ   ಈ ಹೊಟೇಲಿನಲ್ಲಿ ೪ ಮಂದಿ ಒಂದು ಕೊಟಡಿಯಲ್ಲಿರಬಹುದು. 



ಶಶಾಂಕನ ಮನೆ
ಪೆವಿಲಿಯನ್ ಆವ್ ದಿ ಬೆರಿ, ಸೈಂಟ್ ಪಾಲ್‌ನಲ್ಲಿ  ಶಶಾಂಕ ವಾಸವಾಗಿದ್ದ. ಮಿನಸೋಟ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಡಿಗ್ರಿ ಮುಗಿಸಿದ್ದ. ಪೋಸ್ಟ್ ಪಿ‌ಎಚ್ ಡಿ ಮಾಡಲು ತಯಾರಿ ನಡೆಸಿದ್ದ. ಸಂಜೆ ಅವನ ಮನೆಗೆ ಹೋದೆವು. ಐಸ್ಕ್ರೀಂ ತಿಂದು ನಾವು ಹೊರಟೆವು.

  ಮಿನಿಯಾ ಪೊಲೀಸ್ ಡೌನ್ ಟೌನ್
ನಮ್ಮ ಕಾರನ್ನು ಅಲ್ಲಿಯೇ ನಿಲ್ಲಿಸಿ ಶಶಾಂಕನ ಮನೆಯಿಂದ ಅನತಿ ದೂರದಲ್ಲೇ ಇದ್ದ ರೈಲು ನಿಲ್ದಾಣಕ್ಕೆ ಹೋಗಿ ರೈಲಿನಲ್ಲಿ ನಾವು ಡೌನ್ ಟೌನ್‌ಗೆ ಹೋದೆವು. ಅಮೇರಿಕಾದಲ್ಲಿ ಪ್ರತೀ ಊರಿಗೂ ಒಂದು ಡೌನ್ ಟೌನ್ ಇದೆ. ನಮ್ಮಲ್ಲಿ ಪೇಟೆ ಇದ್ದ ಹಾಗೆ. ಅವರದನ್ನು ಡೌನ್ ಟೌನ್ ಎಂದು ಹೇಳುತ್ತಾರೆ. ಅಲ್ಲಿ ಬೃಹತ್ ಕಟ್ಟಡಗಳು, ವಿಶ್ವವಿದ್ಯಾನಿಲಯ, ವಿವಿಧ ಕಚೇರಿಗಳು ಅಂಗಡಿಗಳು ಇರುತ್ತವೆ. ನಾವು ಪೇಟೆಯಲ್ಲಿ  ಅಡ್ಡಾಡಿದೆವು. ವಿಶ್ವದ ಪ್ರಸಿದ್ಧ ಯು ಎಸ್ ಬ್ಯಾಂಕ್ ಸ್ಟೇಡಿಯಂ ನೋಡಿದೆವು. ಥಿಯೇಟರ್ ನೋಡಿದೆವು. ಥಿಯೇಟರ್ ಮಹಡಿ ಮೇಲಿನಿಂದ ಮಿಸಿಸಿಪಿ ನದಿ ನೋಡಿದೆವು. ಪಿಲ್ಸ್‌ಬರಿ ಗೋಧಿ ಹಿಟ್ಟು ಕಾರ್ಖಾನೆ ದೂರದಲ್ಲಿ ಕಾಣುತ್ತಿತ್ತು. ಸುತ್ತಾಡಿ ವಾಪಾಸು ರೈಲು ಹತ್ತಿ ಶಶಾಂಕನ ಮನೆ ತಲಪಿದೆವು. 



ಭೂರೀ ಭೋಜನ
   ಶಶಾಂಕನಿಗೆ ಅಡುಗೆ ಮಾಡಲು ಆಸಕ್ತಿ ಇದೆ. ಅದರ ಫಲವಾಗಿ ಅವನು ನಮಗೆ ಸೋಯಾ ಪಲಾವ್, ಮೊಸರು ಗೊಜ್ಜು, ಚಪಾತಿ (ಹೊರಗಿನಿಂದ ತಂದಿರುವುದು),  ಆಲೂಗಡ್ಡೆ, ಹೂಕೋಸು ಕೂಟು, ಅನ್ನ ಮಾಡಿದ್ದ. ಅವನ ಕೈ ಅಡುಗೆಯನ್ನು ಆಸ್ವಾದಿಸುತ್ತ ಮೆಚ್ಚುತ್ತ ಊಟ ಮಾಡಿದೆವು. ೧೦.೩೦ಗೆ ನಾವು ಅಲ್ಲಿಂದ ಲಿವ್ ಇನ್ ಹೊಟೇಲಿಗೆ ಹಿಂದಿರುಗಿದೆವು. 
   ೨೭-೫-೧೮ರಂದು ನಾವು ಬೆಳಗ್ಗೆ ಹೊಟೇಲ್ ವತಿಯಿಂದ ಕೊಡುವ ತಿಂಡಿ ಬ್ರೆಡ್, ಹಣ್ಣು ತಿಂದು ಕಾಫಿ ಕುಡಿದು  ೧೦ ಗಂಟೆಗೆ ಹೊರಟು ಶಶಾಂಕನ ಮನೆಗೆ (೧೫ ನಿಮಿಷದ ದಾರಿ)ಹೋದೆವು. 


  ಮಿನ್ನೆಹಹ ಜಲಪಾತ
    ಶಶಾಂಕನನ್ನು ಹತ್ತಿಸಿಕೊಂಡು ನಾವು ಮಿನ್ನೆಹಹ ಪಾರ್ಕ್‌ಗೆ ಹೋದೆವು. ಅವನ ಮನೆಯಿಂದ ೨೦ ನಿಮಿಷದ ದಾರಿ. ಅಲ್ಲಿ ಮಿನ್ನೆಹಹ ಜಲಪಾತವಿದೆ. ಮಿನ್ನೆಹಹ ಪಾರ್ಕ್ ೧೭೦ ಎಕರೆ ಪ್ರದೇಶದಲ್ಲಿದೆ. ೧೮೪೯ರಲ್ಲಿ ಈ ಪಾರ್ಕ್ ನಿರ್ಮಾಣಗೊಂಡಿದೆ.. ಮಿಸಿಸಿಪಿ ನದಿಯಿಂದ ಹೊರಬರುವ ನೀರು ಜಲಪಾತವಾಗಿ ಹೊರಹೊಮ್ಮಿದೆ. ೫೩ ಅಡಿಯಿಂದ ಕೆಳಗೆ ಧುಮುಕುತ್ತದೆ. ಜನವರಿ ತಿಂಗಳಲ್ಲಿ ಈ ಜಲಪಾತ ಮಂಜುಗಡ್ಡೆಯಾಗುತ್ತದೆ. ಆಗ ನೋಡಲು ಬಲು ಸೊಗಸು ಎಂದು ಶಶಾಂಕ ಹೇಳಿದ. 
ಈ ಪಾರ್ಕಿನಲ್ಲಿ ಹಯವಥ ಮತ್ತು ಮಿನ್ನೆಹಹ ಅವರ ಕಂಚಿನ ಪ್ರತಿಮೆ ಇದೆ. ಅವರಿಬ್ಬರು ಪ್ರೇಮಿಗಳು. ಈ ಪ್ರತಿಮೆ ಕೆತ್ತಿದವರು ಜೇಕಬ್ ಫೀಲ್ಡ್.  ನಾಲ್ಕೈದು ಮೈಲಿ ಕಾಡೊಳಗೆ ನಡೆಯುತ್ತ ಮಿಸಿಸಿಪಿ ನದಿ ದಂಡೆಗೆ ಹೋದೆವು. ಮಿಸಿಸಿಪಿ ನದಿ ನಾರ್ಥ್ ಅಮೇರಿಕಾದಲ್ಲಿ ಅತ್ಯಂತ ದೊಡ್ದ ನದಿ. ಜಗತ್ತಿನಲ್ಲೇ ನಾಲ್ಕನೇ ದೊಡ್ಡ ನದಿ ಎಂಬ ಹೆಸರು ಪಡೆದಿದೆ.    
 ನಾವು ನದಿದಂಡೆಯಲ್ಲಿ ಸ್ವಲ್ಪ ಹೊತ್ತು ಕೂತು ವಾಪಾಸಾಗಿ ಕಾರು ಹತ್ತಿ ಅಲ್ಲಿಂದ ಹೊರಟೆವು. 









     ಮಾಲ್ ಆಫ್ ಅಮೇರಿಕಾ

 ೬೦ ಈಶ್ಟ್ ಬ್ರಾಡ್ವೇ ಮಿನಿಯಪೊಲೀಸ್, ಮಿನಸೋಟ ಯುನೈಟೆಡ್ ಸ್ಟೇಟ್ಸ್ ೫೫೪೨೫ ಈ ವಿಳಾಸದಲ್ಲಿರುವ ೫,೪೦೦.೦೦೦ ಚದರಡಿಯ ಮಾಲ್ ಆಫ಼್ ಅಮೇರಿಕಾದ ಬೃಹತ್ ಕಟ್ಟಡದೊಳಗೆ ಹೋದೆವು. ೫೫೫ ಅಂಗಡಿಗಳಿವೆ. ೧೯೯೨ರಲ್ಲಿ ಸ್ಥಾಪಿಸಲಾದ ಈ ಕಟ್ಟಡ ಜಗತ್ತಿನಲ್ಲೇ ೧೨ನೇ ಬೃಹತ್ ಶಾಪಿಂಗ್ ಮಾಲ್ ಎಂಬ ಹೆಸರು ಪಡೆದಿದೆ. ಇಲ್ಲಿ ದೊಡ್ಡಡಾದ ಅಮ್ಯೂಸ್ಮೆಂಟ್ ಪಾರ್ಕ್, ಅಕ್ವೇರಿಯಂ, ನಾನಾ ನಮೂನೆಯ ಅಂಗಡಿಗಳು ಇವೆ. ನಾವು ಕೇವಲ ಒಂದು ಗಂಟೆಯಲ್ಲಿ ಮೂರು ನಾಲ್ಕು ಮಹಡಿಯಲ್ಲಿರುವ ಅಂಗಡಿಗಳ ಹೊರಗೆ ಮಾತ್ರ ಸುತ್ತಾಡಿ ಅದರ ಸೊಬಗನ್ನು ಕಣ್ಣಲ್ಲಿ ನೋಡಿದೆವು. ನಮಗೆ ಯಾರಿಗೂ ಅಂಗಡಿ ಒಳಗೆ ಹೋಗಿ ವ್ಯಾಪಾರ ಮಾಡುವ ಉತ್ಸಾಹ  ಇಲ್ಲದುದರಿಂದ ಬಹಳ ಬೇಗ ಮುಗಿಸಿದೆವು. ಚೆಪೊಟ್ಲೆ ಮೆಕ್ಸಿಕನ್ ಖಾನಾವಳಿಯಲ್ಲಿ ನಾವು ಊಟ ಮಾಡಿದೆವು. ಒಂದು ಊಟಕ್ಕೆ ೭.೫೦ ಡಾಲರ್. ಒಂದು ಚಪಾತಿ, ಅನ್ನ ಅದರ ಮೇಲೆ ಗಸಿ, ಗಸಿಯಮೇಲಕ್ಕೆ ಕೆಲವು ತರಕಾರಿ, ಸೊಪ್ಪುಗಳು. ಈ ಮಿಶ್ರಣದ ಊಟ. ಚೆನ್ನಾಗಿತ್ತು. ನಮ್ಮ ದೃಷ್ಟಿ ಅವರು ಹಾಕುವ ಮಿಶ್ರ್ರಣದತ್ತಲೇ ಇರಬೇಕು. ಸಸ್ಯಾಹಾರ ಮಾಂಸಾಹಾರ ಎರಡೂ ಪಕ್ಕಪಕ್ಕದಲ್ಲೇ ಇರುತ್ತವೆ. ಸಸ್ಯಾಹಾರವನ್ನು ನಾವು ಏನೇನು ಹಾಕಬೇಕು ಎಂದು ಹೇಳಿ ಎಚ್ಚರದಿಂದ ಹಾಕಿಸಿಕೊಳ್ಳಬೇಕು. ಊಟ ಮಾಡಿ ಮಾಲಿನಿಂದ ನಿರ್ಗಮಿಸಿದೆವು.






  ಸ್ಕಲ್‌ಪ್ಚರ್ ಗಾರ್ಡನ್ (Minneapolis Sculpture Garden)
    725 vineland pl, Minneapolis, MN 55403, USA  ಈ ವಿಳಾಸದಲ್ಲಿರುವ ಈ ಪಾರ್ಕ್ ೧೯೮೮ರಲ್ಲಿ ಸ್ಥಾಪಿಸಲಾಗಿದೆ. ೧೧ ಎಕರೆ ಪ್ರದೇಶದಲ್ಲಿದೆ. ದೊಡ್ಡದಾದ ಚಮಚದಲ್ಲಿ ಚೆರಿ ಹಣ್ಣಿನ ಶಿಲ್ಪ, ನೀಲಿ ಕೋಳಿಯ ಶಿಲ್ಪ ದೂರದಿಂದಲೇ ಗಮನ ಸೆಳೆಯುತ್ತವೆ. ೩೬೫ ದಿನವೂ ಬೆಳಗ್ಗೆ ೬ರಿಂದ ರಾತ್ರಿ ೧೨ ಗಂಟೆವರೆಗೆ ಈ ಪಾರ್ಕಿಗೆ ಪ್ರವೇಶಾವಕಾಶವಿದೆ.  ಕಾರ್ ಪಾರ್ಕಿಂಗ್ ಕೆಲವು ಕಡೆ ಉಚಿತವಾಗಿಯೂ, ಇನ್ನು ಕೆಲವು ಕಡೆ ಶುಲ್ಕ ಪಾವತಿಸಿ ನಿಲ್ಲಿಸಬಹುದಾಗಿದೆ. ಬಿಸಿಲ ದಗೆಯಿಂದ ಪಾರ್ಕಿನೊಳಗೆ ಇಡೀ ಸುತ್ತಾಡಲು ಯಾರಿಗೂ ಉಮೇದು ಇರದ ಕಾರಣ ನಾವು ಶಶಾಂಕನ ಮನೆಗೆ ವಾಪಾಸಾದೆವು. ಶಶಾಂಕ ಚಹಾ ಮಾಡಿದ.  ಆಲೂಗಡ್ಡೆ ಬೇಯಿಸಿ ಸುಲಿದು ಪಲ್ಯ ಮಾಡಿಟ್ಟ. 





   ಕಲ್ ಹೋನ್ ಸರೋವರ (CALHOUN LAKE) 
ನಾವು ೬ ಗಂಟೆಗೆ ಮನೆ ಬಿಟ್ಟು ಕಲ್ ಹೋನ್ ಸರೋವರಕ್ಕೆ ಹೋದೆವು. ಸರೋವರದ ಸುತ್ತ ನಡೆಯಲು, ಸೈಕಲ್ ಸವಾರಿಗೆ ಅನುಕೂಲವಾದ ಮಾರ್ಗವಿದೆ. ನೋಡಲು ಬಹಳ ಚಂದವಾಗಿದೆ. ೪೦೧ ಎಕರೆ ಪ್ರದೇಶದಲ್ಲಿ ಈ ಸರೋವರ ಇದೆ. ೮೨ ಅಡಿ  ಆಳವಿದೆ.  ಸರೋವರವನ್ನು ಕಾರಿನಲ್ಲೇ ಸಾಗುತ್ತಲೇ  ನೋಡಿದೆವು. 




 ಮಿನ್ನೆಸೋಟ ವಿಶ್ವವಿದ್ಯಾಲಯ (university of Minnesota)
   ಸರೋವರ ಹಾದು ನಾವು ಮಿನಸೋಟ ವಿದ್ಯಾನಿಲಯಕ್ಕೆ ಹೋದೆವು. ಶಶಾಂಕ ಕಲಿತ ಸ್ಥಳವನ್ನು ತೋರಿಸಲು ಅವನಿಗೆ ಖುಷಿ, ನಮ್ಮ ಹುಡುಗ ಓದಿದ ಸ್ಥಳ ನೋಡಲು ನಮಗೆ ಹೆಮ್ಮೆ. ವಿಶಾಲವಾದ  ವಿದ್ಯಾಲಯ ಸುತ್ತ ಸುತ್ತಿ ನಾವು ವಾಪಾಸು ಶಶಾಂಕನ ಮನೆಗೆ ವಾಪಾಸಾದೆವು.  m ಎಂಬ ಫಲಕದ ಎದುರು ನಿಂತು ಪಟ ಕ್ಲಿಕ್ಕ್ಸಿಕೊಂಡೆ. ಎಂ ಎಂದರೆ ಮಾಲಾ! 

    
     





ಶಶಾಂಕ ಮಸಾಲೆ ದೋಸೆ ಮಾಡಲು ಎಲ್ಲ ತಯಾರಿ ನಡೆಸಿದ್ದ. ಎಲ್ಲರಿಗೂ ಅವನೇ ದೋಸೆ ಎರೆದು ಕೊಟ್ಟ. ನಾವು ತಿಂದು, ಮದ್ಯಾಹ್ನ ಮಿಕ್ಕಿದ ಪಲಾವ್ ಮುಗಿಸಿದೆವು. ಸಿನೆಮಾ ನೋಡುತ್ತ ಹರಟೆ ಹೊಡೆಯುತ್ತ, ಮಧ್ಯೆ ಐಸ್ಕ್ರೀಮ್ ಸವಿದೆವು. ಹತ್ತು ಗಂಟೆಗೆ ನಾವು ಹೊಟೇಲ್ ಲಿವ್ ಇನ್ ತಲಪಿ ನಿದ್ದೆ ಹೊಡೆದೆವು. 

ಮರಳಿ ವಿಸ್ಕಾನ್ಸಿನ್ ಕಡೆಗೆ ಪ್ರಯಾಣ
೨೮.೫.೧೮ರಂದು ಬೆಳಗ್ಗೆ ರೈಸ್ ಕುಕ್ಕರಿನಲ್ಲಿ ಅನ್ನ ತಯಾರಿಸಿದೆವು. ಎಲ್ಲ ಪ್ಯಾಕ್ ಮಾಡಿಕೊಂಡು ೧೦ ಗಂಟೆಗೆ ಹೊಟೇಲ್ ಬಿಟ್ಟೆವು. 
     ದಾರಿಯಲ್ಲಿ ವಾಹನಗಳು ಸಾಲು ಸಾಲಾಗಿ ಶರವೇಗದಲ್ಲಿ ಅತ್ತ ಇತ್ತ ಚಲಿಸುವುದು ನೋಡುವುದೇ ಸೊಗಸು. ದಾರಿಯುದ್ದಕ್ಕೂ ಸಾಗುವಾಗ ಎಕರೆಗಟ್ಟಲೆ ಕೃಷಿಭೂಮಿ ಕಾಣಿಸಿತು. ಸೋಯಾ, ಜೋಳದ ಗದ್ದೆಗಳು ಹಸುರಾಗಿ ಬಹಳ ಚೆನ್ನಾಗಿ ಕಾಣಿಸುತ್ತಿತ್ತು. ಕೆಲವೆಡೆ ದನಗಳು, ಕುದುರೆಗಳು ಮೇಯುವುದು ಕಂಡು ಖುಷಿಯಾಯಿತು.  ಪ್ರತಿಯೊಂದು ಕೃಷಿ ಭೂಮಿ ಇರುವಲ್ಲಿ ಆ ಭೂಮಿಗೆ ತೆರಳಲು ಮೇಲ್ಸೇತುವೆ ಹೊಂದಿದ ರಸ್ತೆ ಪ್ರತ್ಯೇಕ ಇದೆ. ಕೃಷಿಕರು ಅವರ ಜಮೀನಿಗೆ ಹೋಗಲು  ಹೈವೇಗೆ ಬರಬೇಕಾಗಿಯೇ ಇಲ್ಲ. ಅಷ್ಟು ಅಚ್ಚುಕಟ್ಟಾದ ವ್ಯವಸ್ಥೆ ಎಲ್ಲಾ ಕಡೆ ಕಂಡೆವು. 
  ದಾರಿ ಮಧ್ಯೆ ವಿಶ್ರಾಂತಿಧಾಮದಲ್ಲಿ ನಿಲ್ಲಿಸಿ ಊಟ ಮಾಡಿದೆವು. ಅನ್ನ, ಟೊಮೆಟೊ ತೊಕ್ಕು, ಉಪ್ಪಿನಕಾಯಿ, ತುಪ್ಪ, ಮೊಸರು. ಊಟವಾಗಿ ಮುಂದುವರಿದು ನಾವು ಮತ್ತೊಂದು ವಿಶ್ರಾಂತಿಧಾಮದಲ್ಲಿ ಚಹಾ ಕುಡಿದು, ಬಿಸ್ಕತ್, ಚಕ್ಕುಲಿ ಸೇವಿಸಿ (ಪ್ಲಾಸ್ಕಿನಲ್ಲಿ ಬಿಸಿನೀರು , ಹಾಲು, ಚಹಾಪುಡಿ ತೆಗೆದುಕೊಂಡು ಹೋಗಿದ್ದೆವು) ಹೊರಟೆವು. ದಾರಿಯಲ್ಲಿ ವಾಹನಗಳ ಸಂಚಾರ ವಿಪರೀತವಾಗಿದ್ದುವು. ನಾವು ಸಂಜೆ ೫ ಗಂಟೆಗೆ ಓಕ್ ಕ್ರೀಕ್‌ನ ಮನೆ ತಲಪಿದೆವು.  




ಪೋರ್ಟ್ ಲ್ಯಾಂಡಿಗೆ ಪಯಣ
೩೦.೫.೨೦೧೮ರಂದು ಮಧ್ಯಾಹ್ನ ಊಟ ಮಾಡಿ ೨.೩೫ಕ್ಕೆ ಓಕ್ ಕ್ರೀಕಿನಿಂದ ಶಿಕಾಗೋ ಮಿಡ್ವೇ ವಿಮಾನ ನಿಲ್ದಾಣಕ್ಕೆ ಸುಮಾರು ೨ ಗಂಟೆ ಪಯಣ. ಮಹೇಶ ನಮ್ಮನ್ನು ಅಲ್ಲಿಗೆ ಬಿಟ್ಟ. ದಾರಿಯಲ್ಲಿ ವಾಹನದಟ್ಟಣೆ ಅಧಿಕವಾಗಿತ್ತು. ಹಾಗಾಗಿ ಹೆಚ್ಚು ಹೊತ್ತು ಬೇಕಾಯಿತು.  ೫ ಗಂಟೆಗೆ ತಲಪಿದೆವು. ಸೌತ್ ವೆಸ್ಟ್ ವಿಮಾನ ೬.೪೫ಕ್ಕೆ ಹೊರಡಬೇಕಾಗಿದ್ದದ್ದು ೮.೪೫ಕ್ಕೆ ಹೊರಟಿತು. ನಾವು ಬುತ್ತಿ ಕಟ್ಟಿ ತಂದ ಪಲಾವ್ ತಿಂದೆವು. 
ರಾತ್ರಿ ೧೧.೩೦ಗೆ ಡೆನ್ವರ್ ವಿಮಾನ ನಿಲ್ದಾಣದಲ್ಲಿ ಇಳಿದೆವು. ಶಿಕಾಗೋ ಸಮಯದಿಂದ ಒಂದು ಗಂಟೆ ಹಿಂದೆ. ಹಾಗಾಗಿ ಅಲ್ಲಿ ಸಮಯ ೧೦.೩೦ ಆಗಿತ್ತು. ಪೋರ್ಟ್ಲ್ಯಾಂಡಿಗೆ ವಿಮಾನವೇರಲು ಇದ್ದ ಸಮಯ ೧೦.೫೦. ಅನಂತ, ನಾನು, ಅಕ್ಷರಿ ಓಡಿ ಅಂತೂ ವಿಮಾನ ಏರಿದೆವು.
 ೩೧.೫.೨೦೧೮ರಂದು ಬೆಳಗ್ಗಿನ ಜಾವ ೨ ಗಂಟೆಗೆ (ಮಧ್ಯರಾತ್ರಿ)   ಪೋರ್ಟ್ ಲ್ಯಾಂಡ್ ತಲಪಿದೆವು. ಅಕಾಲದಲ್ಲಿ ಆನಂದಭಾವ ಮತ್ತು ಜಯಶ್ರೀ ದಂಪತಿ ಅಲ್ಲಿ ಬಂದು ನಮ್ಮನ್ನು ಸ್ವಾಗತಿಸಿ ಅವರ ಮನೆಗೆ ಕರೆದೊಯ್ದರು. ಅವರ ಮನೆಗೆ ವಿಮಾನ ನಿಲ್ದಾಣದಿಂದ ಒಂದು ಗಂಟೆ ಪಯಣ. ಬೇವರ್ಟನ್ ನಲ್ಲಿರುವ ಅವರ ಮನೆ ತಲಪಿದಾಗ ೩ ಗಂಟೆ ಆಗಿತ್ತು. ಮಲಗಿ ನಿದ್ದೆ ಹೊಡೆದೆವು.

ಜಯಶ್ರೀ ಆನಂದಭಾವ ಅವರ ಮನೆ ಸುಸಜ್ಜಿತವಾಗಿ ದೊಡ್ಡದಾಗಿದೆ. ೫ ಕೋಣೆಗಳಿವೆ. ಹಿಂದೆ ಹಿತ್ತಲಲ್ಲಿ ಹಣ್ಣಿನ ಗಿಡಗಳು , ಹೂ, ಸೊಪ್ಪು ಇತರೆ ಸಸ್ಯಗಳನ್ನು ಬೆಳೆಸಿದ್ದಾರೆ. ಮನೆ ಎದುರು ಹುಲ್ಲಿನ ಹಾಸನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ.

   ಹೋಮ್ ಡಿಪೋ
 ಬೆಳಗ್ಗೆ ಎದ್ದಾಗ ಅದಾಗಲೇ ಆನಂದಭಾವ ಕಚೇರಿಗೆ ಹೋಗಿ ಆಗಿತ್ತು. ನಾವು ತಿಂಡಿ ತಿಂದೆವು. ಜಯಶ್ರೀ ನಮ್ಮನ್ನು ಹೋಮ್ ಡಿಪೋಗೆ ಕರೆದುಕೊಂಡು ಹೋದಳು. ಮನೆ ಕಟ್ಟಲು ಬೇಕಾದ ಮರಮಟ್ಟುಗಳು, ಪಾತ್ರೆಪಗಡಗಳು ಇತ್ಯಾದಿ ಅಲ್ಲಿ ವಿಶಾಲವಾದ ಒಂದೇ ಸೂರಿನಡಿಯಲ್ಲಿ ಸಿಗುತ್ತದೆ. ಗಿಡನೆಡಲು ಛಟ್ಟಿಯಿಂದ ಹಿಡಿದು ಮಣ್ಣು ಗೊಬ್ಬರ ಸಸಿ ಸಮೇತ ಸಿಗುತ್ತದೆ. ಎಲ್ಲ ನೋಡಿ ಬೆರಗು ಹೊಂದಿ ಅಲ್ಲಿಂದ ನಿರ್ಗಮಿಸಿದೆವು.


   ದೇವದರ್ಶನ
ಸಾಯಿಬಾಬಾ ದೇವಾಲಯಕ್ಕೆ ಹೋದೆವು. ಒಂದು ಹಾಲ್‌ನಲ್ಲಿ ಸಾಯಿಬಾಬಾ ದೇವ, ಪಕ್ಕದ ಇನ್ನೊಂದು ಹಾಲ್‌ನಲ್ಲಿ ಬಾಲಾಜಿ ದೇವರು, ಪಕ್ಕದಲ್ಲೇ ಐಯ್ಯಪ್ಪ, ಗಣಪತಿ ಎಲ್ಲ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸೇವನೆಯಾಗಿ ಮನೆಗೆ ವಾಪಾಸಾದೆವು. ಪ್ರತ್ಯೇಕ ದೇವಾಲಯ ಕಟ್ಟಲು ಹಣ ಸಂಗ್ರಹ ನಡೆಯುತ್ತಲಿದೆಯಂತೆ.


   ಹಾಗ್ ಲೇಕ್ (henry hagg lake)
ಆನಂದಭಾವ ಕಚೇರಿ ಕೆಲಸದಿಂದ ಬೇಗನೆ ಮನೆಗೆ ಬಂದು ನಮ್ಮನ್ನು ಹ್ಯಾಗ್ ಲೇಕ್‌ಗೆ ಕರೆದುಕೊಂಡು ಹೋದರು. ಹ್ಯಾಗ್ ಲೇಕ್‌ಗೆ ಹೋಗುವ ದಾರಿ ಮಧ್ಯೆ ಎಡ್ವೆಂಚರ್ ಪಾರ್ಕ್ ತೋರಿಸಿದರು. ಬೃಹತ್ ಮರದ ಮೇಲೆ ಕಟ್ಟಿದ ತಂತಿಯಲ್ಲಿ ನಡೆದು ಇನ್ನೊಂದು ಮರಕ್ಕೆ ದಾಟುವುದು.  
   ನಾರ್ಥ್ ವೆಸ್ಟ್ ಓರೆಗಾನ್‌ನಲ್ಲಿರುವ ಹೆನ್ರಿ ಹಾಗ್ ಲೇಕ್ ಇದೊಂದು ಕೃತಕ ಸರೋವರ. ಸುಮಾರು ೧೧೫೩ ಎಕರೆ ಪ್ರದೇಶದಲ್ಲಿದೆ.   ಇಲ್ಲಿ ದೋಣಿ ವಿಹಾರ ನಡೆಸುತ್ತಾರೆ. ಅಮೇರಿಕನ್ನರು ಹೆಚ್ಚಿನವರು ಸ್ವಂತಕ್ಕೆ ಎಲೆಕ್ಟ್ರಿಕ್ ಬೋಟ್ ಹೊಂದಿರುತ್ತಾರೆ. ಅದನ್ನು ಕಾರಿನಲ್ಲಿ ಹಾಕಿ ತಂದು ನೀರಿಗೆ ಇಳಿಸಿ ಒಂದಷ್ಟು ಹೊತ್ತು ವಿಹಾರ ನಡೆಸುತ್ತಾರೆ. ಇದು ಅವರ ಹವ್ಯಾಸಗಳಲ್ಲಿ ಒಂದಾಗಿದೆ.  ನಾವಲ್ಲಿರುವಾಗ ಇಬ್ಬರು ಕಾರಿನಲ್ಲಿ ಬಂದು ದೋಣಿ ಇಳಿಸುವುದನ್ನು ನೋಡಿದೆವು. ಹಾಗ್ ಲೇಕ್ ಪ್ರಶಾಂತವಾಗಿ ಅಚ್ಚುಕಟ್ಟಾಗಿದೆ. ನೋಡುತ್ತ ಎಷ್ಟು ಹೊತ್ತಾದರೂ ಅಲ್ಲಿ ಕುಳಿತುಕೊಳ್ಳಬಹುದು. 
  ಸರೋವರದ ಎದುರು ಅಣ್ಣ ಆನಂದ ತಮ್ಮ ಅನಂತ ಸ್ಪರ್ಧೆಗೆ ಬಿದ್ದವರಂತೆ ನಗೆ ಫೋಸು ಕೊಟ್ಟಾಗ ಮಗಳು ಅಕ್ಷರಿ ಫೋಟೋ ಕ್ಲಿಕ್ಕಿಸಿದಳು. ಇಬ್ಬರಿಗೂ ಕಿವಿಗೆ ಗಾಳಿಹೊಕ್ಕಂತೆ ಕಂಡುಬಂದು ವಿವಿಧ ವಿಚಿತ್ರ ಭಂಗಿಗಳಲ್ಲಿ ನಿಂತು ಕುಳಿತು ಫೋಟೋ ತೆಗೆಸಿಕೊಂಡರು.









   ಅಲ್ಲಿಂದ ಹೊರಟು ಬರುತ್ತ ದಾರಿಯಲ್ಲಿ ಡಚ್ ಬ್ರದರ್ಸ್‌ನಲ್ಲಿ ಕಾಫಿ ಕುಡಿದೆವು. ಕಾಫಿಯಲ್ಲೂ ಎಷ್ಟೊಂದು ಬಗೆಗಳು. ಮೊಚಾ (moch) ಲಾಟ್ಟೆ (latte), ಬ್ರೆವ್(breve), ಅಮೇರಿಕಾನೊ(Americano), ಕೋಲ್ಡ್ ಬ್ರೇವ್, ಫ್ರೀಜ಼್ ಇತ್ಯಾದಿ. ನಾವು ಲಾಟ್ಟೆ ಕಾಫಿ ಆಯ್ಕೆ ಮಾಡಿಕೊಂಡೆವು. ಒಂದು ಲೋಟ ಕಾಫಿಯನ್ನು ನಾಲ್ಕು ಮಂದಿ ಕುಡಿಯಬಹುದು. ಅಷ್ಟು ದೊಡ್ಡ ಲೋಟವದು.
ಒಪ್ಟಿಮಿಸ್ಟ್ ಕ್ಲಬ್ (Optimist international Hillsboro)
ನಾವು ಟ್ರಿನಿಟಿ ಲುತೆರೆನ್ ಚರ್ಚ್ ಸಭಾಂಗಣಕ್ಕೆ ಹೋದೆವು. ಅಲ್ಲಿ ಒಪ್ಟಿಮಿಸ್ಟ್ ಕ್ಲಬ್ ವತಿಯಿಂದ ಶಾಲಾಮಕ್ಕಳಿಗೆ ಸ್ಕಾಲರ್ಶಿಪ್ ನೀಡುವ ಕಾರ್ಯಕ್ರಮವಿತ್ತು. ೫೦ ಕ್ಕೂ ಹೆಚ್ಚು ಸದಸ್ಯರಿರುವ ಈ ಕ್ಲಬ್ಗೆ ಆನಂದಭಾವ (ಭಾರತೀಯ ಏಕೈಕ) ಸದಸ್ಯರು. ಅವರು ಹಾಜರಿ ಹಾಕಲೇಬೇಕಿತ್ತು. ನಮಗೂ ಅನುಭವ ಆಗಲೆಂದು ಒಳಗೆ ಹೋಗಿ ಕೂತೆವು.  ಆ ದಿನ ಸರ್ಕಾರಿ ಶಾಲಾ ಮಕ್ಕಳಿಗೆ ಕ್ಲಬ್ ವತಿಯಿಂದ ಸ್ಕಾಲರ್ ಶಿಪ್ ನೀಡುವ ಕಾರ್ಯಕ್ರಮ. ಒಳಗೆ ಶರಬತ್, ಕೇಕ್, ಬಿಸ್ಕೆಟ್ ಇತ್ಯಾದಿ ಇಟ್ಟಿದ್ದರು. ಅವನ್ನು ಮುಟ್ಟಬೇಡಿ. ಅವು ಮಕ್ಕಳಿಗೆ ಮಾತ್ರ ಎಂದು ಆನಂದಭಾವ ನಮ್ಮನ್ನು ಎಚ್ಚರಿಸಿದ್ದರು! ಪಾಲಕರೂ ತಿನ್ನುತ್ತ ಕುಡಿಯುತ್ತ ಇದ್ದರು ಅದು ಬೇರೆ ಮಾತು! 
ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ನೃತ್ಯ ವೈಭವವನ್ನು ನೋಡಿದೆವು. ಒಂದಷ್ಟು ಮಕ್ಕಳಿಗೆ ಸ್ಕಾಲರ್ಶಿಪ್ ನೀಡಿದರು. ನಾವು ೮ ಗಂಟೆಗೆ ಅಲ್ಲಿಂದ ನಿರ್ಗಮಿಸಿದೆವು.
   ನಾವು ಈಸಿ ಪಿಜ಼್ಜಾ (Izzy Pizza)  ಹೊಟೇಲಿಗೆ ಹೋದೆವು. ಅಲ್ಲಿಗೆ ಜಯಶ್ರೀ ಬಂದಳು. ನಾವು ಅಲ್ಲಿ ಊಟ (ತರಕಾರಿ, ಪಿಜ಼್ಜಾ) ಮಾಡಿ ಮನೆಗೆ ವಾಪಾಸಾದೆವು.

ಫೆಸಿಫಿಕ್ ಮಹಾಸಾಗರ
ಬೆಳಗ್ಗೆ ೧-೬-೧೮ರಂದು ಆನಂದಭಾವನ ಜೊತೆ ಅನಂತ ಟ್ಯಾಂಡಮ್ ಸೈಕಲಲ್ಲಿ ಇಂಟೆಲ್ ಆಫೀಸಿಗೆ ಹೋಗಿದ್ದ.


ಜಯಶ್ರೀ ಸಾರಥ್ಯದಲ್ಲಿ ನಾವು ಅನಂತನನ್ನು ಇಂಟೆಲಿನಿಂದ ಹತ್ತಿಸ್ಕೊಂಡು ಫೆಸಿಫಿಕ್ ಸಾಗರಕ್ಕೆ ಹೊರಟೆವು. ದಾರಿಯಲ್ಲಿ ಚೆರಿಹಣ್ಣು ಖರೀದಿಸಿದೆವು.



  ಹತ್ತು ಗಂಟೆಗೆ ಹೊರಟೆವು. ಅಲ್ಲಿಗೆ ಹೋಗುವ ರಸ್ತೆಯುದ್ದಕ್ಕೂ ಮರಗಿಡಗಳು ಬಹಳ ಚೆನ್ನಾಗಿ ಕಾಣುತ್ತವೆ.

 ೧೧.೧೫ಕ್ಕೆ ಅಲ್ಲಿ ತಲಪಿದೆವು. ಬೇವರ್ಟನಿನಿಂದ  ೫೪ ಮೈಲಿ ದೂರ.  ಸಾಗರದ ದಡದಲ್ಲಿ ಓಡಾಡಿ ಮಹಾಸಾಗರದ ಚಂದವನ್ನು ನೋಡಿ ಪಟ ಕ್ಲಿಕ್ಕಿಸಿಕೊಂಡೆವು.  ಫೆಸಿಫಿಕ್ ಮಹಾಸಾಗರದ ಬಗ್ಗೆ ಬಾಲ್ಯದಲ್ಲಿ ಓದಿದ್ದು ನೆನಪಾಗಿ, ಅದೇ ಸಾಗರವನ್ನು ಈಗ ಕಣ್ಣಾರೆ ಕಂಡೆನಲ್ಲ ಎಂದು ಬಹಳ ಖುಷಿ ಪಟ್ಟೆ. ಸಾಗರವನ್ನು ನೋಡುತ್ತಲೇ ಬುತ್ತಿ ಊಟ ಮಾಡಿದೆವು. (ಪುಳಿಯೋಗರೆ, ಮೊಸರನ್ನ)







ಸೈಕಲ್ ರಿಕ್ಷಾ ಸವಾರಿ
ಅನಂತ ನಾನು ಜಯಶ್ರೀ ಮೂರು ಮಂದಿ ಕೂರುವಂಥ ಬಾಡಿಗೆ ಸೈಕಲ್ ಪಡೆದು ನಾವು ಊರು ಸುತ್ತಿದೆವು. ಅಕ್ಷರಿ ಮಾಲ್ ಒಳಗೆ ಕೂತಳು. ಇಬ್ಬರು ಪೆಡಲಿಸಬಹುದಾದಂತ ಸೈಕಲ್. ಒಂದೂವರೆಯಿಂದ ಎರಡೂವರೆ ಗಂಟೆವರೆಗೆ ಒಂದು ಗಂಟೆ ಕಾಲ ಸೈಕಲ್ ಸವಾರಿ ನಡೆಸಿದೆವು. 
 ಚಾಕಲೇಟ್ ಅಂಗಡಿಯಲ್ಲಿ ವಿವಿಧ ನಮೂನೆಯ ಚಾಕಲೇಟ್ ರಾಶಿ ನೋಡಿ ಐಸ್ಕ್ರೀಂ ತಿಂದು ಅಲ್ಲಿಂದ ಮೂರು ಗಂಟೆಗೆ ಹೊರಟೆವು.




 ತಿಲಮೂಕ್ ಚೀಸ್ ಫ್ಯಾಕ್ಟರಿ (Tillamook cheese factory 4165 highway101 N Tillamook Oregon
   ಫೆಸಿಫಿಕ್ ಸಾಗರ ನೋಡಿ ಬರುತ್ತ ದಾರಿಯಲ್ಲಿ ತಿಲಮೂಕ್ ನಗರದ ಪ್ರಸಿದ್ಧ ತಿಲಮೂಕ್ ಚೀಸ್ ಫ್ಯಾಕ್ಟರಿಗೆ ಹೋದೆವು. ೧೯೦೯ರಲ್ಲಿ ಸ್ಥಾಪಿತವಾದ ಈ ಕಾರ್ಖಾನೆ ಜೀರ್ಣೋದ್ಧಾರಕ್ಕೆಂದು ಮುಚ್ಚಿದ್ದರು. ಹಾಗಾಗಿ ಚೀಸ್ ತಯಾರಿಸುವ ಘಟಕ ನೋಡಲಾಗಲಿಲ್ಲ. ಪ್ರದರ್ಶನಕ್ಕಿಟ್ಟ ವಿವಿಧ ಬಗೆಯ ಚೀಸ್ ನೋಡಿ, ಐಸ್ಕ್ರೀಂ ತಿಂದು ಅಲ್ಲಿಂದ ಹೊರಟೆವು.


    ಇಂಟೆಲ್ ಕಛೇರಿಗೆ ಹೋದೆವು. ಅಲ್ಲಿ ನಾನು ಇಳಿದುಕೊಂಡೆ. ಆನಂದಭಾವನ ಜೊತೆಗೆ ಟ್ಯಾಂಡಮ್ ಸೈಕಲಲ್ಲಿ ಪೆಡಲಿಸುತ್ತ ೧೦ ಮೈಲಿ ಕ್ರಮಿಸಿ ಮನೆ ತಲಪಿದೆವು.


                                                          ಸಿಯಾಟೆಲ್ ಕಡೆಗೆ ಪಯಣ
೨-೧-೨೦೧೮ರಂದು ಬೆಳಗ್ಗೆ ತಿಂಡಿ ತಿಂದು ೮ ಗಂಟೆಗೆ ಹೊರಟು ಬಾಡಿಗೆ ಕಾರಿನಲ್ಲಿ ಪೋರ್ಟ್‌ಲ್ಯಾಂಡ್ ವಿಮಾನ ನಿಲ್ದಾಣಕ್ಕೆ ಹೋದೆವು. ಹೈದರಾಬಾದ್ ನಿವಾಸಿಗಳಾದ ಶೈಲಜಾ, ಶ್ಯಾಮ ಹಾಗೂ ಅನಿರುದ್ಧ (ಅಮೇರಿಕಾವಾಸಿ) ಅವರನ್ನು ಬರಮಾಡಿಕೊಂಡೆವು. ಅನಂತನ ಸೋದರಮಾವನ ಮಗಳು ಶೈಲಜಾ. ಶೈಲಜಾ ಗಂಡ ಶ್ಯಾಮ. ಅವರ ಸುಪುತ್ರ ಅನಿರುದ್ಧ. ಅನಿರುದ್ಧ ಕ್ಯಾಲಿಫೋರ್ನಿಯಾದಲ್ಲಿ ಕೆಲಸದಲ್ಲಿರುವನು. ಅವರನ್ನು ಹತ್ತಿಸಿಕೊಂಡು ನಾವು ೭ ಮಂದಿ ಸಿಯಾಟೆಲ್‌ಗೆ ಹೋದೆವು. ಅಲ್ಲಿ ಜಯಶ್ರೀ ತಮ್ಮ ಆಶ್ಲೇಷ್ ಅವನ ಪತ್ನಿ ಸ್ಮಿತಾ, ಅವರ ಮಗ ವಿಹಾನ್ ಇದ್ದಾರೆ. ಸ್ಮಿತಾ ತಂದೆತಾಯಿ ಕೂಡ ಇದ್ದದ್ದು ಬೋನಸ್ ನಮಗೆ. ನಾವು ಅವರ ಮನೆ ತಲಪುವಾಗ ಗಂಟೆ ೧ ಆಗಿತ್ತು. ಸ್ಮಿತಾ ಹಾಗೂ ಅವಳ ತಾಯಿ ತಂದೆ ಸೇರಿ ಭರ್ಜರಿ ಅಡುಗೆ ತಯಾರಿಸಿಟ್ಟಿದ್ದರು. ಚಪಾತಿ, ತೋವೆ, ಹೂಕೋಸು ಕೂಟು, ಬಟಾಣಿ ಆಲೂಗಡ್ಡೆ ಕೂಟು, ಪಾಲಕ್ ರಾಜ್ಮಾ ಕೂಟು, ಪಲಾವ್, ಅನ್ನ ಸಾರು, ತೊಂಡೆ ಪಲ್ಯ, ಹೆಸರುಕಾಳು ಇಡ್ಲಿ, ಚಟ್ನಿ, ಫ್ರುಟ್ಸಲಾಡ್. ಅವರು ಮಾಡಿಟ್ಟ ಖಾದ್ಯಗಳಿಗೆ ನಾವು ಚೆನ್ನಾಗಿ ನ್ಯಾಯ ಸಲ್ಲಿಸಿದೆವು.



   ಬೋಯಿಂಗ್ ವಿಮಾನ ತಯಾರಿಕಾ ಘಟಕ
 ನಾವು ೨.೩೦ ಗಂಟೆಗೆ ಬೋಯಿಂಗ್ ವಿಮಾನ ತಯಾರಿಕಾ ಘಟಕಕ್ಕೆ ಹೋದೆವು. ಪ್ರವೇಶಧನ ಒಬ್ಬರಿಗೆ ೨೫ ಡಾಲರ್. (ಮೊದಲೇ ಆನ್ಲೈನಿನಲ್ಲಿ ಟಿಕೆಟ್ ಕಾದಿರಿಸಬೇಕು.)  ಸಾಕ್ಷ್ಯಚಿತ್ರ ತೋರಿಸುತ್ತಾರೆ. ಅನಂತರ ಬೋಯಿಂಗ್ ವಿಮಾನದ ವಿಸ್ತಾರವಾದ ತಯಾರಿಕಾ ಘಟಕಕ್ಕೆ ಬಸ್ಸಿನಲ್ಲಿ ಕರೆದೊಯ್ಯುತ್ತಾರೆ. ೩.೩೦ರಿಂದ ೪.೪೫ರವರೆಗೆ ವಿಮಾನ ತಯಾರಿಸುವ ವಿಧಾನವನ್ನು ವಿವರಿಸಿದರು. ಪ್ರತಿಯೊಂದನ್ನೂ ನೋಡಿ ನಾವು ಅಲ್ಲಿಂದ ನಿರ್ಗಮಿಸಿದೆವು.
   ಬ್ಯಾಲರ್ಡ್ ಲಾಕ್ (Ballard lock)

 ಸೂಯೆಜ್ ಕಾಲುವೆಯಲ್ಲಿ ನೀರಿನ ಗಾತ್ರ ಕುಗ್ಗಿಸಿ ದೋಣಿ ದಾಟುವ ಪ್ರಕ್ರಿಯೆಯನ್ನು ನೋಡಿದೆವು. ಅದಕ್ಕೆ ಬ್ಯಾಲರ್ಡ್ ಲಾಕ್ ಎಂದು ಹೆಸರು. ನೀರು ಕೆಳಗೆ ಸರಿದು, ಗೇಟ್ ತೆರೆದು ದೋಣಿ ದಾಟುವುದನ್ನು ನೋಡಿ ಬೆರಗಾಗುತ್ತ ಅಲ್ಲಿಂದ ಸಂಜೆ ೭ ಗಂಟೆಗೆ ಹೊರಟು ಪೋರ್ಟ್ಲ್ಯಾಂಡ್ ಬೇವರ್ಟನ್ ಮನೆ ತಲಪುವಾಗ ರಾತ್ರಿ ಗಂಟೆ  ೧೦ ದಾಟಿತ್ತು. 



ಮುಂದುವರಿಯುವುದು

2 ಕಾಮೆಂಟ್‌ಗಳು: