ಶನಿವಾರ, ನವೆಂಬರ್ 23, 2019

ಅಮೇರಿಕಾ ಪರ್ಯಟನ ಭಾಗ ೩


ಪೋರ್ಟ್‌ಲ್ಯಾಂಡ್ ರೋಸ್ ಗಾರ್ಡನ್ . (೪೦೦ ಎಸ್ ಡಬ್ಲ್ಯು ಕಿಂಗ್ಸ್‌ಟನ್ ಅವೆನ್ಯೂ, ಪೋರ್ಟ್‌ಲ್ಯಾಂಡ್ ಓರೆಗಾನ್ ೯೭೦೫ ಯು‌ಎಸ್.ಎ (400, SW Kingston Ave,Portland, OR 97205 USA)
  ದಿನಾಂಕ ೩-೬-೧೮ರಂದು ಬೆಳಗ್ಗೆ ಇಡ್ಲಿ ಚಟ್ನಿ, ರಸಾಯನ ಪಟ್ಟಾಗಿ ಹೊಡೆದೆವು. ಅನಂತ, ಆನಂದಭಾವ, ಅನಿರುದ್ಧ ಸೈಕಲಿನಲ್ಲಿ ರೋಸ್ ಗಾರ್ಡನಿಗೆ ಹೋದರು. ನಾವು ಕೊಲಂಬಿಯಾ ಅಂಗಡಿಗೆ ಹೋದೆವು. ಅಲ್ಲಿ ಕೆಲವು ಸಾಮಾನು ಕೊಂಡು ಅಲ್ಲಿಂದ ನೇರವಾಗಿ ರೋಸ್ಗಾರ್ಡನ್ ತಲಪಿದೆವು. ಅಲ್ಲಿ ಸೈಕಲಿನಲ್ಲಿ ಹೋದವರು ಉಸ್ಸಪ್ಪ ಎಂದು ಕುಳಿತು ಸುಧಾರಿಸಿಕೊಳ್ಳುತ್ತಿದ್ದದ್ದನ್ನು ಕಂಡೆವು. 
  ಎಲ್ಲರೂ ಸೇರಿ ರೋಸ್ ಗಾರ್ಡನ್ ಪ್ರವೇಶಿಸಿದೆವು. ಪ್ರವೇಶ ಉಚಿತ. 
  ಯುನೈಟೆಡ್ ಸ್ಟೇಟ್ಸ್ ೧೯೧೭ರಲ್ಲಿ ಪೋರ್ಟ್ ಲ್ಯಾಂಡ್ ನ ಓರೆಗಾನಿನಲ್ಲಿ ೪.೫ ಎಕರೆ ಪ್ರದೇಶದಲ್ಲಿ ರೋಸ್ ಗಾರ್ಡನ್ ಸ್ಥಾಪನೆ ಮಾಡಿತು.  ೧೦ ಸಾವಿರ ಗುಲಾಬಿಗಿಡಗಳು ಇಲ್ಲಿ ಹೂ ಬಿಟ್ಟು ನಳನಳಿಸುತ್ತಿವೆ. ೧೦ಸಾವಿರ ಗಿಡಗಳಲ್ಲಿ ೬೫೦ ಪ್ರಬೇಧಗಳ ವಿವಿಧ ಜಾತಿಯ ಗುಲಾಬಿಗಳಿವೆ ಮೇ ತಿಂಗಳಿನಿಂದ ಸೆಪ್ಟೆಂಬರದವರೆಗೆ ಗುಲಾಬಿಗಳು ಅರಳಿ ಉದ್ಯಾನವನ ನೋಡಲು ಬಲು ಚಂದ.  ಪೋರ್ಟ್ ಲ್ಯಾಂಡಿನ ಇನ್ನೊಂದು ಹೆಸರು ಸಿಟಿ ಆಫ್ ರೋಸಸ್. ಹೌದು ಗುಲಾಬಿ ಹೂವುಗಳ ನಗರ ಎಂದು ಕರೆಯುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ರಸ್ತೆ ಬದಿ, ಮನೆ ಮನೆ ಎದುರು, ಎಲ್ಲಿ ನೋಡಿದರೂ ಸುಂದರ ಗುಲಾಬಿ ಹೂವುಗಳನ್ನು ಕಾಣಬಹುದು. ರಂಗುರಂಗಿನ ಗುಲಾಬಿಗಳು ಮನ ಸೆಳೆಯುತ್ತವೆ. ಅಲ್ಲಿ ಸುತ್ತಾಡಿ ಪಟ ಕ್ಲಿಕ್ಕಿಸಿ ನಾವು ಹೊರಟೆವು. 




 ಸ್ವೀಟ್ ಟೊಮೆಟೋಸ್ 
   ರೋಸ್ ಗಾರ್ಡನಿಂದ ನಾವು ಸ್ವೀಟ್ ಟೊಮೆಟೋಸ್ ಎಂಬ ಹೊಟೇಲಿಗೆ ಹೋದೆವು. ನಾನು ಆನಂದಭಾವನ ಟ್ಯಾಂಡಮ್ ಸೈಕಲಿನಲ್ಲಿ, ಶ್ಯಾಮ ಇನ್ನೊಂದು ಸೈಕಲಿನಲ್ಲಿ ಹೊರಟೆವು. ಸುಮಾರು ೫-೬ ಮೈಲಿ ಸೈಕಲ್ ತುಳಿದೆವು. ನಮಗೆ ಇಳಿಜಾರು ಜಾಸ್ತಿ. ಹಾಗಾಗಿ ಅಷ್ಟೇನೂ ಕಷ್ಟವಾಗಿರಲಿಲ್ಲ. ಬರುತ್ತ, ಅನಂತ ಅನಿರುದ್ಧರಿಗೆ ಏರು ಜಾಸ್ತಿ ಸಿಕ್ಕಿ ಅವರು ಸುಸ್ತು ಹೊಡೆದಿದ್ದರು.   
 ಹೊಟೇಲಿನಲ್ಲಿ ವಿವಿಧ ತರಕಾರಿಗಳು, ಸೊಪ್ಪುಗಳು, ಬ್ರೆಡ್, ನಾನಾ ರೀತಿಯ ಐಸ್ಕ್ರೀಂ, ನೂಡಲ್ಸ್, ಪಾಸ್ತಾ ಇತ್ಯಾದಿ ಹೊಟ್ಟೆಗಿಳಿಸಿದೆವು. ಪಶುಗಳು ಮಾತ್ರವಲ್ಲ ಮನುಜರು ಕೂಡ ನಾನಾ ತರಹದ ಹಸಿ ಸೊಪ್ಪು ತಿನ್ನುತ್ತಾರೆಂದು ಅಲ್ಲಿ ಜ್ಞಾನೋದಯವಾಯಿತು! ಎಷ್ಟೊಂದು ಬಗೆಯ ಸೊಪ್ಪು ತರಕಾರಿ, ಖಾದ್ಯಗಳು. ಅಬ್ಬ ನೋಡಿಯೇ ಸುಸ್ತು. ಜಯಶ್ರೀ, ಅಕ್ಷರಿಯೇ ನಮಗೆ ಸಸ್ಯಾಹಾರವನ್ನು ತಟ್ಟೆಗೆ ಹಾಕಿ ಕೊಟ್ಟರು. ಅವನ್ನು ಧೈರ್ಯದಿಂದ ಮೆದ್ದೆವು! 



  ಅನಿರುದ್ಧ ಅನಂತ, ಆನಂದಭಾವ ಸೈಕಲಲ್ಲಿ ಮನೆಗೆ ಹೋದರು. ನಾವು ಕಾಸ್ಕೊ (Costco) ಅಂಗಡಿಗೆ ಹೋದೆವು. ಅಲ್ಲಿ ೫ ಡಾಲರಿಗೆ  ಕೊಂಬು ಕಂಪೆನಿಯ ಚಪ್ಪಲಿ ಕೊಂಡೆವು. ಮನೆಗೆ ಬಂದು ಸಂಜೆ  ಶೈಲಜಾ, ಶ್ಯಾಮ, ಅನಿರುದ್ಧ ಇವರನ್ನು  ಜಯಶ್ರೀ ಆನಂದಭಾವ ವಿಮಾನ ನಿಲ್ದಾಣಕ್ಕೆ ಬಿಟ್ಟು, ಬಾಡಿಗೆ ಕಾರನ್ನು ವಾಪಾಸು ಕೊಟ್ಟು ಬಂದರು. 
     ಮೌಂಟ್ ಹುಡ್ (Mount Hood) clakamas/hood river countries, Oregon,us 
   ತಾರೀಕು ೪-೬-೧೮ರಂದು ಬೆಳಗ್ಗೆ ಅಕ್ಕಿರೊಟ್ಟಿ ತಿಂದು ಟೊಮೆಟೊ ಭಾತ್, ಮೊಸರನ್ನ ಕಟ್ಟಿಕೊಂಡು  ಜಯಶ್ರೀ ಸಾರಥ್ಯದಲ್ಲಿ ನಾವು ಮೌಂಟ್ ಹುಡ್‌ಗೆ ಹೊರಟೆವು. ಬೇವರ್ಟನಿಂದ ಮೌಂಟ್ ಹುಡ್ ಗೆ ಸುಮಾರು ೫೩ ಮೈಲಿ. ಒಂದು ಗಂಟೆ ದಾರಿ. ನಾವು ಹನ್ನೊಂದು ಗಂಟೆಗೆ ಅಲ್ಲಿ ತಲಪಿದೆವು. 
    ಸುಮಾರು ೧೧೨೪೯ ಅಡಿ ಎತ್ತರದ ಬೆಟ್ಟ. ಸುಮಾರು ೭ಸಾವಿರ ಅಡಿಯವರೆಗೆ ಹತ್ತಲು ಆಗುತ್ತದೆ ಎಂದು ಕಾಣುತ್ತದೆ. ಬೆಟ್ಟ ಹಿಮದಿಂದ ಆವೃತವಾಗಿತ್ತು. ಹಿಮದಲ್ಲಿ ಸ್ಕೀಯಿಂಗ್ ಮಾಡುವುದನ್ನು ನೋಡಿದೆವು.    ರೋಪ್ ವೇಯಲ್ಲಿ ಜನರು ಬೆಟ್ಟದ ಅರ್ಧ ಭಾಗದಷ್ಟು ಹೋಗಿ ಬರುತ್ತಿದ್ದರು. ನಾವು ಹೋಗಲಿಲ್ಲ. ನೋಡಿಯೇ ತೃಪ್ತಿಪಟ್ಟೆವು. ಸ್ವಲ್ಪದೂರ ಹಿಮದಲ್ಲಿ ನಡೆದು ಹಿಮ ಕೈಯಲ್ಲಿ ಹಿಡಿದು ಚಳಿ ಅನುಭವಿಸಿದೆವು. ಚಳಿಗೆ ಬೆಚ್ಚಗೆ ಅಂಗಿ ಹಾಕಿದ್ದರೂ ಮೈ ಕೈ ಚಳಿಯಲ್ಲಿ ಚುಮುಗುಟ್ಟುತ್ತಲಿತ್ತು. ಕೈಯನ್ನು ಕೋಟ್ ಜೇಬಿಗೆ ತುರುಕಿಯೇ ಇಟ್ಟುಕೊಂಡೆವು. ಒಂದಷ್ಟು ಹೊತ್ತು ಹಿಮದಲ್ಲೇ ಅಡ್ಡಾಡಿದೆವು. 







 ಟಿಂಬರ್ ಲಾಡ್ಜಿನಲ್ಲಿ ಕೂತು ಬುತ್ತಿಯೂಟ ಮಾಡಿ ಅಲ್ಲಿಂದ ಹೊರಟು ವ್ಯೂ ಪಾಯಿಂಟಿನಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡೆವು.
  ಮೌಂಟ್ ಹುಡ್ ಮಿರರ್ ಲೇಕ್
ಮೌಂಟ್ ಹುಡ್ ನಿಂದ ಬರುತ್ತ ದಾರಿಯಲ್ಲಿ ನಾವು ಮಿರರ್ ಲೇಕ್ ಗೆ ಹೋದೆವು. ಸುಮಾರು ಮೂರು ಕಿಲೋಮೀಟರು ಕಾಡಿನೊಳಗೆ ನಡೆಯಬೇಕು. ನಡೆಯಲು ಬಹಳ ಸುಲಭದ ದಾರಿ. ಕಾಡಿನ ದಾರಿಯಲ್ಲಿ ನಡೆಯುತ್ತಿರಬೇಕಾದರೆ ಒಂದು ಹಾವು ದರ್ಶನ ಕೊಟ್ಟಿತು. ಜಯಶ್ರೀಗೆ ಹಾವೆಂದರೆ ಬಲು ಭಯ. ಅಲ್ಲಿಂದ ಮುಂದಕ್ಕೆ ಭಾರೀ ಎಚ್ಚರದಿಂದ ಪರಿಶೀಲಿಸಿ ಹೆಜ್ಜೆ ಇಟ್ಟು ನಡೆದಳು! ಮುಂದೆ ಸಾಗಿದಾಗ ಕಾಡಿನ ಮಧ್ಯೆ ಪುಟ್ಟ ಸರೋವರ. ೫೯೦ ಅಡಿ ಉದ್ದ, ೩೯೦ ಅಡಿ ॒ಅಗಲವಿದೆ 

    ಸುತ್ತಲೂ ಮರಗಳು. ಸರೋವರ ಬಹಳ ಚಂದವಾಗಿತ್ತು. ಈ ಸರೋವರದಲ್ಲಿ ಮೌಂಟ್ ಹುಡ್ ಪ್ರತಿಬಿಂಬ ಬಹಳ ಚೆನ್ನಾಗಿ ಕಾಣುತ್ತದಂತೆ. ಅಂಥ ದೃಶ್ಯ ನೋಡುವ ಭಾಗ್ಯ ನಮಗೆ ಸಿಗಲಿಲ್ಲ. ತುಂಬ ಹೊತ್ತು ಕಾದಿದ್ದರೆ ಕಾಣಲು ಸಿಗುತ್ತಿತ್ತೇನೋ. ಅಷ್ಟು ಸಮಯ ಅಲ್ಲಿ ಕೂರಲು ನಮಗೆ ಅನುಕೂಲವಿರಲಿಲ್ಲ. ಆದರೇನಂತೆ? ಆ ಸರೋವರದಲ್ಲಿ ನಮ್ಮದೇ ಪ್ರತಿಬಿಂಬ ಮೂಡಿದ್ದನ್ನು, ಮರಗಿಡಗಳ ಪ್ರತಿಬಿಂಬವನ್ನು ಕ್ಲಿಕ್ಕಿಸಿಕೊಂಡೆವು. ಸರೋವರ ನೋಡಿ ಖುಷಿಪಟ್ಟೆವು. ಅಲ್ಲಿಂದ ಹೊರಟು ೫ ಗಂಟೆಗೆ ಕಾರು ನಿಲ್ಲಿಸಿದ ಸ್ಥಳಕ್ಕೆ ಬಂದು ಕಾರು ಹತ್ತಿದೆವು.




    ಕಲಾಮಿಟಿ ಜೋನ್ಸ್
    ಕಲಾಮಿಟಿ ಜೋನ್ಸ್ ಹೊಟೇಲಿನಲ್ಲಿ ಕಾಫಿ, ಫ್ರೆಂಚ್ ಫ್ರೈ (ಆಲೂಚಿಪ್ಸ್) ತಿನ್ನಲೇಬೇಕು ಎಂದು ಆನಂದಭಾವ ಹೋಗುವಾಗಲೇ ಎಚ್ಚರಿಸಿದ್ದರು. ಹಾಗೆ ಅಲ್ಲಿ ಕಾಫಿಕುಡಿದು ಚಿಪ್ಸ್ ತಿಂದೆವು. ಅಲ್ಲಿ ಮಾಡಿನಲ್ಲಿ ಪ್ರತೀದೇಶದ ನೋಟನ್ನು ಅಂಟಿಸಿದ್ದಾರೆ. ಅಲ್ಲಿ ನಮಗೆ ಇಷ್ಟವಿದ್ದರೆ ನಮ್ಮ ದೇಶದ ನೋಟನ್ನು ಅಂಟಿಸಬಹುದು. ನಾನಾ ದೇಶಗಳ ನೋಟುಗಳ ನೋಟ ನೋಡಿ ಛೇ! ಎಂದೆನಿಸಿತು. ಇಂಥ ಹವ್ಯಾಸ ಬೇಕಾ? ಇದು ನೋಟುಗಳ ಅಪವ್ಯಯವಲ್ಲವೆ? ೭ ಗಂಟೆಗೆ ಬೇವರ್ಟನ್ ಮನೆ ತಲಪಿದೆವು.  





    ನಿಕೊಲಸ್ ಹೊಟೇಲ್
 ಸಂಜೆ ೭.೩೦ಕ್ಕೆ ಹೊರಟು (ಅಲ್ಲಿ ಸೂರ್ಯ ಕಂತುವಾಗ ೮ ದಾಟುತ್ತದೆ) ನಿಕೊಲಸ್ ಹೋಟೆಲ್‌ಗೆ ಹೋದೆವು. ಅಲ್ಲಿಯ ಹೊಟೇಲ್ ತಿಂಡಿಗಳನ್ನು ನಮಗೆ ಪರಿಚಯಿಸಬೇಕು ಎಂದು ನಮ್ಮ ಭಾವನಿಗೆ ಅತ್ಯಂತ ಉಮೇದು. ನಾವು ಅವರ ಉಮೇದಿಗೆ ತಣ್ಣೀರು ಹಾಕಲಿಲ್ಲ. ಅಲ್ಲಿ ಫಲಾಫಲ್ (ವಡೆ), ಹಮ್ಮಸ್(ಚಟ್ನಿ), ಬೇಕ್ಡ್ ಕಾಲಿಫ್ಲವರ್, ಮಜಾಡ್ರ ರೈಸ್(ಹುರುಳಿ ಅನ್ನ) ಟಿಹಿನಿ (ಮೊಸರು) ಇಷ್ಟು ಬಗೆ ಖಾದ್ಯಗಳು. ನಮಗೆ ಇವೆಲ್ಲವೂ ಹೊಸ ಹೆಸರುಗಳು. ಖುಷಿಯಿಂದ ತಿಂದು ಮನೆಗೆ ಬಂದೆವು. 


    ಕಿಂಗ್ಸ್ ಮೌಂಟೆನ್ (kings mountain) 
೫-೬-೧೮ರಂದು ಒತ್ತು ಶ್ಯಾವಿಗೆ, ಮಾವಿನಹಣ್ಣು ರಸಾಯನ ಭರ್ಜರಿಯಾಗಿ ಹೊಟ್ಟೆ ತುಂಬಿಸಿಕೊಂಡೆವು. ಮಧ್ಯಾಹ್ನ ೩ ಗಂಟೆಗೆ ಇಂಟೆಲ್ ಕಚೇರಿಗೆ ನಮ್ಮನ್ನು ಜಯಶ್ರೀ ಬಿಟ್ಟಳು. (ನಾವು ಅಲ್ಲಿ ಇರುವ  ಸಮಯದಲ್ಲಿ ನಮಗೆ ಒಂದು ಬೆಟ್ಟವನ್ನಾದರೂ ತೋರಿಸಲೇಬೇಕೆಂದು ಆನಂದಭಾವ ಮಾರ್ಗಸೂಚಿ ಹಾಕಿಕೊಂಡಿದ್ದರು. ಅಲ್ಲಿ ಸಾಕಷ್ಟು ಬೆಟ್ಟಗಳಿವೆ. ನಮಗೂ ಬೆಟ್ಟ ಹತ್ತಲು ಉಮೇದು ಜಾಸ್ತಿಯೇ ಇರುವುದರಿಂದ ಅವರ ಸೂಚನೆಯನ್ನು ನಾವು ಖುಷಿಯಿಂದಲೆ ಪಾಲಿಸಿದ್ದೆವು)  ಅಲ್ಲಿಂದ ಆನಂದ ಭಾವ ಅನಂತ ನಾನು ಕಿಂಗ್ಸ್ ಮೌಂಟೆನ್ ಹತ್ತಲು ಹೊರಟೆವು. ಇಂಟೆಲಿನಿಂದ ಹೈವೇ ೬ರಲ್ಲಿ ಪೋರ್‍ಟ್‌ಲ್ಯಾಂಡ್ - ತಿಲಮುಖ್ ಹಾದಿಯಲ್ಲಿ  ಒಂದು ಗಂಟೆ ದಾರಿ. 


    ಕಿಂಗ್ಸ್ ಮೌಂಟೇನ್ ಟ್ರಯಲ್ ಹೆಡ್‌ನಿಂದ ೪ ಗಂಟೆಗೆ ನಾವು ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಕೈಯಲ್ಲಿ ಕೋಲು, ಕಾಲಿಗೆ ಬೂಟು ಬೆಚ್ಚಗೆ ಅಂಗಿ ಧರಿಸಿ ನಾವು ಬಂದಿದ್ದೆವು. ಕಾಡೊಳಗೆ ಸುಮಾರು ಮೂರೂವರೆ ಮೈಲಿ ಸಾಗಬೇಕು. ಚಾರಣದ ಹಾದಿ ಸುಲಭವೂ ಅಲ್ಲ ಕಷ್ಟವೂ ಅಲ್ಲ ಮಧ್ಯಮ. ದೊಡ್ಡ ದೊಡ್ಡ ಮರಗಳು, ಅವುಗಳೆಡೆಯಲ್ಲಿ  ಏರು ಹಾದಿ. ಚಳಿ ಇರಬಹುದೆಂದು ಕೋಟ್ ಹಾಕಿಕೊಂಡಿದ್ದದ್ದು ನಡೆಯುತ್ತ ಸಾಗಿದಂತೆ ಒಳಗೆ ಸೆಖೆ ಸುರುವಾಗಿ ಕೋಟ್ ಬಿಚ್ಚಬೇಕಾಯಿತು. ನಡೆಯಲು ಸುಸ್ತಾಗುತ್ತಿತ್ತು, ಆದರೂ ಅಲ್ಲಲ್ಲಿ ನಿಂತು ಸುಧಾರಿಸಿ, ಛಲಬಿಡದೆ ಮುಂದುವರಿದೆವು. ಆನಂದಭಾವ ದಾರಿಯುದ್ದಕ್ಕೂ ಮಾತಾಡುತ್ತಲೇ ಇದ್ದರು. ನಮ್ಮದು ಬರೀ ಹೂಗುಟ್ಟುವಿಕೆ ಮಾತ್ರ. ಮಾತಾಡಿ ಶಕ್ತಿ ವ್ಯಯವಾಗಿ ಮುಂದೆ ನಡೆಯಲಾಗದಿದ್ದರೆ.॒. !  ಈ ಬೆಟ್ಟ ಚಾಮುಂಡಿಬೆಟ್ಟದ ಮೂರರಷ್ಟು ಇರಬಹುದು. ನಾವೀಗ ಕಾಲು ಭಾಗ ಬಂದಿದ್ದೇವಷ್ಟೆ. ಈಗ ನಂದಿ ಹತ್ರ ಬಂದೆವು ಎಂದು ಹೇಳುತ್ತ ಹುರಿದುಂಬಿಸುತ್ತಲೇ ಮುನ್ನಡೆಸಿದರು. ಕೆಲವೆಡೆ ಕಠಿಣ ಏರು. ಅಬ್ಬ ಉಸ್ ಎಂದು ಹತ್ತಿ ಸ್ವಲ್ಪ ನಿಂತು ವಿರಮಿಸಿ ಮುಂದುವರಿದೆವು. ಕಾಡು ಹೂಗಳು, ದೈತ್ಯ ಮರಗಳನ್ನು ನೋಡುತ್ತ, ಮಧ್ಯೆ ಮಧ್ಯೆ ಪಟ ಕ್ಲಿಕ್ಕಿಸುತ್ತ ನಡೆದೆವು. ಅಂತೂ ಇಂತೂ ೬.೧೦ಕ್ಕೆ ಕಿಂಗ್ಸ್ ಮೌಂಟೆನ್ ತುದಿ ತಲಪಿದೆವು. ಜನ ಸಂಚಾರ ಇರಲಿಲ್ಲ. ಕೇವಲ ನಾವು ಮಾತ್ರ ಅಲ್ಲಿ ಇದ್ದುದು. ೩೨೨೬ ಅಡಿ ಎತ್ತರದಲ್ಲಿ ನಾವಿದ್ದೆವು. 




    ಹುರ್ರೆ ಎಂದು ಕೂಗು ಹಾಕಿದೆವು. ಅಲ್ಲಿಂದ ಸುತ್ತ ಬೆಟ್ಟಗಳನ್ನು ನೋಡುವುದೇ ಸೊಗಸು. ಹಸುರುಡುಗೆ ತೊಟ್ಟ ಮರಗಳನ್ನು ನೋಡುತ್ತಲಿದ್ದರೆ ಹತ್ತಿ ಬಂದ ಆಯಾಸ ಮಾಯ. ಇಲ್ಲಿ ಹೆಚ್ಚು ಹೊತ್ತು ವಿರಮಿಸುವಂತಿಲ್ಲ. ನಾವು ಕತ್ತಲಾಗುವ ಮೊದಲು ಕೆಳಗೆ ಇಳಿದಾಗಬೇಕು ಎಂದು ಆನಂದಭಾವ ಎಚ್ಚರಿಸಿದರು. ಪ್ರಕೃತಿ ಸೌಂದರ್ಯವನ್ನು ನೋಡುತ್ತ ಕೂರಲು ಹೆಚ್ಚು ಹೊತ್ತು ಸಿಗಲಿಲ್ಲ. ಇಪ್ಪತ್ತು ನಿಮಿಷ ಅಲ್ಲಿ ಕೂತು ಚಾಕಲೆಟ್ ಬಿಸ್ಕೆಟ್ ತಿಂದು ನೀರು ಕುಡಿದೆವು.


   ಬೆಟ್ಟದ ತುದಿಯಲ್ಲಿ ಒಂದು ಪೆಟ್ಟಿಗೆಯೊಳಗೆ ಪುಸ್ತಕ, ಪೆನ್ನು ಇಟ್ಟಿದ್ದರು. ಅದರಲ್ಲಿ ನಮ್ಮ ಅನಿಸಿಕೆ ದಾಖಲಿಸಬಹುದು. ನಾವು ಕನ್ನಡದಲ್ಲಿ ನಮ್ಮ ಖುಷಿಯನ್ನು ಅಲ್ಲಿ ಅಕ್ಷರರೂಪದಲ್ಲಿ ನಮೂದಿಸಿದೆವು.   ಪಟ ಕ್ಲಿಕ್ಕಿಸಿಕೊಂಡು ೬.೩೦ಕ್ಕೆ ಕೆಳಗೆ ಇಳಿಯಲು ತೊಡಗಿದೆವು. ಕತ್ತಲಾಗುವಾಗ ೮.೩೦ ಆಗುವ ಕಾರಣ ಕತ್ತಲೆಯ ಭಯವಿರಲಿಲ್ಲ. ಮಾತಾಡುತ್ತ ಆರಾಮವಾಗಿ ಕೆಳಗೆ ಇಳಿದೆವು. ಈಗ ಮಾತಾಡುವ ಸರದಿ ತಮ್ಮ ಅನಂತನದು. ಯಕ್ಷಗಾನದ ಪೌರಾಣಿಕ ಕಥೆ ಹೇಳುತ್ತ, ಅಣ್ಣ ಅದನ್ನು ಖುಷಿಯಿಂದ ಕೇಳುತ್ತ, ಮಧ್ಯೆ ಪ್ರಶ್ನೆ ಕೇಳುತ್ತಲೇ, ನಾನು ಗಿಡಮರ ಹೂವುಗಳ ಪಟ ಕ್ಲಿಕ್ಕಿಸುತ್ತಲೇ ಇಳಿದೆವು. ೮.೧೫ಕ್ಕೆ ನಾವು ಕೆಳಗೆ ತಲಪಿದೆವು. 



   ೯ ಗಂಟೆಗೆ ನಾವು ಮನೆ ತಲಪಿದಾಗ ಬಿಸಿಬಿಸಿ ಮಸಾಲೆ ಪೂರಿ ನಮಗೆ ಲಭಿಸಿತು. ಅಕ್ಷರಿ, ಜಯಶ್ರೀ ಸೇರಿ ಮಾಡಿಟ್ಟಿದ್ದರು. ಅಣ್ಣನೂ ತಮ್ಮನೂ ಮೂಗಿನಲ್ಲಿ ಸರಬರ ನೀರಿಳಿಸಿಕೊಂಡೇ ತಿಂದರು! ಅದು ಸ್ವಲ್ಪ ಖಾರ ಖಾರವಾಗಿತ್ತು. ಅವರಿಬ್ಬರಿಗೂ ಖಾರ ಬಲು ದೂರ. ನಾನು ಖುಷಿಯಿಂದ ಚಪ್ಪರಿಸಿ ತಿಂದೆ. 




  ಮಲ್ಟಿನೋಮಹ್ ಜಲಪಾತ Multnomah Falls (Columbia river gorge, multnomah country, Oregon us  
೬-೬-೧೮ರಂದು ಮಧ್ಯಾಹ್ನ ಊಟವಾಗಿ ಅಕ್ಷರಿಯನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟೆವು. ಅವಳು ಷಿಕಾಗೊಗೆ ಹಾರಿದಳು. ಆನಂದಭಾವ, ಅನಂತ ನಾನು ಅಲ್ಲಿಂದ ಮಲ್ಟಿನೊಮಹ್ ಜಲಪಾತಕ್ಕೆ  ಹೋಗುವ ದಾರಿಯಲ್ಲಿ ಕೊಲಂಬಿಯ ನದಿ ನೋಡಿದೆವು. 
ಅಲ್ಲಿ ಕಾರು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ   ಅಳಿಲು ಮನುಷ್ಯರ ಬಳಿ ಬಂದು ಹಣ್ಣು ತಿನ್ನುತ್ತವೆ. ಪ್ರವಾಸಿಗರು ಅಳಿಲುಗಳಿಗೆ ಹಣ್ಣು ಕೊಟ್ಟು ಅಭ್ಯಾಸ ಮಾಡಿದ್ದಾರಂತೆ. ನಾವೂ ಹಣ್ಣು ಕೊಟ್ಟೆವು. ಪುಟು ಪುಟು ಓಡಿ ಬಂದು ಹಣ್ಣು ತಿಂದಿತು.




.ಮಲ್ಟಿನೊಮಹ್ ಜಲಪಾತಕ್ಕೆ ನಾವು ಹೋದಾಗ ಅಷ್ಟು ನೀರಿರಲಿಲ್ಲ. ವರ್ಷದ ಎಲ್ಲ ದಿನವೂ ಜಲಪಾತದಲ್ಲಿ ನೀರಿರುತ್ತದೆಯಂತೆ. ೬೨೦ ಅಡಿ ಮೇಲಿನಿಂದ ನೀರು ಧುಮುಕುತ್ತದೆ. ಒರೆಗಾನಿನ ಅತ್ಯಂತ ಉದ್ದದ ಜಲಪಾತವಿದು. ಉಚಿತ ಪ್ರವೇಶ. ದಿನದ ೨೪ ಗಂಟೆಯೂ ಪ್ರವೇಶಾವಕಾಶವಿದೆ. ಸ್ವಲ್ಪ ಹೊತ್ತು ಜಲಪಾತ ವೀಕ್ಷಿಸಿ ಅಲ್ಲಿಂದ ಹೊರಬಂದೆವು. 


  ಅಲ್ಲಿಯ ಗಿಫ್ಟ್ ಶಾಪಿನಿಂದ  ಮರದ ಹಾವಿನ ೨ ಆಟಿಕೆಗಳನ್ನು  ಆನಂದಭಾವ ಖರೀದಿಸಿದರು. ಒಂದು ಆಟಿಕೆಗೆ ಮೂರು ಡಾಲರ್ ಇರಬೇಕು. ನಾವು ಏನಾದರೂ ಕೊಳ್ಳಬೇಕು. ಅವರ ಜೀವನೋಪಾಯವೇ ವ್ಯಾಪಾರ. ಅವರಿಗೆ ವ್ಯಾಪಾರವಾಗಬೇಕಲ್ಲ. ಎಂದು ಆನಂದಭಾವ ವ್ಯಾಖ್ಯಾನಿಸಿದರು. ಹೌದೌದು ಎಂದು ತಲೆದೂಗಿದರೂ ಏನೂ ಕೊಳ್ಳಲು ಮನಸು ಬರಲಿಲ್ಲ. 
ಪೋರ್ಟ್ ಲ್ಯಾಂಡ್ ಡೌನ್ ಟೌನ್
  ಪೋರ್ಟ್ಲ್ಯಾಂಡ್ ಪೇಟೆಯ್ಗಲ್ಲಿ ಸುತ್ತಾಡಿ ಅಲ್ಲಿರುವ  ಪಾರ್ಕ್, ಅನರ್ಘ್ಯನ ಮದುವೆ ಆರತಕ್ಷತೆ ಆದ ಸ್ಥಳ ಎಲ್ಲ ನೋಡಿ ಅಲ್ಲಿಂದ ಹೊರಟು ನಾವು ಮನೆ ಸೇರಿದೆವು.



   ಸ್ನೇಹಿತರ ಮನೆ ಭೇಟಿ
 ರಾತ್ರಿ ಊಟವಾಗಿ  ಜಯಶ್ರೀ ಆನಂದ ಭಾವ ಅವರ ಸ್ನೇಹಿತರಾದ ವಿಜಯ ರಾವ್, ಅನಿತಾ ದಂಪತಿಗಳ ಮನೆಗೆ ಕರೆದುಕೊಂಡು ಹೋದರು. ಅವರ ಮಕ್ಕಳು ಸಂಜನಾ, ಮೇಘ ಅವರು ಮೂಲತಃ ಮಂಗಳೂರಿನವರು. ಅಲ್ಲಿ ಪಟ್ಟಾಂಗ ಹೊಡೆದು ಐಸ್ಕ್ರೀಂ ತಿಂದು ಮನೆಗೆ ಬಂದೆವು. ಅವರಲ್ಲಿ ಪಟ ಕ್ಲಿಕ್ಕ್ಸಿಕೊಳ್ಳಲು ಮರೆತು ಹೋಯಿತು.
ಕ್ರೇಟರ್ ಲೇಕ್ crater lake  (Klamath country Oregon us)
೭-೬.೧೮ರಂದು ಬೆಳಗ್ಗೆ ೮ ಗಂಟೆಗೆ ಜಯಶ್ರೀ, ಆನಂದಭಾವ, ಅನಂತ ಹಾಗೂ ನಾನು ಕಾರಿನಲ್ಲಿ ಹೊರಟೆವು. ನಮ್ಮ ಮುಂದಿನ ಗುರಿ ರಾತ್ರೆ ಕ್ಯಾಲಿಫೋರ್ನಿಯಾ ತಲಪುವುದಾಗಿತ್ತು. ಓರೆಗಾನ್ ರಾಜ್ಯದ ಬೇವರ್ಟನ್ ನಿಂದ ಹೊರಟು ಸೇಲಮ್ (ಓರೆಗಾನ್ ರಾಜ್ಯದ ರಾಜಧಾನಿ ಸೇಲಮ್)  ಹಾದು ಓಕ್ರಿಚ್ ನಲ್ಲಿ ಇಳಿದು ಕಾಫಿ ಕುಡಿದೆವು. ಒಂದು ಕಾಫಿಗೆ ೬.೩೦ ಡಾಲರ್. ಅಲ್ಲೀವರೆಗೆ ಕಾರು ಚಾಲನೆ ಜಯಶ್ರೀಯದು. ತದನಂತರ ಆನಂದಭಾವ  ಕಾರು ಪಾರುಪತ್ಯ ವಹಿಸಿಕೊಂಡರು. 
  ದಾರುಯುದ್ದಕ್ಕೂ ವಿಲಮೆಟ್ ನದಿ ಹರಿಯುವುದನ್ನು ಕಂಡೆವು. ಓಡೆಲ್ ಲೇಕ್ (odell lake) ದಾಟಿ ಒಂದು ಗಂಟೆಗೆ ಸರಿಯಾಗಿ ಕ್ರೇಟರ್ ಲೇಕ್ ತಲಪಿದೆವು. ಕ್ರೇಟರ್ ಲೇಕ್ ನೀಲ ನೀರಿನಿಂದ ಕಂಗೊಳಿಸುತ್ತಿತ್ತು. ಲೇಕ್ ಮಧ್ಯೆ ನಡುಗುಡ್ಡೆ ಇದೆ. ಸರೋವರ ನೋಡಲು ಬಲು ಸುಂದರವಾಗಿದೆ.   ೧೫೭ ವರ್ಷದ ಹಿಂದೆಯೇ ಈ ಸರೋವರ ನಿರ್ಮಾಣವಾಗಿದೆ. ಕನಿಷ್ಟ ೩೫೦ಮೀಟರ್ ಆಳ ಗರಿಷ್ಟ ೫೯೪ಮೀಟರ್ ಆಳವಿದೆಯಂತೆ. ೮ಕಿಮೀ ಅಗಲ, ೯.೭ಕಿಮೀ ಉದ್ದವಿದೆ. 



   ಲೇಕ್ ಸುತ್ತಮುತ್ತ ಹಾದೆವು. ಹಿಮಗಡ್ಡೆ ಅಲ್ಲಲ್ಲಿ ಇರುವುದನ್ನು ಕಂಡೆವು. ನಾವು ಕಟ್ಟಿ ತಂದಿದ್ದ ಬುತ್ತಿಯೂಟ ೨ ಗಂಟೆಗೆ ಮಾಡಿದೆವು. ಊಟವಾಗಿ ನಾನು ಜಯಶ್ರೀ ಕ್ರೇಟರ್ ಲೇಕ್ ಪುನಃ ನೋಡಲು ಹೋದೆವು. ಬೇರೆ ಬೇರೆ ಸ್ಥಳಗಳಿಗೆ ಹೋಗಿ ಬೇರೆ ಬೇರೆ ಕೋನಗಳಿಂದ ಸರೋವರವನ್ನು ವೀಕ್ಷಿಸಿದೆವು. 
  ಅಲ್ಲಿ ಪಕ್ಷಿಗಳು ಮನುಜರ ಹತ್ತಿರ ಬಂದು ಅವರು ಹಾಕುವ ಕಾಳನ್ನು ತಿನ್ನುತ್ತಿರುವುದು ಕಂಡೆ.   














ಎಷ್ಟು ನೋಡಿದರೂ ಇನ್ನೂ ನೋಡೋಣ ಎಂಬ ಭಾವ. ಆಗ ಅಲ್ಲಿ ಇಬ್ಬರು ಹುಡುಗರು ಕನ್ನಡ ಮಾತಾಡುತ್ತ ಇರುವುದು ಕಂಡು ನಾವು ಮಾತಾಡಿಸಿದೆವು. ಅವರು ಮೈಸೂರಿನವರು. ಭೂಮಿ ಗುಂಡಗಿದೆ ಎಂಬುದು ಸಾಬೀತಾಯಿತು! ಸರಸ್ವತೀಪುರದ ನಮ್ಮ ಮನೆ ಎದುರು ಖಾಲಿ ಸೈಟಿನಲ್ಲಿ ಕ್ರಿಕೆಟ್ ಆಡಲು ಬರುತ್ತಿದ್ದದ್ದನ್ನು ನೆನಪುಮಾಡಿಕೊಂಡರು. ಅವರ ಹೆಸರು ಈಗ ನಾನು ಮರೆತೆ. ಅವರೊಡನೆ ಮಾತಾಡಿ ಪಟ ಕ್ಲಿಕ್ಕಿಸಿಕೊಂಡು ನಾವು ಕಾರಿನ ಬಳಿ ಬರುವಾಗ ಅಣ್ಣ ತಮ್ಮ ಸುಖ ನಿದ್ದೆಯಲ್ಲಿದ್ದರು!  





  ಕ್ರೇಟರ್ ಲೇಕ್ ಚಂದವನ್ನು ಕಣ್ಣುತುಂಬಿಸಿಕೊಂಡು ೩ ಗಂಟೆಗೆ ಹೊರಟೆವು. ಮೆಡ್‌ಪ್ರರ್ಡ್ ಹಾದು, ಆಶ್‌ಲ್ಯಾಂಡ್(Ashland) ದಾಟಿ, ಯುರೆಕಾ ತಲಪಿದಾಗ ಗಂಟೆ ೬ ದಾಟಿತ್ತು. ಅಲ್ಲಿ ಕಾಫಿ ಕುಡಿದು ಕಾರು ಹತ್ತಿ ಮುಂದುವರಿದೆವು. ಮೌಂಟ್ ಶಾಸ್ತಾ ಬೆಟ್ಟ ದೂರದಲ್ಲಿ ಬಹಳ ಚೆನ್ನಾಗಿ ಕಾಣುತ್ತಲಿತ್ತು. ಶಾಸ್ತಾ ಊರು ಹಾದು ರೆಡ್ಡಿಂಗ್ ಊರು ದಾಟಿ ಸಾಗಿದೆವು. ಕತ್ತಲು ಆವರಿಸಲು ತೊಡಗಿತು. ದಾರಿಯಲ್ಲಿ  ಅದೆಷ್ಟೊಂದು ಕಾರುಗಳು  ವೇಗವಾಗಿ ಸಾಗುತ್ತಲಿತ್ತು. 
 ಅನರ್ಘ್ಯ ಜೆ ಜೆ ಮನೆ 
 ರಾತ್ರಿ ೧೦.೪೫ಕ್ಕೆ ನಾವು ೮೦೦ ಮೈಲಿ ಕ್ರಮಿಸಿ ಕ್ಯಾಲಿಫೋರ್ನಿಯಾದಲ್ಲಿರುವ ಅನರ್ಘ್ಯ, ಜೆ ಜೆ ಮನೆ ತಲಪಿದೆವು. ಆನಂದಭಾವ ಜಯಶ್ರೀಯ ಮಕ್ಕಳು ಅನರ್ಘ್ಯ, ಐಶ್ವರ್ಯ. ಅನರ್ಘ್ಯಳ ಪತಿ ಜೆಜೆ. ಅವರ ಪ್ರೀತಿಯ ನಾಯಿ ಮಿಲಾನ್. ಅವರು ನಮ್ಮ ಬರುವನ್ನು (ಅಷ್ಟು ಹೊತ್ತಾದರೂ ಊಟ ಮಾಡದೆ) ಕಾತರದಿಂದ ಕಾಯುತ್ತಲಿದ್ದರು. ಅವರಿಗೆ ನಮ್ಮನ್ನು ಕಂಡು ಬಲು ಖುಷಿಯಾಯಿತು. ಅವರನ್ನು ಕಂಡು ನಮಗೂ ಹರ್ಷವಾಯಿತು. ಅನ್ನ, ಸಾರು, ಚಪಾತಿ, ಪಲ್ಯ,ಸಲಾಡ್, ಮಿಕ್ಷ್ಚರ್ ಎಲ್ಲ ಮಾಡಿಟ್ಟಿದ್ದರು. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದೆವು. ಸಲಾಡ್ ತಯಾರಿಸಿದ್ದು ನಾನು ಹೇಗಾಗಿದೆ? ಎಂದು ಐಶ್ವರ್ಯ ಕೇಳಿದಳು. ತರಕಾರಿ ಹೆಚ್ಚಿದ್ದು ಸ್ವಲ್ಪ ದೊಡ್ಡದಾಯಿತು ಎಂದು ಅನಂತ ಅವಳ ಕಾಲೆಳೆದ. ಮಾತಾಡಿ ೧೨ ಗಂಟೆಗೆ ನಿದ್ದೆಗೆ ಜಾರಿದೆವು. 
ಮಿಲಾನ್
ಅನರ್ಘ್ಯನ ಮನೆ ಚೊಕ್ಕಗೊಳಿಸುವ ಯಂತ್ರ


   ಫಿಶರ್ ಮೆನ್  
೮-೬-೧೮ರಂದು ಬೆಳಗ್ಗೆ ತಿಂಡಿ ತಿಂದು ನಾವು ಫಿಶರ್ ಮೆನ್‌ಗೆ ಹೋದೆವು. (ಮಕ್ಕಳೆಲ್ಲ ಅವರವರ ಕೆಲಸಗಳಿಗೆ ತೆರಳಿದ್ದರು.) ಸಾಗರದಲ್ಲಿ ನೀರುನಾಯಿ ಸಾಕಷ್ಟು ಇತ್ತು. ಅದು ನೋಡಲು ವಿಕಾರವಾದ ಪ್ರಾಣಿ. ವಾಸನೆ ಕೂಡ ವಿಪರೀತ. ಅವು ನೀರೊಳಗೆ ಮುಳುಗಿ ಮೇಲೆ ಹತ್ತುವುದನ್ನು ಮೂಗುಮುಚ್ಚಿ ನೋಡುತ್ತ ಸ್ವಲ್ಪ ಹೊತ್ತು ನಿಂತೆವು. 
   ಪೇಟೆಬೀದಿಯಲ್ಲಿ ಸುತ್ತಾಡಿದೆವು. ನಾನಾ ರೀತಿಯ ಹಣ್ಣುಗಳನ್ನು ನೋಡಿದೆವು. ಚೆರಿ ಹಣ್ಣು ಕೊಂಡೆವು. ಅಬ್ಬ ಅದೆಷ್ಟು ಪೆಪ್ಪರುಮೆಂಟ್. ಅಮೇರಿಕನ್ನರ ಈ ಪರಿ ತಿನ್ನುವ ಉಮೇದಿಗೆ ಮೆಚ್ಚಬೇಕು! 






   ಸಿಸ್ಕೊ ಕಛೇರಿ
 ಅಲ್ಲಿಂದ ನಾವು ಜೆಜೆ ಕೆಲಸ ಮಾಡುವ ಸಿಸ್ಕೊ ಕಂಪೆನಿಗೆ ಹೋದೆವು. ಅಲ್ಲಿ ಅವನ ಕಚೇರಿ ನೋಡಿ ಅವನೊಂದಿಗೆ ಅಲ್ಲೇ ಊಟವನ್ನೂ ಮಾಡಿ ಹೊರಟೆವು.

ಮುಂದುವರಿಯುವುದು




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ