ಭಾನುವಾರ, ನವೆಂಬರ್ 24, 2019

ಅಮೇರಿಕಾ ಪರ್ಯಟನ ಭಾಗ ೪

 ಫೇಸ್ಬುಕ್ ಕಂಪೆನಿ
 ಅನರ್ಘ್ಯಳನ್ನು ಕರೆದುಕೊಂಡು ಸ್ಟಾನ್‌ಫರ್ಡ್ ಯೂನಿವರ್ಸಿಟಿ ಕಡೆಗೆ ಹೊರಟೆವು. ಈ ಮಧ್ಯೆ ಅನರ್ಘ್ಯಳಿಗೆ ಅರ್ಧ ಗಂಟೆ ಅಲ್ಲೇ ಮೀಟಿಂಗ್ ಇತ್ತು.  ಹಾಗಾಗಿ ಅಲ್ಲಿ ಇಳಿಸಿ ನಾವು ಫೇಸ್ಬುಕ್ ಜನ್ಮತಾಳಿದ ಕಂಪೆನಿಗೆ ಹೋದೆವು. ಸಾಂಕ್ರಾಮಿಕ ರೋಗ ಹರಡುವುದಕ್ಕಿಂತಲೂ ನೂರುಪಟ್ಟು ವೇಗವಾಗಿ ಈ ಫೇಸ್ ಬುಕ್ ರೋಗ ಎಲ್ಲರಿಗೂ ಹರಡಿದೆ. ಅಂತ ಕೌತುಕಮಯ ಸ್ಥಳವನ್ನು ನೋಡಿ ಜನ್ಮ ಪಾವನವಾಯಿತು!  ಕಛೇರಿಯ ಹೊರ ಆವರಣದಲ್ಲಿ ಕೈ ಚಿಹ್ನೆಯ ಬೃಹತ್ ಫಲಕವಿದೆ. ಅಲ್ಲಿ ಪಟ ಕ್ಲಿಕ್ಕಿಸಿಕೊಂಡು ಅನರ್ಘ್ಯ ಇಳಿದ ಸ್ಥಳಕ್ಕೆ ವಾಪಾಸ್ ಹೋದಾಗ ಅವಳ ಮೀಟಿಂಗ್ ಮುಗಿದಿತ್ತು.


ಕಾರು ಪಾರ್ಕ್ ಮಾಡಿದ ಸ್ಥಳದಲ್ಲಿ  ಕಂಡ  ವಾಲು ಗೋಪುರ!


ಸ್ಟಾನ್‌ಫರ್ಡ್ ವಿಶ್ವವಿದ್ಯಾನಿಲಯ
 ಅನರ್ಘ್ಯಳನ್ನು ಹತ್ತಿಸಿಕೊಂಡು ಮಧ್ಯೆ ರೈಲು ನಿಲ್ದಾಣದಲ್ಲಿ ಬಂದಿಳಿದ ಐಶ್ವರ್ಯಳನ್ನು ಕೂರಿಸಿಕೊಂಡು ನಾವು ಸ್ಯಾನ್‌ಫ್ರಾನ್ಸಿಸ್ಕೋ ರಾಜ್ಯದ ಸ್ಟಾನ್ ಫರ್ಡ್ ವಿದ್ಯಾನಿಲಯಕ್ಕೆ ಹೋದೆವು. ಅನರ್ಘ್ಯ ಐಶ್ವರ್ಯ ಇಬ್ಬರೂ ಓದಿದ ಸ್ಥಳವದು. ವಿಶಾಲವಾದ ಕ್ಯಾಂಪಸಿನಲ್ಲಿ ನಾವು ಸುತ್ತಿದೆವು. ಮಕ್ಕಳಿಬ್ಬರೂ ಉತ್ಸಾಹದಿಂದ ಪ್ರತಿಯೊಂದನ್ನೂ ತೋರಿಸಿದರು.  ಅವರ ಉತ್ಸಾಹದಲ್ಲಿ ನಾವೂ ಭಾಗಿಯಾಗಿ ಹೆಮ್ಮೆಯಿಂದ ಎಲ್ಲಾ ನೋಡಿದೆವು. ಒಂದು ಕೊಟಡಿಯಲ್ಲಿ ಸೈನ್ಸ್ ವಸ್ತುಪ್ರದರ್ಶನ ನಡೆಯುತ್ತಲಿತ್ತು. ಮಕ್ಕಳೇ ಆವಿಷ್ಕರಿಸಿದ ಯಂತ್ರಗಳು, ವಿವಿಧ ಮಾದರಿಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಅವನ್ನೆಲ್ಲ ನೋಡಿ ಕ್ಯಾಂಟಿನಿನಲ್ಲಿ ಕಾಫಿ ಕುಡಿದು ನಾವು ಹೊರಟು ಕ್ಯಾಲಿಫೋರ್ನಿಯಾದಲ್ಲಿರುವ ಅನರ್ಘ್ಯಳ ಮನೆ ತಲಪಿದೆವು. 






ಬೆನಿಹನ ಹೊಟೇಲ್ (Benihana hotel) 
   ರಾತ್ರೆ ನಾವು ಮನೆಯಿಂದ ಒಂದು ಮೈಲಿ ದೂರದಲ್ಲೇ ಇದ್ದ ಜಪಾನಿನವರ ಬೆನಿಹನ ಹೊಟೇಲಿಗೆ ನಡೆದುಕೊಂಡೇ ಹೋದೆವು. ಅಲ್ಲಿ ನಮ್ಮ ಮುಂದೆಯೇ ಫ್ರೈಡ್ ರೈಸ್ ತಯಾರಿಸಿ ಬಡಿಸಿದರು. ಅವರ ತಯಾರಿ ನೋಡಲು ಬಲು ಚಂದ.  ಆದರೆ ಅವರ ಆ ರುಚಿ ನಮ್ಮ ನಾಲಗೆಗೆ ಹಿಡಿಸಲಿಲ್ಲ. ಅದು ಅವರ ತಪ್ಪಲ್ಲ. ನಮ್ಮ ಆಹಾರ ಶೈಲಿ, ಅದಕ್ಕೆ ಮಾತ್ರ ಒಗ್ಗಿದ ನಮ್ಮ ರುಚಿಗ್ರಾಹಿ ನಾಲಗೆಯ ತಪ್ಪು!  ನಾವು ತಿಂದ ಶಾಸ್ತ್ರ ಮಾಡಿದೆವು. ಅಲ್ಲಿಯ ಅನುಭವ ಮಾತ್ರ ಮನಸಾರೆ ಸವಿದು ಖುಷಿಪಟ್ಟೆವು. ಅಮೇರಿಕಾದ ವಿವಿಧ ಹೊಟೇಲ್ ತಿನಿಸಿನ ರುಚಿ ನಮಗೆ ತೋರಿಸಬೇಕು ಎಂದು ಆನಂದಭಾವನ ಅಪೇಕ್ಷೆ. ಅವರ ಆ ಉತ್ಸಾಹಕ್ಕೆ ಭಂಗ ತರದೆ ನಾವು ಖುಷಿಯಿಂದಲೇ ಶರಣಾಗಿ ಹೊಟೇಲಿಗೆ ಹೋಗುತ್ತಿದ್ದುದು. ರುಚಿ ಇರಲಿ ಇಲ್ಲದೇ ಇರಲಿ, ಅದು ಅಪ್ರಸ್ತುತ. ಅವರ ಆ ಪ್ರೀತಿಗೆ ನಾವು ಬೆಲೆಕೊಟ್ಟೆವು. ನಾವು ಆ ಹೊಟೇಲಿಗೆ ಪ್ರಥಮ ಬಾರಿ ಬಂದಿರುವುದು, ದೂರದ ಮೈಸೂರಿಂದ ಬಂದದ್ದು ಎಂದು ತಿಳಿದ ಹೊಟೇಲ್ ಮಾಲಕಿ ಬಲು ಸಂತೋಷಪಟ್ಟು, ನಮಗೆ ಒಂದು ಪಿಂಗಾಣಿಯ ಮೂರ್ತಿ ಉಡುಗೊರೆ ಕೊಟ್ಟಳು. ನಮಗೆ ಜಪಾನ್ ಊಟದ ಸವಿಯನ್ನು ಪರಿಚಯಿಸಿದ ಅನರ್ಘ್ಯ ದಂಪತಿಗೆ ಅದನ್ನು ನೀಡಿದೆವು. ಊಟ ಮುಗಿಸಿ ಉಳಿಕೆ ಆಹಾರ (ನಾನು, ಅನಂತ, ಜಯಶ್ರೀ ತಿಂದ ಶಾಸ್ತ್ರ ಮಾತ್ರ ಮಾಡಿರುವುದರಿಂದ) ಕಟ್ಟಿಕೊಟ್ಟರು. ಅಮೇರಿಕೆಯ ಹೊಟೇಲಿನಲ್ಲಿ ಅವರು ಕೊಟ್ಟಷ್ಟು ಆಹಾರ ತಿನ್ನಲಾಗದಿದ್ದರೆ ಆಹಾರ ಫೋಲು ಮಾಡದೆ ಅದನ್ನು ಕಟ್ಟಿಕೊಡುವ ಪದ್ಧತಿ ನನಗೆ ಬಹಳ ಇಷ್ಟವಾಯಿತು. (ಅಮೇರಿಕನ್ನರು ಬಹಳ ಕಡಿಮೆ ತಿನ್ನುವುದು)  ಅದನ್ನು ಮನೆಯಲ್ಲಿ ಮರುದಿನ ತಿನ್ನುತ್ತಾರಂತೆ. ನಾವು ನಡೆದು ಮನೆ ತಲಪಿದೆವು. 


 ಇಂಥ ಕಡ್ಡಿಯಲ್ಲಿ ತಿನ್ನಲು ಅಭ್ಯಾಸ ಬೇಕು. ನಮಗೆ ತಿನ್ನಲಾಗಲಿಲ್ಲ. ಆದರೇನಂತೆ? ಆ ಕಡ್ಡಿಯನ್ನು ಜೋಪಾನವಾಗಿ ಮೈಸೂರಿಗೆ ತಂದಿದ್ದೆ. ಅದರಿಂದ ಈಗ ಗುಳಿ ಅಪ್ಪ ಮಾಡುವಾಗ ಗುಳಿಯಿಂದ ಅಪ್ಪ ಎಬ್ಬಿಸಲು ಬಲು ಉಪಕಾರವಾಗುತ್ತಾ ಇದೆ!

ಈ ಕೆಳಗಿನ ವೀಡಿಯೋ ನೋಡಿ. ಎಷ್ಟು ಕಲಾತ್ಮಕವಾಗಿ ತಯಾರಿಸುತ್ತಾರೆ ಎಂದು ತಿಳಿಯುತ್ತದೆ. 







  ಬಾಡಿಗೆ ಸೈಕಲಿನಲ್ಲಿ ಸವಾರಿ
   ನಾವು ೯-೬-೧೮ರಂದು ಮನೆಯಿಂದ ಹತ್ತು ಗಂಟೆಗೆ ಹೊರಟು ಅನತಿ ದೂರದಲ್ಲೇ ಇದ್ದ ಸೈಕಲ್ ಬಾಡಿಗೆಗೆ ಕೊಡುವ ಅಂಗಡಿಯಿಂದ ೭ ಸೈಕಲ್ ಬಾಡಿಗೆಗೆ ತೆಗೆದುಕೊಂಡೆವು.  (ಒಂದು ಸೈಕಲಿಗೆ ೩ ಗಂಟೆಗೆ ೨೫ ಡಾಲರ್ ಬಾಡಿಗೆ!) ಗೋಲ್ಡನ್ ಗೇಟ್ ನೋಡಲು ಹೊರಟೆವು.


ಇಂಡಿಯನ್ ಕೌನ್ಸಿಲ್ ಕಛೇರಿ
 ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ಭಾರತದ ಧ್ವಜ ಕಂಡು ರೋಮಾಂಚನವಾಗಿ ಅಲ್ಲಿ ಸೈಕಲಿನಿಂದ ಇಳಿದೆವು. ಅದು ಇಂಡಿಯನ್ ಕೌನ್ಸಿಲ್ ಕಚೇರಿಯಾಗಿತ್ತು. ಧ್ವಜದೆದುರು ಸೆಲ್ಯೂಟ್ ಹೊಡೆಯುವ ಭಂಗಿಯಲ್ಲಿ ನಿಂತು ಪಟ ಕ್ಲಿಕ್ಕಿಸಿಕೊಂಡು ಮುಂದುವರಿದೆವು.


ಗೋಲ್ಡನ್ ಗೇಟ್ (golden gate bridge, san Francisco, CA, USA)
ಸುಮಾರು ಹತ್ತು ಮೈಲಿ ಸಾಗಿ ಗೋಲ್ಡನ್ ಗೇಟ್ ತಲಪಿದೆವು. ಅಲ್ಲಿ ಸೇತುವೆಯಲ್ಲಿ ಸ್ವಲ್ಪ ದೂರ ಸಾಗಿದೆವು. 
೭೪೬ ಅಡಿ ಎತ್ತರದ ಈ ಸೇತುವೆಯನ್ನು ಕಟ್ಟಿದ ಇಂಜಿನಿಯರ್ ಜೋಸೆಫ್ ಸ್ಟ್ರಾಸ್, ಚಾರ್ಲ್ಸ್ ಎಲ್ಲೀಸ್, ಆರ್ಕಿಟೆಕ್ಟ್ ಮಾಡಿದವರು ಇರ್ವಿಂಗ್ ಮಾರೊ. ಕಟ್ಟಲು ಸುರು ಮಾಡಿರುವುದು ೫ ಜನವರಿ ೧೯೩೩, ಕೊನೆಗೊಂಡಿರುವುದು ೧೯ ಏಪ್ರಿಲ್ ೧೯೩೭. ಸೇತುವೆಗೆ ಪ್ರವೇಶಾವಕಾಶ ೨೭ ಮೇ ೧೯೩೭. ೮೯೮೧ಅಡಿ ಉದ್ದವಿದೆ (೨.೭ಕಿಮೀ). ಸೈಕಲ್ ಸವಾರಿಗೆ, ಪಾದಾಚಾರಿಗಳಿಗೆ ಪ್ರತ್ಯೇಕ ದಾರಿಯಿದೆ. 
 ಈ ಸೇತುವೆಗೆ ಯಾವಾಗಲೂ ಪ್ರವೇಶವಿದೆ. ವಿಪರೀತ ಹವಾಮಾನವಿದ್ದ ಸಮಯದಲ್ಲಿ ಮಾತ್ರ ಪ್ರವೇಶವಿಲ್ಲ. ೧೯೩೭ರಲ್ಲಿ ಈ ತೂಗುಸೇತುವೆ ಜಗತ್ತಿನ ಅತಿ ಉದ್ದದ ಮತ್ತು ಎತ್ತರದ ಸೇತುವೆ ಎಂದು ಪ್ರಸಿದ್ಧಿ ಪಡೆದಿತ್ತು. ಪ್ರತೀ ವರ್ಷ ಈ ಸೇತುವೆಗೆ ಸುಮಾರು ಐದು ಸಾವಿರದಿಂದ ಹತ್ತು ಸಾವಿರ ಗ್ಯಾಲನ್ ಪೈಂಟನ್ನು ಬಳಿಯುತ್ತಾರೆ. 

  ಸೇತುವೆಯ ಅಂದಚಂದ ನೋಡಿ ನಾವು ಸೈಕಲ್ ಹತ್ತಿದೆವು. ಸ್ವಲ್ಪ ದೂರ ಸಾಗಿದಾಗ ಬೆತ್ತಲೆಯಾಗಿ ಸೈಕಲಲ್ಲಿ ಸವಾರಿ ಮಾಡುತ್ತಿರುವ ಸುಮಾರು ಮಂದಿಯನ್ನು ನೋಡಿದೆವು. ಅದೇನು ಚಂದವೋ? ಏಕೆ ಹಾಗೆ ಸಾಗುತ್ತಾರೋ ಗೊತ್ತಿಲ್ಲ. ಅಲ್ಲಿ ಯಾವಾಗಲೂ ಹಾಗೆ ಹೋಗುತ್ತಿರುತ್ತಾರೆಂದು ಅನರ್ಘ್ಯ ಹೇಳಿದಳು. ನಾವು ಅಲ್ಲೇ ಇನ್ನೊಂದು ಸ್ಥಳದಲ್ಲಿ ಸೈಕಲ್ ಮರಳಿಸಿದೆವು. ಅಲ್ಲಿಂದ ಊಬರ್ ಕಾರಿನಲ್ಲಿ ಅನರ್ಘ್ಯಳ ಮನೆ ತಲಪಿದೆವು. 





  ನೆಂಟರಿಷ್ಟರ ಮನೆಗೆ ಭೇಟಿ
  ಸಂಜೆ ೩ ಗಂಟೆಗೆ ಆನಂದಭಾವ ಫ್ರೆಮೊಂಟ್‌ನಲ್ಲಿರುವ (Fremont) ಕೃಷ್ಣ-ಸುರೇಖಾ ದಂಪತಿ ಮನೆಗೆ ನಮ್ಮಿಬ್ಬರನ್ನು ಕರೆದುಕೊಂಡು ಹೋದರು. ಜಯಶ್ರೀಯ ತಮ್ಮ ಪ್ರಸಾದ. ಅವನ ಹೆಂಡತಿ ಮಮತಳ ಅಣ್ಣ ಕೃಷ್ಣ. ಅವರಿಗೆ ಜನನಿ, ಹಂಸಿನಿ ಎಂಬ ಇಬ್ಬರು ಹೆಣ್ಣುಮಕ್ಕಳು. ಮಕ್ಕಳು ಅವರೇ ತಯಾರಿಸಿದ ಚಿತ್ರ, ಮಣಿಗಳಲ್ಲಿ ಮಾಡಿದ ಬಳೆ ಇತ್ಯಾದಿ ತೋರಿಸಿ ಸಂಭ್ರಮಪಟ್ಟರು. ನಾವೂ ಅವರ ಸಂಭ್ರಮದಲ್ಲಿ ಭಾಗಿಯಾದೆವು. ಇಬ್ಬರೂ ಸುಶ್ರಾವ್ಯವಾಗಿ ಸಂಗೀತ ಹಾಡಿದರು. ಪಟ್ಟಾಂಗವಾಗಿ, ಅವರಿತ್ತ ತಿಂಡಿ ತೀರ್ಥ ಸೇವನೆಯಾಗಿ ಅಲ್ಲಿಂದ ನಿರ್ಗಮಿಸಿದೆವು.
 ಲಿವರ್ಮೋರ್ ಶಿವ ವಿಷ್ಣು ದೇವಾಲಯ (1232 Arrowhead Ave, Livermore, CA 94551, USA phOne (925) 4496255) 
   ಸಂಜೆ ೭ ಗಂಟೆಗೆ ಅವರ ಮನೆಯಿಂದ ಲಿವರ್ ಮೋರ್ ಶಿವವಿಷ್ಣು ದೇವಾಲಯಕ್ಕೆ ಹೋದೆವು. ಕೃಷ್ಣ ಕುಟುಂಬವೂ ಅಲ್ಲಿಗೆ ಬಂದರು. ದೇವಾಲಯದೊಳಗೆ ಒಂದು ಸುತ್ತು ಹಾಕಿದೆವು. ದೊಡ್ಡದಾದ ದೇವಾಲಯ. ಕಾರು ನಿಲ್ಲಿಸಲು ವಿಶಾಲವಾದ ಸ್ಥಳವಿದೆ. 


  ಸೋಮವಾರದಿಂದ ಗುರುವಾರ ಬೆಳಗ್ಗೆ ೯ರಿಂದ ೧೨ ಗಂಟೆವರೆಗೆ, ಸಂಜೆ ೬ರಿಂದ ರಾತ್ರಿ ೮ ಗಂಟೆವರೆಗೆ, ಹಾಗೂ  ಶುಕ್ರವಾರದಿಂದ ಭಾನುವಾರದವರೆಗೆ ಬೆಳಗ್ಗೆ ೯ರಿಂದ ರಾತ್ರೆ ೮ ಗಂಟೆವರೆಗೆ ಪ್ರವೇಶಾವಕಾಶವಿದೆ. 
೧೯೮೦-೮೩ರಲ್ಲಿ ಸ್ಥಳ ಕೊಂಡು, ೮೪-೮೫ರಲ್ಲಿ ತಮಿಳುನಾಡು ಸರ್ಕಾರ ದೇವರ ಮೂರ್ತಿಯ ವೆಚ್ಚವನ್ನು ದಾನ ಮಾಡಿತು. ೮೪ರಿಂದ ೮೬ರಲ್ಲಿ ಎನ್.ಟಿ ರಾಮರಾವ್ ಪಾಯಕ್ಕೆ ಕಲ್ಲು ಹಾಕಿದರು. ೧೯೮೬ ಜುಲೈ ತಿಂಗಳಲ್ಲಿ ಕುಂಭಾಭಿಷೇಕವಾಗಿ ೧೯೯೨ರಲ್ಲಿ ರಾಜಗೋಪುರದ ಕೆಲಸ ಪೂರ್ಣಗೊಂಡಿತು. ಅಲ್ಲಿ ೧೨ ಮಂದಿ ಅರ್ಚಕರಿದ್ದಾರೆ. 

   ಅಲ್ಲಿಂದ ನಾವು ಫ್ರೆಮೊಂಟ್ ಕಾಮರಾನ್ ಹಿಲ್ (Fremont cameron hill) ನಲ್ಲಿರುವ ಗೋಪಾಲಕೋಟೆಯವರ ಮನೆಗೆ ಹೋದೆವು. (ಮಡಿಕೇರಿ ಶ್ರೀದೇವಿ ಅತ್ತೆಯ ಅಣ್ಣ ಗೋಪಾಲ ಕೋಟೆ)
 ಗೋಪಾಲ ಕೋಟೆ ದಂಪತಿಗಳೊಡನೆ ಮಾತಾಡಿ ಪಟ ಕ್ಲಿಕ್ಕಿಸಿಕೊಂಡು ಅಲ್ಲಿ ಕಾಫಿ ಕುಡಿದು ೮.೩೦ಗೆ ಹೊರಟೆವು. ಅವರ ಮನೆ ಬೆಟ್ಟದ ಮೇಲೆ ಇದೆ. ಅವರು ಅಲ್ಲಿ ನೆಲೆಸಿ ನಾಲ್ಕೈದು ದಶಕಗಳೇ ಸಂದುವು.


    ಅಲ್ಲಿಂದ ನಾವು ಯೂನಿಯನ್ ಸಿಟಿಯಲ್ಲಿರುವ (Union City) ಏತಡ್ಕ ಸುಬ್ರಹ್ಮಣ್ಯ ಭಟ್ ವಿಜಯಾ (ನಮ್ಮ ಅತ್ತೆಯ ಚಿಕ್ಕಪ್ಪ ತಿಮ್ಮಪ್ಪಯ್ಯನ ಮಗಳು) ದಂಪತಿ ಮನೆಗೆ ಹೋದೆವು. ಸುಬ್ರಹ್ಮಣ್ಯ ಭಟ್ ಎಂದರೆ ಅಲ್ಲಿ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅವರು ಸುಬ್ರು ಭಟ್ ಎಂದೇ ನಾಮನಿರ್ದೇಶನಗೊಂಡಿದ್ದಾರೆ. ವಿಜಯಾ ದಂಪತಿಗೆ ಹರೀಶ ವಿನಯ್ ಎಂಬ ಇಬ್ಬರು ಗಂಡು ಮಕ್ಕಳು. ಹರೀಶ ಬೇರೆ ಊರಿನಲ್ಲಿ ಸಂಸಾರವಂದಿಗನಾಗಿರುವನು.  ಇವರೊಡನೆಯೇ ಇರುವ ವಿನಯ್ ಚೆಸ್ ಆಟದಲ್ಲಿ ಪ್ರಸಿದ್ಧಿ ಹೊಂದಿರುವನು. ಅವರೊಡನೆ ಮಾತಾಡಿ ಹಾಲು ಕುಡಿದು ರಾತ್ರೆ ೯.೩೦ಗೆ ಹೊರಟು ಅನರ್ಘ್ಯನ ಮನೆ ೧೦.೪೫ಕ್ಕೆ ತಲಪಿದೆವು. ಅನರ್ಘ್ಯಾದಿಗಳು ಮದುವೆ ಆರತಕ್ಷತೆಗೆ ಹೋಗಿದ್ದರು. ಆನಂದಭಾವ ನಮ್ಮನ್ನು ಸುತ್ತಿಸುವ ಸಲುವಾಗಿ ಹೋಗಿರಲಿಲ್ಲ. 

 ಸ್ಯಾನ್ ಫ್ರಾನ್ಸಿಸ್ಕೊ ಸುತ್ತಾಟ
   ೧೦-೬-೧೮ರಂದು ಬೆಳಗ್ಗೆ ೧೦ ಗಂಟೆಗೆ ನಾವು ಪುನಃ ಗೋಲ್ಡನ್ ಗೇಟ್ ಸೇತುವೆ ನೋಡಲು ಕಾರಿನಲ್ಲಿ ಹೋದೆವು. ಮೊನ್ನೆ ಅವಸರದಲ್ಲಿ ನೋಡಿರುವುದು, ಸರಿಯಾಗಿ ನಮಗೆ ತೋರಿಸಲಾಗಿರಲಿಲ್ಲ ಎಂದು ಜಯಶ್ರೀಗೆ ಅನಿಸಿತ್ತು. ಸೇತುವೆ ಉದ್ದಕ್ಕೂ ೨.೭ಕಿಮೀ ನಡೆದೆವು.  ಮೇಲೆ ರಸ್ತೆಯಲ್ಲಿ ಸೀನರಿ ನೋಡಲು ನಡೆದೆವು. ಅಲ್ಲಿಂದ ಸೇತುವೆಯ ಅಂದ ಅಗಾದ ಜಲರಾಶಿ ನೋಡಿ ತೃಪ್ತಿಪಟ್ಟೆವು. 



ಗೌರಿ ಎಂಬವಳು ಈ ಜಾಗದಲ್ಲಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದಂತೆ. ಅವಳ ನೆನಪಿಗೆ ಈ ಫಲಕ. ಹಾಗೂ ಅಲ್ಲಿ ಯಾರೂ ನೀರಿಗೆ ಹಾರದಂತೆ ತಡೆಗೋಡೆ ಕಟ್ಟಿದ್ದಾರೆ.


 ಭಾವನ ಫೋಟೋಗ್ರಫಿ ಇದು






    ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಚೀನೀಯರ ಪ್ರಾಬಲ್ಯ ಎಷ್ಟಿದೆ ಎಂದರೆ ಒಂದು ಇಡೀ ಬೀದಿ ಅವರದೇ ಅಂಗಡಿಗಳು. ಅದಕ್ಕೆ ಚೈನಾ ಸ್ಟ್ರೀಟ್ ಎಂದು ಹೆಸರು. ಚೀನೀ ಭಾಷೆಯಲ್ಲೇ ಅಂಗಡಿ ಫಲಕಗಳು. ಅಲ್ಲಿ ಸುಮ್ಮನೆ ಸುತ್ತಾಡಿದೆವು. ಏನೂ ಕೊಳ್ಳಲಿಲ್ಲ. ಕೊಳ್ಳುವ ಉಮೇದು ನಮಗಿಬ್ಬರಿಗೂ ಇಲ್ಲ. 

ಕ್ರುಕೆಡೆಸ್ಟ್ ಸ್ಟ್ರೀಟ್ (Lombard Street) sanfrancisco
 ಕ್ರುಕೆಟ್ ಬೀದಿ ಯಾನೆ ಲೊಂಬಾರ್ಡ್ ಬೀದಿಯಲ್ಲಿ ಸುತ್ತುವಾಗ ನಮ್ಮ ಮಡಿಕೇರಿಯ ನೆನಪು ಬರುತ್ತದೆ. ಈ ರಸ್ತೆಯಲ್ಲಿ ೮ ಅಂಕುಡೊಂಕಿನ ಸುಂದರ ತಿರುವುಗಳಿವೆ. ರಸ್ತೆ ಬದಿ ಉದ್ದಕ್ಕೂ ಚಂದದ ಹೂಗಳನ್ನು ಬೆಳೆಸಿದ್ದಾರೆ. ನೋಡಲು ಬಲು ಖುಷಿಯಾಗುತ್ತದೆ.  ರಸ್ತೆಯಲ್ಲಲ್ಲದೆ ಮೆಟ್ಟಲು ಇಳಿದು ಕೆಳಗೆ ಹೋಗಬಹುದು. ಆ ಬೀದಿಯಲ್ಲಿ ಸುತ್ತಾಡಿ ಅದರ ಅಂದಚಂದ ನೋಡಿ ಪಟ ಕ್ಲಿಕ್ಕಿಸಿಕೊಂಡೆವು.







      ಲಫಯೆಟ್ಟೆ (Lafayette) ಯ ವಿದ್ಯಾ ವೆಂಕಟ್ರಮಣ ಭಟ್ಟರ ಮನೆ 
ಜಯಶ್ರೀ ತಂಗಿ ವಿದ್ಯಾಳ ಮನೆಗೆ ಮಧ್ಯಾಹ್ನ ಹೋದೆವು. ವಿದ್ಯಾ ಭಾರತಕ್ಕೆ ಹೋಗಿದ್ದಳು. ಅವಳ ಪತಿ ವೆಂಕಟ್ರಮಣ ಭಟ್ ನಮ್ಮನ್ನು ಸ್ವಾಗತಿಸಿ ಭರ್ಜರಿ ಊಟ ಬಡಿಸಿದರು. ಮಸಾಲೆದೋಸೆ, ಮಾವು ಚಟ್ನಿ, ಚಪಾತಿ, ಕೋಸಿನ ಪಲ್ಯ, ಅನ್ನ, ಸಾರು, ಬಾಳೆಹಣ್ಣು ಹಲ್ವ. ನಾವು ೭ ಮಂದಿ ಊಟ ಮಾಡಿದೆವು. ಆನಂದಭಾವ ಜಯಶ್ರೀ ಹಾಗೂ ಮಕ್ಕಳು ಅಲ್ಲಿಂದ ಸಂಜೆ ಒಂದು ಮದುವೆಗೆ ಹೋದರು. 


   ವಿದ್ಯಾ ವೆಂಕಟ್ರಮಣ ಭಟ್ ಅವರದು ವಿಶಾಲವಾದ ಮನೆ. ಮನೆ ಸುತ್ತ ಹಣ್ಣಿನ ಗಿಡ ಮರಗಳು ಇವೆ. ಈಜು ಕೊಳವಿದೆ.   

  ವೆಂಕಟ್ರಮಣ ನಮ್ಮನ್ನು ಸಂಜೆ ೪.೩೦ಗೆ ವಾಲ್‌ನಟ್ ಎಂಬ ಪಟ್ಟಣಕ್ಕೆ (ಡೌನ್‌ಟೌನ್) ಕರೆದುಕೊಂಡು ಹೋದರು.  ಅಲ್ಲಿ ಕ್ಲಾರ್ಕೆಪಾರ್ಕ್, ಪೇಟೆ ಬೀದಿಯಲ್ಲಿ ಒಂದು ಸುತ್ತು ಹಾಕಿದೆವು. ಅಂಗವಿಹೀನರು ಗಾಲಿ ಖುರ್ಚಿಯಲ್ಲಿ ತಿರುಗುತ್ತ ಸ್ವಯಂ ಉದ್ಯೋಗದಲ್ಲಿ ಸರಕು ಮಾರಾಟ ಮಾಡುತ್ತಿರುವುದು ಕಂಡೆ. 


   ಟೆಸ್ಲಾ   ಕಾರು ಶೋರೂಂ ನೋಡಿದೆವು.


 ಸೇಡಿಯಾಪು ಮಹಾಬಲ ಅರುಣಾ ಮನೆಗೆ ಭೇಟಿ (Reliez vally) 
ಸೇಡಿಯಾಪು ಮಹಾಬಲ ಅರುಣ ದಂಪತಿ ಮನೆಗೆ ವೆಂಕಟ್ರಮಣ ನಮ್ಮನ್ನು ಕರೆದುಕೊಂಡು ಹೋದರು. ಅಲ್ಲಿ ನಮಗೆ ಭರ್ಜರಿ ತಿಂಡಿ. ಉಪ್ಪಿಟ್ಟು, ಚಪಾತಿ, ಸಾಗು, ಮಾವು ರಸಾಯನ. ಅರುಣಾ ಹಾಗೂ ಜಯಶ್ರೀ ಒಟ್ಟಿಗೇ ಓದಿದವರು. ಸ್ನೇಹಿತೆಯರು. ಅರುಣಾರೊಡನೆ ಮಾತಾಡುತ್ತ ಅವರ ಮನೆ ವೀಕ್ಷಣೆ ಮಾಡುತ್ತಿರುವಾಗ ಮನೆಯೊಳಗಿದ್ದ ಛಟ್ಟಿಯಲ್ಲಿ ಕರಿಬೇವು ಬೆಳೆದು ನಳನಳಿಸಿರುವುದು ಕಂಡಿತು. ಮಹಾಬಲರಿಗೆ ಕೃಷಿ ಹವ್ಯಾಸ. ತುಂಬ ಗಿಡಗಳನ್ನು ಬೆಳೆಸಿ ಪೋಷಿಸಿದ್ದಾರೆ. ಕರಿಬೇವು ಗಿಡವನ್ನು ಚಳಿಗಾಲದಲ್ಲಿ ಮನೆಯೊಳಗೆ ಇಡಬೇಕಾಗುತ್ತದಂತೆ. ಅಲ್ಲಿ ಸಾಕಷ್ಟು ಮಾತಾಡಿ ಅವರಿಗೆ ಕೃತಜ್ಞತೆ ಅರ್ಪಿಸಿ ಪಟ ಕ್ಲಿಕ್ಕಿಸಿಕೊಂಡು ನಾವು ೮ ಗಂಟೆಗೆ ವಿದ್ಯಾಳ ಮನೆ ತಲಪಿದೆವು. 



   ವೆಂಕಟ್ರಮಣ ಸಿವಿಲ್ ಇಂಜಿನಿಯರು. ಸರ್ಕಾರಿ ಕೆಲ್ಸದಲ್ಲಿದ್ದು ಈಗ ನಿವೃತ್ತರು. ಅವರು ನಮಗೆ ಸೇತುವೆ ತಯಾರಿ, ಕಟ್ಟಡ ಕಾಮಗಾರಿಯ ಚಿತ್ರವನ್ನು ಪವರ್ ಪಾಯಿಂಟಿನಲ್ಲಿ ತೋರಿಸಿದರು. ಭಾರತಕ್ಕೆ ಬಂದಾಗಲೆಲ್ಲ ಅವರು ಕೆಲವು ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಕ್ಕಳಿಗೆ ಪಾಟ ಮಾಡುತ್ತಿರುತ್ತಾರಂತೆ. 
    ಮದುವೆ ಮುಗಿಸಿ ಆನಂದಭಾವಾದಿಗಳು ೧೦ ಗಂಟೆಗೆ ಬಂದು ನಮ್ಮನ್ನು ಹತ್ತಿಸಿಕೊಂಡು ಕ್ಯಾಲಿಫೋರ್ನಿಯಾದೆಡೆಗೆ ಸಾಗಿದೆವು. ಅನರ್ಘ್ಯಾಳ ಮನೆ ತಲಪಿದಾಗ ೧೦.೪೫ ಆಗಿತ್ತು. 
ಮರಳಿ ಪೋರ್ಟ್ಲ್ಯಾಂಡಿಗೆ
  ೧೧.೬.೧೮ರಂದು ಬೆಳಗ್ಗೆ ತಿಂಡಿ ತಿಂದು ಅನರ್ಘ್ಯ, ಜೆಜೆಗೆ ವಿದಾಯ ಹೇಳಿ, ೮.೩೦ಗೆ ಐಶ್ವರ್ಯಳ ಕಚೇರಿಗೆ ಹೋದೆವು. ಪುಟ್ಟ ಕಛೇರಿ ಚೆನ್ನಾಗಿತ್ತು. ನಾಲ್ಕು ಮಂದಿ ಸೇರಿ ಕಂಪೆನಿ ಸುರು ಮಾಡಿದ್ದಾರೆ. ಅಲ್ಲಿ ಐಶ್ವರ್ಯ ಕೆಲಸ ಮಾಡುತ್ತಿದ್ದಾಳೆ. ಅಲ್ಲಿಂದ ಹೊರಟು ಮನೆಗೆ ಬಂದು ೯.೫೦ಕ್ಕೆ ಜಯಶ್ರೀಯನ್ನು ಹತ್ತಿಸಿಕೊಂಡು ಕ್ಯಾಲಿಫೋರ್ನಿಯಾದಿಂದ ಹೊರಟೆವು. ದಾರಿಮಧ್ಯೆ ಕಟ್ಟಿ ತಂದ ಊಟ ಮಾಡಿದೆವು. 
ಲೇಕ್ ಶಾಸ್ತಾಕೇವ್ (Lake Shasta Caverns)20359 Shasta caverns road, lakehead California 96051, phone 5302382341
  ಶಾಸ್ತಾ ಕೇವ್ ನೋಡಬೇಕು ಬಹಳ ಚೆನ್ನಾಗಿದೆ ಎಂದು ಆನಂದಭಾವ ನಮ್ಮನ್ನು ಶಾಸ್ತಾ ಕೇವ್ ನೋಡಲು ಕರೆದುಕೊಂಡು ಹೋದರು. ಜಯಶ್ರೀ ಬರಲಿಲ್ಲ. ಅಲ್ಲೇ ವಿಶ್ರಾಂತಿ ಕೊಟಡಿಯಲ್ಲಿ ಉಳಿದಳು. ಅವಳು ಈ ಮೊದಲೇ ಒಂದೆರಡು ಸಲ ನೋಡಿದ್ದಳು. ಆನಂದಭಾವ ನಮಗೆ ಮಾರ್ಗದರ್ಶಕರಾಗಿ ನಮ್ಮೊಡನೆ ಬಂದರು.  ಈ ಪ್ರವಾಸದಲ್ಲಿ ಮೂರು ಲಾಭಗಳು. ೧) ಶಾಸ್ತಾ ನದಿ ದೋಣಿಯಲ್ಲಿ ದಾಟುವುದು,೨) ಶಾಸ್ತಾ ಗುಹೆ ಬಳಿಗೆ ಬಸ್ ಪ್ರಯಾಣ. ೩) ಶಾಸ್ತಾ ಗುಹೆಯೊಳಗಿನ ಬೆರಗು. ಬೇಸಿಗೆಯಲ್ಲಿ ಪ್ರವೇಶ ಬೆಳಗ್ಗೆ ಗಂಟೆ ೯ರಿಂದ ಸಂಜೆ ೪ರವರೆಗೆ ಅರ್ಧ ಗಂಟೆಗೊಮ್ಮೆ. ಪ್ರವೇಶ ದರ ಒಬ್ಬರಿಗೆ ೨೬ ಡಾಲರ್. ಹೋಗಿ ಬರಲು ಒಟ್ಟು ಅವಧಿ ೨ ಗಂಟೆ.  


  ೨.೩೦ಕ್ಕೆ ನಾವು ದೋಣಿ ಹತ್ತಿದೆವು. ದೋಣಿ ಹತ್ತಲು ೧೦೦ಕ್ಕೂ ಹೆಚ್ಚು ಮೆಟ್ಟಲು ಇಳಿಯಬೇಕು.  ಹತ್ತು ನಿಮಿಷದಲ್ಲಿ ನದಿ ದಾಟಿದೆವು. ನದಿ ದಾಟುವಾಗ ಸುತ್ತಲೂ ಪ್ರಕೃತಿಯ ಸೊಬಗು ನೋಡುವುದೇ ಆನಂದದಾಯಕ. ದೋಣಿ ಇಳಿದು ೩೦ ಜನ ಕೂರುವ ಬಸ್‌ನಲ್ಲಿ  ೮೦೦ ಅಡಿ ಬೆಟ್ಟ ಹತ್ತಿ ಮೇಲಕ್ಕೆ ಹೋಗಿ ಇಳಿದು ಗುಹೆಯೊಳಗೆ ಹೋದೆವು. ಸುಮಾರು ಮೆಟ್ಟಲು ಹತ್ತಿ ಒಳ ಹೋಗಬೇಕು.  ಒಳಗೆ ಬ್ರಹ್ಮಾಂಡವೇ ಅಡಗಿದೆ. ತರಹೇವಾರಿ ನೀರ್ಗಲ್ಲುಗಳು, ಕಲ್ಲಿನ ರಚನೆಗಳು ಪ್ರಕೃತಿಯ ಈ ಅದ್ಭುತ  ಬಹಳ ಚೆನ್ನಾಗಿವೆ. ಪ್ರತಿಯೊಂದು ನೀರ್ಗಲ್ಲುಗಳ ಬಗ್ಗೆ ಗೈಡ್ ವಿವರಣೆ ಕೊಡುತ್ತಾರೆ. ಗುಹೆಯೊಳಗೆ ಒಂದು ಗಂಟೆ ನಡೆಯಬೇಕು. ವಿವಿಧ ನಮೂನೆಯ ಸುಂದರ, ವಕ್ರ, ವಿಕಾರ ರೀತಿಯ ನೀರ್ಗಲ್ಲುಗಳನ್ನು ನೋಡುವುದೇ ಖುಷಿ.  ಗುಹೆಯೊಳಗೆ ಪಟ ಕ್ಲಿಕ್ಕಿಸಿಕೊಂಡು ಹೊರಗೆ ಬಂದೆವು. ಮೂವತ್ತಕ್ಕೂ ಮಿಕ್ಕು ಮೆಟ್ಟಲು ಇಳಿದು ಕೆಳಗೆ ಬಂದು ಬಸ್ ಹತ್ತಿದೆವು. 






    ಬಸ್ಸಿನಲ್ಲಿ ಬೆಟ್ಟ ಇಳಿಯುವಾಗ ಶಾಸ್ತಾ ನದಿ, ಬೆಟ್ಟಗುಡ್ಡಗಳ ಸೌಂದರ್ಯವನ್ನು ನೋಡಿದೆವು. ದೋಣಿಯಲ್ಲಿ ಶಾಸ್ತಾ ದಾಟಿ ನಮ್ಮ ಕಾರು ಪಾರ್ಕ್ ಮಾಡಿದಲ್ಲಿಗೆ ಹೋಗಿ ಕಾರು ಹತ್ತಿದೆವು. ಜಯಶ್ರೀಗೆ  ನಿದ್ದೆ ಆಗಿತ್ತಂತೆ ಅಷ್ಟು ಹೊತ್ತಿನಲ್ಲಿ. ಕಾಯುವುದು ಬಲು ಕಷ್ಟದ ಕೆಲಸ. 
   ರಸ್ತೆಯಲ್ಲಿ ಸಾಗಿ ಪೋರ್‍ಟ್ ಲ್ಯಾಂಡ್ ರಾಜ್ಯದಲ್ಲಿರುವ ಯ್ಯಾಶ್ ಲ್ಯಾಂಡ್ ತಲಪಿದೆವು. ಮುಂದೆ ರೋಸ್‌ಬರ್ಗ್‌ನಲ್ಲಿ ಪಂಜಾಬಿ ಹೊಟೇಲ್ ಶಾಂತಿ (೭೮೦, ಗಾರ್ಡನ್ ವ್ಯಾಲಿ, ದೂರವಾಣಿ ೫೪೧೨೨೯೦೧೭೭) ಯಲ್ಲಿ ಊಟ ಮಾಡಿದೆವು. ರೋಟಿ, ಎರಡು ಬಗೆಯ ಸಾಗು, ಅನ್ನ ದಾಲ್, ಮೊಸರು. ಊಟಕ್ಕೆ ಒಟ್ಟು ೪೫ ಡಾಲರ್ ಆಗಿತ್ತು. ಹೊತ್ತು ಮೀರಿ ಹೊಟೇಲ್ ಮುಚ್ಚುವ ಸಮಯವಾಗಿದ್ದರೂ, ನಾವು ದೂರವಾಣಿಸಿ ಹೇಳಿದ್ದರಿಂದ ನಮಗಾಗಿ ಬಿಸಿ ಬಿಸಿ ರೊಟ್ಟಿ ಖಾದ್ಯ ಮಾಡಿ ಬಡಿಸಿದ್ದರು. ಅವರ ಆ ಪ್ರೀತಿ ನೋಡಿ ಬಲು ಖುಷಿ ಆಗಿ ಆನಂದಭಾವ ಟಿಪ್ಸ್ ಧಾರಾಳವಾಗಿತ್ತರು.   ಊಟವಾಗಿ ಸಾಗಿ ನಾವು ಬೇವರ್ಟನ್ ಮನೆ ತಲಪುವಾಗ ರಾತ್ರೆ ಗಂಟೆ ೧೧.೪೫. 
ಒಂದೇ ದಿನದಲ್ಲಿ ಅಷ್ಟೊಂದು ದೂರ ಪ್ರಯಾಣ ಅಯಾಸವೆನಿಸುವುದಿಲ್ಲ. ಅಲ್ಲಿಯ ರಸ್ತೆಗಳು, ಗಂಟೆಗೆ ಸರಾಸರಿ ೭೦- ೮೦ ಮೈಲಿ ಸಾಗುವಾಗ ಅಷ್ಟು ವೇಗವಾಗಿ ಕಾರು ಚಲಿಸುತ್ತಿದೆ ಎಂದೇ ಅನಿಸುವುದಿಲ್ಲ.  ಆನಂದಭಾವ ಮತ್ತು ಜಯಶ್ರೀ ಕಾರು ಚಲಾಯಿಸಿದವರು. ಅಣ್ಣನೂ ತಮ್ಮನೂ ಕಾರು ಪ್ರಯಾಣದಲ್ಲಿ ನಿದ್ದೆ ಮಾಡುವುದರಲ್ಲಿ ನಿಪುಣರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ